(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ದೇವಕಿಯೋ ಅಕ್ಕ, ಅಕ್ಕನ ಮಗಳನ್ನು ತನ್ನ ಪರಿಚಯದ ಡಾ||ನಿರ್ಮಲಾ ಬಳಿ ಕರೆದೊಯ್ದಳು. ಅವರೆದುರಿಗೆ ಕೂಡ ಸುಮ ‘ತುಂಬಾ ಸುಸ್ತಾಗುತ್ತದೆ’ ಎಂದಳು. ನಿರ್ಮಲಾ ಎಲ್ಲಾ ಟೆಸ್ಟ್ ಗಳನ್ನೂ ಮಾಡಿಸಿದರು.
“ಜನರಲ್ ಹೆಲ್ತ್ ಚೆನ್ನಾಗಿದೆ. ಆದರೆ ಅತಿಯಾದ ತೂಕ ಸೋಮಾರಿತನದಿಂದ ನಿಮ್ಮ ಮಗಳು ಹೀಗಾಗಿದ್ದಾಳೆ. ಪ್ರತಿದಿನ ಬೆಳಿಗ್ಗೆ 3 ಕಿ.ಮೀ. ವಾಕ್ ಮಾಡಬೇಕು. ತುಪ್ಪ, ಹಾಲು, ಬೆಣ್ಣೆ ಕರಿದ ತಿಂಡಿ, ಸ್ವೀಟ್ಸ್ ಮುಟ್ಟಬಾರದು. ಮೊಸರು ಬದಲು ಮಜ್ಜಿಗೆ ಉಪಯೋಗಿಸಬೇಕು. ಮನೆಕೆಲಸ ಮಾಡಬೇಕು. ವಾಕಿಂಗ್ ಮಾಡಬೇಕು. ಸಾಧ್ಯವಾದರೆ ಯೋಗಕ್ಲಾಸ್‌ಗೆ ಸೇರಿಸಿ.”
“ಮತ್ತೇನಾದರೂ ತೊಂದರೆ ಇದೆಯಾ? ಡಯಟ್ ಮಾಡಿದರಾಗತ್ತಾ?”
“ಡಯಟ್ ಸರಿಯಾದ ಕ್ರಮದಲ್ಲಿ ಮಾಡಬೇಕು. ಇಲ್ಲದಿದ್ದರೆ ಏನಾದ್ರೂ ಅಪಾಯ ಆಗಬಹುದು. ನೀವು ಅತಿ ಮುದ್ದು ಮಾಡಿ ಅವಳನ್ನು ಸೋಮಾರಿ ಮಾಡಬೇಡಿ. ನಿಮ್ಮ ಅತಿ ಮುದ್ದು ಅವಳ ಲೈಫ್‌ಗೆ ಮಾರಕವಾಗಬಹುದು.”
ಅವರು ಏನೂ ಮೆಡಿಸನ್ ಕೊಡಲಿಲ್ಲ. ದುಡ್ಡು ತೆಗೆದುಕೊಳ್ಳಲಿಲ್ಲ. ಮನೆಗೆ ಬರುವಾಗ ಪಾರ್ವತಿ ತಂಗಿಯನ್ನು ಕೇಳಿದರು. “ಏನೇ ಅವರು ಮಾರಕಗೀರಕಾಂತ ಏನೇನೋ ಹೇಳಿದರು?”
“ಹುಡುಗಿ ತುಂಬಾ ದಪ್ಪ ಇದ್ರೆ ಹುಡುಗರು ಒಪ್ಪಲ್ಲ. ಸುಮ ಓದಿರುವ ಓದಿಗೆ ಕೆಲಸ ಸಿಗೋದು ಕಷ್ಟ. ನಿನ್ನ ಗಂಡು ಮಕ್ಕಳಿಗೆ ಒಳ್ಳೆಯ ಕೆಲಸವಿದ್ದಿದ್ರೆ ಸುಮಾನ್ನ ಅವರಿಗೆ ಒಪ್ಪಿಸಿ ‘ನಿಮ್ಮ ತಂಗಿಯ ಜವಾಬ್ದಾರಿ ನಿಮ್ಮದು’ ಅನ್ನಬಹುದಿತ್ತು. ನೀನಿರುವವರೆಗೂ ಚಿಂತೆಯಿಲ್ಲ. ಆಮೇಲೆ ಅವಳನ್ನು ಯಾರು ನೋಡಿಕೊಳ್ತಾರೆ?”
“ಏನೇ ಹೀಗಂತೀಯಾ?”
“ಮೊದಲು ಸುಮೀನ್ನ ವಾಕಿಂಗ್ ಕಳಿಸಿ ಸಣ್ಣ ಮಾಡು. ಮನೆಯಲ್ಲೂ ಕೆಲಸ ಮಾಡಿಸು. ನಂತರ ಹುಡುಗನ್ನ ಹುಡುಕಿ ಮದುವೆ ಮುಗಿಸೋಣ. ಇಂಜಿನಿಯರ್, ಡಾಕ್ಟರ್ ಅಳಿಯನ ಕನಸು ಕಾಣಬೇಡ.”
“ಹಾಗಂತೀಯಾ?”
“ನಿನ್ನ ದೊಡ್ಡ ಮಗ ಯಾವುದೋ ಹುಡುಗಿ ಜೊತೆ ತಿರುಗುತ್ತಿದ್ದಾನಂತೆ. ಮೊದಲು ಅವನ ಮದುವೆ ಮಾಡು. ಜಗಳವಾಡಿ ಅವನನ್ನು ದೂರ ಮಾಡಿಕೋ ಬೇಡ.”
“ಸರಿಯಮ್ಮ” ಎಂದರು ಪಾರ್ವತಿ ಸೋತ ಧ್ವನಿಯಲ್ಲಿ.”
ಮನೆ ಬಿಡಬೇಕಾಗಬಹುದು ಎನ್ನುವ ಭಯ, ಆತಂಕ ದೇವಕಿ, ಜಾನಕಿಯನ್ನು ಕೆಲಸ ಮಾಡುವಂತೆ ಮಾಡಿತ್ತು. ಬೇರೆ ಮನೆಗೆ ಹೋಗಿ ಅನೇಕ ಸಮಸ್ಯೆಗಳು ಎದುರಾಗುತ್ತವೆಂದು ಅವರಿಗೆ ಗೊತ್ತಿತ್ತು. ತನ್ನ ಕೂಗಾಟ ಪರಿಣಾಮ ಬೀರಿರುವುದು ವರೂಗೆ ಖುಷಿ ತಂದಿತ್ತು.
ಒಂದು ಶನಿವಾರ ಚಂದ್ರ ಆಂಟಿ ಫೋನ್ ಮಾಡಿದರು.
“ಹಲೋ ಆಂಟಿ?”
“ಹೇಗಿದ್ದೀಯಾ? ನಾವೆಲ್ಲಾ ನೆನಪಿದ್ದೇವಾ?”
“ಏನಾಂಟಿ ಹೀಗೆ ಕೇಳ್ತಿದ್ದೀರಾ?”
“ತಮಾಷೆ ಮಾಡ್ದೆ. ನಾಡಿದ್ದು ಟೂರ್ ಹೊರಡಬೇಕು. ಸಾಧ್ಯವಾದರೆ ನಾಳೆ ಬೆಳಿಗ್ಗೆ ಬಂದುಬಿಡು”
“ಯಾವ ಊರಿಗೇಂತ ಕೇಳಬಹುದಾ?”
“ಹೈದರಾಬಾದ್. ಉಳಿದ ವಿವರಗಳನ್ನು ನೀನು ಬಂದ ಮೇಲೆ ಹೇಳ್ತೀನಿ. ರಾಗಿಣಿ ನಾಳೆ ಮಧ್ಯಾಹ್ನ ಬರ‍್ತಾಳಂತೆ.”
“ನಾನೂ ತಿಂಡಿ ತಿಂದುಕೊಂಡು ಹೊರಡ್ತೀನಿ.”
ವರು ತಾಯಿಗೆ ವಿಷಯ ತಿಳಿಸಿದಳು.
“ನೀನು ಕಾಲೇಜ್ ನೆಪ ಮಾಡಿಕೊಂಡು ಹೊರಡು. ಈ ವಿಚಾರ ಇಲ್ಲಿ ಯಾರಿಗೂ ಹೇಳಬೇಡ. ನಾನು ನಿಧಾನವಾಗಿ ಶೋಭಾಗೆ ಹೇಳ್ತೀನಿ.”
“ಆಗಲೀಮ್ಮ.”
ಶ್ರೀನಿವಾಸರಾವ್‌ಗೂ ವಿಷಯ ತಿಳಿಯಿತು.
ಸಾಯಂಕಾಲ ಆಂಜನೇಯನ ದೇವಸ್ಥಾನಕ್ಕೆ ಹೊರಟವರು ಕರೆದರು.
“ಬರ‍್ತೀಯಮ್ಮ ದೇವಸ್ಥಾನಕ್ಕೆ?”
“ಬರ‍್ತೀನಪ್ಪ. ಹಾಗೆ ತರಕಾರಿ ತರೋಣ.”
ಅಪ್ಪ, ಮಗಳು ಹೊರಟರು. ದೇವರಿಗೆ ನಮಸ್ಕಾರ ಮಾಡಿ ಕಟ್ಟೆಯ ಮೇಲೆ ಕುಳಿತಾಗ ರಾವ್ 5,000 ರೂ. ಜೇಬಿನಿಂದ ತೆಗೆದು ಹೇಳಿದರು.
“ಇದನ್ನು ಇಟ್ಟುಕೋ. ಟೂರ್‌ಗೆ ಬೇಕಾಗತ್ತೆ……..”
“ನನ್ನ ಹತ್ರ ಇದೆಯಪ್ಪ. ಅದೂ ಅಲ್ಲದೆ ಆಂಟಿ ನಮ್ಮ ಕೈಯ್ಯಲ್ಲಿ ಏನೂ ಖರ್ಚು ಮಾಡಿಸಲ್ಲ.”
“ಅವರು 10 ಸಲ ಕೊಟ್ಟಾಗ ನೀನು ಒಂದು ಸಲವಾದರೂ ಊಟ ತಿಂಡಿಗೆ ಕೊಡದಿದ್ದರೆ ಚೆನ್ನಾಗಿರುತ್ತದೆಯೇನಮ್ಮಾ?”
“ಹಾಗೆಂದು ನೀನು………”
“ನಿಮ್ಮಮ್ಮನ ಹೆಸರಿನಲ್ಲಿ ಒಂದು ಎಲ್.ಐ.ಸಿ. ಪಾಲಿಸಿ ಇತ್ತು. ಅದು ಕಳೆದ ತಿಂಗಳು ಮೆಚ್ಯೂರ್ ಆಗಿ ಒಂದು ಲಕ್ಷ ಬಂತು. ನಿಮ್ಮಮ್ಮ ಅದರಲ್ಲಿ ಕೊಟ್ಟಿದ್ದಾಳೆ. ನಿನ್ನ ಫೀಸು, ಶಂಕರ ಫೀಸ್ ಈ ಸಲ ಅವಳೇ ಕಟ್ಟುತ್ತಾಳಂತೆ.”
“ಅಮ್ಮನಿಗೆ ಏನಾದರೂ ತೆಗೆದುಕೊಡಬೇಕಿತ್ತು.”
“ನೀಲಾ ಕೊಟ್ಟಿರುವುದೇ ಬೇಕಾದಷ್ಟಿದೆ. ಏನೂ ಬೇಡ ಅಂದಳು.”
ಅವರು ತರಕಾರಿ ತೆಗೆದುಕೊಂಡು ಮನೆಗೆ ಹಿಂದಿರುಗಿದರು.
ಆ ವೇಳೆಗೆ ಜಾನಕಿ, ದೇವಕಿ ಬಂದಿದ್ದರು.
“ಏನೇ ನಾಳೇನೇ ಮೈಸೂರಿಗೆ ಹೊರಟಿದ್ದೀಯಂತೆ….”
“ಹೌದು ಅತ್ತೆ. ಎನ್.ಎಸ್.ಎಸ್ ಕ್ಯಾಂಪ್ ಇದೆ.”
“ಯಾವೂರಲ್ಲಿ ಕ್ಯಾಂಪ್?”
“ಮಂಡ್ಯದ ಹತ್ತಿರ ಹಳ್ಳಿಯಲ್ಲಿ. ನಾಳೆ ಸಾಯಂಕಾಲ ವಿವರಗಳು ಗೊತ್ತಾಗತ್ತೆ.”
“ನಿನಗೆ ಈ ವಿಚಾರ ಮೊದಲೇ ಗೊತ್ತಿತ್ತಲ್ವಾ? ಯಾಕೆ ನಮ್ಮಿಂದ ಮುಚ್ಚಿಟ್ಟೆ?” ಜಾನಕಿ ಕೇಳಿದಳು.
“ಚಿಕ್ಕಮ್ಮ ಎನ್.ಎಸ್.ಎಸ್. ಕ್ಯಾಂಪ್‌ಗೆ ಹೋಗಬೇಕೂಂತ ಗೊತ್ತಿತ್ತು. ಫೋನ್ ಮಾಡ್ತೀವಿ ಬನ್ನಿ” ಅಂತ ನಮ್ಮ ಟೀಂ ಲೀಡರ್ ಹೇಳಿದ್ದಳು. ಇದರಲ್ಲಿ ಮುಚ್ಚಿಡೋದೇನಿದೆ?”
“ಏನೋಮ್ಮ ಈಗಿನ ಹುಡುಗಿಯರನ್ನು ನಂಬಕ್ಕೇ ಆಗಲ್ಲ……….”
“ಅತ್ತೆ ಏನೇನೋ ಮಾತಾಡಬೇಡಿ. ನಾನೇನು ಹುಡುಗನ ಜೊತೆ ಓಡಿಹೋಗ್ತಿದ್ದೀನಾ ವಿಷಯ ಮುಚ್ಚಿಡಕ್ಕೆ? ನಮ್ಮ ಅಪ್ಪ-ಅಮ್ಮಾನೇ ಪ್ರಶ್ನೆ ಮಾಡಲ್ಲ. ನೀವ್ಯಾಕೆ ತಲೆಕೆಡಿಸಿಕೊಳ್ತೀರಾ?”
“ನಾನೇನೆ ಅನ್ನಬಾರದ್ದು ಅಂದಿದ್ದು?”
“ವ್ಯಂಗ್ಯವಾಗಿ ಮಾತಾಡದಿದ್ರೆ ನಿನಗೆ ತಿಂದನ್ನ ಜೀರ್ಣವಾಗಲ್ಲವಾ? ಈಗಿನ ಕಾಲದ ಹುಡುಗಿಯರು ಹೇಗರ‍್ತಾರೆ ನೀನು ನೋಡಿದ್ದೀಯಾ? ಅಣ್ಣ ಇಂತಹ ಮಕ್ಕಳನ್ನು ಪಡೆಯುವುದಕ್ಕೆ ಪುಣ್ಯ ಮಾಡಿದ್ದೆ. ಮಾತಾಡಿ ಕೆಟ್ಟವಳಾಗಬೇಡಿ” ಶಿವಶಂಕರ ಹೇಳಿದಾಗ ದೇವಕಿ ಸುಮ್ಮನಾದಳು.
ಮರುದಿನ ಒಂದು ಗಂಟೆಯ ಒಳಗೆ ವಾರುಣಿ ಮನೆಯಲ್ಲಿದ್ದಳು. ರಾಗಿಣಿ ಸುಮಾರು 4 ಗಂಟೆಗೆ ಬಂದಳು.
“ನಾಳೆ ತಿಂಡಿ ತಿಂದು ನಮ್ಮ ಕಾರ್‌ನಲ್ಲಿ ಹೈದರಾಬಾದ್‌ಗೆ ಹೋಗೋಣ. ಒಳ್ಳೆಯ ಡ್ರೈವರ್ ಸಿಕ್ಕಿದ್ದಾರೆ.”
“ಅಷ್ಟು ದೂರದ ಪ್ರವಾಸಾನಾ?”
“ಅಲ್ಲಿ ನೋಡುವ ಜಾಗಗಳು ಬೇಕಾದಷ್ಟಿವೆ. ಮುಖ್ಯವಾಗಿ ನಾವು ನನ್ನ ಕಸಿನ್ ಸಂಧ್ಯಾರೆಡ್ಡಿಯ ಬಂಗಲೆಯಲ್ಲಿರಬಹುದು. ಅಲ್ಲಿ ಎಲ್ಲಾ ಅನುಕೂಲಗಳಿವೆ. ನನಗೆ ನಿಮ್ಮಂತಹ ಹುಡುಗಿರಿರುವಾಗ ಗಂಡಸರಿಲ್ಲದೆ ಹೋಟೆಲ್‌ಗಳಲ್ಲಿ ಇಳಿದುಕೊಳ್ಳಲು ಭಯ.”
“ಆಗಲಿ ಆಂಟಿ. ನಿಮ್ಮ ಇಷ್ಟದಂತೆ ಹೋಗೋಣ. ನಾವು ಏನಾದರೂ ತರಬೇಕಿದ್ರೆ ಹೇಳಿ. ನಾನು ರಾಗಿಣಿ ಹೋಗಿ ರ‍್ತೀವಿ.”
“ಏನೂ ತರುವುದು ಬೇಡ. ನೀವು ನಿಮ್ಮ ಬಟ್ಟೆ ಬರೆ ಪ್ಯಾಕ್ ಮಾಡಿಕೊಂಡರೆ ಸಾಕು.”
ರಾತ್ರಿ ಊಟ ಮಾಡುವಾಗ ಚಂದ್ರ ಆಂಟಿ ತಮ್ಮ ಕಸಿನ್ ಬಗ್ಗೆ ಹೇಳಿದರು.
“ಸಂಧ್ಯಾ ನಮ್ಮ ತಾಯಿ ಅಕ್ಕನ ಮಗಳು. ನಮ್ಮ ಕುಟುಂಬದ ಹುಡುಗಿಯರಲ್ಲಿ ಅವಳೇ ಮೊದಲ ಗ್ರಾಜುಯೇಟ್. ಮೈಸೂರಲ್ಲಿ ಎಲ್.ಎಲ್.ಬಿ ಮಾಡಿ, ಹೈದರಾಬಾದ್‌ಗೆ ಎಲ್.ಎಲ್.ಎಂ. ಮಾಡಲು ಹೋದಳು. ಅವಳ ತಂದೆ ಲಾಯರ್ ಅನುಕೂಲವಾಗಿದ್ದರು. ಒಬ್ಬಳೇ ಮಗಳು. ಅತಿ ಮುದ್ದಿನಿಂದ ಸಾಕಿದ್ದರು. ಲಕ್ಷ್ಮೀಪುರಂನಲ್ಲಿ ಅವರ ದೊಡ್ಡ ಬಂಗಲೆಯಿತ್ತು.”
“ಮೈಸೂರಿನಲ್ಲೋ, ಬೆಂಗಳೂರಿನಲ್ಲೋ ಓದಬಹುದಿತ್ತಲ್ವಾ?”
“ನಮ್ಮ ದೊಡ್ಡಪ್ಪ ಹೈದರಾಬಾದ್‌ನಲ್ಲಿ ಓದಿದ್ರು. ಮಗಳ ಉಸ್ಮಾನಿಯಾ ಯೂನಿವರ್ಸಿಟಿಯಲ್ಲೇ ಎಲ್.ಎಲ್.ಎಂ. ಮಾಡಲಿ ಅಂತ ಆಸೆ. ಅವಳು ಅಲ್ಲಿ ಓದುವಾಗ ಪ್ರತಾಪರೆಡ್ಡಿ ಪರಿಚಯವಾದ. ಇಬ್ಬರೂ ಒಬ್ಬರನ್ನೊಬ್ಬರು ತುಂಬಾ ಇಷ್ಟಪಟ್ರು. ಅವರು ಕೋಟ್ಯಾಧೀಶ್ವರರು. ಪ್ರತಾಪರೆಡ್ಡಿ ತಂದೆ ಜನಾರ್ಧನ ರೆಡ್ಡಿ. ಫೇಮಸ್ ಲಾಯರ್.
“ಅವರ ಮನೆಯಲ್ಲಿ ಓದಿಸಿದ್ರಾ?”
“ಹುಂ. ಬುದ್ಧಿವಂತ ಸೊಸೆ ಬರ‍್ತಾಳೇಂದ್ರೆ ಅವರು ಯಾಕೆ ಬೇಡ ಅಂತಾರೆ? ನಮ್ಮ ದೊಡ್ಡಪ್ಪ ಒಪ್ಪಲಿಲ್ಲ. ಅವರೇ ಮದುವೆ ಮಾಡಿದರು. ನಮ್ಮ ದೊಡ್ಡಪ್ಪ, ದೊಡ್ಡಮ್ಮ ಮಗಳನ್ನು ಮನೆಗೆ ಸೇರಿಸಲೇ ಇಲ್ಲ. ಅಂತಹ ಹಠ. ಆಸ್ತಿಯನ್ನೆಲ್ಲಾ ಧರ್ಮಸ್ಥಳಕ್ಕೆ ಬರೆದರು. ಒಂದಿಷ್ಟು ಲಾ ಕಾಲೇಜುಗಳಲ್ಲಿ ದತ್ತಿನಿಧಿ ಇಟ್ಟರು.”
“ನಿಮ್ಮಕ್ಕ ಹೈದರಾಬಾದ್‌ನಲ್ಲಿ ಹ್ಯಾಪಿಯಾಗಿದ್ದಾರಾ?”
“ತುಂಬಾ ಖುಷಿಯಾಗಿದ್ದಾಳೆ. ಅವಳ ಗಂಡ ತುಂಬಾ ಹಣ, ತುಂಬಾ ಹೆಸರು ಮಾಡಿದ್ದಾರೆ. ದೊಡ್ಡ ಮಗಳು ಇಂಜಿನಿಯರ್. ಅಮೇರಿಕಾದಲ್ಲಿ ಸೆಟ್ಲ್ ಆಗಿದ್ದಾಳೆ. ನಮ್ರತಾ ಅಂತ ಹೆಸರು. ಅವಳಿಗೆ 35 ವರ್ಷ ಇರಬಹುದು. ಮಗಳು ಹುಟ್ಟಿದ 2-3 ವರ್ಷಗಳ ನಂತರ ಮಗ ಹುಟ್ಟಿದ್ದಾನೆ. ಬಾಲಾಜೀಂತ ಹೆಸರು. ಅವನು ಲಾ ಓದಿದ್ದಾನೆ. ತಂದೆಯ ವೃತ್ತಿ ಮುಂದುವರೆಸ್ತಾನೆ.”
“ನಾವು ಅವರ ಮನೆಯಲ್ಲಿ ಉಳಿದುಕೊಳ್ಳುವುದಾ?”
“ಹುಂ. ಅದು ಮನೆಯಲ್ಲಾ ಬಂಗಲೆ. ಅವಳು ನಮ್ಮ ವ್ಯಾನ್ ತೊಗೊಂಡು ಹೋಗಿ ನನ್ನ ಪಿ.ಎ. ಬರ‍್ತಾಳೆ. ಡ್ರೈವರ್‌ಗೆ ಹೈದರಾಬಾದ್ ಪರಿಚಯವಿಲ್ಲದಿದ್ರೆ ಗೈಡ್ ಮಾಡ್ತಾಳೇಂತ ಹೇಳಿದಳು.”
“ಅವರ ಪಿ.ಎ. ಇರೋದ್ರಿಂದ ಎಲ್ಲಾ ತೋರಿಸ್ತಾರೆ ಬಿಡಿ.”
“ನಿಮಗೆ ಯಾವಾಗಲಿಂದ ಕಾಲೇಜು?”
“ಬುಧವಾರದಿಂದ ಕಾಲೇಜು. ಗುರುವಾರ ಹೋದರೂ ಅಗುತ್ತದೆ.”
“ಮಂಗಳವಾರ ಬರ‍್ಲಾ ಮಂದಿರ್, ಪ್ಲಾನಿಟೋರಿಯಂ, ಗೋಲ್ಕಂಡಾ, ಫೋರ್ಟ್ ನೋಡೋಣ. ಬುಧವಾರ ಸಾಲಾರ್ ಜಂಗ್ ಮ್ಯೂಸಿಯಂಗೆ ಹೋಗಿ ಶಾಪಿಂಗ್, ಗುರುವಾರ ರಾತ್ರಿ ಹೊರಡೋಣ.”
“ಚಂದ್ರಾ ಒಪ್ಪಿದರು. ಮಲ್ಲಿಗೆ ರಜ ಕೊಟ್ಟರು. ಚಂದ್ರ ಆಂಟಿ ತಮ್ಮ ಬಂದು ಮಲಗುವುದಾಗಿ ಹೇಳಿದರು.
ಸೋಮವಾರ ತಿಂಡಿ ತಿಂದುಕೊಂಡು ಹೊರಟರು. ಅವರು ದಾರಿಯಲ್ಲಿ ಊಟ, ಕಾಫಿ ಎಂದು ನಿಲ್ಲಿಸಿದ್ದರಿಂದ ಹೈದರಾಬಾದ್ ತಲುಪಿದಾಗ 7-30ಯಾಗಿತ್ತು. ಮೊದಲು ಕಾಫಿ ಕುಡಿದು ನಂತರ ಸ್ನಾನ ಮಾಡಿ ಫ್ರೆಷ್ ಆದರು. ತಿಳಿಸಾರು, ಮೊಸರು, ಮಾವಿನಮಿಡಿ ಉಪ್ಪಿನಕಾಯಿಯ ಊಟ. ಸಂಧ್ಯಾ ಚಪಾತಿ ತಿಂದರು.
“ನಾಳೆ ಬೆಳಿಗ್ಗೆ ಮೀಟ್ ಮಾಡೋಣ. ಗುಡ್‌ನೈಟ್” ಎಂದರು ಸಂಧ್ಯಾ.
ಎರಡು ಕೋಣೆಗಳು ಅವರಿಗೆ ಸಿದ್ಧವಾಗಿತ್ತು. ಮಲಗಿದೊಡನೆ ನಿದ್ರೆ ಬಂತು.
ಈ ಕಾದಂಬರಿಯ ಹಿಂದಿನ ಪುಟ ಇಲ್ಲಿದೆ : https://surahonne.com/?p=43849
(ಮುಂದುವರಿಯುವುದು)

–ಸಿ.ಎನ್. ಮುಕ್ತಾ, ಮೈಸೂರು





ಕನಸೊಂದು ಶುರುವಾಗಿದೆ ಧಾರಾವಾಹಿ ಸರಾಗವಾಗಿ ಓದಿಸಿಕೊಂಡುಹೋಯಿತು…ಹೆತ್ತವರ ಅತಿ ಪ್ರೀತಿ ಯ ಪರಿಣಾಮದ ಎಳೆಯ..ನೋಟ ಎಚ್ಚರಿಕೆಯ ಗಂಟೆಯಾಗಿದೆ…
Beautiful novel.
ಕಾದಂಬರಿ ಪ್ರಕಟಿಸುತ್ತಿರುವ ಹೇಮಮಾಲಾ ಸಂಪಾದಕರಿಗೆ ಹಾಗೂ ಕಾದಂಬರಿಯ ಬಗ್ಗೆ ಅಭಿಪ್ರಾಯ ತಿಳಿಸಿರುವ ಆತ್ಮೀಯ ಗೆಳತಿಯರಿಗೆ ವಂದನೆಗಳು.
ಕನಸುಗಳ ಮೂಟೆ ಹೊತ್ತು ಸಾಗುತ್ತಿರುವ ಕಾದಂಬರಿಯು ಆಕರ್ಷಕವಾಗಿದೆ…ಕುತೂಕಲಕಾರಿಯಾಗಿದೆ.