ದಶಮ ಸ್ಕಂದ – ಪೂರ್ವಾರ್ಧ – ಅಧ್ಯಾಯ – 6
ಅಕ್ರೂರ
ಅಕ್ರೂರ ಯಾದವ ಪ್ರಮುಖ, ಕಂಸ ಮಿತ್ರ
ನಂದನವ್ರಜದಿ ನೆಲಸಿರ್ಪ ಕೃಷ್ಣ ಬಲರಾಮರ
ಮಧುರಾನಗರಿಗೆ ಕರೆತರ್ಪ ಹೊಣೆ ಹೊತ್ತು
ಕಂಸನಾಣತಿಯಂತೆ ರಥವೇರಿ ವ್ರಜಾಭಿಮುಖವಾಗಿ ತೆರೆಳೆ
ಅಕ್ರೂರನ ಮನದಲಿ ಕೃಷ್ಣದರ್ಶನ ಭಾಗ್ಯದ ಸುಯೋಗದ
ಕನಸೇ ನೆಲೆಯಾಗಿರೆ, ಸೂರ್ಯಾಸ್ತ ಸಮಯದಿ
ಗೋಕುಲ ದ್ವಾರ ತಲುಪಿ ಅಲ್ಲಿಯ ಭೂಪ್ರದೇಶದಿ
ಶ್ರೀಕೃಷ್ಣನ ಹೆಜ್ಜೆಯ ಗುರುತು
ಪದ್ಮರೇಖೆ, ಧ್ವಜರೇಖೆ, ಅಂಕುಶರೇಖೆ ಗೋಚರವಾಗೆ
ಅಗಾಧ ಭಕ್ತಿ ಭಾವದಿಂ ರಥದಿಂ ಧುಮ್ಮುಕ್ಕಿ
ಪವಿತ್ರ ತಾಣದಲೆಲ್ಲ ಭಕ್ತಿರಸಪ್ರವಾಹವ ಹರಿಸಿ
ಅಲ್ಲಿರ್ಪ ಗೋಪಾಲಕರು ತೋರ್ದೆಡೆಯಲಿ
ಹಸುಗಳ ಮಂದೆಯಲಿ ಸಂಚರಿಸುತಿರ್ಪ
ನರರೂಪದ ದೇವಕುಮಾರರ ಕಂಡು
ಆನಂದೋದ್ರೇಕದಿ ಮೂಕನಾಗೆ
ಕೃಷ್ಣ ಅಕ್ರೂರನ ಆಲಂಗಿಸಿ
ಪರಮ ವಿಶ್ವಾಸದಿ ಮನೆಗೆ ಕರೆತಂದು ಉಪಚರಿಸಿ
ಆಯಾಸ ಪರಿಹರಿಸಿದ
ಕಂಸನು ಬಿಲ್ಲು ಹಬ್ಬದ ನೆಪದಿ
ಬಲರಾಮ ಕೃಷ್ಣರನು ಮಧುರೆಗೆ ಆಹ್ವಾನಿಸಿ
ಅವರ ಸಂಹರಿಸುವಿಚ್ಛೆಯ ಅಕ್ರೂರ ತಿಳಿಸೆ
ಕೃಷ್ಣ ನಸುನಕ್ಕು ನಂದಗೋಪನಿಗೆ
ಕಂಸನಾಹ್ವಾನದಂತೆ ಮಧುರಾನಗರಿಗೆ
ಪ್ರಯಾಣಿಸುವ ವಿಷಯಮಾತ್ರವನ್ನರುಹಿದನು
ಗೋಪನಾರಿಯರೆಲ್ಲ ಮಧುರೆಗೆ ಹೊರಟ ಕೃಷ್ಣನ
ಅಗಲಿಕೆಯ ತಾಳಲಾರದೆ ಅವನ ತಡೆಯಲೆತ್ನಿಸೆ
ಕೃಷ್ಣ ಎಲ್ಲಿದ್ದರೂ ತಾನು ಅವರ್ಯಾರನ್ನೂ
ಮರೆಯುವುದಿಲ್ಲವೆಂದು ಸಾಂತ್ವನಿಸಿದನು
ಪ್ರಯಾಣ ಮಧ್ಯದಿ ಯಮುನಾ ತೀರಕೆ
ಬಂದಿಳಿದು ಅಕ್ರೂರ
ಬಲರಾಮ ಕೃಷ್ಣರನು ರಥದಲ್ಲೇ ಕುಳ್ಳಿರಿಸಿ
ನದಿಗಿಳಿದು ಯಥಾವಿಧಿ ಸ್ನಾನ ಮಾಡಿ
ನದಿಯಲಿ ಮುಳುಗೆದ್ದು ನೋಡಿದರೆ
ಜಲಮಧ್ಯದಿ ಬಲರಾಮ ಕೃಷ್ಣರು
ಸಹಸ್ರ ಫಣಿಗಳಿಂದ ಕೂಡಿದ ಆದಿಶೇಷ
ಶಂಖ ಚಕ್ರ ಗಧಾ ಪದ್ಮಧಾರಿ
ಕಿರೀಟ ಕುಂಡಲದಿ ಅಲಂಕೃತ
ಪೀತಾಂಬರಧಾರಿಗಳಾಗಿ ಕಾಣಿಸುವ
ಪರಮಾದ್ಭುತವ ಕಂಡನು ಅಕ್ರೂರ
ಸನಕ ಸನಂದಾದಿ ಮಹರ್ಷಿಗಳೂ
ತುಂಬುರು ನಾರದಾದಿ ಗಾಯಕರೂ
ಬ್ರಹ್ಮ ರುದ್ರಾದಿ ದೇವತೆಗಳೂ
ಪ್ರಹ್ಲಾದ ಅಂಬರೀಶಾದಿ ಭಾಗವತ್ತೋತ್ತಮರೂ
ಸ್ವಾಮಿಯ ಸ್ತೋತ್ರ ಮಾಡುತಿರೆ
ಅಕ್ರೂರ ಭಕ್ತಿ ಪರವಶನಾಗಿ
ಮಾಯಾ ಮಾನುಷರೂಪದ ಭಗವಂತನ
ಸ್ತುತಿ ಮಾಡಿ ಅಗಾಧ ಭಕ್ತಿಪೂರಿತನಾಗಿ
ನದಿಯಿಂ ಹೊರಬಂದು ರಥದಲ್ಲಿರ್ಪ
ಕೃಷ್ಣನಿಗೆ ನಮಿಸಿದನು
ಅಕ್ರೂರ
ಸ್ನಾನ ಮಾಡುವಾಗ ತಾ ಕಂಡ
ಭಗವಂತನ ವಿಶ್ವರೂಪದ ಗುಂಗಿನಲೇ
ರಥವ ನಡೆಸುತ ಸಂಧ್ಯಾ ಕಾಲಕೆ
ಮಥುರೆಯ ತಲುಪಿದನು
(ಮುಂದುವರಿಯುವುದು)
ಕಾವ್ಯ ಭಾಗವತ ಸರಣಿಯ ಹಿಂದಿನ ಪುಟ ಇಲ್ಲಿದೆ : https://surahonne.com/?p=44810

-ಎಂ. ಆರ್. ಆನಂದ, ಮೈಸೂರು

