ಬಲಿಯ ಕೋಣ
ಇಂದೇಕೋ ತುಂಬಾ ಜನ ನನ್ನ ಬಳಿ ಬಂದಿಹರು
ತಮ್ಮ ಹೊಲ ಗದ್ದೆಗಳಿಗೆ ಹೋಗದೆ ಎನ್ನ ಸುತ್ತಿ ನಿಂತಿಹರು
ಹುರಿಮೆ ತಮಟೆ ಮೇಳಗಳ ತಾಳಕೆ ಕೇಕೆ ಹಾಕಿ ಕುಣಿದಿಹರು
ಗಂಡುಗೊಡಲಿ ಮಚ್ಚು ಹಿಡಿದು ಜಳಪಿಸುತಾ ಸುತ್ತಿಹರು
ಕಳಸ ಹಿಡಿದ ಹೆಂಗಳೆಯರು ಮುಂದೆ ಮುಂದೆ
ಕತ್ತಿಗೆ ಹಗ್ಗ ಹಾಕಿ ನನ್ನೆಳೆಯುತಾ ಕೆಲವರು ಹಿಂದೆ ಹಿಂದೆ
ಮನೆ ಮುಂದೆ ಹೋದಾಗ ತಲೆಗೆ ಎಣ್ಣಿ ಹಾಕಿ ಧಾನ್ಯ ಇಡುವವರು ಇಂದು
ಬೇವಿನ ಸೊಪ್ಪಿನ ಮಾಲೆ ಚೆಂಡು ಹೂವಿನ ಹಾರ ಹಾಕಿ ಸಾಗಿಹರು ಮುಂದು
ಗದರಿಸಲೂ ಹೆದರುವವರು ಈಗ ಬೆನ್ನ ಮೇಲೆ ದೊಪ್ಪನೆ ಬಾರಿಸುತಿಹರು
ತಿಳಿ ನೀರ ಕುಡಿಸಿ ಕೈ ಮುಗಿಯುವವರು ಏಕೋ ಸುಣ್ಣದ ಹಾಲ ಗಂಟಲಿಗೆ ಸುರಿದಿಹರು
ಊರಲಿ ಮೆರವಣಿಗೆ ಮುಗಿದು ದೇವಿಯ ಬಳಿ ಬಂದಿಹೆವು
ನನ್ನಂತೆ ಕುರಿ ಕೋಳಿ ಮೇಕೆಗಳು ಗುಡಿಯ ಮುಂದೆ ನೆರೆದಿಹವು
ಬಿಸಿಲ ಜಳಕೆ ಬಾಯಾರಿ ಬಸವಳಿದಿಹವು
ಬಿಡುಗಡೆಗಾಗಿ ಮೌನವಾಗಿ ತಾಯಿಯ ಬಳಿ ರೋಧಿಸಿಹವು
ಕಾಲುಗಳಲಿ ಇದ್ದ ಶಕ್ತಿ ಉಡುಗಿ ಹೋಗಿದೆ
ಕಿತ್ತೆಸೆದು ಓಡಿ ಹೋಗುವ ತ್ರಾಣ ಇಲ್ಲದಾಗಿದೆ
ಗಂಡುಗೊಡಲಿಯ ಚೂಪಾದ ಅಂಚಿನ ಬೆಳಕು ಕಣ್ಣು ಕುಕ್ಕಿದೆ
ನೋಡು ನೋಡುತ್ತಿರುವಂತೆ ಕತ್ತಿಯೊಂದು ವೇಗದಲಿ ಕೊರಳ ಬಳಿ ಬಂದಿತ್ತು
ಕೊಬ್ಬಿದ ದೇಹದಿಂದ ಕತ್ತನ್ನು ಬೇರೆ ಮಾಡಿತ್ತು
ತೊಟ್ಟಿಕ್ಕುವ ರಕ್ತದ ಹನಿಗಳು ಕೂಗಿ ಕೇಳಿದ್ದವು
ನಮ್ಮಗಳ ಅಪರಾಧವಾದರೂ ಏನು ?
ಬಲಿಗಾಗಿಯೇ ನಾವು ಜನ್ಮ ತಳೆದಿದ್ದೇವೆಯೇ ?
ನಮಗೆ ಈ ಭುವಿಯಲ್ಲಿ ಬದುಕಲು ಹಕ್ಕಿಲ್ಲವೇ ?
ಎನ್ನಯ ಶಿರದ ಮೇಲೆ ಉರಿಯುತ್ತಿರುವ ದೀಪದ ಬೆಳಕಲಿ
ತಾಯಿಯ ಕಣ್ಣಿನಿಂದ ಇಳಿಯುವ ಕಣ್ಣೀರ ಕಂಡಿರುವೆ
ಆದ ಗಾಯವ ಕಂಡು ಮರುಗುವುದ ನೋಡಿರುವೆ
ನಿನಗೇಕೆ ಕಾಣದು ಈ ಕಣ್ಣೀರು ಎಲೆ ಮಾನವನೇ ?
ಸಲುಹುವ ಮಾತೆ ಎಂದೂ ಬಲಿಯ ಬೇಡಳು ತಾನೇ !
( ಚಿತ್ರ ಕೃಪೆ: ರಾಜಶೇಖರ ತಾಳಿಕೋಟಿ. ಚಿತ್ರಕಲಾ ಶಿಕ್ಷಕರು ಉಡುಪಿ ಜಿಲ್ಲೆ )
–ಶರಣಬಸವೇಶ ಕೆ. ಎಂ
ನೋವು ತುಂಬಿದ ಸಾಲುಗಳು
ಮೂಕಜೀವಿಯ..ನಿವೇದನೆ..ಹೃದಯ ಸ್ಪರ್ಷಿಯಾಗಿದೆ..ಕವನ..ಸಾರ್..
ನೋವು ತುಂಬಿದ ಸಾಲುಗಳಲ್ಲಿ, ಬಲಿಗಾಗಿ ಸಿದ್ಧಗೊಂಡ ಕೋಣನ ಮನದ ಮೌನದ ಮಾತುಗಳು ಮಾನವನ ಕ್ರೌರ್ಯವನ್ನು ಬೊಟ್ಟುಮಾಡಿ ತೋರಿಸಿವೆ…
ಕವನ ಮನಮುಟ್ಟಿತು!
ಧನ್ಯವಾದಗಳು ನಯನ ಬಜಕೂಡ್ಲು ಮೇಡಂ, ಬಿ.ಆರ್ ನಾಗರತ್ನ ಮೇಡಂ ಹಾಗೂ ಶಂಕರಿ ಶರ್ಮ ಮೇಡಂ ಅವರಿಗೆ. ತಪ್ಪದೇ ಓದಿ ಪ್ರತಿಕ್ರಿಯೆ ನೀಡುತ್ತೀರಾ…..ಖುಷಿಯಾಗುತ್ತದೆ ನಿಮ್ಮ ಸಾಹಿತ್ಯದ ಬಗ್ಗೆ ಇರುವ ಒಲವು ಕಂಡು