ವಿಜ್ಞಾನ - ವಿಶೇಷ ದಿನ

ಸ್ತನ ಕ್ಯಾನ್ಸರ್ ಬಂದರೆ……….? ಅಂಜದೇ ಎದುರಿಸೋಣ!

Share Button

ಹಲವಾರು ಆಪ್ತ ಸ್ನೇಹಿತರು, ಬಂಧುಗಳು, ಸ್ತನಕ್ಯಾನ್ಸರ್‌ನಿಂದ ಬಳಲಿದ್ದು, ದೀರ್ಘ ಚಿಕಿತ್ಸೆ ಪಡೆದಾಗ, ಗುಣಮುಖರಾದ ಹಲವರು, ಕೊನೆಯವರೆಗೆ ಹೋರಾಡಿ ಮರಣ ಹೊಂದಿದ ಕೆಲವರು, ಇವರ ಚಿತ್ರಗಳು ಸದಾ ನನ್ನ ಕಣ್ಣ ಮುಂದಿವೆ. ನನ್ನ ಭದ್ರಾವತಿ ಆಕಾಶವಾಣಿಯ ಸಹೋದ್ಯೋಗಿಯೊಬ್ಬರ ತಾಯಿಗೆ 1992ರಲ್ಲಿ ಸ್ತನ ಕ್ಯಾನ್ಸರ್ ಆಗಿತ್ತು. ಆಗ ಸತತ ವೈದ್ಯಕೀಯ ತಪಾಸಣೆ, ಮೆಮೋಗ್ರಾಫಿ ಮಾಡಿ, ಚಿಕಿತ್ಸೆಗಳ ಮೂಲಕ ಗುಣಪಡಿಸುವಿಕೆಯ ಹಾದಿಯಲ್ಲಿ ಅವರ ಸ್ತನಗಳನ್ನು ಶಸ್ತ್ರಚಿಕಿತ್ಸೆಯಿಂದ ತೆಗೆದು ಹಾಕಲಾಗಿತ್ತು. ಇಂದಿಗೂ ಅವರು ಆರೋಗ್ಯಯುತ ಜೀವನ ನಡೆಸುತ್ತಿದ್ದಾರೆ. ನಮ್ಮ ಕಛೇರಿಯ ಇಬ್ಬರು ಚಾಲಕರಿಗೆ ಗುಟ್ಕಾ ಹಾಗೂ ತಂಬಾಕಿನ ಪುಡಿ ಸತತವಾಗಿ ತಿನ್ನುವ ಚಟ ಇದ್ದುದರಿಂದ ಅವರ ಮಾತು ನಿಂತು ಹೋಗಿ ಬಾಯಿಯ ಒಳಗೆ ಗಂಟಲಿನ ತನಕ ಬಿಳಿಯ ಪಟ್ಟಿ ಬಂದು ಕ್ಯಾನ್ಸರ್ ಆಗಿತ್ತು. ಸತತ ಎಷ್ಟೋ ವರ್ಷಗಳ ಚಿಕಿತ್ಸೆಯ ನಂತರ ಅವರಿಗೆ ಗುಣವಾಯಿತು. ಮೈಸೂರಿನಲ್ಲಿ ನನ್ನ ಹೆಂಡತಿಯ ಅತ್ಯಂತ ಆತ್ಮೀಯ ಗೆಳತಿಗೆ ಸ್ತನ ಕ್ಯಾನ್ಸರ್ ಆಗಿತ್ತು. ಅವರ ಸ್ತನಗಳನ್ನು ಶಸ್ತ್ರಚಿಕಿತ್ಸೆಯಿಂದ ತೆಗೆದು ಹಾಕಲಾಗಿತ್ತು. ಸತತ ತಪಾಸಣೆ ಚಿಕಿತ್ಸೆ ಕಿಮೋಥೆರಪಿ ಮೂಲಕ ಅವರಿಗೆ ಗುಣವಾಗಿತ್ತು. ಆಗ ಅವರಿಗೆ ತಲೆಕೂದಲು ಉದುರಿತ್ತು. ಆ ಸಂದರ್ಭದಲ್ಲಿ ಎಷ್ಟೋ ತಿಂಗಳುಗಳ ಕಾಲ ದಿನ ಬಿಟ್ಟು ದಿನ ಆಸ್ಪತ್ರೆಯಲ್ಲಿ ಡ್ರೆಸ್ಸಿಂಗ್‌ಗಾಗಿ ಅವರ ಜೊತೆಗೆ ನನ್ನ ಹೆಂಡತಿ ಅವರ ಜೊತೆ ಹೋಗುತ್ತಿದ್ದಳು. ಇದನ್ನೆಲ್ಲಾ ನಾನೂ ನನ್ನ ಹೆಂಡತಿ ಹತ್ತಿರದಿಂದ ನೋಡಿ ದುಃಖಿತರಾಗಿದ್ದೆವು. ಗುಣವಾಯಿತೆಂದು ನಿರಾಳವಾಗಿದ್ದ ಅವರಿಗೆ ಎರಡು ವರ್ಷಗಳ ನಂತರ ಅದೇ ಕ್ಯಾನ್ಸರ್ ಧುತ್ತೆಂದು ಮೇಲೆರಗಿ ಅವರ ಜೀವ ಹರಣ ಮಾಡಿತು. ಈ ನೇರ ಪ್ರತ್ಯಕ್ಷ ಅನುಭವದೊಂದಿಗೆ ಆರೋಗ್ಯ ಕ್ಷೇತ್ರದ ನನ್ನ ಅನುಭವವೂ ಸೇರಿದೆ.

1973ರಿಂದ 1975ರವರೆಗೆ, ಭಾರತೀಯ ಕುಟುಂಬ ಯೋಜನಾ ಸಂಘದ ಧಾರವಾಡ ಶಾಖೆಯಲ್ಲಿ, ಕುಟುಂಬ ಕಲ್ಯಾಣ ಶಿಕ್ಷಣಾಧಿಕಾರಿಯಾಗಿ, ಗ್ರಾಮೀಣ ಆರೋಗ್ಯ ಸಂಚಾರಿ ವಿಭಾಗದ ಮುಖ್ಯಸ್ಥರಾಗಿ, ಧಾರವಾಡ ಜಿಲ್ಲೆಯ 40 ಗ್ರಾಮಗಳಲ್ಲಿ ಹಾಗೂ ಹುಬ್ಬಳ್ಳಿಯ ತೊಗರಿಗಲ್ಲಿ ಕಲ್ಯಾಣ ಕೇಂದ್ರದ ನಗರ ಪ್ರದೇಶ ಹಾಗೂ ಕೊಳಚೆ ಪ್ರದೇಶಗಳಲ್ಲಿ, ಆರೋಗ್ಯ ಶಿಕ್ಷಣ ನೀಡಿದ ಅನುಭವ, ಆಕಾಶವಾಣಿಯಲ್ಲಿ 36 ವರ್ಷ, ಸಾವಿರಾರು ಆರೋಗ್ಯ ಕಾರ್ಯಕ್ರಮಗಳನ್ನು ಮಾಡಿ ಸಾವಿರಾರು ವೈದ್ಯರನ್ನು ಸಂದರ್ಶಿಸಿದ ಹಿನ್ನೆಲೆ ನನಗಿದೆ. ಬೆಂಗಳೂರಿನ ಕ್ಯಾನ್ಸರ್ ಆಸ್ವತ್ರೆಯ ಮುಖ್ಯಸ್ಥರಾಗಿದ್ದ ಡಾ. ಎಮ್.ಕೃಷ್ಣ ಭಾರ್ಗವ ಅವರೊಂದಿಗೆ ನಡೆಸಿದ ದೀರ್ಘ ಸಂದರ್ಶನ, ಚಾಮರಾಜನಗರ, ಮೈಸೂರುಗಳಲ್ಲಿ ಕ್ಯಾನ್ಸರ್ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರಗಳಲ್ಲಿ ಭಾಗವಹಿಸಿ, ವಿವರವಾದ ಸೋದಾಹರಣ ರೂಪಕಗಳನ್ನು ಮಾಡಿದ ಅನುಭವ, ನೂರಾರು ಕ್ಯಾನ್ಸರ್ ರೋಗಿಗಳ ಸಂದರ್ಶನ ಇವೆಲ್ಲವುಗಳ ಹಿನ್ನೆಲೆಯಲ್ಲಿ, ಬರೆದಿರುವ ಈ ನನ್ನ ಲೇಖನ, ಎಲ್ಲರಿಗೂ ಅರಿವು ನೀಡಲಿ ಎಂಬ ಉದ್ದೇಶ ನನ್ನದು.

ಪ್ರತಿ ವರ್ಷ ಪ್ರಪಂಚದಲ್ಲಿ 14.1 ದಶಲಕ್ಷ ಕ್ಯಾನ್ಸರ್‌ನ ಹೊಸ ರೋಗಿಗಳು ಪತ್ತೆಯಾಗುತ್ತವೆ. 2012ರಲ್ಲಿ 8.2 ದಶಲಕ್ಷ ಅಥವಾ ಮಾನವ ಸಾವಿನ ಒಟ್ಟು 14.6% ಸಾವುಗಳು ಕ್ಯಾನ್ಸರ್‌ನಿಂದ ಉಂಟಾದವು. ಇದರಲ್ಲಿ 2/3ರಷ್ಟು ಕಡಿಮೆ ಹಾಗೂ ಮಧ್ಯಮ ಆದಾಯ ದೇಶಗಳಲ್ಲಿ ಉಂಟಾಗಿವೆ. ಇವುಗಳಲ್ಲಿ ಶೇಕಡಾ 50ರಷ್ಟು ಮರಣಗಳನ್ನು ತಡೆಯಬಹುದು. ಪ್ರತಿ ವರ್ಷ ಫೆಬ್ರವರಿ 4ರಂದು ವಿಶ್ವ ಕ್ಯಾನ್ಸರ್ ದಿನಾಚರಣೆ. ಈ ಸಂದರ್ಭದಲ್ಲಿ, ಕ್ಯಾನ್ಸರ್ ಬಗ್ಗೆ ಸಂಕ್ಷಿಪ್ತ ಮಾಹಿತಿ, ಇದನ್ನು ತಡೆಯಲು ಅನುಸರಿಸಬಹುದಾದ ಜೀವನ ಶೈಲಿ, ಇವುಗಳ ಬಗ್ಗೆ ಈಗ ಕೊಂಚ ಗಮನಿಸೋಣವೇ? ಕ್ಯಾನ್ಸರ್ ಅಂದರೆ… ಕ್ಯಾನ್ಸರ್ ಅಂದರೆ ಗಂಟು. ಇದು ಹಲವಾರು ಕಾಹಿಲೆಗಳ ಒಂದು ಗುಂಪು. ಈ ಅಸಾಮಾನ್ಯ ಜೀವಕೋಶಗಳ ಬೆಳವಣಿಗೆ, ದೇಹದ ಇತರ ಭಾಗಗಳಿಗೆ ಹರಡಬಲ್ಲ, ಆಕ್ರಮಿಸುವ ಶಕ್ತಿ ಹೊಂದಿದೆ. ದೇಹದ ಎಲ್ಲಾ ಗಂಟುಗಳೂ ಕ್ಯಾನ್ಸರ್ ಅಲ್ಲ. ಅವು ದೇಹದ ಇತರ ಭಾಗಗಳಿಗೆ ಹರಡುವುದೂ ಇಲ್ಲ. ಹಾಗೆ ನೋಡಿದರೆ ನನ್ನ ಹಾಗೂ ನನ್ನ ಹೆಂಡತಿಯ ಕೈಗಳು ಹಾಗೂ ಬೆನ್ನಿನ ಮೇಲೆ ಹಲವಾರು ಚಿಕ್ಕ ಗಂಟುಗಳಾಗಿವೆ. ತಪಾಸಣೆ ಮಾಡಿದಾಗ ಅವುಗಳಲ್ಲಿ ನೋವಿಲ್ಲ ಹಾಗೂ ಅವು ಬೆಳೆಯುತ್ತಿಲ್ಲ.

ಕ್ಯಾನ್ಸರ್‌ನ ಚಿಹ್ನೆಗಳು ಹಾಗೂ ಲಕ್ಷಣಗಳು:- ಹೊಸ ಗಂಟು, ಅಸಾಮಾನ್ಯ ರಕ್ತ ಸೋರುವಿಕೆ, ದೀರ್ಘಾವಧಿ ಕೆಮ್ಮು, ವಿವರಿಸಲಾಗದ ತೂಕ ಇಳಿತ, ಮಲವಿಸರ್ಜನೆಯಲ್ಲಿಯ ಬದಲಾವಣೆಗಳು – ಇವೆಲ್ಲ ಕ್ಯಾನ್ಸರ್‌ನ ಚಿಹ್ನೆಗಳು.

ಕ್ಯಾನ್ಸರ್ ವಿಧಗಳು:- ಗಂಡಸರಲ್ಲಿ ಸಾಮಾನ್ಯವಾಗಿ, ಪುಪ್ಪುಸ ಕ್ಯಾನ್ಸರ್, ಪ್ರಾಸ್ಟೇಟ್ ಕ್ಯಾನ್ಸರ್, ಗುದನಾಳ ಕ್ಯಾನ್ಸರ್ ಹಾಗೂ ಹೊಟ್ಟೆಯ ಕ್ಯಾನ್ಸರ್ ಹೆಚ್ಚು. ಹೆಂಗಸರಲ್ಲಿ, ಸ್ತನ ಕ್ಯಾನ್ಸರ್, ಗುದನಾಳ ಕ್ಯಾನ್ಸರ್, ಗರ್ಭಕೋಶ ಕ್ಯಾನ್ಸರ್, ಪುಪ್ಪುಸ ಕ್ಯಾನ್ಸರ್ ಜಾಸ್ತಿ. ಶೇಕಡಾ 40ರಷ್ಟು ಚರ್ಮ ಕ್ಯಾನ್ಸರ್ ರೋಗಿಗಳು ಬರುತ್ತಾರೆ. ಮಕ್ಕಳಲ್ಲಿ ರಕ್ತ ಕ್ಯಾನ್ಸರ್ ಮೆದುಳಿನ ಕ್ಯಾನ್ಸರ್ ಜಾಸ್ತಿ. ದೇಹದ ಭಾಗಗಳಲ್ಲಿ ಬರಬಹುದಾದ ಕ್ಯಾನ್ಸರ್‌ನ ಚಿಹ್ನೆ ಹಾಗೂ ಲಕ್ಷಣಗಳ ಬಗ್ಗೆ ಚಿತ್ರ-1ನ್ನು ಗಮನಿಸಿ. ಕ್ಯಾನ್ಸರ್ ಹರಡುವಿಕೆ:- ದೇಹದ ಯಾವುದೇ ಒಂದು ಭಾಗದಲ್ಲಾದ ಏಡಿಗಂಟು ಅಥವಾ ಕ್ಯಾನ್ಸರ್, ಮೂಲ ಸ್ಥಳದಿಂದ ಸ್ಥಳೀಯವಾಗಿ ಹರಡಬಹುದು, ವಿವಿಧ ಪ್ರದೇಶಗಳಿಗೆ ಹರಡಬಹುದು, ರಕ್ತದ ಮೂಲಕ ದೇಹದಾದ್ಯಂತ ವಿಸ್ತಾರವಾಗಬಹುದು. ಪುಪ್ಪುಸ ಕ್ಯಾನ್ಸರ್, ಬೀಡಿ, ಸಿಗರೇಟು, ಹೊಗೆಸೊಪ್ಪು, ಖೈನಿ, ಗುಟಕಾಗಳಿಂದ ಬರುತ್ತದೆ. ಶೇಕಡಾ 90 ಭಾಗ ಇದೇ ಕಾರಣ. ಧ್ವನಿಪೆಟ್ಟಿಗೆ, ತಲೆ, ಕತ್ತು, ಹೊಟ್ಟೆ, ಮೂತ್ರಾಶಯ, ಮೂತ್ರಪಿಂಡ, ಮೇದೋಜ್ಜೀರಕ ಗ್ರಂಥಿ ಇಲ್ಲೆಲ್ಲಾ ತಂಬಾಕು ಸೇವನೆಯಿಂದಲೇ ಕ್ಯಾನ್ಸರ್ ಬರುತ್ತದೆ. ಮುಂದುವರೆದ ದೇಶಗಳಲ್ಲಿ, ಒಟ್ಟೂ ಕ್ಯಾನ್ಸರ್ ಮರಣದ ಪ್ರಮಾಣದಲ್ಲಿ, ಮೂರರಲ್ಲಿ ಒಂದು ಭಾಗ ತಂಬಾಕು ಸೇವನೆಯಿಂದಲೇ ಆಗುತ್ತದೆ. ಪ್ರಪಂಚದಲ್ಲಿ 5ರಲ್ಲಿ ಒಂದು ಮರಣ, ತಂಬಾಕಿನಿಂದ. ಹಾರ್ಮೋನ್‌ಗಳ ಪ್ರಭಾವ, ಲೈಂಗಿಕ ಅಂಗಗಳ ಕ್ಯಾನ್ಸರ್ ಮೇಲಿದೆ.

ತಂಬಾಕು ಹಾಗೂ ಇತರ ಕಾರಣಗಳು:- ಶೇಕಡಾ 22ರಷ್ಟು ಕ್ಯಾನ್ಸರ್ ಮರಣಗಳ ಮೂಲ ಕಾರಣ ತಂಬಾಕು ಸೇವನೆ. ಶೇಕಡಾ 10 ರಷ್ಟು ಮರಣ ಸ್ಥೂಲಕಾಯದಿಂದ, ಅಪೌಷ್ಟಿಕತೆ, ಶಾರೀರಿಕ ಚಟುವಟಿಕೆಗಳ ಕೊರತೆ ಹಾಗೂ ಮದ್ಯಪಾನದಿಂದ ಸಂಭವಿಸುತ್ತಿವೆ. ತಂದೆ ತಾಯಿಗಳಿಂದ ವಂಶವಾಹಿನಿಯಿಂದ ಜೀವಕೋಶ ದೋಷಗಳು, ಶೇಕಡಾ 5 ರಿಂದ 10 ಮಕ್ಕಳಿಗೆ ಬಳುವಳಿಯಾಗಿ ಕ್ಯಾನ್ಸರ್ ತರುತ್ತವೆ. ನಮ್ಮ ರಾಜ್ಯ ಹಾಗೂ ದೇಶದಲ್ಲಿ, ತಂಬಾಕನ್ನು ನಶ್ಯ, ಹೊಗೆಸೊಪ್ಪು, ಖೈನಿ, ಗುಟ್ಕಾ, ಈ ರೀತಿ ಮೂಗು, ಬಾಯಿಗಳಿಂದ ಸೇವನೆ ಮಾಡಿ, ಜಗಿದು, ನುಂಗಿ, ರಾತ್ರಿಯೆಲ್ಲ ಬಾಯಲ್ಲಿಟ್ಟುಕೊಂಡು ರಸ ಕುಡಿದು, ಎಲೆ-ಅಡಿಕೆಯೊಂದಿಗೆ ತಂಬಾಕು ಸೇವಿಸಿ, ಬೀಡಿ ಸಿಗರೇಟು ಸೇದಿ, ಹೊಗೆಬಿಟ್ಟು, ಸಂತೋಷಪಡುವ ಜನ, ತಂಬಾಕಿನಿಂದ ಬರುವ ಕ್ಯಾನ್ಸರ್ ಬಗ್ಗೆ ಎಳ್ಳಷ್ಟ್ಟೂ ಚಿಂತಿಸುವುದಿಲ್ಲ. ಗುಟ್ಕಾದಿಂದ ಮಾತು ನಿಂತು, ಗಂಟಲಲ್ಲಿ ನೀರು ಸಹ ಕುಡಿಯಲಾಗದ ರೋಗಿಗಳನ್ನು ಕಂಡಿದ್ದೇನೆ. ಬಾಯಿ ನಾಲಿಗೆ ಗಂಟಲು ಇಲ್ಲೆಲ್ಲಾ, ಬಿಳೀ ಪದರವಾಗಿ, ಆಹಾರ ನೀರು ಪಡೆಯಲಾಗದೇ, ಉಸಿರಾಡಲೂ ತೊಂದರೆ ಅನುಭವಿಸುವ ಅಸಂಖ್ಯಾತ ರೋಗಿಗಳನ್ನು ಭೇಟಿಯಾಗಿ ಅವರ ದಾರುಣ ಸ್ಥಿತಿ ಗಮನಿಸಿದ್ದೇನೆ. ತಂಬಾಕಿನ ಚಟದಿಂದ ತಕ್ಷಣದ ನೋವು ದುಃಖ ಮರೆಯಲು ಯತ್ನಿಸುವ ಬಡ ಜನ, ಮಹಿಳೆಯರು, ವಯಸ್ಸಾದವರು, ಮಕ್ಕಳು, ಯುವಜನ, ತಮ್ಮ ಕೈಯಾರೇ ತಾವೇ ಕೊಡಲಿ ಎತ್ತಿ ತಮ್ಮ ಕಾಲ ಮೇಲೆ ಹಾಕಿಕೊಳ್ಳುತ್ತಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಯ ಎಚ್ಚರಿಕೆಯಂತೆ ತಂಬಾಕು ಹಾಗೂ ಮದ್ಯಪಾನದ ದುಷ್ಬಳಕೆ, ಅನಾರೋಗ್ಯಕರ ಆಹಾರ ಪದ್ಧತಿ, ಶಾರೀರಿಕ ಚಟುವಟಿಕೆ ಇಲ್ಲದಿರುವುದು, ಇವುಗಳಿಂದ ಕ್ಯಾನ್ಸರ್ ಅಪಾಯ ಹೆಚ್ಚುತ್ತದೆ. ದಕ್ಷಿಣ ಪೂರ್ವ ಏಶಿಯಾದಲ್ಲಿ, ಕೆಲಸ ಮಾಡುವ ಸ್ಥಳದ ಅಪಾಯಗಳು, ಪರಿಸರದಲ್ಲಿ ಅಪಾಯಕಾರಿ ಅಂಶಗಳಿಗೆ ನಾವು ತೆರೆದುಕೊಳ್ಳುವುದು, ಕ್ಯಾನ್ಸರ್‌ನ ಮೂಲ ಹಾಗೂ ಅಕಾಲಿಕ ಸಾವಿಗೆ ಕಾರಣವಾಗುತ್ತಿವೆ.ವಿಶ್ವ ಆರೋಗ್ಯ ಸಂಸ್ಥೆಯ ದಕ್ಷಿಣ-ಪೂರ್ವ ಏಶಿಯಾದ ಪ್ರಾದೇಶಿಕ ನಿರ್ದೇಶಕರಾದ ಡಾ.ಪೂನಮ್ ಖೇತ್ರಪಾಲ್‌ಸಿಂಗ್ ಹೇಳುವಂತೆ ವಿಶ್ವದ ಕ್ಯಾನ್ಯರ್ ಸಾವುಗಳಲ್ಲಿ ತಂಬಾಕು ಬಳಕೆಯ ಪಾಲು ಶೇಕಡಾ 22ರಷ್ಟು. ಸಾಕಷ್ಟು ಸೂರ್ಯ ರಕ್ಷಣೆ ಇಲ್ಲದೇ, ಕಾರಖಾನೆಯಲ್ಲಿ ಕ್ಯಾನ್ಸರ್ ಉಂಟು ಮಾಡುವ ರಾಸಾಯನಿಕಗಳಿಗೆ ತೆರೆದುಕೊಳ್ಳುವುದು ಈ ಅಪಾಯ ಹೆಚ್ಚಿಸುತ್ತಿದೆ. ಹೊರಾಂಗಣದ ವಾಯು ಮಾಲಿನ್ಯತೆ ಎಲ್ಲರಿಗೂ ಕ್ಯಾನ್ಸರ್ ಅಪಾಯ ತರುತ್ತಿದೆ.

ಚಿಕಿತ್ಸೆ:- ಕ್ಯಾನ್ಸರ್ ಚಿಕಿತ್ಸೆಯಲ್ಲಿ ವಿಕಿರಣ ಚಿಕಿತ್ಸೆ, ಶಸ್ತ್ರ ಚಿಕಿತ್ಸೆ, ಕೆಮೋಥೆರಪಿ, ಹಾಗೂ ಗುರಿಯಿಟ್ಟ ಜಾಗದ ಥೆರಪಿ, ಇವುಗಳ ಮಿಶ್ರಣವಿರುತ್ತದೆ. ಕ್ಯಾನ್ಸರ್ ಕಾಳಜಿಯಲ್ಲಿ, ನೋವು ಹಾಗೂ ಲಕ್ಷಣಗಳ ನಿರ್ವಹಣೆ, ಮುಖ್ಯ ಚಿಕಿತ್ಸೆ ಆರಂಭದಲ್ಲಿ, ಯಾವ ರೀತಿಯ ಕ್ಯಾನ್ಸರ್ ಹಾಗೂ ಯಾವ ಹಂತಕ್ಕೆ ಹೇಗಿದೆ ಎನ್ನುವುದರ ಮೇಲೆ, ಉಳಿವು ಅವಲಂಬಿಸಿದೆ.

ತಡೆಗಟ್ಟುವುದು:- ಸಿಗರೇಟು ಸೇದದೇ, ಮದ್ಯ ಕುಡಿಯದೇ, ಆರೋಗ್ಯಕಾರಿ ದೇಹ ತೂಕ ಸ್ಥಿರವಾಗಿರಿಸಿಕೊಂಡು, ಹೆಚ್ಚು ತರಕಾರಿ ಹಣ್ಣುಗಳು, ಪೂರ್ಣಕಾಳುಗಳು ಇವುಗಳನ್ನು ಸೇವಿಸುವುದರಿಂದ ಅನೇಕ ಕ್ಯಾನ್ಸರ್ ರೋಗಗಳನ್ನು ತಡೆಗಟ್ಟಬಹುದು. ಸೂರ್ಯನ ಕಿರಣಗಳಿಗೆ ಅತಿ ಹೆಚ್ಚು ತೆರೆದುಕೊಳ್ಳದೇ, ಕೆಂಪು ಮಾಂಸ ಹೆಚ್ಚು ತಿನ್ನದೇ ಕ್ಯಾನ್ಸರ್‌ನಿಂದ ದೂರವಿರಬಹುದು. ಗರ್ಭಕೋಶದ ಹಾಗೂ ಗುದನಾಳದ ಕ್ಯಾನ್ಸರ್‌ನ್ನು ಬೇಗ ಪತ್ತೆ ಹಚ್ಚುವುದರಿಂದ ಅನುಕೂಲ. ಇತ್ತೀಚೆಗೆ ಧ್ಯಾನದಿಂದ ಕ್ಯಾನ್ಸರ್ ತಡೆಗಟ್ಟಬಹುದು ಎಂಬ ವಿಷಯ ಆಕರ್ಷಕವಾಗಿದ್ದು, ಕೆಲವು ನಿರ್ದಿಷ್ಟ ಸಂದರ್ಭಗಳಲ್ಲಿ, ಇದರ ಬಳಕೆ ಸಾಧ್ಯವಾಗಿದೆ ಎಂಬ ಆಧಾರ ಸಿಕ್ಕಿದೆ.

ವಿಶ್ವ ಕ್ಯಾನ್ಸರ್ ದಿನಾಚರಣೆಯ ಧ್ಯೇಯವಾಕ್ಯ:- 2016ರಿಂದ 2018ರವರೆಗಿನ ವಿಶ್ವ ಕ್ಯಾನ್ಸರ್ ದಿನಾಚರಣೆಯ ಧ್ಯೇಯವಾಕ್ಯ ನಾವೂ ಮಾಡಬಲ್ಲೆವು, ನಾನೂ ಮಾಡಬಲ್ಲೆ. ವಿಶ್ವದ ಕ್ಯಾನ್ಸರ್ ಭಾರವನ್ನು ಕಡಿಮೆ ಮಾಡಲು ವ್ಯಕ್ತಿಗಳಾಗಿ ಹಾಗೂ ಸಾಂಘಿಕವಾಗಿ ಪ್ರತಿಯೊಬ್ಬರೂ ಏನು ಮಾಡಬಹುದು? ಎಂಬತ್ತ ಗಮನವಿದೆ. ಅನೇಕ ಬಾರಿ ಕ್ಯಾನ್ಸರ್ ತಜ್ಞರೊಂದಿಗೆ, ನನ್ನ ಸಂಭಾಷಣೆಯಿಂದ ತಿಳಿದು ಬಂದ ವಿವರಗಳು ಹೀಗಿವೆ:-

ಬೇಕಾದಾಗ ಸಾಕಷ್ಟು ನೀರು ದೊರೆಯದಿರುವುದು, ಹತ್ತಿರ ಶೌಚಾಲಯದ ಸೌಲಭ್ಯ ಇಲ್ಲದಿರುವುದು, ಕನಿಷ್ಟ ಸ್ವಚ್ಛತೆಯ ಮಾಹಿತಿ ಇಲ್ಲದಿರುವುದು, ಮಹಿಳೆಯರ ಗುಪ್ತಾಂಗಗಳ ಸ್ವಚ್ಛತೆ ಹಾಗೂ ಕಾಳಜಿಯ ಬಗೆಗಿನ ಮಹಿಳೆಯರ ನಿಷ್ಕಾಳಜಿ, ಸೋಂಕುಗಳನ್ನು ಆಹ್ವಾನಿಸುತ್ತದೆ. ಇವೇ ಮುಂದೆ ಕ್ಯಾನ್ಸರ್‌ನತ್ತ ಹೊರಳುತ್ತವೆ. ಯೋನಿಸ್ರಾವ, ವಾಸನೆಯ ಬಿಳಿಸೆರಗು ಹಾಗೂ ಕೆಂಪು ಸೆರಗು, ಮೊಲೆ ತೊಟ್ಟುಗಳ ಸೋಂಕು, ಸ್ತನಗಳಲ್ಲಿ ಗಂಟು, ಅನಿರೀಕ್ಷಿತ ಗರ್ಭಪಾತ, ಮುಟ್ಟಿನ ಸಮಯದಲ್ಲಿ ಬಳಸುವ ಹೊಲಸು ಬಟ್ಟೆಗಳ ಅಪಾಯ, ಇವೆಲ್ಲ ಮಹಿಳೆಯರು ಕ್ಯಾನ್ಸರ್‌ಗೆ ತುತ್ತಾಗುವ ಕೆಲವು ಅಪಾಯದ ಲಕ್ಷಣಗಳು ಹಾಗೂ ಸಂದರ್ಭಗಳು. ಮಹಿಳೆಯರು ಪ್ರತಿನಿತ್ಯ ತಮ್ಮ ಗುಪ್ತಾಂಗಗಳ ಸ್ವಚ್ಛತೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಕನ್ನಡಿಯ ಮುಂದೆ ನಿಂತು, ಪ್ರತಿದಿನ ತಮ್ಮ ಸ್ತನಗಳನ್ನು ಗಮನಿಸಬೇಕೆಂದು, ತಜ್ಞ ವೈದ್ಯರು ಸಲಹೆ ನೀಡಿದ್ದಾರೆ.

ಬೆಂಗಳೂರಿನ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ನಿರ್ದೇಶಕರಾಗಿರುವ ಡಾ ಕೆ.ಬಿ.ಲಿಂಗೇಗೌಡ ಹಾಗೂ ಹಿಂದಿನ ನಿರ್ದೇಶಕರಾಗಿ ನನಗೆ ವಿವರವಾದ ಸಂದರ್ಶನ ಕೊಟ್ಟಿದ್ದ ಡಾ.ಕೃಷ್ಣ ಎಮ್.ಭಾರ್ಗವ ಹೇಳಿದ್ದಂತೆ, ಸ್ವಲ್ಪ ಸಂದೇಹ ಬಂದರೂ, ರಕ್ತಸ್ರಾವ, ಸ್ತನದಲ್ಲಿ ಗಂಟು, ದೇಹದ ಯಾವುದೇ ಭಾಗದಲ್ಲಿ ಬೆಳೆಯುತ್ತಿರುವ ಗಂಟು ಇದ್ದಲ್ಲಿ ಮುಚ್ಚಿಟ್ಟುಕೊಳ್ಳದೇ ತಕ್ಷಣ ಕ್ಯಾನ್ಸರ್ ತಪಾಸಣೆ ಮಾಡಿಸಬೇಕು. 35 ದಾಟಿದ ಪ್ರೌಢರು, ಮಹಿಳೆಯರು, ಪ್ರತೀವರ್ಷ ಶರೀರದ ಸಂಪೂರ್ಣ ತಪಾಸಣೆ ಮಾಡಿಸಬೇಕು. ಧೂಮ್ರಪಾನ, ಮದಿರೆ, ತಂಬಾಕು ಸೇವನೆಯ ಚಟವಿದ್ದವರು, ನಾಲಿಗೆ, ತುಟಿ, ಬಾಯಿ, ಗಂಟಲಲ್ಲಿ ಬಿಳಿಗೆರೆ ತರಹ ಕಂಡಲ್ಲಿ, ಹುಣ್ಣು ಕಂಡಲ್ಲಿ, ಆಹಾರ ನುಂಗಲಾರದ ಸ್ಥಿತಿಯಿದ್ದರೆ, ತಕ್ಷಣ ಕ್ಯಾನ್ಸರ್ ತಪಾಸಣೆಗೆ ಧಾವಿಸಿ. ಮೊದಲ ಹಂತದಲ್ಲಿ ಧಾವಿಸಿ ಪರೀಕ್ಷೆ ಚಿಕಿತ್ಸೆ ಮಾಡಿಸಿಕೊಂಡರೆ, ಜೀವ ಉಳಿಕೆ ಖಾತ್ರಿ. ಎರಡನೇ ಹಂತ ದಾಟಿ, 3ನೇ ಹಂತ ಬಂದಾಗ, ಕೊನೆಯ ಹಂತದಲ್ಲಿ, ಎಲ್ಲಿಗೆ ಹೋದರೂ, ಎಷ್ಟೇ ಖರ್ಚು ಮಾಡಿದರೂ, ಜೀವ ಉಳಿಯುವ ಸಾಧ್ಯತೆ ಕಡಿಮೆ. ಬೆಂಗಳೂರಿನ ಕಿದ್ವಾಯಿ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ನಿರ್ದೇಶಕರಾದ ಡಾ. ಕೆ.ಬಿ ಲಿಂಗೇಗೌಡರು ದೂರದರ್ಶನದ ಒಂದು ಸಂದರ್ಶನದಲ್ಲಿ ಇತ್ತೀಚೆಗೆ ಹೇಳಿದಂತೆ, ಒಂದು ಮದುವೆಗೆ 30 ಲಕ್ಷ, ಒಂದು ಪಾರ್ಟಿಗೆ 3 ಲಕ್ಷ, ಕೊರಳಿನ ಒಂದು ಬಂಗಾರದ ಚೈನಿಗೆ 2 ಲಕ್ಷ ಖರ್ಚು ಮಾಡ್ತಾರೆ. ಆದರೆ 1 ವರ್ಷಕ್ಕೆ 2000ರೂ ಕೊಟ್ಟು ಸಂಪೂರ್ಣ ಶಾರೀರಿಕ ಪರೀಕ್ಷೆ ಮಾಡಿಸೋಕೆ, ಜನ ದುಡ್ಡು ಖರ್ಚು ಮಾಡೋಲ್ಲ.!

ಯಶಸ್ವೀ ಕಥೆಗಳು:- 2011ರ ವಿಶ್ವಕಪ್ ಜಯಿಸಿದ ಭಾರತ ತಂಡದ ಮೋಡಿ ಆಟಗಾರ, ಪಂದ್ಯ ಪುರುಷ, ಯುವರಾಜಸಿಂಗ್‌ಗೆ ತಕ್ಷಣ ಧುತ್ತೆಂದು ಎರಗಿತು ಪುಪ್ಪಸದ ಕ್ಯಾನ್ಸರ್‌ನ ಮೊದಲ ಹಂತ. ಆತ ಅಮೇರಿಕಾದಲ್ಲಿ ಕೆಮೋಥೆರಪಿಗೆ ಒಳಗಾಗಿ ಗುಣಮುಖನಾಗಿ, ಮಾರ್ಚ್ 2012ರಲ್ಲಿ ಭಾರತಕ್ಕೆ ಮರಳಿ, ಅದೇ ವರ್ಷ ಬ್ಲೂ ಜರ್ಸಿ ಮುಂದುವರೆಸಿದ. ನೇಪಾಳದ ಚೆಲುವೆ, ಬಾಲಿವುಡ್ ಕಲಾವಿದೆ, ದಿಲ್‌ಸೆ, ಬಾಂಬೆ, ಲಜ್ಜಾ, ಚಿತ್ರಗಳ ನಾಯಕಿ ಮನೀಷಾ ಕೊಯರಾಲಳು 42ನೇ ವಯಸ್ಸಿನಲ್ಲಿ ಅಂಡಾಶಯದ ಕ್ಯಾನ್ಸರ್‌ಗೆ ತುತ್ತಾಗಿ, ನ್ಯೂಯಾರ್ಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ರೋಗದಿಂದ ಮುಕ್ತಳಾದಳು. ಕೆಮೋಥೆರಪಿ ಕಾಲದಲ್ಲೂ ಚಿತ್ರೀಕರಣ ನಿಲ್ಲಿಸಲಿಲ್ಲ. 2004ರಲ್ಲಿ ಬರ್ಫಿ ಚಿತ್ರದ ನಿರ್ದೇಶಕ ಅನುರಾಗ್ ಬಸುಗೆ ರಕ್ತಕ್ಯಾನ್ಸರ್ ಬಂತು. ಎರಡೇ ತಿಂಗಳ ಜೀವಾವಧಿ ಎಂದು ಡಾಕ್ಟರರು ಹೇಳಿದರು. ಆದರೆ ಬಸು ಆತ್ಮಶಕ್ತಿ, 3 ವರ್ಷ ಈ ರೋಗದ ವಿರುದ್ಧ ಹೋರಾಡಿ ಉಳಿಯುವಂತೆ ಮಾಡಿತು. ಮುಂದೆ ಈತ ಗ್ಯಾಂಗ್‌ಸ್ಟರ್, ಲೈಫ್ ಇನ್ ಏ ಮೆಟ್ರೋ, ಬರ್ಫಿ ಚಿತ್ರಗಳನ್ನು ನಿರ್ದೇಶಿಸಿದ ಲಿಸಾ ರೇ 2009ರಲ್ಲಿ ರಕ್ತಕ್ಯಾನ್ಸರ್ ಬಳುವಳಿ ಪಡೆದ, ಭಾರತೀಯ ಚಿತ್ರತಾರೆ. ಒಂದು ವರ್ಷ ಮಾಧ್ಯಮಕ್ಕೆ ಸಿಕ್ಕದೇ, ಕತ್ತಲಿನ ಅಜ್ಞಾತವಾಸ ಅನುಭವಿಸಿ, ಸತತ ಔಷದೋಪಚಾರ ಪಡೆದು,. ನಂತರ ರಕ್ತಕ್ಯಾನ್ಸರ್ ಜಯಿಸಿದ ವಿಜೇತೆಯಾಗಿ ಹೊರಬಂದು, ಸಾರ್ವಜನಿಕವಾಗಿ ಘೋಷಿಸಿದಂತೆ, ಆಕೆ ಕಾಂಡಕೋಶ ಬದಲಿ ಚಿಕಿತ್ಸೆಯಿಂದ ಸಂಪೂರ್ಣ ಗುಣಮುಖಳಾದಳಂತೆ.

ಬಾಲಿವುಡ್‌ನ ಖ್ಯಾತ ತಾರೆ ಮುಮತಾಜ್, ದೋರಾಸ್ತೆ, ಚೋರ್ ಮಚಾಯೇಶೋರ್, ಆಗ್, ಖಿಲೌನಾ, ಆದ್ಮೀ ಔರ್ ಇನ್ಸಾನ್, ಉಪಾಸನಾ ಮುಂತಾದ ಚಿತ್ರಗಳಿಂದ ಖ್ಯಾತಿ ಪಡೆದಿದ್ದಳು. ಈಕೆಯ 54ನೇ ವರ್ಷದಲ್ಲಿ ಸ್ತನಕ್ಯಾನ್ಸರ್ ಧುತ್ತೆಂದು ಎರಗಿತು. ಈಕೆ 11 ವರ್ಷ ದೀರ್ಘಕಾಲ ಹೋರಾಡಿ ಉಳಿದಳು. ಈಗ ಕ್ಯಾನ್ಸರ್ ಗೆದ್ದ ಇನ್ನೂ ಕೆಲವು ವಿದೇಶಗಳ ಹೆಸರಾಂತ ವ್ಯಕ್ತಿಗಳನ್ನೂ ಗಮನಿಸೋಣ. 1999ರಿಂದ 2005ರವರೆಗೆ, ಫ್ರಾನ್ಸ್ ದೇಶವನ್ನು ಸೈಕಲ್ ಮೇಲೆ ಸುತ್ತಿ, ಟೂರ್ ಡೆ ಫ್ರಾನ್ಸ್ ಪ್ರಶಸ್ತಿಯನ್ನು ಸತತ 7 ಬಾರಿ ಗೆದ್ದ, ಲ್ಯಾನ್ಸ್ ಆರ್ಮಸ್ಟ್ರಾಂಗ್ ಕ್ಯಾನ್ಸರ್ ಗೆದ್ದವ. ಹಾಲಿವುಡ್ ಚಲನಚಿತ್ರ ಕಲಾವಿದರಾದ ಹ್ಯೂಗ್ ಜಾಕ್‌ಮನ್, ರಾಬರ್ಟ್ ಡಿ ನಿರೋ, ಮೈಕಲ್ ಡೌಗ್ಲಾಸ್, ಡಸ್ಡಿನ್ ಹಾಫ್‌ಮನ್, ಮೈಕಲ್ ಸಿ ಹಾಲ್, ಹಾಲಿವುಡ್ ಕಲಾವಿದೆಯರಾದ ಕೋಬಿ ಸ್ಮುಲ್‌ ಡರ‍್ಸ್, ಮಕ್ಕಿಕನ್ ಕಲಾವಿದೆ ಬಾರ್ಬರಾ ಮೋರಿ, ಅಮೇರಿಕಾದ ಪಾಪ್ ಗಾಯಕಿರಾದ ಶೆರಿಲ್ ಕ್ರೋ, ಕೈಲಿ ಮಿನೋಗ್ ಇವರೆಲ್ಲ ಕ್ಯಾನ್ಸರ್ ಎದುರಿಸಿ ಗೆದ್ದಿದ್ದಾರೆ. ಈಗ ನಾವೆಲ್ಲ ಕ್ಯಾನ್ಸರ್ ಪತ್ತೆ ಹಚ್ಚಿದ ನಂತರ ಜೀವಿಸಬಹುದಾದಾದದ್ದು ನಿಜ ಎಂಬುದನ್ನು, ಉದಾಹರಣೆಗಳನ್ನು ನೀಡಿ ತಿಳಿಸಬೇಕಾಗಿದೆ. 1987ರ ನವೆಂಬರ್ 20ರಂದು, ನ್ಯೂ ಮೆಕ್ಸಿಕೋದ ಆಲ್ಬು ಕ್ಯೂಯರ್ ಕ್ಯೂದಲ್ಲಿ ನಡೆದ, ಕ್ಯಾನ್ಸರ್ ಉಳಿವಿನ ರಾಷ್ಟ್ರೀಯ ಹೊಂದಾಣಿಕೆಯ 2ನೇ ರಾಷ್ಟ್ರೀಯ ಸಮಾವೇಶದಲ್ಲಿ, ಮರ‍್ರಿಲ್ ಹ್ಯಾಸ್ಟಿಂಗ್ಸ್ ಮೊದಲ ಬಾರಿ ಕ್ಯಾನ್ಸರ್‌ನಿಂದ ಉಳಿದವರ ರಾಷ್ಟ್ರೀಯ ದಿನಾಚರಣೆಯನ್ನು ಘೋಷಿಸಿದರು. National Cancer Survivors Day Foundation ವಿವಿಧ ದೇಶಗಳಲ್ಲಿ ಈ ಚಟುವಟಿಕೆಗಳನ್ನು ಹರಡಲು ಪ್ರಯತ್ನಿಸುತ್ತಿದೆ.

ಎನ್.ವ್ಹಿ ರಮೇಶ್, ಮೈಸೂರು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *