ಕಾದಂಬರಿ

ಕನಸೊಂದು ಶುರುವಾಗಿದೆ: ಪುಟ 27

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
“ನಾನು ಹೇಳಿದ ಹುಡುಗಿ ಇವಳೇ…….. ವರು. ಇವರು ಮಿಸೆಸ್ ಪುಷ್ಪ ಅಯ್ಯಂಗಾರ್. ಇವರು ಶಶಿಕಲಾರಾವ್.”
ವರು ‘ನಮಸ್ಕಾರ’ ಎಂದಷ್ಟೇ ಹೇಳಿ ತನ್ನ ರೂಮ್‌ಗೆ ಹೋದಳು.
“ವಾರುಣಿ ಹತ್ರ ನಾನು ಮಾತನಾಡಿ ನಿಮಗೆ ವಿಷಯ ತಿಳಿಸ್ತೀನಿ” ಎಂದರು ಚಂದ್ರಾವತಿ.
ವರು ಮುಖ ತೊಳೆದು ಬರುವ ಹೊತ್ತಿಗೆ ಚಂದ್ರಾ ಕಾಫಿ, ಚಕ್ಕುಲಿ, ಮುರುಕು ತಂದರು.
“ಆಂಟಿ ಈಗ ಬಂದಿದ್ರಲ್ಲಾ ಅವರು ಯಾರು?”
“ಇವರಿಬ್ಬರೂ ಹಿಂದುಗಡೆ ಬೀದಿಯಲ್ಲಿದ್ದಾರೆ. ಪುಷ್ಪಾ ಮಗ, ಸೊಸೆ ಡಾಕ್ಟರ್ಸ್ ತುಂಬಾ ಬ್ಯುಸಿ. ಶಶಿಕಲಾ ಮಗ-ಸೊಸೆ ಡ್ಯಾನ್ಸರ್ಸ್ .”
“ಓ……”
“ಪುಷ್ಪಾಗೆ ಇಬ್ಬರು ಮೊಮ್ಮಕ್ಕಳು. ಧನುಷ್, ಧೀರಜ್ ಅಂತ.” ಒಬ್ಬ 4ನೇ ಕ್ಲಾಸ್. ಇನ್ನೊಬ್ಬ 7ನೇ ಕ್ಲಾಸ್. ಶಶಿಕಲಾಗೆ ಇಬ್ಬರು ಮೊಮ್ಮಕ್ಕಳು. ಸಾನ್ವಿ-ತನ್ವಿ. ಸಾನ್ವಿ 4ನೇ ಕ್ಲಾಸ್-ತನ್ವಿ 7ನೇ ಕ್ಲಾಸ್. ಅಜ್ಜಿಯರಿಗೆ ಮೊಮ್ಮಕ್ಕಳ ಬಗ್ಗೆ ಚಿಂತೆ. ಅವರುಗಳೇ ಮೊಮ್ಮಕ್ಕಳನ್ನು ರೆಡಿ ಮಾಡೋದು, ಊಟ-ತಿಂಡಿ ಕೊಡೋದು. ಆದರೆ ಅವರಿಗೆ ಪ್ರತಿದಿನ ಹೋಂವರ್ಕ್ ಮಾಡಿಸೋದು ಕಷ್ಟವಾಗಿದೆಯಂತೆ. ಯಾರಾದ್ರೂ ಹೋಂವರ್ಕ್ ಮಾಡಿಸ್ತಾರಾಂತ ಕೇಳಿದರು. ‘ನಾನು ನಿನ್ನ ಹೆಸರು ಹೇಳಿದೆ. ನಾಲ್ವರೂ ಒಂದೇ ಶಾಲೆಗೆ ಹೋಗೋದು. ನೀನು ಒಪ್ಪಿಕೊಂಡರೆ ನಿನಗೆ ತಿಂಗಳಿಗೆ 20 ಸಾವಿರ ಸಿಗುತ್ತದೆ.”
“ಆದರೆ ನನಗೆ ಮ್ಯಾಥ್ಸ್, ಸೈನ್ಸ್ ಕಷ್ಟ.”
“ಅವರ ಟೆಕ್ಸ್ಟ್ ತೆಗೆದುಕೊಂಡು ನಿಮ್ಮ ತಂದೆಗೆ ತೋರಿಸು. ನಿಮ್ತಂದೆ ಕೈಲಿ ಸೈನ್ಸ್-ಮ್ಯಾಥ್ಸ್ ಹೇಳಿಸಿಕೊಂಡು ಬಾ.”
“ನೀವು ಟೆಕ್ಸ್ಟ್ ಬುಕ್ ತರಿಸಿಕೊಡಿ. ನಾನು ಈ ಶನಿವಾರ ಭಾನುವಾರ ಅಪ್ಪನ ಕೈಲಿ ಹೇಳಿಸಿಕೊಂಡು ಬರ‍್ತೀನಿ. ಅವರಿಗೆ ಯಾವಾಗಲಿಂದ ಹೋಂವರ್ಕ್ ಮಾಡಿಸಬೇಕು.”
“ನಾಳೆ ಶನಿವಾರ. ಅವರು ಟೂರ್ ಹೋಗ್ತಿದ್ದಾರೆ. ಬಹುಶಃ ಮುಂದಿನ ತಿಂಗಳು ಒಂದನೇ ತಾರೀಕಿನಿಂದ ಇರಬಹುದು. ಈಗ ಒಬ್ಬ ಟೀಚರ್ ಬರ‍್ತಿದ್ದಾರೆ. ಆ ಹುಡುಗಿ ತುಂಬಾ ಚೆಲ್ಲು. ಮನೆಯವರಿಗೆ ಇಷ್ಟವಾಗ್ತಿಲ್ಲ.”
“ಟೈಂಯಿದೇಂತ ಆಯ್ತು. ನಾನು ಇವತ್ತು ಅಪ್ಪನ ಜೊತೆ ಮಾತಾಡ್ತೀನಿ.”
ಅವಳು ಅಂದು ರಾತ್ರಿಯೇ ತಂದೆಗೆ ಫೋನ್ ಮಾಡಿದಳು.

“ವರು ನೀನು ಆ ಟೆಕ್ಸ್ಟ್ ತೆಗೆದುಕೊಂಡು ಒಂದ್ಸಲ ನೋಡು. ಅದೇನು ಬ್ರಹ್ಮವಿದ್ಯೆ ಅಲ್ಲ. ನೀನೇ ಆ ಲೆಕ್ಕಗಳನ್ನು ಮಾಡು. ನಿನ್ನಲ್ಲಿ ‘ಮಾಡಬಲ್ಲೆ’ ಅನ್ನುವ ಕಾನ್ಫಿಡೆನ್ಸ್ ಹುಟ್ಟಿದರೆ ಪಾಠ ಒಪ್ಪಿಕೋ ಇಲ್ಲದಿದ್ರೆ ಬೇಡ. ನಮ್ಮ ಸ್ವಾರ್ಥಕ್ಕೋಸ್ಕರ ಮಕ್ಕಳಿಗೆ ಅನ್ಯಾಯ ಮಾಡಬಾರದು.”
“ಇಲ್ಲ ಅಪ್ಪ ಆ ಉದ್ದೇಶ ನನಗಿಲ್ಲ.”
ಅವಳು ಮರುದಿನವೇ ಹೋಗಿ ಟೆಕ್ಸ್ಟ್ ಬುಕ್ ಕೊಂಡುಕೊಂಡು ಬಂದಳು. ನಂತರ ಮೊದಲನೇ ಚಾಪ್ಟರ್‌ನಿಂದ ಲೆಕ್ಕಗಳನ್ನು ಮಾಡಲು ಆರಂಭಿಸಿದಳು. ಯಾವುದು ಕಷ್ಟವೆನ್ನಿಸಿತೋ ಅದನ್ನು ಸುಧಾಕರ ಚಿಕ್ಕಪ್ಪನ ಲ್ಯಾಪ್‌ಟ್ಯಾಪ್‌ಗೆ ಕಳುಹಿಸಿ ತಂದೆಗೆ ಫೋನ್ ಮಾಡಿದಳು. ಶ್ರೀನಿವಾಸ್‌ರಾವ್ ನೋಡಿ ತಾವೊಂದು ಪೇಪರ್ ಪೆನ್ಸಿಲ್ ಇಟ್ಟುಕೊಂಡು ಮಗಳಿಗೆ ಹೇಳಿಕೊಟ್ಟರು.
“ಪುಟ್ಟಿ ನೀನು ಸ್ಲೇಟು ಬಳಪ ಇಟ್ಟುಕೊಂಡು ಅಭ್ಯಾಸಮಾಡು” ಎಂದರು ರಾವ್.
ಆ ಶನಿವಾರ, ಭಾನುವಾರ ಪೂರ್ತಿ ಲೆಕ್ಕ ಮಾಡುತ್ತಾ ಕಾಲ ಕಳೆದಳು. ತುಂಬಾ ಖುಷಿಯಾಯಿತು. ಹೊಸ ವಿಷಯಗಳನ್ನು ಕಲಿತಾಗ ಆಗುವ ಖುಷಿ. ವಿಜ್ಞಾನದಲ್ಲಿ ಡೌಟ್ ಬಂದಾಗ ಬಕುಳಾ ಹೇಳಿಕೊಟ್ಟಳು.
ಒಂದು ವಾರ ಕಳೆಯುವಷ್ಟರಲ್ಲಿ ಅವಳಿಗೆ ಕಾನ್‌ಫಿಡೆನ್ಸ್ ಬಂತು. ನಾನು ಹೋಂವರ್ಕ್ ಮಾಡಿಸಬಲ್ಲೆ ಅನ್ನಿಸಿತು.

ಮಕ್ಕಳಿಗೆ ರಾಮ್‌ವರ್ಮ ರೂಂನಲ್ಲಿ ಪಾಠ ಮಾಡುತ್ತಿದ್ದಳು. ಅವರಿಗೆ ಸ್ಲೇಟು ಬಳಪ ತರಲು ಹೇಳಿದ್ದಳು. ಅವರಿಗೆ ಲೆಕ್ಕ ಮಾಡುವುದು ಹೇಗೆಂದು ಹೇಳಿಕೊಟ್ಟು ಹೋಂವರ್ಕ್ ಮಾಡಿಸುತ್ತಿದ್ದಳು. ಸುಮಾರು 6ರಿಂದ 8 ಗಂಟೆಯವರೆಗೂ ಪಾಠ. ಮಕ್ಕಳೂ ಖುಷಿಯಿಂದ ಹೋಂವರ್ಕ್ ಮಾಡುತ್ತಿದ್ದರು. ಭಾನುವಾರ ರಜಾ.
ಒಂದು ತಿಂಗಳು ಕಳೆಯಿತು. ಒಂದನೇ ತಾರೀಕು ಸಾಯಂಕಾಲ ಶಶಿಕಲಾ, ಪುಷ್ಪಾ ಅವರ ಮನೆಗೆ ಬಂದರು.
“ವಾರುಣಿ ನಾಳೆ ಮಕ್ಕಳ ಶಾಲೆಯಲ್ಲಿ ಹಳೆ ವಿದ್ಯಾರ್ಥಿಗಳ ಸಂಘದ ಕಾರ್ಯಕ್ರಮವಿದೆ. ಅದಕ್ಕೆ ಈ ಮಕ್ಕಳಿಗೆ ರಜ ಕೊಟ್ಟಿದ್ದಾರೆ. ನಾಳೆ ಪಾಠಕ್ಕೆ ಬರ‍್ತಾರೆ.”
“ಆಗಲಿ ನನಗೂ ಅನಾಯಾಸವಾಗಿ ರಜ ಸಿಕ್ಕಂತಾಯ್ತು.”
“ಮಕ್ಕಳು ಏನಂತಾರೆ? ಅವರಿಗೆ ವರು ಮಾಡುವುದು ಇಷ್ಟವಾಗುತ್ತಿದೆಯಾ?”
“ತುಂಬಾ ಇಷ್ಟವಾಗಿದೆ. ವಾರುಣಿ ಲೆಕ್ಕ ಹೇಳಿಕೊಟ್ಟು ಹೋಂವರ್ಕ್ ಮಾಡಿಸ್ತಾರಂತೆ. ಪ್ರತಿ ಪಾಠಾನೂ ಅರ್ಥಮಾಡಿಸೋದ್ರಿಂದ ಮಕ್ಕಳಲ್ಲಿ ಸುಧಾರಣೆ ಕಂಡುಬಂದಿದೆ. ಈ ಸಲ ಪೇರೆಂಟ್ಸ್ ಮೀಟಿಂಗ್‌ಗೆ ಹೋದಾಗ ಅವರ ಕ್ಲಾಸ್‌ಟೀಚರ್ಸ್ ಮಕ್ಕಳನ್ನು ಹೊಗಳಿದರು.”
“ವೆರಿಗುಡ್.”

ಅಷ್ಟರಲ್ಲಿ ವಾರುಣಿ ಕಾಫಿ ತಂದಳು.
“ಈ ಕವರ್ ತೊಗೋಳಿ ವಾರುಣಿ. 25,000 ಕೊಟ್ಟಿದ್ದೇವೆ.”
“ಅಷ್ಟೊಂದು ಯಾಕೆ?”
“ಇದುವರೆಗೂ ಪಾಠ ಹೇಳ್ತಿದ್ದ ಸುಚಿತ್ರಾ ಮನೆಗೆ ಬಂದು ಹೇಳ್ತಾಳಲ್ಲಾಂತ ಮೂವತ್ತು ಸಾವಿರ ಕೊಡ್ತಿದ್ದೆವು. ಬೋರ್ಡ್ಬೇಕೂಂತ ಹೇಳಿದ್ದಕ್ಕೆ ಅದನ್ನೂ ತರಿಸಿಕೊಟ್ಟೆವು. ಅವಳೇ ಬೋರ್ಡ್ಮೇಲೆ ಹೋಂವರ್ಕ್ ಮಾಡಿ ಬರೆದುದಕ್ಕೆ ಅನ್ನುತ್ತಿದ್ದಳು. ಮಕ್ಕಳು ಅರ್ಥವಾಗದಿದ್ದರೂ ಬರೆದುಕೊಳ್ತಿದ್ರು…..”
“ನೀವ್ಯಾರೂ ಗಮನಿಸ್ತಿರಲಿಲ್ವಾ?”
“ನಮಗೇನು ಗೊತ್ತಾಗತ್ತೆ? ದೂರದಿಂದ ಬರ‍್ತಾಳಲ್ಲಾಂತ ಬಂದ ತಕ್ಷಣ ಕಾಫಿ, ತಿಂಡಿ ಕೊಟ್ಟು ಉಪಚಾರ ಮಾಡ್ತಿದ್ದೆವು. ನನ್ನ ಮೈದುನನ ಮಗ ಬೆಂಗಳೂರಿನಲ್ಲಿ ಇಂಜಿನಿಯರ್. ಅವನು ಇಲ್ಲಿಗೆ ಬರ‍್ತಿರ‍್ತಾನೆ. ಇವಳು ಅವನನ್ನು ನೋಡಿ ವಿಚಿತ್ರವಾಗಿ ಆಡಲು ಶುರುಮಾಡಿದಳು.”
“ವಿಚಿತ್ರವಾಗಿ ಅಂದ್ರೆ?”
“ಅವನಿಗೆ ವೀಡಿಯೋ ಕಾಲ್ ಮಾಡಿ ಎರಡು ಸಲ ಮಾತಾಡಿದಳಂತೆ. ಅವನು ಹನಿಟ್ರಾಪ್ ಬಗ್ಗೆ ಕೇಳಿದ್ನೆಲ್ಲಾ ಅವಳ ನಂಬರ್ ಬ್ಲಾಕ್ ಮಾಡಿ ನಮಗೆ ತಿಳಿಸಿದ. ನಾವು ಅವಳಿಗೆ ಬುದ್ಧಿ ಹೇಳಿ ಮನೆಗೆ ಕಳಿಸಿದೆವು.”
“ಒಳ್ಳೆಯದಾಯ್ತು” ಚಂದ್ರಾವತಿ ಹೇಳಿದರು.
“ಒಳ್ಳೆಯದಾಯ್ತು. ಹುಡುಗಿಯರು ಹೀಗೂ ಇರ‍್ತಾರಾಂತ ಆಶ್ಚರ್ಯವಾಗ್ತಿದೆ. ಆದ್ದರಿಂದಲೇ ನಾವು ಮಕ್ಕಳನ್ನು ಇಲ್ಲಿಗೆ ಕಳುಹಿಸಲು ಒಪ್ಪಿದ್ದು. ನನ್ನ ಸೊಸೆಯಂತೂ ಯಾವ ಹುಡುಗಿಯರೂ ನಮ್ಮ ಮನೆಗೆ ಬರುವುದು ಬೇಡ ಅಂದುಬಿಟ್ಟಳು. ವಾರುಣಿ 2 ಗಂಟೆಗಳ ಕಾಲ ಪಾಠ ಮಾಡುವಾಗ 25,000 ಕೊಟ್ಟರೇನು ತಪ್ಪು?”
“ನನಗೆ ತುಂಬಾ ಸಹಾಯವಾಯ್ತು” ಎಂದಳು ವರು ಖುಷಿಯಿಂದ.

ಅವರು ಹೋದಮೇಲೆ ಚಂದ್ರಾವತಿ ಕೇಳಿದರು. “ನಾನು ಯಾಕೆ ಆ ಕೆಲಸ ಬೇಡಾಂತ ಹೇಳಿದೆ ಅರ್ಥವಾಯ್ತಾ?”
ಅವಳು ಅವರ ಮಡಿಲಲ್ಲಿ ಮುಖವಿಟ್ಟು ಬಿಕ್ಕಿದಳು.
“ವರು ಯಾಕಮ್ಮ ಅಳ್ತಿದ್ದೀಯಾ?”
“ನೀವು ನನಗೆ ಎಷ್ಟು ರೀತಿ ಸಹಾಯ ಮಾಡ್ತಿದ್ದೀರ. ನನ್ನ ಬಗ್ಗೆ ಯಾವ ಯಾವ ದೃಷ್ಟಿಕೋನದಿಂದ ಯೋಚಿಸ್ತೀರ ಅನ್ನುವುದನ್ನು ನಾನು ಅರ್ಥಮಾಡಿಕೊಳ್ಳದೇ ಹೋದೆ. ಅವತ್ತು ಆರ್.ಜಿ. ಮೇಲೂ ರೇಗಿಬಿಟ್ಟೆ….”
“ನಾವ್ಯಾರೂ ನಿನ್ನನ್ನು ತಪ್ಪು ತಿಳಿಯಲ್ಲ. ಕಷ್ಟಪಟ್ಟು ದುಡಿವಾಗ ಕೈ ತುಂಬಾ ಹಣ ಸಿಗಬೇಕಲ್ವಾ? ಅದಕ್ಕೆ ಆ ಕೆಲಸ ಬೇಡಾಂದೆ. ಈ ಕೆಲಸ ಸುಲಭ. ಕೆಲಸ ಮಾಡಲು ನಿನಗೂ ಖುಷಿ. ಕಲಿಯಲು ಅವರಿಗೂ ಖುಷಿ.”
“ಹೌದು ಆಂಟಿ. ಅವರು ನನ್ನ ಕೆಲಸ ಒಪ್ಪಿಕೊಂಡರಲ್ಲಾಂತ ನನಗೆ ತುಂಬಾ ಖುಷಿಯಾಗಿದೆ. ನಿಮ್ಮ ಋಣ ಹೇಗೆ ತೀರಿಸಲಿ?”
“ಋಣ-ಗಿಣಾಂತ ಮಾತಾಡಬೇಡ. ನನಗೆ ಖುಷಿಯಾಗುವ ಕೆಲಸ ಮಾಡು ಸಾಕು.”
“ಓ.ಕೆ. ಆಂಟಿ” ಎಂದಳು ವರು.


ದಿನಗಳು ಸಾಗುತ್ತಿದ್ದವು. ರಾಗಿಣಿಯನ್ನು ಹೆರಿಗೆಯಾದ ನಂತರ ಬಾಣಂತನಕ್ಕೆ ಕಳುಹಿಸುವುದಾಗಿ ಹೇಳಿದ್ದರು. ಸತ್ಯಮ್ಮನನ್ನು ಬಂದು ಮಗಳ ಜೊತೆ ಇರಲು ಹೇಳಿದ್ದರು. ಆದರೆ ಮಗನನ್ನು ಬಿಟ್ಟು ಹೋಗಲು ಸತ್ಯಮ್ಮ ಸಿದ್ಧರಿರಲಿಲ್ಲ.
ಆರ್.ಜಿ. ಒಂದು ಸಾಯಂಕಾಲ ಅನಿರೀಕ್ಷಿತವಾಗಿ ಮನೆಗೆ ಬಂದ “ಏನು ರಾಯರು ಅಪರೂಪಕ್ಕೆ ದಯಮಾಡಿಸಿದ್ದೀರಿ?”
“ನಮ್ಮ ತಂದೆ ಊರಿನ ಹತ್ತಿರ 12 ಎಕರೆ ಭೂಮಿ ತೊಗೊಂಡಿದ್ದಾರೆ. ಅವರಿಗೆ ಅಲ್ಲಿ ಬಡವರಿಗೆ ಆಸ್ಪತ್ರೆ ಕಟ್ಟಿಸಬೇಕು ಅನ್ನುವ ಯೋಚನೆ ಇದೆ. ‘ನನಗೆ ಶಾಲೆ ಆರಂಭಿಸುವ ಉದ್ದೇಶವಿರುವುದರಿಂದ ಆ ಜಾಗ ಶಾಲೆಗೆ ಸೂಕ್ತವಾಗಿದೆಯಾ…. ಶಾಲೆ ಹೇಗಿರಬೇಕು?’ ಎಲ್ಲಾ ಯೋಚಿಸಿ ತೀರ್ಮಾನಕ್ಕೆ ಬಾ” ಅಂದಿದ್ದಾರೆ.
“ನಿಮ್ಮ ತಂದೆ ನಿಜವಾಗಿ ತುಂಬಾ ಗ್ರೇಟ್.”

“ಮುಂದಿನವಾರ ನಮ್ಮನೆಯವರೆಲ್ಲಾ ತಿರುಪತಿಗೆ ಹೊರಟಿದ್ದೇವೆ. ಪ್ರತಿವರ್ಷ ತಿರುಪತಿಗೆ ಹೋಗಿ ಬಂದು, ನಮ್ಮ ಊರಿನ ವೆಂಕಟರಮಣಸ್ವಾಮಿ ದೇವಸ್ಥಾನದಲ್ಲಿ ಪೂಜೆ ಮಾಡಿಸಿ ಊರಿನವರಿಗೆಲ್ಲಾ ಊಟ ಹಾಕ್ತೀವಿ.”
“ಹೌದಾ?”
“ಈ ಸಲ ಮನೆದೇವರ ಹಬ್ಬಕ್ಕೆ ನೀವು ಬರಬೇಕು.”
“ನಾನು ಬರಬೇಕಾ?”
“ವಾರುಣಿ ತಂದೆಗೆ ಫೋನ್ ಮಾಡಿದ್ದೆ. ‘ಶಾಲೆ ತೆಗೆಯಲು ಆ ಜಾಗ ಚೆನ್ನಾಗಿದೆಯಾ ನೋಡೀಂತ ಆಹ್ವಾನಿಸಿದೆ’. ಅವರು ವಾರುಣಿ ತಾಯಿ, ತಮ್ಮ-ತಂಗಿ, ಚಿಕ್ಕಮ್ಮ, ಚಿಕ್ಕಪ್ಪ ಅವರ ಮಗ ರ‍್ತಾರಂತೆ.”
“ವಾರುಣಿ?”
“ಅವರನ್ನು ಒಪ್ಪಿಸುವ ಭಾರ ನಿಮ್ಮದು.”

“ನೀನೇ ಕರಿ. ಅವಳ ಮನೆಯವರು ಬರ‍್ತಾರೇಂತ ಗೊತ್ತಾದರೆ ಖಂಡಿತಾ ಅವಳು ಬರ‍್ತಾಳೆ. ನಾವಿಷ್ಟು ಜನ ಬಂದ್ರೆ ನಮಗೆ ಇಳಿದುಕೊಳ್ಳಲು ಎಲ್ಲಿ ವ್ಯವಸ್ಥೆ ಮಾಡ್ತೀಯಾ?”
“ಆಂಟಿ ನಮ್ಮ ಮನೆಯ ಪಕ್ಕದಲ್ಲೇ ಒಂದು ದೊಡ್ಡ ಮನೆ ಇದೆ. ಸಧ್ಯಕ್ಕೆ ನಮ್ಮ ಚಿಕ್ಕಪ್ಪನ ಕುಟುಂಬ ಅಲ್ಲಿದೆ. ಆದರೆ ತಿಂಡಿ, ಊಟ ನಮ್ಮ ಜೊತೇನೇ ಮಾಡ್ತಾರೆ. ಆ ಮನೆಯಲ್ಲಿ ಹತ್ತು ರೂಮುಗಳಿವೆ. 5 ರೂಮುಗಳಿಗೆ ಅಟ್ಯಚ್ಡ್ ಬಾತ್‌ರೂಂಗಳಿವೆ. ಅದಲ್ಲದೆ ಹಿಂದುಗಡೆ ಸ್ನಾನದ ಮನೆ, ಟಾಯ್ಲೆಟ್ ಇದೆ.”
“ನೀವು ರಾಜ ವಂಶಸ್ಥರಾ?”
“ಇಲ್ಲ ಆಂಟಿ. ನಮ್ಮ ದೊಡ್ಡಪ್ಪ-ದೊಡ್ಡಮ್ಮ ಇಬ್ಬರ ಪರಿಶ್ರಮದಿಂದ ಆಸ್ತಿ ಮಾಡಲು ಸಾಧ್ಯವಾಗಿದೆ. ನಮ್ಮ ದೊಡ್ಡಪ್ಪ ಧರ್ಮಬೀರು. ಕಪಟ, ಮೋಸ, ವಂಚನೆ ಅವರ ಹತ್ತಿರ ಸುಳಿಯಲ್ಲ. ನಮ್ಮನೆಯಲ್ಲಿ ನಮ್ಮ ತಂದೆ, ಇನ್ನೊಬ್ಬ ದೊಡ್ಡಪ್ಪ ಅಣ್ಣ ಹಾಕಿದ ಗೆರೆದಾಟಲ್ಲ. ಹೆಂಗಸರೂ ತುಂಬಾ ಹೊಂದಿಕೊಂಡಿದ್ದಾರೆ.”
“ಅಂತಹ ಜನರನ್ನು ನೋಡಲೇಬೇಕು. ನೀನು ವಾರುಣಿಗೆ ಹೇಳು. ಅವಳು ಒಪ್ಪದಿದ್ದರೆ ಅವಳನ್ನು ಒಪ್ಪಿಸುವ ಭಾರ ನನ್ನದು.”

ಅವನಿಗೆ ಖುಷಿಯಾಯಿತು. ಆ ದಿನ ಸಾಯಂಕಾಲ 71/2 ಹೊತ್ತಿಗೆ ಚಂದ್ರಾವತಿ ಮನೆಗೆ ಬಂದ. ವರು ಮಕ್ಕಳಿಗೆ ಪಾಠ ಮಾಡುತ್ತಿದ್ದಳು.
“ಮಕ್ಕಳು ಇನ್ನೇನು ಹೊರಡುತ್ತಾರೆ. ಆಮೇಲೆ ನನ್ನ ಎದುರಿಗೇ ಕೇಳು.”
ವಾರುಣಿ ಹೊರಗೆ ಬಂದಳು.
“ವರು ಆರ್.ಜಿ. ನಿನ್ನನ್ನು ಏನೋ ಕೇಳಬೇಕಂತೆ.”
“ಏನು ಆರ್.ಜಿ.ಯವರೇ?”
“ನಿಮ್ತಂದೆ ನಮ್ಮ ಊರಿನ ಪ್ರೋಗ್ರಾಂ ಬಗ್ಗೆ ಹೇಳಿರಬೇಕಲ್ವಾ?”
“ಹುಂ ಹೇಳಿದರು.”
“ಆಂಟೀನೂ ಬರ‍್ತಿದ್ದಾರೆ. ನೀವೂ ಬರಬೇಕು.”
“ನನಗೆ ಬರಕ್ಕಾಗಲ್ಲ. ಭಾನುವಾರ ಹೋಗಿ ಬುಧವಾರ ಬರುವುದೂಂದ್ರೆ ಮಕ್ಕಳಿಗೆ ಪಾಠ ಹೋಗತ್ತೆ……..”

“ಬಹಳ ಜಂಭ ನಿಮಗೆ? ಯಾರೂ ಮಾಡದ ಮನೆಪಾಠ ನೀವು ಮಾಡ್ತಿದ್ದೀರಾ? ಮಾನಸ ನಿಮ್ಮ ಫ್ರೆಂಡ್ ಅವರ ಮದುವೆಗೂ ಹೋಗಲಿಲ್ಲ. ರಾಗಿಣಿ ನಿಮ್ಮ ಕ್ಲೋಸ್‌ಫ್ರೆಂಡ್ ಅವರ ಮದುವೆಗೂ ಬರಲಿಲ್ಲ. ಈಗ ನನ್ನ ಮಾತಿಗೂ ಬೆಲೆಯಿಲ್ಲ……..”
“ಹಾಗಲ್ಲ……..”
“ಸಾಕು ಮಾತು. ನಿಮಗೆ ನನ್ನ ಫ್ರೆಂಡ್‌ಶಿಪ್ ಇಷ್ಟವಿಲ್ಲದಿದ್ರೆ ಹೇಳಿ ನಾಳೆಯಿಂದ ಈ ಮನೆಗೆ ಕಾಲಿಡಲ್ಲ” ಅವನು ಕೈಯಲ್ಲಿದ್ದ ಪೇಪರ್ ಎಸೆದು ಹೊರಗೆ ಹೋದ.
“ನೋಡಿ ಆಂಟಿ……”
“ಅವನು ಹೇಳ್ತಿರೋದ್ರಲ್ಲಿ ತಪ್ಪಿಲ್ಲ ವರು. ಕೆಲವು ವಿಚಾರಗಳಲ್ಲಿ ನೀನು ಅತಿ ಆಡ್ತೀಯಾಂತ ನನಗೂ ಅನ್ನಿಸಿದೆ. ರಾಗಿಣಿ ಕೂಡ ನೀನು ಮದುವೆಗೆ ಬಾರದಿದ್ದುದಕ್ಕೆ ತುಂಬಾ ಬೇಜಾರು ಮಾಡಿಕೊಂಡಳು. ನೀನು ಮನೆಪಾಠ ಮಾಡ್ತಿದ್ದೀಯ ನಿಜ. ಮೂರು ದಿನ ಅವರು ಅಡ್ಜೆಸ್ಟ್ ಮಾಡಿಕೊಳ್ಳಲ್ವಾ? ಆ ಹುಡುಗ ಅಷ್ಟು ಅಭಿಮಾನದಿಂದ ಕರೆಯುತ್ತಿರುವಾಗ ಅವನ ಮನಸ್ಸು ನೋಯಿಸುವುದು ತಪ್ಪಲ್ವಾ?”
“ಸಾರಿ ಆಂಟಿ”
“ನೀನು ಸಾರಿ ಕೇಳಬೇಕಿರುವುದು ನನ್ನನ್ನು ಅಲ್ಲ, ಅವನನ್ನು……”
ಅವಳು ಏನು ಮಾತನಾಡಬೇಕೋ ತಿಳಿಯದೆ ಮೌನಕ್ಕೆ ಶರಣಾದಳು.

“ಫೋನ್ ಮಾಡಿ ಸಾರಿ ಕೇಳಿ ಊಟಕ್ಕೆ ಆಹ್ವಾನಿಸು.”
ಅವಳು ಫೋನ್ ಹಿಡಿದು ಹೊರಗೆ ಬಂದು ಆರ್.ಜಿ.ಗೆ ಕಾಲ್ ಮಾಡಿದಳು. ಅವನು ರಿಸೀವ್ ಮಾಡಲಿಲ್ಲ. ಚಂದ್ರಾವತಿ ಅವಳ ಹಿಂದೆ ಬಂದು ಹೇಳಿದರು. “ನನ್ನ ಫೋನ್‌ನಿಂದ ಕಾಲ್‌ಮಾಡು ಮಾತಾಡ್ತಾನೆ.”
ಅವಳು ಕಾಲ್ ಮಾಡಿದಳು.
“ಹೇಳಿ ಆಂಟಿ.”
“ಸಾರಿ ಆರ್.ಜಿ.ಯವರೆ. ದಯವಿಟ್ಟು ಕ್ಷಮಿಸಿ ಮನೆಗೆ ಬನ್ನಿ. ನಾನು ನಿಮ್ಮೂರಿಗೆ ಬರ‍್ತೀನಿ.”
“ಅದರ ಅಗತ್ಯವಿಲ್ಲ. ನೀವು ಬರದೇ ಇದ್ರೂ ಹಬ್ಬ ನಡೆಯತ್ತೆ.”
“ಸಾರಿ ಕೇಳಾಯ್ತಲ್ಲ. ಹಠಮಾಡದೆ ಮನೆಗೆ ಬನ್ನಿ.”
ಅವನು ಕಾಲ್ ಕಟ್ ಮಾಡಿದ.
“ಅವನು ಬಂದೇ ಬರ‍್ತಾನೆ. ನಾನು ಮೊಸರು ಬಜ್ಜಿ ಮಾಡ್ತೀನಿ” ಎನ್ನುತ್ತಾ ಚಂದ್ರಾವತಿ ಒಳಗೆ ನಡೆದರು.
ಹತ್ತು ನಿಮಿಷಗಳ ನಂತರ ಬಂದು ಅವನು ಅವಳೆದುರು ಕುಳಿತ.
“ಕೋಪಾ ಹೋಯ್ತಾ?”
“ಬೇರೆ ಯಾರಾದರೂ ನಿಮ್ಮ ಹಾಗೆ ಮಾತಾಡಿದ್ದಿದ್ರೆ ನಾಲಕ್ಕು ಬಾರಿಸ್ತಿದ್ದೆ………”
“ಈಗಲೂ ಬಾರಿಸಿ…….”
“ಆಮೇಲೆ ಆಂಟಿ ಪೋಲಿಸ್‌ನವರನ್ನು ಕರೆಸ್ತಾರಷ್ಟೆ” ಇಬ್ಬರೂ ಜೋರಾಗಿ ನಕ್ಕರು.

ಈ ಕಾದಂಬರಿಯ ಹಿಂದಿನ ಪುಟ ಇಲ್ಲಿದೆ : https://surahonne.com/?p=44581
(ಮುಂದುವರಿಯುವುದು)

ಸಿ.ಎನ್. ಮುಕ್ತಾಮೈಸೂರು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *