ಗಾರ್ದಭ ಪುರಾಣ
ಗಾರ್ದಭ ಎಂದರೆ ಕತ್ತೆ ಎಂದರ್ಥ. ಇದು ಅನಾದಿಕಾಲದಿಂದಲೂ ಒಂದು ಸಾಕು ಪ್ರಾಣಿಯಾಗಿದೆ. ಅತ್ಯಂತ ದಡ್ಡ ಪ್ರಾಣಿಯೆಂದು ಹೆಸರುವಾಸಿ. ಮೊದಲು ಕೇವಲ ಅಗಸರ ಮನೆಯಲ್ಲಿ ಮಾತ್ರ ಕಾಣಬರುತ್ತಿದ್ದ ಕತ್ತೆ ಈಗ ಸಾರ್ವತ್ರಿಕವಾಗಿ ಎಲ್ಲರೂ ಸಾಕುವ ಮಟ್ಟಕ್ಕೆ ಬಂದಿದೆ. ಎಲ್ಲರೂ ಬಯ್ಯಲು ಕತ್ತೆಯನ್ನೇ ಉಪಮೆಯಾಗಿ ಬಳಸುತ್ತಿದ್ದ ಕಾಲವಿತ್ತು. ಈಗ ಹಾಗಲ್ಲ. ಕತ್ತೆ ಬಗೆಗೆ ಅಭಿಪ್ರಾಯವೇ ಬದಲಾಗಿದೆ.ಕಾರಣ ಕೇಳಿದರೆ ಎಲ್ಲರೂ ವಿಸ್ಮಯಪಡುತ್ತಾರೆ. ಮೇ 8 ನೇ ತಾರೀಖು “ಕತ್ತೆಗಳ ದಿನಾಚರಣೆ” ಮುಡಿಪಿಟ್ಟಿರುವುದು ಇವುಗಳ ಯೋಗ್ಯತೆಗೆ ಹಿಡಿದ ಕನ್ನಡಿಯಲ್ಲವೇ?
ಕತ್ತೆ ಹಾಲಿಗೆ ಬಹಳ ಬೇಡಿಕೆಯಿದೆ. ಇದು ಲೀಟರ್‌ಗೆ ಸಾವಿರದಿಂದ ಐದು ಸಾವಿರ ರೂಪಾಯಿಗಳವರೆಗೂ ಬಿಕರಿಯಾಗುತ್ತದೆ. ಮಕ್ಕಳಿಗೆ ಬಹಳ ಒಳ್ಳೆಯದು ಎಂಬ ಮಾತಿದೆ. ಸೋಪ್, ಶಾಂಪೂ ಇತರ ಸೌಂದರ್ಯ ವರ್ಧಕ ಸಾಧನೆಗಳಿಗೆ ಇದರ ಬಳಕೆ ಹೆಚ್ಚಾಗುತ್ತಿದೆ. ಕತ್ತೆಹಾಲಿಗೆ ಹಲವು ರೋಗಗಳನ್ನು ಗುಣಪಡಿಸುವ ಶಕ್ತಿ ಕೂಡ ಇದೆ. ಹಿಂದೆಲ್ಲ ಹಾಗೂ ಈಗಲೇ ಕೆಲವು ಸಾರಿ ಮನೆ ಮುಂದೆ ಕತ್ತೆಯನ್ನೇ ತಂದು ಹಾಲು ಕರೆದು ಮಾಡುವ ಪದ್ಧತಿಯನ್ನೂ ನಾನು ನೋಡಿದ್ದೇನೆ. ಕೆಲಸಕ್ಕೆ ಬಾರದ ಕತ್ತೆಹಾಲಿನಿಂದ ಬುದ್ಧಿ ಶಕ್ತಿ ವೃದ್ಧಿಯಾಗುತ್ತದೆ ಎಂದರೆ ವಿಸ್ಮಯದ ಅತಿರೇಕವಲ್ಲವೇ?
ಇನ್ನು ಕತ್ತೆಗಳಿಗೆ ರೋಗನಿರೋಧಕ ಶಕ್ತಿಯನ್ನು ಹರಡುವ ಒಂದು ವಿಶಿಷ್ಟವಾದ ಗುಣವಿದೆ. ಆದ್ದರಿಂದಲೇ ಕುರಿಗಾಹಿಗಳು ತಮ್ಮ ಕುರಿಮಂದೆಯೊಂದಿಗೆ ಊರಿಂದೂರಿಗೆ ಹೋಗುವಾಗ ಒಂದೆರಡು ಕತ್ತೆಗಳನ್ನು ಮಂದೆಯ ಮಧ್ಯೆ ಸೇರಿಸುತ್ತಾರೆ. ಇದು ಅನಾದಿ ಕಾಲದಿಂದಲೂ ಬಂದಿರುವ ಪದ್ಧತಿ. ಆದರೆ ಇದರ ಕಾರಣ ಮಾತ್ರ ಈಗ ಬಯಲಾಗಿದೆ. ಕತ್ತೆಯನ್ನು ಲಕ್ಷ್ಮಿ ಎಂದು ಪರಿಗಣಿಸಿ ಇಂದಿಗೂ ಸಾಕುವ ಕೆಲವರಿದ್ದಾರೆ. ಗುಡ್ಡಕಾಡುಗಳಲ್ಲಿ ಭಾರ ಹೊರಲು ಕತ್ತೆಯ ಬಳಕೆ ಸಾಮಾನ್ಯ. ಇದನ್ನು ದೀಪಾವಳಿಯ ಸಮಯದಲ್ಲಿ ಕೆಲವರು ಪೂಜಿಸುವ ವಾಡಿಕೆ ಇಂದಿಗೂ ಇದೆ.
ಆಶ್ಚರ್ಯವೆಂದರೆ ಹಲವಾರು ಕಡೆ ಕತ್ತೆ ಫಾರ್ಮ್‌ಗಳಿವೆ. ಅದರಲ್ಲಿ 10 ರಿಂದ 20 ಕತ್ತೆಗಳನ್ನು ಸಾಕಿ ಹಾಲಿನ ಮಾರಾಟ ಮಾಡಿ ಆಗರ್ಭ ಶ್ರೀಮಂತರಾದವರಿದ್ದಾರೆ. ಮಾಲ್‌ಗಳಲ್ಲಿ ಟಿಟ್ರ ಪ್ಯಾಕ್ ಗಳಲ್ಲಿ ಕತ್ತೆ ಹಾಲು ಲಭ್ಯ. ಇದು ಬಹಳ ದುಬಾರಿಯಾದರೂ ಔಷಧಿ ಗುಣಗಳಿಂದ ಇದರ ಬೇಡಿಕೆ ನಿರಂತರ ಹೆಚ್ಚುತ್ತಿದೆ ಎಂಬ ಮಾತಿದೆ. ಇದು ಅಂತರಾಷ್ಟ್ರೀಯ ಮಾರುಕಟ್ಟೆಗೂ ರಫ್ತಾಗುತ್ತಿದೆ. ವಿಶೇಷವೆಂದರೆ ದೇಶದ ಜಿ.ಡಿ.ಪಿ.ಯಲ್ಲೂ ಕತ್ತೆ ಪಾತ್ರವಿದೆ ಎಂದರೆ ನಂಬುತ್ತೀರಾ? ಉದಾಹರಣೆಗೆ ಪಾಕಿಸ್ತಾನದಲ್ಲಿ ಸುಮಾರು ಅರವತ್ತು ಲಕ್ಷ ಕತ್ತೆಗಳಿವೆ. ವಿಶ್ವದಲ್ಲೇ ಅತೀ ಹೆಚ್ಚು ಕತ್ತೆಗಳನ್ನು ಹೊಂದಿರುವ ರಾಷ್ಟ್ರ ಎಂಬ ಹೆಗ್ಗಳಿಕೆ ಇದೆ. ಇದರ ಬಹುಭಾಗವನ್ನು ಪಾಕಿಸ್ತಾನ, ಚೀನಾಕ್ಕೆ ರಫ್ತು ಮಾಡಿ ದೇಶದ ಜಿ.ಡಿ.ಪಿ. ಯಲ್ಲಿ ಗಮನೀಯ ವೃದ್ಧಿ ಸಾಧಿಸಿದೆ. ಇದಕ್ಕಿಂತ ಕತ್ತೆ ಬೆಲೆಗೆ ಬೇರೆ ಉದಾಹರಣೆ ಬೇಕೇ?
ಕತ್ತೆಯ ಬಗೆ ಹಲವಾರು ಗಾದೆಗಳು ಹುಟ್ಟಿವೆ. ಬಯ್ಯುವಾಗ ಮೊದಲು ಕಾಣಸಿಗುವುದೇ ಕತ್ತೆ. ‘ಕತ್ತೆ ಬಡವ’ ಒಂದು ಸಾಮಾನ್ಯ ಬೈಗುಳ ‘ಕತ್ತೆಗೇನು ಗೊತ್ತು ತಾಹೊತ್ತ ಕಸ್ತೂರಿಯ ಪರಿಮಳ’ ಗಾದೆ ಜನಜನಿತ. ‘ಕಾರ್‍ಯವಾಸಿ ಕತ್ತೆಕಾಲು ಹಿಡಿ‘ ಬಹಳ ಉಪಯೋಗಿಸುವ ಗಾದೆ. ಈಗ ಈ ಗಾದೆಗಳಿಗೆ ಕತ್ತೆಗಳ ಉಪಯೋಗ ನೋಡಿ ಮರು ಪರಿಶೀಲನೆ ಅಗತ್ಯ ಅಲ್ಲವೇ? ಹೀಗೆ ಕತ್ತೆ ಕೂಡ ಇತರ ಪ್ರಾಣಿಗಳಿಗಿಂತ ಪ್ರಾಮಾಣಿಕ, ಆಕರ್ಷಕ ಸುಂದರ ಪ್ರಾಣಿ. ಇನ್ನಾದರೂ ಕತ್ತೆಗೆ ಅದರ ಪ್ರಾಶಸ್ತ್ಯ ಹಾಗೂ ಉಪಯೋಗ ಕಂಡು ಅದಕ್ಕೆ ಸಮಾಜದಲ್ಲಿ ಒಂದು ಮರ್ಯಾದೆಯ ಸ್ಥಾನ ನೀಡೋಣವೇ? ನೀವೇನಂತೀರಿ?
–ಕೆ.ರಮೇಶ್
ಸಿಂಪಲ್ ಟಾಪಿಕ್, ಸುಂದರ ಬರಹ
ಆಹಾ..ಕತ್ತೆಬಗ್ಗೆ ಬರಹ ಚಿಕ್ಜದಾದರೂ ಚೊಕ್ಕ ವಾಗಿ ಕತ್ತೆ ಬಗ್ಗೆ ಯೋಚಿಸುವಂತಿದೆ ಲೇಖನ ಸಾರ್..
ಬಹುಮೂಲ್ಯ ಕತ್ತೆಯ ಹಾಲಿನ ಸಮೃದ್ಧ ಉಪಯೋಗವನ್ನು ತಿಳಿದು ಆಶ್ಚರ್ಯವಾಯಿತು! ಕತ್ತೆ ಏನಾದರೂ ಈ ಲೇಖನ ಓದಿದರೆ ಖುಷಿಯಿಂದ ಕುಣಿದಾಡುವುದು ಖಂಡಿತಾ… ! ಚಂದದ ಲೇಖನಕ್ಕೆ ಧನ್ಯವಾದಗಳು.
ಎಲ್ಲರಿಗೂ ಅನಂತ ಧನ್ಯವಾದಗಳು
ಚಂದದ ಬರಹ.