ಕಾಣದ ಕಥೆ – ವ್ಯಥೆ
ಪಾಲಿಗೆ ಬಂದ ಅರ್ಧ ಎಕರೆ ಹೊಲದ ಒಡೆಯ ಎನ್ನಪ್ಪ
ಬಾರದ ಮಳೆಗೆ ಮುಗಿಲ ಕಡೆ ಮುಖ ಮಾಡಿ ಕಾಯುತ್ತಿದ್ದ ಈ ಮೂಕ ಬಸಪ್ಪ
ನಾನು ಹುಟ್ಟಿದಾಗ ಹೆಣ್ಣೆಂದು ಹೀಗಳೆಯದೆ
ಓಣೆಯಲೆಲ್ಲಾ ಸಿಹಿ ಹಂಚಿದ್ದ ಈ ಸುದ್ದಿ ಸೂರಪ್ಪ
ಸಾಲ ಮಾಡಿ ತಂದ ಜೋಡಿ ಎತ್ತುಗಳಿಗೆ ರಾಮ ಲಕ್ಷ್ಮಣ
ಎಂದು ಹೆಸರಿಟ್ಟು ಕುಣಿದಾಡಿದ್ದ ನನ್ನ ಹೆತ್ತಪ್ಪ
ಕಾಲು ಬಾಯಿ ರೋಗಕ್ಕೆ ತುತ್ತಾಗಿ ಲಕ್ಷ್ಮಣ ಕೊನೆಯುಸಿರೆಳೆದಾಗ
ಕಣ್ಣೀರು ಸುರಿಸಿ ಹೊರಳಾಡಿದ್ದ ಅನ್ನದಾತ ಎಂದು ಕರೆಸಿಕೊಳ್ಳುವ
ಸಣ್ಣ ಹಿಡುವಳಿದಾರ ಈ ದಾನಪ್ಪ
ಆಗೊಮ್ಮೆ ಈಗೊಮ್ಮೆ ಸುರಿದ ಮಳೆಗೆ ಮೊಳಕೆಯೊಡೆದ ಪೈರ ರಕ್ಷಿಸಲು
ಹಬ್ಬಿದ ಕಳೆ ತೆಗೆಯಲೆಂದು ಎಡೆ ಕುಂಟೆ ಹೊಡೆಯಲು
ಲಕ್ಷ್ಮಣನ ನೆನೆದು ಮಂಕಾಗಿದ್ದ ಮರುಳ ಈ ಸಿದ್ದಪ್ಪ
ರಾಮನ ಜೊತೆಯಾಗಿ ನೊಗ ಹೊರಲು ಸಿದ್ದಳಾದ ಮಗಳ ಕಂಡು
ವಿಲವಿಲ ಒದ್ದಾಡಿದ್ದ ಅಕ್ಕರೆಯ ಮೂಟೆ ಈ ಜೀವಪ್ಪ
ಬೊಬ್ಬೆ ಬಂದ ಕೈಗಳಿಗೆ ಎಣ್ಣೆಯ ಸವರುತ್ತಾ
ಮಗಳಲ್ಲ ನೀನು ಎನ್ನ ಜೀವದ ಗೆಳತಿ ಬಾಳ ಭಾಗ್ಯ ಜ್ಯೋತಿ
ಎಂದು ತಬ್ಬಿಕೊಂಡು ಮುತ್ತಿಟ್ಟ ಈ ಲೋಕಪ್ಪ
ನೀ ಉಟ್ಟ ಒರಟು ದಟ್ಟಿ ಬಟ್ಟೆ ಕೆದರಿದ ಕೂದಲು
ನಿನ್ನ ಜೀವನ ಉತ್ಸಾಹವ ಮರೆ ಮಾಚಲಾರದಪ್ಪ
ಬೆಳೆದು ಹಂಚುವ ನಿನ್ನ ಪವಿತ್ರ ಕಾಯಕಕ್ಕೆ
ಸರಿ ಸಮಾನವಾಗಿ ಯಾವುದು ನಿಲ್ಲಲಾರದಪ್ಪ
ಭೂಮಿ ನಂಬಿ ಬದುಕುವ ನೀನು ಎಂದೆಂದಿಗೂ ಮಹರಾಜನೇ
ನಿನ್ನ ಮಗಳಾದ ನಾನು ಯಾವತ್ತಿಗೂ ರಾಜಕುಮಾರಿಯೇ
-ಕೆ.ಎಂ ಶರಣಬಸವೇಶ
ಹೃದಯಸ್ಪರ್ಶಿಯಾಗಿದೆ ಕೃಷಿಕನ ಕಥೆ.
ಸೂಪರ್ ಸಾರ್.
ನಯನ ಮೇಡಂ ಪ್ರತಿಯೊಬ್ಬರ ಬರಹ ಓದಿ ಆನಂದಿಸಿ ಪ್ರತಿಕ್ರಿಯೆ ನೀಡುತ್ತೀರಾ…ಧನ್ಯವಾದಗಳು
ನೋವಿನಲ್ಲೂ ನಲಿವನ್ನು ಕಾಣುವ ರೈತನ ಕುರಿತ ಮನಮುಟ್ಟುವ ಕವನ.
ರೈತ ತನಗುಂಟಾಗುವ ನೋವುಗಳನ್ನು ನುಂಗಿ ಕಾಯಕಗೈಯುವ ಕರ್ಮಯೋಗಿ. ಮಗಳು ಕಾಯಕದಲ್ಲಿ ಕೈ ಜೋಡಿಸಿದ್ದು ಒಂದು ಆಶಾವಾದವನ್ನು ಹುಟ್ಟು ಹಾಕಿತು. ಚಂದದ ಕವಿತೆ.