ರಮೇಶನಿಗೆ ಮದುವೆಯಾಯಿತು. ಮುದ್ದಾದ ಹುಡುಗಿ ಮನೆ ತುಂಬಿದಳು. ರಮೇಶನ ತಾಯಿ ತಾವೇ ಹುಡುಕಿ ಆರಿಸಿದ ಹುಡುಗಿ ಅಪೂರ್ವ. ಒಂದು ತಿಂಗಳವರೆಗೆ ಎಲ್ಲಾ ಚೆನ್ನಾಗಿತ್ತು. ಬೆಳಿಗ್ಗೆ ಬೇಗ ಎದ್ದು ಎಲ್ಲಾ ಕೆಲಸ ಮಾಡಿ ಮುಗಿಸುತ್ತಿದ್ದರು. ಸೊಸೆ ಬಣ್ಣಬಣ್ಣವಾಗಿ ಅಲಂಕರಿಸಿಕೊಂಡು ಚಂದನದ ಗೊಂಬೆಯಂತೆ ಓಡಾಡುತ್ತಿದ್ದಳು.
ಒಂದು ತಿಂಗಳು ಕಳೆಯಿತು, ಎರಡು… ಮೂರು ನಾಲ್ಕು ತಿಂಗಳಾಯ್ತು. ಆಗ ಶುರುವಾಯ್ತು ರಮೇಶನ ಮನೇಲಿ ಸದ್ದು… ಗದ್ದಲ… ಗಲಾಟೆ… ತಟ್ಟೆಗಳು ಹಾರಾಡಿದವು…. ಚಮಚಗಳು ಕುಣಿದಾಡಿದವು….
ರಮೇಶ ತಲೆ ಒತ್ತಿಕೊಳ್ಳುತ್ತಾ ಗೇಟಿನ ಬಳಿ ಬಂದು ನಿಲ್ಲುತ್ತಿದ್ದ.
ಇದನ್ನೆಲ್ಲಾ ರಮೇಶನ ಪಕ್ಕದ ಮನೆಯ ಪರಮೇಶಿ ಗಮನಿಸುತ್ತಲೇ ಇದ್ದ. ಒಂದು ದಿವಸ ಪರಮೇಶಿ ಮನೆಯ ಮುಂದೆ ಹಸಿರು ಚಪ್ಪರ ಮೇಲೆದ್ದಿತು.
ಪರಮೇಶಿ ಮದುವೆ ಸರಳವಾಗಿ ನಡೆಯಿತು, ಅವನದು ಪ್ರೇಮವಿವಾಹವೆಂದು ತಿಳಿದ ರಮೇಶ ಗಾಬರಿಯಾದ.
“ಪಾಪ… ನಮ್ಮ ಪರಮೇಶಿ… ನಮ್ಮನೇಲಿ ಅಮ್ಮನೇ ಹುಡುಕಿ ಮದುವೆ ಮಾಡಿದ ಹುಡುಗಿ… ಅಂತಹುದರಲ್ಲೇ ದಿನನಿತ್ಯ ಅದೇ ಗಲಾಟೆ… ಅದೇ ಗದ್ದಲ… ಇನ್ನು ಪರಮೇಶಿಯ ಮನೆಕಥೆ ಊಹಿಸಲೂ ಸಾಧ್ಯವಿಲ್ಲ…’ ಅಂದುಕೊಂಡ. ಆದರೆ ತಮಾಷೆ ಅಂದ್ರೆ ಪರಮೇಶಿ ಮದುವೆಯಾಗಿ ಬರೀ ಮೂರಲ್ಲ, ಆರು ತಿಂಗಳಾದ್ರೂ ಅವರ ಮನೇಲಿ ಯಾವುದೇ ಗದ್ದಲ, ಗಲಾಟೆಗಳು ನಡೆಯಲೇ ಇಲ್ಲ. ಅದರಬದಲು ಮನೆ ಮುಂದಿನ ಗಾರ್ಡನ್ ನಲ್ಲಿ ಅತ್ತೆ-ಸೊಸೆ ಇಬ್ರೂ ಕೂತು ಪುಸ್ತಕ ಓದ್ತಾ ಟೀ ಕುಡೀತಿದ್ದ ದೃಶ್ಯ ಕಂಡ ರಮೇಶ ಬೆಕ್ಕಸ ಬೆರಗಾದ.
ಒಮ್ಮೆ ದಾರಿಯಲ್ಲಿ ಪರಮೇಶಿ ಸಿಕ್ಕಿದಾಗ ಕುತೂಹಲ ತಡೆಯಲಾರದೇ ಇದರ ಬಗ್ಗೆ ಕೇಳಿಯೇ ಬಿಟ್ಟ.
“ಅಯ್ಯೋ ರಮೇಶ, ನಿನ್ನ ಮನೆ ಪಕ್ಕದಲ್ಲೇ ಇರುವ ನಂಗೆ ನಿನ್ನ ಪರಿಸ್ಥಿತಿ ಅರ್ಥವಾಗೋಲ್ವೇನೊ? ಹಾಗಂತ ಹೆದರಿಕೊಂಡು ನಾನು ಮದುವೆ ಆಗದೇ ಇರೋಕೆ ಸಾಧ್ಯವೆ? ಅದಕ್ಕೆ ಒಂದು ಪ್ಲಾನ್ ಮಾಡಿದೆ.”
“ಏನೋ ಪರಮೇಶಿ ನಿನ್ನ ಪ್ಲಾನು?”
“ನನ್ನ ಹೆಂಡತಿ ಗುಜರಾತಿ ಅಂತ ನಿಂಗೆ ಗೊತ್ತಿರಬಹುದು. ಅವಳಿಗೆ ಕನ್ನಡ ಒಂದಕ್ಷರವೂ ಬರೋಲ್ಲ. ಅಮ್ಮನಿಗಂತೂ ಗುಜರಾತಿಯ ಗಂಧಗಾಳಿ ಗೊತ್ತಿಲ್ಲ. ಯಾವಾಗ್ಲಾದ್ರೂ ಅಲ್ಪ ಸ್ವಲ್ಪ ಎಡವಟ್ಟಾದ್ರೆ ನಾನು ರಾಂಗ್ ಟ್ರಾನ್ಸ್ಲೇಶನ್ ಮಾಡಿಬಿಟ್ಟು ಪರಿಸ್ಥಿತಿ ಸುಧಾರಿಸ್ತೀನಿ. ಸಂದರ್ಭ ಹೀಗಿರುವಾಗ ಗಲಾಟೆ ಜಗಳ ಎಲ್ಲಾಗುತ್ತೆ ಹೇಳು?”
ಪರಮೇಶಿ ಗಹಗಹಿಸಿ ನಗುತ್ತಾ ಹೇಳಿದ.
“ಗೆಳೆಯಾ ನೀನು ಸಧ್ಯಕ್ಕಂತೂ ನೆಮ್ಮದಿಯಾಗಿದ್ದೀಯ. ಅದೇ ಸಂತೋಷ ಕಣೋ… ಗುಡ್ ಲಕ್.”
ರಮೇಶ ಪರಮೇಶಿಯ ಬೆನ್ನುತಟ್ಟಿ ಕಾಲೆಳೆದುಕೊಂಡು ನಿಧಾನವಾಗಿ ಹೊರಟು ಹೋದ.

ಸವಿತಾ ಪ್ರಭಾಕರ್, ಮೈಸೂರು





ಚಿಕ್ಕ ಕಥೆ ಚೊಕ್ಕವಾಗಿ ಮೂಡಿಬಂದಿದೆ..ಗೆಳತಿ
Nice
ಬೆಟ್ಟದಷ್ಟು ಅರ್ಥವನ್ನು ನೀಡುವ ಪುಟ್ಟ ಕಥೆಯು ಇಷ್ಟವಾಯ್ತು!