ನೋವು ನಲಿವಿನ ಕೀಲಿಕೈ !

Share Button

ಡಾ. ಹೆಚ್ ಎನ್ ಮಂಜುರಾಜ್

‌ನೂರು ನೋವಿನ ನಡುವೆ ಒಂದು ನಗೆಯು ಕಾಡಿ
ನೆಪವು ಸಿಕ್ಕಿದೆ ಬದುಕಿಗೆ
ದುಃಖ ಕಡಲಿನ ನಡುವೆ ಸುಖದ ನದಿಯು ಹರಿದು
ದಾಹ ಹೆಚ್ಚಿದೆ ಬಯಕೆಗೆ

ಮನಸು ಮನಸಿನ ನಡುವೆ ಎದ್ದು ನಿಂತಿದೆ ಗೋಡೆ
ಕೆಡೆವ ಬಲವೇ ಸೋತಿದೆ
ಯಾವ ಕರುಣೆಯ ಬೆಳಕು ಯಾವ ಸಂಧಿಯ ತೂರಿ
ಕನಸ ಬೀಗವ ತೆರೆದಿದೆ?

ಕವಿದ ಕತ್ತಲ ಬದುಕು ಹೆಜ್ಜೆ ಮೂಡದ ದಾರಿ
ತಾರೆ ಎಂದಿಗೆ ಸೆಳೆಯಿತೋ?
ಊರ ನೆನಪಿನ ಬಲವೇ ಮತ್ತೆ ಕರೆಯುತ ಕಾಡಿ
ಮಣ್ಣ ಋಣದಲಿ ಬಿದ್ದಿತೋ?

ಕವಿ – ಶ್ರೀ ರವೀಂದ್ರನಾಯಕ್ ಸಣ್ಣಕ್ಕಿಬೆಟ್ಟು
ಸ್ವರಸಂಯೋಜನೆ ಮತ್ತು ಗಾಯನ: ಶ್ರೀ ಗಣೇಶ ದೇಸಾಯಿ

ಇಪ್ಪತ್ತನೇ ಶತಮಾನದ ಅಮೆರಿಕನ್ ಕವಿ ಖಲೀಲ್ ಗಿಬ್ರಾನ್ ನ ‘ದ ಪ್ರೊಫೆಟ್’ (ಪ್ರವಾದಿ) ಎಂಬುದು ನೂರಕ್ಕೂ ಹೆಚ್ಚು ಭಾಷೆಗಳಿಗೆ ಅನುವಾದವಾಗಿರುವ ಪುಸ್ತಕ. ಇವುಗಳಲ್ಲಿರುವ ಕಾವ್ಯಾತ್ಮಕ ಗದ್ಯಪ್ರಬಂಧಗಳಲ್ಲಿ ಒಂದು: ಆನ್ ಜಾಯ್ ಅ್ಯಂಡ್ ಸ್ಯಾರೋ.’ ಇದರಲ್ಲಿ ಬರುವ ಸಾಲುಗಳ ಸಾರ ಹೀಗಿದೆ: ‘ದ್ರಾಕ್ಷಾರಸವನ್ನು ಹಿಡಿದಿಟ್ಟುಕೊಳ್ಳುವ ಮಣ್ಣಿನ ಪಾತ್ರೆಯು ಕುಂಬಾರನ ಒಲೆಯಲ್ಲಿಯೇ ಸುಟ್ಟಿದ್ದು! ನಮ್ಮ ಆತ್ಮವನ್ನು ಸಂಪ್ರೀತಗೊಳಿಸುವ ವೀಣಾನಾದವು ಹೊರಹೊಮ್ಮುತಿರುವುದು ಹರಿತವಾದ ಚಾಕುವಿನಿಂದ ಸಿದ್ಧವಾದ ಟೊಳ್ಳಾದ ಮರದಿಂದಲೇ ತಾನೇ!?’  ಜಗತ್ತಿನ ಎಲ್ಲ ದುಃಖವನ್ನು ಕುರಿತು ಖುಷಿಯಾಗಿ ಮಾತನಾಡಿದ ಮೊದಲ ತತ್ತ್ವಜ್ಞಾನಿ ಈ ಖಲೀಲ್ ಗಿಬ್ರಾನ್; ಹಾಗೆಯೇ ನೋವು ಮತ್ತು ದುಃಖಗಳನ್ನು ಖುಷಿಯಾಗಿಸಿದಾತನೂ ಅವನೇ! ‘ಸುಖವು ನಿಮ್ಮ ಜೊತೆ ಊಟ ಮಾಡುತ್ತಿರುವಾಗ ದುಃಖವು ನಿಮ್ಮನ್ನು ಸ್ವಾಗತಿಸುತ್ತಾ ಹಾಸುಗೆಯಲ್ಲಿ ಕಾಯುತ್ತಿರುತ್ತದೆ’ ಎಂದು ಹೇಳಿ, ದಿಗ್ಭ್ರಮೆ ಮೂಡಿಸುತ್ತಾನೆ! ಅಂದರೆ ಸುಖ ದುಃಖಗಳೆರಡೂ ಜೀವನದಲ್ಲಿ ನಮ್ಮೊಂದಿಗೆ ಸದಾ ಇರುವಂಥವೇ. ಅದಕಾಗಿ ಹೆಚ್ಚು ಚಿಂತಿತರಾಗದೇ ‘ಗೊಳೋ’  ಎಂದು ಗೋಳಿಡದೇ ಆನಂದವನ್ನು ಕಂಡುಕೊಳ್ಳಿ ಎಂದು ಪ್ರತಿಪಾದಿಸುವನು. ಈ ಪೀಠಿಕೆಯೊಂದಿಗೆ ನಮ್ಮ ಸಂವೇದನಾಶೀಲ ಭಾವಗೀತ ಕವೀಂದ್ರ ರವೀಂದ್ರರನೂರು ನೋವಿನ ನಡುವೆಗೆ ಜಿಗಿಯುತ್ತೇನೆ.

ನಾಡಿನ ಹೆಸರಾಂತ ಗಾಯಕರು ಸ್ವರ ಸಂಯೋಜಿಸಿ, ಹಾಡಿದ ಸ್ವರಚಿತ ಕವಿತೆಗಳನ್ನು ಕವಿ ರವೀಂದ್ರರು ತಮ್ಮ ಯುಟ್ಯೂಬ್ ವಾಹಿನಿಯ ಮೂಲಕ ಶೇರಿಸುತ್ತಾ ನಾಡಿನಾದ್ಯಂತ ಪಸರಿಸುತ್ತಾ, ಸದಭಿರುಚಿಗೊಂದು ಹೊಸ ಆಯಾಮ ಸೇರಿಸುತ್ತಿದ್ದಾರೆ. ಅಂಥ ಹಲವು ಜೀವಗೀತೆಗಳಲ್ಲಿ ಇದೂ ಒಂದು. ನೂರೊಂದು ನೆನಪು ಎದೆಯಾಳದಿಂದ ಚಿಮ್ಮುವ ರೀತಿಯಲ್ಲೇ ನೂರು ನೋವೂ ನಮ್ಮೊಳಗನ್ನು ಹಿಂಡುತ್ತಿರುತ್ತದೆ. ನೋವು, ದುಃಖ ಯಾರಿಗಿಲ್ಲ? ಯಾರಿಗೆ ಗೊತ್ತಿಲ್ಲ? ಸುಖದ ಮಹತ್ವ ಗೊತ್ತಾಗುವುದೇ ದುಃಖದಲ್ಲಿ! ನಾನಾ ಕಾರಣಗಳಿಂದ ದುಃಖಿಗಳಾದವರೇ ಲೋಕದಲ್ಲಿ ಹೆಚ್ಚು. ಕೆಲವೊಮ್ಮೆ ವಿನಾ ಕಾರಣ! ‘ಸಾಸುವೆಯಷ್ಟು ಸುಖಕ್ಕೆ ಸಾಗರದಷ್ಟು ದುಃಖ ನೋಡಾ’ ಎಂದಿದ್ದಾರೆ ಅಲ್ಲಮಪ್ರಭು. ಹಾಗೆಯೇ ‘ಸಾಸುವೆಯಷ್ಟು ಸುಖಕ್ಕೆ ಸಾಗರದಷ್ಟು ಸಿದ್ಧತೆ ನೋಡಾ’ ಎಂದೂ ಬದಲಿಸಿಕೊಳ್ಳಬಹುದು! ಈ ಸಿದ್ಧತೆಯಲ್ಲೇ ಬಹುತೇಕ ದುಃಖ ಅಡಗಿರುತ್ತದೆ. ನೋವು, ಯಾತನೆ, ಅಸಹನೆ, ವ್ಯಗ್ರತೆ, ದುಗುಡ, ಸಂಕಟ, ಹಿಂಸೆ, ಕ್ರೌರ್ಯ, ಅಸೂಯೆ, ಹತಾಶೆ, ಖಿನ್ನತೆ, ಅಸಹಾಯಕತೆ ಇವೆಲ್ಲವೂ ದುಃಖ ತರುವ ಸಂಗತಿಗಳು. ಬರೀ ಸಂಗತಿಗಳಲ್ಲ; ನಕಾರಾತ್ಮಕ ದುರಂತಗಳು. ದುಃಖಿತರಾಗುವುದಕ್ಕೆ ಇವೇ ಮೂಲ ಕಾರಣಗಳು. ಇವಲ್ಲದೇ ಇನ್ನೂ ಹಲವು ತೆರನಾದ ವಿಚಾರಗಳಿಂದ ನಾವು ದುಃಖ ಪಡುತ್ತೇವೆ. ಅಜ್ಞಾನ ಮತ್ತು ಅವಿವೇಕಗಳೂ ನಮ್ಮನ್ನು ದುಃಖಕ್ಕೆ ನೂಕುತ್ತವೆ. ನಮ್ಮ ನಿರೀಕ್ಷೆ ತರುವ ನಿರಾಶೆ ಮತ್ತು ಕೈಯಳತೆಯಲ್ಲಿ ಇಲ್ಲದ ಪ್ರಸಂಗಗಳು ಸಹ ದುಃಖಿತರನ್ನಾಗಿಸುತ್ತವೆ. ಪ್ರಪಂಚದ ವಿದ್ಯಮಾನಗಳನ್ನು ಗಮನಿಸಿದಾಗ ದುಃಖವುಂಟಾಗುವುದೇ ಹೆಚ್ಚು. ಅದಕ್ಕೇ ಅಲ್ಲಮಪ್ರಭುದೇವರು ದುಃಖವನ್ನು ಸಾಗರಕ್ಕೆ ಹೋಲಿಸಿದರು.

ಮೂರು ಮತ್ತು ನಾಲ್ಕು ಮಾತ್ರೆ ಗಣವಿನ್ಯಾಸದ ನಾಲ್ಕು ಸಾಲುಗಳ ಮೂರು ಪದ್ಯಪಾದಗಳು ಈ ಕವಿತೆಯ ಹೊರಗಿನ ಚೌಕಟ್ಟು. ಮೊದಲೆರಡು ಸಾಲುಗಳನ್ನು ಪಲ್ಲವಿ ಎಂದುಕೊಂಡರೆ ನಂತರದ ಎರಡು ಸಾಲುಗಳು ಅನುಪಲ್ಲವಿ. ಜೊತೆಗೆ ಎರಡು ಚರಣಗಳು. ಸಶಕ್ತವಾದ ಸಂವಹನ; ಒಟ್ಟೂ ಬದುಕಿನ ಸಮರ್ಪಕ ವ್ಯಾಖ್ಯಾನ. ಸರಳವಾದ ಪದಗಳಲ್ಲೇ ಗಹನವಾದ ಅರ್ಥಸಂಚಯನ. ಎರಡನೆಯ ಸ್ಟ್ಯಾಂಜ಼ಾದಲ್ಲಿ ಭಾವ ವಿಸ್ತರಣ. ಕೊನೆಯ  ಸ್ಟ್ಯಾಂಜ಼ಾ ಅಂತೂ ಒಟ್ಟೂ ಕವನದ ವಸ್ತುವನ್ನು ಒಂದು ನಿರ್ದಿಷ್ಟ ಆಯಾಮಕ್ಕೆ ಲಗತ್ತಿಸಿ, ಅನಿರೀಕ್ಷಿತ ತಿರುವಿನ ಮಿಂಚನ್ನು ಸಂಚರಿಸುವುದು. ಗಾಯಕರಾದ ಗಣೇಶ ದೇಸಾಯಿಯವರು ಈ ಮೂರೂ ಸ್ಟ್ಯಾಂಜ಼ಾಗಳ ಕೊನೆಯ ಸಾಲುಗಳನ್ನು ವಿಶಿಷ್ಟಪೂರ್ಣವಾಗಿ ಹಾಡಿ, ಕೇಳುಗರ ಭಾವತನ್ಮಯತೆಯನ್ನು ಕೆಣಕುತ್ತಾರೆ; ರಾಗದಲ್ಲಿ ಕಳೆದು ಹೋಗದಂತೆ ಎಚ್ಚರ ವಹಿಸುತ್ತಾರೆ! ಕವಿತೆಯ ಚಿಂತನಾಂಶವನ್ನು ಗೇಯತೆ ಹಾಳು ಮಾಡುತ್ತದೆಂಬ ವಾದ ಬಹಳ ಪ್ರಾಚೀನವಾದದ್ದು. ಆದರೆ ಗೇಯತೆಯ ಮೂಲಕವೇ ಶ್ರೋತೃವಿನಲ್ಲಿ ಆಲೋಚನೆಗಳು ಗರಿಗೆದರುವಂತೆ ಮಾಡುವ ಚಮತ್ಕಾರ ಮಾತ್ರ ಇತ್ತೀಚಿನದ್ದು. ಈ ಪವಾಡ ಈ ಗೀತೆಯಲ್ಲಿ ಸದ್ದಿಲ್ಲದೆ ಆಗಿದೆ. ಮೊದಲ ಸ್ಟ್ಯಾಂಜ಼ಾದ ಕೊನೆಯ ಸಾಲನ್ನು ಹಾಡುವಾಗ, ವೇದನೆ ಮತ್ತು ನಿವೇದನೆಗಳನ್ನು ಪ್ರಸ್ತುತಪಡಿಸಿದ ಧಾಟಿಯಿದೆ. ಎರಡನೆಯ ಸ್ಟ್ಯಾಂಜ಼ಾದಲ್ಲಿ ದನಿ ಏರುಮುಖಿಯಾಗಿದೆ. ಮೂರನೆಯ ಸ್ಟ್ಯಾಂಜ಼ಾದ ಕೊನೆಯ ಸಾಲು ಅರ್ಥಪೂರ್ಣ ಮುಕ್ತಾಯವನ್ನು ಧ್ವನಿಸಿದೆ.

ನೂರಾರು ನೋವುಗಳ ನಡುವೆ ಯಾರದೋ ಒಂದು ನಗೆ ಕಾಡುವಂತಾಗಿದೆ. ಹೌದಲ್ಲವೇ!? ಮುಗ್ಧ ಸ್ನಿಗ್ಧ ನಗುವೇ ಅಲ್ಲವೇ ಜೀವನಪ್ರೀತಿಯ ಸೆಳೆತ. ಯಾರೋ ಆತ್ಮೀಯರು ನಮಗೆ ನೀಡುವ ಸಾಂತ್ವನ ಈ ನಗೆಯ ಅನುರಣನ. ಅಪಹಾಸ್ಯವೂ ನಗುವೇ. ಆದರೆ ಇದು ಅದಲ್ಲ. ಮೈ ದಡವಿ ಹೃದಯದನಿಯನಾಲಿಸುವ ಮಿತ್ರಸಂಹಿತವಿದು; ಜೀವನೋತ್ಸಾಹವನೀಂಟುವ ರಸದೂಟೆಯಿದು. ನೋವನು ಮರೆಸುವ ದಿವ್ಯೌಷದವೆಂದರೂ ಸರಿಯೇ. ಈ ಒಂದು ನಗೆಯ ಮೀಟುಗೋಲೇ ನಿರೂಪಕನ ಅಂತರಾಳದ ಎಲ್ಲ ಕೂಗನ್ನು ಹೊರ ಹಾಕಿದ ಕಾರ್ಯ ಕಾರಣ. ಕವಿತೆಯ ನಿರೂಪಕನಂತೂ ನೋವ ಮರೆತು ನಗುವ ದಿವ್ಯಕ್ಷಣಕ್ಕೆ ಮನಸನು ಮುಡಿಪಿಡುತ್ತಾನೆ. ನೋವು ಮರೆಯಲು ನೆಪ ಸಿಕ್ಕಿದೆ; ಬದುಕ ಮುನ್ನಡೆಸಲು ಈ ನೆನಪು ಸಾಕಾಗಿದೆ! ಜಗತ್ತೇ ಹಾಗಲ್ಲವೆ? ಅಂಥ ಕಡಲಿಗೆ ಐಕ್ಯವಾಗಲು ಎಲ್ಲೆಲ್ಲಿಂದಲೋ ನದಿಗಳು ಹರಿದು ಬರುತ್ತವಲ್ಲವೇ? ಅದೂ ವಿಳಾಸವೇ ಗೊತ್ತಿಲ್ಲದೇ! ಕೇವಲ ನಂಬಿಕೆ; ಗಮ್ಯ ಸೇರುತ್ತೇನೆಂಬ ಹೆಬ್ಬಯಕೆ. ಇಲ್ಲಿ ನಿರೂಪಕನು ಕಡಲನು ದುಃಖಕೂ ನದಿಯನು ಸುಖಕೂ ಸಂಕೇತವಾಗಿಸಿದ್ದಾನೆ, ನಿಜ. ದುಃಖವೇ ಅಪಾರ. ಅದಕೇ ಸಾಗರದ ಇನ್ನೊಂದು ಹೆಸರು ಪಾರಾವಾರ; ಸುಖವು ಕೇವಲ ಅದರ ಮೇಲು ಪದರ! ಸಂತಸವೆಂಬುದು ಅಗಲಕ್ಕೆ ಹರಡಿಕೊಳ್ಳುವ ಸ್ವಭಾವದ್ದು, ಸಾಗರದ ಅಲೆಗಳಂತೆ. ದುಃಖವು ಅತಿಯಾದ ಆಳದ್ದು, ಸಮುದ್ರದ ಪಾತಾಳದಂತೆ! ಶರಧಿಯ ನಿಧಿ ಅಡಗಿರುವುದೇ ಆಳದಲ್ಲಿ! ಗೌತಮರು ಬುದ್ಧರಾಗುವುದಕ್ಕೆ ಈ ಆಳದ ದುಃಖವೇ ಕಾರಣ.

ಕುಸಿದು ಕುಳಿತ ಜೀವವೊಂದು ತನ್ನ ನೈರಾಶ್ಯವನು ಬದಿಗೊತ್ತಿ ಮುಂದೊಡಗುವ ಪ್ರಕ್ರಿಯೆ ಶುರುವಾಗಿದೆ. ತನಗೆ ತಾನೇ ಸಂತೈಸಿಕೊಳುವ ಧಾಟಿಯಲಿದೆ. ನಿತ್ಯ ಜೀವನದ ಜಂಜಾಟಕಿನ್ನು ಅರ್ಥವಿಲ್ಲ; ದಾಹ ತಣಿಸುವಾಸೆ ಮುನ್ನುಗ್ಗುತಿದೆಯಲ್ಲ. ಒಟ್ಟಿನಲ್ಲಿ ಬದುಕಿ ಬಿಡಬೇಕೆಂಬ ಛಲಬಲಗಳು ಈಗ ಒಳಗಿಂದ ಒದ್ದುಕೊಂಡು ಬರುತ್ತಿದೆ; ಜಡವು ಚೇತನವಾಗ ಹತ್ತಿದೆ. ಆದರೇನು? ಈ ಒಂದು ನಗೆಯ ಸಮ್ಮೋಹನ ಕಾಡುವ ಮೊದಲು ಏನಿತ್ತು? ಏನಾಗಿತ್ತು? ಕವಿ ಚಡಪಡಿಸುತ್ತಾ ಅರುಹುತ್ತಾನೆ: ಮನಸು ಮನಸುಗಳ ನಡುವೆ ಗೋಡೆಗಳು ಎದ್ದು ನಿಂತಿವೆ. ಸಂಬಂಧವಿರಲಿ; ಸಂವಾದವೂ ಕಣ್ಮರೆ ಇಂಥಲ್ಲಿ ಜಿ ಎಸ್ ಎಸ್ ಅವರಗೋಡೆಕವಿತೆ ನೆನಪಾಗುವುದು. ನಮ್ಮ ನಡುವಿನ ಸಂಪರ್ಕ ಸೇತು ತುಂಡಾಗಿರುವುದರ ಸಂಕೇತವಿದು. ಎದ್ದ ಗೋಡೆಯನು ಕೆಡಹುವ ಬಲವೂ ಇಲ್ಲದಂಥ ಸೋತ ಸ್ಥಿತಿಯಲ್ಲಿರುವಾಗಲೇ ಗೋಡೆಗಳ ನಡುವಿನ ಸಂಧಿಯಿಂದ ಯಾರದೋ ಕರುಣೆಯ ಬೆಳಕು ತೂರಿ ಬರುತ್ತಿದೆ! ಇದೇ ಆಶಾಭಾವ; ಒಳಿತಿನ ಸಂಭವ. ಅಸಹಾಯಕತೆಯ ನಡುವೆಯೂ ಸಹಾಯ ಒದಗಿ ಬಂದಂಥಾಯಿತು, ಈ ಕಾಡುವ ನಗೆಯ ಮೂಲಕ. ಇಂಥ ಕಾರುಣ್ಯದ ಬೆಳಕು ಕನಸಿನ ಖಜಾನೆಯ ಬೀಗದ ಕೈಯಾಯಿತು. ಇದು ನಿಜಕೂ ಅದೃಷ್ಟದ ಅವಕಾಶ.

ಈ ಕವಿತೆಯ ವಿನ್ಯಾಸವೇ ವಿಶಿಷ್ಟವಾದದ್ದು. ಪರಿಣಾಮವನ್ನು ಮೊದಲು ಹೇಳಿ, ಆ ಪರಿಣಾಮ ಸಂಭವಿಸುವ ಮುಂಚಿನ ಪರಿಸ್ಥಿತಿಯನ್ನು ತರುವಾಯ ಹೇಳುವಂಥದು. ಇದು ಜೀವಗೀತದ ಹೊಸ ಆಯಾಮ; ಕವಿತೆಯನು ಗೀತ ಮಾಡುವ ತಂತ್ರಧಾಮ! ತೀವ್ರವಾಗಿ ಕಲಕಿದ ಭಾವವೊಂದನ್ನು ವಿಸ್ತರಿಸುವಲ್ಲಿ ಅದನು ಪಲ್ಲವಿ ಮತ್ತು ಚರಣಗಳಾಗಿಸುವ ಸ್ವರ ಸಂಯೋಜನೆಯಲ್ಲಿ ಕವಿ ಮತ್ತು ಸಂಗೀತ ಸಂಯೋಜಕರಿಬ್ಬರ ಮಿದುಳು ಕಾರ್ಯಗತಗೊಳ್ಳುವ ಪರಿ ಅಪೂರ್ವ!! ಇಂಥ ಸಾಧ್ಯತೆಯಿಂದ ಶ್ರೋತೃಗಳ ಮನೋಭೂಮಿಕೆಯಲ್ಲಿ ಪಲ್ಲವಿಯ ಪಲುಕುಗಳು ತೊನೆದಾಡುತ್ತವೆ; ತಂತಮ್ಮ ನೂರು ನೋವುಗಳ ನಡುವೆ ಕಾಡಿದ ನಗೆಯ ಆವೃತ್ತಿಗಳು ಹಾದು ಹೋಗುತ್ತವೆ. ಇದೇ ಅಲ್ಲವೇ ಭಾವಗೀತದ ಅನುರಣನ; ಭಾವಜೀವಿಯ ಪ್ರತಿಸ್ಪಂದನ.

ಅನರ್ಥವೋ ಅಪಾರ್ಥವೋ ಅನ್ಯಾರ್ಥವೋ ಒಟ್ಟಿನಲ್ಲಿ ಮನಸು ಮನಸುಗಳ ನಡುವೆ ಉಂಟಾದ ಸಂವಹನದ ಬಿರುಕೀಗ ಮತ್ತೆ ಕನಸ ಹೊತ್ತು ತರುವ ಬೆಳಕಿಗೆ ಆಸ್ಪದವಿತ್ತದ್ದು ಎಂಥ ಸೋಜಿಗ! ಇದು ಕವಿತೆಯ ನಿರೂಪಕರಿಗೂ ಅಚ್ಚರಿಯೇ. ಅದಕಾಗಿಯೇ ಪ್ರಶ್ನಾರ್ಥಕ ಚಿಹ್ನೆ ಬಂದಿದೆ. ಇದನ್ನು ತನ್ನಲೇ ಕೇಳಿಕೊಳ್ಳುವಂತಾಗಿದೆ. ಇಂಥ ಭಾವಸಂದಿಗ್ಧತೆಯು ಇಲ್ಲಿ ಕಾವ್ಯವಾಗಿದೆ. ಅಳಲುಗಳ ಪ್ರಾಮಾಣಿಕತೆಯಿಲ್ಲಿ ಕಲಾತ್ಮಕ ಆವರಣ ಪಡೆದು, ಈ ಕವಿತೆಯ ನಿರೂಪಕರೊಂದಿಗೆ ಓದುಗರೂ ಕೇಳುಗರೂ ಜೊತೆಯಾಗುತ್ತಾರೆ; ತಂತಮ್ಮ ಕನಸುಗಳ ಬೀಗ ತೆರೆದ ಕೀಲಿಕೈಗಳನ್ನು ಆಯಾಚಿತವಾಗಿ ನೆನಪಿಸಿಕೊಳ್ಳುತ್ತಾರೆ. ಅಂಥ ನಾದವನೀಂಟುವ ಸಾರ್ಥಕ ಸಾಲುಗಳು ಹೇಗಿರಬೇಕೆಂಬುದಕ್ಕೆ ಇವು ದರ್ಶನ; ನಿದರ್ಶನ.

ಮುಂದಿನ ಮತ್ತು ಕೊನೆಯ ಸಾಲುಗಳು ಕವಿತೆಗೊಂದು ಸ್ಪಷ್ಟತೆಯನ್ನು ತಂದುಕೊಡುವಲ್ಲಿ ತಲ್ಲೀನವಾಗುತ್ತವೆ. ಕವಿದ ಕತ್ತಲಿನಿಂದ ಗುರಿ ದಾರಿಗಳೆರಡೂ ಮುಚ್ಚಿ ಹೋದ ಸ್ಥಿತಿಯಲ್ಲೂ ದೂರದಾಗಸದ ಚುಕ್ಕಿಬೆಳಕು ಸೆಳೆಯುತ್ತಿದೆ. ಊರ ನೆನಪಿನ ಬಲವೇ ಮತ್ತೆ ಕರೆಯುತ್ತಿದೆ. ಬರೀ ಕರೆಯುತ್ತಿಲ್ಲ; ಕಾಡುತ್ತಿದೆ. ಒಂದು ನಗೆಯು ಕಾಡಿದ್ದರ ಹಿಂದೆ ಎಂಥೆಂಥ ಪರಿಣಾಮಗಳಾಗಿವೆ! ಬೆಳೆದು ಅರಳಿದ್ದ, ಬಿಟ್ಟು ಬಂದಿದ್ದ ಊರು ಮತ್ತೆ ಕಾಡುವಷ್ಟು!! ಅಷ್ಟೇ ಅಲ್ಲ; ಎದ್ದು ನಿಂತಿದ್ದ ಗೋಡೆಯನ್ನು ಕೆಡಹುವಷ್ಟು ‘ಬಲ’ ವಿಲ್ಲದ ಹೊತ್ತಲ್ಲೂ ಈ ಊರ ನೆನಪಿನ ‘ಬಲ’ ವೇ ಮುಂದಾಗಿದೆ! ಬದುಕು ಹುಡುಕಿಕೊಂಡು ದೂರ ಹೋದ ಜೀವಕೀಗ ಮಣ್ಣ ಋಣ ಮುಖ್ಯವಾಗಿದೆ. ಊರಿಗೆ ಮರಳಿ ಮತ್ತೆ ಮಣ್ಣಿನಾಶ್ರಯದಲ್ಲೇ ಜೀವ ಜೀವನವನ್ನು ಧನ್ಯವಾಗಿಸಿ ಕೊಳ್ಳೆಂದು ಸೆಳೆಯುತ್ತಿದೆ. ಪರಪಂಚ ಸಿನಿಮಾದ ಯೋಗರಾಜಭಟ್ಟರ ಹಾಡೊಂದು ನನಗೆ ಆಯಾಚಿತ ನೆನಪಾಯಿತು. ‘ಹುಟ್ಟಿದ ಊರನು ಬಿಟ್ಟು ಬಂದಾ ಮೇಲೆ…….’ ‘ಊರ ದಿಕ್ಕಿನ ಗಾಳಿ ತಂದಿದೆ, ಒಂದು ಕಾಣದ ಕೂಗನ್ನು; ತವರಿಗಿಂತ ಬೆಚ್ಚನೆ ಜಾಗ ಹೇಳು ಎಲ್ಲಿದೆ ನಿಂಗಿನ್ನು…….’ ‘ಎಲ್ಲಿಂದ ಬಂದೆಯೋ ಅಲ್ಲೇ ಹುಡುಕಾಡು ; ದುರ್ಬೀನು ಹಾಕಿಕೊಂಡು ನಿನ್ನ ನೀನು!’ 

ಕವಿತೆಯಲ್ಲಿಕಾಡಿ’  ಎಂಬ ಕ್ರಿಯಾಪದವೂಬಲ’  ಎಂಬ ನಾಮಪದವೂ ಎರಡು ಬಾರಿ ಬಳಕೆಯಾಗಿದೆ. ಕವಿಯು ಇದನ್ನು ಗೊತ್ತಿದ್ದೂ ಬಳಸಿದರೋ; ಗೊತ್ತಿಲ್ಲದೆಯೇ ತಂದರೋ ಅದು ಮ್ಯಾಟರಲ್ಲ! ಹೀಗಾಗಿದ್ದರಿಂದ ಏನಾಗಿದೆ? ಎಂಬುದನ್ನು ಕಂಡುಕೊಳ್ಳುವುದಷ್ಟೇ ಮುಖ್ಯ. ಕವಿತೆಯ ಅರ್ಥವಂತಿಕೆಗೆ ನೂತನ ಆಯಾಮ ತಂದು ಕೊಟ್ಟಿರುವುದೇ ಈ ಎರಡು ಪದಗಳ ಪುನರಾವರ್ತನೆಯ ಸಖ್ಯ. ಒಂದು ಮುಗುಳುನಗೆಯು ತೀವ್ರವಾಗಿ ಕಲಕಿದ್ದರಿಂದ ಕರುಳಬಳ್ಳಿ ಸಂಬಂಧವಾದ ಮಣ್ಣಋಣಕೆ ಮರಳಲು ಸಾಧ್ಯವಾಯಿತು; ಊರ ನೆನಪು ಕಾಡಿತು. ಕಾಡುವುದು ಎಂದರೆ ಎಡೆಬಿಡದೆ ಒಂದೇ ಸಮನೆ ಕುಂತಲ್ಲಿ ಕೂರಲಾಗದ, ನಿಂತಲ್ಲಿ ನಿಲ್ಲಲಾಗದ ಅನ್ಯಮನಸ್ಕತೆ. ಇದನ್ನು ಕವಿಯು ತುಂಬ ಪ್ರಭಾವಶಾಲಿಯಾಗಿ ಬಳಸಿ, ಜೀವಂತಿಕೆಯ ನರಳು ಹೊರಳುಗಳನ್ನು ಕಾವ್ಯಾತ್ಮಕಗೊಳಿಸಿದ್ದಾರೆ. ಇನ್ನು ‘ಬಲ’ದ ಮಾತು. ಸಂಪರ್ಕ ಸಾಧ್ಯವಾಗದಂಥ ಅಡೆತಡೆಯನ್ನುಂಟುಮಾಡಿದ ಗೋಡೆಯನ್ನು ‘ಕೆಡಹುವ ಬಲ’ ವು ಸೋತರೂ ‘ಊರಿನ ಬಲ’ ಸೋತಿಲ್ಲ! ಇದೇ ಊರುಗೋಲಹುದಲ್ಲ!! ಅಲ್ಲೆಲ್ಲೋ ದೂರದ ಶಹರಿನಲ್ಲಿ ಬಾಳು ಹುಡುಕಿಕೊಂಡು ಹೋದವನಿಗೆ ನೂರು ನೋವು ಎದುರಾದರೂ ಹುಟ್ಟಿ ಬೆಳೆದ ಊರಿನವರ ಒತ್ತಾಸೆ ಕೈ ಬೀಸಿ ಕರೆಯುತಿದೆ. ಕಹಿಗಳ ಮರೆತು ಸಿಹಿಗಳ ಬಳಿಗೆ ಬರುತಿರುವ ಉತ್ಕಟ ಕ್ಷಣವಿದು; ನನ್ನನ್ನು ನಾನು ಕಂಡುಕೊಳ್ಳುವ ಮಾರ್ಗವಿದು. ಅದು ಮಗುವಿನ ಕಾರಣಕೋ; ನಗುವಿನ ಕಾರಣಕೋ! ಇದು ಕೇವಲ ನೆಪ. ಮಣ್ಣಋಣಕೆ ಮರಳುವ ಮನಸಾಗಿದೆ, ಅದೀಗ ಹೊಸ ಕನಸಾಗಿದೆ, ಹೊಸ ಚೈತನ್ಯದುತ್ಸಾಹಕೆ ನಾಂದಿಯಾಗಿದೆ ಅಷ್ಟೇ.

ನಿಜದ ವಿಚಾರವೆಂದರೆ ಕವಿತೆಯನು ವಿವರಿಸಬಾರದು; ಏಕೆಂದರೆ ಅದು ಸವಿವರಕ್ಕೆ ಸಿಕ್ಕುವುದಿಲ್ಲ; ಗದ್ಯಕೆ ದಕ್ಕುವುದಿಲ್ಲ! ಹಾಗೆ ಗದ್ಯದಲಿಡಲು ಅಗದೆಂದೇ ತಾನೇ ಕವಿತೆಯನು ಸೃಷ್ಟಿಸಿರುವುದು!! ಒಂದು ಪಕ್ಷ ಸಿಕ್ಕಿದರೆ ಅದು ತೀರಾ ವಾಚ್ಯವೆಂದೇ ಅರ್ಥ! ಇಷ್ಟಕೂ ಕವಿತೆಯ ಸಾಲುಗಳಲಿ ನಾನು ಮೇಲೆ ಬರೆದಂಥ ಇಂತಹುದೇ ಅರ್ಥ ಹುದುಗಿರುವುದಿಲ್ಲ; ಅದಕಾಗಿಯೇ ಅದು ಭಾವನಾಗೀತೆಯಾಗುವುದು. ಅವರವರ ಭಾವಕ್ಕೆ ಅವರವರ ಜೀವನದ ಅನುಭವಕ್ಕೆ ಅರ್ಥಸ್ತರಗಳನ್ನು ಬಿಟ್ಟು ಕೊಡುವ ಖಾಸಗೀ ಗುಟ್ಟು; ಪದಗಳಲವಿತ ಆದರೆ ಪದಾರ್ಥಗಳಾಚೆ ಹಲವನ್ನು ಹೊಮ್ಮಿಸುವ ಹೊಸ ಹುಟ್ಟು. ‘ಹೇಳದಿರೆ ತಾಳಲಾರನು ಕವಿಯು; ಹೇಳಿದರೆ ಹಾಳಾಗುವುದು ಅನುಭವದ ಸವಿಯು’ ಎಂದು ಕವಿ ಕುವೆಂಪು ಒಂದೆಡೆ ಹೀಗೆ ಅಲವತ್ತುಕೊಳ್ಳುತ್ತಾರೆ. ಹೀಗಾಗಿ ಇದನ್ನು ನನ್ನಷ್ಟಕೆ ನಾನೇ ಹೀಗೆ ವಿವರಿಸಿಕೊಂಡು ಅರ್ಥ ಮಾಡಿಕೊಳ್ಳುವ ತಪ್ಪು ಮಾಡಿದ್ದೇನೆ; ನಾನಾರ್ಥಗಳ ಸಾಧ್ಯತೆಯನ್ನು ಅರಿತಿದ್ದರೂ ಈ ನಿರ್ದಿಷ್ಟತೆಗೆ ಕಟ್ಟು ಬಿದ್ದಿದ್ದೇನೆ. ಇದೊಂದು ಪ್ರಯತ್ನ; ಪ್ರಾಮಾಣಿಕ ಕೇಳುಗನ ಕರುಳು ಕೂಗಿದ್ದರ ಪ್ರತಿಫಲನ. ಆಲಿಸಿದ್ದಕ್ಕೆ ಸಹಸ್ಪಂದನ ಅಷ್ಟೇ.

‘ಕೊಟ್ಟ ನೋವಿಗಿಂತ ಪಟ್ಟ ನೋವು ಅಧಿಕ’ ಎಂಬ ಜಾಣ್ನುಡಿಯಿದೆ. ನಾವು ಮಾಡುವ ತಪ್ಪೆಂದರೆ ದುಃಖವನ್ನು ಅನುಭವಿಸಿ ಮುಗಿಸದೇ ನಿವಾರಿಸಿಕೊಳ್ಳಲು ಯತ್ನಿಸಿ ಸೋಲುತ್ತೇವೆ. ಸಂತೋಷದ ಹಾಗೆಯೇ ದುಃಖವೂ! ಇವೆರಡೂ ಆಳದಲ್ಲಿ ಬೇರೆ ಬೇರೆಯಲ್ಲ. ಮನದ ಮಗ್ಗಲುಗಳಿವು. ಬದುಕಿನ ಮಜಲುಗಳಿವು. ಸಂಚಾರಿ ಭಾವಗಳು, ಸ್ಥಿರವಲ್ಲ! ಕ್ರಿಯೆ ಮತ್ತು ಪ್ರತಿಕ್ರಿಯೆಗಳಿಂದ ಸಂಭವಿಸುವಂಥವು. ತುಂಬ ನಕ್ಕಾಗಲೂ ತುಂಬ ಅತ್ತಾಗಲೂ ಕಣ್ಣು ಮೂಗುಗಳಲ್ಲಿ ನೀರು ಬರುವುದು ಸ್ವಾಭಾವಿಕ. ಆನಂದಬಾಷ್ಪವೂ ಕಣ್ಣೀರೇ; ನೋವನ್ನು ಅನುಭವಿಸುವಾಗಲೂ ಕಣ್ಣೀರೇ! ಪರಿಣಾಮ ಬೇರೆ!! ಮಿದುಳಿನಲ್ಲಿ ಇವೆರಡರ ಕೇಂದ್ರ ಒಂದೇ! ಆದರೆ ಮನಸ್ಥಿತಿ ಮಾತ್ರ ಅಜಗಜಾಂತರ. ಹಾರ್ಮೋನು ಸ್ರವಿಸುವಿಕೆಯಲ್ಲೂ ವ್ಯತ್ಯಾಸ. ಒಂದರದು ಪಾಸಿಟಿವ್ ತರಂಗಗಳ ಹರಡುವಿಕೆ; ಇನ್ನೊಂದರದು ನೆಗಟೀವ್ ನರಳಿಕೆ. ಒಟ್ಟೂ ಕವಿತೆಯ ಆಶಯವು ಹೀಗೆ ನೋವು ನಲಿವುಗಳಾಚೆಗೆ ಇರುವ ಬದುಕಿನ ವಿಸ್ಮಯಗಳತ್ತ ಬೊಟ್ಟು ಮಾಡುತ್ತದೆ; ಅಂಥ ಗುಟ್ಟನರುಹುತ್ತದೆ.

ಒಂದು ಬಾಗಿಲು ಮುಚ್ಚಿದರೆ ಇನ್ನೊಂದು ಬಾಗಿಲು ಖಂಡಿತಾ ತೆರೆಯುವುದು. ಕಾಯಬೇಕು; ಕಾಯ ಮಾಗಬೇಕು. “ಯಾವ ಘಳಿಗೆಯಲ್ಲಿ ಯಾವ ಕಿಟಿಕಿಯಿಂದ ಅನಾಮತ್ತಾಗಿ ಕವಿಯ ಎದುರಿಗೆ ನಿಂತಿರಬಹುದು ಈ ಸಾಲುಗಳು? ಕವಿಯು ಇದನ್ನು ಬರೆಯುವಾಗ ಅನುಭವಿಸಿದ ರೋಮಾಂಚನ ಎಂಥದೋ? ನಮ್ಮ ಹಾಗೆ ಅವರಿಗೂ ಮಧುರ ಭಾವ ಅನ್ನಿಸಿರಬಹುದಾ? ಅಷ್ಟು ಭಾವ ತುಂಬಿ ಹಾಡಿದ ಗಾಯಕರು ಎಷ್ಟೊಂದು ಕರಗಿ ಹೋಗಿರಬಹುದು ಈ ಹಾಡಿನ ಎದುರು? ನಮ್ಮಷ್ಟು – ನಿಮ್ಮಷ್ಟು. ಪ್ರತಿ ಸಲ ಕೇಳಿದಾಗಲೂ ಮತ್ತೆ ಮತ್ತೆ ಕೇಳಬೇಕು ಅನ್ನಿಸುತ್ತದೆ ಅಲ್ವಾ? ಯಾವ ಮೋಡಿ ಮಾಡಿದ ಹಾಡು ಇದು. ಒಂದೊಂದು ಸಾಲುಗಳು ಅರ್ಥಪೂರ್ಣ. ಬದುಕಿಗೊಂದಷ್ಟು ಸಾಂತ್ವನ, ಚೈತನ್ಯ ತುಂಬುವ ಹಾಡು. ಪ್ರತಿ ಸಾಲನ್ನೂ ಅದು ಕಾಡಿದ ಪರಿಯನ್ನು ಹೀಗೇ ಬರೆಯುತ್ತಾ ಹೋದರೆ ದೊಡ್ಡ ಲೇಖನವೇ ಆದೀತು. ಈ ಹಾಡನ್ನು ಬರೆದ ಕೈಗಳಿಗೆ, ಅದುಕ್ಕೆ ತಕ್ಕುದಾದ ವಾದ್ಯಗಳನ್ನು ನುಡಿಸಿ ಚಂದಗಾಣಿಸಿದ ವಾದ್ಯಗಾರರಿಗೆ, ಅಷ್ಟೇ ಭಾವ ತುಂಬಿ ಸುಶ್ರಾವ್ಯವಾಗಿ ಹಾಡಿದ ಗಾಯಕರಿಗೆ ಒಂದು ಸಾಷ್ಟಾಂಗ ನಮಸ್ಕಾರ.” ಎಂದಿದ್ದಾರೆ ರವಿ ಶಿವರಾಯಗೋಳ ಎಂಬ ಕೇಳುಗರು, ಕವಿತೆಯ ಯುಟ್ಯೂಬ್ ಚಾನೆಲ್ಲಿನಲ್ಲಿ ಪ್ರತಿಕ್ರಿಯಿಸುತ್ತಾ! ನನ್ನ ಕೊನೆಯ ಮಾತೂ ಇದೇ ಆಗಿರುವುದರಿಂದ ಅವರ ಮಾತುಗಳನ್ನೇ ಉದ್ಧರಿಸಿದ್ದೇನೆ. ‘ನೊಂದ ಬೆಂದ ಜೀವಗಳಿಗೆ ಈ ಸಾಲುಗಳು ಪುನರ್ಜೀವ ಕೊಡಲಿ’ ಎಂದಿದ್ದಾರೆ ಇನ್ನೋರ್ವ ಶ್ರೋತೃ. ‘ಸರಳ ಆದರೂ ಆಳ! ಎಷ್ಟು ಸುಲಭವಾಗಿ ನಾವು ನಮ್ಮೊಡನೆ ಇರುವ ಸುಖವನ್ನು ಮರೆತು ದುಃಖದ ರಾಶಿಯಲ್ಲಿ ಮುಳುಗುವೆವು!’ ಎಂದು ಇದನಾಲಿಸಿದಾಗಿನ ತಮ್ಮ ನರನಾಡಿಯ ಧಮನಿಯನ್ನೇ ಹಂಚಿಕೊಂಡಿದ್ದಾರೆ ಪ್ರಮೋದ್ ಅರವಿಂದ್ ಎಂಬ ಇನ್ನೋರ್ವ ಸಹೃದಯಿ. ‘ನನ್ನ ದಿನ ಮುಗಿಯಲ್ಲ ಈ ಸಾಂಗ್ ಕೇಳದೆ, I just addicted’ ಎಂದಿದ್ದಾರೆ ಇನ್ನೋರ್ವ ಗೀತಪ್ರೇಮಿ. ‘ಅದ್ಭುತವಾಗಿ ಹೊರಹೊಮ್ಮಿದ ಭಾವದ ಭೋರ್ಗರೆತ, ಜೋಗ ಜಲಪಾತದಂತೆ ನೆಲಕ್ಕೆ ಗುದ್ದಿ, ಒಂದೊಂದು ಹನಿಯ ಸಿಂಚನವು ತನುವ ಸ್ಪರ್ಶಿಸಿ, ಬದುಕಿನ ಒಂದೊಂದು ಮಗ್ಗಲಿನ ದರ್ಶನ ಮಾಡಿಸುತಿದೆ.’ ಇದು ಇನ್ನೊಬ್ಬರ ಎದೆಯ ದನಿ. ‘ನೂರು ನೋವಿನ ನಡುವೆ ನಿಮ್ಮ ಹಾಡು ಒಂದು ಮುಲಾಮು; ಪ್ರಸ್ತುತಪಡಿಸಿದ್ದಕ್ಕೆ ನಿಮಗೆ ಸಲಾಮು’ ಎಂದು ಮನದುಂಬಿ ಶ್ಲಾಘಿಸಿದ್ದಾರೆ ಮತ್ತೋರ್ವರು. ಇದಕೆಲ್ಲ ಕವೀಂದ್ರ ರವೀಂದ್ರ ಪ್ರತಿಕ್ರಿಯೆ: ‘ಕವಿತೆ ಸಾರ್ಥಕವಾಯಿತು.’ ಈ ವಿನಯ ಮತ್ತು ವಿವೇಕಗಳಿಂದಲೇ ಇವರ ಪ್ರತಿಭಾವಂತಿಕೆಯು ಇನ್ನಷ್ಟು ಗರಿ ಬಿಚ್ಚಿ ನವಿಲಾಗಿ ನರ್ತಿಸುವಂತೆ ಮಾಡುವುದು; ನಮ್ಮೆಲ್ಲರೆದೆಯ ದುಗುಡಮೋಡಕ್ಕೆ ದನಿಯಾಗಿ ಇಳೆಗೆ ಮಳೆಯಾಗಿ ತಣಿಸುವುದು; ಹಾಡಿ ದಣಿಸುವುದು! ಸಂತೋಷ ಮತ್ತು ದುಃಖಗಳೆರಡೂ ಒಂದೇ ಬಾವಿಯ ನೀರು ಎಂಬ ದರ್ಶನ ಲಭಿಸುವುದು.

ಕವಿತೆಯನ್ನು ಹಾಡು ಮಾಡುತ್ತಾ ಚಿತ್ರಿಸುವಾಗ ಕಾಡುವ ನಗು ‘ಮಗುವಿನದು’ ಎಂದಾಗಿದೆ. ಒಂದು ಮಗುವಿನ ತಂದೆಯಾಗಿ ಅನುಭವಿಸಿದ ಭಾವತರಂಗಗಳು ಎಂಥೆಂಥವು? ಎಂಬುದನ್ನು ಗಾಯನ ತೆರೆದಿಟ್ಟಿದೆ. ಕೊಳಲು ಮತ್ತು ವೀಣೆಯ ನಾದ, ಬಳಸಿದ ಪರಿ ಪರಿ ಸ್ವಾದ – ಇಡೀ ಕವಿತೆಯನು ಗುಂಗಾಗಿಸಿದೆ. ನಮ್ಮೊಳಗಿನ ಭಾವಸಮುದ್ರ ಉಕ್ಕುಕ್ಕಿ ಹರಿಯುತ್ತದೆ; ಸಾಹಿತ್ಯವನ್ನು ಸಂಗೀತವು ಲೀಲಾಜಾಲವಾಗಿ ಎತ್ತಿಕೊಂಡು ಬಂದು ನಮ್ಮನ್ನು ತೋಯಿಸುತ್ತದೆ; ಧನ್ಯವಾಗಿಸುತ್ತದೆ. ಲಯದಲ್ಲೇ ಲಯವಾಗಿಸುವುದೆಂದರೆ ಇದೇ ಇರಬೇಕು! ನಾನಂತೂ ವಾಸಂತಿ ರಾಗದ ಈ ತಾನದಲ್ಲಿ ತಲ್ಲೀನನಾಗಿರುವೆ; ದಿನಕೆ ಹತ್ತು ಬಾರಿ ಇದನ್ನು ಗುನುಗಿರುವೆ.

ಎಲ್ಲರ ಬದುಕೂ ಹಾಗೆಯೇ ಅಲ್ಲವೇ? ಅಳುತ್ತಲೇ ನಗುತ್ತೇವೆ; ನಗುತ್ತಲೇ ಅಳುತ್ತೇವೆ. ಖಲೀಲ್ ಗಿಬ್ರಾನ್ ಹೇಳುವಂತೆ ಸುಖವು ದುಃಖದ ನೆರಳು; ದುಃಖವು ಸುಖದ ಹೊರಳು. ಅತಿ ಆಳದ ದುಃಖಕೆ ನಮ್ಮನು ಶುದ್ಧೀಕರಿಸುವ ಗುಣವಿದೆ. ದುಃಖಪಟ್ಟು, ಅತ್ತು ಹಗುರಾದ ಮೇಲೆಯೇ ಮನಸು ನಿರ್ಮಲವಾಗುವುದು, ಮಳೆ ಬಿದ್ದ ನಂತರದ ತಿಳಿವಿನಾಕಾಶ ಬೆಳಗುವಂತೆ! ಆಗ ಅದು ಶುಭ್ರ, ನಿರಭ್ರ; ನಿಚ್ಚಳ ಮತ್ತು ನಿರಾಲಂಕಾರ! ಅದಕಾಗಿಯೇ ಶೋಕ ಮತ್ತು ವೇದನೆಯ ಹಾಡುಗಳು ನಮ್ಮನು ತಾಗಿ, ಕಲಕಿ, ಆವರಿಸುವಷ್ಟು ಸುಖದ ಗೀತಗಳು ತಟ್ಟುವುದಿಲ್ಲ. ಇಂಗ್ಲಿಷ್ ಕವಿ ಪಿ ಬಿ ಶೆಲ್ಲಿಯ ಮಾತಿದು: Our Sweetest Songs are those that give us saddest thought. ಶೋಕ ಸಂದೇಶವನು ಸಾರುವ ಗೀತಗಳೇ ನಮಗೆ ಅತಿ ಮಧುರ, ಹೃದಯಕೆ ಅತಿ ಹತ್ತಿರ! ಒಮ್ಮೆ ಅರ್ಜುನನು ಶ್ರೀಕೃಷ್ಣನನ್ನು ಕೇಳಿದನಂತೆ: ‘ಸಂತಸದಲ್ಲಿದ್ದಾಗ ಇದು ಭ್ರಮೆ ಎನಿಸಬೇಕು; ದುಃಖದಲ್ಲಿದ್ದಾಗ ಸಮಾಧಾನವಾಗಬೇಕು. ಅಂಥದೊಂದು ಸಾಲನ್ನು ಬರೆದು ಕೊಡು’ ಅಂತ. ಆಗ ಗೀತಾಚಾರ್ಯ ಬರೆದನಂತೆ: ಸಮಯ ಕಳೆದು ಹೋಗುತ್ತದೆ!’ ಅಂಥದೊಂದು ಸಂದೇಶವನ್ನು ಕೊಡುವಂಥ ಗೀತೆಯಿದು. ಕೇಳುತಲೇ ಕಳೆದು ಹೋಗಿ ಬಿಡುವಂಥ ಹಾಡಿದು. ಸೃಷ್ಟಿಸಿದ ರವೀಂದ್ರನಾಯಕರಿಗೆ, ಹೃದಯದಿಂದ ಹೃದಯಕೆ ನೇರ ತಲಪಿಸುತ್ತಾ ಸುಶ್ರಾವ್ಯ ಹಾಡು ಕೊಟ್ಟ ಗಣೇಶ ದೇಸಾಯಿ ಮತ್ತವರ ತಂಡಕ್ಕೆ ಧನ್ಯವಾದಗಳು ಮತ್ತು ಅಭಿನಂದನೆಗಳು.

ಡಾ. ಹೆಚ್ ಎನ್ ಮಂಜುರಾಜ್, ಹೊಳೆನರಸೀಪುರ

8 Responses

  1. ಕವಿತೆಯ ವ್ಯಾಖ್ಯಾನ ಸೊಗಸಾಗಿ ಮೂಡಿಬಂದಿದೆ ಮಂಜುಸಾರ್ ಧನ್ಯವಾದಗಳು

  2. ಮಹೇಶ್ವರಿ ಯು says:

    ಕವಿತೆ ಮತ್ತು ವಿಶ್ಲೇಷಣೆ ತುಂಬಚೆನ್ನಾಗಿ ದೆ

  3. ನಯನ ಬಜಕೂಡ್ಲು says:

    ಚಂದದ ವಿಶ್ಲೇಷಣೆ

  4. MANJURAJ H N says:

    ಪ್ರಕಟಿಸಿದ ಸುರಹೊನ್ನೆಗೆ ಧನ್ಯವಾದಗಳು

  5. MANJURAJ H N says:

    ಯು ಟ್ಯೂಬ್‌ ವಾಹಿನಿಯಲಿ ಹಾಡು ಕೇಳಲು:
    https://youtu.be/eQMVh7nZwCU?feature=shared

  6. ಶಂಕರಿ ಶರ್ಮ says:

    ಕವನಗಳ ವಿಶ್ಲೇಷಣಾತ್ಮಕ ವಿವರಣೆ ಚೆನ್ನಾಗಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: