ಜಗದಗಲ ಮನದಗಲ ವ್ಯಾಪಿಸಿದೆ ಈ ದೀಪದ ಬೆಳಕು
ಸಣ್ಣ ಸಣ್ಣ ಹಣತೆಗಳು ಬೆಳಗಿ ನೀಡಿವೆ ಹೊಂಬೆಳಕು
ಕಾರು ಕತ್ತಲೆಯ ಓಡಿಸಿ ಅಜ್ಞಾನ ಮೌಢ್ಯಗಳ ಅಳಿಸಿ
ಮೈ ಮನಗಳ ತುಂಬೆಲ್ಲಾ ಹರಡಿದೆ ಹೊಸ ಉತ್ಸಾಹ
ಬೃಹತ್ತಾದ ಅಹಂಕಾರವ ಸನ್ನಡತೆ ಎನ್ನುವ ವಾಮನ ಪಾತಾಳಕ್ಕೆ ತುಳಿಯುವನು
ದುರಾಸೆ ದುರಾಗ್ರಹದ ನರಕಾಸುರನ ಸಂತೃಪ್ತಿ ಸಂಯಮವೆಂಬ ಕೃಷ್ಣ ಸಂಹರಿಸುವನು
ಅಷ್ಟ ಮದಗಳ ಜೊತೆಗೆ ಧರ್ಮ ತಪಸ್ಸಿನ ಅಹಂ ಸೇರಿ
ಹತ್ತು ತಲೆಯಾದ ರಾವಣನ ನಿಗ್ರಹ ನಿಷ್ಠೆ ಎಂಬ ರಾಮ ಇಲ್ಲವಾಗಿಸುವನು
ಕಷ್ಟ ಕೋಟಲೆಗಳ ಬಿರು ಮಳೆಯಿಂದ ಆ ಪ್ರತಿಭೆಯೆಂಬ ಗೋವರ್ಧನ ಗಿರಿಧಾರಿ ರಕ್ಷಿಸುವನು
ಸಕಲ ಸುಗುಣಂಗಳ ಆಶ್ರಯವಾದ ಗೋ ಸ್ವರೂಪದ ಈ ದೇಹಕ್ಕೆ
ಪೂಜಿಸು ಎಂದು ಆ ಭಗವಂತ ಸಾರಿರುವನು
ದುಷ್ಟ ಶಕ್ತಿಗಳ ಮೇಲೆ ಶಿಷ್ಟ ಪ್ರಯತ್ನಕ್ಕೆ ಎಂದಿಗೂ ಜಯವೆಂದು ತೋರಿಹನು
ವಿಷಯ ಲಾಲಸೆ ತೊರೆದು ಸಂಸಾರ ಸಮುದ್ರವ ಮಥಿಸಿದಾಗ
ಜೀವನ ಪ್ರೀತಿಯೆಂಬ ಲಕ್ಷ್ಮೀ ಮೂಡಿ ಬರುವಳು ಸಕಲ ನೋವುಗಳ ದೂರ ಮಾಡುವುಳು
ಸರ್ವರಿಗೂ ಹಿತವ ಬಯಸುವ ಒತ್ತಾಸೆಯೊಂದಿಗೆ ಈ ಹಬ್ಬವ ಆಚರಿಸೋಣ ಬನ್ನಿ
ಮನೆ ಮನಗಳಲಿ ಜ್ಯೋತಿ ಬೆಳಗಿಸಿ ಸಕಲರಿಗೂ ಶುಭವಾಗಲಿ ಎನ್ನಿ

–ಶರಣಬಸವೇಶ ಕೆ. ಎಂ





ದೀಪಾವಳಿಯ ಹಬ್ಬದ ಕಾರಣ ಇಟ್ಟು ಕವಿತೆಯ ಮೂಲಕ ಶುಭಸಂದೇಶ …ಚೆನ್ನಾಗಿದೆ.. ಸಾರ್
ಚೆನ್ನಾಗಿದೆ
ಸಕಾಲಿಕ ಕವನ ಚೆನ್ನಾಗಿ ಮೂಡಿಬಂದಿದೆ.