ಮಾರ್ಚ್08 ರಂದು ವಿಶ್ವ ಮಹಿಳಾ ದಿನ. ಈ ದಿನ ಬಂದಾಗೆಲ್ಲ ತುಂಬಾ ಕಾಡುವ ಸಾಲುಗಳೇ ಜಿ ಎಸ್ ಶಿವರುದ್ರಪ್ಪರವರ ಸ್ತ್ರೀ ಅಂದರೆ ಅಷ್ಟೇ ಸಾಕೇ ಕವಿತೆ. ಹೆಣ್ಣು ಮಗು ಹುಟ್ಟಿತು ಅಂದರೆ ಮನೆ ಬೆಳಗಿದಂತೆ , ಯಾಕೆ? ಕಾರಣ ಪ್ರತಿ ಹೆಣ್ಣಿನಲ್ಲೂ ಒಂದು ತಾಯಿಯ ಮನಸ್ಸಿದೆ ಹತ್ತಿರದಿಂದ ನೋಡಿದವರಿಗಷ್ಟೇ ಅರ್ಥವಾಗುವ ಮನಸ್ಸು. ಅವಳ ತೊದಲುನುಡಿ, ಅವಳ ಪುಟ್ಟ ಕಾಲಿನ ಗೆಜ್ಜೆ ಸದ್ದು , ಕಾಡಿಗೆ ತುಂಬಿದ ಮುದ್ದು ಕಂಗಳು, ಬೆಳೆಯುತ್ತಾ ಅವಳ ದೇಹದಲ್ಲಾಗುವ ಬದಲಾವಣೆಗಳು. ಮದುವೆಯ ಹಂತಕ್ಕೆ ಬಂದರೆ ಮಾನಸಿಕವಾಗಿ ಪ್ರಬುದ್ಧತೆ, ತಾಯಿಯಾದಾಗ ದೈಹಿಕವಾಗಿಯೂ ಮಾನಸಿಕವಾಗಿಯೂ ಭಾವನಾತ್ಮಕವಾಗಿಯೂ ಬದಲಾಗುವ ಅವಳೊಂದು ವಿಸ್ಮಯವೇ ಸರಿ.
ಹೆಣ್ಣು ಈಗೀಗ ಹೊರಗಿನ ಪ್ರಪಂಚಕ್ಕೆ ಅದೆಷ್ಟೇ ಸಬಲೆ ಅನಿಸಿಕೊಂಡರೂ ಅವಳು ಪೂರ್ತಿಯಾಗಿ ತನ್ನನ್ನೇ ಸಬಲೆ ಎಂದು ಒಪ್ಪಿಕೊಳ್ಳಲಾರಳು. ಅವಳಿಗೊಂದು ದಿನಚರಿ ಇದೆ. ಮತ್ತದು ಬದಲಾಗುವುದೇ ಇಲ್ಲ. ಬೆಳಗ್ಗೆ ಏಳುತ್ತಾಳೆ, ಉಣಿಸುತ್ತಾಳೆ, ಬಡಿಸುತ್ತಾಳೆ, ನಗುತ್ತಾಳೆ, ಅಳುತ್ತಾಳೆ, ಕೋಪಿಸಿಕೊಳ್ಳುತ್ತಾಳೆ, ಬೆರೆಯುತ್ತಾಳೆ ಮತ್ತೆ ಇವೆಲ್ಲದರ ನಡುವೆ ತನ್ನ ತಾನೇ ಮರೆಯುತ್ತಾಳೆ. ನಿದ್ದೆ ಹತ್ತದ ರಾತ್ರಿಗಳಲ್ಲಿ ಈ ಬದುಕಿಗೆ ಬದಲಾವಣೆ ಬೇಕೆಂದು ಹಪಹಪಿಸುತ್ತಾಳೆ. ಆದರೆ ಮತ್ತೆ ಬೆಳಗಾಗೋ ಹೊತ್ತಲ್ಲಿ ಅದೇ ದಿನಚರಿಗೆ ಸೋಲುತ್ತಾಳೆ.
ಇವೆಲ್ಲಾ ಕೆಲಸ ತಾನು ಯಾಕೆ ಮಾಡಬೇಕು ಎಂದಲ್ಲ , ಬದಲಾಗಿ ಮಾಡುವ ಕೆಲಸಗಳನ್ನ ಗುರುತಿಸಿ ಒಂದಿಷ್ಟು ಮೆಚ್ಚುಗೆ ಸಿಕ್ಕರೆ ಅಷ್ಟೇ ಅವಳಿಗೆ ಸಾಕು ಅವಳಿಗೆ ಖುಷಿಯಾಗಿರಲು. ಹೊರಗೆ ಹೋಗಿ ದುಡಿಯುವ ಹೆಣ್ಣಾದರೂ ಮನೆಯಲ್ಲೇ ಹೋಮ್ ಮೇಕರ್ ಅನ್ನಿಸ್ಕೊಳ್ಳೋ ಹೆಣ್ಣಾದರೂ ಬಯಸುವುದು ಪುಟ್ಟ ಪುಟ್ಟ ಮೆಚ್ಚುಗೆ ಮತ್ತು ಪುಟ್ಟ ಪುಟ್ಟ ಖುಷಿಯನ್ನಷ್ಟೇ.ಪ್ರತಿ ಅವಳೊಳಗೂ ಪಾಲು ಬಿದ್ದ ಕನಸುಗಳಿವೆ, ಕೆನ್ನೆಗೆ ಜಾರದೆ ಬಾಕಿಯಾದ ಕಣ್ಣು ಹನಿಗಳಿವೆ, ಪದಗಳಿಗೆ ಸಿಗದೇ ಎದೆಯೊಳಗೆ ಸಿಲುಕಿದ ನೋವುಗಳಿವೆ, ತುಟಿಗಳನ್ನು ದಾಟದೆ ಮನಸಲ್ಲೇ ಅವಿತ ನಗುಗಳಿವೆ, ಹೇಳಲು ಆಗದೆ ಉಳಿದಂತ ಮಾತುಗಳಿವೆ ಆದರೂ ಮೆಚ್ಚಿಕೊಂಡಷ್ಟು ಗುರುತಿಸಿಕೊಂಡಷ್ಟೂ ಪ್ರೀತಿಸುವ ಆಸೆಗಳಿವೆ.
ಎಷ್ಟೋ ಮಾತುಗಳಲ್ಲಿ ಕಥೆಗಳಲ್ಲಿ ಹೆಣ್ಣನ್ನು ಎಂದೂ ತಿಳಿದುಕೊಳ್ಳಲು ಆಗದು ಎಂದು ತಮಾಷೆಯಾಗಿ ಹೇಳುತ್ತಾರಾದರೂ, ಅದರ ಹಿಂದೆ ಅವ್ಳನ್ನು ತಿಳಿದು ಕೊಳ್ಳಲು ಒಂದಿಷ್ಟು ಸಹನೆ ಸಾಕಷ್ಟೇ. ತಾಳ್ಮೆಯಿಂದ ಅವಳೊಂದಿಗಿದ್ದರೆ ಅವಳು ನೀರಿನಂತೆ ಹರಿಯುತ್ತಾಳೆ, ಬೆಳೆಯುತ್ತಾಳೆ, ನೆರಳಾಗುತ್ತಾಳೆ ಮತ್ತು ಮನತುಂಬಿ ಪ್ರೀತಿಯನ್ನು ಎರೆಯುತ್ತಾಳೆ.
ಹೆಣ್ಣಿನ ಬಗ್ಗೆ ಬರೆಯ ಹೊರಟರೆ ಕಾದಂಬರಿಯೇ ಅವಳಾಗುತ್ತಾಳೆ. ನಮ್ಮ ನಿಮ್ಮ ಮನೆಯಲಿ ಅಕ್ಕನಾಗಿ, ತಂಗಿಯಾಗಿ, ಮಗಳಾಗಿ, ತಾಯಿಯಾಗಿ ತಾನು ನಿರ್ವಹಿಸುವ ಪ್ರತಿ ಪಾತ್ರದಲ್ಲೂ ತನ್ನತನದ್ದೇ ಪ್ರೀತಿಯನ್ನು ನೀಡುವ ಅವಳಿಗೆ ಈ ದಿನ ಮೀಸಲಾಗಲಿ ಮತ್ತು ಹೇಳಿ,
ಮನೆಮನೆಯಲಿ ದೀಪ ಮುಡಿಸಿ
ಹೊತ್ತು ಹೊತ್ತಿಗೆ ಅನ್ನ ಉಣಿಸಿ
ತಂದೆ ಮಗುವ ತಬ್ಬಿದಾಕೆ
ನಿನಗೆ ಬೇರೆ ಹೆಸರು ಬೇಕೆ?
ಸ್ತ್ರೀ ಎಂದರೆ ಅಷ್ಟೇ ಸಾಕೆ?

ದೀಕ್ಷಿತಾ ಆಚಾರ್ಯ, ಬೆಂಗಳೂರು

