ಜಪಾನಿನ ಮೃಗಾಲಯದ ಪಂಚ್ ಎಂಬ ವಾನರ ನಾನು
ಬದುಕಲ್ಲಿ ಬರೀ ಹೊಡೆತ ತಿಂದಿರುವುದರಿಂದ ಈ ಹೆಸರು ಇಟ್ಟುಕೊಂಡೆನು
ಹೆತ್ತಮ್ಮ ಯಾಕೋ ಹತ್ತಿರ ಸೇರಿಸದೆ ದೂರ ತಳ್ಳಿದಳು
ಉಳಿದವರು ಅಟ್ಟಿಸಿಕೊಂಡು ಕಚ್ಚಲು ಬಂದರು
ಮೈ ಕೈ ಕೆರೆಯುತ್ತಾ ಹೊರಳಾಡಿ ಚಿನ್ನಾಟವಾಡೋಣವೆಂದರೆ ಯಾರು ಇಲ್ಲ
ಹೇನು ಹುಡುಕಿ ತಲೆ ನೇವರಿಸುವ ಸಂಗಾತಿಯಂತೂ ಜೊತೆಗಿಲ್ಲ
ಸಿಗದ ಅಮ್ಮನ ನೆನಪು ಊಟ ಸೇರದಂತೆ ಮಾಡಿತ್ತು
ಕಾಡುವ ಒಂಟಿತನ ಉತ್ಸಾಹವನ್ನು ಬಿಡದೆ ಕಸಿದಿತ್ತು
ಜೀವ ತಳೆದು ಬಂದ ಮೇಲೆ ಬದುಕಲೇ ಬೇಕಲ್ಲ
ಬೇರೆಯವರ ಸರಿಕರ ನಂಬಿ ಕೂರುವುದು ಸಲ್ಲ
ನಮ್ಮ ಬದುಕೇ ನಮಗೆ ಸರ್ವಸ್ವ
ನಮ್ಮ ಖುಷಿಯೇ ಎಮಗೆ ಮುಖ್ಯ
ಆಟಿಕೆ ಅಮ್ಮನ ಹಿಡಿದು ಆಡತೊಡಗಿದೆ
ಎನ್ನ ನೋವ ಅದರ ಜೊತೆಗೆ ಹಂಚಿಕೊಂಡೆ
ದೂರ ತಳ್ಳದೆ ಅಮ್ಮನ ಬೊಂಬೆ ಎನ್ನ ದುಮ್ಮಾನಗಳಿಗೆ ಕಿವಿಯಾಯಿತು
ಕಿರಚದೆ ಪರಚದೆ ನಾ ಹೋದಲ್ಲಿಗೆ ಜೋಡಿಯಾಯಿತು
ಹೆಪ್ಪುಗಟ್ಟಿದ ದುಃಖ ಕರಗತೊಡಗಿತು
ಭಾವನೆಗಳ ಮಹಾಪೂರವೇ ಹರಿದುಬಂತು
ನನ್ನ ಬದುಕ ನಾ ಮತ್ತೆ ಮರಳಿಪಡೆದೆ
ನಿರ್ಜೀವ ಮೊಗದಲ್ಲೂ ಬತ್ತದ ನಗುವ ಕಂಡೆ
-ಶರಣಬಸವೇಶ ಕೆ. ಎಂ

