ಸ್ತ್ರೀ
ಹೆಣ್ಣವಳು ಜಗದೊಳಗಣ ಚರಾಚರ
ಸೃಷ್ಟಿಯೊಳಗೊಂದು ಅದ್ಬುತ ಸೃಷ್ಟಿ.
ಅವಳೆಲ್ಲಿ ಮಾನ್ಯಳೊ,ಅವಳೆಲ್ಲಿ
ಅರ್ಹಳೊ ಅಲ್ಲೆಲ್ಲ ಸುಖದ ವೃಷ್ಟಿ.
.
ಹೆಣ್ಣವಳು ತಾನಮ್ಮನ ಗರ್ಭದಲಿರೆ ,ಸಂಶಯವೇ ನಿತ್ಯ.
ನವಮಾಸಕಳೆದು ,ಮಡಿಲೇರಿ
ನಲಿವ ಕನಸು ಆಗಲಲ್ಲಿ ಸತ್ಯ.
ಹೆಣ್ಣವಳು ಮಗುವಾಗಿ ನಲಿದಾಡುತಿರಲಲ್ಲಿ
ಮನೆ ತುಂಬ ಅನುರಣಿಸಿತಲ್ಲಿ ಹೆಜ್ಜೆ ಗಜ್ಜೆ.
ಮೈನೆರೆತು ಕುಳಿತಾಗ ಅವರಿವರ
ಮಾತಿಗೂ ಸಿಲುಕಲಾರದ ಲಜ್ಜೆ.
ಆದರೂ ಆಂತರ್ಯದಿ ನೂರೆಂಟು
ಕನಸುಗಳರಳುವ ವಯಸ್ಸದು.
.
ಗಳಿಗೆಗೊಮ್ಮೆ ಮುದುಡಿ ಅರಳುವ ಚಾಂಚಲ್ಯದ ಮನಸ್ಸದು.
ಸಹನೆಯಂತೆ,ಧೈರ್ಯವಂತೆ ಬಾಳಲಲ್ಲಿ ನೂರುವಿದ್ಯೆಗೆ ಅರಸಿಯಂತೆ.
ಒಳಗೊ ಹೊರಗೊ ದುಡಿದು ನಗಿಸಿ ನಗುತ ನಲುಗುವ ಸರಸಿಯಂತೆ.
ಯೌವನದ ಮೆಟ್ಟಿಲೇರುತಿರೆ ತಾ ಕೊರಳನೊಡ್ಡುವಳು ಮೂರುಗಂಟಿನ ನಂಟಿಗೆ.
ಬಿಡುತಲ್ಲಿ ಹುಡುಗಾಟ,ಬಿಗುಮಾನ
ಇದೆಯಾದರೂ ಹದವಾದ ಹುಸಿಕೋಪ
ವೈಯಾರ ಮೇಳೈಸಿ ಕೋಸಂಬರಿ,
ಎಲ್ಲರನು ಸಂತೈಸಿ,ಬಡಸುವಳು ನಿತ್ಯ ನಗುಮೊಗದ ಉಣಸು ಈ ಕನಕಾಂಬರಿ.
ಕೂಸಂತೆ,ಕುವರಿಯಂತೆ,ಯುವತಿಯಂತೆ
ಮುಂದವಳು ಅಮ್ಮನಂತೆ ಅಜ್ಜಿಯಂತೆ.
ನಕ್ಕವಳು ನಗಿಸುತವಳು ಆಳಾಗಿ ದುಡಿವವಳು,ಸಂಸಾರದೊಲವಿಗವಳೇ ತಂಬೆಳಕನೆರೆವ ಚಂದ್ರನಂತೆ.
.
– ಲತಾ(ವಿಶಾಲಿ) ವಿಶ್ವನಾಥ್