ಪುರಿ-ಡಾರ್ಜಿಲಿಂಗ್ ಪ್ರವಾಸ ಪುಟಗಳು : ಪುಟ 15
ನಮ್ಮ ಪ್ರವಾಸದ ಐದನೇ ದಿನ.. ದಕ್ಷಿಣೇಶ್ವರದ ದೇವಾಲಯದಲ್ಲಿ, ಯಾವಾಗಲೂ ಜನ ದಟ್ಟಣೆ ಹೆಚ್ಚಿರುವುದರಿಂದ, ದೇವರ ದರ್ಶನ ನಿಧಾನವಾಗಬಹುದೆಂದು, ಆದಷ್ಟು ಬೇಗ ಹೊರಡುವಂತೆ ಬಾಲಣ್ಣನವರು ಸೂಚನೆ ನೀಡಿದ್ದರು. ಎಂದಿನಂತೆ, ಬೆಳ್ಳಂಬೆಳಗ್ಗೆ ಆರು ಗಂಟೆಗೆ ರೂಮುಗಳಿಗೆ ಬರುವ ಚಾ-ಕಾಫಿ ಸೇವಿಸಿ, ಎಂಟು ಗಂಟೆಗೆ ಸಿದ್ಧವಿದ್ದ ರಾಜೇಶಣ್ಣ ಬಳಗದವರ ಸ್ಪೆಶಲ್ ಮಸಾಲೆದೋಸೆಯನ್ನು ಖಾಲಿ ಮಾಡಿ, ಮುಂದೆ ಅಲ್ಲಿಯ ಜಗತ್ಪ್ರಸಿದ್ಧ ಸೇತುವೆಯ ಮೂಲಕ ನಮ್ಮ ಪಯಣ ದಕ್ಷಿಣೇಶ್ವರದ ಕಡೆಗೆ ..
ಮಹಾದೇವಿ ಕಾಳಿಮಾತೆಯಿರುವ ಕಾಲಿಘಾಟ್ ನಂತೆಯೇ ಕೋಲ್ಕೊತ ನಗರಿಯ ಹೆಸರಿನೊಂದಿಗೆ ಬೆಸೆದುಕೊಂಡಿರುವ, ಅದರ ಇನ್ನೊಂದು ಅವಿಭಾಜ್ಯ ಅಂಗವೇ ಹೌರಾ ಸೇತುವೆ. ಪ್ರಸಿದ್ಧ ಹೂಗ್ಲಿ ನದಿಗೆ ಅಡ್ಡವಾಗಿ ಕಟ್ಟಲ್ಪಟ್ಟ ಈ ಬೃಹದ್ಸೇತುವೆ, ಕೋಲ್ಕೊತ ಮತ್ತು ಪಶ್ಚಿಮ ಬಂಗಾಲದ ಹೌರಾವನ್ನು ಬೆಸೆಯುವ ಕೊಂಡಿಯಾಗಿದೆ. ಮೊದಲಿನ ಹಳೆ ಸೇತುವೆಯ ಬದಲಿಗೆ, ಅದೇ ಜಾಗದಲ್ಲಿ, 1942ರಲ್ಲಿ ಬ್ರಿಟಿಷರಿಂದ ಕಟ್ಟಲ್ಪಟ್ಟ ಈ ಸೇತುವೆಗೆ, ಟಾಟಾ ಸ್ಟೀಲ್ ಇವರ, 23,000 ಟನ್ ಉಕ್ಕನ್ನು ಬಳಸಿದೆ. ಸುಮಾರು 700ಮೀ. ಉದ್ದ ಹಾಗೂ 24ಮೀ. ಅಗಲವಿರುವ ಇದು ಅತ್ಯಂತ ಬಲಿಷ್ಟ ಉಕ್ಕಿನ ಹಗ್ಗಗಳಿಂದ ಆಧರಿಸಲ್ಪಟ್ಟ ವಿಶೇಷವಾದ ತೂಗುಸೇತುವೆಯಾಗಿದೆ. ದಿನವೊಂದಕ್ಕೆ ಸುಮಾರು ಒಂದು ಲಕ್ಷ ವಾಹನಗಳು ಮತ್ತು ಒಂದೂವರೆ ಲಕ್ಷ ಜನರು ಓಡಾಡುವ ಈ ಬೃಹದಾಕಾರ, ಸುಂದರ ಮಾನವ ಕೃತಿಯು ಪ್ರಕೃತಿಯೊಂದಿಗೆ ಮಿಳಿತಗೊಂಡು, ರಾಜ್ಯದ ಏಳಿಗೆಗೆ ಕಾರಣವಾಗಿದೆ. ದೇಶದ ಹೆಮ್ಮೆಯ, ಈ ಅತ್ಯದ್ಭುತ ಉಕ್ಕಿನ ತೂಗುಸೇತುವೆಯು, ಮಾನವನ ಕಲಾನೈಪುಣ್ಯತೆಗೆ ಸಾಕ್ಷಿಯಾಗಿ ನಿಂತಿದೆ. ಬಂಗಾಲದ ಪ್ರಸಿದ್ಧ ಕವಿ, ನೋಬೆಲ್ ಪ್ರಶಸ್ತಿ ಪಡೆದ ರಬೀಂದ್ರನಾಥ ಠಾಗೋರ್ ಅವರ ಗೌರವಾದರ ಸ್ಮರಣಾರ್ಥ,1965ರಲ್ಲಿ, ಈ ಸೇತುವೆಗೆ ರಬೀಂದ್ರ ಸೇತುವೆ ಎಂಬ ಪುನರ್ನಾಮಕರಣವಾಗಿದ್ದರೂ, ಈಗಲೂ ಹೌರಾ ಎಂದೇ ಪ್ರಸಿದ್ಧಿ ಪಡೆದಿದೆ.ನಮ್ಮ ಸುಖಾಸೀನ ಬಸ್ಸು ಈ ಸೇತುವೆಯ ಮೇಲೆ ಸಾಗುತ್ತಿರುವಂತೆಯೇ, ನಾವೆಲ್ಲರೂ ಅದರ ಅಗಾಧತೆ, ಅಂದ ಚಂದಗಳನ್ನು ಕಂಡು ನಿಬ್ಬೆರಗಾದೆವು. ನನಗೆ ಅಮೇರಿಕದಲ್ಲಿ ನೋಡಿದ ಗೋಲ್ಡನ್ ಗೇಟ್ ಬ್ರಿಜ್ ನೆನಪಾಯಿತು.
ಮಹಾನ್ ಅವಧೂತರಾದ ಶ್ರೀ ರಾಮಕೃಷ್ಣ ಪರಮಹಂಸರನ್ನು ತಿಳಿದವರು, ದಕ್ಷಿಣೇಶ್ವರದ ಹೆಸರನ್ನೂ ಕೇಳಿರುತ್ತೇವೆ. ನಾನು ಹೆಸರು ಕೇಳಿರುವುದೇ ವಿನಃ, ಅಲ್ಲಿಗೆ ಜೀವನದಲ್ಲೊಮ್ಮೆ ಹೋಗಿ ನೋಡುವ ಅವಕಾಶ ಸಿಗುವುದೆಂದು ಕಲ್ಪಿಸಿರಲೇ ಇಲ್ಲ. ನಮ್ಮ ಪ್ರವಾಸದಲ್ಲಿ ಇಂತಹ ಪವಿತ್ರ ಸ್ಥಳವನ್ನು ನೋಡುವ, ಅಲ್ಲೇ ಅಡ್ಡಾಡುವ ಸುಸಂರ್ಭ ಒದಗಿ ಬಂದುದು ನಿಜಕ್ಕೂ ಮಹದಾಶ್ಚರ್ಯವೆನಿಸುತ್ತದೆ.. ಧನ್ಯತಾ ಭಾವ ಮೈತುಂಬಿಕೊಳ್ಳುತ್ತದೆ.
ದಕ್ಷಿಣೇಶ್ವರವು, 19ನೇ ಶತಮಾನದಲ್ಲಿ ಜಗತ್ತು ಕಂಡ ಮಹಾನ್ ಆಧ್ಯಾತ್ಮಿಕ ಗುರು, ಮಹಾ ತಪಸ್ವಿ, ಮಹಾ ಯೋಗಿ, ಶ್ರೀ ರಾಮಕೃಷ್ಣ ಪರಮಹಂಸರ ಆಧ್ಯಾತ್ಮಿಕ ಆಡುಂಬೊಲ. ತಮ್ಮ ಆರಾಧ್ಯ ದೇವತೆ ಕಾಳಿಕಾಮಾತೆಯೊಂದಿಗೆ, ಎದುರುಬದಿರು ಕುಳಿತು ಮಾತಾಡಿದಂತಹ ಮಹಾನ್ ಸಂತ. ಇಲ್ಲಿ ನೆಲೆಸಿರುವ ಶಾಂತಸ್ವರೂಪಿ ಕಾಳಿಮಾತೆ, ಭವತಾರಿಣಿ ಕಾಳಿಮಾತೆ ಎಂದೂ ಕರೆಯಲ್ಪಡುತ್ತಾಳೆ. ಸಾಧಾರಣ ಒಂಭತ್ತು ಗಂಟೆಗೆ ಬಸ್ಸಿಳಿಯುತ್ತಿದ್ದಂತೆ, ವರ್ಣವೈಭವದಿಂದ ಕಂಗೊಳಿಸುತ್ತಿರುವ ದೇಗುಲದ ವಿಶಾಲ ಹೊರ ಪ್ರಾಂಗಣವು ಗೋಚರಿಸಿತು. ಪಾದರಕ್ಷೆಗಳ ರಕ್ಷಣೆಗಾಗಿ ವಿಶೇಷ ವ್ಯವಸ್ಥೆ ಕಾಣಲಿಲ್ಲ. ಗಣೇಶಣ್ಣನವರು, ನಮ್ಮಲ್ಲಿದ್ದ ಪುಟ್ಟ ಕೈಚೀಲ ಮತ್ತು ಚಪ್ಪಲಿಗಳನ್ನು ಪ್ರಾಂಗಣದಿಂದ ದೂರದಲ್ಲಿ ತಮ್ಮೊಡನೆ ಇರಿಸಿ, ನಮಗಾಗಿ Travel 4U ನವರು ಕೊಟ್ಟಿದ್ದ ಗುರುತಿನ ಟೋಪಿಗಳನ್ನು ಮರೆಯದೆ ಧರಿಸುವಂತೆ ಸೂಚಿಸಿದರು..ಜನ ಸಂದಣಿಯ ಮಧ್ಯೆ ಕಳೆದು ಹೋಗಬಾರದಲ್ಲ.
1855ರಲ್ಲಿ, ರಾಣಿ ರಾಶ್ಮೋನಿ ಎಂಬ ಸಮಾಜ ಸೇವಕಿಯೊಬ್ಬರಿಂದ ಕಟ್ಟಲ್ಪಟ್ಟ ಈ ಕಾಳಿಕಾಮಾತೆಯ ದೇವಾಲಯದ ಒಳ ಪ್ರಾಂಗಣವೂ ವಿಶಾಲವಾಗಿದ್ದು, ಅತ್ಯಂತ ಸ್ವಚ್ಛ, ಸುಂದರ ಪರಿಸರದ ಜೊತೆಗೆ, ಅಚ್ಚುಕಟ್ಟುತನವು ಎಲ್ಲೆಲ್ಲೂ ಎದ್ದು ಕಾಣುತ್ತಿತ್ತು. ಅದಾಗಲೇ ಬಿಸಿಲಿನ ಝಳಕ್ಕೆ ಪ್ರಾಂಗಣವಿಡೀ ಕಾದ ಕಾವಲಿಯಂತಾಗಿತ್ತು. ನಾವು ಕೆಲವರು ಮುಖ್ಯ ದೇಗುಲದ ಪಕ್ಕದಲ್ಲಿರುವ ರಾಧಾಕೃಷ್ಣ ಮಂದಿರದಲ್ಲಿರುವ ದೇವರ ದರುಶನ ಪಡೆದು, ಅರ್ಚಕರು ಕೊಟ್ಟ ಸಿಹಿ ಪ್ರಸಾದವನ್ನು ಸ್ವೀಕರಿಸಿ ಹಂಚಿದೆವು. ಮುಂದಕ್ಕೆ, ಮುಖ್ಯ ಪ್ರಾಂಗಣದಲ್ಲಿ ನೂರಾರು ಭಕ್ತಜನರ ಬಹಳ ಉದ್ದದ ಸರತಿ ಸಾಲು ಕಂಡು ಸ್ವಲ್ಪ ಭಯವೆನಿಸಿತು. ಬಿಸಿಲಿಗೆ ಕಾಲು ಸುಡದಂತೆ ಹಾಕಿದ ಬಿಳಿ ಪಟ್ಟಿಯಲ್ಲಿ ನಡೆಯಲು ಬಾಲಣ್ಣನವರು ಸೂಚಿಸಿದಾಗ ಸ್ವಲ್ಪ ಹಾಯೆನಿಸಿತು. ಎಲ್ಲೂ ಗಲಭೆ ಗದ್ದಲಗಳಿಲ್ಲದ ಪ್ರಶಾಂತ ವಾತಾವರಣ. ಹದಿನೈದು ನಿಮಿಷಗಳಲ್ಲಿ ಭವತಾರಿಣಿಯ ದರುಶನ ಭಾಗ್ಯವೊದಗಿ, ಪ್ರಸಾದ ಸ್ವೀಕರಿಸಿದಾಗ, ದಿನದ ಆರಂಭ ಪುಣ್ಯಪ್ರದವಾದೆಂತೆನಿಸಿತು.
ದೇಗುಲದ ಇನ್ನೊದು ಪಕ್ಕದಲ್ಲಿ, ಸುಮಾರು ಎರಡು ಮೀ. ಎತ್ತರದಲ್ಲಿ, ಹನ್ನೆರಡು ಶಿವಾಲಯಗಳನ್ನು ಸ್ಥಾಪಿಸಿದ್ದರು. ಸಾಲಾಗಿರುವ ಪುಟ್ಟ ಗುಡಿಗಳಲ್ಲಿ, ಕಪ್ಪು ಶಿಲೆಯ ಶಿವಲಿಂಗಗಳ ನೆತ್ತಿ ಮೇಲೆ ನಿರಂತರ ನೀರು ಬೀಳುವಂತೆ ವ್ಯವಸ್ಥೆಯಿತ್ತು. ನಾವೇ ಸ್ವತಃ ಒಳ ಹೋಗಿ ಎಲ್ಲಾ ಶಿವಲಿಂಗಗಳಿಗೂ ಅಭಿಷೇಕ ಮಾಡಿ ಪೂಜಿಸುವ ಅವಕಾಶವಿತ್ತು. ಒಂದೆರಡು ಗುಡಿಗಳಲ್ಲಿ ಮಾತ್ರ ಅರ್ಚಕರು ಪೂಜೆ ಮಾಡುವುದು ಕಂಡುಬಂತು. ದೇಗುಲದ ಎಡ ಪಕ್ಕದ ಪ್ರಾಂಗಣದ ಬದಿಯಲ್ಲೇ ಇದೆ, ಪೂಜನೀಯ ಶ್ರೀ ರಾಮಕೃಷ್ಣ
ಪರಮಹಂಸರು ಧ್ಯಾನಮಗ್ನರಾಗಿದ್ದ ಪುಟ್ಟ ಕೋಣೆ. ಸುಣ್ಣಬಣ್ಣಗಳಿಂದ ಅದಕ್ಕೆ ಹೊಸ ರೂಪ ಕೊಡದೆ, ಮೊದಲಿನ ರೂಪದಲ್ಲಿ ಹೇಗಿತ್ತೋ ಹಾಗೆಯೇ ಕಾದಿರಿಸಿದ್ದರು. ಅವರು ಮಲಗಿಕೊಂಡಿದ್ದ ಮಂಚ, ಹಾಸಿಗೆ,ಧರಿಸಿದ್ದ ದಿರುಸು, ಇತ್ಯಾದಿಗಳ ಜೊತೆಗೆ ಪಕ್ಕದಲ್ಲಿ ದೀಪದೊಂದಿಗೆ ಅವರ ಫೋಟೋ ನಮ್ಮನ್ನು ಸ್ವಾಗತಿಸುವಂತಿತ್ತು. ಅಲ್ಲೇ ಪಕ್ಕದಲ್ಲಿ, ನೆಲದ ಮೇಲೆ ಹತ್ತಾರು ಜನ, ನಿಶ್ಶಬ್ದ ಮೌನದಲ್ಲಿ ಪ್ರಾರ್ಥಿಸುತ್ತ ಕುಳಿತಿದ್ದರು. ನಾವೂ ಸ್ವಲ್ಪ ಹೊತ್ತು ಅಲ್ಲಿದ್ದು , ಪುನೀತಾತ್ಮನ ಸನ್ನಿಧಿಯಲ್ಲಿ ಮನ ಶುದ್ಧಗೊಳಿಸಲು ಪ್ರಯತ್ನಿಸಿದೆವು.
ಸಹ ಪ್ರವಾಸಿಗರು ಎಲ್ಲಾ ಕಡೆ ಚದುರಿ ಹೋಗಿದ್ದರಿಂದ, ಅವರಿಗಾಗಿ ಒಂದು ಕಡೆ ಕಾದು ಕುಳಿತಾಗ, ದಿನದ ಆರಂಭವು ಅನುಕೂಲಕರವಾಗಿ ಆಗಿರುವುದರ ಬಗ್ಗೆ ಮನಸ್ಸು ತೃಪ್ತಿ ಹೊಂದಿತ್ತು. ಪಕ್ಕದಲ್ಲಿಯೇ ಪ್ರಶಾಂತವಾಗಿ ಹರಿಯುತ್ತಿದ್ದ ಹೂಗ್ಲಿ ನದಿ ನೀರು, ಸುತ್ತಲೂ ಹರಡಿದ್ದ ವನಸಿರಿಯ ಸೊಬಗು, ದೇವಿಯ ಪವಿತ್ರ ಸನ್ನಿಧಿಯೆಲ್ಲವೂ ಮನಸ್ಸನ್ನು ಅಹ್ಲಾದಗೊಳಿಸಿತ್ತು. ಅದಾಗಲೇ ಬೆಳಗಿನ ಗಂಟೆ 9:45… ಬಿರು ಬಿಸಿಲು ತನ್ನ ಪ್ರಭಾವ ಬೀರಲಾರಂಭಿಸಿತ್ತು.. ಮುಂದೆ, ಬೇಲೂರು ಮಠದ ದರ್ಶನಕ್ಕೆ ನಮ್ಮ ತಯಾರಿ ನಡೆದಿತ್ತು…
ಹಿಂದಿನ ಪುಟ ಇಲ್ಲಿದೆ : ಪುರಿ-ಡಾರ್ಜಿಲಿಂಗ್ ಪ್ರವಾಸ ಪುಟಗಳು : ಪುಟ 14
(ಮುಂದುವರಿಯುವುದು..)
-ಶಂಕರಿ ಶರ್ಮ, ಪುತ್ತೂರು.
Madam ji very nice. ರಾಮಕೃಷ್ಣ ಪರಮಹಂಸರ ತತ್ವಗಳು ಇಂದಿಗೂ ಪ್ರಸಿದ್ಧ , ಯಾಕೆಂದರೆ ಆ ತತ್ವಗಳು ಬಹಳ ಸರಳ ಮತ್ತು ಎಂತಹವರನ್ನೂ ಆಕರ್ಷಿಸುತ್ತವೆ . ಕುತೂಹಲಭರಿತವಾಗಿದೆ ಪ್ರವಾಸ ಕಥನ . ಮದ್ಯದಲ್ಲಿ ಒಂದು ಸಾಲಲ್ಲಿ ಅರೇಬಿಕ್ ಭಾಷೆಯಲ್ಲಿ ಏನೋ ಬರ್ದಿದ್ದೀರಿ ಅದು ಏನು ಅಂತ ಗೊತ್ತಾಗ್ಲಿಲ್ಲ
ಧನ್ಯವಾದಗಳು ನಯನ ಮೇಡಂ. ಅರೇಬಿಕ್ ಭಾಷೆಯಲ್ಲಿ ಏನೂ ಬರೆದಿಲ್ಲವಲ್ಲಾ..ಎಲ್ಲಾ
ಕನ್ನಡದಲ್ಲಿಯೇ ಬರೆದೆ. ನಿಮಗೆ ಯಾವ ಸಾಲಲ್ಲಿ ಅದು ಕಂಡಿತು ತಿಳಿಸುವಿರಾ?