ಈ ಮಹಾತಾಯಿಯುದಯವೇ ಅಗ್ನಿಯಲಿ
ಬೆಂದಳು ಬದುಕಿನ ಉರಿವ ಕೆನ್ನಾಲಗೆಯಲಿ
ಸಾದಾ ಕಪ್ಪಿನ ಕಡುಸುಂದರಿ! ಕೃಷ್ಣೆ!!
ಗುಣದಲಿ ಸುಡುವ ಬೆಂಕಿಯೇ…..
ಪಾಲಿಗೆ ಬಂದ ಪಾಡುಗಳನೆಲ್ಲ ದಹಿಸಿ
ಜಯಿಸಿಕೊಂಡವಳು!
ಅನಲನೊಡಲ ಕುವರಿ! ನೋವನೇ ಆಲಿಂಗಿಸಿಕೊಂಡವಳು!
ಯಾರದೋ ಸೇಡಿನ ಜ್ವಾಲೆಗುತ್ತರಿಸಲು ಮಗಳಾದಳು
ಇನ್ನಾರೋ ಹೆಣೆದ ಸಂಕಟಗಳ ಸರಮಾಲೆಗೆ ಕೊರಳಾದಳು
ತಡೆಯದೇ ಮುಕ್ಕಳಿಸಿದ ನಗೆಗೆ ಮಾನವನೇ ಪಣವಿಟ್ಟಳು
ಮಕ್ಕಳ ಕಳೇಬರಗಳೆದುರು ಏಕಾಕಿಯಾಗಿ ಗೋಳಿಟ್ಟಳು
ಹತ್ತಿರ ಸುಳಿಯದ ತಂದೆಯರ ಕಂಡು ನಕ್ಕಳು!
ಪಂಚಪಾಂಡವರ ಮಹಾಸತಿ….. ಮನದನ್ನೆ!
ತಾನೇ ಹೋರಾಡಿ ವಸ್ತ್ರವುಳಿಸಿಕೊಂಡ ಮಾನಧನೆ!
ಜೀತದಾಳು ಸೈರಂಧ್ರಿ, ರಾಣಿಯೋಪಾದಿಯಲಿ
ಕಾಮುಕನ ಬಲಿ ಪಡೆದಳು
ದಿಕ್ಕೆಟ್ಟ ಒಂಟಿ ಹೆಣ್ಣಾದರೂ ತನ್ನ ತಾನೇ ಕಾದುಕೊಂಡಳು
ಇವಳು ಪಂಚಮಿ!!!
ಮನವಿರದಿದ್ದರೇನು? ಮೈ ಕೇಳಲು ಬರವೇ ಗಂಡಂದಿರಿಗೆ???
ಸವತಿಯ ತರುವುದೂ ಅತಿ ಸುಲಭ ಈ ರಸಿಕರಿಗೆ!!
ಮನದ ಬೇಗುದಿಗೆ, ತಲ್ಲಣಗಳಿಗೆ ಸಾಂತ್ವನವೆಲ್ಲಿದೆ?
ಇದೆಯೇ ಅಕ್ಕರೆ ಇವಳೆಡೆಗಿವರಿಗೆ?
ಇಟ್ಟಾಡಿಸಿದವರಿಗೆ ಅಟ್ಟಾಡಿಸಿ,
ಅವಮಾನಿಸಿದವರಿಗೆ ಸಮಯ ಸಾಧಿಸಿ
ಬರೆಯಿಡುವುದು ಸಾಮಾನ್ಯವೇ ಹೆಣ್ಣೊಬ್ಬಳು?
ಸುಖವೆಲ್ಲಿಯದು ಸಖರಿದ್ದರೂ?!
ಸುಭಗ ಸೌಂದರ್ಯದೊಳಗುದಿಯಲಿ
ತೂರಿಬಿಟ್ಟ ದಾಳವಾದಳು
ತನ್ನ ರಮಣರಲ್ಲಿರದಿಹ ಗುಣವಾವುದೋ
ರಾಧೇಯನಿಗಿತ್ತೋ…..ಒಮ್ಮೆ ಮರುಳಾದಳು!
ಒಮ್ಮೊಮ್ಮೆ ಎದೆ ಕುದಿಯುವುದು ಪಾಂಚಾಲಿಯ ನೆನೆದು
ಅವಳ ಏಕಾಂಗಿತನಕೆ ಮನ ಮರುಗುವುದು
ಕಣ್ಣೀರಾಗುವುದು ಹೃದಯ, ಪಾಳುಬಿದ್ದ ಅವಳ ಬಾಳಿಗಾಗಿ
ಸಮಾಧಾನವೊಂದೇ ಪಂಚಪತಿವ್ರತೆಯರಲಿ ಅವಳೊಬ್ಬಳಾದುದಕಾಗಿ!

–ಬಿ.ಕೆ.ಮೀನಾಕ್ಷಿ, ಮೈಸೂರು




