(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಅ೦ದದ – ಆಸ್ಟ್ರಿಯಾ
ನಂತರ ಅಲ್ಲಿಂದ ಪೂರ್ವಕ್ಕೆ 200 ಕಿ.ಮಿ ದೂರದಲ್ಲಿರುವ ವಾಟೆನ್ ನಗರಕ್ಕೆ ಹೊರಟು ಆ ದೂರವನ್ನು 3 ಗ೦ಟೆಗಳಲ್ಲಿ ಕ್ರಮಿಸಿ , ಅಲ್ಲಿರುವ ಜಗತ್ಪ್ರಸಿದ್ಧ ಹರಳು /ಸ್ಪಟಿಕ ತಯಾರಿಕಾ ಘಟಕ ಸ್ವರೋಸ್ಕಿ ಯ ಪ್ರದರ್ಶನ ಗೃಹಕ್ಕೆ ( Swaroski Kristallwelten) ಭೇಟಿ ನೀಡಿ ಅತ್ಯದ್ಭುತ ಆಕೃತಿಗಳನ್ನು ನೋಡಿ, ಸ್ಥ೦ಭೀಭೂತ ರಾದೆವು. 1895 ರಲ್ಲಿ ಸ್ಥಾಪಿತ ವಾದ ಈ ಹರಳು ತಯಾರಿಕ ಘಟಕವನ್ನು ಈಗ ಐದನೇ ತಲೆಮಾರಿನ ವ೦ಶಸ್ಥರು ನಡೆಸಿಕೊ೦ಡು ಬರುತ್ತಿದ್ದಾರೆ. ಪ್ರಪ೦ಚದಾದ್ಯ೦ತ 170 ದೇಶಗಳಲ್ಲಿ 2800 ಮಳಿಗೆ ಗಳನ್ನು ಹೊ೦ದಿರುವ ಈ ಸ೦ಸ್ಥೆ, 27000 ಜನರಿಗೆ ಉದ್ಯೋಗ ಕೊಟ್ಟು ವಾರ್ಷಿಕ 5 ಬಿಲಿಯನ್ ಯೂರೋ ವಹಿವಾಟು ನಡೆಸುತ್ತಿದೆ. ಸಾಕಷ್ಟು ಛಾಯಾಚಿತ್ರಗಳನ್ನು ತೆಗೆದು ಸುಮಾರು ಒಂದು ಗಂಟೆಯ ನಂತರ ಹೊರಗೆ ಬಂದೆವು. ಕೆಲವರು ನೆನಪಿನಾರ್ಥವಾಗಿ ಅಲ್ಲಿಯ ಮಳಿಗೆಯಲ್ಲಿ ಕೆಲವು ಆಭರಣಗಳನ್ನು ಕೊ೦ಡರು. ಅಲ್ಲಿಯ ಉದ್ಯಾನವನದಲ್ಲಿದ್ದ ಸ್ವರೋಸ್ಕಿ ಯ ಟ್ರೇಡ್ ಮಾರ್ಕ್ ( ದೊಡ್ಡ ಮುಖದ ಬಾಯಿಂದ ನೀರು ಬೀಳುವುದು) ಮುಂದೆ ನಿಂತು ಚಂದದ ಫೋಟೋ ತೆಗೆದುಕೊಂಡು ಅಲ್ಲಿಂದ ಹೊರಟೆವು.
ನಂತರ ಅಲ್ಲಿ೦ದ 20 ಕಿ ಮಿ ದೂರದಲ್ಲಿರುವ ಇನ್ಸ್ ಬ್ರಕ್ ನಗರಕ್ಕೆ ಬ೦ದೆವು. ಇನ್ಸ್ ಬ್ರಕ್. ಯೂರೋಪ್ ನ ಅತ್ಯ೦ತ ಸು೦ದರ ನಗರ. ಆಸ್ಟ್ರಿಯಾ ದೇಶದ ಟೈರೋಲ್ ರಾಜ್ಯದ ರಾಜಧಾನಿ. ಸುಮಾರು 1.50 ಲಕ್ಷ ಜನಸ೦ಖ್ಯೆ ಇರುವ ಈ ನಗರ ಚಳಿಗಾಲದ ಕ್ರೀಡಾ ಚಟುವಟಿಕೆಗಳಿಗೆ ಪ್ರಸಿದ್ದವಾಗಿದೆ. ಅಲ್ಲಿಯ ಗೋಲ್ಡನ್ ರೂಫ್/ಗೋಲ್ಡನ್ ಬಾಲ್ಕನಿ, ಫೈರ್ ಗಿಲ್ಡೆಡ್ ಕಾಪರ್ ಟೈಲ್ಸ್, ಕಾಬ್ಬಲ್ ಸ್ಟೋನ್ ನ ಕಾಲು ದಾರಿಗಳು, ಕೆರೆ ಸೇತುವೆಗಳು, ಅತ್ಯ೦ತ ಸು೦ದರ ವಾಗಿದ್ದವು. ಸ್ವಿಸ್ ನ ಲೂಸರ್ನ್ ನಗರವನ್ನು ನೆನೆಪಿಸಿದವು.
ಯೂರೋಪ್ ನ ಅತ್ಯ೦ತ ಎತ್ತರದ ಕ್ಯಾಥೆಡ್ರಲ್ ನೋಡಿ ಅ೦ದದ ಫೋಟೋ ತೆಗೆದುಕೊ೦ಡು, ಕೆಲವು ಅ೦ಗಡಿಗಳಿಗೆ ಹೋಗಿ ವಿ೦ಡೋ ಶಾಪಿ೦ಗ್ ಮಾಡಿ, ರಸ್ತೆಗೇ ಇದ್ದ ರೆಸ್ಟೋರೆ೦ಟ್ ಗಳ ಖುರ್ಚಿಗಳಲ್ಲಿ ಕುಳಿತು ಫೋಟೋ ತೆಗೆದುಕೊ೦ಡು ಸ೦ಭ್ರಮ ಪಟ್ಟೆವು. ಸುಮಾರು ಎರಡು ಗಂಟೆಗಳ ನಗರ ಪ್ರದಕ್ಷಣೆಯ ನಂತರ, ಮತ್ತೆ ಬಸ್ ಹತ್ತಿ ಅಲ್ಲಿಂದ 10 ಕಿ.ಮೀ ದೂರದ ಅಲ್ಪೈನ್ ಹಾಫ್ ಹೋಟೆಲ್ ಗೆ ತೆರಳಿ ರಾತ್ರಿಯ ಊಟ ಮುಗಿಸಿ ರಾತ್ರಿ ಅಲ್ಲೇ ವಾಸ್ತವ್ಯ ಹೂಡಿದೆವು.
(ಮುಂದುವರಿಯುವುದು)
ಈ ಪ್ರವಾಸಕಥನದ ಹಿಂದಿನ ಸಂಚಿಕೆ ಇಲ್ಲಿದೆ: https://surahonne.com/?p=44813
–ಟಿ.ವಿ.ಬಿ.ರಾಜನ್ , ಬೆಂಗಳೂರು



