ಕಾವ್ಯ ಭಾಗವತ : ದಾಕ್ಷಾಯಿಣಿ – 02
17. ದಾಕ್ಷಾಯಿಣಿ -೦೨
ಚತುರ್ಥ ಸ್ಕಂದ – ಅಧ್ಯಾಯ – ೦೧
ಪತಿಯ ನುಡಿಯ ಧಿಕ್ಕರಿಸಿ
ತವರಿಗೆ ಬಂದ ಸತಿಗೆ
ಸುಖವುಂಟೆ?
ಸತ್ ಯಾಗದ ತಾಣ
ಅದೆಷ್ಟು ಮನೋಹರ?
ವೇದಘೋಷಗಳ ನಡುವೆ
ಮಹರ್ಷಿಗಳ
ಋತ್ವಿಕ್ ಬ್ರಾಹ್ಮಣರ
ಸಮಾಗಮ
ನೇತ್ರಾನಂದಕರ
ಹೋಮಕುಂಡದ ಬಳಿ
ದರ್ಭೆ, ಅಜಿನ, ಮೃತ್ಪಾತ್ರಗಳ
ಕಮಂಡಲಗಳ
ಸುಂದರ ಸಮಾರಂಭ
ಸಂಭ್ರಮ
ಏನಾದರೇನು? ಕಿರಿಯ ಮಗಳ
ಆಗಮನವ ನೋಡಿಯೂ ನೋಡದಂತೆ
ಮುಖ ತಿರುಗಿಸಿ, ಮೌನನಾದ
ಶಿವದ್ವೇಷಿ ದಕ್ಷ
ಅವನ ಭಯಕೆ
ಒಂದು ಕ್ಷಣ ಕಂಪಿಸಿದರೂ
ಮಾತೃ ಹೃದಯ
ದ್ರವೀಭೂತವಾಗಿ
ಮಗಳ ಸ್ವಾಗತಿಸಿದರೂ
ಶಿವ ಪತ್ನಿಗೆ
ಎಲ್ಲಿ ಸಮಾಧಾನ?
ದುರಹಂಕಾರೀ ದಕ್ಷ
ಪರಶಿವಗೆ ಸಲ್ಲಿಸಲೇಬೇಕಾದ
ಅವನ ಹಕ್ಕಾದ,
ಹೋಮ ಹವಿರ್ಭಾಗವ
ಸಲ್ಲಿಸದೆ
ಅಪಚಾರವೆಸಗಿದ
ಪಿತನ ನಡೆಗೆ ನೊಂದು
ಉದ್ಗರಿಸಿದ ಮಾತುಗಳೆಷ್ಟು ಸತ್ಯ
ಸತ್ಯಯುತ ಶಿವ
ಕೇವಲ ಆತ್ಮಾನಂದನಿರತ
ಸಮಸ್ತ ಭೂತಗಳಲಿ ಸಮಭಾವ ತತ್ವ
ಭಸ್ಮಧಾರೀ, ರುಂಡಮಾಲೀ
ಸ್ಮಶಾನವಾಸಿಯ
ಜೀವತತ್ವಗಳನರಿಯದ
ದಕ್ಷಯಜ್ಞ ನಿರರ್ಥಕ
ಶಿವದ್ವೇಷೀ ದಕ್ಷನಿಂದ
ಪಡೆದ ದೇಹವ ವಿಸರ್ಜಿಸಿ
ತನ್ನ ಹೃದಯ ಜ್ವಾಲೆಯ
ಶಮನಿಸಲು, ಶಿವಪತ್ನಿ
ಯೋಗಸಾಧನೆಯಲ್ಲಿ
ಪ್ರಾಣವಾಯುವ ಬಂಧಿಸಿ
ಯೋಗಾಗ್ನಿಯಿಂದ
ತನ್ನ ದೇಹವ ದಹಿಸಿ
ಅನಿಲಾಗ್ನಿಧಾರಣೆಯ
ಸಮಾಧಿಯಲಿ ತಪೋಜ್ವಾಲೆಯಲಿ
ದೇಹವ ಭಸ್ಮವಾಗಿಸಿ
ಶಿವೈಕ್ಯಳಾದ ಶಿವೆಯ
ಜೀವಿತ, ಈ ಜಗಕೆ
ಎಷ್ಟು ದುಖಃಮಯ?
ಕಾವ್ಯ ಭಾಗವತ ಸರಣಿಯ ಹಿಂದಿನ ಪುಟ ಇಲ್ಲಿದೆ : https://www.surahonne.com/?p=41282
(ಮುಂದುವರಿಯುವುದು)
-ಎಂ. ಆರ್. ಆನಂದ, ಮೈಸೂರು
ಪುರಾಣದ ಮನಕಲಕುವ ಘಟನೆಯೊಂದರ ಸಮರ್ಥ ಚಿತ್ರಣ. ಅಭಿನಂದನೆಗಳು.
ಸರಳ ಪದಗಳಲ್ಲಿ ಭಾಗವತದ ಪಾತ್ರಗಳನ್ನು ನಮ್ಮ ಕಣ್ಮುಂದೆ ಚಿತ್ರಿಸುವ ತಮಗೆ ಧನ್ಯವಾದಗಳು
ಏನೇ ಹೇಳಿ ಸಾರ್ ನನಗೆ ಭಾಗವತವನ್ನು ಓದಲು ಪ್ರೇರಣೆ ನೀಡುತ್ತಿರುವ ನಿಮ್ಮ ಕಾವ್ಯ ಭಾಗವತದ ರಚನೆಗೆ ಶರಣು
Beautiful
ದಾಕ್ಷಾಯಿಣಿಯ ದ್ವಂದ್ವ ಮನಸ್ಥಿತಿ , ದಕ್ಷನ ಧೂರ್ತ ವರ್ತನೆ ಇತ್ಯಾದಿಗಳು ಸಮರ್ಥವಾಗಿ, ಸರಳವಾಗಿ ಮೂಡಿಬಂದ ಕಾವ್ಯ ಭಾಗವತವು ಬಹು ಸುಂದರ!