ದೇಹದಾನಿಯ ಸ್ವಗತ

Share Button

ಆತ್ಮೀಯ ಓದುಗರೇ,

ಆ ದಿನ ನನಗಿನ್ನೂ ಚೆನ್ನಾಗಿ ನೆನಪಿದೆ. ನನ್ನ ಪತ್ನಿ ಹಾಗೂ ಮಕ್ಕಳ ಪರಿಸ್ಥಿತಿಯನ್ನು ನೋಡಲಾಗುತ್ತಿರಲಿಲ್ಲ. 70ನೇ ವಯಸ್ಸಿನಲ್ಲಿ ಯಾವುದೇ ಗಂಭೀರ ಆರೋಗ್ಯ ಸಮಸ್ಯೆ ಇಲ್ಲೆದೆ ಸದಾ ಚುರುಕಾಗಿ ಒಡಾಡಿಕೊಂಡಿದ್ದ ನಾನು ಹೃದಯಾಘಾತದಿಂದ ಮೃತಪಟ್ಟದ್ದನ್ನು ಅರಗಿಸಿಕೊಳ್ಳುವುದು ಅವರಿಗೆ ಬಹಳ ಕಷ್ಟವಾಗಿತ್ತು. ಜೊತೆಗೆ ನಾನು ಕೆಲವು ವರ್ಷಗಳ ಮೊದಲೇ ನನ್ನ ಕುಟುಂಬದವರೊಂದಿಗೆ ಚರ್ಚಿಸಿ ಮರಣಾನಂತರ ಸಮೀಪದ ವೈದ್ಯಕೀಯ ಕಾಲೇಜಿನ ಅಂಗರಚನಾ ವಿಭಾಗಕ್ಕೆ ದೇಹದಾನ ಮಾಡುವ ಕುರಿತು ಹೆಸರು ನೋಂದಣಿ ಮಾಡಿ ಬಂದಿದ್ದೆ. .( ಅಂಗ ರಚನಾ ಶಾಸ್ತ್ರ- ಯಾವುದೇ ರೀತಿಯ ವೈದ್ಯಕೀಯ ಕೋರ್ಸ್ ಗಳಲ್ಲಿ ಪ್ರಥಮ ವರ್ಷದಲ್ಲಿ ಕಡ್ಡಾಯವಾಗಿ ಅಭ್ಯಾಸ ಮಾಡಬೇಕಾದಂತಹ ಒಂದು ಸಬ್ಜೆಕ್ಟ್. ಇದರ ಪ್ರಾಯೋಗಿಕ ಭಾಗವಾಗಿ ಡಿಸೆಕ್ಷನ್ ಅಥವಾ ಶವ ಛೇದನ ತರಗತಿಗಳು ಇರುತ್ತವೆ .ದಾನ ಮಾಡಿದ ದೇಹವನ್ನು ಡಿಸೆಕ್ಷನ್ ತರಗತಿಗೆ ಬಳಸಲಾಗುತ್ತದೆ ). ಆಗ ನನ್ನ ಮನೆಯವರೆಲ್ಲರೂ ಅದೊಂದು ಒಳ್ಳೆಯ ನಿರ್ಧಾರ ಎಂದು ದನಿಗೂಡಿಸಿದ್ದರೂ ಅನಿರೀಕ್ಷಿತವಾಗಿ ಆ ಸಂದರ್ಭ ಬಂದಾಗ ಅದನ್ನು ಜೀರ್ಣಿಸಿಕೊಳ್ಳುವುದು ಅವರಿಗೆ ಕಷ್ಟಕರವಾಗಿತ್ತು. ನಂತರ ಸಮಾಧಾನ ತಂದುಕೊಂಡು ನನ್ನ ಆತ್ಮ ತೃಪ್ತಿಗೋಸ್ಕರವಾಗಿ ದೇಹವನ್ನು ಬಿಟ್ಟುಕೊಡುವುದೆಂದು ತೀರ್ಮಾನಿಸಿ ಮೆಡಿಕಲ್ ಕಾಲೇಜಿಗೆ ವಿಷಯ ತಿಳಿಸಿದರು.

ನನಗಾದಾರೋ ಬಹಳ ತಳಮಳ,ಇವರೆಲ್ಲ ಎಲ್ಲಿಯಾದರೂ ಮನಸ್ಸು ಬದಲಾಯಿಸಿ ಬಿಟ್ಟರೆ?! ಯಾಕೆಂದರೆ ಮೊದಲೇ ನೋಂದಣಿಯಾಗಿದ್ದರೂ ಕುಟುಂಬದವರ ಒಪ್ಪಿಗೆಯಿಲ್ಲದೇ ಕಾಲೇಜಿನವರು ದೇಹವನ್ನು ಕೊಂಡೊಯ್ಯುವಂತಿಲ್ಲ.ವಿಷಯ ತಿಳಸಿದ ಕೂಡಲೇ ಅಲ್ಲಿನ ಸಿಬ್ಬಂದಿಗಳು ಆಂಬುಲೆನ್ಸ್ ಮೂಲಕ ಆಗಮಿಸಿದರು. ಮರಣಾನಂತರದ ಶಾಸ್ತ್ರಗಳೆಲ್ಲ ಮುಗಿದನಂತರ ದೇಹವನ್ನು ಕಾಲೇಜಿಗೆ ಸಾಗಿಸಿದರು. ಅಬ್ಬಾ! ಸಮಾಧಾನವಾಯಿತು.ಜೊತೆಗೆ ನನ್ನ ಕುಟುಂಬದವರೂ ನನ್ನನ್ನು ಬೀಳ್ಕೊಡಲು ಹಿಂಬಾಲಿಸಿದರು.ಕಾಲೇಜಿನ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಅತ್ಯಂತ ಗೌರವದಿಂದ ನನ್ನ ದೇಹವನ್ನು ಸ್ವೀಕರಿಸಿದರು. ನನ್ನ ಹಾಗೂ ನನ್ನ ಕುಟುಂಬದವರ ಹೃದಯ ವೈಶಾಲ್ಯತೆಯನ್ನು ಶ್ಲಾಘಿಸಿದರು. ನಂತರ ನನ್ನ ಕುಟುಂಬದವರು ನನ್ನ ದೇಹವನ್ನು ಅಲ್ಲೇ ಬಿಟ್ಟು ಹಿಂತಿರುಗಬೇಕಿತ್ತು. ಅವರ ದು:ಖ ವನ್ನು ಹೇಳತೀರದು. ನೆರೆದಿದ್ದ ವಿದ್ಯಾರ್ಥಿಗಳ ಕಣ್ಣಾಲಿಗಳೂ ತುಂಬಿ ಬಂದವು. ನನ್ನ ಮನೆಯವರು ಮುಂದಿನ ಉತ್ತರಕ್ರಿಯೆಗಾಗಿ ದೇಹದಿಂದ ಒಂದು ಅಸ್ಥಿಯನ್ನು ಕೊಡಬಹುದೇ? ಎಂದು ಕೇಳಿದರು. ಕೂಡಲೇ ಸ್ಪಂದಿಸಿದ ಸಿಬ್ಬಂದಿಗಳು ನನ್ನ ಕಾಲಿನ ಕಿರುಬೆರಳಿನ ಅಸ್ಥಿಯನ್ನು ಪ್ರತ್ಯೇಕಿಸಿ ಶುಚಿಗೊಳಿಸಿ ಪ್ಯಾಕ್ ಮಾಡಿ ಕೊಟ್ಟರು. ಅದರೊಂದಿಗೆ ಭಾರವಾದ ಮನಸ್ಸಿನಿಂದ ನನ್ನ ಕುಟುಂಬ ಮನೆಗೆ ಹೊರಟಿತು.

ಮುಂದಿನ ಹಂತವಾಗಿ ನನ್ನ ದೇಹವನ್ನು ಕಾಲೇಜಿನ ಶವಚ್ಛೇದನಾಗಾರ(Dissection hall)ದ ಕಡೆಗೆ ಶವ ಸಂಸ್ಕರಣೆಗಾಗಿ ಕೊಂಡೊಯ್ದರು. ಮೊದಲು ಶರೀರವನ್ನು ಟೇಬಲ್ ಮೇಲೆ ಮಲಗಿಸಿ ನೀರಿನಿಂದ ಚೆನ್ನಾಗಿ ತೊಳೆದು ದೇಹದ ಕೂದಲನ್ನು ಕತ್ತರಿಸಿದರು.(ದೇಹದಲ್ಲಿ ಆಭರಣವಿದ್ದರೆ ಮೊದಲೇ ತೆಗೆದು ಕುಟುಂಬದವರಿಗೆ ಹಸ್ತಾಂತರಿಸುತ್ತಾರಂತೆ). ಶವಸಂಸ್ಕರಣೆಯಲ್ಲಿ ಪರಿಣತನಾಗಿದ್ದ ಸಿಬ್ಬಂದಿಯು ಫ಼ಾರ್ಮಾಲಿನ್ ದ್ರಾವಣವನ್ನು(ರಾಸಾಯನಿಕ ದ್ರಾವಣ) ತಯಾರಿಸಿದರು. ಸೂಜಿ ಹಗೂ ಪೈಪ್ ನ ಸಹಾಯದಿಂದ ನನ್ನ ತೊಡೆಯ ರಕ್ತನಾಳದ ಮೂಲಕ ದ್ರಾವಣವನ್ನು ನನ್ನ ಶರೀರಕ್ಕೆ ಸೇರಿಸಲು ಆರಂಭಿಸಿದರು.(ಕೆಲವು ಕಡೆ ಇದನ್ನು ಯಂತ್ರದ ಮೂಲಕವೂ ಮಾಡುತ್ತಾರಂತೆ). ಈ ಹಂತಕ್ಕೆ ಸುಮಾರು ಎರಡು ದಿನ ಬೇಕಾಯಿತು. ಮಧ್ಯೆ ಮಧ್ಯೆ ಸಿಬ್ಬಂದಿಗಳು ಬಂದು ದ್ರಾವಣವು ಸರಿಯಾಗಿ ದೇಹಕ್ಕೆ ಸೇರಿದೆಯೋ ಇಲ್ಲವೋ ಎಂದು ಪರಿಶೀಲಿಸುತ್ತಿದ್ದರು. ಈ ಕ್ರಿಯೆ ಪೂರ್ಣಗೊಂಡನಂತರ ನನ್ನ ದೇಹವನ್ನು ಅಲ್ಲೇ ಇದ್ದ ದ್ರಾವಣಯುಕ್ತ ಟ್ಯಾಂಕ್ ಗೆ ವರ್ಗಾಯಿಸಿದರು.ಅಲ್ಲಿ ನೋಡುವುದೆನು?! ನನಗಿಂತಲೂ ಮೊದಲೇ ಸಂಸ್ಕರಣಗೊಂಡಿದ್ದ ಇನ್ನೊಂದು ದೇಹವೂ ಮಲಗಿತ್ತು. ಇನ್ನೂ ಬೇರೆ ಟ್ಯಾಂಕ್ ಗಳಲ್ಲಿ ಈಗಾಗಲೇ ಡಿಸೆಕ್ಶನ್ ಮಾಡುತ್ತಿರುವ ದೇಹವೂ ಇತ್ತು. ನನ್ನ ಸರದಿ ಯಾವಾಗ ಬರುವುದೋ ಎಂದು ಕಾಯುತ್ತಿದ್ದೆ.

ಹೀಗೆ ಸುಮಾರು ಒಂದು ವರ್ಷ ಕಳೆಯಿತು.ಇದರ ಮಧ್ಯದಲ್ಲಿ ಒಮ್ಮೆ ನನ್ನ ದೇಹವನ್ನೂ ಇನ್ನೊಂದು ದೇಹವನ್ನೂ ಟ್ಯಾಂಕ್ ನಿಂದ ಹೊರತೆಗೆದು ಟ್ಯಾಂಕ್ ನ್ನು ಚೆನ್ನಾಗಿ ತೊಳೆದು ಅದರಲ್ಲಿದ್ದ ದ್ರಾವಣವನ್ನು ಬದಲಾಯಿಸಿದರು.ಈ ವರ್ಷದ ಹೊಸ ಬ್ಯಾಚ್ ವಿದ್ಯಾರ್ಥಿಗಳಿಗೆ ನನ್ನ ದೇಹವನ್ನು ಬಳಸುವುದು ಎಂದು ಸಿಬ್ಬಂದಿಗಳು ಮಾತಾಡಿಕೊಳ್ಳುತ್ತಿದ್ದು ಕೇಳಿ ನನಗೆ ಖುಷಿ.

ಕೊನೆಗೂ ಆ ದಿನ ಬಂದೇಬಿಟ್ಟಿತು .ಅದಾಗಲೇ ನನ್ನ ದೇಹವನ್ನು ಟೇಬಲ್ ಮೇಲೆ ಮಲಗಿಸಿದ್ದರು. ಹೊರಗಡೆಯಿಂದ ಮಕ್ಕಳ ಗಲಗಲ ಸದ್ದು ಕೇಳಿಸುತ್ತಿತ್ತು. ಒಮ್ಮೆಲೇ ಎಲ್ಲರೂ ನಿಶಬ್ದರಾದರು. ಅವರ ಪ್ರಾಧ್ಯಾಪಕರು ಬಂದರೆಂದು ಕಾಣುತ್ತಿದೆ ..ನಂತರ ಒಬ್ಬೊಬ್ಬರಾಗಿ ಶಿಸ್ತಿನಿಂದ ಒಳಕ್ಕೆ ಬಂದರು ಬಿಳಿ ಕೋಟು ಧರಿಸಿದ ವಿದ್ಯಾರ್ಥಿಗಳು ಕ್ರಮ ಪ್ರಕಾರವಾಗಿ ಟೇಬಲ್ನ ಸುತ್ತಲೂ ನಿಂತುಕೊಂಡರು. ಅವರೆಲ್ಲರೂ ನನ್ನ ಮೊಮ್ಮಕ್ಕಳ ವಯಸ್ಸಿನವರೇ,.ಕೆಲವರ ಮುಖದಲ್ಲಿ ಕುತೂಹಲ ಇನ್ನೂ ಕೆಲವರಿಗೆ ಗಾಬರಿ . ಒಂದಿಬ್ಬರು ಅಲ್ಲಿನ ದ್ರಾವಣದ ಘಾಟು ವಾಸನೆಗೆ ಹೊರಗೋಡಿದರು. ಮೊಟ್ಟ ಮೊದಲು ಪ್ರಾಧ್ಯಾಪಕರು ಎಲ್ಲ ವಿದ್ಯಾರ್ಥಿಗಳಿಗೆ ಶವ  ಪ್ರತಿಜ್ಞಾವಿಧಿ(Cadaveric oath)ಯನ್ನು  ಬೋಧಿಸಿದರು. ಪ್ರತಿಜ್ಞಾವಿಧಿಯಲ್ಲಿ ದೇಹದಾನಿ ಹಾಗೂ ಕುಟುಂಬದವರಿಗೆ ಧನ್ಯವಾದ ಹೇಳುವುದರ ಜೊತೆಗೆ ವಿದ್ಯಾರ್ಥಿಗಳ ನಡತೆ ಹೇಗಿರಬೇಕು ಎಂಬುದನ್ನು ಸೂಚಿಸಲಾಗುತ್ತದೆ. ಮೃತ ದೇಹವನ್ನು ಗೌರವದಿಂದ ಕಾಣಬೇಕು ಎಂದೂ ಹೇಳಲಾಗುತ್ತದೆ.

 ಆ ದಿನದ ಕ್ಲಾಸ್ ಮುಗಿದ ನಂತರ ದೇಹವನ್ನು ಪುನಃ ಟ್ಯಾಂಕ್ ಒಳಗಡೆ ಸೇರಿಸಲಾಯಿತು. ಹೀಗೆ ಒಂದೆರಡು ದಿನದಲ್ಲಿ ವಿದ್ಯಾರ್ಥಿಗಳು ಅಲ್ಲಿನ ವಾತಾವರಣಕ್ಕೆ ಒಗ್ಗಿಕೊಂಡ   ಮೇಲೆ ಶವಛೇದನ( ಡಿಸೆಕ್ಷನ್) ಶುರು ಮಾಡಿದರು. ಮೊದಲಿಗೆ ಪ್ರಾಧ್ಯಾಪಕರು ದೇಹ ಛೇದಿಸುವ ಕ್ರಮವನ್ನು ಮಾಡಿ ತೋರಿಸಿದರು. ಅವರಾದರೋ ಅದರಲ್ಲಿ ಪಳಗಿದವರು. ಚಕಚಕನೆ ದೇಹವನ್ನು ಛೇದಿಸುತ್ತಿದ್ದರು. ವಿದ್ಯಾರ್ಥಿಗಳು ಇದನ್ನು ಅನುಸರಿಸಬೇಕು. ಮೊದಮೊದಲು ಮಾಡುವಾಗ ಮಕ್ಕಳ ಪಜೀತಿ ನೋಡಬೇಕು. ಕಷ್ಟಪಟ್ಟು ಗ್ಲೌಸ್ ಹಾಕಿಕೊಂಡು ಶಸ್ತ್ರ(forceps , scalpel)ಗಳನ್ನು ಕೈಯಲ್ಲಿ ಹಿಡಿದು ಶರೀರ ಸಮೀಪಿಸುವಾಗ ಅವರಿಗೆ ನಡುಕ. ಆ ನಡುಗುವ ಕೈಗಳಿಂದ ದೇಹ ಕೊಯ್ಯುವುದನ್ನು ನೋಡುವಾಗ ನನಗಂತೂ ನಗು. “ಭಯಪಡಬೇಡಿ ಮಕ್ಕಳೇ, ನನಗೇನು ನೋವಾಗುವುದಿಲ್ಲ” ಎಂದು ಹೇಳುತ್ತೇನೆ ಆದರೆ ಅದು ಅವರಿಗೆ ಕೇಳಬೇಕು?! ನನ್ನ ಮನಸ್ಸನ್ನು ಅರ್ಥ ಮಾಡಿಕೊಂಡವರಂತೆ ಪ್ರಾಧ್ಯಾಪಕರೇ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿ ಪ್ರೋತ್ಸಾಹಿಸುತ್ತಾರೆ. ನಿಶಬ್ದವಾಗಿ ನಡೆಯುತ್ತಿದ್ದ ತರಗತಿಯಲ್ಲಿ ಒಂದಿಬ್ಬರು ತಲೆ ಸುತ್ತಿ  ಬಿದ್ದಿದ್ದೂ  ಆಯಿತು. ಕೂಡಲೇ ಅವರಿಗೆ ಪ್ರಥಮ ಚಿಕಿತ್ಸೆಯನ್ನು ಕೊಟ್ಟು ಕುಳ್ಳಿಸಿದರು .ಈ ರೀತಿ ಮುಂದೆಯೂ ಒಂದೆರಡು ಬಾರಿ ನಡೆಯಿತು. ದಿನ ಕಳೆದಂತೆ ಎಲ್ಲವೂ ಸುಸೂತ್ರವಾಗಿ ನಡೆಯುತ್ತಿತ್ತು

ಈ ಡಿಸೆಕ್ಷನ್ ಕ್ಲಾಸ್ ಗಳು ಅದೆಷ್ಟು ಆಸಕ್ತಿಕರ. ದೇಹದ ಪ್ರತಿಯೊಂದು ಅಂಗಾಂಗವನ್ನು ನೋಡಿದಾಗಲೂ ವಿದ್ಯಾರ್ಥಿಗಳಲ್ಲಿ ಆಶ್ಚರ್ಯ ಕುತೂಹಲ !ಅಬ್ಬಾ! ಅದೆಷ್ಟು ಆಳವಾದ ಅಧ್ಯಯನ ಮಾಡಬೇಕು ?ವೈದ್ಯರಾಗುವುದೆಂದರೆ ಸುಮ್ಮನೆಯೇ? ವಿದ್ಯಾರ್ಥಿಗಳು ಪ್ರಾಧ್ಯಾಪಕರಲ್ಲಿ ಹಲವಾರು ಸಂಶಯಗಳನ್ನು ಕೇಳುತ್ತಾ ಪರಿಹರಿಸಿಕೊಳ್ಳುತ್ತಿದ್ದರು.  ನಾನು ಕೂಡ ಆಸಕ್ತಿಯಿಂದ ಕೇಳುತ್ತಿದ್ದೆ . ವಿದ್ಯಾರ್ಥಿಗಳು ಅವರವರು ಮಾತಾಡುವಾಗ ನನ್ನನ್ನು ತಾತ ಎಂದು ಸಂಬೋಧಿಸುವುದು ಕೇಳಿ ನನಗೆ ಅದೆಷ್ಟು ಆನಂದವಾಗುತ್ತಿತ್ತು. ಮಧ್ಯೆ ಮಧ್ಯೆ ಕ್ಲಾಸ್‌ ಗೆ ಲೇಟಾಗಿ ಬಂದವರು, ನೋಟ್ಸ್ ಬರೆಯದವರು, ಪ್ರಶ್ನೆಗೆ ಉತ್ತರ ಕೊಡದವರು, ಹಿಂದೆ ನಿಂತು ಕಾಲಹರಣ ಮಾಡುವವರಿಗೆ ಬೈಗುಳದ ಜೊತೆ ಇಂಪೋಸಿಶನ್, ಕ್ಲಾಸ್ನಿಂದ ಹೊರಹೋಗುವ ಶಿಕ್ಷೆಯೂ ದೊರೆಯುತ್ತಿತ್ತು.

ಇದರ ಜೊತೆಗೆ ಪಠ್ಯೇತರ ಚಟುವಟಿಕೆಗಳು ನಡೆಯುತ್ತಿದ್ದವು .ರಸಪ್ರಶ್ನೆ ,ಸೆಮಿನಾರ್, ಎಕ್ಸಿಬಿಷನ್ ,ಬಾಡಿ ಪೇಂಟಿಂಗ್ ,ಮಾಡೆಲ್ ತಯಾರಿ ಮೊದಲಾದ ಸ್ಪರ್ಧೆಗಳು ನಡೆಯುತ್ತಿದ್ದವು. ವಿದ್ಯಾರ್ಥಿಗಳು ಬಹಳ ಉತ್ಸಾಹದಿಂದ ಭಾಗವಹಿಸುತ್ತಿದ್ದರು   

ಅವತ್ತಿನ ದಿನ ನನ್ನ ಕಣ್ಣಿನ ಭಾಗದ ತರಗತಿ .ಕಣ್ಣ ಗುಡ್ಡೆಗಳನ್ನು ಹೊರತೆಗೆದು ಛೇದಿಸಿ ಅಭ್ಯಾಸ ಮಾಡುತ್ತಿದ್ದರು. ಆಗ ಅವರಿಗೆ ಅಲ್ಲಿ ಸಿಕ್ಕಿದ್ದು ಕೃತಕ ಲೆನ್ಸ್! ಹೌದಲ್ಲವೇ ಕೆಲವು ವರ್ಷಗಳ ಹಿಂದೆ ನನಗೆ ಕಣ್ಣಿನ ಆಪರೇಷನ್ ಆಗಿತ್ತು ಎಂದು ಮರೆತೇ ಹೋಗಿತ್ತು!

ಈ ಮಧ್ಯೆ ಕಾಲೇಜಿನ ವಾರ್ಷಿಕೋತ್ಸವವನ್ನು ಆಚರಿಸಿದರು ವಿಶೇಷವೆಂದರೆ ದೇಹ ದಾನ ಮಾಡಿದ ಕುಟುಂಬದವರನ್ನು ಕರೆಸಿದ್ದರು . ನನ್ನ ಪತ್ನಿಯನ್ನು ವೇದಿಕೆಗೆ ಕರೆಸಿ ಸನ್ಮಾನಿಸಿ ನನ್ನ ಹಾಗೂ ಕುಟುಂಬದವರ ವಿಶಾಲ ಮನೋಭಾವವನ್ನು ಹೊಗಳಿ ಧನ್ಯವಾದ ತಿಳಿಸಿದರು.

ದಿನಗಳು ಉರುಳಿದ್ದೇ ತಿಳಿಯಲಿಲ್ಲ. ನನ್ನ ಶರೀರದ ಒಂದೊಂದೇ ಅಂಗಗಳನ್ನು ಬೇರ್ಪಡಿಸಿ ಅಧ್ಯಯಸುತಿದ್ದಂತೆಯೇ ನನಗೆ ಅದೇನೋ ಹಗುರ ಭಾವ. ಅಲ್ಲಿ ದೇಹದ ಯಾವುದೇ ಅಂಗಗಳನ್ನು ನಿರ್ಲಕ್ಷಿಸುತ್ತಿರಲಿಲ್ಲ. ಅಧ್ಯಯನ ನಂತರ ಹೃದಯ,ಯಕೃತ್ತು,ಕಿಡ್ನಿ,ಜಠರ,ಮೆದುಳು ಮೊದಲಾದ ಅಂಗಗಳನ್ನು ಗಾಜಿನ ಜಾರ್‌  ಗಳಲ್ಲಿ(jar) ದ್ರಾವಣ ಸೇರಿಸಿ ಸಂಗ್ರಹಾಲಯದಲ್ಲಿ ವೀಕ್ಷಣೆಗೆಂದು ಇರಿಸುತ್ತಿದ್ದರು. ಶರೀರದ ಅಸ್ತಿಗಳನ್ನು ಶುಚಿಗೊಳಿಸಿ ಸಂಸ್ಕರಿಸಿ ವಿದ್ಯಾರ್ಥಿಗಳ ಅಧ್ಯಯನಕ್ಕಾಗಿ ಬೋನ್ ಸೆಟ್(Bone set) ತಯಾರಿಸಿ ಇಡುತ್ತಿದ್ದರು.

ನೋಡು ನೋಡುತ್ತಿದ್ದಂತೆಯೇ ಆ ವರ್ಷದ ಡಿಸೆಕ್ಷನ್ ಕ್ಲಾಸ್ ಮುಗಿಯಿತು. ವಿದ್ಯಾರ್ಥಿಗಳು ಪರೀಕ್ಷೆಗೆ ತಯಾರಾಗುತ್ತಿದ್ದರು. ಕೊನೆಯ ದಿನ ಅಧ್ಯಾಪಕರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಹಿತನುಡಿಗಳನ್ನು ಆಡಿದರು .ನಂತರ ವಿದ್ಯಾರ್ಥಿಗಳೆಲ್ಲರೂ ಸೇರಿ ಫೋಟೋ ತೆಗೆಸಿಕೊಂಡರು. ವಿದ್ಯಾರ್ಥಿಗಳಂತೂ ಭಾವುಕಾರಾಗಿ  ನನ್ನನ್ನು ಉದ್ದೇಶಿಸಿ “ಬಾಯ್ ಬಾಯ್ ತಾತ,  ವಿ ವಿಲ್ ಮಿಸ್ ಯು ದಾದಾಜಿ” ಎನ್ನುತ್ತಾ  ಭಾರವಾದ ಮನಸ್ಸಿನಿಂದ ನಿರ್ಗಮಿಸಿದರು. ಯಾಕೆಂದರೆ ಮುಂದಿನ ವರ್ಷದಿಂದ ಅವರಿಗೆ ಡಿಸೆಕ್ಷನ್ ಕ್ಲಾಸ್ ಇರುವುದಿಲ್ಲ .ಹೊಸ ಸಬ್ಜೆಕ್ಟ್ ಗಳನ್ನು ಕಲಿಯಲು ಇರುತ್ತದೆ.

ನನ್ನಲ್ಲೂ ಶೂನ್ಯ ಭಾವನೆ. ಆದರೂ ಬದುಕಿನದ್ದಕ್ಕೂ ಕುಟುಂಬ ಹಾಗೂ ಸಮಾಜಕ್ಕಾಗಿ ದುಡಿದು ಮರಣಾನಂತರವೂ ಇತರರಿಗೆ ಉಪಕಾರಿಯಾದದು ನನ್ನ ಭಾಗ್ಯ. ಈಗೀಗ ಮೆಡಿಕಲ್‌ ಕಾಲೇಜುಗಳಲ್ಲೂ ಮೃತದೇಹಗಳ ಕೊರತೆ ಇದೆ.̳ 3 D  ತಂತ್ರಜ್ಞಾನವನ್ನೊಳಗೊಂಡಿರುವ  Virtual Dissection table/Simulator ಲಭ್ಯವಿದ್ದರೂ ಇವು ಬಲು ದುಬಾರಿ(2 ಕೋಟಿ ರುಪಾಯಿ).ಹಾಗಾಗಿ ಇವು ಕೆಲವೇ  ಮೆಡಿಕಲ್‌ ಕಾಲೇಜುಗಳಲ್ಲಿ ಲಭ್ಯವಿದೆ. ಮಾತ್ರವಲ್ಲದೆ ಇದರಿಂದ ನೈಜ ದೇಹವನ್ನು ಛೇದಿಸಿದಂತಹ ಅನುಭವ ಮತ್ತು ಜ್ಞಾನ ಸಿಗಲು ಸಾಧ್ಯವಿಲ್ಲ. ಆದುದರಿಂದ ಮರಣಾ ನಂತರ ದೇಹವು ಮಣ್ಣಲ್ಲಿ ಮಣ್ಣಾಗಿ ಅಥವಾ ಉರಿದು ಬೂದಿಯಾಗುವುದಕ್ಕಿಂತ ಮುಂದೆ ವೈದ್ಯರಾಗಿ ಜನಸೇವೆ ಸಲ್ಲಿಸಲಿರುವ ವಿದ್ಯಾರ್ಥಿಗಳಿಗೆ ಅನುಕೂಲಕರವಾಗುವುದು ಶ್ರೇಷ್ಠ ನಿರ್ಧಾರವಲ್ಲವೇ? ಸಾವಿನಲ್ಲೂ ಸಾರ್ಥಕತೆ ಎಂದರೆ ಇದೇ ತಾನೆ? ಪುರಾಣ-ಶಾಸ್ತ್ರಗಳಲ್ಲಿ ಉಲ್ಲೇಖಿಸಿದಂತಹಾ ವಿವಿಧ ದಾನಗಳಂತೆ ದೇಹದಾನವನ್ನೂ  ಶ್ರೇ಼ಷ್ಥದಾನವಾಗಿ ಪರಿಗಣಿಸಬೇಕು. ಇನ್ನೊಂದು ಮಾತು ದೇಹ ದಾನ ಎಂಬುದು ಅವರವರ ವೈಯುಕ್ತಿಕ ವಿಚಾರ, ಸಿದ್ಧಾಂತ, ಆದರ್ಶ ಹಾಗೂ ಧಾರ್ಮಿಕ ನಂಬಿಕೆಗೆ ಒಳಪಟ್ಟದ್ದು .ಯಾರು ಯಾರ ಒತ್ತಾಯಕ್ಕೋ ,ತೋರಿಕೆಗೋ ಮಾಡುವಂತದ್ದಲ್ಲ .ಮುಖ್ಯವಾಗಿ ಕುಟುಂಬದವರ ಅಭಿಪ್ರಾಯವನ್ನು ಪರಿಗಣಿಸುವುದು ಒಳಿತು. ಕುಟುಂಬದವರ ಇಚ್ಛೆಗೆ ವಿರುದ್ಧವಾಗಿ ನಿರ್ಧರಿಸಿದರೆ ಬದುಕಿರುವಾಗಲೇ  ಅವರ ಅಸಮಾಧಾನ ಕ್ಕೆ ಗುರಿಯಾಗಬೇಕಾದೀತು.

ಇನ್ನೇನು… ಇಲ್ಲಿನ ಸಿಬ್ಬಂದಿಗಳು ಬರುವ ಹೊತ್ತಾಯ್ತು. ನನ್ನ ದೇಹದ ಶೇಷಭಾಗಗಳೊಂದಿಗೆ ನನ್ನನ್ನು ಕಾಲೇಜಿನ ಸಂಸ್ಕರಣಾ ಘಟಕದ ಕಡೆಗೆ ಕೊಂಡೊಯ್ಯುತ್ತಾರೆ . ಅಲ್ಲಿಗೆ ಎಲ್ಲವೂ ಮುಕ್ತಾಯ.

ಹೊರಡಲೇ?

ಇಂತಿ,
ದೇಹದಾನಿ

-ಡಾ. ಹರ್ಷಿತಾ ಎಂ ಎಸ್, ಶಿವಮೊಗ್ಗ

20 Responses

  1. ಪದ್ಮಾ ಆನಂದ್ says:

    ಆಸಕ್ತಿದಾಯಕವಾಗಿ ಸಮಾಜಮುಖಿ ಜನಜಾಗೃತಿ ಮೂಡಿಸುವಲ್ಲಿ ಲೇಖನ ಯಶಸ್ವಿಯಾಗಿದೆ. ಅಭಿನಂದನೆಗಳು.

  2. Hema Mala says:

    ದೇಹದಾನ ಮಾಡಬೇಕೆಂದು ಬಯಸುವವರಿಗೆ ಉಪಯುಕ್ತವಾದ, ಅಪರೂಪದ ಮಾಹಿತಿ ಕೊಡುವ ಬರಹ. ವಿಭಿನ್ನ ಶೈಲಿಯ ‘ಸ್ವಗತ’ ನಿರೂಪಣೆಯೂ ಸೊಗಸಾಗಿದೆ.

  3. ದೇಹ ದಾನ ಮಾಡಲು ಬಯಸುವವರಿಗೆ ಸ್ಪೂರ್ತಿ ನೀಡುವಂತಹ ಲೇಖನ
    ಸ್ವಗತ ಲೇಖನ ಆಸಕ್ತಿ ಮೂಡಿಸುತ್ತದೆ

  4. I Vkbhat Geethanjali Sullia and Leela K Bhat have already decided to donate our dead bodies to KVG MEDICAL COLLEGE HOSPITAL for dissection purpose to 1st year Medical students.

  5. Anonymous says:

    Such a beautiful writing …Abhinandanegalu

  6. Arpitha Shetty says:

    Such a beautiful writing….Abhinandanegalu

  7. ವಾವ್..ಉತ್ತಮ ಮಾಹಿತಿಯನ್ನು ಒಳಗೊಂಡ ಲೇಖನ ಸೊಗಸಾದ ನಿರೂಪಣೆ.. ಹೀಗೂ ಬರೆಯಬಹುದೆಂಬುದಕ್ಕೆ ಉದಾಹರಣೆ… ಚಂದವಾಗಿ ಅನಾವರಣಗೊಂಡಿದೆ ಧನ್ಯವಾದಗಳು ಮೇಡಂ.

  8. ನಯನ ಬಜಕೂಡ್ಲು says:

    ಸೊಗಸಾದ, ಮಾಹಿತಿ ಪೂರ್ಣ ಲೇಖನ

  9. Chakrapani says:

    Very informative.

  10. ಶಂಕರಿ ಶರ್ಮ says:

    ಮರಣಾನಂತರ ದೇಹ ದಾನದ ಕುರಿತು ಜನಸಾಮಾನ್ಯರಲ್ಲಿ ಇರುವ ತಪ್ಪು ತಿಳುವಳಿಕೆಯನ್ನು ಹೋಗಲಾಡಿಸಲು ಉಪಯುಕ್ತವಾಗುವಂತಹ ಲೇಖನವು ಬಹಳಷ್ಟು ಕುತೂಹಲಕಾರಿ ಮಾಹಿತಿಗಳನ್ನು ಒಳಗೊಂಡಿದೆ. ನಿರೂಪಣೆಯಲ್ಲಿ ಹೊಸತನವನ್ನು ಕಾಣಬಹುದು. ಬಹಳ ಧನ್ಯವಾದಗಳು ಡಾಕ್ಟರ್.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: