ಮಾರ್ಕೋನಿ – ಭೂಮಿಯಲ್ಲೆಲ್ಲಾ ರೇಡಿಯೋ ತರಂಗಗಳು.
ಜೇಮ್ಸ್ ಕ್ಯಾಮೆರೋನ್ ನಿರ್ಮಿತ, 1997 ರಲ್ಲಿ ಬಿಡುಗಡೆಯಾದ, ‘ಟೈಟಾನಿಕ್’ ಅನ್ನುವ ಹೆಸರಿನ ಸಿನೆಮಾವನ್ನು ಹೆಚ್ಚಿನವರು ನೋಡಿರುತ್ತಾರೆ. 2224 ಜನರಿದ್ದ ‘ಟೈಟಾನಿಕ್’ಎಂಬ ಹಡಗು ಮುಳುಗಿದ ಮೇಲೂ, ಅದೃಷ್ಟವಂತರಾದ 705 ಜನ ಬದುಕುಳಿದರು. ಸುಮಾರು 107 ಕಿ.ಮೀ. ದೂರದಲ್ಲಿದ್ದ ‘ಕೇರ್ಪೇತಿಯಾ’ ಎನ್ನುವ ಇನ್ನೊಂದು ಹಡಗು ರಕ್ಷಣೆಗೆಂದು ಹತ್ತಾರು ನೀರ್ಗಲ್ಲುಗಳನ್ನು ಉಪಾಯದಿಂದ ದಾಟುತ್ತಾ ಕೆಲವೇ ಗಂಟೆಗಳಲ್ಲಿ ಟೈಟಾನಿಕ್ ಮುಳುಗಿದ ಜಾಗಕ್ಕೆ ಧಾವಿಸಿ, ಲೈಫ್ ಬೊಟ್ ಗಳಲ್ಲಿದ್ದವರನ್ನು ರಕ್ಷಿಸಿತು. 1912 ರಲ್ಲಿ ಈ ಘಟನೆ ಆಗಿ ಈಗ ಶತಮಾನವೇ ಕಳೆದಿದೆ. ಆ ಕಾಲದಲ್ಲಿ, ನೂರು ಕಿ.ಮೀ.ದೂರದಲ್ಲಿದ್ದ ಜೀವರಕ್ಷಕ ಹಡಗಿನಲ್ಲಿದ್ದವರಿಗೆ ದುರ್ಘಟನೆ ಆದ ಜಾಗ ಹೇಗೆ ಗೊತ್ತಾಯಿತು? ಮಾರ್ಕೋನಿ ಆಗಷ್ಟೇ ತಂತುರಹಿತ ರೇಡಿಯೋ ಸಂದೇಶಗಳನ್ನು ರವಾನಿಸುವ ಯಂತ್ರವನ್ನು ಆವಿಷ್ಕರಿಸಿದ್ದರು. ‘ಮಾರ್ಕೋನಿ ಕಂಪನಿ’ಯ ಕೆಲವು ನೌಕರರು ದುರ್ದೈವೀ ಹಡಗದಲ್ಲಿದ್ದರು ಮತ್ತು ರೇಡಿಯೋ ಸಂದೇಶವನ್ನು ನ್ಯೂಯೋರ್ಕಿಗೆ ಕಳುಹಿಸಿದ್ದರು. ಅಲ್ಲಿಂದ ಪುನಃ ಹೋಯಿತು ಸಂದೇಶ ‘ಕೇರ್ಪೇತಿಯಾ’ ಹಡಗಿಗೆ. ಬದುಕಿ ಉಳಿದವರು ಗುಲ್ಮೀಲ್ಮೋ ಮಾರ್ಕೊನಿಯವರಿಗೆ ಆಭಾರಿಗಳಾಗಿರಬೇಕು. ಇನ್ನುಳಿದ ವಿವರಗಳೆಲ್ಲಾ ಚರಿತ್ರೆಯಲ್ಲಿ ಸೇರಿಹೋಗಿವೆ.
ಇಟಲಿ ದೇಶದ ಒಂದು ಶ್ರೀಮಂತ ಕುಟುಂಬದಲ್ಲಿ ಏಪ್ರಿಲ್ 25, 1874 ರಲ್ಲಿ ಮಾರ್ಕೊನಿಯವರ ಜನನವಾಯಿತು. ಅಪ್ಪ ಇಟೆಲಿಯವರಾದರೂ, ಅಮ್ಮ ಐರಿಶ್ (ಐರ್ಲಾಂಡ್ ನವರು). ಮಗ ಕಲಿಯುವುದರಲ್ಲಿ ಚುರುಕಿಲ್ಲವೆಂದು, ತಂದೆಯವರು ಮನೆಪಾಠಕ್ಕೆ ಒಬ್ಬ ಮೇಷ್ಟ್ರನ್ನು ಇರಿಸಿಕೊಂಡಿದ್ದರು. ಮಾರ್ಕೋನಿ 12 ರ ಪ್ರಾಯದಲ್ಲಿ ಶಾಲೆಗೆ ಹೋಗಲು ಶುರುಮಾಡಿದರು. ಪಾಠಗಳನ್ನು ಓದದಿದ್ದರೂ, ಹುಡುಗ ವಿಜ್ಞಾನದ ಪುಸ್ತಕಗಳನ್ನು ಕಲೆಹಾಕಿ ಓದುತ್ತಿದ್ದರು. ತನ್ನ ಮನೆಯ ಅಟ್ಟದಲ್ಲೇ ಒಂದು ಪ್ರಯೋಗಾಲಯವನ್ನು ಮಾಡಿದ್ದರು. ಅಲ್ಲಿ ತಂತಿಗಳು, ಬ್ಯಾಟರಿಗಳು ಮತ್ತು ಟಿನ್ನಿನ ಡಬ್ಬಿಗಳ ರಾಶಿ ಬಿದ್ದಿದವು. ಚಿಕ್ಕಂದಿನಲ್ಲೇ, ಕೆಲಸಗಾರರು ಬಹಳ ಕಷ್ಟದಲ್ಲಿ ತಂತಿಗಳನ್ನು ಅಳವಡಿಸುವುದು, ಅದನ್ನು ಮತ್ತೆ ಎತ್ತಿ ಪರೀಕ್ಷಿಸುವುದು, ತಂತಿಗಳ ಮೂಲಕ ಟೆಲೆಗ್ರಾಫ್ ಕಳುಹಿಸುವುದು ಇತ್ಯಾದಿ ಕಾರ್ಯಗಳನ್ನು ಕಂಡಿದ್ದರು. ತಂತಿಗಳ ಸಹಾಯವಿಲ್ಲದೇ ಸಂದೇಶಗಳನ್ನು ಕಳುಹಿಸಲು ಸಾಧ್ಯವಿಲ್ಲವೇ ಎನ್ನುವುದು ಮಾರ್ಕೊನಿಯವರ ಯೋಚನೆಯಾಗಿತ್ತು. ತನ್ನ 15 ರ ಪ್ರಾಯದಲ್ಲಿ ಮಾರ್ಕೋನಿಯವರು ಮೇಕ್ಸ್ ವೆಲ್ ಅವರ ‘ಇಲೆಕ್ಟ್ರೋ ಮ್ಯಾಗ್ನೆಟಿಸಂ ತತ್ವ’ ಮತ್ತು ಹರ್ಟ್ಜ್ ಅವರ ‘ಎಲೆಕ್ಟ್ರೋ ಮ್ಯಾಗ್ನೆಟಿಕ್ ಅಲೆಗಳ’ಬಗ್ಗೆ ಸಾಕಷ್ಟು ಓದಿ ತಿಳಕೊಂಡಿದ್ದರು. ಬೆಳಕಿನ ವೇಗದಲ್ಲಿ ಎಲೆಕ್ಟ್ರೋ ಮ್ಯಾಗ್ನೆಟಿಕ್ ಅಲೆಗಳು ಗುಡ್ಡ, ಬೆಟ್ಟ, ಸಾಗರ ಮತ್ತು ನಿರ್ವಾತದಲ್ಲೂ ಚಲಿಸಬಹುದಾದರೆ, ಸಂದೇಶಗಳನ್ನೂ ಇಂತಹುದೇ ಅಲೆಗಳಾಗಿ ಪರಿವರ್ತಿಸಿ ಬೆಳಕಿನ ವೇಗದಲ್ಲಿ ನಿಸ್ತಂತು ರೂಪದಲ್ಲಿ ಕಳುಹಿಸಬಹುದಲ್ಲವೇ? ಮಾರ್ಕೋನಿ ಕಾರ್ಯತತ್ಪರರಾದರು.
ಚಿತ್ರ: ಯುವಕ ಮಾರ್ಕೋನಿ ತಮ್ಮ ಪ್ರಯೋಗಾಲಯದಲ್ಲಿ …
ಮನೆಯ ಅಟ್ಟದಲ್ಲಿ ಪ್ರಯೋಗ ಪ್ರಾರಂಭಿಸಿದರು. ಟೆಲೆಗ್ರಾಫ್ ಒತ್ತುಗುಂಡಿಗಳ ತರಹದ ಉಪಕರಣವನ್ನೇ ಉಪಯೋಗಿಸುತ್ತಾ ಕೆಲವೊಂದು ಸಂಸಜಕಗಳನ್ನು(ಸ್ಪರ್ಷಿಕೆ ಯಾ ಆಂಟೆನಾ) ಅಳವಡಿಸಿ, ಹರ್ಟ್ಜ್ ಅವರ ಪ್ರಯೋಗ ರೀತಿಯಲ್ಲೇ ಹೊಸ ಅಲೆಗಳನ್ನು ಸೃಷ್ಟಿಸಿದರು. ಒಂದು ದಿನ ತನ್ನ 20 ರ ಪ್ರಾಯದಲ್ಲಿ ಅಮ್ಮನನ್ನು ಅಟ್ಟದಲ್ಲಿರುವ ಪ್ರಯೋಗಾಲಯಕ್ಕೆ ಬರ ಹೇಳಿ ಒಂದು ಒತ್ತುಗುಂಡಿಯನ್ನು ಅದುಮಲು ಹೇಳಿದರು. ಅಮ್ಮ ನಸುನಗುತ್ತಾ ಕುತೂಹಲದಿಂದ ಗುಂಡಿ ಒತ್ತಿದರು. ಯಾವುದೇ ತಂತಿಯ ಸಹಾಯವಿಲ್ಲದೇ ಕೋಣೆಯ ಇನ್ನೊಂದು ತುದಿಯಲ್ಲಿ ಗಂಟೆಯೊಂದು ಹೊಡೆಯಲಾರಂಭಿಸಿತು! ಮಾರ್ಕೊನಿಯನ್ನು ‘ಪೆದ್ದು’ ಎಂದುಕೊಂಡಿದ್ದ ತಂದೆ ಈ ಘಟನೆಯ ನಂತರ ಮಗನ ಪ್ರಯೋಗಗಳಿಗೆ ಧಾರಾಳವಾಗಿ ಬಂಡವಾಳ ನೀಡಲಾರಂಭಿಸಿದರು. ಮೊದಲಿಗೆ ಒಂದು ಮೈಲು ದೂರದ ಪ್ರದೇಶದಲ್ಲಿ ರಿಸೀವರ್ ಇರಿಸಿ, ‘ರೇಡಿಯೋ’ ತರಂಗವನ್ನು ನಿಸ್ತಂತು ವಿಧಾನದಲ್ಲಿ ರವಾನಿಸಿದರು. ಇಟಲಿ ದೇಶದಲ್ಲಿ ತನ್ನ ಸಂಶೋಧನೆಗಳಿಗೆ ಸರಕಾರದ ಮನ್ನಣೆ ದೊರಕಲಿಲ್ಲವೆಂದು, ತ್ವರಿತವಾಗಿ ಲಂಡನಿಗೆ ಹೋಗಿ, ಅಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ರಯೋಗಗಳನ್ನು ಪ್ರಾರಂಭಿಸಿದರು. ಎತ್ತರದ ಆಂಟೆನಾಗಳನ್ನು ನಿರ್ಮಿಸಿ ಮೊದಲಿಗೆ 2.5 ಕಿ.ಮೀ., ಅನಂತರ 15 ರಿಂದ 12೦ ಕಿ.ಮೀ. ದೂರದವರೆಗೆ ದ್ವಿದ್ರುವೀ ಆಂಟೆನಾಗಳನ್ನು ಅಳವಡಿಸಿ ರೇಡಿಯೋ ಸಂದೇಶಗಳನ್ನು ಯಶಸ್ವಿಯಾಗಿ ಕಳುಹಿಸಿದರು. 1897 ರಲ್ಲಿ ‘ಮಾರ್ಕೋನಿ ನಿಸ್ತಂತು ಟೆಲೆಗ್ರಾಫ್ ಕಂಪನಿ’ ಆರಂಭವಾಯಿತು. ಸಮುದ್ರದಲ್ಲಿಯೂ ಒಂದು ಹಡಗಿನಿಂದ ಇನ್ನೊಂದು ಹಡಗಿಗೆ ಸಂದೇಶಗಳು ಬೆಳಕಿನ ವೇಗದಲ್ಲಿ ಓಡಾಡಲಾರಂಭಿಸಿದವು. (ಮೋಟಾರು ಕಾರು ಯಾ ವಿಮಾನಗಳು ಆ ಕಾಲದಲ್ಲಿ ಇರಲಿಲ್ಲವಲ್ಲ!)
ಹತ್ತೊಂಬತ್ತನೇ ಶತಮಾನದ ಕೊನೆಯಬಾಗದಲ್ಲಿ ಮಾರ್ಕೋನಿಯವರಿಗೆ ಅಮೆರಿಕಾದ (U.S.) ‘ನ್ಯೂಯಾರ್ಕ್ ಹೆರಾಲ್ಡ್’ ಪತ್ರಿಕೆಯವರಿಂದ ವಿಶೇಷ ಆಹ್ವಾನ ಬಂತು. ‘ಅಮೇರಿಕಾ ಕಪ್’ ಎಂದು ಒಂದು ಪ್ರತಿಷ್ಟಿತ ಟ್ರೋಫಿಯನ್ನು ಗೆಲ್ಲುವ ನೌಕಾ ಕ್ರೀಡೆ ಅಂತರಾಷ್ಟ್ರೀಯ ನೆಲೆಯಲ್ಲಿ ಆಯೋಜನೆಗೊಂಡಿತ್ತು. ಸ್ಪರ್ಧಾ ಸಮಯ ಸಮುದ್ರದಲ್ಲಿ ನೌಕೆಗಳ ಜಾಡು ಹಿಡಿಯಲು ಮತ್ತು ಕ್ಷಣ ಕ್ಷಣಕ್ಕೆ ನೌಕೆಗಳು ಎಲ್ಲಿವೆಯೆಂದು ಗುರುತಿಸಿ, ಭೂಮಿಯಿಂದಲೇ ಪತ್ತೆ ಹಚ್ಚವ ಜವಾಬ್ದಾರಿಯನ್ನು ‘ಮಾರ್ಕೋನಿ ನಿಸ್ತಂತು ಟೆಲೆಗ್ರಾಫ್ ಕಂಪನಿ’ಗೆ ನೀಡಲಾಯಿತು. ನವೆಂಬರ್ 15, 1899 ರಂದು ಬೇಕಾಗುವ ಎಲ್ಲಾ ಸಲಕರಣೆಗಳೊಂದಿಗೆ ಇಂಗ್ಲಿಷ್ ಕರಾವಳಿಗೆ ‘ರೇಡಿಯೋ ಸಂದೇಶ’ಗಳನ್ನು ಕಳುಹಿಸುತ್ತಾ ಕಂಪನಿಯ ಹಡಗು ನ್ಯೂಯೋರ್ಕಿನತ್ತ ಹೊರಟಿತು. ಬೆಳಕಿನ ವೇಗದಲ್ಲಿ ಅಟ್ಲಾಂಟಿಕ್ ಸಾಗರದಲ್ಲಿ ರೇಡಿಯೋ ಅಲೆಗಳು ಮಾತನಾಡಿದವು. ಕಂಪನಿಗೆ ‘ಅಮೇರಿಕಾ ಕಪ್’ ಎನ್ನ್ನುವುದು ಒಂದು ಮಹತ್ವದ ತಿರುವು ಎನ್ನ ಬೇಕಷ್ಟೇ. ‘ಟ್ರಾನ್ಸ್ ಅಟ್ಲಾಂಟಿಕ್ ಟೆಲೆಗ್ರಾಫ್ ಕೇಬಲ್’ ಕಂಪನಿಗೆ ಸಡ್ಡು ಹೊಡೆಯುತ್ತಾ ಕೇಬಲ್ ಗಳಿಲ್ಲದ ಮಾರ್ಕೊನಿಯವರ ‘ಆಧುನಿಕ ರೇಡಿಯೋ ಟೆಲೆಗ್ರಾಫ್’ ಜನಪ್ರಿಯವಾಗಲು ತೊಡಗಿತು. ಆದರೆ, ದೂರಗಾಮಿ ಸಂದೇಶಗಳಿನ್ನೂ ಮರೀಚಿಕೆಯಾಗಿಯೇ ಉಳಿದಿದ್ದನ್ನು ಮಾರ್ಕೋನಿ ಸವಾಲಾಗಿ ತೆಗೆದುಕೊಂಡರು. ಎತ್ತರದ ಪ್ರಸರಣಾ ಗೋಪುರಗಳನ್ನು ( Transmission Towers ) ಕಟ್ಟುವುದು ಮತ್ತು ರಿಸೀವರುಗಳನ್ನು ತಯಾರು ಮಾಡಲು ವರ್ಷಗಳೇ ಬೇಕಾದವು. ಕೊನೆಗೆ 1907 ರಲ್ಲಿ ಸಫಲರಾದರು. ಇಂಗ್ಲೆಂಡಿನಿಂದ ಅಟ್ಲಾಂಟಿಕ್ ಸಾಗರದಾಚೆಗೆ ಸಂಯುಕ್ತ ರಾಷ್ಟ್ರ ಅಮೇರಿಕಾ ಮತ್ತು ಕೆನಡಕ್ಕೆ ರೇಡಿಯೋ ಸಂಪರ್ಕವನ್ನು ಒಂದು ನಿರ್ಧಿಷ್ಟ ದಿಕ್ಕಿನಲ್ಲಿ ಮಾಡಲು ಸಾಧ್ಯವಾಯಿತು. 1909 ರಲ್ಲಿ ಮಾರ್ಕೊನಿಯವರಿಗೆ ಇಂತಹುದೇ ರೀತಿಯ ಆವಿಷ್ಕಾರಗಳನ್ನು ಮಾಡಿದ ಜರ್ಮನಿಯ ಕಾರ್ಲ್ ಬ್ರಾಯನ್ ಅವರೊಂದಿಗೆ ಜಂಟಿಯಾಗಿ ನೋಬೆಲ್ ಪಾರಿತೋಷಕವನ್ನು ನೀಡಲಾಯಿತು.
‘ಟೈಟಾನಿಕ್’ ಹಡಗು ಮುಳುಗಿದ ಅನಂತರ, 1912 ಜೂನ್ ತಿಂಗಳಲ್ಲಿ ದುರಂತದ ವಿಚಾರಣೆ ಸಂದರ್ಭ ಮಾರ್ಕೊನಿಯವರನ್ನು ರೇಡಿಯೋ ಸಂದೇಶ ನೀಡಿರುವ ಬಗ್ಗೆ ಖಾತರಿ ಪಡಿಸಲು ಸಾಕ್ಷ್ಯ ಕೇಳಲಾಯಿತು. ಆ ಸಂದರ್ಭದಲ್ಲಿ ಬ್ರಿಟನಿನ ಗಣ್ಯರೊಬ್ಬರು ಹೇಳಿದ ಸಾಕ್ಷ್ಯದ ಮಾತುಗಳು ಉಲ್ಲೇಖನೀಯ, “ನಾವಿಂದು ಬದುಕುಳಿದಿದ್ದೇವೆಂದರೆ, ಅದಕ್ಕೆ ಮುಖ್ಯ ಕಾರಣ ಮಾರ್ಕೋನಿ ಮತ್ತು ಅವರ ಆವಿಷ್ಕಾರ”. 1914 ರ ಸಮಯ, ಮೊದಲನೇಯ ಜಾಗತಿಕ ಯುದ್ಧ ಪ್ರಾರಂಭವಾಗಿದೆ. ಇಟಲಿ ಮಿತ್ರ ರಾಷ್ಟ್ರಗಳೊಡನೆ ಸೇರಿಕೊಂಡ ದೇಶವಷ್ಟೇ? ಆ ದೇಶದವರೇ ಆದ ಮಾರ್ಕೋನಿಯವರು ಇಟಲಿಯ ಸೆನೆಟ್ ಸದಸ್ಯರಾಗಿ ಆಯ್ಕೆಯಾಗಿದ್ದರು ಮತ್ತು ಯುದ್ಧದ ಸಮಯ ಇಟಲಿಯ ಮಿಲಿಟರಿ ರೇಡಿಯೋ ಸೇವೆಯ ಮುಖ್ಯಸ್ಥರಾಗಿದ್ದರು. ಯುದ್ಧದ ನಂತರ ‘ಇಟಲಿ ಫೇಸಿಸ್ಟ್’ ಪಾರ್ಟಿಯ ಸದಸ್ಯರಾದರು. 1930 ರಲ್ಲಿ ಇಟಲಿಯ ಸರ್ವಾಧಿಕಾರಿ ಮುಸ್ಸೋಲಿನಿಯವರು ‘ಫೇಸಿಸ್ಟ್ ಗ್ರಾಂಡ್ ಕೌನ್ಸಿಲ್’ನ ಸದಸ್ಯರನ್ನಾಗಿ ಮಾರ್ಕೊನಿಯವರನ್ನು ಮಾಡಿದರು. ಅಲ್ಲದೇ, ಅವರನ್ನು ‘ರೋಯಲ್ ಅಕಾಡೆಮಿ ಆಫ್ ಇಟಲಿ’ಯ ಅಧ್ಯಕ್ಷರಾಗಿ ಕುಳ್ಳಿರಿಸಿದರು. ಆದರೆ, ಮುಸ್ಸೋಲಿನಿಯವರು ಎರಡನೇ ಜಾಗತಿಕ ಯುದ್ಧ ಪ್ರಾರಂಭದ ಮೊದಲೇ ಜರ್ಮನಿಯ ಹಿಟ್ಲರಿನ ಜೊತೆ ಮಾಡಿದ ಮೈತ್ರಿಯ ಬಗ್ಗೆ ‘ಚಿಂತೆಗೀಡಾಗಿದ್ದರು’ ಎನ್ನುವ ವಿಚಾರ ಚರಿತ್ರೆಯಲ್ಲಿ ಸೇರಿಹೋಗಿದೆ.
ಮಾರ್ಕೊನಿಯವರ ಬಗ್ಗೆ ಇನ್ನಷ್ಟು ರೋಚಕ ಸಂಗತಿಗಳಿವೆ. ಅವರು ‘ರೇಡಿಯೋ ಟೆಲೆಗ್ರಾಫಿ’ಯನ್ನು ನಿಸ್ತಂತು ರೀತಿಯಲ್ಲಿ ಆವಿಷ್ಕರಿಸಿ, ನೂರಾರು ಮೈಲುಗಳವರೆಗೆ ಮಾತಿನ ಶಬ್ದಗಳನ್ನು ಕಳುಹಿಸಿ, ಆಲಿಸಬಹುದೆಂದಾಗ, ಇಂಗ್ಲೆಂಡಿನ ಸುಪ್ರಸಿದ್ಧ ಲೇಖಕ, ‘ಶರ್ಲಾಕ್ ಹೋಮ್ಸ್’ ಪತ್ತೇದಾರಿ ನಿರ್ಮಾತೃ, ಸರ್.ಎ.ಕೋನನ್ ಡೊಯ್ಲ್ ಅವರನ್ನು ಗೇಲಿಮಾಡಿದ್ದರು ಎನ್ನಲಾಗಿದೆ. ಮಾರ್ಕೋನಿ ಏನೋ ‘ಮೆಂಟಲ್ ಅಥವಾ ಸ್ಪಿರಿಚುವಲ್’ ಟೆಲಿಪತಿ ಮಾಡುತ್ತಿದ್ದಾರೆ, ಎಂದಿದ್ದರು.
ಮಾರ್ಕೊನಿಯವರ ವೈವಾಹಿಕ ಜೀವನ ಸರಿಯಾಗಿ ನೆಲೆಗೂಡಿರದಿದ್ದರೂ, ತನ್ನ ವಿಚ್ಚೇದಿತ ಎರಡನೇ ಹೆಂಡತಿ ಮತ್ತು ಮಗುವಿನ ಮೇಲೆ ಹೆಚ್ಚು ಮಮಕಾರವಿರಿಸಿದಂತೆ ತೋರುತ್ತದೆ. ತನ್ನೆಲ್ಲಾ ಅಪಾರ ಆಸ್ತಿಯನ್ನು ಅವರಿಗೆ ಬರೆದಿಟ್ಟಿದ್ದರು.
ಮಾರ್ಕ್ ರಬೋಯ್ ಎನ್ನುವ ಲೇಖಕ, “Marconi: The Man Who Networked the World” ಪುಸ್ತಕದಲ್ಲಿ ಕೆಲವು ವಿವರಣೆಗಳನ್ನು ನೀಡಿರುತ್ತಾರೆ. ‘ರೇಡಿಯೋ’ ಎಂಬ ಉಪಕರಣವನ್ನು ಮೊದಲಬಾರಿಗೆ ಆವಿಷ್ಕರಿಸಿದವರು ಮಾರ್ಕೊನಿಯೇ ಆಗಿರಲಿಲ್ಲ. ಆದರೆ, ರೇಡಿಯೋ ಅಲೆಗಳನ್ನು ಸಂವಹನಕ್ಕೆ ಉಪಯೋಗಿಸಿದವರು ಮಾರ್ಕೊನಿಯವರೇ ಎನ್ನುವುದು ಮಾತ್ರ ಖಚಿತ. ಈ ತಂತ್ರಜ್ಞಾನದ ಮೂಲಕವೇ ‘ರೇಡಿಯೋ’ವನ್ನು ಮೊದಲಬಾರಿಗೆ ಮಾಡಲಾಯಿತು, ಇಲ್ಲವಾದರೆ ರೇಡಿಯೋ ತಯಾರಿಸಲು ಸಾಧ್ಯವಾಗುತ್ತಿರಲಿಲ್ಲ.
BBC ಮತ್ತು NBC ಎನ್ನುವ ಎರಡೂ ನಿಗಮಗಳಿಗೆ ಮಾರ್ಕೋನಿ ಕಂಪನಿಯೇ ಪ್ರಸಾರಣದ ಅಡಿಪಾಯ ಹಾಕಿತ್ತು. ‘ವೆಟಿಕನ್ ರೇಡಿಯೋ’ ಶಾರ್ಟ್ ವೇವ್ ತರಂಗಾಂತರಗಳನ್ನು ಮೊದಲಬಾರಿಗೆ ಸ್ಥಾಪನೆ ಮಾಡಿದವರು, ಮಾರ್ಕೋನಿ. ವೆಟಿಕನ್ ಗಾರ್ಡನ್ ನಲ್ಲಿ ಮಾರ್ಕೋನಿ ಹೆಸರಲ್ಲಿ ಒಂದು ರಸ್ತೆ ಕೂಡಾ ಇದೆ.
ಮಾರ್ಕೋನಿಯವರು ತನ್ನ ಸಣ್ಣ ಮಗಳು ‘ಎಲೆಟ್ರಾ’ ಹೆಸರಿನ ನೌಕೆಯನ್ನು ಕಟ್ಟಿ, ಅದರಲ್ಲಿಯೇ ಮನೆಯನ್ನು ಮಾಡಿ, ಈ ಮನೆಯಲ್ಲಿ ಸುಮಾರು ಇಪ್ಪತ್ತು ವರ್ಷ ವಾಸಿಸಿದ್ದರು.
‘ರೇಡಿಯೋ ರಿಸೀವಿಂಗ್ ಸ್ಟೇಶನ್’ನ್ನು ಸರ್ ಜಗದೀಶ್ಚಂದ್ರ ಬೋಸ್ ಅವರೇ ಮೊದಲ ಬಾರಿಗೆ 1901 ರಲ್ಲಿ ಆವಿಷ್ಕರಿಸಿದರು ಎನ್ನುವುದಕ್ಕೆ ಕೆಲವು ಸಾಕ್ಷ್ಯಗಳಿದ್ದರೂ, ಅದರ ಪೇಟೆಂಟ್ ಗಳಿಸುವ ಗೋಜಿಗೇ ಅವರು ಹೋಗಿರಲಿಲ್ಲ. ರೇಡಿಯೋ ಬಗ್ಗೆ ಅವರ ಆವಿಷ್ಕಾರ ಪ್ರಯೋಗಾಲಯದೊಳಗೆ ಸೀಮಿತವಾಗಿತ್ತು. ಇದಕ್ಕೂ ಮೊದಲೇ 1894 ರಲ್ಲಿ ಕಲ್ಕತ್ತೆಯ ಟೌನ್ ಹಾಲ್ ಒಳಗೆಯೇ ರೇಡಿಯೋ ಅಲೆಗಳನ್ನು ಸೃಷ್ಟಿಸಿ, ಪ್ರಸಾರ ಮಾಡಿ, ಗ್ರಹಣಮಾಡುವ (ರಿಸೀವ್) ಉಪಕರಣವನ್ನು ಪ್ರಾಯೋಗಿಕವಾಗಿ ಬೋಸ್ ಮಾಡಿತೊರಿಸಿರುತ್ತಾರೆ. ಆದರೇನು? ಜಗತ್ತು ಅದನ್ನು ನೋಡಲಿಲ್ಲ, ಆವಿಷ್ಕಾರದ ಹಕ್ಕುಸಾಮ್ಯ ಅರ್ಜಿ ಹೋಗಿಲ್ಲ! ಅವರೊಬ್ಬ ‘Unsung Hero’ ಆಗಿಯೇ ಉಳಿದರು. ಅವರಿಗೆ ಅದರ ಬಗ್ಗೆ ಚಿಂತೆಯೇ ಇರಲಿಲ್ಲ. ಬದಲಾಗಿ ಸಸ್ಯಗಳ ಬಗ್ಗೆ ಸಂಶೋಧನೆಗಳನ್ನು ಮಾಡುತ್ತಾ, ‘ಸಸ್ಯಗಳೂ ಮಾನವನಂತೆ ನೋವು, ನಲಿವು ಭಾವನೆಗಳನ್ನು ಹೊಂದಿವೆ’ ಎಂದು ಪ್ರತಿಪಾಸಿದವರು. (ಸರ್.ಜೆ.ಸಿ.ಬೋಸ್ ಬಗ್ಗೆ ಬೇರೆ ಲೇಖನವಿದೆ). ಭಾರತದ ಬೋಸ್ ಅವರಂತೆ, ಇನ್ನೊಬ್ಬ ಸರ್ಬಿಯನ್-ಅಮೇರಿಕನ್ ವಿಜ್ಞಾನಿ, ನಿಕೋಲ ಟೆಸ್ಲಾ ಕೂಡಾ ಮಾರ್ಕೊನಿಯವರಷ್ಟೇ ರೇಡಿಯೋ ಅಲೆಗಳ ವಿಚಾರದಲ್ಲಿ ಆವಿಷ್ಕಾರ ಮಾಡಿದರೂ, ತೆರೆ ಮರೆಗೆ ಸೇರಿದ್ದರು ಎನ್ನುವ ವಿಷಯ ಆಶ್ಚರ್ಯವಾದರೂ ಸತ್ಯ!
ಚಿತ್ರ : ಸೆಲ್ ಫೋನ್ ಗಳಲ್ಲಿ ರೇಡಿಯೋ ಸಂದೇಶಗಳ ಸಂವಹನ.
1876 ರಲ್ಲಿ ಗ್ರಹಾಮ್ ಬೆಲ್ ಟೆಲಿಫೋನ್ ಕಂಡುಹುದುಕಿದರು. ತಂತುಗಳ ಮೂಲಕ ಕೆಲಸ ಮಾಡುವ ಈ ಫೋನಿಗೆ ಸ್ಥಿರದೂರವಾಣಿ (Land Phone) ಅನ್ನುತ್ತೇವೆ. ನಿಸ್ತಂತು ವಿಧಾನದಲ್ಲಿ ರೇಡಿಯೋ ಸಂದೇಶ ಕಳುಹಿಸಬಹುದು ಎಂಬುದನ್ನು ಮಾರ್ಕೋನಿ ಕಂಡುಕೊಂಡರು. ಹಾಗಾದರೆ ಫೋನ್ ಮತ್ತು ರೇಡಿಯೋ ಸಂದೇಶ ಇವೆರಡರನ್ನೂ ಒಂದೇ ಉಪಕರಣದೊಳಗೆ ಅಳವಡಿಸಲಾಗದೇ? ಈಗಿನ ಸೆಲ್ ಫೋನ್ ಅಥವಾ ಮೊಬೈಲ್ ಫೋನ್ ಇದೇ ತತ್ವದಲ್ಲಿ ಕೆಲಸ ಮಾಡುತ್ತವೆ. ಇದರೊಳಗೆ ಒಂದು ರೇಡಿಯೋವೂ ಇದೆ, ಒಂದು ಫೋನೂ ಇದೆ. ಆದರೆ ಸೆಲ್ ಫೋನ್ ಕೆಲಸ ಮಾಡಬೇಕಿದ್ದರೆ, ಒಂದು ಎತ್ತರದ ಟವರಲ್ಲಿ ಸಂದೇಶಗಳನ್ನು(Signals) ಕಳುಹಿಸುವಿಕೆ ಮತ್ತು ಗ್ರಹಿಸುವಿಕೆ ಮಾಡುವ ಸಾಧನಗಳು ಬೇಕಿವೆ. ಟವರಲ್ಲಿ ರೇಡಿಯೋ ಸಂದೇಶಗಳನ್ನೇ ಸಂವಹನಕ್ಕೆ ಉಪಯೋಗಿಸುತ್ತಾರೆ. ಈಗ ಭೂಮಿಯಲ್ಲೆಲ್ಲಾ ರೇಡಿಯೋ ಸಂದೇಶಗಳು ತುಂಬಿಲ್ಲವೇ? ಹಾಗಾಗಿ, ಮಾರ್ಕೋನಿಯವರನ್ನು ಸೆಲ್ ಫೋನ್ ಗಳ ‘ಪಿತಾ ಮಹ’ ಎಂದು ಕರೆದರೆ ಅದು ಅವರಿಗೆ ಸಲ್ಲುವ ಗೌರವವೇ ಸರಿ.
ಜುಲೈ 20, 1937 ರಲ್ಲಿ ಮಾರ್ಕೋನಿಯವರು ತೀರಿಕೊಂಡಾಗ, ಜಗತ್ತಿನಾದ್ಯಂತ ಎಲ್ಲಾ ರೇಡಿಯೋ ಕೇಂದ್ರಗಳು ಅವರ ಗೌರವಾರ್ಥ ನಿಮಿಷಗಳ ಕಾಲ ಸ್ಥಬ್ದವಾಗಿದ್ದವು.
.
-ಡಾ.ಬಡೆಕ್ಕಿಲ ಶ್ರೀಧರ ಭಟ್.,ಪುತ್ತೂರು.
ಮಾಹಿತಿಗಾಗಿ ಧನ್ಯವಾದಗಳು…
ಅತ್ತ್ಯುತ್ತಮ ಮಾಹಿತಿಗಾಗಿ ಧನ್ಯವಾದಗಳು ಸರ್.