ದಶಮ ಸ್ಕಂದ – ಅಧ್ಯಾಯ – 1
ಶ್ರೀ ಕೃಷ್ಣ ಕಥೆ – 4
ವಸುದೇವ – ದೇವಕಿ
ಯದುವೀರ ದೇವಮೀಢನ ಮೊಮ್ಮಗ ವಸುದೇವ
ಶೌರ್ಯ ಧೈರ್ಯ ಪ್ರತಾಪ ನಿಧಿ
ದ್ವಾರಕಾಪುರಿಯ ದೇವಕ ಅರಸನ ಪುತ್ರಿ ದೇವಕಿ
ಉತ್ತಮ ಗುಣ ರೂಪ ಲಕ್ಷಣ ಸಂಪನ್ನೆ
ಪರಸ್ಪರ ಕುಟುಂಬಗಳೊಪ್ಪಿ
ದೇವಕಿ ವಸುದೇವ ಕಲ್ಯಾಣ
ದೇವಕನ ಸೋದರ ಉಗ್ರಸೇನ ಪುತ್ರ
ಮಹಾಪರಾಕ್ರಮಿ ಕಂಸ
ತಂಗಿಯ ಕಲ್ಯಾಣ ರಥದ ಸಾರಥ್ಯ ವಹಿಸಿ
ಸಂಭ್ರಮಿಸಿದ ಸಮಯದಿ ಅಂತರಿಕ್ಷದಿ
ಮೊಳಗಿದ ಅಶರೀರವಾಣಿ –
‘ಎಲವೋ ಮೂರ್ಖ ಕಂಸ, ನಿನ್ನ
ತಂಗಿಯ ವಿವಾಹವ ಸಂಭ್ರಮಿಸುತ್ತಿರುವೆಯಲ್ಲಾ
ಅವಳ ಗರ್ಭದಿ ಎಂಟನೆಯ ಮಗುವಾಗಿ ಜನಿಪ
ಪುತ್ರನೇ ನಿನ್ನ ಮೃತ್ಯುದಾತ’
ಅಶರೀರವಾಣಿಯ ಕೇಳಿದ ಕಂಸ
ಕ್ರೋಧದಿಂ ದೇವಕಿಯನು ರಥದಿಂ ಎಳೆದು
ಖಡ್ಗವ ಝಳಪಿಸುತ ಕೊಲ್ಲಲು ಮುಂದಾಗೆ
ವಸುದೇವ ಕಂಸನ ಕಾಲಿಗೆರಗಿ ಪರಿಪರಿಯಾಗಿ
ಬೇಡುತ, ಹುಟ್ಟುವ ಮಕ್ಕಳ ಅವನಿಗೊಪ್ಪಿಸುವ
ವಾಗ್ದಾನದಿಂ ಕಂಸ ಕೊಂಚ ಸಮಾಧಾನಗೊಂಡರೂ
ದೇವಕಿ-ವಸುದೇವರನು ಕಾರಗೃಹದಲಿ ಬಂಧಿಸಿಟ್ಟು
ಪ್ರಾಣಭಯದಿ ಮತಿಗೆಟ್ಟು
ದೇವಕಿ ಜನ್ಮವಿತ್ತ ಮೊದಲಾರು ಕಂದಗಳ
ನಿಷ್ಕರುಣೆಯಲಿ ಸಂಹರಿಸಿದ
ಭಗವಂತನಾಣತಿಯಂತೆ ದೇವಕಿಯು ಏಳನೆಯ ಬಾರಿ
ಗರ್ಭಧರಿಸಿ ಮೂರು ತಿಂಗಳಾದಾಗ ಗರ್ಭಸ್ಥನಾದ
ಶೇಷನವತಾರ ಗರ್ಭಸ್ಥ ಶಿಷುವ ಯೋಗಮಾಯೆಯಿಂ ಸೆಳೆದೊಯ್ದು
ನಂದಗೋಕುಲದಲ್ಲಿರ್ಪ ಮತ್ತೋರ್ವ ವಸುದೇವ ಪತ್ನಿ
ರೋಹಿಣಿಯ ಗರ್ಭದಲಿ ನವಮಾಸದಲಿ ಬೆಳೆದು
ಬಲರಾಮನಾಗಿ ಜನಿಸಿ ಮುಂದೆ ಜನಿಪ
ಕೃಷ್ಣನಿಗೆ ಅಗ್ರಜನಾಗುವುದು ವಿಧಿವಿಲಾಸ
ದೇವಕಿಯ ಏಳನೆಯ ಮಗುವೂ ಗರ್ಭಪಾತವಾಗಿ
ಮಿಕ್ಕ ಹಿಂದಿನ ಆರು ಮಕ್ಕಳಂತೆ ಮೃತ್ಯುವನಪ್ಪಿತೆಂದು
ದುಃಖಿಸಿದರು ದೇವಕಿ-ವಸುದೇವ
(ಮುಂದುವರಿಯುವುದು)
ಕಾವ್ಯ ಭಾಗವತ ಸರಣಿಯ ಹಿಂದಿನ ಪುಟ ಇಲ್ಲಿದೆ : https://surahonne.com/?p=43773

-ಎಂ. ಆರ್. ಆನಂದ, ಮೈಸೂರು




