“ರೀ, ನಿನ್ನೆ ತಾನೆ ನಾನು ಮತ್ತು ನನ್ನ ಫ್ರೆಂಡ್ ಬಂದು ನಿಮ್ಮಂಗಡೀಲಿ ಒಂದು ಸೀರೆ ತಗೊಂಡು ಹೋಗಿದ್ವಿ… ನಿಮಗೆ ನೆನಪಿದೆಯ?”
“ಹೊಂ, ಅವರು ನಮ್ಮ ಬೀದೀಲೆ ಇದಾರೆ. ನಿನ್ನೆ ಅವರ ಜೊತೇಲಿ ನೀವು ಬಂದಿದ್ರೀ ಜ್ಞಾಪಕ ಇದೆ. ಈಗ ನೀವೂ ಸೀರೆ ತಗೋಳೋಕೆ ಬಂದ್ರಾ ತಾಯಿ?” ಅಂಗಡಿ ಮಾಲೀಕ ಆ ಮಹಿಳೆಯನ್ನು ಅತ್ಯಂತ ನಯವಾಗಿ ಪ್ರಶ್ನಿಸಿದ.
“ಹೂಂ ಸಾರ್ ನನಗೂ ಸೀರೆ ತಗೋಬೇಕಾಗಿತ್ತು.”
ಅಂಗಡಿಯ ಹುಡುಗ ಬಗೆ ಬಗೆಯ ಸೀರೆಗಳನ್ನು ಅವಳ ಮುಂದೆ ಹರಡಿದ. ಅರ್ಧ ಗಂಟೆ ಹುಡುಕಾಡಿದರೂ ಅವಳಿಗೆ ಯಾವ ಸೀರೆಯೂ ಒಪ್ಪಿಗೆಯಾಗಲಿಲ್ಲ. ಮಾಲೀಕ ಅವಳನ್ನೇ ಗಮನಿಸುತ್ತಿದ್ದ.
“ನೋಡಪ್ಪ ನಿನ್ನೆ ನಾವು ತಗೊಂಡು ಹೋಗಿದ್ದಲ್ಲ ಅಂತದ್ದೇ ಸೀರೆ ತೋರಿಸು. ದುಡ್ಡು ಸ್ವಲ್ಪ ಜಾಸ್ತಿಯಾದ್ರು ಪರವಾಗಿಲ್ಲ.”
“ಲೋ ಭಾಸ್ಕರ…. ಹೊಸದಾಗಿ ಬಂದಿರೋ ಆ ಇನ್ನೊಂದು ಬಂಡಲ್‌ನಲ್ಲಿರೋ ಸೀರೆ ತೋರಿಸು ಬಹುಶಃ ಮೇಡಂಗೆ ಆ ಸೀರೆ ಇಷ್ಟವಾಗಬಹುದು ಆದ್ರೆ ನಿನ್ನೆ ತಗೊಂಡಿರೋ ಸೀರೆಗಿಂತ ಇನ್ನೂರು ರೂಪಾಯಿ ಜಾಸ್ತಿಯಾಗುತ್ತೆ.”
ಮಾಲೀಕ ಬೆರಳಿನಿಂದ ತೋರಿಸಿದ ಬಂಡಲ್ ಕಡೆ ನೋಡುತ್ತಾ ಎದ್ದು ನಿಂತ ಅಂಗಡಿ ಹುಡುಗ ಭಾಸ್ಕರ.
“ಅದನ್ನೇ ತೋರಿಸಪ್ಪ. ಇನ್ನೂರು ರೂಪಾಯಿ ಜಾಸ್ತಿಯಾದ್ರೂ ಪರವಾಗಿಲ್ಲ ಮತ್ತು ಆ ಸೀರೆಗಿಂತ ಒಳ್ಳೇ ಕ್ವಾಲಿಟಿದೇ ಸಿಗುತ್ತಲ್ಲ” ಹೆಂಗಸು ಸಂಭ್ರಮದಿಂದ ನುಡಿದಳು.
ಕಡೆಗೆ ಆಕೆ ಆರಿಸಿದ ಸೀರೆಯನ್ನು ಹುಡುಗ ಪ್ಯಾಕ್ ಮಾಡಿಕೊಟ್ಟ. ಅವಳು ಆ ಸೀರೆಯನ್ನು ಹಿಡಿದು ಅಂಗಡಿಯ ಮೆಟ್ಟಿಲಿಳಿದಳು.
“ಸಾರ್… ಒಂದು ಅನುಮಾನ…” ಭಾಸ್ಕರ ರಾಗ ಎಳೆದ.
“ಏನಪ್ಪ ನಿನ್ನ ಅನುಮಾನ?”
“ನಿನ್ನೆ ಆ ಹೆಂಗಸಿಗೆ ಕೊಟ್ಟ ಸೀರೆಗೂ ಈವತ್ತು ಇವರಿಗೆ ಕೊಟ್ಟಿರುವ ಸೀರೆಗೂ ಏನೂ ವ್ಯತ್ಯಾಸವಿಲ್ಲ, ಅದೇ ಕ್ವಾಲಿಟಿ, ಅದೇ ಬೆಲೆ. ಆದ್ರೆ ಈವತ್ತು ಯಾಕೆ ಇನ್ನೂರು ರೂಪಾಯಿ ಜಾಸ್ತಿ ಹೇಳಿದ್ರಿ?”
“ಅಯ್ಯೋ ಬೆಪ್ಪ… ಅಲ್ಲೇ ಇರೋದು ನನ್ನ ಜಾಣತನ… ಈಗ ಈ ಹೆಂಗಸು ಹೋಗಿ ಅವರ ಸ್ನೇಹಿತೆಯ ಮುಂದೆ ಈ ಸೀರೆ ಹಿಡೀತಾಳೆ, ನಿನ್ನ ಸೀರೆಗಿಂತ ಸ್ವಲ್ಪ ಕ್ವಾಲಿಟಿ ಬೇರೆ. ಸ್ವಲ್ಪ ದುಡ್ಡು ಜಾಸ್ತಿ ಅಂತ ಹೇಳ್ಕೊತಾಳೆ. ದುಡ್ಡು ಜಾಸ್ತಿ ಕೊಟ್ಟಿದ್ದೀನಿ ಅಂತಲೂ ಹೆಮ್ಮೆಯಿಂದ ಹೇಳ್ಕೊತಾಳೆ. ಅವಳಿಗೆ ಒಂಥರಾ ಸಂತೋಷ ಸಿಗುತ್ತೆ, ನಾವು ನಮಗೆ ಲಾಭ ಆಯ್ತು ಅಂತ ಖುಷಿ ಪಡೋಣ. ಗಿರಾಕಿಗಳ ಮನಸ್ಸು ಅರ್ಥ ಮಾಡ್ಕೊಂಡು ವ್ಯಾಪಾರ ಮಾಡೋದನ್ನ ಕಲಿತುಕೋ. ಮುಂದೆ ನೀನೂ ಒಂದು ಅಂಗಡಿ ಮಾಲೀಕನಾಗಬಹುದು.
ಯಜಮಾನನ ಮಾತು ಕೇಳಿ ತಲೆ ಆಡಿಸಿ ಮುಗುಳ್ನಕ್ಕ ಭಾಸ್ಕರ.

ಸವಿತಾ ಪ್ರಭಾಕರ್ , ಮೈಸೂರು


ಚಿಕ್ಕ ಚೊಕ್ಕ ಕಥೆ ಚಂದವಿದೆ..ಗೆಳತಿ
ಜನರ ಮನಸ್ಥಿತಿ ಯ ಅನಾವರಣ ಆಗಿದೆ ಇಲ್ಲಿ. Nice