ಬಹಳ ನಿಧಾನಗತಿಯ ಓದುಗಳಾದ ನಾನು ಸಾಹಿತಿ ಡಾ.ಎಂ.ಆರ್.ಮಂದಾರವಲ್ಲಿ ಅವರ ‘ದಿವ್ಯ ಚಿಕಿತ್ಸೆ, ಆರೋಗ್ಯಕ್ಕೆ ಹೆಬ್ಬಾಗಿಲು’ ಪುಸ್ತಕವನ್ನು ಓದಲೆಂದು ಕೈಗೆತ್ತಿಕೊಂಡಾಗ, 170 ಪುಟಗಳ ಚಿಕ್ಕ ಪುಸ್ತಕ ತಾನೇ, ಬೇಗ ಓದಿಯಾದೀತು ಎಂಬ ಭಾವನೆಯಿಂದಲೇ ಆರಂಭಿಸಿದೆ. ಆದರೆ ಮೊದಲ ಅಧ್ಯಾಯ ‘ಆನಂದವೆಂಬ ಅಮೃತ’ ಓದುವಷ್ಟರಲ್ಲಿಯೇ ನನ್ನ ಅಭಿಪ್ರಾಯ ತಪ್ಪೆಂದು ಮನವರಿಕೆಯಾಯಿತು. ಯಾಕೆಂದರೆ, ಈ ಪುಸ್ತಕದಲ್ಲಿ ನಿರೂಪಿಸಲ್ಪಟ್ಟ ವಿಷಯಗಳು ಸಲೀಸಾಗಿ ಒಂದೇ ಗುಕ್ಕಿನಲ್ಲಿ ಓದಿ ಮುಗಿಸಿ ಮರೆಯುವಂತವುಗಳಲ್ಲ. ಇದರಲ್ಲಿ ನಿಧಾನವಾಗಿ ಓದಿ, ಅರ್ಥೈಸಿ ಮನನ ಮಾಡಿಕೊಂಡು, ಸಾಧ್ಯವಾದಷ್ಟು ಮಟ್ಟಿಗೆ ನಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಸುವಿಚಾರಗಳಿವೆ.
ಜೀವನ ಎಂಬ ಪದದ ವಿಶ್ಲೇಷಣೆಯಿಂದ ಹಿಡಿದು, ನೆಮ್ಮದಿಯಾಗಿ ಬಾಳಲು ಬೇಕಾಗುವ ಆರೋಗ್ಯವನ್ನು ಪಡೆಯುವ ‘ದಿವ್ಯ ಚಿಕಿತ್ಸೆ’ಯ ಬಗ್ಗೆ ಬಹಳ ಆಪ್ತವಾದ ಶೈಲಿಯಲ್ಲಿ ಬರೆದಿದ್ದಾರೆ. ಪ್ರತಿ ಅಧ್ಯಾಯದ ಮೊದಲು ಒಂದು ತತ್ವವನ್ನು ತಿಳಿಸಿ, ಅನಂತರದ ಪ್ಯಾರಾಗಳಲ್ಲಿ ವಿವರಣೆ ಬರೆದು, ಕೆಲವೆಡೆ ಸೊಗಸಾದ ಉಪಕತೆಗಳನ್ನು ಜೋಡಿಸಿ, ಕೊನೆಯ ಅಚ್ಚುಕಟ್ಟಾದ ಒಂದೆರಡು ವಾಕ್ಯಗಳಲ್ಲಿ ಉಪಸಂಹಾರ ಮಾಡಿ ಬರೆಯುವ ಇವರ ಶೈಲಿ ನನಗೆ ಮೆಚ್ಚುಗೆಯಾಯಿತು. ಕೆಲವು ಉಪಕತೆಗಳು ಆಯಾ ಅಧ್ಯಾಯದ ಸೊಗಸನ್ನು ಹೆಚ್ಚಿಸುವುದರ ಜೊತೆಗೆ ಪುಟ್ಟ ಮಕ್ಕಳಿಗೆ ನೀತಿಕತೆಯಾಗಿ ಹೇಳಲೂ ಚೆನ್ನಾಗಿವೆ. ಉದಾಹರಣೆಗೆ,ಪುಟ 26 ರಲ್ಲಿ ಬರುವ ‘ ಒಂಟೆಯನ್ನು ಕಾಲ್ಪನಿಕ ಗೂಟಕ್ಕೆ ಹಗ್ಗದಿಂದ ಕಟ್ಟಿದಂತೆ ಅಭಿನಯಿಸುವ ಕತೆ’.
ಈ ಪುಸ್ತಕದಲ್ಲಿ, ಮನುಷ್ಯ ಜೀವನದ ಅರ್ಥ, ವ್ಯಾಪ್ತಿ, ಮನುಷ್ಯನ ಎಂಟು ವೃತ್ತಗಳು, ನಮ್ಮ ಮನಸ್ಸಿನ ಆಲೋಚನಾ ವ್ಯವಸ್ತೆಯ ಲೋಪ ದೋಷಗಳು, ಸವಾಲುಗಳು, ನಂಬಿಕೆ , ಆಚರಣೆಗಳು, ಗೊಂದಲಗಳು, ಚಿತ್ತ ಶುದ್ಧಿ, ಸತ್ಯ ದರ್ಶನ ಮೊದಲಾದ ವಿಚಾರಗಳನ್ನು ತೆರೆದಿಡುತ್ತಾ, ದಿವ್ಯ ಚಿಕಿತ್ಸೆಯ ಮೂಲರೂಪವೇ ‘ಸಕಾರಾತ್ಮಕ ಪರಿವರ್ತನೆ‘ ಎಂಬುದನ್ನು ತಿಳಿಸಿದ್ದಾರೆ. ಹಲವಾರು ಆರೋಗ್ಯ, ಮಾನಸಿಕ , ಆರ್ಥಿಕ ಸಮಸ್ಯೆಗಳಿಗೆ ನಮ್ಮ ಆಲೋಚನಾ ವ್ಯವಸ್ಥೆಯಲ್ಲಿ ಬದಲಾವಣೆ ತಂದರೆ ಸಮಸ್ಯೆ ಪರಿಹಾರವಾಗುತ್ತದೆ ಎಂಬುದನ್ನು ‘ದಿವ್ಯ ಚಿಕಿತ್ಸೆ’ಯ ಮೂಲಕ ಪ್ರಯೋಜನ ಪಡೆದವರ ಪ್ರಾಯೋಗಿಕ ಅನುಭವಗಳನ್ನು ಉಲ್ಲೇಖಿಸಿ ವಿವರಿಸಿದ್ದಾರೆ. ನಮ್ಮ ಆಲೋಚನಾ ವ್ಯವಸ್ಥೆಯನ್ನು ವಿದ್ಯುತ್ ಶಕ್ತಿಗೆ ಹೋಲಿಸಿ, ಸರಳೀಕರಿಸಿದ್ದಾರೆ. ಇನ್ನು ಕೆಲವು ಅಧ್ಯಾಯಗಳಲ್ಲಿ, ನಾವು ನಮ್ಮ ದಿವ್ಯ ಚಿಕಿತ್ಸೆಗೆ ಪೂರಕವಾದ ಅಭ್ಯಾಸಗಳನ್ನು ಸೂಕ್ತವಾಗಿ, ಸಕಾರಾತ್ಮಕವಾಗಿ ಬದಲಾಯಿಸಿಕೊಳ್ಳಬಹುದೆಂದು ಮಾರ್ಗದರ್ಶನವನ್ನೂ ಮಾಡಿರುವುದು ಬಹಳ ಉಪಯುಕ್ತವಾದ ಅಂಶ.
ದೈಹಿಕ ಹಾಗೂ ಮಾನಸಿಕ ಆರೋಗ್ಯ ಮತ್ತು ನೆಮ್ಮದಿ ಮನುಷ್ಯರಿಗೆ ಅತ್ಯಗತ್ಯ. ಈ ನಿಟ್ಟಿನಲ್ಲಿ, ‘ದಿವ್ಯ ಚಿಕಿತ್ಸೆ’ ಪುಸ್ತಕವು ಓದಿ, ಮನನ ಮಾಡಿ, ಸಾಧ್ಯವಾದಷ್ಟು ಮಟ್ಟಿಗೆ ನಮ್ಮ ಆರೋಗ್ಯವನ್ನು ಬಲಪಡಿಸಿಕೊಳ್ಳಲು ಅಳವಡಿಸಿಕೊಳ್ಳಬಹುದಾದ ಸಕಾರಾತ್ಮಕ ಅಭ್ಯಾಸಗಳ ಕೈಪಿಡಿಯಾಗಿದೆ.
ಸಮಾಜಕ್ಕೆ ಸ್ವಾಸ್ಥ್ಯ ಸಲಹಾಗಾರನಂತೆ ಇರುವ ಈ ಪುಸ್ತಕವನ್ನು ಓದುಗರ ಕೈಗಿತ್ತ ಡಾ.ಎಂ.ಆರ್. ಮಂದಾರವಲ್ಲಿಯವರಿಗೆ ಧನ್ಯವಾದಗಳು.

ಹೇಮಮಾಲಾ.ಬಿ.ಮೈಸೂರು.






ಪುಸ್ತಕ ಪರಿಚಯ ಪುಸ್ತಕ ಓದಲು ಪ್ರೇರುಪಿಸುವಂತಿದೆ…ಧನ್ಯವಾದಗಳು
ಒಂದು ಒಳ್ಳೆಯ ಪುಸ್ತಕ ಪರಿಚಯ ಮಾಡಿರುವುದಕ್ಕೆ ಧನ್ಯವಾದಗಳು.
ಸುಂದರವಾದ ಅವಲೋಕನ
ಸಕಲ ಸಂಪತ್ತುಗಳ ಯಾದಿಯಲ್ಲಿ ಮೊದಲ ಸ್ಥಾನ ಪಡೆದಿದೆ, ಆರೋಗ್ಯ ಸಂಪತ್ತು. ದಿವ್ಯ ಚಿಕಿತ್ಸೆಯೆಂಬ ಆಕರ್ಷಕ, ಅರ್ಥವತ್ತಾದ ಶೀರ್ಷಿಕೆಯನ್ನು ಹೊತ್ತ ಅಪರೂಪದ ಹೊತ್ತಗೆಯ ವಿವರಣಾತ್ಮಕ ಪುಸ್ತಕ ಪರಿಚಯದಲ್ಲಿ; ನೆಮ್ಮದಿಯ ಜೀವನಕ್ಕೆ ಅಗತ್ಯವಿರುವ ಆರೋಗ್ಯವನ್ನು ಪಡೆಯುವ ಬಗ್ಗೆ ನೀಡಿದ ಅಂಶಗಳು ಕುತೂಹಲವನ್ನು ಮೂಡಿಸುವುದರಲ್ಲಿ ಸಫಲವಾಗಿವೆ.