ಜೂನ್ ನಲ್ಲಿ ಜೂಲೇ : ಹನಿ 11
(ಲಡಾಕ್ ಪ್ರವಾಸಕಥನ, ಹಿಂದಿನ ಸಂಚಿಕೆಯಿಂದ ಮುಂದುವರಿದುದು…)
ಕರ್ದೂಂಗ್ಲಾ ಪಾಸ್
26 ಜೂನ್ 2018 ರಂದು ಲಡಾಕ್ ನಲ್ಲಿ ನಮ್ಮ ನಾಲ್ಕನೆಯ ದಿನದ ಆರಂಭವಾಯಿತು.ಎಲ್ಲರೂ ತಿಂಡಿ ಮುಗಿಸಿ, ಹೋಟೆಲ್ ನಿಂದ ಹೊರಟೆವು. ಗಿರಿ, ಝೋರಾ ದಂಪತಿಗಳು ಪುನ: ಕ್ಷೇಮಕುಶಲ ವಿಚಾರಿಸಿ, ನಾವು ಹೋಗಲಿರುವ ಕರ್ದೂಂಗ್ಲಾ ಪಾಸ್ ಮತ್ತು ನುಬ್ರಾ ಕಣಿವೆಯಲ್ಲಿ ಚಳಿ ಇನ್ನೂ ಜಾಸ್ತಿ ಇರುತ್ತದೆ, ಜೋಪಾನವಾಗಿರಿ ಎಂದು ಎಚ್ಚರಿಸಿ, ಸುಖವಾಗಿ ಹೋಗಿ ಬನ್ನಿ ಎಂದು ಹಾರೈಸಿದರು.
ಆ ದಿನದ ನಮ್ಮ ಕಾರ್ಯಕ್ರಮದ ಪ್ರಕಾರ, ಹೋಟೆಲ್ ಗ್ಯಾಲಕ್ಸಿಯಿಂದ ಹೊರಟು, ಕರ್ದೂಂಗ್ಲಾ ಪಾಸ್ ಎಂಬ ಜಗತ್ತಿನ ಅತ್ಯಂತ ಎತ್ತರದ ಸರ್ವಋತು ವಾಹನಸಂಚಾರವುಳ್ಳ ರಸ್ತೆಯ ಮೂಲಕ ಪ್ರಯಾಣಿಸಿ ‘ನುಬ್ರಾ ಕಣಿವೆ’ ತಲಪಬೇಕಿತ್ತು. ಅಂದು ನುಬ್ರಾ ಕಣಿವೆಯಲ್ಲಿ ಟೆಂಟ್ ನಲ್ಲಿ ವಾಸ್ತವ್ಯ. ನುಬ್ರಾ ಕಣಿವೆಯ ಸುತ್ತುಮುತ್ತಲಿನ ಜಾಗಗಳನ್ನು ನೋಡಿ, ಮರುದಿನ ಮರಳಬೇಕಿತ್ತು. ಹಾಗಾಗಿ, ಒಂದು ದಿನದ ಮಟ್ಟಿಗೆ ಬೇಕಾಗುವ ಬಟ್ಟೆಬರೆ, ಬೆಚ್ಚಗಿನ ಉಡುಪುಗಳನ್ನು ಬೇರೆ ಬ್ಯಾಗನಲ್ಲಿ ತುಂಬಿಸಿ, ದೊಡ್ಡ ಲಗೇಜನ್ನು ಹೋಟೆಲ್ ನಲ್ಲಿಯೇ ಬಿಡಬಹುದು ಎಂದು ಮೊದಲಾಗಿಯೇ ತಿಳಿಸಿದ್ದರು. ಒಂದು ದಿನದ ಮಟ್ಟಿಗೆ ಅವಶ್ಯ ವಸ್ತುಗಳನ್ನು ಪ್ಯಾಕ್ ಮಾಡಿ ಹೊರಟೆವು.
ಲೇಹ್ ನಿಂದ ಹೊರಟ ವ್ಯಾನ್ ಗಿರಿಕಂದರಗಳ ನಡುವೆ ವೇಗವಾಗಿ ಹೊರಟಿತು. (Border Road Organization) ನವರು ನಿರ್ವಹಿಸುವ ಇಲ್ಲಿನ ರಸ್ತೆಗಳು, ವಿಪರೀತ ಹವಾಮಾನ ಎದುರಿಸುತ್ತಿದ್ದರೂ ಚೆನ್ನಾಗಿಯೇ ಇವೆ. ಲೇಹ್ ನಿಂದ ಹೆಚ್ಚಿನ ಎತ್ತರದಲ್ಲಿರುವ ಕರ್ದೂಂಗ್ಲಾ ಪಾಸ್ ಕಡೆಗೆ ಹೋಗುವ ದಾರಿಯಲ್ಲಿ ಅಲ್ಲಲ್ಲಿ ಪುಟ್ಟ ಹಳ್ಳಿಗಳು ಎದುರಾದುವು. ಅಲ್ಲಲ್ಲಿ ಚಿಕ್ಕ ದೊಡ್ಡ ಸ್ತೂಪಗಳು ಕಾಣಸಿಕ್ಕಿದುವು. ಕೆಲವು ಹತ್ತಾರು ಅಡಿ ಇದ್ದರೆ ಇನ್ನು ಕೆಲವು ನಮ್ಮೂರ ತುಳಸಿಕಟ್ಟೆಯಷ್ಟು ಎತ್ತರ ಇದ್ದುವು. ಕೆಲವೆಡೆ ಹಲವಾರು ಚಿಕ್ಕ-ಚಿಕ್ಕ ಸ್ತೂಪಗಳು ಒಂದೇ ಕಡೆ ಇದ್ದುವು. ಹಾಗಾಗಿ ಇವುಗಳು ಸ್ತೂಪಗಳೇ, ಸಮಾಧಿಗಳೇ ಎಂಬ ಅನುಮಾನ ಕಾಡಿತು. ಡ್ರೈವರ್ ನೋಬ್ರುವನ್ನು ಈ ಬಗ್ಗೆ ಕೇಳಿದಾಗ, ಅವು ಟಿಬೆಟಿಯನ್ ಬೌದ್ದರ ಗುಡಿಗಳು, ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ಮನೆ ಪಕ್ಕ ಸ್ತೂಪ ಕಟ್ಟಿಕೊಳ್ಳುತ್ತಾರೆ, ಹಿಂದಿನ ರಾಜನ ಕಾಲದಲ್ಲಿ ತಪ್ಪಿತಸ್ಥರಿಗೆ ಶಿಕ್ಷಾರೂಪವಾಗಿಯೂ ಸ್ತೂಪಗಳನ್ನು ರಚಿಸಲು ಆದೇಶಿಸುತ್ತಿದ್ದರಂತೆ. ಅವೂ ಇರಬಹುದು ಎಂದ.
ಪ್ರಯಾಣ ಮುಂದುವರಿಯಿತು .ನೋಡಿದಷ್ಟೂ ದಣಿಯದ ದೃಶ್ಯವೈಭವವನ್ನು ನೋಡುತ್ತಾ, ಅಲ್ಲಲ್ಲಿ ಹಿಮಾವೃತ ಬೆಟ್ಟಗಳ ಪಟ ತೆಗೆಯುತ್ತಾ ಸಾಗಿದೆವು. ಈಗ ತಂಡದ ಇತರರನ್ನೂ ಪರಿಚಯವಾಗಿದ್ದುದರಿಂದ ನಾವು ತಂದಿದ್ದ ಕುರುಕಲು ತಿಂಡಿಗಳ ವಿನಿಮಯ ಮಾಡಲಾರಂಭಿಸಿದ್ದೆವು., ಸುಮಾರು 3 ಗಂಟೆಗಳ ಪ್ರಯಾಣದ ನಂತರ ‘ಕರ್ದೂಂಗ್ಲಾ ಪಾಸ್ ‘ಎಂಬ ಹೆಸರಿನ ಜಗತ್ತಿನ ಅತ್ಯಂತ ಎತ್ತರದ ವಾಹನಸಂಚಾರ ಯೋಗ್ಯ ರಸ್ತೆಯಲ್ಲಿ ನಾವಿದ್ದೆವು. ಅಲ್ಲಿ, ಆಗ ಬಿಸಿಲಿತ್ತು. ಹಾಗೆಂದು ಮೋಡಗಳ ಮಧ್ಯೆಯೇ ನಾವಿದ್ದೆವು. ಯಾವಾಗ ಹಿಮ ಬೀಳುತ್ತದೆ, ಮಳೆ ಸುರಿಯುತ್ತದೆ, ಚಳಿಗಾಳಿ ಬೀಸುತ್ತದೆ, ಸುಡುಬಿಸಿಲು ರಾಚುತ್ತದೆ ಎಂದು ಅಂದಾಜಿಸಲಾಗದ ಜಾಗ ಅದು. ಇಲ್ಲಿ ಉರಿಬಿಸಿಲೂ ಇದೆ, ಅತಿಚಳಿಯೂ ಇದೆ. ಮಳೆ ಬಂದಾಗ ಎತ್ತರದ ಬೆಟ್ಟಗಳಿಂದ ಬಂಡೆಗಳು ಉರುಳಿ ಬೀಳುತ್ತವೆ. ಒಟ್ಟಿನಲ್ಲಿ ಸದಾ ಅಪಾಯದ ನೆರಳಿನಲ್ಲಿರುವ ಜಾಗವಿದು. ಈ ಪ್ರದೇಶದಲ್ಲಿ ಸೈನಿಕರು ಓಡಾಡುತ್ತಿರುತ್ತಾರೆ. ಒಂದು ಕೆಫೆ ಇದೆ. ಮಿಕ್ಕಂತೆ ಪ್ರಕೃತಿಯದೇ ರಾಜ್ಯಭಾರ. ಅರ್ಧಗಂಟೆ ಕಾಲಕ್ಷೇಪ ಮಾಡಿ ‘ನುಬ್ರಾ ಕಣಿವೆ’ಯತ್ತ ಪ್ರಯಾಣ ಬೆಳೆಸಿದೆವು.
ಕರ್ದೂಂಗ್ಲಾ ಪಾಸ್ ನಿಂದ ಬೆಟ್ಟದ ಕೆಳಗಿಳಿದು ನುಬ್ರಾ ಕಣಿವೆಯತ್ತ ಹೊರಟೆವು. ದಾರಿ ಮಧ್ಯೆ ಸಿಕ್ಕಿದ ಹಳ್ಳಿಯೊಂದರ ಢಾಭಾದಲ್ಲಿ ರೋಟಿ, ದಾಲ್ , ಸೂಪ್ , ಬಾಳೆಹಣ್ಣು ಇತ್ಯಾದಿ ಕೊಂಡು ಊಟ ಮಾಡಿದೆವು. ನುಬ್ರಾ ಕಣಿವೆಯು ಲೇಹ್ ನಿಂದ 125 ಕಿ.ಮೀ ದೂರದಲ್ಲಿದೆ. ಇಲ್ಲಿ ಸಿಂಧೂ ನದಿಯ ಉಪನದಿಗಳಾದ ಶೋಯಕ್ , ಸಿಯಾಚಿನ್ ಹಾಗೂ ನುಬ್ರಾ ನದಿಗಳು ಹರಿಯುತ್ತಿವೆ. ಸಮುದ್ರಮಟ್ಟದಿಂದ ಸರಾಸರಿ 10000 ಅಡಿ ಎತ್ತರದಲ್ಲಿರುವ ನುಬ್ರಾ ಕಣಿವೆಯಲ್ಲಿ ಗೋಧಿ, ಬಾರ್ಲಿ, ಈರುಳ್ಳಿ, ಹೂಕೋಸು ಇತ್ಯಾದಿಗಳನ್ನು ಬೆಳೆಸುತ್ತಾರೆ. ಲಡಾಕ್ ವಲಯದಲ್ಲಿ ಅತಿ ಹೆಚ್ಚು ಹಸಿರು ಇರುವ ಭೂಭಾಗವಾಗಿದ್ದು ಮತ್ತು ಹೂವುಗಳು ಬೆಳೆಯುವ ಜಾಗವಾದುದರಿಂದ ನುಬ್ರಾ ಕಣಿವೆಗೆ ‘ದುಂಬ್ರಾ ವ್ಯಾಲಿ’ ಅಂದರೆ ಹೂಗಳ ಕಣಿವೆ ಎಂಬ ಹೆಸರೂ ಇದೆ.
ಮುಂದುವರಿಯುವುದು..
ಈ ಬರಹದ ಹಿಂದಿನ ಸಂಚಿಕೆ ಇಲ್ಲಿದೆ : https://surahonne.com/?p=37175
-ಹೇಮಮಾಲಾ, ಮೈಸೂರು
ಎಂದಿನಂತೆ ಪ್ರವಾಸ ಕಥನ ಓದಿಸಿಕೊಂಡು ಹೋಯಿತು..ನಿರೂಪಣೆಯ ಜೊತೆಗೆ ಸಾಂದರ್ಭಿಕ ಚಿತ್ರ ಗಳು ಮುದತಂದಿತು..
ಧನ್ಯವಾದಗಳು ಗೆಳತಿ ಹೇಮಾ
ಉತ್ತಮವಾದ ನಿರೂಪಣೆ
ಸೊಗಸಾಗಿದೆ
ಪಯಣದ ಪ್ರತಿ ಹಂತದ ವಿವರಣೆಯನ್ನೂ ಸರಳ, ಸುಂದರ ರೂಪದಲ್ಲಿ ಪ್ರಸ್ತುತ ಪಡಿಸಿದ ಲೇಖನಮಾಲೆ ಬಹಳ ಚೆನ್ನಾಗಿ ಮೂಡಿ ಬರುತ್ತಿದೆ…ಧನ್ಯವಾದಗಳು ಹೇಮಾ ಅವರಿಗೆ.