ಸಾವೆಂಬ ಸೂತಕ

Share Button

ಎಲ್ಲ ದಾರ್ಶನಿಕರೂ ರಹಸ್ಯದರ್ಶಿಗಳೂ ಅನುಭಾವಿಗಳೂ ಪುನರ್ಜನ್ಮವನ್ನು ಕುರಿತು ಸಕಾರಾತ್ಮಕವಾಗಿದ್ದಾರೆ. ಏಕೆಂದರೆ ಅವರಿಗದು ಅನುಭವವೇದ್ಯ. ಪುನರ್ಜನ್ಮವೆಂದರೆ ನಾವು ಮನುಷ್ಯರಾಗಿಯೋ ಪಶುಪಕ್ಷಿಗಳಾಗಿಯೋ ಮತ್ತೆ ಜನಿಸುತ್ತೇವೆಂದಲ್ಲ! ಇದಕಾವ ಸಾಕ್ಷಿ, ಪುರಾವೆಗಳೂ ಇಲ್ಲ!! ನಿನ್ನೆ ನಾನು ಜೀವಿಸಿದ್ದೆ. ಹಾಗಾಗಿ ಇಂದು ಎಂಬುದು ನನಗೆ ಪುನರ್ಜನ್ಮ ಅಷ್ಟೇ. ನಾಳೆ ಎಂಬುದು ನನ್ನ ಪಾಲಿಗೆ ಸಿಕ್ಕರೆ ಅದೂ ಪುನರ್ಜನ್ಮವೇ! ನಾಳೆಗೆ ನಿನ್ನೆ ನನಗೆ ಪೂರ್ವಜನ್ಮ. ಪ್ರತಿ ಉಚ್ಚ್ವಾಸ, ನಿಶ್ವಾಸಗಳು ಹುಟ್ಟು ಸಾವಿನ ದ್ಯೋತಕ. ದಿನದ ಪ್ರತಿ ನಿದ್ರೆಯೂ ನಮಗೆ ಮೃತ್ಯುಸಮಾನವೇ. ಎಚ್ಚರಾದರೆ ಅದು ಪುನರ್ಜನ್ಮ. ‘ನಿದ್ದೆಗೊಮ್ಮೆ ನಿತ್ಯ ಮರಣ; ಎದ್ದ ಸಲ ನವೀನ ಜನನ’ ಎಂದಿಲ್ಲವೇ ಕವಿ ಬೇಂದ್ರೆಯವರು. ಹುಟ್ಟಿದ್ದೇವೆಂದರೆ ಸಾಯುತ್ತೇವೆಂದರ್ಥ; ಸತ್ತಿದ್ದೇವೆಂದರೆ ಮತ್ತೆ ಹುಟ್ಟುತ್ತೇವೆಂದರ್ಥ. ಇದಕೆ ಯಾವ ವೈಜ್ಞಾನಿಕ ಮತ್ತು ತಾಂತ್ರಿಕ ಸಾಕ್ಷ್ಯಾಧಾರಗಳು ಬೇಕಿಲ್ಲ. ನನ್ನೊಳಗು ಎಚ್ಚರವಿದ್ದರೆ ಸಾವಿರ, ಲಕ್ಷ ನಿದರ್ಶನಗಳ ದರ್ಶನ ಲಭಿಸುವುದು. ಈ ಪುರಾವೆ, ಸಮಜಾಯಿಷಿಗಳೆಲ್ಲ ಬೇಕಿರುವುದು ಇನ್ನೊಬ್ಬರಿಗೆ ಅರ್ಥ ಮಾಡಿಸಲು ಮತ್ತು ತೃಪ್ತಿ ಪಡಿಸಲು! ಇದರ ಗೋಜಿಗೆ ಹೋಗದಿದ್ದರೆ ಮಾತ್ರ ನನ್ನೊಳಗು ಸದಾ ಜೀವಂತವಾಗಿ ಮಿಡಿಯವುದು; ಮತ್ತೊಬ್ಬರಿಗೆ ಅರ್ಥ ಮಾಡಿಸುವ ವ್ಯರ್ಥ ಸಾಹಸ ಕೈಗೊಂಡಾಗಲೇ ಅದು ಮಡಿಯುವುದು. ಇನ್ನೊಬ್ಬರಿಗೆ ಅರ್ಥ ಮಾಡಿಸುವುದು ವಿಜ್ಞಾನ; ತನ್ನ ಪಾಡಿಗೆ ತಾನು ಅರ್ಥ ಮಾಡಿಕೊಂಡು ಬದುಕುವುದು ಮೂಲ ಪ್ರಕೃತಿ ಅಷ್ಟೇ. ಈ ಮೂಲಭೂತವಾದುದನ್ನು ಪುರಾವೆಗಳಿಂದ ಸ್ಥಿರೀಕರಿಸಿ ಪ್ರತಿಪಾದಿಸುವುದು ವಿಜ್ಞಾನದ ಧರ್ಮ; ನಿಸರ್ಗದ ಗುಟ್ಟುಗಳನ್ನರಿತು, ಮಿತಿಗಳನ್ನು ಮೀರಿ, ಅಡೆತಡೆಗಳನ್ನು ದಾಟುತ್ತ, ಎದುರಾದುದನ್ನು ಸ್ವೀಕರಿಸುವುದು ಧರ್ಮದ ವಿಜ್ಞಾನ! ಇರುವುದೊಂದೇ ಬೆಳಕಿನರಮನೆ; ಅದಕೆ ನೂರು ಸಾವಿರ ಮಾರ್ಗ. ಮಾರ್ಗಗಳೇ ಮಹಲಲ್ಲ; ಮಹಲನು ತಲಪಲು ಇರುವ ಹಾದಿಯಷ್ಟೇ. ಹೀಗಾಗಿ ರಹಸ್ಯದರ್ಶಿಗಳ ಮಾತನ್ನು ನಮ್ಮ ಇತಿಮಿತಿಗಳಲ್ಲಿ, ಸೀಮಿತ ಚೌಕಟ್ಟಿನಲ್ಲಿ ಅರ್ಥ ಮಾಡಿಕೊಳ್ಳುವುದರಿಂದ ವಾಚ್ಯಾರ್ಥವೇ ಪ್ರಧಾನವಾಗಿ ಬಿಡುವುದು. ಸಾವೇ ಕೊನೆಯಲ್ಲ ಎಂಬುದು ನಮ್ಮ ಆಂತರ್ಯಕ್ಕೆ ಅರಿವಾಗುತ್ತಿರುತ್ತದೆ. ಸಾವಿನಾಚೆಗೂ ಬದುಕಿದೆ; ಸಾವೆನ್ನುವುದು ರೂಪಾಂತರವೇ ವಿನಾ ಸರ್ವನಾಶವಲ್ಲ ಎಂಬುದೊಂದು ತಿಳಿವಳಿಕೆ.

ಹಾಗೆ ನೋಡಿದರೆ ವಿಶ್ವದಲ್ಲಿ ಯಾವುದೂ ಪೂರ್ಣ ಪ್ರಮಾಣದಲ್ಲಿ ಮಡಿಯುವುದಿಲ್ಲ. ಒಂದು ಇನ್ನೊಂದಾಗುತ್ತದೆ. ಗುಣ, ರೂಪ, ಸ್ವಭಾವಗಳು ಬದಲಾಗುತ್ತವೆ. ಹಳೆಯದು ಹೊಸದಾಗುತ್ತದೆ; ಹೊಸದು ಹಳೆಯದಾಗುತ್ತದೆ. ಇದು ನನ್ನ ದೃಷ್ಟಿಗೆ ಅಷ್ಟೇ; ಸೃಷ್ಟಿಗಲ್ಲ! ಸೃಷ್ಟಿಯು ಹಳೆಯದೂ ಅಲ್ಲ; ಹೊಸದೂ ಅಲ್ಲ. ನೀರು ಆವಿಯಾಗಿ ಮೇಲೇರಿ, ಮೋಡವಾಗಿ ಮಳೆಯಾಗಿ ನೆಲಕ್ಕೆ ಧಾರಾಕಾರ ಸುರಿದು ಒಳಗಿಳಿದು ಅಂತರ್ಜಲವಾಗಿ, ಮತ್ತೆ ಮೇಲೆ ಬಂದು ಆವಿಯಾಗಿ……… ಹೀಗೆ ನಿರಂತರ ರೂಪಾಂತರಗೊಳ್ಳುವ ಪ್ರಕ್ರಿಯೆಯೇ ಪ್ರಕೃತಿ. ಪಂಚಭೂತಗಳಿಂದಾದ ನಮ್ಮ ಈ ಶರೀರವೂ ಹಾಗೆಯೇ. ಪ್ರಾಣರೂಪೀ ಚೈತನ್ಯವೂ ಅಷ್ಟೇ. ಇಂಥ ಶಕ್ತಿಯ ರೂಪಾಂತರವನ್ನೇ ಜನ್ಮ ಎನ್ನುವುದು.

ಎಲ್ಲ ವಾದ, ಭೇದಗಳನ್ನು ಪಕ್ಕಕೆ ಸರಿಸಿ, ಸಂವೇದನಾಶೀಲರಾದರೆ ಸಾಹಿತ್ಯ, ಸಂಗೀತ ಮತ್ತು ಅನುಭಾವ ಜಗತ್ತು ಇನ್ನಷ್ಟು ಆಪ್ತವಾಗುವುದು. ಸ್ವಕೇಂದ್ರಿತ ಚಿಂತನೆ ಕೈ ಬಿಟ್ಟು ಸುಮ್ಮನೆ ಧ್ಯಾನಸ್ಥರಾಗಿ, ಅಖಂಡ ವಿಶ್ವದೊಂದಿಗೆ ಕನೆಕ್ಟ್ ಮಾಡಿಕೊಂಡರೆ ಅನುಭಾವಿಗಳ ಮಾತು ಅನುಭವಕ್ಕೆ ಬರುವುದು ಖಚಿತ. ನಾನತ್ವವು ಸಾಯಬೇಕು ಎಂದರೆ ನಾನು ಸಾಯುವುದಲ್ಲ; ನನ್ನೊಳಗೆ ಮನೆ ಮಾಡಿರುವ ಅಹಂ ನಿರಸನಗೊಂಡು, ಅದರ ಜಾಗದಲ್ಲಿ ವಿನಮ್ರತೆ ಮೂಡುವುದು ಎಂದರ್ಥ. ಸಚರಾಚರಗಳ ಲಕ್ಷಣವೆಂದರೆ ಶಕ್ತಿಯ ರೂಪಾಂತರ. ಒಂದು ಇನ್ನೊಂದಾಗುವುದು. ಒಂದು ಇನ್ನೊಂದಾದಾಗ ಶಕ್ತಿ ಸುಪ್ತವಾಸ್ಥೆಯಲ್ಲೋ ಗುಪ್ತಾವಸ್ಥೆಯಲ್ಲೋ ಅಡಗಿರುವುದು. ಚೇತನಮೂರ್ತಿಯು ಕಲ್ಲು; ತೆಗೆ, ಜಡವೆಂಬುದು ಬರಿ ಸುಳ್ಳು ಎಂಬ ಕುವೆಂಪು ಅವರ ಕವಿಕಾಣ್ಕೆಯಲ್ಲಿ ಅಧ್ಯಾತ್ಮವೂ ಇದೆ, ವಿಜ್ಞಾನವೂ ಇದೆ! ಹೆಸರಿನ ಲೇಬಲ್ಲು ಯಾವುದಾದರೇನು? ಗುಣಧರ್ಮವೊಂದೇ. ನನ್ನ ಅನುಕೂಲಕ್ಕೆ ಇದು ವಿಜ್ಞಾನ, ಇದು ಅವಿಜ್ಞಾನ ಎಂದು ಹೇಳಿಕೊಂಡ ಮಾತ್ರಕೇ ವಿಶ್ವನಿಯಮಕೇನೂ ತೊಡಕಾಗದು. ಇಷ್ಟಕೂ ಹೆಸರು ಹಚ್ಚಿ ಕಪಾಟಿನಲ್ಲಿಟ್ಟು ಇದು ಇಂಥದು, ಇದು ಇಂಥದೇ ಎಂದು ವರ್ಗೀಕರಿಸುವುದೇ ನನ್ನ ಅಜ್ಞಾನ.

ವಿಶ್ವದ ಪ್ರಥಮತಃ ಲಕ್ಷಣವೆಂದರೆ ಅದು ಅಖಂಡವಾದುದು. ಈ ಅಖಂಡತೆಯೆಷ್ಟು ಪ್ರಬಲವೆಂದರೆ ಇದನ್ನು ಖಂಡವಲ್ಲದ್ದು ಎಂಬ ಹೆಸರಿನಿಂದಲೇ ಸೂಚಿಸಬೇಕಿದೆ. ಭಾವಕಿಂತ ಭಾಷೆ ಎಷ್ಟು ದುರ್ಬಲ ಎಂಬುದಕೆ ಇದು ಸಾಕ್ಷಿ. ಇದೆಲ್ಲದರ ಹಿಂದಿನ ಸ್ವಾರಸ್ಯವೆಂದರೆ ಸಾವೆಂಬುದು ಭೌತಿಕವಷ್ಟೇ; ಮಾನಸಿಕವಾದುದಲ್ಲ. ಶೂನ್ಯವೆಂದರೆ ಭರ್ತಿ ಎಂದರ್ಥ ಅಧ್ಯಾತ್ಮದಲ್ಲಿ. ಸೊನ್ನೆ ಎಂಬುದು ಇದರ ತದ್ಭವ, ವ್ಯಾವಹಾರಿಕ ವ್ಯಾಕರಣದಲ್ಲಿ! ಹೀಗೆ ಅರ್ಥ ಮಾಡಿಕೊಳ್ಳುವ ನಮ್ಮ ಪರಿಭಾಷೆಯಲ್ಲಿ ಪರಿಮಿತಿಯಿದೆ; ಜಗತ್ತಿನಲ್ಲಿ ಅಲ್ಲ! ಎಂಬುದು ಮನವರಿಕೆಯಾದರೆ ನಮ್ಮ ಎಷ್ಟೋ ಪೂರ್ವಗ್ರಹಿಕೆ ಮತ್ತು ತಪ್ಪುಗ್ರಹಿಕೆಗಳು ತಿಳಿದು ಮತಿಯ ಮಿತಿಗೆ ನಾಚಿಕೆಯಾಗುತ್ತದೆ.

ಮೃತ್ಯುವೂ ವಿಕಾಸಶೀಲ ಗುಣ ಹೊಂದಿದೆ. ಮೃತ್ಯುವೂ ಪರಮಾತ್ಮವೇ, ಸಾವನ್ನು ಜೀವನದಂತೆಯೇ ಸಾಕ್ಷೀಭಾವದಿಂದ ನೋಡಬೇಕು ಎನ್ನುತ್ತಾರೆ ಓಶೋ ರಜನೀಶರು. ಇದನ್ನೇ ಅವರು ‘ವೈರಾಗ್ಯ ಮತ್ತು ಸಾಕ್ಷಿತ್ವ’ ಎಂದು ಕರೆಯುವರು. ವಿರಾಗ ಎಂದರೆ ರಾಗರಹಿತಸ್ಥಿತಿಯಲ್ಲ, ರಾಗಗಳನ್ನು ದೂರವಿಟ್ಟು ವೀಕ್ಷಿಸುವುದು. ನಿರ್ವಾಣ ಎಂದರರ್ಥ: ಮೃತ್ಯು ಯಾರಿಗೆ ಮೃತ್ಯುವಾಗಿ ಉಳಿದಿಲ್ಲವೋ ಅಂಥ ಸ್ಥಿತಿ. ಬದುಕಿನಂಥದೇ ಸ್ಥಿತಿ ಸಾವು. ಸಾವನ್ನು ಬದುಕಿನಷ್ಟೇ ಸರಾಗವಾಗಿ, ಸಾಕ್ಷೀಭಾವದಿಂದ ಸ್ವೀಕರಿಸುವುದು. ಇದೇ ಯೋಗದ ಪರಮಸೂತ್ರ ; ಅಂತಿಮ ಸೂತ್ರ ಕೂಡ. ಅದಾವ ದಿನ ನಾನು ಎಂಬುದಿಲ್ಲ ಎಂಬುದು ಗೊತ್ತಾಗುವುದೋ ಅದೇ ದಿನ ಗೊತ್ತಾಗುವುದು: ಮೃತ್ಯುವಾಗಿದ್ದು ಯಾರದ್ದು? ಸಾಯುವವರು ಯಾರು? ಗೌತಮಬುದ್ಧರಿಗೆ ಜ್ಞಾನೋದಯವಾಯಿತೆಂದರೆ ಇಂಥದೇ!

ನಾನತ್ವ ಸತ್ತ ಮೇಲೆ ಇನ್ನೆಲ್ಲಿದೆ ಇನ್ನೊಂದು ಮೃತ್ಯು? ನಿಜವಾಗಿ ಸಾಯಬೇಕಾದದ್ದು ಸಾವಲ್ಲ, ಬದುಕಿನುದ್ದಕ್ಕೂ ಕಾಡುವ, ತೆರೆಮರೆಯಲ್ಲಿದ್ದೇ ಆಟವಾಡುವ ನಾನತ್ವ. ಎಲ್ಲಿಯವರೆಗೆ ಮಂದಿ ಸಾವಿಗೆ ಹೆದರುವರೋ ಅಲ್ಲಿಯವರೆಗೆ ನಾನತ್ವ ಅಳಿಯುವುದಿಲ್ಲ. ಅಂದರೆ ದೈವ ಸಾಕ್ಷಾತ್ಕಾರ, ಭಗವಂತನ ಚರಣಾರವಿಂದಕ್ಕರ್ಪಿತ, ಲೋಕದಿಂದ ಮುಕ್ತಿ, ಸ್ವರ್ಗದಭಿಲಾಷೆ, ಅಧ್ಯಾತ್ಮಸಿದ್ಧಿ ಎಂಬ ಪದಪುಂಜಗಳೆಲ್ಲ ಅಹಮ್ಮಿನ ಅನ್ಯರೂಪಗಳು; ಅನೂಹ್ಯ ರೂಪಗಳು! ಈ ಕಾರಣದಿಂದಲೇ ಅಲ್ಲಮ ಪೇಚಾಡಿಕೊಳ್ಳುವುದು ‘ಶಬ್ದದ ಲಜ್ಜೆಯ ನೋಡಾ’ ಎಂದು! ಇಂಥವನ್ನೆಲ್ಲ ಗೆದ್ದವರು, ಮೀರಿದವರು ಯೋಗಿಗಳು. ಗೆಲ್ಲುವುದೆಂದರೆ, ಮೀರುವುದೆಂದರೆ ಅರಿಯುವುದು. ವಿಶ್ವಸತ್ಯವನ್ನು ಅರಿಯಲು ಸಂನ್ಯಾಸಿಯೇ ಆಗಬೇಕಿಲ್ಲ; ಸಂಸಾರದಿಂದ ವಿಮುಖಗೊಳ್ಳಬೇಕಿಲ್ಲ! ನನ್ನೊಳಗನ್ನು ಗಮನಿಸುತ್ತಿದ್ದರೆ ಸಾಕು.

ಇವೆಲ್ಲ ಆಧ್ಯಾತ್ಮಿಕ ಪಥಿಕರ, ಸಾಧಕರ ಮಾತಾಯಿತು. ನಮ್ಮಂಥ ಜನಸಾಮಾನ್ಯರು ಸಾವಿನ ಮಾತಾಡುವುದಿಲ್ಲ. ಏಕೆಂದರೆ ಅದು ಸುಡುವಾಸ್ತವ ಮತ್ತು ಸತ್ಯ. ಯಾವುದು ಸತ್ಯವೋ ಅದನ್ನು ನಾವು ಮಾತಾಡಲು ಹಿಂಜರಿಯುತ್ತೇವೆ. ಸಾವು ನೋವನ್ನು ಸಹಿಸಿಕೊಳ್ಳುವ ಶಕ್ತಿ ಹುಲುಮಾನವರಾದ ನಮಗಿಲ್ಲ. ಅದಕಾಗಿಯೇ ನಮ್ಮ ಹಿರಿಯರು ಸಾವನ್ನು ಸೂತಕ ಎಂದರು. ಶವಸಂಸ್ಕಾರದ ವಿಧಿ ವಿಧಾನಗಳನ್ನು ಹೇರಿದರು. ಈಗಿನ ಹಾಗೆ ಆಸ್ಪತ್ರೆಗಳೂ ಅಂಬುಲೆನ್ಸ್ಗಳೂ ಇಲ್ಲದಿದ್ದ ಕಾಲ. ಮನೆಯಲ್ಲೇ ಪ್ರಾಣ ಬಿಡುವಂಥ, ಸಾಂಕ್ರಾಮಿಕ ಕಾಯಿಲೆಗಳಿಂದ ಜೀವ ಬಿಡುವಂಥ ಪರಿಸ್ಥಿತಿ. ಹಾಗಾಗಿ ಹೆಣವಿದ್ದ ಮನೆಯವರನ್ನು ಮುಟ್ಟಿಸಿಕೊಳ್ಳಬಾರದೆಂಬ ಮುನ್ನೆಚ್ಚರಿಕೆಯೇ ಸೂತಕವಾಗಿರಬೇಕು. ಹೆತ್ತಾಗ, ಸತ್ತಾಗ ಆಗುವವರೇ ಬಂಧುಮಿತ್ರರು. ಎಂಥ ವೈರವಿದ್ದರೂ ಸತ್ತವರನ್ನು ದ್ವೇಷಿಸಬಾರದು. ಇದು ನಮ್ಮ ಸಂಸ್ಕೃತಿಯ ಸನ್ನಡತೆ. ಸಾವಿನ ಮನೆಯವರ ದುಃಖವನ್ನು ಹಂಚಿಕೊಳ್ಳುವ, ಸಾಂತ್ವನಿಸುವ ನೆಂಟರಿಷ್ಟರು ಆಗಮಿಸುವರು. ಸುದೀರ್ಘ ಕರ್ಮಾಚರಣೆ; ಮನೆ ತುಂಬ ಜನ. ಎಲ್ಲವನೂ ಶುಚಿಗೊಳಿಸುವ, ಧೂಳು ದುಮ್ಮಾನ ತೆಗೆಯುವ ಕೆಲಸ. ಈ ನೆಪದಲ್ಲಿ ಒಂದಷ್ಟು ಅಚ್ಚುಕಟ್ಟು. ಮನೆಯನ್ನೇ ರೀ ಅರೇಂಜ್ ಮಾಡುವ ಸಂದರ್ಭ. ಇಂಥ ಕೆಲಸಕಾರ್ಯಗಳಲ್ಲಿ ತೊಡಗಿಕೊಂಡು ಸತ್ತವರ ತುಂಬಲಾಗದ ನಷ್ಟವನ್ನೂ ಭರಿಸಲಾರದ ದುಃಖವನ್ನೂ ಮರೆಯುವ ಪ್ರಯತ್ನ. ನಿಸ್ಸಂಶಯವಾಗಿ ನಮ್ಮ ಪೂರ್ವಜರು ಬುದ್ಧಿವಂತರು. ಹಿಂದೆಲ್ಲ ತುಂಬಿದ ಕುಟುಂಬ ತಾನೇ. ಕೂಡು ಕುಟುಂಬದಲ್ಲಿ ಈಗ ಮನೆಯ ಯಜಮಾನ ಯಾರಾಗಬೇಕು? ಪಾಲು ಪಾರೀಕತ್ತು ಆಗಿರದಿದ್ದರೆ ಅದರ ಆವಶ್ಯಕತೆ. ತಿಥಿ ಕಾರ್ಯಕ್ಕೆ ಬಂದ ಹಿರಿಯರು ಒಟ್ಟು ಸಭೆ ಸೇರಿ, ನ್ಯಾಯ ನಿರ್ಣಯ ಹೇಳುವಂಥ ಸಂದಿಗ್ಧ ಸಮಯ. ದೈವಾಧೀನರಾದವರನ್ನು ಶ್ರದ್ಧೆಯಿಂದ ನೆನೆಯುವ, ಅವರ ಪುಣ್ಯಕಾರ್ಯಗಳನ್ನು ಕೊಂಡಾಡುವ, ಅವರ ಆದರ್ಶಗಳನ್ನು ಮುಂದುವರೆಸುವ ಸಲುವಾಗಿ ಶ್ರಾದ್ಧ/ತಿಥಿ/ವೈದೀಕ ನಡೆಸುವಂಥದು. ಈ ನೆಪದಲ್ಲಿ ಬಂಧುಮಿತ್ರರಿಗೆ ಅನ್ನದಾನ. ಯಥಾಶಕ್ತಿ ದಾನ ಧರ್ಮಗಳನ್ನು ನಡೆಸುವ ಆ ಮೂಲಕ ಉಳ್ಳವರು ಇಲ್ಲದವರಿಗೆ ಹಂಚುವ ಸಾಮಾಜಿಕ ನ್ಯಾಯ ವಿಧಾನ. ಪುಣ್ಯಸ್ಮರಣೆ ಎಂದರೆ ಇದೇ. ಇದು ಮರಣ ಹೊಂದಿದವರಿಗೆ ಲೋಕ ನೀಡುವ ಗೌರವದ ಗುರುತು. ಒಂದು ಬಗೆಯಲ್ಲಿ ಋಣಸಂದಾಯವೇ ಸರಿ. ವಂಶದ ಹಿರಿಯರನ್ನು ಸ್ಮರಿಸುವ ಕರ್ತವ್ಯವೇ ಇದೆಲ್ಲ. ಪ್ರಕೃತಿ ಪೂಜೆಯ ನಂತರ ಮನುಷ್ಯ ಕಂಡುಕೊಂಡದ್ದು ಪಿತೃಪೂಜೆ.

ಹೀಗೆ ಸಂಸ್ಕೃತಿಯಲ್ಲಿ ಸಾವು ಎಂಬುದು ಒಂದು ಆಚರಣೆಯಾಗಿ, ಮತ್ತೆ ಲೌಕಿಕಕ್ಕೆ ಮರಳಿ ತರುವ ಸಲುವಾಗಿ ನಮಗೆ ನಾವೇ ಮಾಡಿಕೊಂಡ ಒಪ್ಪಂದ. ಹುಟ್ಟಿದವರು ಸಾಯಲೇಬೇಕು ಎಂದು ಗೊತ್ತಿದ್ದರೂ ಅದನ್ನು ಮರೆತವರಂತೆ ಬಾಳಲು ಯತ್ನಿಸುತ್ತೇವೆ. ಸಾಯುವ ತನಕ ಬದುಕಿರಲೇಬೇಕಲ್ಲ! ಇಲ್ಲದಿದ್ದರೆ ಬಾಳಿನ ನಶ್ವರತೆಯೇ ಮುಂದಾಗಿ, ಬದುಕಲು ಮನಸ್ಸೇ ಬರುವುದಿಲ್ಲ. ಸಾಯುತ್ತೇವೆ ಸರಿ, ಆದರೆ ಈಗಲೇ ಅಲ್ಲವಲ್ಲ! ಎಂದು ಮನವರಿಕೆ ಮಾಡಿಸಲು ನೂರು ಸಾವಿರ ಕರ್ಮಾಚರಣೆಗಳನ್ನು ಗುಡ್ಡೆ ಹಾಕಿಕೊಂಡು ಅದರಲ್ಲಿ ಕಳೆದು ಹೋಗಲು ನಮ್ಮ ಸಂಸ್ಕೃತಿ ಹೆಣೆದಿರುವ ಚಿತಾವಣೆಯಿದು. ಇಂಥ ನಂಬಿಕೆಗಳನ್ನು ಮೌಢ್ಯವೆಂದು ವಿಚಾರವಾದದಿಂದ ತಳ್ಳಿ ಹಾಕುವುದು ಸುಲಭ; ಆದರೆ ಎದೆಭಾರವನ್ನು ಕಳೆಯುವ ದುಗುಡವನ್ನು ಹೊರ ಹಾಕಿ, ಅಗಲಿಕೆಯ ದುಃಖವನ್ನು ಸಹಿಸಿಕೊಳ್ಳುವುದು ಕಡು ಕಷ್ಟ. ಒಂದು ಕಾಲದಲ್ಲಿ ಏರ್ಪಟ್ಟ ಇಂಥ ಆಚರಣೆಗಳ ಹಿಂದೆ ಆ ಕಾಲಕ್ಕೆ ಅದರದೇ ಆದ ಅಗತ್ಯ ಮತ್ತು ಅನಿವಾರ್ಯಗಳಿರುತ್ತವೆ. ಅವರಿಗೆ ಹೇಗೋ ಬೇಕೋ ಹಾಗೆ ಬದುಕಿರುತ್ತಾರೆ. ನೇಮ ನಿಷ್ಠೆಗಳನ್ನು ಮಾಡಿಕೊಂಡಿರುತ್ತಾರೆ. ಇದನ್ನು ಅರ್ಥ ಮಾಡಿಕೊಳ್ಳುವ ಸೌಜನ್ಯವಾಗಲೀ ವೈಶಾಲ್ಯವಾಗಲೀ ನಮ್ಮಲ್ಲಿ ಇಲ್ಲದಿರುವುದರಿಂದಲೇ ಇಂಥ ಟೀಕೆ ಟಿಪ್ಪಣಿಗಳು ಹುಟ್ಟಿಕೊಳ್ಳುತ್ತವೆ. ಆ ಕಾರಣಕ್ಕೇ ವಿಚಾರವಾದವು ಅಮಾನವೀಯವಾಗಿ, ತತ್ತ್ವ ಸಿದ್ಧಾಂತಗಳಿಗೆ ನೇಣು ಹಾಕಿಕೊಳ್ಳುತ್ತದೆ!

ಮೃತವಲ್ಲದ್ದು ಅಮೃತ. ಜೀವ ಮರಳಿಸಿ ಪ್ರಾಣವೂಡುವಂಥದು ಸಂಜೀವಿನಿ. ಮೃತ್ಯುವನ್ನು ಜಯಿಸಲು ಹೊರಟ ಮನುಷ್ಯನ ಸಕಲೆಂಟು ಪ್ರಯತ್ನಗಳ ಕನಸೇ ಮೃತ್ಯುಂಜಯ ಪರಿಕಲ್ಪನೆ. ಸಾವೆಂದರೆ ಮರುಹುಟ್ಟು ಎಂದೇ ಸಾಹಿತ್ಯ ಮತ್ತು ಸಂಸ್ಕೃತಿಗಳು ವ್ಯಾಖ್ಯಾನಿಸುತ್ತವೆ; ಬಗೆ ಬಗೆಯ ಕತೆಗಳನ್ನೂ ಸಂಕಥನಗಳನ್ನೂ ಸೃಷ್ಟಿಸಿವೆ. ಸಾವಿನ ಭಯದಿಂದಲೇ ಮನುಷ್ಯನನ್ನು ಹದ್ದುಬಸ್ತಿನಲ್ಲಿಡುವುದು ನಿಸರ್ಗದ ನಿರಂತರ ಹುನ್ನಾರ. ಬದುಕಿನಲ್ಲಿ ಸಾವು ಕಲಿಸುವ ಪಾಠ ದೊಡ್ಡದು. ಯಾರೂ ಯಾವುದೂ ಶಾಶ್ವತವಲ್ಲ ಎಂಬುದನ್ನು ಅರಿತರೆ ವಿನೀತತೆ ತಂತಾನೇ ಪ್ರಾಪ್ತ!   

-ಡಾ. ಹೆಚ್ ಎನ್ ಮಂಜುರಾಜ್, ಮೈಸೂರು                                

6 Responses

  1. ಪದ್ಮಾ ಆನಂದ್ says:

    ಮನವನ್ನು ಚಿಂತನೆಗೆ ಹಚ್ವಿ ಶಾಂತತೆಯನ್ನು ಸ್ಥಾಪಿಸುವಲ್ಲಿ ಪರಿಣಾಮಕಾರಿಯಾದ ಲೇಖನ. ಅಭಿನಂದನೆಗಳು.

  2. Hema Mala says:

    ಚಿಂತನೆಗೆ ಹಚ್ಚುವ ಬರಹ….ಸೊಗಸಾಗಿದೆ

  3. ಹುಟ್ಟು ಸಾವಿನ ಬಗ್ಗೆ ಅನನ್ಯವಾದ ಅನಂತವಾದ ವಿಚಾರಗಳನ್ನು ಹಂಚಿಕೊಂಡ ಲೇಖಕರಿಗೆ ವಂದನೆಗಳು

  4. ಮತ್ತೆ ಮತ್ತೆ ಚಂತನೆಗೆ ಹಚ್ಚುವ ಬರೆಹ..ಸಾರ್ ವಂದನೆಗಳು

  5. ನಯನ ಬಜಕೂಡ್ಲು says:

    ವಿಭಿನ್ನ ಲೇಖನ, ಚೆನ್ನಾಗಿದೆ

  6. ಶಂಕರಿ ಶರ್ಮ says:

    ಯಾವುದೂ ಶಾಶ್ವತವಲ್ಲ ಎನ್ನುವ ಸತ್ಯದ ಚಿಂತನೆಯಿಂದ ಎಲ್ಲವನ್ನೂ ಸಮಾನಭಾವದಿಂದ ಸ್ವೀಕರಿಸಲು ಸಾಧ್ಯ ಎನ್ನುವ ಸರಳ ಸೂತ್ರವನ್ನು ಬಿಂಬಿಸುವ ಲೇಖನವು ಓದುಗರನ್ನು ಆಳವಾದ ಚಿಂತನೆಗೆ ಹಚ್ಚುವಲ್ಲಿ ಯಶಸ್ವಿಯಾಗಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: