ಅಪ್ಪನೆಂಬ ಮೇರುಪರ್ವತ…
ಮದುವೆಯಾಗಿ ಎರಡು ದಶಕಗಳು ಕಳೆದಿವೆ. ಈಗಲೂ ಸಹ ತವರಿನಿಂದ ವಾಪಾಸಾಗುವಾಗ ಅಪ್ಪನ ಕಾಲಿಗೆ ನಮಸ್ಕಾರ ಮಾಡಲು ಬಗ್ಗಿದಾಗ ಅಪ್ಪನ ಕಣ್ಣಂಚು ಒದ್ದೆಯಾಗುತ್ತದೆ. ಕಾರಿನಲ್ಲಿ ಕುಳಿತು ಮೊಮ್ಮಕ್ಕಳು ಟಾಟಾ ಹೇಳುವಾಗ ಅಪ್ಪನ ಕಣ್ತುಂಬಾ ನೀರು ತುಂಬಿ ಮಂಜಾಗಿರುವ ದೃಷ್ಟಿಯಿಂದ ಕೈಯಾಡಿಸಿ ತಕ್ಷಣ ಬೇರೆ ಕಡೆ ಮುಖ ತಿರುಗಿಸುವಾಗ ಆ ದೃಷ್ಟಿಯೊಳಗಿನ ಪ್ರೀತಿ, ವಾತ್ಸಲ್ಯ, ಮಮಕಾರ ಮಗಳಾದ ನನಗಲ್ಲದೆ ಇನ್ಯಾರಿಗೆ ಅರ್ಥವಾದೀತು. ಅಮ್ಮ ನಮ್ಮನ್ನು ಅಗಲಿ ಹೋದ ಘಳಿಗೆಯಿಂದ ಮನದಲ್ಲಿ ಸಂಗಾತಿಯನ್ನು ಕಳೆದುಕೊಂಡ ದುಃಖ ಜ್ವಾಲಾಮುಖಿಯಂತೆ ಮಡುಗಟ್ಟಿದ್ದರೂ ಅದನ್ನೆಂದೂ ಯಾರಲ್ಲೂ ತೋರಿಸಿಕೊಳ್ಳದ, ತೋಡಿಕೊಳ್ಳದ ಮೇರುಪರ್ವತ ನಮ್ಮ ಅಪ್ಪ.
ತುಂಬು ಕುಟುಂಬದಲ್ಲಿ ಮೊದಲ ಮಗನಾಗಿ ಹುಟ್ಟಿ, ಸಾಲಾಗಿ ಏಳು ಜನ ಸಹೋದರಿಯರ ವಿದ್ಯಾಭ್ಯಾಸ, ಮದುವೆ, ಬಾಣಂತನ, ಕಷ್ಟಸುಖದಂತಹ ಜವಾಬ್ದಾರಿಯನ್ನು ತನ್ನ ತಂದೆಗೆ ಸ್ವಲ್ಪವೂ ಹೊರೆಯಾಗದಂತೆ ತಾನು ದುಡಿದ ಹಣದಿಂದಲೇ ಸಮರ್ಥವಾಗಿ ನಿಭಾಯಿಸಿದ ಛಲಗಾರ. ಹೆಣ್ಣುಮಕ್ಕಳು ಹೊರೆಯೆಂದು ಎಂದೂ ಭಾವಿಸಲಿಲ್ಲ. ಈಗ್ಗೆ ಮೂವತ್ತೈದು ವರ್ಷಗಳ ಹಿಂದೆಯೇ ಸಹೋದರಿಯರು ಪದವಿ ಮುಗಿಸಿ ನೌಕರಿ ಹಿಡಿಯಲು ಪ್ರೇರೇಪಿಸಿದವರು. ತಮ್ಮಂದಿರ ಏಳಿಗೆಗೆ ಹೆಗಲುಕೊಟ್ಟ ಶ್ರಮಜೀವಿ. ಮಕ್ಕಳಿಗೆ ತಂದೆಯಾಗಿ, ಗುರುವಾಗಿ ದಾರಿತೋರಿದ ಮಾರ್ಗದರ್ಶಕ. ಅವರೆಲ್ಲರ ಪ್ರೀತಿಯ ತಿಪ್ಪಣ್ಣಯ್ಯ. ನಮ್ಮೆಲ್ಲರ ಪ್ರೀತಿಯ ಅಪ್ಪಾಜಿ.
ಚಿಕ್ಕವರಿದ್ದಾಗ ಕೂಡು ಕುಟುಂಬಕ್ಕೆಂದು ಬಟ್ಟೆ ಮಿಲ್ಲಿನಲ್ಲಿ ಎರಡೆರಡು ಶಿಫ್ಟ್ ಕೆಲಸ ಮಾಡುತ್ತಿದ್ದರು. ಊಟ ತಿಂಡಿಗಳ ಬಗ್ಗೆ ಗಮನವೇ ಇಲ್ಲದಂತೆ ಹಗಲೂ ರಾತ್ರಿ ದುಡಿಯುತ್ತಿದ್ದರು. ಎಷ್ಟೇ ಸುಸ್ತಾಗಿ ಲೇಟಾಗಿ ಮನೆಗೆ ಬಂದರೂ ಊಟದ ನಂತರ ಮಲಗಿದ್ದ ಪುಟ್ಟ ತಮ್ಮನನ್ನು ಹೊಟ್ಟೆಯ ಮೇಲೆ ಮಲಗಿಸಿಕೊಂಡು, ನನ್ನನ್ನು ಹಾಗೂ ನನ್ನ ತಂಗಿಯನ್ನು ಕೈಮೇಲೆ ಮಲಗಿಸಿಕೊಂಡು ಸ್ವಲ್ಪವಾದರೂ ಮಾತನಾಡಿಸಿದ ನಂತರವೇ ನಿದ್ದೆಹೋಗುತ್ತಿದ್ದರು. ಮಕ್ಕಳ ಆಸೆ, ಅಭಿರುಚಿಗೆ ಪ್ರೋತ್ಸಾಹ ನೀಡಿ ನೀರೆರೆದವರು. ನಮ್ಮಲ್ಲಿದ್ದ ಕ್ರೀಡಾ ಪ್ರತಿಭೆಯನ್ನು ಗುರುತಿಸಿದವರು ಅಪ್ಪನೇ. ಎಲ್ಲೇ ವಾಲಿಬಾಲ್ ಪಂದ್ಯಾವಳಿ ನಡೆದರೂ ತನ್ನ ಮಗಳ ಆಟ ನೋಡಲು ಕೆಲಸಕ್ಕೆ ರಜ ಹಾಕಿ ಅಪ್ಪ ಹಾಜರಿರುತ್ತಿದ್ದರು. ಗೆದ್ದಾಗ ಬೆನ್ನುತಟ್ಟಿ ಹಾರೈಸುತ್ತಿದ್ದರು, ಸೋತಾಗ ಎದೆಗುಂದಬಾರದೆಂಬ ಬುದ್ಧಿಮಾತು ಹೇಳುತ್ತ ಹುರಿದುಂಬಿಸುತ್ತಿದ್ದರು. ನನ್ನ ಮಗಳು ಶಾಲಾತಂಡದಲ್ಲಿ ವಾಲೀಬಾಲ್ ಕ್ಯಾಪ್ಟನ್ ಆಗಿ ರಾಜ್ಯಮಟ್ಟದವರೆಗೂ ಆಡಿ ಗೆದ್ದು ಬಂದಿದ್ದಾಳೆ ಎಂದು ಎಲ್ಲರಿಗೂ ಹೆಮ್ಮೆಯಿಂದ ಎದೆತಟ್ಟಿ ಹೇಳುತ್ತಿದ್ದರು. ಮಕ್ಕಳು ಕೇಳಿದ್ದನ್ನು ಸಾಲ ಮಾಡಿಯಾದರೂ ಸರಿಯೇ ತಂದುಕೊಡುತ್ತಿದ್ದರು. ಅವರ ಬಾಯಲ್ಲಿ ಇಲ್ಲಾ ಎನ್ನುವ ಮಾತೇ ನಾವು ಕೇಳಿಲ್ಲ. ಅಪ್ಪ ಎಂದರೆ ಭಯ, ಶಿಸ್ತು ಜಾಸ್ತಿ, ಕೋಪ ಹೆಚ್ಚು ಎಂದು ಬಹಳಷ್ಟು ಜನ ಹೇಳುವುದನ್ನು ಕೇಳಿದ್ದೇನೆ. ಆದರೆ ನನ್ನಪ್ಪ ಪ್ರೀತಿಯ ಸಾಗರ, ಕೋಪವೆಂಬುದು ನಾವು ಅವರ ಮುಖದಲ್ಲಿ ಕಂಡೇ ಇಲ್ಲ, ಎಲ್ಲದಕ್ಕಿಂತ ಹೆಚ್ಚಾಗಿ ಮಕ್ಕಳ ಜೊತೆ ಅತ್ಯಂತ ಸ್ನೇಹಜೀವಿ. ಈ ಅಪ್ಪಂದಿರ ದಿನದಂದು ನಿನಗೆ ನನ್ನ ವಂದನೆಗಳನ್ನು ಸಲ್ಲಿಸುತ್ತಿದ್ದೇನೆ ಅಪ್ಪಾsssssssssಐ॒ ಲವ್ ಯೂ ಪಾ…..
– ನಳಿನಿ. ಟಿ. ಭೀಮಪ್ಪ , ಧಾರವಾಡ.
ಅಪ್ಪನನ್ನು ಕಣ್ಣಿಂದ ನೋಡದೆ ಅಂತರಾಳದ ಅರಿವಿಂದ ನೋಡಿದಾಗ ಮಾತ್ರ ಇಂತಹ ಅನಿಸಿಕೆ ಮೂಡಿಬರಲು ಸಾಧ್ಯ. ಅಪ್ಪಂದಿರಿಗೆ ನಿನ್ನಂತಹ ಕರುಳು ಕುಡಿ ಇದ್ದರೆ ಅದೇ ಭಾಗ್ಯ. ಅಭಿನಂದನೆಗಳು ನಳಿನಾ.
Thank u
ಮನ ತಟ್ಟುವ ಲೇಖನ. ಅಭಿನಂದನೆಗಳು.
ಧನ್ಯವಾದಗಳು
ಭಾವಕಿರಣದಂತಿದೆ ಈ ಲೇಖನ.
Thank you