ಪ್ರವಾಸ

ಪುರಿ-ಡಾರ್ಜಿಲಿಂಗ್ ಪ್ರವಾಸ ಪುಟಗಳು : ಪುಟ 14

Share Button

ಕಾಲಿಘಾಟ್ ಕಾಲಿಕಾಮಾತೆ ಸನ್ನಿಧಿಯತ್ತ

ನಮ್ಮ ನಳರಾಯರುಗಳಾದ ರಾಜೇಶಣ್ಣ ಮತ್ತು ಬಳಗದವರು ಉಣಬಡಿಸಿದ  ಸುಗ್ರಾಸ ಭೋಜನವನ್ನು ಸವಿದು, ಮಧ್ಯಾಹ್ನದ ಸಣ್ಣ ಸವಿ ನಿದ್ದೆಯನ್ನು ಮುಗಿಸಿ, ಸಂಜೆ ಹೊತ್ತಿಗೆ,ಕೋಲ್ಕತ್ತಾದ ಮಾತೆ ಕಾಳಿಕಾ ದೇವಿಯದ ದರುಶನಕ್ಕೆ ಹೊರಟು ನಿಂತೆವು. ಕಾಲಿಘಾಟ್, ಕಾಳಿಕಾ ಮಾತಾ ಸನ್ನಿಧಿಯ ಕ್ಷೇತ್ರ. ನಮ್ಮ ಬಸ್ಸನ್ನು ದೇಗುಲದ ಸಮೀಪಕ್ಕೆ ಕೊಂಡೊಯ್ಯಲು ಸಾಧ್ಯವಾಗದುದರಿಂದ ಅನತಿ ದೂರದಲ್ಲಿ ಬಸ್ಸು ನಿಂತಿತು. ಹಳೇ ಕಲ್ಕತ್ತದ ರಸ್ತೆಯಾಗಿತ್ತದು. ರಸ್ತೆಯ ಎಡಭಾಗದಲ್ಲಿ ‌ಸಾಲಾಗಿದ್ದ, ಪುಟ್ಟ ಪುಟ್ಟ ಅಂಗಡಿಗಳಲ್ಲಿ,  ದೇವಿಯ ಅಲಂಕಾರಿಕ ಮೂರ್ತಿಗಳಂತಹ ತರಹೇವಾರಿ ವಸ್ತುಗಳನ್ನು, ಪ್ರವಾಸಿಗರಿಗೆ ಮಾರಲೋಸುಗ ಚಂದದಿಂದ ಜೋಡಿಸಿಟ್ಟಿದ್ದರು. ಇವುಗಳನ್ನೆಲ್ಲ ನೋಡುತ್ತಾ ಸಾಗಲು, ಬಸ್ಸಿನಿಂದ ಇಳಿದು ನಡೆದು ಬಂದುದೇ ಒಳ್ಳೆಯದೆನಿಸಿತು. ಸಂಜೆ ಸೂರ್ಯನ ಮುಖವು ಹೊಂಬಣ್ಣಕ್ಕೆ ತಿರುಗಿತ್ತು.. ತಂಗಾಳಿ ಮೆಲ್ಲನೆ ಬೀಸುತ್ತಿತ್ತು. ಅಲ್ಲಿ ಯಾವಾಗಲೂ ಭಕ್ತರ ದಟ್ಟಣೆ ಜಾಸ್ತಿಯಿರುವುದರಿಂದ ದೇವಿ ದರುಶನ ತುಂಬಾ ಕಷ್ಟವೆಂದು ಬಾಲಣ್ಣನವರು ನಮಗೆ ಮೊದಲೇ ತಿಳಿಸಿದ್ದರು. ಎಲ್ಲರ ಮೊಬೈಲುಗಳನ್ನು ಗಣೇಶಣ್ಣ ತಮ್ಮ ಸುಪರ್ದಿಯಲ್ಲಿರಿಸಿಕೊಂಡು, ಎಲ್ಲರೂ ತಮ್ಮ ಪರ್ಸ್ ಗಳ ಬಗ್ಗೆ ಎಚ್ಚರಿಕೆಯಿಂದಿರಲು ಸೂಚಿಸಿದರು.

ಹಿಂದಿನ ವಂಗದೇಶವೇ ಈಗಿನ ಪಶ್ಚಿಮ ಬಂಗಾಳ. ಅದರ ರಾಜಧಾನಿಯಾದ ಈ ಮಹಾನಗರಕ್ಕೆ ಕಲ್ಕತ್ತವೆಂಬ ಹೆಸರು ಬ್ರಟಿಷ್ ಆಳ್ವಿಕೆಯ ಕಾಲದಲ್ಲಿ ಬಂದಿತ್ತು. ಕಾಲಿಘಾಟ್ ಎಂಬ ಹೆಸರಿನಿಂದಾಗಿ, ಕಲ್ಕತ್ತ ನಾಮ ಪಡೆಯಿತು ಎನ್ನುತ್ತಾರೆ. ಕೋಲ್ಕೊತಾ, ಬಂಗಾಲದ ಭಾಷೆಯಲ್ಲಿ ಇತ್ತೀಚೆಗೆ ಪರಿಷ್ಕರಿಸಲ್ಪಟ್ಟ ಹೆಸರು.

ಈಗಿನ ದೇವಾಲಯ, ಸಾಧಾರಣ 200 ವರ್ಷಗಳ ಹಿಂದೆ ಕಟ್ಟಲ್ಪಟ್ಟಿತು ಎಂದು ಪ್ರತೀತಿ. ಬಹಳ ಹಿಂದೆ ಈ ದೇಗುಲದ ಪಕ್ಕದಲ್ಲೇ, ಮೂಲ ಗಂಗಾನದಿಯಿಂದ ಕವಲೊಡೆದ, ಭಾಗೀರಥಿ ನದಿ ಹರಿಯುತ್ತಿತ್ತು. ಅದುವೇ ಈಗ ಪ್ರಾದೇಶಿಕ ಭಾಷೆಯಲ್ಲಿ ಹೂಗ್ಲಿ ಎಂದು ಕರೆಯಲ್ಪಡುತ್ತದೆ. ಕಾಲಕ್ರಮೇಣ ಅದು ದೂರಸರಿದು, ಈಗ ಪಕ್ಕದಲ್ಲೇ ಹರಿಯುತ್ತಿದೆ ಪುಟ್ಟ ನದಿ ಆದಿಗಂಗಾ. ಅದವೇ ಮುಂದಕ್ಕೆ ಹೂಗ್ಲಿ ನದಿಯನ್ನು ಸೇರುತ್ತದೆ.


ಕಾಲಿಘಾಟಿನಲ್ಲಿರುವ ಈ ಕಾಳಿಕಾಂಬೆಯು ಉಗ್ರಸ್ವರೂಪಿಣಿಯಾಗಿದ್ದು, ಮೂರು ಕಣ್ಣುಗಳು, ಹೊರಚಾಚಿಕೊಂಡಿರುವ ಉದ್ದವಾದ ನಾಲಿಗೆ ಮತ್ತು ನಾಲ್ಕು ಕೈಗಳನ್ನು ಹೊಂದಿರುತ್ತಾಳೆ. ಇವೆಲ್ಲವೂ ಚಿನ್ನದ್ದೇ ಆಗಿರುವುದು ವಿಶೇಷ. ಎಡಗೈಯಲ್ಲಿ, ದೈವಿಕ ಶಕ್ತಿಯ ಕುಡುಗತ್ತಿ, ಇನ್ನೊಂದು ಎಡಗೈಯಲ್ಲಿ, ಮಾನವನ ದುರ್ಗುಣಗಳನ್ನು ನಿರ್ಮೂಲನ ಮಾಡುವ ಸಂಕೇತವಾಗಿ, ತರಿದ ಶುಂಭ ರಕ್ಕಸನ ಶಿರ, ಎರಡು ಬಲದ ಕೈಗಳು ಅಭಯ ಹಾಗೂ ವರದ ಹಸ್ತಗಳನ್ನು ತೋರಿ, ಸದಾ ಭಕ್ತರನ್ನು ಕಾಯುವ ಧೈರ್ಯ ತುಂಬುತ್ತಾಳೆ. ಅತ್ಯಂತ ಪ್ರಸಿದ್ಧ 51 ಶಕ್ತಿ ಪೀಠಗಳಲ್ಲೊಂದಾಗಿದೆ ಈ ದೇಗುಲ.

ದೇಗುಲದ ಒಳಗಡೆಗೆ ಬರುತ್ತಿದ್ದಂತೆಯೇ, ಎಲ್ಲೆಲ್ಲೂ ಕೇಸರಿ ಬಣ್ಣದ ಪಂಚೆಯುಟ್ಟ ಅರ್ಚಕರೇ ಕಣ್ಣಿಗೆ ಬೀಳುತ್ತಾರೆ. ಪ್ರಾಂಗಣದ ಸುತ್ತಲೂ ಇರುವ  ಚಿಕ್ಕ ಪುಟ್ಟ ಅಂಗಡಿಗಳಲ್ಲಿ, ದೇವಿಗೆ ಭಕ್ತರು ಸಲ್ಲಿಸುವ ಕೆಂಪು ದಾಸವಾಳದ, ಪೂಜೆ ಹೂವಿನ ಮಾಲೆಗಳು ನೂರಾರು ಸಂಖ್ಯೆಯಲ್ಲಿ ಮಾರುವುದು ಕಂಡುಬರುತ್ತದೆ. ಭಕ್ತರ ದಟ್ಟಣೆಗೆ ಅನುಗುಣವಾಗಿ ಸ್ಥಳಾವಕಾಶ ಇಲ್ಲದಿದುದರಿಂದ ತುಂಬಾ ಇಕ್ಕಟ್ಟಾದ ಜಾಗದಲ್ಲಿ ದರುಶನಕ್ಕಾಗಿ ಕ್ಯೂ ನಿಲ್ಲಬೇಕಾಯಿತು. ಅದರ ಉದ್ದ ನೋಡಿಯೇ ಬೆಚ್ಚಿ ಬಿದ್ದ ನಾವು, ಪೆಚ್ಚು ಮೋರೆ ಹಾಕಿ ನಿಂತಾಗಲೇ, ನಮ್ಮ ಮುಂದೆ ಅದೆಲ್ಲಿಂದಲೋ ಒಬ್ಬರು ಅರ್ಚಕರು ಪ್ರತ್ಯಕ್ಷ. ನಮ್ಮನ್ನೆಲ್ಲಾ ಎಳೆದು, ತಿರುಪತಿಯಂತೆ, ಅರ್ಧ ಸಾಲಿನ ಮುಂದಕ್ಕೆ ತಂದು ನಿಲ್ಲಿಸಿದರು. ನಮಗಾಗಲೇ ಅರ್ಥವಾಗಿತ್ತು..ಇದು ಬಾಲಣ್ಣನವರ ಕೆಲಸವೆಂದು! ಸಾಸಿವೆ ಕಾಳು ಹಾಕಲೂ ಸ್ಥಳವಿಲ್ಲದಷ್ಟು, ದಟ್ಟ ಜನ ಸಂದಣಿಯ  ನಡುವೆ,ಉಸಿರು ಬಿಡಲೂ ಆಗದ ಪರಿಸ್ಥಿತಿಯಲ್ಲಿಯೇ ಮುಂದಕ್ಕೆ ಜರುಗುತ್ತಾ, ಅರ್ಧತಾಸಿನಲ್ಲಿ ದೇವಿಯ ಗರ್ಭ ಗುಡಿಯ ಬಳಿ ತಲಪಿದೆವು.ಇನ್ನೊಂದು ತಾಸು ಅಲ್ಲೇ ಚಡಪಡಿಸುತ್ತಾ, ನಿಲ್ಲಲು ಕಷ್ಟ ಪಡುತ್ತಾ, ಇಲ್ಲದ ಗಾಳಿಗಾಗಿ ತಡಕಾಡುತ್ತಾ, ಬಲವಂತವಾಗಿ ದೇವರ ಸ್ಮರಣೆ ಮಾಡುತ್ತಾ ಕಾದೆವು. ನನ್ನ ಪರಿಸ್ಥಿತಿ ಸ್ವಲ್ಪ ಬಿಗಡಾಯಿಸಿದಂತೆ ಕಂಡಿತು. ಆಗಲೇ, ಪಕ್ಕದಲ್ಲಿದ್ದ ಗೆಳತಿ ಭಾಗ್ಯ, ತನ್ನ ಪರ್ಸಿನಿಂದ ಕೊಟ್ಟ ಚಾಕಲೇಟನ್ನು ತಿಂದ ಮೇಲೆ ಸ್ವಲ್ಪ ಸರಿಯಾಯಿತೆನ್ನಬಹುದು. ಇಲ್ಲಿ ಗಮನಿಸಿದ ಕೆಲವೊಂದು ಅಂಶಗಳು..ದೇವಿ ದರ್ಶನ ಭಾಗ್ಯ ಪಡೆಯಲು ಕೈಯಲ್ಲಿ ನೋಟು ಇರಲೇ ಬೇಕು, ದೇವಿಗೆ ಭಕ್ತರು ಭಕ್ತಿಯಿಂದ ನೀಡಿದ ಹೂಮಾಲೆಗಳನ್ನು ತಕ್ಷಣ ಹಿಂಬದಿಯಿಂದ ಕೊಂಡೊಯ್ಯುತ್ತಿರುವುದು, ದರುಶನಕ್ಕೆಂದು ದೇವಿಯ ಮುಂಭಾಗಕ್ಕೆ ಹೋಗುವಾಗ, ನಮ್ಮ ತಲೆ ಮೇಲೆತ್ತರಕ್ಕೆ ನಿಂತು ಅಡ್ಡವಾಗಿ ಕೈಯಿರಿಸಿ, ಭಕ್ತರ ಕೈಯಿಂದ ಕಾಣಿಕೆ ಹಣವನ್ನು ಡಬ್ಬಿಗೆ ಹಾಕಲು ಬಿಡದೆ ಅವರೇ ಕೈಯಿಂದ ಕಸಿಯುವುದು ನಿಜಕ್ಕೂ ಮನಸ್ಸಿಗೆ ಬೇಸರ ಮೂಡಿಸುವ ಸಂಗತಿ. ಆದರೆ ಇವುಗಳೆಲ್ಲದರ ಬಗ್ಗೆ ಬಾಲಣ್ಣನವರು ಮೊದಲೇ ಸೂಕ್ಷ್ಮವಾಗಿ ತಿಳಿಸಿದ್ದುದರಿಂದ ಎಲ್ಲವನ್ನೂ ತಣ್ಣಗೆ ನೋಡಿಕೊಂಡು ದೇವಿಗೆ ನಮಸ್ಕರಿಸಿ ಹೊರಬಂದೆವು. ದಿನಕರ ಅಸ್ತಂಗತನಾಗಿ ಕತ್ತಲು ಕವಿಯಲಾರಂಭಿಸಿತ್ತು. ಬೀದಿ ಬದಿಯ ಅಂಗಡಿಗಳಲ್ಲಿ ವ್ಯಾಪಾರ ನಡೆಸಿ, ಹೋಟೇಲಿನತ್ತ ಹೊರಟೆವು…ರಾತ್ರಿಯ ಸುಖ ಭೋಜನದ ನೆನಪಲ್ಲಿ..

(ಮುಂದುವರಿಯುವುದು..)
PC: Internet

ಹಿಂದಿನ ಪುಟ ಇಲ್ಲಿದೆ  :ಪುರಿ-ಡಾರ್ಜಿಲಿಂಗ್ ಪ್ರವಾಸ ಪುಟಗಳು : ಪುಟ 13

– ಶಂಕರಿ ಶರ್ಮ, ಪುತ್ತೂರು.

6 Comments on “ಪುರಿ-ಡಾರ್ಜಿಲಿಂಗ್ ಪ್ರವಾಸ ಪುಟಗಳು : ಪುಟ 14

  1. Nice. ಹಲವಾರು ದೇವಸ್ಥಾನಗಳು ಇತ್ತೀಚಿಗೆ ಭಕ್ತಿಯನ್ನು ಮೂಡಿಸುವಂತಹ ತಾಣಗಳಾಗುವ ಬದಲು ವ್ಯಾಪಾರದ ಕೇಂದ್ರಗಳಾಗಿವೆ. ಆದರೂ ಒಮ್ಮೆಯಾದರೂ ಅಂತಹ ಜಾಗಗಳನ್ನು ನೋಡಬೇಕೆಂಬ ಆಸೆ ಅಲ್ಲಿಗೆ ಹೋಗಲು ಪ್ರೇರೇಪಿಸುತ್ತದೆ .

  2. ಪಶ್ಚಿಮ ಬಂಗಾಳದ ಸಂಕ್ಷಿಪ್ತ ಇತಿಹಾಸದೊಂದಿಗೆ ಕಾಲಿಘಾಟ್ ದೇವಸ್ಥಾನದ ನೈಜ ಚಿತ್ರಣವನ್ನು ನಮ್ಮ ಮುಂದಿಟ್ಟಿದ್ದೀರಿ…ಧನ್ಯವಾದಗಳು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *