(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ವಾರುಣಿ ಬೆಳಿಗ್ಗೆ ಆರು ಗಂಟೆಗೆ ಎಚ್ಚರವಾಯಿತು. ಅವಳು ಮುಖ ತೊಳೆದು ಕೋಣೆಯಿಂದ ಆಚೆ ಬಂದಳು. ರೂಂ ದಾಟಿದೊಡನೆ ದೊಡ್ಡ ಹಾಲ್. ಹಾಲ್‌ನ ಎಡಭಾಗದ ಪ್ಯಾಸೇಜ್‌ನಲ್ಲಿ ಹೋದರೆ ಹೊರಗಡೆ ಹೋಗುವ ಮೆಟ್ಟಿಲುಗಳು ಕಾಣಿಸಿದವು.
ವಾರುಣಿ ಮೆಟ್ಟಿಲಿಳಿದಳು. ಎದುರಿಗೇ ಗೇಟ್. ದಾರಿಯ ಎರಡು ಪಕ್ಕದಲ್ಲೂ ಹಸಿರು ಲಾಸ್. ದೊಡ್ಡ ಕಾಂಪೌಂಡ್. ಕಾಂಪೌಂಡ್ ಬಳಿ ಬೋಗಸ್‌ವಿಲ್ಲಾ ಬಳ್ಳಿಗಳು, ಮಾವಿನಮರ, ಬಾಳೆಗಿಡಗಳು, ಹಿಂಭಾಗದವರೆಗೂ ನಡೆದರೆ ಪುಟ್ಟ ಗುಲಾಬಿ ತೋಟ.
ಅಷ್ಟರಲ್ಲಿ ಸಂಧ್ಯಾ ಅಲ್ಲಿಗೆ ಬಂದರು.
“ಬೆಳಿಗ್ಗೆ ಬೇಗ ಎದ್ದು ಅಭ್ಯಾಸಾನಾ?”
“ಹೌದು ಆಂಟಿ.”
“ಬಾ ಅಲ್ಲಿ ಕೂತ್ಕೋಳೋಣ.”
ಗುಲಾಬಿ ತೋಟದ ಪಕ್ಕದಲ್ಲಿ ಚಿಕ್ಕ ಫೋರ್ಟಿಕೋ ಇತ್ತು. ಅಲ್ಲಿ ಟೇಬಲ್ ನಾಲ್ಕು ಕುರ್ಚಿಗಳಿದ್ದವು.
“ನಿಮ್ಮದು ಮೈಸೂರೇನಾ?”
“ಇಲ್ಲ ಆಂಟಿ. ನಾನು ಬೆಂಗಳೂರಿನವಳು. ನಮ್ಮ ತಂದೆ-ತಾಯಿ, ಚಿಕ್ಕಪ್ಪಂದಿರು, ಅವರ ಫ್ಯಾಮಿಲಿ, ಅತ್ತೆ ಎಲ್ಲಾ ಬೆಂಗಳೂರಿನಲ್ಲಿದ್ದಾರೆ. ನಾನು ಎಂ.ಎ. ಮಾಡಲು ಮೈಸೂರಿಗೆ ಬರಬೇಕಾಯಿತು.”
ಅಷ್ಟರಲ್ಲಿ ಕಾಫಿ ಬಂತು. ಅವರು ಮೈಸೂರಿನ ಬಗ್ಗೆ ಮಾತನಾಡುತ್ತಿರುವಾಗಲೇ ರಾಗಿಣಿ, ಚಂದ್ರಾ ಆಂಟಿ ಬಂದರು.
“ಕಾಫಿ ಕೊಡಲಾ?”
“ಬೇಡ. ನಮ್ಮದು ಕಾಫಿ ಆಯ್ತು. ನೀನು ಪ್ರೋಗ್ರಾಂ ಬಗ್ಗೆ ಹೇಳು. ಎಷ್ಟು ಹೊತ್ತಿಗೆ ರೆಡಿಯಾಗಬೇಕು.”
“ಎಂಟೂವರೆಗೆ ನಮ್ಮನೆಯಲ್ಲಿ ತಿಂಡಿ. ನೀವು ರೆಡಿಯಾಗಿ ಬನ್ನಿ. ಅಷ್ಟು ಹೊತ್ತಿಗೆ ನನ್ನ ಪಿ.ಎ. ರಂಜನಿ ಬಂದಿರ‍್ತಾಳೆ. ಅಲ್ಲಿ ತೀರ್ಮಾನಿಸೋಣ.”
“ಸರಿ ಅಕ್ಕ.”
“ನಿಮ್ಮ ಡ್ರೈವರ್‌ಗೆ ಹೇಳಿದೆಯಾ?”
“ಹೇಳಾಯ್ತು. ಅವನು ವಾಪಸ್ಸು ಹೊರಟ.”
ಎಲ್ಲರೂ ತಮ್ಮ ಕೋಣೆಗಳಿಗೆ ಹಿಂದಿರುಗಿ ರೆಡಿಯಾದರು. ಚಂದ್ರಾ ಆಂಟಿ ಚೂಡಿದಾರ್ ಧರಿಸಿದರು. ವಾರುಣಿ ನಸು ಹಳದಿ ಬಣ್ಣದ ಪ್ರಿಂಟೆಡ್ ಚೂಡಿದಾರ್ ಧರಿಸಿದಳು. ರಾಗಿಣಿ ಪಿಂಕ್ ಕಲರ್ ಚೂರಿದಾರ್ ಧರಿಸಿ ಮ್ಯಾಚಿಂಗ್ ಸೆಟ್ ಹಾಕಿಕೊಂಡಳು.
“ರಾಗಿಣಿ ನಿನಗೆ ಪಿಂಕ್ ತುಂಬಾ ಚೆನ್ನಾಗಿ ಒಪ್ಪುತ್ತದೆ.”
“ಥ್ಯಾಂಕ್ಸ್ ಆಂಟಿ.”
ಎಲ್ಲರೂ ಡೈನಿಂಗ್ ಹಾಲ್‌ಗೆ ಬಂದರು. ಆ ವೇಳೆಗೆ ಸಂಧ್ಯಾ, ಶಾರದಾಳನ್ನು ಪಕ್ಕ ಕೂಡಿಸಿಕೊಂಡು ತಿಂಡಿ ತಿನ್ನಿಸುತ್ತಿದ್ದರು. ರಂಜನಿಯ ಪರಿಚಯವಾಯಿತು. 33-35ರ ಅಂಚಿನಲ್ಲಿದ್ದ ರಂಜನಿಭಟ್ ಕಪ್ಪಾಗಿದ್ದರೂ ಖಳೆಯಾಗಿದ್ದಳು. ಆಕಾಶನೀಲಿಯ ಪ್ರಿಂಟ್ಸ್ ಇದ್ದ ಕಾಟನ್ ಸೀರೆ ಅವಳಿಗೆ ಒಪ್ಪಿತ್ತು.
ಹತ್ತು ನಿಮಿಷಗಳಲ್ಲಿ ಪ್ರತಾಪ್‌ರೆಡ್ಡಿ ಅವನ ಮಗ ಬಂದರು. ಸಂಪೂರ್ಣ ಬಿಳಿ ಉಡುಪಿನಲ್ಲಿದ್ದ ಪ್ರತಾಪ್‌ರೆಡ್ಡಿ ಈ ವಯಸ್ಸಿನಲ್ಲಿಯೂ ಗಮನ ಸೆಳೆಯುವಂತಿದ್ದರು. ಹಿಂದಕ್ಕೆ ಬಾಚಿದ್ದ ಕ್ರಾಫ್ ಚಿನ್ನದ ಕಟ್ಟಿನ ಕನ್ನಡಕ, ಹಣೆಯಲ್ಲಿದ್ದ ಕುಂಕುಮ ಅವರಿಗೆ ಅಪೂರ್ವ ಶೋಭೆ ನೀಡಿತ್ತು.
ಬಾಲಾಜಿ ಸುಮಾರು 25ರ ತರುಣ. ಎಲ್.ಎಲ್.ಎಂ. ಮುಗಿಸಿ, ತಂದೆಯ ಜೊತೆ ಕೋರ್ಟ್ಗೆ ಹೋಗುತ್ತಿದ್ದ. ಅವನು ಬಿಳಿಯ ಪೈಜಾಮ ಜುಬ್ಬ ಧರಿಸಿದ್ದ. ಅವನ ಗುಂಗುರು ಕೂದಲು, ತೀಕ್ಷ್ಣವಾದ ಕಣ್ಣುಗಳು, ಮುಗುಳ್ನಗೆ ಬೀರುತ್ತಿದ್ದ ಮುಖ ಅವನ ಅಂದ ಹೆಚ್ಚಿಸಿದ್ದವು. ಒಳಗೆ ಬಂದವನೆ ಚಂದ್ರಾ ಆಂಟಿಯ ಕಾಲಿಗೆ ನಮಸ್ಕರಿಸಿದ.
“ಹೇಗಿದ್ದೀರಾ ಆಂಟಿ?”
“ಐಯಾಮ್ ಫೈನ್. ನೀನು ಹೇಗಿದ್ದೀಯಾ?”
“ನೀವೇ ನೋಡ್ತಿದ್ದೀರಲ್ಲಾ?” ಎನ್ನುತ್ತಾ ಮುಗುಳ್ನಕ್ಕ ಬಾಲಾಜಿ.
“ರಾಜಕುಮಾರನ ತರಹ ಇದ್ದೀಯ. ನನ್ನದೇ ದೃಷ್ಟಿತಾಕೀತು. ಅವನ ಮುಖವನ್ನು ಎರಡು ಕೈಗಳಿಂದಲೂ ಸವರಿ ಚಂದ್ರಾ ನಟ್ಟಿಗೆ ಮುರಿದರು.
“ಚಂದ್ರಾ ಮೊದಲು ಅವರಿಬ್ಬರನ್ನು ಪರಿಚಯಿಸು…….”
“ಬಾಲಾಜಿ ಇವರಿಬ್ಬರೂ ನನ್ನ ಫ್ರೆಂಡ್ಸ್ ರಾಗಿಣಿ, ವಾರುಣಿ ಇಂಗ್ಲೀಷ್ ಎಂ.ಎ. ಮಾಡ್ತಿದ್ದಾರೆ.”
ಅವನು ‘ಹಾಯ್’ ಎಂದ. ಇವರಿಬ್ಬರೂ ‘ಹಾಯ್’ ಎಂದು ಮುಗುಳ್ನಕ್ಕರು.
ಅವನ ದೃಷ್ಟಿ ರಾಗಿಣಿಯ ಮೇಲೆ ಹೆಚ್ಚು ಹೊತ್ತು ನಿಂತಿದ್ದನ್ನು ಚಂದ್ರಾವತಿಯ ಸೂಕ್ಷ್ಮ ಕಣ್ಣುಗಳು ಗಮನಿಸಿದವು. ವಾರುಣಿ ಚಂದ್ರಾ ಆಂಟಿಯನ್ನು ನೋಡಿ ನಕ್ಕಳು. ಬಾಲಾಜಿ ರಂಜನಿಯನ್ನು ಕರೆದುದನ್ನು ರಾಗಿಣಿ ಗಮನಿಸಿದಳು.
ರಂಜನಿ ವಾಪಸ್ಸು ಬಂದು ತಿಂಡಿ ಮುಗಿಯುತ್ತಿದ್ದಂತೆ ಹೇಳಿದಳು. “ಮ್ಯಾಮ್ ನನ್ನ ಬದಲು ಬಾಲಾಜಿ ಸರ್. ಹೋಗ್ತಾರಂತೆ. ಡ್ರೈವರ್ ಬೇಡವಂತೆ.”
“ಹೌದೇನೋ ಬಾಲಾಜಿ?”
“ಹೌದು ಅಮ್ಮ. ಚಿಕ್ಕಮ್ಮ ಹೈದರಾಬಾದ್‌ಗೆ ಬರುವುದೇ ಅಪರೂಪ. ಅವರನ್ನು ನಾನೇ ರ‍್ಕೊಂಡು ಹೋಗ್ತೀನಿ. ಚಿಕ್ಕಮ್ಮ ಎನಿ ಅಬ್ಜೆಕ್ಷನ್?”
“ಖಂಡಿತ ಇಲ್ಲಪ್ಪ. ನೀನು ರ‍್ತೀಯಾಂದ್ರೆ ಖುಷೀನೇ!”
“ಮೊದಲು ಬರ‍್ಲಾಮಂದಿರ್‌ಗೆ ಹೋಗೋಣ. ನಂತರ ರೆಸ್ಟ್ ಮಾಡಿ ಪ್ಲಾನಿಟೋರಿಯಂಗೆ ಹೋಗಬಹುದು. ರಾತ್ರಿ ಪ್ರೋಗ್ರಾಂ ಬಗ್ಗೆ ಆ ಮೇಲೆ ಯೋಚಿಸೋಣ.”
ರಾಗಿಣಿ, ವಾರುಣಿ ಕಿಟಕಿಗಳಿಂದ ಇಣುಕಿ ಕಣ್ಣಿಗೆ ಕಂಡ ನೋಟಗಳನ್ನು ಕಣ್ತುಂಬಿಕೊಂಡರು. ಬಾಲಾಜಿ ಕನ್ನಡಿ ಅಡ್ಜಸ್ಟ್ ಮಾಡಿ ರಾಗಿಣಿಯನ್ನು ಗಮನಿಸತೊಡಗಿದ.
ಬಿರ್ಲಾ ಮಂದಿರ್ ಹತ್ತಿರ ವ್ಯಾನ್ ಪಾರ್ಕ್ ಮಾಡಿ ಹೇಳಿದ. “ಕೊಂಚ ದೂರ ನಡೆಯಲೇ ಬೇಕು. ಇಳಿಯಿರಿ.”
ಎಲ್ಲರೂ ಇಳಿದರು. ರಾಗಿಣಿ ದೂರದಲ್ಲಿ ಕಾಣುತ್ತಿದ್ದ ಬಿರ್ಲಾ ಮಂದಿರದತ್ತ ನೋಟ ಹರಿಸಿ ಹೇಳಿದಳು. “ಓ ಬ್ಯೂಟಿಫುಲ್. ನಮಗೆ ಬಿರ್ಲಾ ಮಂದಿರ ತೋರಿಸಲು ಗೈಡ್‌ಗಳು ಸಿಗುತ್ತಾರಾ?”
“ಸಧ್ಯಕ್ಕೆ ನಾನೇ ನಿಮ್ಮ ಗೈಡ್ ಬನ್ನಿ.”
“ನಿಮಗೆ ಈ ಮಂದಿರದ ಬಗ್ಗೆ ಗೊತ್ತಿದೆಯಾ?”
“ಹೌದು. ಈ ಮಂದಿರವನ್ನು 13 ಎಕರೆ ಜಾಗದಲ್ಲಿ ಕಟ್ಟಿದ್ದಾರೆ. ಒಂದು ಗುಡ್ಡದ ಮೇಲೆ ನಿರ್ಮಿಸಿರೋದ್ರಿಂದ ದೇವಾಲಯ ಎತ್ತರದಲ್ಲಿದೆ. ಇದನ್ನು ಬಿರ್ಲಾ ಫೌಂಡೇಶನ್ ನಿರ್ಮಿಸಿದೆ.”
“ಈ ಮಂದಿರದಲ್ಲಿ ಮುಖ್ಯವಾಗಿ ಯಾವ ದೇವರಿರೋದು?”
“ವೆಂಕಟೇಶ್ವರ ಆದರೆ ಶಿವ, ಗಣೇಶ, ಬ್ರಹ್ಮ, ಸರಸ್ವತಿ ಶಕ್ತಿ ಲಕ್ಷ್ಮಿ ಮುಂತಾದವರಿಗಾಗಿ ಪ್ರತ್ಯೇಕ ದೇವಾಲಯಗಳನ್ನು ಕಟ್ಟಿದ್ದಾರೆ. ಗೋಡೆಯ ಮೇಲೆ ಸೂಕ್ತಿಗಳನ್ನು ಬರೆದಿದ್ದಾರೆ. ರೈಲು ನಿಲ್ದಾಣದಿಂದಲೂ ಬರಬಹುದು. ಈ ಕಡೆಗೆ ತುಂಬಾ ಬಸ್‌ಗಳೂ ಬರುತ್ತವೆ. ನಮ್ಮ ದೇಶದ ಪ್ರಸಿದ್ಧ ನಾಯಕರುಗಳು ಈ ದೇವಾಲಯಕ್ಕೆ ಭೇಟಿ ಕೊಟ್ಟಿದ್ದಾರೆ.”
“ಹೌದಾ?” ಅವಳು ಕಣ್ಣರಳಿಸಿದಳು.
ಬಾಲಾಜಿ, ರಾಗಿಣಿ ಮಾತನಾಡುತ್ತಾ ಮುಂದೆ ಸಾಗಿದರು. ಶಾರದಾಳನ್ನು ಚಂದ್ರಾ ಆಂಟಿ ಕರೆತರಲು ಸಹಾಯಮಾಡುತ್ತಾ ವಾರುಣಿ ಹಿಂದೆಯೇ ಉಳಿದಳು.
ಸಂಪೂರ್ಣ ಮಂದಿರವನ್ನು ನೋಡುವ ಹೊತ್ತಿಗೆ ಎಲ್ಲರಿಗೂ ಕಾಲು ನೋವು ಶುರುವಾಗಿತ್ತು.
“ಏನೇ ಪಿಂಕುಪಿಂಕಾಗಿದ್ದೀಯ?” ರಾಗಿಣಿಯನ್ನು ವರು ಛೇಡಿಸಿದಳು.
“ಹೋಗೆ……..”
“ಇನ್ನು ನಾನು ಹೋಗೋದೆ, ಮನೆಗೆ ಹೋದ ತಕ್ಷಣ ಆಂಟಿ ಕೈಲಿ ದೃಷ್ಟಿ ತೆಗೆಸಿಕೋ” ಅವಳು ಮಾತನಾಡದೆ ನಕ್ಕಳು.
“ಈಗ ಊಟಕ್ಕೆ ಹೋಗೋಣ” ಎನ್ನುತ್ತಾ ಬಾಲಾಜಿ ಒಂದು ಒಳ್ಳೆಯ ಹೋಟೆಲ್ ಮುಂದೆ ನಿಲ್ಲಿಸಿದ. ನಂತರ ಅಲ್ಲಿಯ ಕೆಲಸದವನಿಗೆ ತೆಲುಗಿನಲ್ಲಿ ಏನೋ ಹೇಳಿದ. ಅವರು ಡೈನಿಂಗ್ ಹಾಲ್‌ಗೆ ಹತ್ತಿರವಿದ್ದ ದೊಡ್ಡ ರೂಮ್‌ನ ಬಾಗಿಲು ತೆರೆದು ಹೇಳಿದರು. “ಫ್ರೆಷ್ ಆಗಿ ಬನ್ನಿ.”
ಅವರು ಡೈನಿಂಗ್ ಹಾಲ್‌ಗೆ ಬಂದಾಗ ಬಾಲಾಜಿ ಅವರಿಗಾಗಿ ಕಾಯುತ್ತಿದ್ದ.
“ಚಿಕ್ಕಮ್ಮ ಇದು ನಮ್ಮದೇ ಹೋಟೆಲ್ ಊಟ ಆದ ಮೇಲೆ ರೆಸ್ಟ್ ಮಾಡಿ. ಫ್ರೆಷಪ್ ಆಗಿ ಪ್ಲಾನಟೋರಿಯಂಗೆ ಹೋಗಿ, ನಂತರ ಮನೆಗೆ ಹೋಗೋಣ. ನಾಳೆ ಸಾಲಾರ್ ಜಂಗ್ ಮ್ಯೂಸಿಯಂ, ಹುಸೇನ್ ಸಾಗರ್ ಕವರ್ ಮಾಡೋಣ. ಗೋಲ್ಕೊಂಡಾ ಫೋರ್ಟ್ಗೆ ನಾಡಿದ್ದು ಹೋಗಬಹುದು.”
“ನಾವು ಗುರುವಾರ ಹೊರಡಬೇಕು. ಗುರುವಾರ ಪೂರ್ತಿ ಶಾಪಿಂಗ್ ಮಾಡಬೇಕು. ಸಾಯಂಕಾಲ ಊರಿಗೆ ಹೊರಡ್ತೇವೆ.”
“ಚಿಕ್ಕಮ್ಮ ಭಾನುವಾರದವರೆಗೂ ಇರಿ.”
“ಆಗಲ್ಲ ಬಾಲಾಜಿ. ನಾವು ಗುರುವಾರ ಹೊರಡಲೇಬೇಕು. ಈ ಸಲ ಗೋಲ್ಕೊಂಡ ಫೋರ್ಟ್ ಬೇಡ. ಇನ್ನೊಂದು ಸಲ ಬರ‍್ತೀವಿ…….”
ಅವನ ಮುಖ ಪೆಚ್ಚಾಯಿತು.
ಅವರು ರೆಸ್ಟ್ ಮಾಡಿ ಪ್ಲಾನಟೋರಿಯಂ ನೋಡಿದರು.
“ಬೆಂಗಳೂರು, ಚೆನ್ನೈನಲ್ಲೂ ನೀವು ನೋಡಬಹುದು” ಎಂದ ಬಾಲಾಜಿ.
ರೂಂ ಸೇರಿ ಮಂಚದ ಮೇಲೆ ಉರುಳಿದರು. ಪಕ್ಕ ಮಲಗಿದ ರಾಗಿಣಿ ಕೇಳಿದಳು. “ಸೋಮವಾರದಿಂದ ಕಾಲೇಜ್‌ಗೆ ಹೋದರಾಗಲ್ವಾ?”
“ಹೈದರಾಬಾದ್ ಅಷ್ಟೊಂದು ಇಷ್ಟವಾಗಿದೆಯಾ?”
“ಹಾಗಲ್ಲ ಕಣೆ……”
“ಬೇಕಾದರೆ ನೀನಿರು. ಬಾಲಾಜಿ ಕರ‍್ಕೊಂಡು ಬಂದು ಬಿಡ್ತಾರೆ.”
“ಅವರನ್ನು ನಂಬಿದರೆ ದೇವರೇಗತಿ……..”
“ಯಾಕಮ್ಮ ಹಾಗಂತೀಯ? ಪರ‍್ಮನೆಂಟಾಗಿ ಇಲ್ಲೇ ಇರುವ ಯೋಚನೆ ಇದೆಯಾ ಹೇಗೆ?”
“ಏನೇನೋ ಹೇಳಬೇಡ ವರು. ಆಕಾಶಕ್ಕೆ ಏಣಿ ಹಾಕುವ ಸ್ವಭಾವ ನನ್ನದಲ್ಲ……”
“ನೀನು ಏಣಿ ಹಾಕದೆ ಆಕಾಶ ತಾನಾಗಿ ಬಳಿಗೆ ಬರಬಹುದಲ್ವಾ?”
ರಾಗಿಣಿ ಅವಳನ್ನಪ್ಪಿ ಬಿಕ್ಕಿದಳು.
“ಯಾಕೆ ಅಳ್ತಿದ್ದೀಯ?”
“ನನಗೆ ಭಯವಾಗ್ತಿದೆ…….”
“ಭಯ ಯಾಕೆ?”
“ಬಾಲಾಜಿ ನನಗೆ ಪ್ರಪೋಸ್ ಮಾಡಬಹುದು. ಏನು ಉತ್ತರ ಕೊಡಲೇ ನಮ್ಮನೆ ಕಥೆ ಹೇಳಕ್ಕಾಗತ್ತಾ?”
“ಅವರು ಪ್ರಪೋಸ್ ಮಾಡ್ತಾರೇಂತ ನಿನಗೆ ಯಾಕೆ ಅನ್ನಿಸಿತು?”
“ಅವರನ್ನು ನೋಡಿದ ತಕ್ಷಣ ನನ್ನ ಮನಸ್ಸು ಹಾಡತೊಡಗಿದೆ. ನನ್ನ ನಿಜವಾದ ಪ್ರೀತಿ ಇವನೇ ಅನ್ನಿಸ್ತಿದೆ. ಇವನಿಗಾಗಿ ಬದುಕಬೇಕು. ಇವನನ್ನು ಮೆಚ್ಚಿಸಬೇಕು ಅನ್ನಿಸ್ತಿದೆ.”
“ಹೌದೇನೇ?”
“ನಾನು ಏನೇ ಮಾಡಲಿ?”
“ಇವರ ಮನೆಯಲ್ಲಿ ಅಂತರ್ಜಾತಿ ವಿವಾಹ ಹೊಸದಲ್ಲ. ಬಾಲಾಜಿ ಪ್ರಪೋಸ್ ಮಾಡಲಿ ನೋಡೋಣ.”
“ನೀನು ಹೆಲ್ಪ್ ಮಾಡ್ತೀಯಾ?”
“ಖಂಡಿತಾ…….ಚಂದ್ರಾ ಆಂಟಿ ಖುಷಿಯಿಂದ ಸಹಾಯ ಮಾಡ್ತಾರೆ”
ಈ ಕಾದಂಬರಿಯ ಹಿಂದಿನ ಪುಟ ಇಲ್ಲಿದೆ : https://surahonne.com/?p=43888
(ಮುಂದುವರಿಯುವುದು)

–ಸಿ.ಎನ್. ಮುಕ್ತಾ, ಮೈಸೂರು




