ಬೆಳಕು-ಬಳ್ಳಿ

ಬಲಿಯ ಕೋಣ

Share Button

ಇಂದೇಕೋ ತುಂಬಾ ಜನ ನನ್ನ ಬಳಿ‌ ಬಂದಿಹರು
ತಮ್ಮ ಹೊಲ ಗದ್ದೆಗಳಿಗೆ ಹೋಗದೆ ಎನ್ನ ಸುತ್ತಿ ನಿಂತಿಹರು
ಹುರಿಮೆ ತಮಟೆ ಮೇಳಗಳ ತಾಳಕೆ ಕೇಕೆ ಹಾಕಿ ಕುಣಿದಿಹರು

ಗಂಡುಗೊಡಲಿ ಮಚ್ಚು ಹಿಡಿದು ಜಳಪಿಸುತಾ ಸುತ್ತಿಹರು
ಕಳಸ ಹಿಡಿದ ಹೆಂಗಳೆಯರು ಮುಂದೆ ಮುಂದೆ
ಕತ್ತಿಗೆ ಹಗ್ಗ ಹಾಕಿ ನನ್ನೆಳೆಯುತಾ ಕೆಲವರು ಹಿಂದೆ ಹಿಂದೆ

ಮನೆ ಮುಂದೆ ಹೋದಾಗ ತಲೆಗೆ ಎಣ್ಣಿ ಹಾಕಿ ಧಾನ್ಯ ಇಡುವವರು ಇಂದು
ಬೇವಿನ ಸೊಪ್ಪಿನ ಮಾಲೆ ಚೆಂಡು ಹೂವಿನ ಹಾರ ಹಾಕಿ ಸಾಗಿಹರು ಮುಂದು
ಗದರಿಸಲೂ ಹೆದರುವವರು ಈಗ ಬೆನ್ನ ಮೇಲೆ ದೊಪ್ಪನೆ ಬಾರಿಸುತಿಹರು

ತಿಳಿ ನೀರ ಕುಡಿಸಿ ಕೈ ಮುಗಿಯುವವರು ಏಕೋ ಸುಣ್ಣದ ಹಾಲ ಗಂಟಲಿಗೆ ಸುರಿದಿಹರು
ಊರಲಿ ಮೆರವಣಿಗೆ ಮುಗಿದು ದೇವಿಯ ಬಳಿ ಬಂದಿಹೆವು
ನನ್ನಂತೆ ಕುರಿ ಕೋಳಿ ಮೇಕೆಗಳು ಗುಡಿಯ ಮುಂದೆ ನೆರೆದಿಹವು

ಬಿಸಿಲ ಜಳಕೆ ಬಾಯಾರಿ ಬಸವಳಿದಿಹವು
ಬಿಡುಗಡೆಗಾಗಿ ಮೌನವಾಗಿ ತಾಯಿಯ ಬಳಿ ರೋಧಿಸಿಹವು

ಕಾಲುಗಳಲಿ ಇದ್ದ ಶಕ್ತಿ ಉಡುಗಿ ಹೋಗಿದೆ
ಕಿತ್ತೆಸೆದು ಓಡಿ ಹೋಗುವ ತ್ರಾಣ ಇಲ್ಲದಾಗಿದೆ
ಗಂಡುಗೊಡಲಿಯ ಚೂಪಾದ ಅಂಚಿನ ಬೆಳಕು ಕಣ್ಣು ಕುಕ್ಕಿದೆ

ನೋಡು ನೋಡುತ್ತಿರುವಂತೆ ಕತ್ತಿಯೊಂದು ವೇಗದಲಿ ಕೊರಳ ಬಳಿ ಬಂದಿತ್ತು
ಕೊಬ್ಬಿದ ದೇಹದಿಂದ ಕತ್ತನ್ನು ಬೇರೆ ಮಾಡಿತ್ತು
ತೊಟ್ಟಿಕ್ಕುವ ರಕ್ತದ ಹನಿಗಳು ಕೂಗಿ ಕೇಳಿದ್ದವು

ನಮ್ಮಗಳ  ಅಪರಾಧವಾದರೂ ಏನು ?
ಬಲಿಗಾಗಿಯೇ ನಾವು ಜನ್ಮ ತಳೆದಿದ್ದೇವೆಯೇ ?
ನಮಗೆ ಈ ಭುವಿಯಲ್ಲಿ ಬದುಕಲು ಹಕ್ಕಿಲ್ಲವೇ ?

ಎನ್ನಯ ಶಿರದ ಮೇಲೆ ಉರಿಯುತ್ತಿರುವ ದೀಪದ ಬೆಳಕಲಿ
ತಾಯಿಯ ಕಣ್ಣಿನಿಂದ ಇಳಿಯುವ ಕಣ್ಣೀರ ಕಂಡಿರುವೆ
ಆದ ಗಾಯವ ಕಂಡು ಮರುಗುವುದ ನೋಡಿರುವೆ

ನಿನಗೇಕೆ ಕಾಣದು ಈ ಕಣ್ಣೀರು ಎಲೆ ಮಾನವನೇ ?
ಸಲುಹುವ ಮಾತೆ ಎಂದೂ ಬಲಿಯ ಬೇಡಳು ತಾನೇ !

( ಚಿತ್ರ ಕೃಪೆ: ರಾಜಶೇಖರ ತಾಳಿಕೋಟಿ. ಚಿತ್ರಕಲಾ ಶಿಕ್ಷಕರು ಉಡುಪಿ ಜಿಲ್ಲೆ )

ಶರಣಬಸವೇಶ ಕೆ. ಎಂ

4 Comments on “ಬಲಿಯ ಕೋಣ

  1. ನೋವು ತುಂಬಿದ ಸಾಲುಗಳಲ್ಲಿ, ಬಲಿಗಾಗಿ ಸಿದ್ಧಗೊಂಡ ಕೋಣನ ಮನದ ಮೌನದ ಮಾತುಗಳು ಮಾನವನ ಕ್ರೌರ್ಯವನ್ನು ಬೊಟ್ಟುಮಾಡಿ ತೋರಿಸಿವೆ…
    ಕವನ ಮನಮುಟ್ಟಿತು!

  2. ಧನ್ಯವಾದಗಳು ನಯನ ಬಜಕೂಡ್ಲು ಮೇಡಂ, ಬಿ.ಆರ್ ನಾಗರತ್ನ ಮೇಡಂ ಹಾಗೂ ಶಂಕರಿ ಶರ್ಮ‌ ಮೇಡಂ ಅವರಿಗೆ. ತಪ್ಪದೇ ಓದಿ ಪ್ರತಿಕ್ರಿಯೆ ನೀಡುತ್ತೀರಾ…..ಖುಷಿಯಾಗುತ್ತದೆ ನಿಮ್ಮ ಸಾಹಿತ್ಯದ ಬಗ್ಗೆ ಇರುವ ಒಲವು ಕಂಡು

Leave a Reply to SHARANABASAVEHA K M Cancel reply

 Click this button or press Ctrl+G to toggle between Kannada and English

Your email address will not be published. Required fields are marked *