(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
‘ಲುವಾಕ್ ಕಾಫಿ’ (Luwak Coffee)
ಆಗ ಮಧ್ಯಾಹ್ನದ ಸಮಯವಾಗಿತ್ತು. ಊಟಕ್ಕಾಗಿ ‘ಪುರಿ ಅಮರ್ಥ’ಕ್ಕೆ ಹೊರಡುವುದೆಂದಾಯಿತು. ಆಗ ಮಾರ್ಗದರ್ಶಿ ಮುದ್ದಣ ಹೇಳಿದ, ನಾವು ಹೋಗಲಿರುವ ದಾರಿಯಲ್ಲಿ ‘ಅಲಸಿರಿ ಕಾಫಿ ಸೆಂಟರ್’ ಸಿಗುತ್ತದೆ. ಅಲ್ಲಿ ಹಲವಾರು ವಿಧದ ಕಾಫಿ/ಚಹಾ ವನ್ನು ಉಚಿತವಾಗಿ ರುಚಿ ನೋಡಬಹುದು. ಕೊಪಿ ಲುವಾಕ್ (Kopi Luwak/Civet/ಪುನುಗು ಬೆಕ್ಕು) ಎಂಬ ಜಾತಿಯ ಬೆಕ್ಕಿಗೆ ಕಾಫಿ ಬೀಜಗಳನ್ನು ಆಹಾರವಾಗಿ ಕೊಡಲಾಗುತ್ತದೆ, ಅದರ ಜಠರದಿಂದ ಹೊರಬಂದ ಕಾಫಿಬೀಜವನ್ನು ಸಂಸ್ಕರಿಸಿ ಕಾಫಿ ತಯಾರಿಸಲಾಗುತ್ತದೆ. ಲುವಾಕ್ ಕಾಫಿ ಎಂಬುದು ಬಾಲಿಯ ವಿಶೇಷ ಕಾಫಿ, ದುಬಾರಿ ಕೂಡಾ. ನಿಮಗೆ ಆಸಕ್ತಿ ಇದ್ದರೆ ಹೋಗೋಣ’ ಎಂದ. ಹೇಗೂ ಬಂದಿದ್ದೇವೆ ನೋಡೋಣ ಎಂದು ಎಲ್ಲರೂ ‘ಅಲಾಸ್ ಸರಿ ಕಾಫಿ ಕೇಂದ್ರ’ಕ್ಕೆ ಭೇಟಿ ಕೊಟ್ಟೆವು.
ಮುಖ್ಯರಸ್ತೆಯಿಂದ ಅಂದಾಜು 100 ಮೀ ಹಸಿರು ಮರಗಳ ನಡುವಿನ ಕಾಲುದಾರಿಯಲ್ಲಿ ಹೋದಾಗ ಒಂದೆಡೆ ಬೋನಿನಲ್ಲಿ ಇರಿಸಲಾಗಿದ್ದ ‘ ಪುನುಗು ಬೆಕ್ಕು’ ಕಾಣಿಸಿತು. ಅಲ್ಲಿದ್ದ ಎಳೆ ಯುವತಿ, ಕಾಲೇಜು ವಿದ್ಯಾರ್ಥಿನಿ ‘ಲಿಯಾ’ ಎಂಬವಳು ಸ್ವಾಗತಿಸಿ, ‘ಲುವಾಕ್ ಕಾಫಿ’ ತಯಾರಿಕೆಯ ಬಗ್ಗೆ ಇಂಗ್ಲಿಷಿನಲ್ಲಿ ವಿವರಿಸಿದಳು. ಬೆಕ್ಕಿಗೆ ಕಾಫಿ ಬೀಜ ತಿನ್ನಿಸಿ, ಅದರ ಮಲದಲ್ಲಿ ಹೊರಬಂದ ಬೀಜಗಳನ್ನು ತೊಳೆದು, ಹುರಿದು , ಕುಟ್ಟಿ ಕಾಫಿ ಪುಡಿ ತಯಾರಿಸುವುದನ್ನು ತೋರಿಸಿದಳು . ಅಲ್ಲಿ ಒಬ್ಬರು ಕಾಫಿ ಬೀಜಗಳನ್ನು ಹುರಿಯುತ್ತಿದ್ದರು. ಇನ್ನೊಬ್ಬರು ಕಾಫಿ ಬೀಜಗಳನ್ನು ಕುಟ್ಟಿ ಪುಡಿ ಮಾಡುತ್ತಿದ್ದರು. ನಮಗೆ ಇದನ್ನೆಲ್ಲ ನೋಡಿಯೇ ‘ವ್ಯಾಕ್’ ಅನಿಸತೊಡಗಿತ್ತು.ಹಾಗಾಗಿ, ನಮಗೆ ರುಚಿ ನೋಡಲು ‘ಲುವಾಕ್ ಕಾಫಿ’ ಬೇಡವೆಂದು ಒಕ್ಕೊರಲಿನಿಂದ ಹೇಳಿದ್ದೆವು.
ಇಂಡೋನೇಶ್ಯಾದವರ ಹೆಮ್ಮೆಯ ‘ಲುವಾಕ್ ಕಾಫಿ’ ನಿಜವಾಗಿಯೂ ಅದರ ದುಬಾರಿ ಬೆಲೆ ಹಾಗೂ ಖ್ಯಾತಿಗೆ ತಕ್ಕಂತೆ ಅದ್ಭುತ ರುಚಿ ಹೊಂದಿದೆಯೇ ಎಂದು ಗೂಗಲ್ ನ ಮೊರೆ ಹೊಕ್ಕಾಗ ದೊರೆತ ಮಾಹಿತಿ ಪ್ರಕಾರ, ಬಾಲಿಯಲ್ಲಿ ಡಚ್ಚರ ಆಡಳಿತವಿದ್ದಾಗ ರೈತರಿಗೆ ತಮಗಾಗಿ ‘ಕಾಫಿ’ ಬೆಳೆಯುವ ಸ್ವಾತಂತ್ರ್ಯವಿರಲಿಲ್ಲ. ಸ್ಥಳೀಯವಾಗಿ ‘ಲುವಾಕ್’ ಎಂದು ಕರೆಯಲ್ಪಡುವ ಸಿವೆಟ್ ಅಥವಾ ಪುನುಗುಬೆಕ್ಕು ಚೆನ್ನಾಗಿ ಕಳಿತ ಕಾಫಿ ಬೀಜಗಳನ್ನು ಮಾತ್ರ ತಿನ್ನುವುದರಿಂದ ಹಾಗೂ ಅದರ ಜಠರದಲ್ಲಿ ಆಂಶಿಕವಾಗಿ ಜೀರ್ಣವಾಗುವ ಕಾಫಿ ಬೀಜಗಳಿಗೆ ವಿಶಿಷ್ಟ ಸ್ವಾದ ಬರುವುದೆಂದು ಕಂಡುಕೊಂಡರು. ಕಾಡಿನಲ್ಲಿ ಸಿಕ್ಕ ‘ಲುವಾಕ್ ‘ಬೆಕ್ಕಿನ ಮಲದಿಂದ ಬೀಜಗಳಿಂದ ಕಾಫಿ ತಯಾರಿಸಬಹುದೆಂದು ಅವರು ಕಂಡುಕೊಂಡ ಮೇಲೆ ಅದಕ್ಕೆ ಸ್ಥಳೀಯ ಸಾಂಪ್ರದಾಯಿಕ ಮೆರುಗು ಬಂತು. ಇದನ್ನು ಇಷ್ಟಪಡುವವರೂ ಇದ್ದಾರೆ. ಆದರೆ , ಲುವಾಕ್ ಬೆಕ್ಕನ್ನು ಬೋನಿನಲ್ಲಿರಿಸಿ ಅದರ ಸ್ವಾತಂತ್ರ್ಯವನ್ನು ಕಸಿದುಕೊಂಡು, ಅದರ ಸಹಜ ಆಹಾರದ ಬದಲು ಕಾಫಿ ಬೀಜಗಳನ್ನು ಮಾತ್ರ ಆಹಾರವಾಗಿ ಕೊಡುವ ಪ್ರಾಣಿಹಿಂಸೆಯನ್ನು ವಿರೋಧಿಸುವವರೂ ಇದ್ದಾರೆ. ಲುವಾಕ್ ಕಾಫಿಯ ಸೀಮಿತ ಲಭ್ಯತೆ ಇರುವುದರಿಂದ ಹಾಗೂ ಸಂಸ್ಕರಣೆಯ ವೆಚ್ಚ ಹೆಚ್ಚಾಗಿರುವುದರಿಂದ ಇದು ದುಬಾರಿಯಾಗಿದೆ ಹಾಗೂ ಇದು ಪ್ರವಾಸೋದ್ಯಮದ ಆಕರ್ಷಣೆಯಾಗಿ ಉಳಿದಿದೆ.
ಆಮೇಲೆ ಪಕ್ಕದಲ್ಲಿ ಇದ್ದ ತೆರೆದ ಹಾಲ್ ನಲ್ಲಿ ನಮ್ಮನ್ನು ಕುಳ್ಳಿರಿಸಿ, ಅಲ್ಲಿ ತಯಾರಿಸಲಾಗುವ ಮ್ಯಾಂಗೋಸ್ಟೀನ್ ಚಹಾ , ದಾಸವಾಳದ ಚಹಾ, ಶುಂಠಿ ಚಹಾ, ವೆನಿಲಾ ಚಹಾ, ಪಂದನ್ ಎಲೆಯ ಚಹಾ, ಲೆಮನ್ ಗ್ರಾಸ್ ಚಹಾ, ಅವಕಾಡೋ ಕಾಫಿ, ಚಾಕಲೇಟ್ ಕಾಫಿ, ತೆಂಗಿನಹಾಲಿನ ಕಾಫಿ, ಶುಂಠಿ ಕಾಫಿ, ಬಾಲಿ ಕಾಫಿ ಮತ್ತು ಲುವಾಕ್ ಕಾಫಿ ಹೀಗೆ ಹನ್ನೆರಡು ಪೇಯಗಳ ಬಗ್ಗೆ ವಿವರಿಸಿ, ಚೆಂದದ ಪಟ್ಟಿಯನ್ನು ಮೇಜಿನಲ್ಲಿ ಇರಿಸಿದಳು. ಇನ್ನೊಬ್ಬಾಕೆ ಹಲವಾರು ಬಗೆ ಕಾಫಿ/ಚಹಾಗಳನ್ನು ತಯಾರಿಸಿ ಆಯಾ ಪೇಯದ ಚಿತ್ರದ ಮೇಲೆ ಇರಿಸಿ, ನಾವು ರುಚಿ ನೋಡಬಹುದೆಂದಳು. ಲುವಾಕ್ ಕಾಫಿ ಇಲ್ಲ ತಾನೇ ಎಂದು ಪುನ: ಕೇಳಿ ದೃಢೀಕರಿಸಿಕೊಂಡು, ಚಮಚ ಕೇಳಿ ಪಡೆದುಕೊಂಡು, ಅಲ್ಲಿ ಕೊಡಲಾದ ಬಣ್ಣ ಬಣ್ಣದ ಚಹಾ/ಕಾಫಿಗಳ ರುಚಿನೋಡಿದೆವು .
ತಿಳಿಗುಲಾಬಿ ಬಣ್ಣದ ಮ್ಯಾಂಗೋಸ್ಟೀನ್ ಹಣ್ಣಿನ ಚಹಾ ಹುಳಿ-ಮಿಶ್ರಿತ ಸಿಹಿಯಾಗಿದ್ದು ನನಗೆ ಇಷ್ಟವಾಯಿತು. ಹೋಲಿಕೆ ಕೊಡುವುದಾದರೆ , ಕೋಕಂ ಅಥವಾ ಪುನರುಪುಳಿ ಹಣ್ಣಿನ ಬಿಸಿ ಶರಬತ್ತಿನಂತೆ ಇತ್ತು. ಪಕ್ಕದಲ್ಲಿದ್ದ ಕೌಂಟರ್ ನಿಂದ ಕಾಲು ಕಿಲೋ ಮ್ಯಾಂಗೋಸ್ಟೀನ್ ಚಹಾ ಪುಡಿ ಖರೀದಿಸಿದೆ. ಅದರ ಬೆಲೆ 160,000/- ಇಂಡೋನೇಶ್ಯಾದ ರೂಪಾಯಿ ಅಂದರೆ ಸುಮಾರು 850/- ಭಾರತೀಯ ರೂಪಾಯಿ. ನನ್ನ ಬಳಿ ಇಂಡೋನೇಶ್ಯಾದ ಹಣ ಇಲ್ಲದ ಕಾರಣ ಕ್ರೆಡಿಟ್ ಕಾರ್ಡ್ ಬಳಸಿ ವ್ಯಾಪಾರ ಮಾಡಿದೆ. ಆ ಅಂಗಡಿಯ ಮಾಲಿಕ ಮತ್ತು ಲಿಯಾ ಸೌಜನ್ಯಪೂರ್ವಕವಾಗಿ ವಂದಿಸಿ ಬೀಳ್ಕೊಟ್ಟರು.
ಅಲ್ಲಿಂದ ‘ಪುರಿ ಅಮರ್ಥ’ ಹೋಂಸ್ಟೇಗೆ ಬಂದು ಊಟ ಮಾಡಿದೆವು. ರಾಕೇಶ್ ಅವರು ತಯಾರಿಸಿದ ಅನ್ನ, ಸಾರು, ಸಾಂಬಾರು, ಮಜ್ಜಿಗೆ , ಪಾಯಸ ಇದ್ದ ಊಟ ರುಚಿಕಟ್ಟಾಗಿತ್ತು.
(ಮುಂದುವರಿಯುವುದು)
ಈ ಪ್ರವಾಸಕಥನದ ಹಿಂದಿನ ಸಂಚಿಕೆ ಇಲ್ಲಿದೆ: https://surahonne.com/?p=43854

–ಹೇಮಮಾಲಾ.ಬಿ. ಮೈಸೂರು







Interesting. ಎಲ್ಲವನ್ನು ಆಸಕ್ತಿಯಿಂದ ಗಮನಿಸುವ ನಿಮ್ಮ ಮನೋಭಾವ ಇಲ್ಲಿ ಎದ್ದು ಕಾಣಿಸುತ್ತದೆ. ಹಾಗೆಯೇ ಸೇವಿಸುವ ಆಹಾರ ನಮ್ಮ ಇಚ್ಛೆ ಅನ್ನುವ ದೃಢತೆ ಹಾಗೂ ಸ್ಪಷ್ಟತೆ ಇಲ್ಲಿ ಕಾಣಿಸುತ್ತದೆ.
ಮೆಚ್ಚುಗೆ, ಪ್ರತಿಕ್ರಿಯೆಗೆ ಧನ್ಯವಾದಗಳು.
ಪ್ರವಾಸ ಕಥನ ಚೆನ್ನಾಗಿ ಮೂಡುಬರುತ್ತಿದೆ…ಚಿತ್ರ ಗಳು ಪೂರಕವಾಗಿವೆ… ಸೂಕ್ಷ್ಮ ನೋಟ ನಿಮ್ಮ ದು..ಅದರಿಂದಲೇ ವಿವರಣೆ ಸೊಗಸಾಗಿ ಬರುತ್ತದೆ ಗೆಳತಿ ಹೇಮಾ..ಧನ್ಯವಾದಗಳು..
ಮೆಚ್ಚುಗೆ, ಪ್ರತಿಕ್ರಿಯೆಗೆ ಧನ್ಯವಾದಗಳು.
ಪ್ರಾಣಿ ಪಕ್ಷಿಗಳಿಂದ ನೈಸರ್ಗಿಕವಾಗಿ ನಡೆಯುವ ಬೀಜ ಪ್ರಸಾರದಿಂದ ಹುಟ್ಟಿ, ಬೆಳೆದ ಗಿಡಗಳು ಆರೋಗ್ಯಪೂರ್ಣವಾಗಿರುವುದನ್ನು ನಾವು ಗಮನಿಸಬಹುದು. ಅತೀ ಹಳೆಯದಾದ ಹಳಸಿದ ಮದ್ಯಕ್ಕೆ ಭಾರೀ ಬೇಡಿಕೆ…ಅಂತೆಯೇ ಬಾಲಿಯ ಲುವಾಕ್ ಕಾಫಿ! ರುಚಿಯಾಗಿದ್ದರೂ ಆಹಾರವಾಗಿ ಸೇವಿಸಲು ಒಗ್ಗದ ಕಾಫಿಯ ತಯಾರಿ ಕುತೂಹಲಕಾರಿಯಾಗಿದೆ. ಪ್ರವಾಸ ಲೇಖನ ಅಚ್ಚುಕಟ್ಟಾಗಿ ಮೂಡಿಬಂದಿದೆ.