ನೀ ನಗಲು, ನಿನ್ನ ನರಳಿಸುವರು.

Spread the love
Share Button
ಮೊಳಕೆಯೊಂದು ಆಗಷ್ಟೇ ಗರ್ಭದಿಂದ ಹೊರ ಬರುವ ಕಾತುರತೆಯಲ್ಲಿತ್ತು,
ಮೊಗ್ಗೊಂದು ಅರಳೋ ಖುಷಿಯ ಹೊಸ್ತಿಲಲ್ಲಿ ಕಾದು ಕೂತಿತ್ತು,
ಅರ್ಧ ಅರಳಿದ ಹೂ ಮೊಗ್ಗೊಂದು ಅರ್ಧ ಅರಳಿ ಮತ್ತಷ್ಟು ಅರಳೋ ಉತ್ಸಾಹದ ಚಿಲುಮೆಯಾಗಿತ್ತು,
ಪೂರ್ತಿ ಅರಳಿ ನಿಂತ ಹೂ ತನ್ನ ನಗುವ ಚೆಲುವಿಂದ ಕಂಗೊಳಿಸುತ್ತಿತ್ತು.
ಅರ್ಧ ಬಾಡಿದ ಹೂವೊಂದು ತನ್ನ ಚೆಲುವ ಕಳೆದುಕೊಳ್ಳುತ್ತಿದ್ದರೂ ನಗುತಲಿತ್ತು.
.
ಕ್ರೂರ ಕೈಗಳ ಹಿಡಿತಕ್ಕೆ ಸಿಕ್ಕಿ ಹೂವೊಂದು ನಲುಗತ್ತಲಿತ್ತು,ಅಯ್ಯೋ ಅದ ಕಾಯಬೇಕಾದ ಕೈಗಳೇ ಉಸಿರುಗಟ್ಟಿಸೋ ಕಾರ್ಯಕ್ಕೆ ಕೈ ಹಾಕಿತ್ತು,ಕರುಣೆ ಇಲ್ಲದ ಕೈಗಳು ಮೊಗ್ಗ ಅರಳಲೂ ಬಿಡಲಿಲ್ಲ.ಅರ್ಧ ಅರಳಿದ ಹೂವ ಪೂರ್ತಿ ಅರಳುವ ಮೊದಲೇ ಬಾಡಿಸಿಬಿಟ್ಟಿದ್ದವು.ಅರಳಿನಿಂತ ಹೂವ ನಗುವ ಕಸಿದುಕೊಂಡು,ನರಳಸಿದವು ನರರೂಪದ ರಾಕ್ಷಸ ಹಿಡಿತಗಳು, ಪೈಶಾಚಿಕ ಕೈಗಳು, ಅರ್ಧ ಬಾಡಿ ನಿಂತ ಹೂವನ್ನೂ ಬಿಡಲಿಲ್ಲ ಅದರ ಆಯಸ್ಸು ಮುಗಿಯುವ ಮುನ್ನವೇ ಬಾಡಿಸಿಬಿಟ್ಟವು.ಇವೆಲ್ಲದರ ಅರಿವಿಲ್ಲದೇ ಚಿಗುರೊಡೆಯಲು ತವಕಿಸುತ್ತಿದ್ದ ಮೊಳಕೆಯ ಆಯಸ್ಸು ಶುರುವಾಗೋ ಮುನ್ನವೇ ಅಂತ್ಯ ಕಂಡಿತು ಭೂಮಿಗೆ ಬರಲು ಹೆದರಿ.
.
ಕಂಬನಿ ತುಂಬಿದ ಕಂಗಳು,ಅಸಹಾಯಕತೆಯ ಗೂಡಾದ ಮಾತುಗಳು,ನರಕದ ದರುಶನ ಬೇಡೆಂದು ಬೇಡುವ ಆ ನಡುಗುವ ಕೈಗಳು,ತನ್ನ ನೋವಿಗೆ ಕಾರಣವಾಗಿರುವವರು,ತನ್ನ ಬೇಡಿಕೆಗೆ ಮರುಗಿ,ಕರಗಿ ನನಗೆ ಬಿಡುಗಡೆಯ ಕರುಣಿಸುವರೆಂಬ ಹುಸಿ ನಂಬಿಕೆಯಲಿ ಬೇಡುವ ಜೀವದ ಅಸಹಾಯಕತೆಯ ಆಸ್ವಾದಿಸುವ ನೀಚರರು , ಕರುಣೆಯ ಗಾಳಿ ಸಹ ಸೋಕಿರದ ಕ್ರೂರಿಗಳೇ ಇರಬೇಕು.
.
ಹೆತ್ತ ಮಗಳ,ಒಡಹುಟ್ಟಿದ ಅಕ್ಕ ತಂಗಿಯ,ಸುಂದರ ಸ್ನೇಹ ಕೊಟ್ಟ ಸ್ನೇಹಿತೆಯ,ಪಾಠ ಕಲಿಸಿದ ಗುರುವ,ಏನೂ ಅರಿಯದ ಕಂದಮ್ಮನ, ಕೊನೆಗೆ ಹೆತ್ತ ತಾಯ ಸಹ ಬಿಡದ ಕ್ರೂರಿಗಳ ನಡುವೆ ಯಾರ ನಂಬಬೇಕು ಹೆಣ್ಣು ಜೀವವದು,ಇಂತಹ ಒಂದು ಅತೀ ಕ್ರೂರ ಭಾವನೆ ಬರುವುದಾದರು ಎಲ್ಲಿಂದ.? ತಮ್ಮ ಎಷ್ಟೋ ಆಸೆ,ಕನಸುಗಳ ಸಾಕಾರದ ಮಾತಿರಲಿ, ನೆಮ್ಮದಿಯಲಿ ಉಸಿರಾಡಲೂ ಆಗದ ವಾತಾವರಣ ಸೃಷ್ಟಿ ಆಗಿದೆ ಜಗದೊಳಗೆ. ಅಪ್ಪ ಅಮ್ಮನಿಗೆ ಮಗಳನ್ನು ಹೆಚ್ಚು ಓದಿಸಬೇಕೆಂಬ ಆಸೆ, ಆದರೆ ಸಮಾಜದಲ್ಲಿ ನಡೆಯುತ್ತಿರುವ ಹೀನ ಕೃತ್ಯಗಳು ಆ ಆಸೆಯನ್ನು ಆಸೆಯಾಗಿಯೇ ಇಟ್ಟಿವೆ.ಅಣ್ಣ ತಮ್ಮಂದಿರಿಗೆ ತಮ್ಮ ಅಕ್ಕ ತಂಗಿಯರನ್ನು ಒಂಟಿಯಾಗಿ ಬಸ್ ನಿಲ್ದಾಣದಲ್ಲಿ ಬಿಟ್ಟು ಹೋಗಲು ಏನೋ ಭಯ, ತಂದೆ ತಾಯಿಯರು ತಮ್ಮ ಪುಟ್ಟ ಹೆಣ್ಣು ಮಗುವನ್ನು ಸ್ವಂತದ ಬಂಧುಗಳ ಕೈಗೆ ಅರೆ ಗಳಿಗೆ ಕೊಡಲೂ ಹಿಂಜರಿಯುವಂತಾಗಿದೆ, ಯಾವುದೇ ಮಗು ತನ್ನ ತಾಯ ಮಡಿಲಲ್ಲಿ ತನ್ನದೇ ಆದ ಲೋಕದಲ್ಲಿ ಆಡುವುದ ಕಂಡು ಏನೋ ಒಂದು ತರದ ಖುಷಿ ಮನಸ್ಸಿಗಾದಾಗ, ಅದ ವ್ಯಕ್ತ ಪಡಿಸಲೂ ನಾವು ಭಯಪಡುವಂತಾಗಿದೆ. ನಂಬಿಕೆಯೇ ಜೀವನ ಎಂದಿದ್ದ ಕಾಲ ಕಳೆದು, ನಂಬಿಕೆ ಎಂದರೇನು ಎನ್ನುವ ದುಸ್ಥಿತಿ ಉಂಟಾಗಿದೆ.
.
ಹೂವೊಂದು ನೊಂದುಕೊಂಡಿತು ನಾ ಹೂವಾಗಿ ಹುಟ್ಟಿದ್ದೇ ತಪ್ಪಾ ಎಂಬ ನಿಲುವ ತಾಳಿ,ತನ್ನ ನಗುವ ಕಂಡು ಸಂತೋಷಿಸುವವರಿಗಿಂತ,ನನ್ನ ನರಳಿಸಿ ಸಂತೋಷಿಸುವವರ ನಡುವೆ, ಬೇಕೇ ಇಲ್ಲಿ ನನಗೆ ಬದುಕ ನಾಳೆ ಎಂದು,ನನಗಾದ ನೋವಿನ ಬಗೆಗೆ ಮಾತಾಡುವ ಮಂದಿಗೆ ಲೆಕ್ಕವಿಲ್ಲ ಆ ಮಾತು ನನಗೆ ನೋವ ಕೊಡುವವರ ವಿರುದ್ಧವಲ್ಲ,ಬದಲಾಗಿ ನನ್ನ ಬಗೆಗೆ, ನನ್ನ ಬದುಕ ರೀತಿ ನೀತಿಗಳ ಬಗೆಗೆ.ನಾ ಇರದೆ ಈ ಜಗ ಎಷ್ಟು ಕಠಿಣ ಎಂಬುದ ಅರಿಯದ ಮೂಢರು ಎಂದು ಕೊರಗುತಿದೆ ಹೂ.
ಜಗದ ಅಸ್ತಿತ್ವಕ್ಕೆ ಕಾರಣಳಾದ ಅಸ್ತಿತ್ವವನ್ನೇ ಅಲುಗಾಡಿಸುವ ವಿಕೃತ ಮನೋಭಾವ ಇರುವ ಮೃಗಗಳ ನಡುವೆ ಅವಳು ಎಂದಿನಂತೆ ಮೃದುವಾಗಿ ಬದುಕಲಾರಳು,ಅವಳ ರಕ್ಷಣೆಯ ಹೊಣೆಯ ಬೇರೆಯವರ ಹೆಗಲಿಗೆ ಹಾಕಿ ನೆಮ್ಮದಿಯಾಗಿ ಉಸಿರಾಡಲು ಸಾಧ್ಯವಾಗದಷ್ಟು ಕೊಳೆತು ನಾರುತ್ತಿದೆ ಈ ಸಮಾಜ. ಪ್ರತೀ ಬಾರಿಯೂ ಹೂವೊಂದು ಕೀಚಕರ ಕೈ ಸೇರಿ ಬಾಡಿದಾಗ ನಡೆಯುವ ಶ್ರದ್ದಾಂಜಲಿಗಳ ಬದಲು,ಆ ಕೀಚಕ ಕೈಗಳ ಕತ್ತರಿಸುವ ಕೆಲಸ ನಡೆದಿದ್ದರೆ,ಎಷ್ಟೂ ಮುಗ್ಧ ಹೂಗಳು ನಗುವ ಕಳೆದುಕೊಳ್ಳುವುದ ತಪ್ಪಿಸಬಹುದಿತ್ತು.
.
ಎಂದೂ ಬಾರದೂರಿಗೆ ನಿಮ್ಮ ಪಯಣ ತಲುಪಿದೆ,
ಬದುಕ ಪಯಣವದು ನೀವುಗಳು ಅಂದುಕೊಂಡತಿರಲಿಲ್ಲ,
ನೀವು ಇದ್ದದ್ದು,ನಿಮ್ಮ ನಗುವನ್ನು ಸಹಿಸದ ಕ್ರೂರಿಗಳ ನಡುವೆ ಎಂಬುದ ತಿಳಿಯಲಿಲ್ಲ,
ನಮ್ಮನ್ನು ಬರಿಯ ಮಾಂಸದ ಮುದ್ದೆಯಂತೆ ಕಾಣುವ ಕೀಚಕ ಕಣ್ಣುಗಳಿಗೆ ನಮ್ಮ ಧಿಕ್ಕಾರವಿರಲಿ,
ನಿಮಗಾದ ಅನ್ಯಾಯವ ಕಂಡು ನಮ್ಮ ಹೆಜ್ಜೆಗಳು ಭಾರವಾಗಿವೆ, ನಾವು ನಿಮ್ಮಂತೆ ಭಯದ ನೆರಳಲಿ ಬದುಕುತ್ತಿರುವ ಹೂಗಳು.
.
-ಮಾಲಾ ಎನ್ ಮೂರ್ತಿ
.

2 Responses

  1. ನಯನ ಬಜಕೂಡ್ಲು says:

    ಪ್ರತಿಯೊಂದು ಹೆಣ್ಣಿನ ಮನದಾಳದ ನೋವು ಇದು ಇತ್ತೀಚೆಗಿನ ದಿನಗಳಲ್ಲಿ . ಎಲ್ಲೂ ಭದ್ರತೆ ಇಲ್ಲ . ರಾತ್ರಿ ಬಿಟ್ಟು ಹಗಲೂ ಹೆಣ್ಣುಮಕ್ಕಳು ಒಬ್ಬೊಬ್ಬರೇ ಓಡಾಡುವುದು ಕಷ್ಟವಾಗಿದೆ ದುರುಳರಿಂದಾಗಿ

  2. Shankari Sharma says:

    ಸ್ರೀಯರಿಗೆ ಅಭದ್ರತೆ ಕಾಡುವ ಇಂದಿನ ಸಮಾಜ, ಎಂದಿಗೆ ಸರಿಯಾಗಬಹುದೋ..ದೇವರೇ ಬಲ್ಲ.

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: