ಮಳೆಯೆಂಬ ಮಧುರ ಆಲಾಪ
ಈ ದಾಹ,ಉರಿ ಧಗೆ,ರಣ ಬಿಸಿಲು ಇವುಗಳಿಂದ ಬಸವಳಿದು ದೇಹ ಮನಸು ಸೋತು ಬಸವಳಿದು ತೊಪ್ಪೆಯಾಗಿ ಬಿದ್ದಿರುವಾಗ, ನೆನಪುಗಳೆಲ್ಲಾ ಮರೆವಿಗೆ ಸಂದು ಈ ಲೋಕಕ್ಕೂ ತನಗೂ ಯಾವುದೇ ಸಂಬಂಧವಿಲ್ಲವೆಂಬಂತೆ ಮನಸಿಗೆ ಮಂಕು ಕವಿದಿರುವಾಗ, ಏಕ್ ದಂ ಅಬ್ಭಾ! ಒಮ್ಮಿಂದೊಮ್ಮೆಗೇ ಅದೆಂಥಾ ಶಬ್ದ. ಆಕಾಶ ಸೀಳಿ ಎರಡು ಹೋಳಾಗಿ ದೇವಲೋಕದ ನೀರು ಧಾರೆ ಧಾರೆಯಾಗಿ ಸೂರಿನಡಿಯಲ್ಲಿ ಏಕಪ್ರಕಾರವಾಗಿ ಲಯಬದ್ಧವಾಗಿ ಸುರಿಯುವಾಗ, ಒಣ ನೆಲದೊಳಗೆ ಮೊಳಕೆ ಪಲ್ಲವಿಸುವಾಗ,ಬರಡು ಎದೆಯೊಳಗೂ ಯಾವುದೋ ರಾಗ ತಾನ. ಸಣ್ಣಗೊಂದು ಮಿಡುಕಾಟ. ಮೆರವಣಿಗೆ ಹೊರಡಲು ತಯಾರಿ ನಡೆಸುತ್ತಿದೆ ನೆನಪುಗಳ ಲಹರಿ. ಈ ಮಳೆಯೆಂದರೆ ನೆನಪು; ಮಳೆಯೆಂದರೆ ಕನಸು. ಮರೆಗುಳಿ ಮನಸ್ಸಿಗೆ ಮರುಕಳಿಕೆಯ ಮುಲಾಮು ಹಚ್ಚುವ ಮಳೆಯೆಂದರೆ ಸಾಮಾನ್ಯ ಸಂಗತಿಯಲ್ಲ. ಮಳೆಗೆ ಮನಸೋಲದವರು,ನೆನಪಿನಾಳಕ್ಕೆ ಜಾರದವರು ಯಾರು ತಾನೇ ಇರಲು ಸಾಧ್ಯ? ಮಳೆಯೆಂದರೆ ಬರೇ ಮಳೆಯಲ್ಲ, ಅದು ಬದುಕಿನ ಭಾವವೂ ಎನ್ನುವ ಭಾವ ಹುಟ್ಟಿಸುವಂತೆ ಪರಿಶುದ್ಧವಾಗಿ ತಾಧ್ಯಾತ್ಮತೆಯಿಂದ ಸುರಿಯತೊಡಗಿದೆ. ಮಳೆಗೆ ಹಲುಬದ,ಮಳೆಗೆ ನೆನೆಯದ,ತೇವಗೊಳ್ಳದ, ತೇಲದ,ನೆನಪುಗಳಿಗೆ ಜಾರದ,ಬದುಕಿಗೆ ಜೀವ ತುಂಬಿಕೊಳ್ಳದ ಜೀವಿಗಳು ಎಲ್ಲಿ ತಾನೇ ಇದ್ದಾರು?.
ಈ ಬದುಕು ಹೀಗೇ ಅಂತ ಯಾರೂ ಕಂಡವರಿಲ್ಲ ನೋಡಿ. ಇಲ್ಲದಿದ್ದರೆ ನೀರನ್ನೆಲ್ಲಾ ಆಪೋಷನ ತೆಗೆದುಕೊಂಡ ಬಿಸಿಲ ಬೇಗೆ ತನ್ನನ್ನೇ ಸುಟ್ಟುಕೊಳ್ಳುತ್ತಾ ಸುಡು ಸುಡೆಂದು ಬಾಯಾರುತ್ತಾ ನಿಂತಿರುವಾಗ, ಎಲ್ಲ ಮರೆತಂತೆ ಹೀಗೇ ತಣ್ಣಗೆ ನಿರ್ಲಿಪ್ತವಾಗಿ ಸುರಿಯುತ್ತಾ ಇಡೀ ಭೂಮಿಯ ಬಾಯಾರಿಕೆಯನ್ನು ತಣಿಸುತ್ತಾ ಅಮ್ಮನಂತೆ ಪೊರೆಯುತ್ತಿದೆ ಮಳೆ. ಅಮ್ಮನಿಗಷ್ಟೇ ಎಲ್ಲ ಸುಡು ತಾಪಗಳನ್ನು ಒಡಲೊಳಗೆ ಹಾಕಿಕೊಂಡು, ತಂಗಾಳಿಯಂತೆ ಆವರಿಸಿ ನೇವರಿಸಿ ತಣ್ಣನೆ ಹನಿಯುತ್ತಾ ಸಲಹಲು ಸಾಧ್ಯ. ಹೀಗೆ ಮಳೆ ಜಿಟಿಗುಟ್ಟಿ ಸುರಿಯುವಾಗ, ಪ್ರತೀವರ್ಷದ ಮಳೆಗಾಲವೂ ಮೆಟ್ಟಿಲ ಬಳಿ ಕುಳಿತಂತೆ, ಹೊಸ ಕತೆಯೊಂದನ್ನು ಹೊತ್ತು ತಂದು ತೆರೆದಿಟ್ಟಂತೆ ತೋರುತ್ತದೆ.
ಮೊದಲ ಮಳೆ ಬೀಳಲು ಶುರುವಾಗುತ್ತಿದ್ದಂತೆ ನೆಲದಾಳದಿಂದ ಹೊರಟು ಬರುತ್ತದೆ ಅದೇನೋ ಕಮ್ಮನೆ ಪರಿಮಳ. ಅದನ್ನು ಅಘ್ರಾಣಿಸಿಕೊಳ್ಳುತ್ತಲೇ ಆ ಹಿತವನ್ನು ಎದೆಯೊಳಗೆ ಆವಾಹಿಸಿ ಕೊಳ್ಳುವುದೇ ಬದುಕಿನ ಪರಮ ಸುಖದಂತೆ ಭಾಸವಾಗುತ್ತದೆ. ಬಹುಷ: ಆ ಪರಿಮಳವನ್ನು ಹೀರಿಕೊಳ್ಳಲು ಪ್ರಯತ್ನ ಪಟ್ಟದ್ದಕ್ಕೇ ಇರಬೇಕು ಪುಟ್ಟ ಪುಟ್ಟ ಅಣಬೆಗಳು ಮಣ್ಣ ಕವಚವನ್ನು ಸೀಳಿ ಕಣ್ಣರಳಿಸಿ ಬೆರಗಿನಿಂದ ನೋಡಿದ್ದು. ಒಣ ಗಟ್ಟಿ ಮಣ್ಣಿನೊಳಗೆ ಇಷ್ಟೊಂದು ಮೆದು ಅಣಬೆಯಿತ್ತಾ?. ಅಥವಾ ಕಲ್ಲು ಅಣಬೆಯೂ ಮಳೆಗೆ ನೆನೆದು ಹೂವಂತೆ ಅರಳಿಕೊಂಡಿತಾ? . ಇದೊಂದು ಸೋಜಿಗವೇ ಸರಿ. ಆದರೂ ಮಳೆ ಬಂತೆಂದರೆ ಮೊದಲು ನನಗೆ ನೆನಪಾಗುವುದು ನನ್ನ ಬಾಲ್ಯ. ಬಂಟಮಲೆಯೆಂಬ ದಟ್ಟ ಅರಣ್ಯದೊಳಗೆ ಹುಟ್ಟಿದ ನನ್ನನ್ನು ಶಾಲೆಗೆ ಕಳಿಸಲೋಸುಗ ದೂರದ ಮಲೆನಾಡಿನ ಊರಾದ ಅಜ್ಜಿ ಮನೆಗೆ ಕಳುಹಿಸಿ ಬಿಟ್ಟಿದ್ದರು. ಹಗಲಿಡೀ ಕಾರ್ಗತ್ತಲಾಗಿ,ಆಕಾಶ ಭೂಮಿ ಒಂದಾಗುವಂತೆ ದಪ್ಪಕೆ ಒತ್ತೊತ್ತಾಗಿ ಹನಿಯುವ ಮಳೆಯನ್ನು ನೋಡಿದ್ದ ನನಗೀಗ ಬಿಟ್ಟೂ ಬಿಡದಂತೆ ಪಿರಿಪಿರಿ ಹನಿಯುತ್ತಲೇ ಇರುವ ಮಳೆಯ ಅನುಭವಿಸುವ ಭಾಗ್ಯ. ತದ ನಂತರ ಆ ಮಳೆಯಲ್ಲಿಯೇ ತಲೆ ತೋಯಿಸಿಕೊಳ್ಳುತ್ತಾ ಬೆಳೆದು ದೊಡ್ಡವಳಾದದ್ದು, ಬದುಕನ್ನು ಕವಿತೆಯಂತೆ ಆಸ್ವಾದಿಸಲು ಸಾಧ್ಯವಾದದ್ದು.
ಶಾಲೆಗೆಂದು ತಯಾರಿಯಾಗಿ ಮನೆ ಅಂಗಳ ದಾಟುವುದೊಂದೇ ಗೊತ್ತು, ಅಡ್ಡಾದಿಡ್ಡಿಯಾಗಿ ಬೀಸುವ ಗಾಳಿಯ ರಭಸಕ್ಕೆ ಕೊಡೆ ತಿರುವು ಮುರುವಾಗಿ ಬಟ್ಟೆಯೆಲ್ಲಾ ಒದ್ದೆ ಮುದ್ದೆ. ಅಲ್ಲೇ ಗದ್ದೆ ಬದುವಿನಲ್ಲಿ ಮಲ್ಲಿಗೆಯಂತೆ ಅರಳಿಕೊಂಡ ಅಣಬೆಯನ್ನು ಕಂಡು ಮನಸೋತು , ಹೊತ್ತು ಮರೆತು ಅದನ್ನು ಆಯುತ್ತಾ ಲಂಗ ತುಂಬಿಕೊಳ್ಳುವಾಗ ಗಂಟೆ ಮೀರಿ ಶಾಲೆಗೆ ಹೋಗಲು ಹೆದರಿಕೆಯಾಗಿ ,ಮೆಲ್ಲನೆ ಮನೆ ಕಡೆ ಹೆಜ್ಜೆ ಹಾಕಿ ಉಡಿಯೊಳಗಿದ್ದ ಅಣಬೆಯನ್ನು ಅಷ್ಟೇ ಹಗುರವಾಗಿ ಅಜ್ಜಿಯ ಮುಂದೆ ಸುರುವಿದಾಗ, ಈ ಹಾಳು ಮಳೆಗೆ ಶಾಲೆಗೆ ಹೋಗದ್ದೇ ಒಳ್ಳೆಯದಾಯಿತು, ಹೊಳೆ ನೀರು ತುಂಬಿ ಹರಿಯುತ್ತಿದೆಯೋ ಏನೋ ಅಂತ ದೊಡ್ಡದೊಂದು ಆತಂಕ ದೂರವಾದಂತೆ ನನ್ನನ್ನೇ ಸಮಾಧಾನಿಸಿ ನಿರುಮ್ಮಳಳಾಗುತ್ತಿದ್ದಳು. ಇನ್ನು ಶಾಲೆಯಲ್ಲಿ ನಾಳೆ ಬೆತ್ತದ ಪ್ರಸಾದ ಸಿಗುತ್ತದೆಯೇನೋ ಅಂತ ಹೆದರಿ ಬೆದರಿ ಗುಬ್ಬಚ್ಚಿಯಂತೆ ಮಾರನೇ ದಿನ ಒದ್ದೆ ಲಂಗದಲ್ಲಿ ಮುದುರಿಕೊಂಡು ನಿಂತರೆ ಟೀಚರಮ್ಮನಿಗೂ ಅಯ್ಯೋ! ಅನ್ನಿಸಿ ಹೋಗು ಕೂತುಕೋ ಅಂದು ಬಿಡುತ್ತಿದ್ದರು. ಈ ಮಳೆಯ ಕಾರಣ , ಎಲ್ಲಾ ಅಕಾರಣಗಳನ್ನು ಸಕಾರಣವಾಗಿಸಿಬಿಡುತ್ತಿತ್ತು. ಈ ವಿಷಯದಲ್ಲಂತೂ ಮಳೆಯ ಕರುಣೆ ಅಪಾರ. ಹೀಗೇ ಮಳೆ ನೋಡುತ್ತಾ ಕುಳಿತುಕೊಂಡರೆ ಬಾಲ್ಯ ಮತ್ತೊಮ್ಮೆ ಮನೆ ಬಾಗಿಲಿಗೆ ಬಂದಂತೆ ಅನ್ನಿಸಿ ಬಿಡುತ್ತದೆ. ನಾನು ಶಾಲೆಗೆ ಹೋಗುವ ಹೊತ್ತಿನಲ್ಲಿ ದಾರಿ ಬದಿಯಲ್ಲಿ ಒಂದೇ ಒಂದು ಪುಟ್ಟ ಸಣಕಲು ತೊರೆ ಹರಿಯುತ್ತಿತ್ತು. ಅದನ್ನು ದಾಟಿಯೇ ನಾವು ಶಾಲೆಗೆ ಹೋಗಬೇಕಿತ್ತು. ಬೇಸಿಗೆಯಲ್ಲಿ ಅಲ್ಲೊಂದು ತೊರೆ ಹರಿಯುತ್ತಿತ್ತು ಅನ್ನುವುದಕ್ಕೆ ಯಾವುದೇ ಕುರುಹು ಕೂಡ ಇಲ್ಲದೆ , ಬಿಸಿಲಿಗೆ ಒಣಗಿ ಅದು ಚಕ್ಕಳವಾಗಿ ಬಿಡುತ್ತಿತ್ತು. ಮಳೆ ಹನಿಯಲು ಶುರುಗೊಂಡಿದ್ದೇ ತಡ, ಅದು ಉಕ್ಕಿ ಸೊಕ್ಕಿ ಹುಚ್ಚುಗಟ್ಟಿ ಹರಿಯುತ್ತಿತ್ತು. ಅಬ್ಭಾ! ತೊರೆಯದ್ದು ಅದೆಂಥಾ ಕನಸು? ಅದು ಕಡಲು ಸೇರಲು ತವಕಿಸುತ್ತಿತ್ತು ಅಂತ ಈಗ ಅನ್ನಿಸುತ್ತಿದೆ. ಅದು ಕಡಲು ಸೇರಿತಾ? ಗೊತ್ತಾಗಲಿಲ್ಲ. ಆದರೆ ಆ ಮಳೆಗಾಲದಲ್ಲಂತೂ ಅದು ನದಿಯಾಗಿ ಹರಿದದ್ದಂತೂ ಸತ್ಯ. ಬಿರುಮಳೆಗೆ ಆ ತೊರೆಯಿಂದ ಗದ್ದೆ ಬದುವಿಗೆ ಹತ್ತಿದ ಸಣ್ಣ ಸಣ್ಣ ಮೀನುಗಳನ್ನು ಹಿಡಿದು ಬುಟ್ಟಿಗೆ ತುಂಬಿಸುವುದು , ಯಾವುದೇ ಹೆದರಿಕೆಯಿಲ್ಲದೇ ಮಾಟೆಯೊಳಗೆ ಕೈ ಹಾಕಿ ಏಡಿಯನ್ನು ಗಕ್ಕನೆ ಹಿಡಿದು ಅದರ ಕೊಂಬು ಮುರಿದು ಚೀಲಕ್ಕೆ ತುಂಬಿಸುವುದು ನಮ್ಮ ಬಿಡುವಿನ ಪ್ರಿಯವಾದ ಸಾಹಸದ ಕೆಲಸಗಳಲ್ಲಿ ಒಂದು. ಈಗ ಪ್ರತೀ ಭಾರಿ ಮಳೆ ಹೊಯ್ಯುವಾಗ ,ಗದ್ದೆಗೆ ಏರದ ಮೀನುಗಳಿಗೆ ಹುಡುಕಾಡಿ ಕಣ್ಣು ಸೋತಾಗ ಅವನ್ನೆಲ್ಲ ಹಿಡಿದು ಸಾರು ಮಾಡಿ ತಿಂದ ಪಾಪ ತಟ್ಟೀತೇ? ಅಂತ ಅನ್ನಿಸಿ ಮನಸು ಮುದುಡಿ ಹೋಗಿ ಬಿಡುವುದುಂಟು.
ಇನ್ನು ಹೀಗೇ ಸುರಿಯುವ ಮಳೆಯಲ್ಲಿ ಬಿದಿರು ಮೆಳೆಯೊಳಗೆ ಗಡಿ ಬಿಡಿಯಲ್ಲಿ ನುಗ್ಗಿ ಕಣಿಲೆ ಬಿಟ್ಟಿದೆಯಾ ಅಂತ ನೋಡಿ ಬಿಡುತ್ತಿದ್ದವು. ಇದಕ್ಕೆ ನನ್ನ ಜೊತೆಗೆ ಧೈರ್ಯಕ್ಕೆಂದು ಸಾಥ್ ಕೊಡುತ್ತಿದ್ದದ್ದು ನನ್ನ ತಮ್ಮ. ಆ ಆತುರಕ್ಕೆ ಕಾರಣಗಳು ಹಲವು. ನಮ್ಮಂತೆ ಎಲ್ಲಾ ಮಕ್ಕಳು ಇದೇ ಹುಡುಕಾಟದಲ್ಲಿರುವಾಗ, ಮಳೆಗಾಲದ ತಿನಿಸುಗಳನ್ನು ಎಲ್ಲರಿಗಿಂತ ಮುಂಚೆ ಹುಡುಕಿ ತರುವುದಕ್ಕೆ ನಮ್ಮೊಳಗೊಂದು ಬಿರುಸಿನ ಪೈಪೋಟಿ ಇರುತ್ತಿತ್ತು. ದೂರದ ನಡಿಗೆಯಲ್ಲಿ ಶಾಲೆಯಿಂದ ಹಸಿದು ಬರುವಾಗ ಅಕ್ಕಪಕ್ಕದ ಮನೆಗಳಿಂದ ಹಾದು ಬರುತ್ತಿದ್ದ ಹಲಸಿನ ಹಣ್ಣಿನ ಕಜ್ಜಾಯದ ಪರಿಮಳಕ್ಕೆ ಹಸಿವು ಮತ್ತಷ್ಟು ಹೆಚ್ಚಾಗಿ ,ಬೀಸು ನಡಿಗೆಯಲ್ಲಿ ಮನೆ ತಲುಪಿ ಒಲೆಯ ಬುಡದಲ್ಲಿ ಕರಿಯ ಕಾಫಿಯನ್ನು ಸುರ ಲೋಕದ ಅಪೂರ್ವ ಪೇಯವೆಂಬಂತೆ ಹನಿಹನಿಯಾಗಿ ಗುಟುಕರಿಸುತ್ತಾ, ಸವಿದ ಕಜ್ಜಾಯದ ಪರಿಮಳ ಈಗ ಈ ಮಳೆಗಾಲಕ್ಕೂ ಬಂದು ಹಾದು ಹೋದಂತೆನ್ನಿಸಿದೆ. ಸುಟ್ಟ ಸಾಂತಾಣಿ ಬೀಜ, ಕರಿಯ ಹುಣಸೆ ಬೀಜ, ಎಷ್ಟೊಂದು ಪ್ರಿಯವಾದ ಬಾಯಾಡಿಸುವ ಸಾಧನವಾಗಿತ್ತು. ಕುರ್ಕುರೇ ಲೇಸ್ ಪಾಕೀಟುಗಳ ಮುಂದೆ ಅವು ಹೇಳ ಹೆಸರಿಲ್ಲದಾಗುವಾಗ ಸಣ್ಣಕೆ ಬೇಸರವಾಗಿ ಅದು ಇಡೀ ವ್ಯಾಪಿಸುತ್ತಾ ಎಲ್ಲವರ ವೇದನೇಯೋ ಅನ್ನುವಷ್ಟರ ಮಟ್ಟಿಗೆ ತಾಕುತ್ತಿದೆ. ಕಾಂಕ್ರೀಟ್ ಕಾಡಿನ ನಡುವೆ ಸುಲಭಕ್ಕೆ ದಕ್ಕುವುದು ಕುರು ಕುರು ಕುರ್ಕುರೇ ತಿನಿಸುಗಳೇ ಆಗಿರುವಾಗ ಕಾಲದೊಂದಿಗೆ ಹೊಂದಾಣಿಕೆ ಮಾಡಲೇ ಬೇಕಾದ ಅನಿವಾರ್ಯತೆ ನಮಗೆ. ಮಕ್ಕಳಿಗೆ ಅದೇ ಪಾಕೀಟು ಬಿಚ್ಚಿಕೊಡುತ್ತಾ ಹಳೇ ಕತೆಯನ್ನೇ ಹೊಸತೆಂಬಂತೆ ಹೇಳುವ ಸರದಿ ನನ್ನದೀಗ.
ಇಂತಹ ಇನ್ನು ಹಲವು ರೋಚಕ ಕತೆಗಳು ಬಾಲ್ಯದ್ದಾದರೆ, ಹರೆಯದಲ್ಲಿ ಸುರಿದ ಮಳೆಯ ಒನಪೇ ಬೇರೇ. ಆ ಮಳೆಗೆ ಅದೆಂಥಾ ಬಳುಕಾಟ?. ಸಣ್ಣಗೆ ಹನಿಯುವ ಮಳೆಯಲ್ಲಿ ಸುಮ್ಮಗೆ ತೋಯಿಸಿಕೊಳ್ಳುತ್ತಾ ಸಾಗುವಾಗ ಅರಳಿಕೊಂಡ ಕನಸುಗಳನ್ನು ಲೆಕ್ಕವಿಟ್ಟವರ್‍ಯಾರು?. ಹರೆಯದ ಕನಸುಗಳಿಗೆ ಬೇಲಿ ಹಾಕಲು ಸಾಧ್ಯವಿತ್ತಾ?. ಅದೇ ಹನಿಯುವ ಮಳೆಯಲ್ಲಿ ಅದೃಶ್ಯವಾದ ಪ್ರೀತಿಯೊಂದು ಹಾಗೇ ಮೊಳಕೆಯೊಡೆದು ಎದೆಯ ಗೂಡಲ್ಲಿ ಬೆಚ್ಚಗೆ ಅವಿತು ಮುಲುಗುಟ್ಟಿದ್ದು. ಆ ಹಾದಿಯ ತುಂಬಾ ಅದೆಷ್ಟು ಬಣ್ಣ ಬಣ್ಣದ ಕೊಡೆಗಳು?. ಅದರೊಳಗೆ ದೇಹ ಹಿಡಿಯಾಗಿಸಿಕೊಂಡು ಪಿಸು ನುಡಿಯುತ್ತಾ ಸಾಗುವ ಜೀವಗಳು?. ಈಗ ಆ ನವಿರು ಪ್ರೇಮ ಕವಿತೆಗಳು ಏನಾಗಿವೆಯೋ? ದಡ ಸೇರಿದೆಯೋ? ಅಥವಾ ಮಳೆಯೊಂದಿಗೆ ಹರಿದು ಹೇಳ ಹೆಸರಿಲ್ಲದಾಗಿದೆಯೋ?. ಪ್ರತೀ ಸಾರಿಯೂ ಬಂದು ಹೋಗುವ ಮಳೆಗಷ್ಟೇ ಇದು ಗೊತ್ತಿರಬಹುದಾದ ಸತ್ಯ. ಹದದ ಮುದದ ಚೆಲುವಿನ ಹರೆಯವೊಂದನ್ನು ಈ ಮಳೆಯೇ ಹೊತ್ತೊಯ್ದಿತಾ? ಅಂತ ಬಲವಾದ ಗುಮಾನಿ ನನಗೆ.
ಈ ಮಳೆಗೆ ಮನೆಯೊಳಗೆ ಕೆಲಸ ಮಾಡುವಾಗ ಆಚೆ ಈಚೆ ತೊಡರಿಕೊಂಡು ನೆನಪುಗಳು ನನಗಷ್ಟೇ ಸತಾಯಿಸುತ್ತದೆ ಅಂದುಕೊಂಡರೆ, ಪಡಸಾಲೆಯಲ್ಲಿ ಕುಳಿತು ಮಳೆ ನೋಡುತ್ತಾ ನನ್ನಜ್ಜಿ ಹಿಂದಿನ ಮಳೆಯ ಕತೆಯನ್ನೆಲ್ಲಾ ಹರವಿಡುತ್ತಿದ್ದಾಳೆ. ಮುಸಲಾಧಾರೆಯಾಗಿ ಸುರಿದ ಮಳೆಗೆ ಭತ್ತದ ಗದ್ದೆಯ ಪೈರೆಲ್ಲಾ ಕೊಚ್ಚಿ ಹೋದದ್ದು, ಗದ್ದೆ ಬದುವಿನಲ್ಲಿ ಮೇಯಲು ಕಟ್ಟಿ ಹಾಕಿದ್ದ ದನ ಕರು ಕಾಣೆಯಾದದ್ದು, ಹೊಳೆಯ ನಡುವಿನ ಸಂಕ ದಾಟುವಾಗ ಆಚೆ ಊರಿನ ಸಂಕಜ್ಜ ಬೊಳ್ಳ ಹೋದದ್ದು, ಒಂದೇ ಎರಡೇ?. ಕಣ್ಣು ತೇವಗೊಳಿಸುವಷ್ಟು. ಇಷ್ಟೆಲ್ಲಾ ಆದರೂ ಆಕೆಗೆ ಮಳೆಯ ಬಗ್ಗೆ ಕೋಪವಿಲ್ಲ. ಅನಾಹುತದ ಬಗ್ಗೆ ಬೇಸರವಿದೆ; ಕನಿಕರವಿದೆ. ಅವಳ ಒಡಲೊಳಗಿನ ಕತೆಗಳಿಗೆ ಹಾಗೇ ಕಿವಿಯಾನಿಸುತ್ತಾ ಇರಬೇಕು, ಮಳೆ ಮುಗಿಯಲೇ ಬಾರದು ಅಂತನ್ನಿಸುತ್ತದೆ.
ಮಳೆ ಹೊಯ್ಯಲು ಶುರುವಿಟ್ಟಿತು ಅಂದಾಕ್ಷಣ ಇಲ್ಲಿ ತನಕ ಭೂಗತವಾಗಿದ್ದ ಕಪ್ಪೆಗಳು ವಟರ್ ವಟರ್ ಅಂತ ವಟಗುಟ್ಟುತ್ತಾ ತಮ್ಮ ಅಸ್ಥಿತ್ವವನ್ನು ಸಾಬೀತು ಪಡಿಸುತ್ತಿದ್ದವು. ಜೀರುಂಡೆಯಂತೂ ಲೋಕದ ಸಮಸ್ತ ಸದ್ದುಗಳನ್ನು ಹಿಂದಿಕ್ಕಿ ಬಿಡುವೆನೆಂಬಂತೆ ಭಿನ್ನವಾಗಿ ಬಿರ್ರೀ..ಬಿರ್ರೀ ಅಂದು ಬೊಬ್ಬಿರಿಯುತ್ತಾ ತಾಲೀಮು ನಡೆಸುತ್ತಿತ್ತು. ಅದೆಷ್ಟೋ ಹೆಸರೇ ಗೊತ್ತಿರದ ಕಣ್ಣಿಗೆ ಕಾಣದ ಕೀಟಗಳು ಮಳೆ ಬಂದ ಸಂತಸಕ್ಕೋ, ರೇಜಿಗೆಗೋ ಒಂದೂ ಗೊತ್ತಾಗದಂತೆ ತಮಗಿಷ್ಟ ಬಂದ ರೀತಿಯಲ್ಲಿ ಆಲಾಪಗೈಯುತ್ತಾ ಮಳೆಗೆ ಧನಿಯಾಗುತ್ತಿದ್ದವು. ಎಷ್ಟೋ ಕೊರತೆಗಳ ನಡುವೆಯೂ ಮಳೆಯೊಂದು ಬಂದೇ ತೀರುತ್ತದೆ. ಆ ಕಾರಣಕ್ಕಾಗಿಯೇ ಎಲ್ಲ ಇಲ್ಲಗಳ ನಡುವೆಯೂ ಭರವಸೆಯ ನಾಳೆಗಳು ಹಣಕಿ ಹೋಗುವುದು. ಈ ಮಳೆಯಲ್ಲಿಯೇ ನಮ್ಮ ಮಕ್ಕಳೂ ಶಾಲೆ ತಯಾರಿ ನಡೆಸುತ್ತಿದ್ದಾರೆ. ವಾಟರ್ ಪ್ರೂಫ್ ಬ್ಯಾಗ್‌ಗಳು, ಪ್ಲಾಸ್ಟಿಕ್ ಹೊದಿಕೆಯ ಬೈಂಡ್‌ಗಳ ನಡುವೆ ಅಕ್ಷರಗಳು ಶೀತ ತಾಗದೆ ಬೆಚ್ಚಗೆ ಕುಳಿತಿವೆ. ಮಳೆಯ ನೀರು ಸೋಕದ ,ಅಥವಾ ನಾವೇ ಸೋಕಿಸಲು ಬಿಡದ ಅವರ ನೆತ್ತಿ ಪಾದಗಳು ಒಣಗಿಕೊಂಡೇ ಇರುವಾಗ ನಮ್ಮ ಮಳೆಯ ಕತೆಗಳು ಅವರಿಗೆ ಸ್ವಾದವಾಗಬಲ್ಲವೇ? ಅನ್ನುವ ಸಣ್ಣ ಆತಂಕ ನನಗೆ.
ಒಳ ಕೋಣೆಯಲ್ಲಿ ತೊಟ್ಟಿಲ ಮಗು ಲಯಬದ್ದವಾಗಿ ಸುರಿಯುವ ಮಳೆಯ ಜೋಗುಳಕ್ಕೆ ಹಾಗೇ ನಿದ್ದೆ ಹೋಗಿದೆ. ಪ್ರತೀ ಬಾರಿಯೂ ಹೊಸತೆಂಬಂತೆ ಸುರಿಯುವ ಮಳೆಗೆ ಅಂಗೈಯೊಡ್ಡಿ ಸುಖಿಸಬೇಕೆನ್ನಿಸುತ್ತದೆ. ಪ್ರಾಯದ ಹಂಗಿಲ್ಲದೆ ಎಲ್ಲರ ಎದೆಯೊಳಗೂ ಮಳೆ ಏಕಪ್ರಕಾರವಾಗಿ ಸುರಿಯುತ್ತಾ ಮನಸ್ಸನ್ನು ಮುದಗೊಳಿಸುತ್ತಿದೆ. ನೆಲದ ಮೇಲೆ ಯಾವುದೋ ಮಾಯಕದಲ್ಲಿ ಚಿಗಿತುಕೊಂಡ ಹಸಿರು ಆಕಾಶಕ್ಕೆ ನೆಗೆದುಕೊಳ್ಳಲು ತವಕಿಸುತ್ತಿದೆ. ಕೈ ಗೂಡಲಾರದ ಕನಸುಗಳಿಗೆ ಸೇತುವೆಯಾಗುತ್ತಾ, ಎಲ್ಲರನ್ನು ಬೆಸೆಯುತ್ತಾ, ಗತಕ್ಕೂ ವರ್ತಮಾನಕ್ಕೂ ತಂತುವಾಗುತ್ತಾ ಮಳೆ ಸುರಿಯುತ್ತಲೇ ಇದೆ.. ಎದೆಯೊಳಗೆ ನೆನಪುಗಳು ಜಿನುಗುತ್ತಿವೆ.
– ಸ್ಮಿತಾ ಅಮೃತರಾಜ್, ಸಂಪಾಜೆ.
ಮಳೆಯ ಆಲಾಪ ಚೆನ್ನಾಗಿದೆ
ಚಂದದ ಬರಹ
ಮಳೆಯ ಬಗ್ಗೆ ನಿಮ್ಮ ಹಲವಾರು ಬರಹಗಳನ್ನು ಓದಿದ್ದೇನೆ. ಪ್ರತಿ ಬರಹವೂ ‘ಹೊಸ ಮಳೆ’ಯಂತೆ ಹೊಸ ಹೊಳಹಿನಿಂದ ಕೂಡಿ ಸೊಗಸಾಗಿರುತ್ತದೆ..
Thanks
ಚನ್ನಾಗಿದೆ ಮೇಡಂ… ನಿಮ್ಮ ಮಳೆಗಾಲದ ಸವಿ ನೆನಪು ನನ್ನ ಬಾಲ್ಯದ ದಿನಗಳನ್ನು ಮೆಲುಕು ಹಾಕುವಂತೆ ಮಾಡಿತು… ಮಳೆ ನಿಜಕ್ಕೂ ಅದ್ಭುತ… ಮಳೆಯಲ್ಲಿ ಆಡಿದ ತುಂಟಾಟಗಳು.. ಅದೊಂದು ವರ್ಷ ಭಾರಿ ಮಳೆಯಾಗಿ ರಸ್ತೆ ಬದಿಯ ಚರಂಡಿಯಲ್ಲಿ ನೀರು ಕಾಲುವೆಯಂತೆ ಹರಿಯುತ್ತಿತ್ತು. ಅಲ್ಲಿ ಬಗೆ ಬಗೆಯ ಮೀನು ಹಿಡಿದದ್ದು ನೆನಪಿಗೆ ಬರುತ್ತಿದೆ. ಈಗ ಅದನ್ನು ನೆನಪಿಸಿಕೊಂಡರೆ ಒಮ್ಮೆ ಕಣ್ಣಂಚಿನಲ್ಲಿ ನೀರು ಜಿನುಗುತ್ತೆ. ಆ ಸುಂದರ ಕ್ಷಣಗಳು ಮತ್ತೆ ಸಿಗೋಲ್ಲ ಅನ್ನುವ ಬೇಸರ ಕಾಡುತ್ತದೆ.