ಕಾರ್ಗಾಲದ ವೈಭವ-ದರ್ಶನ

Share Button

ಕರಾವಳಿಯಲ್ಲಿ ಮಳೆ ಒಂದು ಕಾಲದಲ್ಲಿ ಶ್ರಾವಣ, ಭಾದ್ರಪದ ಮಾಸಗಳಲ್ಲಿ ಬಿಟ್ಟೂಬಿಡದೆ ದಿನವೂ ಹಗಲು ರಾತ್ರಿ ಎನ್ನದೆ ದಬ ದಬ ಸುರಿಯುತ್ತಿತ್ತು. ಸುರಿದ ಮಳೆಯ ನೀರು ಮನೆಯ ಮುಂದಿನ ಅಂಗಳಕ್ಕೆ ತಾಗಿ ಕೊಂಡೇ ಸ್ವಲ್ಪ ಕೆಳಗೆ ಇರುತ್ತಿದ್ದ ಅಡಿಕೆ ತೆಂಗು, ವೀಳೆದೆಲೆ, ಬಾಳೆ ಬೆಳೆಯುವ ತೋಟ ಮತ್ತು ಮನೆಯ ನಡುವಿನ ಅಂತರವನ್ನು ಮಸುಕುಮಾಡುತ್ತಿತ್ತು. ಆ ನೀರಿನಲ್ಲಿ ಈಜಿ ತೇಲಿ ಹೋಗುವ ತೆಂಗಿನಕಾಯಿಗಳನ್ನು ಹಿಡಿದು ತರುವ ಸಾಹಸಿಗಳೂ ಇದ್ದರು. ದೋಣಿಯಲ್ಲಿ ಕುಳಿತು ಹೊರ ಜಗತ್ತಿನ ಪೇಟೆಗೆ ಹೋಗುವ ಧೈರ್ಯ ಮಾಡುವವರೂ ಇದ್ದರು. ಮಳೆ ನೀರು ಮನೆ ಮೆಟ್ಟಿಲುಗಳನ್ನು ಏರಿ ಬರುವವರೆಗೂ ನಿಶ್ಚಿಂತೆಯಿಂದ ಇದ್ದು ಎಲ್ಲವೂ ಒಳಿತೇ ಆಗಲಿ ಎಂದು ಶುಭ ಹಾರೈಸುತ್ತಾ ಮನೆಯಲ್ಲಿ ಕುಳಿತುಕೊಳ್ಳುವವರೂ ಇದ್ದರು. ಮಳೆಗಾಲಕ್ಕೆಂದೇ ದಿನನಿತ್ಯಕ್ಕೆ ಬೇಕಾದ, ಅತ್ಯಗತ್ಯವಾದ ಎಲ್ಲಾ ಸಾಮಾನು ಸರಂಜಾಮುಗಳನ್ನು ಸಂಗ್ರಹ ಮಾಡಿಟ್ಟುಕೊಳ್ಳುತ್ತಿದ್ದರು. ಹಪ್ಪಳ ಸಂಡಿಗೆ, ಹಲಸಿನ ಬಾಳಕ ಹೀಗೆ ಬೇರೆ ಬೇರೆ ಕುರುಕಲುಗಳೂ ಸಹ ಬಾಯಿರುಚಿಗೆ ಇರುತ್ತಿದ್ದವು. ಕೆಲವರ ಮನೆಯಲ್ಲಿ ತಾಳ ಮದ್ದಲೆಯ ಮನರಂಜನೆಯೂ ಇರುತ್ತಿತ್ತು. ಇಂಥ ಮಳೆಗಾಲವನ್ನು ಕವಿ ಕಡೆಂಗೋಡ್ಲು ಶಂಕರ ಭಟ್ಟ ಅವರು ಕಾರ್ಗಾಲದ ವೈಭವ ಎನ್ನುತ್ತಿದ್ದಾರೆ. ಅವರು ಅದನ್ನು ಭಾವಿಸಿದುದು ಹೀಗೆ:

ಪಡುವಣ ತೀರದ/ಕನ್ನಡ ನಾಡಿನ/
ಕಾರ್ಗಾಲದ ವೈಭವವೇನು?/
ಚೆಲ್ಲಿದರನಿತೂ/ತೀರದ ನೀರಿನ/
ಜಡದೇಹದ ಕಾರ್ಮುಗಿಲೇನು?//

ಕೆರೆಗಳನುಕ್ಕಿಸಿ/ತೊರೆಗಳ ಸೊಕ್ಕಿಸಿ/
ಗುಡ್ಡವ ಬೆಟ್ಟವ ಕೊರೆ ಕೊರೆದು/
ಕಡಲಿನ ತೆರೆಗಳ/ ರಿಂಗಣಗುಣಿಯಿಸಿ/ 
ಮೊರೆಮೊರೆವುದದೋ ಸರಿಸುರಿದು//

ಕುದುರೆಮೊಗದ ಕಡಿ/ವಾಣದ ತೆರದಲಿ/
ಮಿಂಚುಗಳವು ಥಳಥಳಿಸುವುವು/
ಗೊರಸಿನ ಘಟ್ಟನೆ/ಯಂತಿರೆ ಥಟ್ಟನೆ/
ಗುಡುಗುಗಳವು ಗುಡುಗಾಡಿಪುವು//

ಆವೇಶದ ವೇ/ಷದ ಬಿರುಸುಟ್ಟುರೆ/
ಊರೂರಲಿ ಹಾರೋಡುವುದು/
ಮರಗಳ ಕೀಳುತ/ಬಂಡೆಯ ಹೋಳುತ/
ಜಗಜಟ್ಟಿಯ ತೆರನಾಡುವುದು//

ಹಗಲಿರುಳೆನ್ನದೆ/ಹೊಡೆಯುವ ಜಡಿಮಳೆ/
ಬಡಿಕೋಲ್ಮಿಂಚಿನ ಲಾಗುಗಳು/
ಮನೆಗಳ ಮನಗಳ/ಒಳಗೂ ಹೊರಗೂ/
ಜಿನುಗುತಿರುವ ಹನಿಸೋನೆಗಳು//

ಮುಗಿಲಿನ ಹುಬ್ಬಿನ/ಗಂಟಿಕ್ಕುತ ಬಿರು/
ದನಿಯಲಿ ಬೆದರಿಸುತಿಹನಲ್ಲ/
ನಲ್ಲನೆನುತೆ ಆಗಸವೆಣ್ಕೂಗುತೆ/
ಸುರಿಸಿದ ಕಣ್ಣೀರ್ವೊನಲೆಲ್ಲ//

ಮುಗಿಲಿನದು ಜಡ ದೇಹ, ಅದರಿಂದ ನೀರು ಸುರಿಯುತ್ತಿದೆ. ಮುಗಿಲಿನಲ್ಲಿಯ ನೀರಿನ ಸಂಗ್ರಹ ಖರ್ಚೇ ಆಗಲಿಲ್ಲವೇನೋ ಎಂಬಂತೆ, ಎಷ್ಟು ಸುರಿಸಿದರೂ ಅದಕ್ಕೆ ಸಾಕು ಎಂದೆನ್ನಿಸಲಿಲ್ಲವೇನೋ ಎಂಬಂತೆ  ಮಳೆ ಬರುತ್ತಿದೆ. ಒಂದೇ ಸಮನೆ ಬಂದ ಮಳೆ ಕೆರೆಗಳನ್ನು ಉಕ್ಕಿಸಿದೆ, ತೊರೆಗಳ ಸೊಕ್ಕನ್ನು ಏರಿಸಿದೆ. ಗುಡ್ಡ ಬೆಟ್ಟಗಳನ್ನು ಕೊರೆದುಕೊಂಡು ಮುಂದೆ ಮುಂದೆ ಧಾವಿಸುತ್ತಿದೆ, ಕಡಲನ್ನು ಸೇರಿದೆ. ಕಡಲಿನಲ್ಲಿ ನೀರಿನ ಅಲೆಗಳು ಅಬ್ಬರದಿಂದ ಮೇಲಕ್ಕೆದ್ದು ಬರುತ್ತಿವೆ, ಕಡಲಿನ ದಂಡೆಗೆ ಬಿರುಸಿನಿಂದ ಬಂದು ಅಪ್ಪಳಿಸುತ್ತಿವೆ. ಅಲೆಗಳ ಮೊರೆತ ರಿಂಗಣವಾಗಿದೆ. ಇದು ಕವಿಯ ಮಳೆಗಾಲದ ವರ್ಣನೆ ರಾಜಮಹಾರಾಜರುಗಳ ರಣೋತ್ಸಾಹದ ಅಬ್ಬರವನ್ನು ನೆನಪಿಸುತ್ತದೆ.  ಆಕಾಶದಲ್ಲಿ ಮಳೆ ಸುರಿಸುವ ಮೋಡಗಳೊಂದಿಗೆ ಗುಡುಗು, ಮಿಂಚುಗಳ ಅಬ್ಬರದ ಭರಾಟೆಯೂ ಇದೆ. ಫಳ್‌ ಎಂದು ಥಟ್ಟನೆ ಕಾಣಿಸಿಕೊಳ್ಳುವ ಮಿಂಚು ಕವಿಯ ಕಣ್ಣಿಗೆ ವೇಗವಾಗಿ ಧಾವಿಸುವ ಕುದುರೆಗೆ ಹಾಕಿದ ಹೊಳೆಯುವ ಕಡಿವಾಣದಂತೆ ಕಾಣುತ್ತಿದೆ. ಗುಡುಗಾದರೋ ರಭಸದಿಂದ ಓಡುತ್ತಿರುವ ಕುದುರೆಗಳ ಗೊರಸಿನ ಘಟ್ಟಣೆಯಂತೆ ಕೇಳುತ್ತಿದೆ. ಗುಡುಗು ಮಿಂಚುಗಳಿಂದ ಉಂಟಾಗುವ ಮರಗಳ ಉರುಳುವಿಕೆ, ಮನೆಗಳು, ಗಿಡ ಮರಗಳ ಸುಟ್ಟುರುಹುವಿಕೆ, ಬಂಡೆಗಳ ಸೀಳುವಿಕೆ, ಊರೂರುಗಳ ಬುಡಮೇಲಾಗುವಿಕೆಗಳನ್ನು ಕವಿ ಕುದುರೆಗಳ ಬಿರುಸಿನ ಓಡಾಟ, ಹಾರಾಟದೊಂದಿಗೆ ಸಮೀಕರಿಸುತ್ತಿದ್ದಾರೆ.

ಮಳೆಯ ಬಿರುಸಿನ ಬಡಿತವನ್ನು ಎದುರಾಳಿಯನ್ನು ಮಣ್ಣು ಮುಕ್ಕಿಸುವವರೆಗೆ ಬಿಡುವುದಿಲ್ಲ ಎಂದು ಕುಸ್ತಿಗೆ ನಿಲ್ಲುವ, ಕುಸ್ತಿಯ ಎಲ್ಲಾ ಪಟ್ಟುಗಳನ್ನೂ ಬಿಡದೆ ಪ್ರಯೋಗಿಸುವ ಜಗಜೆಟ್ಟಿಯ ಆವೇಷದ ವೇಷಕ್ಕೆ ಕವಿ ಹೋಲಿಸುತ್ತಿದ್ದಾರೆ. ಆವೇಷ ಎನ್ನುತ್ತಾ ಕವಿ ಮಳೆಗಾಲ ಎಲ್ಲಾ ಸಂಗತಿಗಳನ್ನು ತನ್ನ ವಶ ಮಾಡಿಕೊಂಡು ತಾನೇ ಮಿಗಿಲಾಗಿ ಏಕಮೇವ ನಾಯಕನಾಗಿ ಮೆರೆಯುತ್ತಿರುವುದನ್ನು ಸೂಚಿಸಿದರೆ ಈ ಸಾಧ್ಯತೆಯನ್ನು ವೇಷ ಎನ್ನುತ್ತಾ ಅದು ಕೇವಲ ತಾತ್ಕಾಲಿಕವಾದದ್ದು ಎಂದು ಸೂಚಿಸುತ್ತಾರೆ. ಅದರಿಂದಾಗಿಯೇ ಕವಿಗೆ ಕೋಲ್ಮಿಂಚಿನ ಲಾಗುಗಳಂತೆ ಸುರಿಯುತ್ತಿರುವ ಜಡಿಮಳೆ ಮನೆಯೊಳಗೂ ಸೋನೆ ಹನಿಯಾಗಿ ಜಿನುಗುತ್ತಿದೆ, ಮನದೊಳಗೂ ಜಿನುಗುತ್ತಿದೆ; ಮನೆಯೊಳಗೆ ಪ್ರವೇಶಿಸಿದ ಮಳೆ ಗೋಡೆಗಳಲ್ಲಿ ಇಳಿದಿದೆ, ನೆಲದಿಂದ ಮೇಲೆದ್ದು ಬಂದಿದೆ. ಮನೆಯನ್ನೆಲ್ಲ ಆರ್ದ್ರವಾಗಿಸಿದೆ; ಮನೆಯ ಆರ್ದ್ರತೆ ಮನದಲ್ಲಿ ಪಡಿಮೂಡಿದೆ ಎನ್ನುತ್ತ. ಅದನ್ನು ಕವಿ ಅರ್ಥೈಸುವುದು ಹೀಗೆ – ನಲ್ಲ ಎನ್ನುವ ಮುಗಿಲು ಹುಬ್ಬುಗಂಟಿಕ್ಕಿಕೊಂಡು ಗಡುಸಾದ ಧ್ವನಿಯಲ್ಲಿ ಬೆದರಿಸುತ್ತಿದ್ದಾನೆ ಎಂದು ಆಗಸ ಎಂಬ ಹೆಣ್ಣು  ಗಟ್ಟಿಯಾಗಿ ಅಳುತ್ತಾ ಕಣ್ಣೀರು ಸುರಿಸಿದ್ದಾಳೆ;.ಅದೇ ಈ ವಿವಿಧ ರೂಪದ ಮಳೆ ಸುರಿಯುವಿಕೆ – ಎಂದು. ನಲ್ಲ ನಲ್ಲೆಯರ ಪ್ರಸ್ತಾಪ ಮಳೆಸುರಿಯುವಿಕೆಗೆ ರಾಜ ಮಹಾರಾಜರ ಧಾಳಿಯಂತೆ ವಿನಾಶದ ಮುಖ ಇದ್ದರೂ, ಯುದ್ಧಾ ನಂತರ ಬಲಿಷ್ಠ ರಾಜ ಮಹಾರಾಜರ ಆಡಳಿತದಲ್ಲಿ ರಾಜ್ಯವು ಶಾಂತಿ, ಸಮಾಧಾನ, ಸುಖ ಸಮೃದ್ಧಿಗಳಿಂದ ನಳನಳಿಸುವಂತೆ; ನಲ್ಲ ನಲ್ಲೆಯರ ನಡುವಿನ ಪ್ರೀತಿಯಂತೆ ಅಂತಿಮವಾಗಿ ಮಳೆಯ ಜಡಿತ ಬಡಿತಗಳೆಲ್ಲ ಹಿತಕರವಾದದ್ದೇ ಆಗುತ್ತದೆ ಎಂಬುದನ್ನು ಸ್ಪಷ್ಟ ಪಡಿಸುತ್ತದೆ. ಅದರಿಂದಾಗಿಯೇ ಕಾರ್ಗಾಲದ ನಡೆಯನ್ನು ಕವಿ ಕಾರ್ಗಾಲದ ವೈಭವ ಎನ್ನುತ್ತಿದ್ದಾರೆ.

ಕಡೆಂಗೋಡ್ಲು ಶಂಕರ ಭಟ್ಟರು ಅಳುತ್ತಿರುವ ಆಗಸ-ಹೆಣ್ಣನ್ನು ನೋಡುತ್ತಾ ನಿಂತುಬಿಟ್ಟರೆ ಹೆಚ್.‌ ಎಸ್.‌ ವೆಂಕಟೇಶ ಮೂರ್ತಿಯವರು ಆ ಭಾವವನ್ನು ವಿಸ್ತರಿಸುತ್ತಾ ಅಳು ಅಳು ಮುಗಿಲೇ, ನಮಗೇನೂ ಬೇಸರವಿಲ್ಲ, ಎಷ್ಟು ಬೇಕಾದರೂ ಅಳು ಎಂದು ಅದನ್ನು ಉತ್ತೇಜಿಸಿದ್ದಾರೆ. ಈ ಮುಗಿಲಿನ ಅಳುವಿಕೆಯನ್ನು ಸಮರ್ಥಿಸಲು ಅವರಿಗೆ ಅವರದೇ ಆದ ತರ್ಕಸರಣಿ ಸಿದ್ಧವಿದೆ. ಅವರ ಪದ್ಯ ಹೀಗಿದೆ:

“ಅಳು ಅಳು ಮುಗಿಲೇ ನಿನ್ನೀ ಅಳಲೇ ನಗುವ ಹೂಗಳಿಗಾಧಾರ| 
ಹೆರವರ ನೋವಿಗೆ ಸುರಿಸುತ ಕಂಬನಿ ಆಗು ಆಗು ನೀ ಹಗುರ||


ನೀಲಿಯ ಬಾನಿನ ನೀರಿನ ತೋಡಿಗೆ ಕಾಮನ ಬಿಲ್ಲಿನ ಹಾಯಿಪಟ| 
ಬತ್ತಿದ ಕೆರೆಗೆ ಏರುವ ಮುಗಿಲೇ ಜೀವ ಹಾಯಿಸುವ ಅಮೃತ ಘಟ||


ಮಿಂಚಿನ ತಂತಿಯ ಮುಗಿಲ ವೀಣೆಯಲಿ ಮೇಘವರ್ಷಿಣಿಯ ಸಂಚಾರ| 
ಬಿಸಿಲಿನ ಬೇಗೆಗೆ ಕೊರಗುವ ಸೋಗೆಗೆ ಮಳೆಯ ಸಿಂಚನವೆ ಪರಿಹಾರ||


ಗಂಗಾ ಮಾಯಿಯ ತುಂಬಿದ ಮೊಲೆಗಳೇ ಹಾಲನು ಊಡಿ ಕಾಪಾಡಿ| 
ಮಳೆಯ ಜೋಲಿಯಲಿ ಇಳೆಯ ತೂಗುತ ಕರುಳಕುಡಿಗೆ ಜೋಗುಳ ಹಾಡಿ||

ಒಬ್ಬನಿಗೆ ಅತಿಯಾದ ದುಃಖ ಆದಾಗ ಕಣ್ಣಿನಿಂದ ಸುರಿಯುವ ಧಾರೆಯನ್ನು ಕಣ್ಣೀರಿನ ವರ್ಷಧಾರೆ ಎನ್ನುತ್ತೇವೆ.ಹಾಗೆ ಸುರಿಸಿದ ಕಂಬನಿ ಇನ್ನೊಬ್ಬರ ಕಷ್ಟಗಳಿಗೆ ತೋರಿದ ಮರುಕ. ಅದರಿಂದ ಕಷ್ಟ ಪರಿಹಾರವಾಗದಿರಬಹುದು. ತಮಗಾಗಿ ಮರುಗುವವರು ಇದ್ದಾರೆ ಎನ್ನುವ ಭಾವ ಅವರಿಗೆ ಕಷ್ಟಗಳನ್ನು ಸಹಿಸುವ, ಎದುರಿಸುವ ಮನಸ್ಸನ್ನಂತೂ ಕೊಡುತ್ತದೆ, ಈಗ ಅವರಿಗೆ ಕಷ್ಟಗಳು ತಲೆಯ ಮೇಲೆ ಕುಳಿತ, ಹೇರಿದ ಮಣಭಾರ ಅಲ್ಲ. ಅವರ ಮನಸ್ಸು ಅತ್ಯಂತ ಹಗುರ. ಸುರಿಯುವ ಮಳೆ ಖಂಡಿತವಾಗಿಯೂ ಗಿಡ ಮರ ಬಳ್ಳಿಗಳಲ್ಲಿ ಹೂವುಗಳನ್ನು ಅರಳಿಸುತ್ತದೆ. ನೀರಿನಿಂದ ತುಂಬಿದ ಮೋಡದಿಂದ ಮಳೆ ಸುರಿದ ಮೇಲೆ ಅದು ಸ್ವಾಭಾವಿಕವಾಗಿ ಹಗುರ. ಈ ಎರಡು ಸಂಗತಿಗಳನ್ನು ಹೊಂದಿಸುವ ಕರುಣೆ, ಅನುಕಂಪ ರೂಪೀ ಅಳುವಿಕೆ ಎನ್ನುವ ಮಾನವೀಯ ಭಾವವು ಇನ್ನೊಬ್ಬರ ನೋವಿಗೆ, ಅಗತ್ಯಕ್ಕೆ ತೋರಿದ ಸ್ಪಂದನೆಯೇ ಆಗುತ್ತದೆ. ಇದನ್ನು ಕವನದ ಪಲ್ಲವಿ ಭಾವಿಸಿದೆ.

ಭೂಮಿಯಿಂದ ಹೊರಬಿದ್ದ ಕಾವೇ ಆಕಾಶದಲ್ಲಿ ಮೋಡವಾಗಿ ರೂಪುಗೊಂಡ ನೀರಿನ ಕಣಗಳು. ಇದನ್ನು ಅರ್ಥೈಸುತ್ತಾ ಕವನವು ಮಳೆ ಮತ್ತು ಬಿಸಿಲೂ ಎರಡೂ ಒಟ್ಟಾಗಿ ಇದ್ದಾಗ ಭೂಮಿಯಿಂದ ಆಕಾಶಕ್ಕೆ ಏರಿರುವಂತೆ ಮೂಡುವ ಕಾಮನಬಿಲ್ಲನ್ನು ನೀರಿನ ಕಣಗಳನ್ನು ಮೇಲಕ್ಕೇರಿಸುವ ಹಾಯಿ ಪಟ ಎಂದರೆ. ಕಾಮನಬಿಲ್ಲಿನೊಂದಿಗೆ ವಾಸ್ತವಿಕವಾಗಿ ಇರುವ ಮಳೆಮೋಡವನ್ನು ಘಟ, ನೀರನ್ನು ಹಿಡಿದಿಡುವ ಪಾತ್ರೆ ಎನ್ನುತ್ತಿದೆ. ಬದುಕನ್ನು ಕಟ್ಟಿಕೊಡುವ ಮಳೆಯನ್ನು ಅಮೃತ ಎನ್ನುತ್ತಿದೆ. ಕೆಲವರು ಮಳೆಗಾಲದ ಆಸುಪಾಸಿನಲ್ಲಿ ಗಾಳಿಪಟದ ಹಬ್ಬವನ್ನು ಆಚರಿಸುತ್ತಾರೆ. ಇದರಲ್ಲಿ ಗಾಳಿಪಟವನ್ನು ಹಾರಿಸುವುದೇ ಮುಖ್ಯವಾದ ಭಾಗ. ಅದು ಎಷ್ಟು ಎಷ್ಟು ಮೇಲಕ್ಕೇರುತ್ತಾ ಹೋಗುತ್ತದೆಯೋ ಅಷ್ಟು ಗಾಳಿಪಟ ಹಾರಿಸುವವರ ಉತ್ಸಾಹ, ಸಂಭ್ರಮ ಹೆಚ್ಚಾಗುತ್ತದೆ. ಈ ಜೀವನೋತ್ಸಾಹವೇ ಹಬ್ಬದಾಚರಣೆಯ ತಿರುಳು. ಇದೇ ರೀತಿ ಮಳೆ ಸುರಿದು ಕೆರೆಯಲ್ಲಿ ತುಂಬುವ ನೀರೂ ಜೀವನೋತ್ಸಾಹದ ಭಾಗವಾಗಿ ಅಮೃತ ಆಗುತ್ತದೆ.  

ಮಳೆಗಾಲದ ಆರಂಭ ಮತ್ತು ಮಳೆ ಧಾರಾಕಾರವಾಗಿ ಸುರಿಯುವುದರ ಮುನ್ಸೂಚನೆಯಾಗಿ ಆಕಾಶದಲ್ಲಿ ಕಾಣಿಸಿಕೊಳ್ಳುವ ಮಿಂಚು ಕಣ್ಣು ಕೋರೈಸುತ್ತದೆ, ಅದರೊಂದಿಗೆ ಸೇರಿಕೊಳ್ಳುವ ಕಿವಿಗಡಚಿಕ್ಕುವ ಗುಡುಗು ಹೆದರಿಕೆ ಹುಟ್ಟಿಸುತ್ತದೆ. ಆದರೆ ಹೆಣ್ಣು ನವಿಲನ್ನು ಒಲಿಸಿಕೊಳ್ಳಲು ಕಾತರದಿಂದಿರುವ ಗಂಡುನವಿಲಿನಲ್ಲಿ (=ಸೋಗೆ) ವಿದ್ಯುತ್ ಸಂಚಾರ ಉಂಟುಮಾಡುವ ಸಾಧ್ಯತೆಯೂ ಅದಕ್ಕೆ ಇದೆ. ಮಿಂಚಿನೊಂದಿಗೆ ಸುರಿದ ಮಳೆಗೆ ಭೂಮಿಯ ಫಲವತ್ತತೆಯನ್ನು ಹೆಚ್ಚಿಸುವ ಗುಣವೂ ಇದೆ. ಒಣಗಿ ತರಗೆಲೆಯಂತಾದ ಪ್ರಕೃತಿಯನ್ನೂ, ಅದನ್ನು ಆಶ್ರಯಿಸಿ ಬದುಕನ್ನು ಸುಂದರಗೊಳಿಸಿಕೊಳ್ಳುವ ಪ್ರಾಣಿ ಪಕ್ಷಿಗಳನ್ನೂ ಮತ್ತು ಮನುಷ್ಯರನ್ನೂ ಸಂತೋಷಪಡಿಸುವುದು ಮಳೆಯ ಸಿಂಚನವೇ.


ಮಳೆ ಹೇಗೆ ಹೇಗೋ ಸುರಿದರೆ ಅದು ಜೀವಕಾರಕ ಅಮೃತ, ಜೀವನೋತ್ಸಾಹವನ್ನು ಚಿಗುರಿಸುವ ಜಲಕುಂಭ, ಸುಂದರ ಬದುಕನ್ನು ಹಬ್ಬಿಸುವ ಮಿಂಚಿನ ಬಳ್ಳಿ ಆಗಲಾರದು. ಸುರಿದದ್ದು ಎರ‍್ರಾಬರ‍್ರಿಯಾಗಿ ಹರಿದು ಎಲ್ಲವನ್ನೂ ತೊಳೆದುಕೊಂಡು ಹೋಗುವ ವಿನಾಶಕಾರಿ ಬಿರುಮಳೆಯಂತೂ ಆಗಬಾರದು. ಬದಲಿಗೆ ಅದು ಭಗೀರಥ ಭೂಮಿಗೆ ತಂದ ಗಂಗಾ ಮಾತೆ ಆಗಬೇಕು. ಭೂಮಿಯನ್ನು ಸಂಭಾಳಿಸುವ ಜೋಲಿಯೂ ಆಗಬೇಕು, ಅದನ್ನು ಸಂತೈಸಿ ತಣಿಸುವ ಜೋಗುಳವೂ ಆಗಬೇಕು. ಈ ಎಲ್ಲಾ ಆಶಯಗಳ ಮಳೆಯ ವೈಭವಕ್ಕೆ ಒಂದು ರೂಪಕ “ಮಿಂಚಿನ ತಂತಿಯಲಿ ಮೋಡದ ವೀಣೆಯಲ್ಲಿ ಮೂಡಿಬಂದ ಮೇಘವರ್ಷಿಣಿ (ವರ್ಷಧಾರೆ)ಯ ನಾದ ಕಾರ್ಗಾಲ” ಎನ್ನುವ ಕವಿ-ಕಲ್ಪನೆ ಹೆಚ್‌ ಎಸ್.‌ ವೆಂಕಟೇಶಮೂರ್ತಿಯವರು ಮಾನವೀಯ ಸ್ಪಂದನೆಯ ಹಲವು ಆಯಾಮಗಳಿಗೆ ಒಂದು ಮೂರ್ತರೂಪವಾಗಿ ಅಳುವ ಮುಗಿಲನ್ನು ಪರಿಕಲ್ಪಿಸಿದರೆ ದೊಡ್ಡ ರಂಗೇಗೌಡರು ವಸುಂಧರೆಯ ಹೂ ಮೈಯಲ್ಲಿ ವಿವಿಧ ಸಾಧ್ಯತೆಗಳ ಹೊನ್ನಾರನ್ನು ಮೂಡಿಸುವ ಮುಂಗಾರನ್ನು ಒಳಗೊಳ್ಳುವ ಅಸೀಮರೂಪಿ ಅಂಬರವನ್ನು ಪರಿಕಲ್ಪಿಸಿದ್ದಾರೆ. ಅವರು ಮಳೆಗಾಲವನ್ನು ಸ್ವಾಗತಿಸಿ ಹಾಡಿದ್ದು ಹೀಗೆ –

ಅಸೀಮ ರೂಪಿ ಅಂಬರದಲ್ಲಿ ಮುಂಗಾರು ಮೂಡಿದೆ|
ವಸುಂಧರೆಯ ಹೂಮೈಯಲ್ಲಿ ಹೊನ್ನಾರು ಮೂಡಿದೆ||
ಹೊಸೆವ ಬಿಸಿಲು ಮಾಗಿರುವಲ್ಲಿ ಮಂದಹಾಸ ಮೂಡಿದೆ| 
ಹಸಿದ ರೈತ-ಸಂಕುಲದಲ್ಲಿ ಹೊಸ ಆಸೆ ಹಾಡಿದೆ||


ಅಗಮ್ಯ ಎದೆಯ ಕಾನನದಲ್ಲಿ ಹರಿದ್ವರ್ಣ ತೋರಿದೆ| 
ಅದಮ್ಯ ಸಿರಿಯ ಸಂಭ್ರಮದಲ್ಲಿ ಜೀರುಂಡೆ ಕೂಗಿದೆ||
ವರುಣ ಬರುವ ಆವೇಷದಲ್ಲಿ ದುಂದುಭಿ ಮೊಳಗಿದೆ| 
ಹರ್ಷ ತರುವ ಮಾರುತದಲ್ಲಿ ಮಣ್ಣಿನಾ ಕಂಪಿದೆ||

ಅನನ್ಯ ಬಗೆಯ ಬಾಂದಳದಲ್ಲು ಸಂತೋಷ ತುಂಬಿದೆ| 
ಆಧಿಕ್ಯ ಬದುಕ ಗೊಂದಲದಲ್ಲೂ ಉನ್ಮಾದ ಚಿಮ್ಮಿದೆ||
ಅಸಂಖ್ಯ ಹೊದರ ತರುಲತೆಯಲ್ಲು ಲಾವಣ್ಯ ಮಿಂಚಿದೆ| 
ಅನೂಹ್ಯ ಪದರ ಕಾರ್ಮುಗಿಲಲ್ಲೂ ಹೂ ಮಳೆಯ ಸಂಚಿದೆ||

ಮಹಾಪೂರ ನಿರೀಕ್ಷೆ ಕಾತರವೇ ಕಾದಿದೆ|
ಗರಿಕೆ ಲತೆ ಚಿಗುರ ಅಂಗಳದಲ್ಲೂ ಆನಂದ ತುಂಬಿದೆ||
ಹೊಸ ನೇಗಿಲ ಮುನ್ನಡೆಯಲ್ಲು ಋತುಮಾನದ ಆನಂದ ಇದೆ| 
ನವಮಾನವ ಮುನ್ನೋಟದಲ್ಲಿ ಕಾಲಚಕ್ರ ಉರುಳಿದೆ||

ಸೀಮೆ ಇಲ್ಲದ ಆಕಾಶದಲ್ಲಿ ನೋಡ ನೋಡುತ್ತಿದ್ದಂತೆ ಸೀಮೆಯುಳ್ಳ ಮೋಡಗಳು ಮೂಡಿವೆ. ಬಗೆ ಬಗೆಯ ಆಕಾರಗಳನ್ನು ತಳೆಯುತ್ತಿವೆ. ದಟ್ಟವಾದ, ಸಾಂದ್ರ ಕಪ್ಪು ಮೋಡಗಳಾಗಿ ಕಾಣಿಸಿಕೊಳ್ಳುತ್ತಾ ಧಾರಾಕಾರವಾಗಿ ಮಳೆ ಸುರಿಸಿಬಿಟ್ಟಿವೆ. ಅದುವರೆವಿಗೂ ಒಣಗಿ ಗಾರಾಗಿದ್ದ ಭೂಮಿಯಲ್ಲಿ ಹೊನ್ನಾರು ಮೂಡಿ ಭೂಮಿ ಹೂವಿನಂತೆ ಮೃದುವಾಗಿ ಮೂಲೆ ಮೂಲೆಯಲ್ಲೂ ಚಿಗುರೊಡೆಯಲು ಸಿದ್ಧವಾಗಿದೆ. ಕೃಷಿಯೇ ಜೀವನಾಧಾರವಾಗಿರುವ ರೈತರಲ್ಲಿ ಬೆಳೆ ಪಡೆಯುವ ಹೊಸ ಹೊಸ ಆಸೆ ಹಾಡಾಗಿ ಹೊರಹೊಮ್ಮಿದೆ.

ಮೋಡಗಳು ಮಳೆಗರೆಯುವುದಕ್ಕೆ ಈ ಮುಂಚೆ ಮನುಷ್ಯರನ್ನೂ ಒಳಗೊಂಡಂತೆ ಇಡೀ ಜೀವಸಮೂಹವೇ ಬಿರುಬೇಸಿಗೆಯ ತಾಪಕ್ಕೆ ಮುದುಡಿ ಹೋಗಿತ್ತು. ಈಗ ಬಿಸಿಲು ಮಾಗಿ ಇಡೀ ಸೃಷ್ಟಿಯಲ್ಲಿ ಮಂದಹಾಸ ಕಾಣುವಂತಾಗಿದೆ. ಸುಡು ಬೇಸಿಗೆಯ ಬಿಸಿಲಿನ ತಾಪಕ್ಕೆ ಒಣಗಿ ಕಡ್ಡಿಯಂತಾಗಿ ಓಡಾಡುವ ಜೀವಿಗಳಿಗೆ ಘಾಸಿಮಾಡುತ್ತಿದ್ದ ಕಾಡಿನ ಗಿಡ ಮರ ಬಳ್ಳಿ ಪೊದರುಗಳಲ್ಲೆಲ್ಲಾ ಈಗ ಎಲ್ಲೆಲ್ಲೂ ದಟ್ಟವಾದ ಹಸಿರು ವರ್ಣ ಚಿತ್ತಾರ ಮೂಡಿ ಮನಸೆಳೆಯುತ್ತಿದೆ, ಅಗಮ್ಯವಾಗಿದ್ದ ಕಾನನ ಗಮ್ಯವಾಗಿಬಿಟ್ಟಿದೆ. ಜೀರುಂಡೆಯಂಥ ಕೀಟದಿಂದಲೂ ಸಂತೋಷದ ನಾದ ಒಡಮೂಡಿದೆ.

ಮಳೆರಾಯ ಮೇಘಗಳ ದುಂದುಭಿಯನ್ನು ಮೊಳಗಿಸಿಕೊಂಡೇ ಆಗಮಿಸಿದ್ದಾನೆ, ತನ್ನ ಬರುವಿಕೆಯ ಘೋಷವನ್ನು ಸಾರಿದ್ದಾನೆ. ಅವನ ಜೊತೆಗೆ ಬೀಸಿ ಬರುವ ಮಾರುತ ಘಂ ಎನ್ನುವ ಮಣ್ಣಿನ ಕಂಪನ್ನು ಹೊತ್ತು ತಂದಿದ್ದಾನೆ, ಹರ್ಷದ ಸವಿಯುಣಿಸನ್ನು ಹಂಚಿದ್ದಾನೆ. ಮಳೆಯೊಂದಿಗೆ ಸಂಪತ್ತು, ಸಮೃದ್ಧಿಗಳನ್ನು ತಳುಕು ಹಾಕಿಕೊಂಡೇ ಬಂದಿದ್ದಾನೆ. ಜನರ ಬದುಕು ಅವರು ಸಂಪಾದಿಸಿದ ಬಗೆ ಬಗೆಯ ಐಶ್ವರ್ಯ ಸಿರಿ ಸಂಪತ್ತುಗಳಿಂದ ಗೊಂದಲಮಯವಾಗಿಬಿಟ್ಟರೂ ಅವರ ಬದುಕಿನ ಸೊಬಗಿಗೆ ಮಳೆಯಿಂದ ಯಾವ ಭಂಗವೂ ಉಂಟಾಗದ ಎಚ್ಚರವನ್ನು ತೋರಿದ್ದಾನೆ. ಅಬ್ಬರದಿಂದ ಮುಸಲಧಾರೆಯಂತೆ ಸುರಿದ ಮಳೆಯಿಂದ ಮಹಾಪೂರ ಬರಬಹುದು, ಎಲ್ಲೆಲ್ಲೂ ವಿನಾಶದ ಹಾಹಾಕಾರ ಏಳಬಹುದು, ಮುಂದೇನು ಗತಿ ಎನ್ನುವ ಕಾತರ ಕಾಡಬಹುದು. ಆದರೂ ಅದು ಮಳೆಗಾಲದ ಸೊಗಸನ್ನು ದೂರಮಾಡದು. ದಟ್ಟವಾದ ಕಡುಗಪ್ಪು ಮೋಡವೂ ಹೂಮಳೆಯನ್ನೇ ಸುರಿಸೀತು, ಜೀವನದ ಸಂತೋಷಕ್ಕೆ ಹಾನಿಯನ್ನು ಮಾಡದಿದ್ದೀತು ಎನ್ನುವ ಭರವಸೆಗೂ ಧಕ್ಕೆ ತಾರದು ಎಂದು ಮಳೆಗಾಲದ ಸದಾಶಯವನ್ನು ಪರಿಭಾವಿಸುವ ದೊಡ್ಡರಂಗೇಗೌಡರಿಗೆ ಮಳೆಗಾಲ ಇಡೀ ವಾಸ್ತವತೆಯನ್ನೇ ಸಂತೋಷಮಯವಾಗಿಸುವ ಒಂದು ಮಹದದ್ಭುತ!

ಇಂಥ ಮಳೆಗಾಲ ಕೇವಲ ಒಂದು ಋತುಮಾನ ಅಲ್ಲ. ಅದು ಹೊಸತನ್ನು ಉತ್ತಿ ಬಿತ್ತಿ ಬೆಳೆಯುವ ನೇಗಿಲು, ಮುನ್ನಡೆಯ ಸಾಧನ, ಹೊಸ ಹೊಸ ಬದುಕಿನ ಸಾಧ್ಯತೆಗಳ ಬಾಗಿಲನ್ನು ತೆರೆಯುವ ಮಾನದಂಡ.

ಪದ್ಮಿನಿ ಹೆಗಡೆ

4 Responses

  1. ಮಹೇಶ್ವರಿ ಯು says:

    ತುಂಬ ಸೊಗಸಾಗಿದೆ

  2. ನಯನ ಬಜಕೂಡ್ಲು says:

    Very nice

  3. ಬಹಳ ಸೊಗಸಾದ ಲೇಖನ ಮೇಡಂ.. ನಿಮ್ಮಂಥ ಗುರುಗಳನ್ನು ಪಡೆದಿದ್ದ ಶಿಷ್ಯರು ಪುಣ್ಯಮಾಡಿದ್ದರು…ಮೇಡಂ..

  4. ಶಂಕರಿ ಶರ್ಮ says:

    ಹಿರಿಯ ಕವಿಗಳ ಕವನಗಳನ್ನು ಉದಾಹರಿಸುತ್ತಾ, ಮಳೆಗಾಲದ ವೈಭವವನ್ನು ಕಣ್ಮುಂದೆ ತಂದ ಲೇಖನವನ್ನು ಓದುವಾಗ ಹೊರಗಡೆಯೂ ಧೋ…ಮಳೆ! ಸಕಾಲಿಕ ಸುಂದರ ಲೇಖನ. ಧನ್ಯವಾದಗಳು ಮೇಡಂ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: