ಕೌಸಲ್ಯಾ ಒಂದೇ ಸಮನೆ ಶಥಪಥ ಹಾಕುತ್ತಾ ಗೊಣಗಿಕೊಳ್ಳುತ್ತಿದ್ದಳು.
ಈ ಹುಡುಗಿಗೆ ತಾನಾಗೇ ಒಂದು ಫೋನ್ ಮಾಡಕ್ಕಂತೂ ಆಗಲ್ಲ, ಕೊನೇಪಕ್ಷ ನಾನು ಮಾಡಿದರೆ ಎತ್ತುಕೊಳ್ಳೊಕ್ಕೂ ಕಷ್ಟನಾ, ಇಲ್ಲಿ ಮನೆಯಲ್ಲಿ ಕಾಯುವವರ ಕಷ್ಟ ಗೊತ್ತೇ ಆಗುವುದಿಲ್ಲ ಛೇ. . .
ಅವಳ ಗೊಣಗಾಟ, ಚಡಪಡಿಕೆ ನಿಲ್ಲದೇ ಹೆಚ್ಚೇ ಆಗುತ್ತಿರುವುದ ಕಂಡು ಮನೆಯಲ್ಲೇ ಇದ್ದ ಕಾರ್ತೀಕ್ ರೇಗಿದ –
ಯಾಕೆ ಅಷ್ಟು ಒದ್ದಾಡುತ್ತೀಯಾ? ನಿನ್ನ ತಂಗಿ ಹೋಗಿರುವುದು ತುಂಬಾ ಬಿಜ಼ಿ ಇರುವ ಡಾಕ್ಟರ್ ಹತ್ತಿರ. ಅಲ್ಲಿ ಎಷ್ಟು ಹೊತ್ತಾಗುತ್ತೋ ಏನೋ, ಯಾವ ಪರಿಸ್ಥಿತಿಯಲ್ಲಿ ಇರುತ್ತಾಳೋ, ಹೊರಗೆ ಬಂದ ನಂತರ ಫೋನ್ ಮಾಡುತ್ತಾಳೆ ಇರು . .
ತಂಗಿಯ ಮೇಲಿನ ಕೋಪ, ಆತಂಕ ಗಂಡನೆಡೆಗೆ ತಿರುಗಿಸಿದಳು –
ಅಲ್ಲಾರೀ, ಡಾಕ್ಟರ್ ಅಪಾಯಿಂಟಮೆಂಟ್ ಇದ್ದದ್ದು ೧೦.೩೦ ಗಂಟೆಗೆ. ಈಗಾಗಲೇ ೧೨.೪೫ ಆಯಿತು, ಇನ್ನೂ ಒಂದು ಫೋನ್ ಮಾಡಲಿಲ್ಲಾ ಅಂದ್ರೆ ಏನು?
ಸಹನೆ ಇಟ್ಟುಕೋ ಕೌಸಲ್ಯಾ, ಡಾಕ್ಟರ್ ಏನು ಹೇಳಿದರೋ, ಇವಳ ಮನಸ್ಥಿತಿ ಹೇಗಿದೆಯೋ, ಹೇಗೂ ಫೋನ್ ಮಾಡಿದ್ದೀಯಲ್ಲಾ, ಮಿಸ್ಡ್ ಕಾಲ್ ನೋಡಿ ಮಾಡ್ತಾಳೆ ಇರು.
ಅಷ್ಟರಲ್ಲಿ ಮನೆ ಮುಂದೆ ಕಾರು ನಿಂತ ಶಬ್ಧವಾಯಿತು. ಕಾರಿನಿಂದಿಳಿದ ಕೌಸಲ್ಯಾಳ ತಂಗಿ ಕಸ್ತೂರಿ, ಮತ್ತವಳ ಗಂಡ ಪ್ರತಾಪ್ ಒಳ ಬಂದರು. ಕಸ್ತೂರಿಯ ಮುಖ ಗೊಂದಲಗಳ ಗೂಡಿನಂತಾಗಿದ್ದರೆ, ಪ್ರತಾಪ್ ಕೊಂಚ ನಿರಾಶನಾದಂತೆ ಕಾಣುತಿದ್ದ.
ರೇಗಲು ಹೊರಟ ಕೌಸಲ್ಯಾ, ಅವರಿಬ್ಬರ ಮುಖ ನೋಡಿ ಪೆಚ್ಚಾಗಿ ಒಳಗೆ ಹೋಗಿ ಮಾಡಿಟ್ಟಿದ್ದ ಮಾವಿನ ಹಣ್ಣಿನ ಮಿಲ್ಕ್ ಶೇಕನ್ನು ನಾಲ್ಕು ಗ್ಲಾಸುಗಳಲ್ಲಿ ಬಗ್ಗಿಸಿ ತಂದು ಎಲ್ಲರಿಗೂ ನೀಡಿ ಹೇಳಿದಳು –
ಸುಸ್ತಾಗಿದ್ದೀರಿ ಅನ್ನಿಸುತ್ತೆ, ಕುಡಿದು ಸುಧಾರಿಸಿಕೊಳ್ಳಿ. ನಂತರ ನಿಧಾನವಾಗಿ ಮಾತನಾಡೋಣ.
ತಂಗಿಯ ಮುಖ ಕಂಡ ತಕ್ಷಣ ಬಾಂಬನ್ನೇ ಹಾಕುತ್ತಾಳೇನೋ ಎಂದುಕೊಂಡಿದ್ದ ಕಾರ್ತೀಕನಿಗೆ ಹೆಂಡತಿಯ ಈ ವರ್ತನೆ ಆಶ್ಚರ್ಯ ಹುಟ್ಟಿಸಿದರೂ ಸಮಯ ಸಂದರ್ಭಕ್ಕೆ ತಕ್ಕಂತೆ ಸಹನೆ, ಜಾಣ್ಮೆಯ ತೋರುವ ಇವಳ ಈ ಗುಣವನ್ನೇ ಅಲ್ಲವೆ ನಾನು ಅಷ್ಟೊಂದು ಇಷ್ಟ ಪಡುವುದು ಎಂದುಕೊಂಡು ಸುಮ್ಮನೆ ಹೆಂಡತಿ ನೀಡಿದ ಗ್ಲಾಸನ್ನು ಕೈಗೆತ್ತಿಕೊಂಡ.
ಒಂದೂ ಮಾತನಾಡದೆ ಗ್ಲಾಸನ್ನು ಖಾಲಿ ಮಾಡಿದ ನಂತರ ಎರಡು ನಿಮಿಷ ಸುಮ್ಮನೆ ಕುಳಿತ ಕಸ್ತೂರಿ ಮನಸ್ಸನ್ನು ತಹಬದಿಗೆ ತಂದುಕೊಂಡು ಹೇಳಿದಳು.
ಥ್ಯಾಂಕ್ಸ್ ಅಕ್ಕಾ, ನನಗೇನಾದರೂ ನಿಜಕ್ಕೂ ತಣ್ಣಗಿನದು ಬೇಕಿತ್ತು. ಈಗ ಸೋರಿ ಹೋಗಿದ್ದ ಶಕ್ತಿ ಬಂದಂತಾಗಿದೆ. ಸಾರಿ, ನಿನಗೆ ಫೋನ್ ಮಾಡಲಿಲ್ಲ, ನಿನ್ನ ಫೋನ್ ರಿಸೀವ್ ಸಹ ಮಾಡಲಿಲ್ಲ. ಅದಕ್ಕೆ ಎರಡು ಕಾರಣಗಳು. ಒಂದು, ನಾನೇ ಗೊಂದಲದಲ್ಲಿದ್ದೆ, ಎರಡು, ನಿನ್ನ ಹತ್ತಿರ ತುಂಬ ತುಂಬಾ ಮಾತನಾಡಬೇಕಿತ್ತು. ಅದು ಫೋನಿನಲ್ಲಿ ಸಾಧ್ಯವಿರಲಿಲ್ಲ. ಅದಕ್ಕೆ ಸೀದಾ ಇಲ್ಲಿಗೇ ಬಂದೆವು.
ಪ್ರತಾಪ್ ಹೇಳಿದ – ಒಂದು ನಿಮಿಷ ಫೋಲ್ಡ್ ಆನ್ ಅಂಡ್ ಸ್ಸಾರಿ ಫಾರ್ ಡಿಸ್ಟರಬೆನ್ಸ್, ನೀವಿಬ್ಬರೂ ನಿಧಾನಕ್ಕೆ ಮಾತನಾಡಿ ತೀರ್ಮಾನಕ್ಕೆ ಬನ್ನಿ, ನಿಮ್ಮಗಳ ತೀರ್ಮಾನ ಏನಿದ್ದರೂ ನನಗೆ ಓಕೆ, ನನಗೆ ಕಸ್ತೂರಿಯ ಸಂತೋಷ ಮತ್ತು ನೆಮ್ಮದಿಯೇ ಮುಖ್ಯ. ನೀವುಗಳು ಹೇಗೆ ಹೇಳಿದರೆ ಹಾಗೆ. ಈಗ ನಾನು ಸ್ವಲ್ಪ ಹೊರಗೆ ಹೋಗುತ್ತೇನೆ, ನಿಮ್ಮಗಳಿಗೆ ಮುಕ್ತವಾಗಿ ಮಾತನಾಡಿ ತೀರ್ಮಾನಿಸಲು ಅನುವು ಮಾಡಿಕೊಟ್ಟು – ಎನ್ನುತ್ತಾ ಕಾರ್ತೀಕ್ ಕಡೆ ತಿರುಗಿ – ಕಾರ್ತೀಕ್ ನೀವೂ ಬರುತ್ತೇರಾ –ಎನ್ನಲು, ಅವರೂ – ನಡೀ ಹೋಗಿ ಬರೋಣ – ಎಂದರು.
ನೀವಿಬ್ಬರೂ ಅಡುಗೆಯ ಬಗ್ಗೆ ಚಿಂತಿಸಬೇಡಿ. ನಿಮ್ಮಗಳ ಮಾತು ಮುಗಿದು ತೀರ್ಮಾನವಾದ ಕೂಡಲೇ ನಮಗೆ ಕರೆ ಮಾಡಿ, ನಾವು ನಿಮಗೂ ಸೇರಿದಂತೆ ಊಟದ ಏರ್ಪಾಟು ಮಾಡುತ್ತೇವೆ – ಎಂದು ಹೇಳಿ ಹೊರನಡೆದರು ಪ್ರತಾಪ್ ಮತ್ತು ಕಾರ್ತೀಕ್.
ಬಾ ಅಕ್ಕ, ಕೂತ್ಕೋ, ಎಲ್ಲಾ ಹೇಳುತ್ತೇನೆ – ಎನ್ನುತ್ತಾ ಕಸ್ತೂರಿ ಹೇಳ ತೊಡಗಿದಳು. ಕೌಸಲ್ಯಾ ಮೌನ ವಹಿಸಿ ಕೇಳತೊಡಗಿದಳು.
ಮೊದಲಿಗೆ ಡಾಕ್ಟರ್ ತಪಾಸಣೆ ನಡೆಸಿ ರಿಪೋರ್ಟುಗಳನ್ನೆಲ್ಲಾ ನೋಡಿ – “ನಿಮ್ಮದು ನೈಸರ್ಗಿಕವಾಗಿಯೇ ಬಾಣಂತಿಯ ದೇಹಸ್ಥಿತಿಯಂತಿದೆ. ಅಂದರೆ ಮನೆಯಲ್ಲಿ ಹಿರಿಯರು ಹೇಳುತ್ತಿರುವುದನ್ನು ಕೇಳಿರಬಹುದು, ಮಗುವಿಗೆ ಹಾಲೂಣಿಸುವ ತನಕ ಮತ್ತೆ ಬಸಿರಾಗುವುದಿಲ್ಲ, ಅದು ನ್ಯಾಚುರಲ್ ಫ್ಯಾಮಿಲಿ ಪ್ಲಾನಿಂಗ್ ಅಂತ, ಅದು ವೈಜ್ಞಾನಿಕವಾಗಿಯೂ ಹೌದು. ಮಗುವಿಗೆ ಹಾಲೂಣಿಸುವಾಗ ಉತ್ಪತ್ತಿಯಾಗುವ ಹಾರ್ಮೋನುಗಳಿಂದಾಗಿ ನೂರಕ್ಕೆ ತ್ತೊಂಭತ್ತು ಭಾಗ ಬಸಿರಾಗುವುದಿಲ್ಲ. ಯಾಕೆಂದು ಹೇಳಲು ಬರುವುದಿಲ್ಲ. ನಿಮ್ಮದು ಅಂತಹ ದೇಹಸ್ಥಿತಿ. ಅದೊಂದು ಬಿಟ್ಟು ನಿಮ್ಮಿಬ್ಬರಲ್ಲೂ ಬೇರೆ ಯಾವುದೇ ತೊಂದರೆಯಿಲ್ಲ, ನಿಮ್ಮಲ್ಲಿ ಹಾಲು ಉತ್ಪತ್ತಿಯಾಗುತ್ತಿಲ್ಲ, ಆದರೆ ಅಂತಹ ದೇಹಸ್ಥಿತಿ ಇದೆ” – ಎಂದರು, ನೋಡೆ ಅಕ್ಕ, ನನ್ನ ಹಣೆಬರಹ, ಈಗ ನಾನೇನು ಮಾಡಲೀ ಅಂತನಾ ತೋಚುತ್ತಿಲ್ಲ.
ಮೈಯೆಲ್ಲಾ ಕಿವಿಯಾಗಿ ಆಲಿಸುತ್ತಿದ್ದ ಕೌಸಲ್ಯಾ ಕೇಳಿದಳು – ಈಗ ಅದಕ್ಕೆ ಪರಿಹಾರ ಏನಂತೆ?
ದೇಹಸ್ಥಿತಿ ತನಗೆ ತಾನೇ ಸರಿಹೋಗುವವರೆಗೂ ಕಾಯಬೇಕು ಅಷ್ಟೆ, ಇದು ಯಾವಗ ಬೇಕಾದರೂ ಆಗಬಹುದು – ಎಂದರು.
ಇದೊಳ್ಳೇ ರಾಮಾಯಣವಾಯಿತಲ್ಲಾ.
ಇಲ್ಲ ಅಕ್ಕ, ಅದಕ್ಕೆ ನಾನೊಂದು ತೀರ್ಮಾನಕ್ಕೆ ಬಂದಿದ್ದೇನೆ. ನಾನು ಮಕ್ಕಳ ಕೇಂದ್ರದಿಂದ ಒಂದು ಚಿಕ್ಕ ಹೆಣ್ಣು ಮಗುವನ್ನು ದತ್ತು ಪಡೆಯುತ್ತೇನೆ. ಅದನ್ನು ಸಾಕಿ ಸಲಹಿ ಮಾನಸಿಕವಾಗಿ ಅದರೊಂದಿಗೆ ತಾಯಿಯಾಗಿ ಕಾಲಕಳೆಯುವುದರಿಂದ, ನೈಸರ್ಗಿಕವಾಗಿ ಮಗುವಿಗೆ ಒಂದೂವರೆ, ಎರಡು ವರ್ಷವಾಗುವ ವೇಳೆಗೆ, ಅಂದರೆ ಮಕ್ಕಳು ಹಾಲುಬಿಡುವ ಸಮಯಕ್ಕೆ ನನ್ನಲ್ಲೂ ಬದಲಾವಣೆಯಾದರೂ ಆಗಬಹುದು ಎಂಬ ಡಾಕ್ಟರ್ ಅಭಿಪ್ರಾಯವನ್ನು ನಾನು ಪ್ರಯತ್ನಿಸಲು ನಿರ್ಧರಿಸಿದ್ದೇನೆ.
ಅಲ್ಲಾ, ಕಸ್ತೂರಿ, ಇದರಿಂದ ಮತ್ತೆ ಹಲವಾರು ತೊಂದರೆಗಳು ತಲೆದೋರಬಹುದು.
ಇಲ್ಲಾ ಅಕ್ಕಾ, ನಾನು ಎಲ್ಲಾ ಸಾಧಕ ಬಾಧಕಗಳನ್ನು ಯೋಚಿಸಿದ್ದೀನಿ. ಈ ಹಿಂದೆ ನಾವು ಭೇಟಿ ನೀಡಿದ ಎಲ್ಲ ವೈದ್ಯರೂ, ʼನಿಮ್ಮಿಬ್ಬರಲ್ಲೂ ಯಾವುದೇ ದೋಷಗಳಿಲ್ಲ, ಯಾವಾಗ ಬೇಕಾದರೂ ಮಕ್ಕಳಾಗಬಹುದುʼ ಎಂದಿದ್ದರಿಂದ ಈ ಆರು ವರ್ಷಗಳು ಕಾದಿದ್ದಾಯಿತು. ನಿನಗೇ ತಿಳಿದಿರುವಂತೆ ವಿದೇಶದಲ್ಲೆಲ್ಲಾ ವ್ಯಾಸಂಗ ಮಾಡಿ ಮುಂಬಯಿಯಲ್ಲಿ ಖ್ಯಾತರಾಗಿರುವ ಈ ವೈದ್ಯರು ಬೆಂಗಳೂರಿಗೆ ಬರುತ್ತಾರೆಂದ ತಕ್ಷಣ ಮತ್ತೊಮ್ಮೆ ಹೋಗುವ ಆಸೆಯಾಯಿತು. ಇದು ಅವರ ತಪಾಸಣೆಯ ಫಲಿತಾಂಶ. ತೊಂದರೆ ಏನು ಅಂತ ತಿಳಿದ ಮೇಲೆ ಅದಕ್ಕೆ ಪರಿಹಾರ ಏನೇ ಇದ್ದರೂ ತೊಂದರೆ ನಿವಾರಣೆಯಾಗಬೇಕಿದ್ದರೆ ಮಾಡಲೇ ಬೇಕು ಅಲ್ಲವಾ?
ಅದು ಸರಿ, ಆದರೂ ಮುಂದೆ . . .
ಅಕ್ಕಾ ಈವತ್ತು ನಿನ್ನಲ್ಲಿ ನನ್ನ ಮನದ ತೊಳಲಾಟವನ್ನೆಲ್ಲಾ ಹೇಳಿಕೊಂಡು ಬಿಡುತ್ತೇನೆ. ನನಗಿನ್ನು ಒಳಗೊಳಗೇ ಸಹಿಸಲು ಆಗುತ್ತಿಲ್ಲ.
ಆಗಲಿ, ಹೇಳು ಕಸ್ತೂರಿ, ಏನೂ ಮನದಲ್ಲಿ ಉಳಿಸಿಕೊಂಡು ಕೊರಗಬೇಡ.
ನಿನಗಿಂತ ಎರಡೇ ವರ್ಷ ಕಿರಿಯಳಾದ ನಾನು ನಿನಗೇ ತಿಳಿದಂತೆ ನಿನ್ನ ಮದುವೆಯ ಸಮಯದಲ್ಲಿ ಆಗ ತಾನೇ ಡಿಗ್ರಿ ಪರೀಕ್ಷೆಗಳನ್ನು ಮುಗಿಸಿ ಮನೆಯಲ್ಲಿ ಇದ್ದೆ. ಮದುವೆಯಾದ ಒಂದೂವರೆ ವರ್ಷಕ್ಕೆಲ್ಲಾ ನೀನು ಬಾಣಂತನಕ್ಕೆ ಬಂದಿದ್ದೆ. ನಿನ್ನ ಮಗಳು ಹುಟ್ಟಿದಾಗ, ಆ ಮುದ್ದು ಮಗು, ಅದರ ಆಟಪಾಠಗಳೆಲ್ಲವನ್ನು ನೋಡುತ್ತಿದ್ದಾಗ ನನಗೆ ಎಷ್ಟು ಮಕ್ಕಳು ಅಂದರೆ ಇಷ್ಟವಾಗುತಿತ್ತು ಅಂದರೆ, ಆಗಲೇ ನಾನು ತೀರ್ಮಾನಿಸಿಬಿಟ್ಟಿದ್ದೆ, ನಾನು ಮದುವೆಯಾದ ತಕ್ಷಣ ಗರ್ಭಿಣಿಯಾಗಿ ಮಗುವನ್ನು ಪಡೆಯಬೇಕು ಎಂದು.
ಕಸ್ತೂರಿ ಮುಂದುವರೆಸಿದಳು. ಕೌಸಲ್ಯ ಅವಳ ಭಾವನೆಗಳ ಓಘಕ್ಕೆ ತಡೆಯೊಡ್ಡದೆ ಸುಮ್ಮನೆ ಕೇಳುತ್ತಿದ್ದಳು.
ವಿಧಿಯಾಟ ಬೇರೆಯೇ ಇತ್ತು. ನನ್ನ ಮದುವೆಯಾಯಿತು. ನಿನಗೆ ಎರಡನೆಯ ಮಗುವಾಯಿತು. ಇಬ್ಬರು ತಮ್ಮಂದಿರುಗಳಿಗೂ ಮದುವೆಯಾಗಿ ಮಕ್ಕಳುಗಳು ಆದವು. ಆದರೆ ನನಗೆ ಆಗಲೇ ಇಲ್ಲ. ಬೇರೆ ಬೇರೆ ಡಾಕ್ಟರುಗಳಲ್ಲಿ ತೋರಿಸಿ ಅವರುಗಳು ಹೇಳಿದ ಎಲ್ಲ ರೀತಿಯ ತಪಾಸಣೆಗಳನ್ನು ಮಾಡಿಸಿದಾಗ ಸಿಗುತ್ತಿದ್ದ ಫಲಿತಾಂಶ ಒಂದೇ, – ನಿಮ್ಮಬ್ಬರಲ್ಲಿ ಏನೂ ದೋಷವಿಲ್ಲ, ಯಾವಾಗಬೇಕಾದರೂ ಮಕ್ಕಳಾಗಬಹುದು.
ಅಮ್ಮ, ಅತ್ತೆ ಹೇಳಿದ ಪೂಜೆ, ಪುನಸ್ಕಾರಗಳು, ವ್ರತಗಳೂ ಆದವು, ನನ್ನ ಆಸೆ ಮಾತ್ರ ಈಡೇರಲೇ ಇಲ್ಲ. ಪ್ರತಾಪ್ ಯಾವಾಗಲೂ ಹೇಳುತ್ತಿದ್ದರು, ನಮ್ಮವರಲ್ಲೇ ಯಾರದಾದರೂ ಮಗುವನ್ನು ದತ್ತು ಪಡೆಯೋಣ. ಆದ್ರೆ ಅಕ್ಕ, ಯಾಕೋ ನನ್ನ ಮನಸ್ಸು ಅದಕ್ಕೆ ಒಪ್ಪುತ್ತಲೇ ಇರಲಿಲ್ಲ. ನಿಮ್ಮಗಳ ಮಕ್ಕಳನ್ನು ಮುದ್ದಿಸುವಾಗ, ಪ್ರೀತಿಸುವಾಗ ಎಷ್ಟೇ ಸುಖ ಸಂತೋಷಗಳು ಸಿಕ್ಕರೂ, ಕೊನೆಯಲ್ಲಿ ಮನದೊಳಗೆ ʼಏನೆಂದರೂ ಇದು ನನ್ನದಲ್ಲʼ ಎಂಬ ನಿರಾಶೆ, ಅಸೂಯೆಯ ಭಾವವೇ ಮೂಡುತಿತ್ತು. ನನಗೆ ನನ್ನದೇ ಮಗು ಬೇಕು ಅಕ್ಕ, ಬೇಕೇ ಬೇಕು.
ಕೌಸಲ್ಯಾ ಚಿಂತಿತಳಾಗಿ ಹೇಳಿದಳು – ಮತ್ತೆ ಈಗ ಅನಾಥ ಮಗುವನ್ನು ದತ್ತು ಪಡೆಯುತ್ತೀನಿ ಅಂತೀಯಲ್ಲಾ, ನಂತರ ನಿನಗೆ ಮಕ್ಕಳಾದರೆ?
ಹೌದು ಅಕ್ಕ, ಅದನ್ನು ನಾನು ಯೋಚಿಸಿಯೇ, ಯೋಚಿಸುವುದೇನು ಬಂತು, ಅದಕ್ಕೋಸ್ಕರವೇ ಮಗುವನ್ನು ದತ್ತು ಪಡೆಯುತ್ತಿರುವುದು, ಹೆಣ್ಣು ಮಗುವನ್ನು ದತ್ತು ಪಡೆಯುತ್ತಿರುವುದು. ಅದಕ್ಕೆ ಅನ್ಯಾಯವನ್ನಂತೂ ಮಾಡುವುದಿಲ್ಲ. ನನ್ನ ಕೈಲಾದ ಮಟ್ಟಿಗೂ ಪ್ರೀತಿ ವಿಶ್ವಾಸದಿಂದ ಬೆಳೆಸುತ್ತೇನೆ. ಸಮಾಜದಲ್ಲಿ ಒಂದೊಳ್ಳೆಯ ಸ್ಥಾನ ಪಡೆಯುವಂತೆ ಮಾಡುತ್ತೇನೆ. ವಿದ್ಯಾಭ್ಯಾಸ ಕೊಡಿಸುತ್ತೇನೆ, ಆಸ್ತಿಯಲ್ಲೂ ಪಾಲು ನೀಡುತ್ತೇನೆ, ಒಂದೊಳ್ಳೆಯ ಹುಡುಗನೊಂದಿಗೆ ಮದುವೆಯಾಗಿ ಚಂದದ ಬಾಳು ಬಾಳುವಂತೆ ನೋಡಿಕೊಳ್ಳುತ್ತೇನೆ. ಅನಾಥವಾಗಿ ಬೆಳೆಯಬೇಕಿದ್ದ ಮಗುವಿಗೆ ಇಷ್ಟನ್ನು ಖಂಡಿತಾ ನೀಡುತ್ತೇನೆ. ನನಗೆ ಮಗುವಾದರೆ ನಂತರದ ದಿನಗಳಲ್ಲಿ ನನ್ನ ಸಂಸಾರ ನನಗೆ.
ತುಂಬಾ ಕಷ್ಟವಾಗುತ್ತೆ ಕಸ್ತೂರಿ.
ಗೊತ್ತು ಅಕ್ಕ, ಕಷ್ಟಪಡಲು ನಾನು ತಯಾರಿದ್ದೀನಿ. ನನಗೆ ನನ್ನದೇ ಮಗು ಬೇಕೇ ಬೇಕು. ದತ್ತು ಪಡೆದ ಮಗುವಿಗೆ ಹೆತ್ತ ತಾಯಿಯಷ್ಟು ಪ್ರೀತಿ ನೀಡದೇ ಹೋದರೂ ಇಷ್ಟಂತೂ ಮಾಡಿಯೇ ಮಾಡುತ್ತೀನಿ ಎಂದು ಮನಸ್ಸನ್ನು ಸಜ್ಜುಗೊಳಿಸಿಕೊಂಡಿದ್ದೇನೆ. ಈ ವಿಚಾರಗಳನ್ನು ನಿನ್ನೊಬ್ಬಳನ್ನು ಬಿಟ್ಟು ಯಾರಲ್ಲಿಯೂ ಹಂಚಿಕೊಳ್ಳಲಾರೆ, ನಿನ್ನ ಸಹಕಾರ, ನೈತಿಕ ಬೆಂಬಲ ಬೇಕು ಅಕ್ಕಾ.
ಕೌಸಲ್ಯಾ ಯೋಚಿಸಿದಳು. ʼಅನಾಥವಾಗಿ ಬವಣೆ ಪಡೆಯಬೇಕಿದ್ದ ಹೆಣ್ಣು ಮಗುವೊಂದಕ್ಕೆ ಇಷ್ಟು ಭದ್ರತೆ ಸಿಕ್ಕರೂ, ಅದೂ ಒಂದು ರೀತಿಯಲ್ಲಿ ಒಳ್ಳೆಯದೇ ಆಯಿತು. ಚಿಕ್ಕ ವಯಸ್ಸಿನಿಂದ ನೋಡಿರುವ ಕಸ್ತೂರಿಯ ಮನೋಧರ್ಮ ಅವಳು ಒಂದು ಕಟ್ಟುಪಾಡನ್ನು ಹಾಕಿಕೊಂಡರೆ ಅದಕ್ಕೆ ಬದ್ಧಳಾಗಿರುತ್ತಾಳೆ. ಅಕಸ್ಮಾತ್ ಆಚೀಚೆ ಆದರೂ ಎಚ್ಚರಿಸಲು ನಾನು ಇರುತ್ತೇನೆʼ ಎಂದುಕೊಂಡು ಒಪ್ಪಿಗೆಯ ಸಂಕೇತವಾಗಿ ಗೋಣು ಆಡಿಸಿದಳು.
ಮುಂದಿನದೆಲ್ಲಾ ಸರಸರಾಂತ ನಡೆಯಿತು. ಮಂಗಳೂರಿನ ಒಂದು ಶಿಶು ಕೇಂದ್ರದಿಂದ ತಂದ ಮೂರು ತಿಂಗಳ ಮಗುವನ್ನು ಶಾಸ್ತ್ರೋಕ್ತವಾಗಿ ದತ್ತು ಸ್ವೀಕಾರ ಮಾಡಿ ʼಪವಿತ್ರʼ ಎಂದು ನಾಮಕರಣವನ್ನೂ ಅದ್ಧೂರಿಯಾಗಿಯೇ ಮಾಡಿದರು ಕಸ್ತೂರಿ ಮತ್ತು ಪ್ರತಾಪ್.
ಮಗುವನ್ನು ಕೊಡುವಾಗ ಮಕ್ಕಳ ಕೇಂದ್ರದ ಹಲವಾರು ನಿಯಮಗಳಲ್ಲಿ, ಮಗು ಆರು ವರ್ಷವಾಗುವುದರೊಳಗೆ, ಅದು ದತ್ತು ಮಗುವೆಂಬ ವಿಚಾರವನ್ನು ಮಗುವಿಗೆ ತಿಳಿಸಿರಬೇಕು, ರಹಸ್ಯವಾಗಿಡಬಾರದು, ಎಂಬುದು.
ಕಸ್ತೂರಿಗೆ ಒಳಗೊಳಗೇ ಖುಷಿಯೂ ಆಯಿತು. ಅಕಸ್ಮಾತ್ ತನಗೆ ಸ್ವಂತ ಮಗುವಾದರೆ ಈ ನಿಯಮದಿಂದ ಅನುಕೂಲವೇ ಹೌದೆಂಬ ಲೆಕ್ಕಾಚಾರ ಅವಳದ್ದಾದರೂ ಮಗುವಿನ ಪಾಲನೆಯಲ್ಲಿ ಯಾವುದೇ ಕೊರತೆಯಾಗದಂತೆ ಲಾಲನೆ ಪಾಲನೆ ಮಾಡತೊಡಗಿದಳು.
ಆದರೆ ವಿಧಿಯಾಟ ಬೇರೆಯದೇ ಇತ್ತು, ಕಸ್ತೂರಿ ಗರ್ಭಧರಿಸಲೇ ಇಲ್ಲ.
ಪವಿತ್ರ ಬೆಳೆದು ಹದಿಹರಯಕ್ಕೆ ಕಾಲಿಟ್ಟಳು. ಈಗ ಪ್ರಾರಂಭವಾಯಿತು, ನಿಜವಾದ ತೊಂದರೆಗಳು.
ಕಸ್ತೂರಿಯ ನಡುವಳಿಕೆಗಳಲ್ಲಿ ಅಸಹನೆ, ನಿರಾಶೆ ಇಣುಕಹತ್ತಿದರೆ, ಪವಿತ್ರಳ ನಡುವಳಿಕೆಗಳಲ್ಲಿ ಉದ್ಧಟತನ, ಉಡಾಫೆ ದಿನದಿಂದ ದಿನಕ್ಕೆ ಜಾಸ್ತಿಯಾಗತೊಡಗಿತು. ಪ್ರತಾಪನಿಗೂ ʼಇದೆಲ್ಲ ರಗಳೆ ಬೇಕಿತ್ತಾ, ಸುಮ್ಮನೆ ಇಲ್ಲದ ರಗಳೆ. ನಮಗೆ ಬೇಕೆನಿಸಿದ್ದರೆ ಅಗತ್ಯವಿರುವ ಮಕ್ಕಳುಗಳಿಗೆ ಸಹಾಯ ಮಾಡುತ್ತಾ ನಾವಿಬ್ಬರೇ ಒಬ್ಬರಿಗೆ ಇನ್ನೊಬ್ಬರು ಎಂಬಂತೆ ಇರಬಹುದಿತ್ತಲ್ಲಾ,ʼ ಎನ್ನಿಸಹತ್ತಿತು. ಒಮೊಮ್ಮೆ ಅವನ ಮಾತುಗಳಲ್ಲೂ ಅದು ವ್ಯಕ್ತವಾಗುತಿತ್ತು. ಸರಿ ಮತ್ತೆ ಮನೆಯಲ್ಲಿ ಅಶಾಂತಿ. ಬರಬರುತ್ತಾ ಇದು ನಿತ್ಯದ ಪಾಡಾಯಿತು, ಹಾಡಾಯಿತು.
ಒಮ್ಮೆಯಂತೂ, ಕೌಸಲ್ಯ, ಕಾರ್ತೀಕ್ ದಂಪತಿಗಳು ಅವರ ಮನೆಗೆ ಹೋದಾಗ ಒಳಗಿನಿಂದ ಜೋರಾಗಿ ನಡೆಯುತ್ತಿದ್ದ ಜಗಳ ಬೀದಿಗೆ ಕೇಳಿಸುತಿತ್ತು. ಬಾಗಿಲಲ್ಲೇ ನಿಂತಾಗ ಕಿವಿಯ ಮೇಲೆ ಬಿದ್ದ ಮಾತುಗಳು ಇವರನ್ನು ಚಿಂತಿತರನ್ನಾಗಿ ಮಾಡಿತು.
ಕಸ್ತೂರಿ ಕಿರುಚುತ್ತಿದ್ದಳು – ಎಲ್ಲೋ ಅನಾಥವಾಗಿ ಬಿದ್ದಿರಬೇಕಿದ್ದ ನಿನ್ನನ್ನು ಕರೆತಂದು ಸಾಕಿ ಸಲಹಿದ್ದಕ್ಕೆ ಹೀಗಾ ನಡೆದುಕೊಳ್ಳುವುದು?
ಪವಿತ್ರಾ – ನಿಮ್ಮನ್ನು ನಾನೇನೂ ಕೇಳಿಕೊಂಡಿರಲಿಲ್ಲ, ನನ್ನನ್ನು ಕರೆದುಕೊಂಡು ಹೋಗಿ ಅಂತ. ನೀವಲ್ಲದಿದ್ದರೆ ಇನ್ನೊಬ್ಬರು, ನಿಮಗಿಂತಾ ಶ್ರೀಮಂತರು, ನಿಮಗಿಂತ ಪ್ರೀತಿಯಿಂದ ನನ್ನನ್ನು ನೋಡಿಕೊಳ್ಳುವವರು ಕರೆದೊಯ್ಯುತ್ತಿದ್ದರು.
ಪ್ರತಾಪ – ಬೇಡಾ, ಬೇಡಾ ಅಂದರೆ ಕಸ್ತೂರಿ, ನೀನು ನನ್ನ ಮಾತು ಕೇಳಲಿಲ್ಲ
ಪವಿತ್ರಾ ವ್ಯಂಗ್ಯವಾಗಿ – ತುಂಬ ಬೇಗ ಆಯಿತು, ಇನ್ನೊಂದು ಸ್ವಲ್ಪ ನಿಧಾನವಾಗಿ ಬುದ್ಧಿ ಹೇಳಿ ಪಪ್ಪಾ
ಕಸ್ತೂರಿ – ಹೌದು ಎಲ್ಲ ತಪ್ಪೂ ನನ್ನದೇ – ಎನ್ನುತ್ತಾ ಜೋರಾಗಿ ಅಳಲು ಪ್ರಾರಂಭಿಸಿದಳು. ಅವಳನ್ನು ನೋಡಿ ಪವಿತ್ರಳೂ ಅಳಹತ್ತಿದಳು.
ಪ್ರತಾಪ – ನೀವಿಬ್ಬರೇನೋ ಅತ್ತು ಹಗುರಾಗುತ್ತೀರಿ, ನಾನು ಮಾಡಿದ ಯಾವ ತಪ್ಪಿಗೆ ಶಿಕ್ಷೆಯೋ ತಿಳಿಯದು – ಎನ್ನುತ್ತಾ ದುಃಖಿಸಹತ್ತಿದ.
ಎರಡು ನಿಮಿಷ ಬಿಟ್ಟು ಒಳಬಂದ ದಂಪತಿಗಳಿಗೆ ಯಾರನ್ನು ಯಾವ ರೀತಿ ಸಮಾಧಾನಿಸಬಹುದೋ ತೋಚಲಿಲ್ಲ.
ನಂತರ ತಿಳಿದು ಬಂದ ವಿಚಾರ, ಪವಿತ್ರಳಿಗೆ ಪ್ರತಿಷ್ಟಿತ ಕಾಲೇಜಿನಲ್ಲಿ ಎಂ.ಬಿ.ಎ., ಮಾಡಬೇಕೆಂದೂ, ದಂಪತಿಗಳಿಗೆ, ಇಷ್ಟು ಎದುರು ವಾದಿಸುವ, ಉದ್ಧಟತನದ ಹುಡುಗಿಯ ಮೇಲೆ ಇನ್ನು ಖರ್ಚು ಮಾಡುವುದು “ಗೋರ್ಕಲ್ಲ ಮೇಲೆ ಮಳೆ ಹುಯ್ದಂತೆ”, ಹಾಗಾಗಿ, ಒಂದು ಪದವಿಯ ತನಕ ಓದಿಸಿದ್ದಂತೂ ಆಗಿದೆ ಯಾವುದೋ ಒಂದು ಒಳ್ಳೆಯ ಹುಡುಗನನ್ನು ಹುಡುಕಿ ಮದುವೆಮಾಡಿ ಈ ದಿನದಿನದ ರಗಳೆಯಂದ ಮುಕ್ತರಾಗಬೇಕೆಂಬ ಅಭಿಪ್ರಾಯವಿರುವುದು.
ಕಾರ್ತೀಕ ಒಮ್ಮೆ ಕಸ್ತೂರಿ ಮತ್ತು ಪ್ರತಾಪನನ್ನು ಕೂರಿಸಿಕೊಂಡು ಹೇಳಿದರು – ನೋಡಿ, ಇದು ಎಲ್ಲ ಮನೆಯಲ್ಲೂ ಇರುವ ವಿಚಾರವೇ. ಹದಿಹರಯದ ಹುಚ್ಚು ಖೋಡಿ ಮನಸ್ಸಿನ ಮಕ್ಕಳು ಎಗ್ಗುತಗ್ಗಿಲ್ಲದೆ ಮಾತನಾಡುತ್ತಾರೆ. ತಂದೆತಾಯಿಯರು ಅಂತಹ ಸಮಯವನ್ನು ಸಮಾಧಾನದಿಂದ, ತಾಳ್ಮೆಯಿಂದ ನಿಭಾಯಿಸಬೇಕು. ನಿಮಗೆ ದತ್ತು ಪುತ್ರಿಯಾಗಿರುವುದರಿಂದ ಖರ್ಚು ಮಾಡುವುದು ಬೇಡ, ಮದುವೆ ಮಾಡಿ ಸಂಬಂಧದಿಂದ ಮುಕ್ತರಾಗಬೇಕೆಂಬ ಯೋಚನೆ ಬಂದಿದೆ. ಅದೇ ಸ್ವಂತ ಮಕ್ಕಳಾದರೆ ಏನು ಮಾಡುತ್ತಿದ್ದಿರಿ? ಸ್ವಲ್ಪ ಸಹನೆಯಿಂದ ವರ್ತಿಸಿ – ಎಂದು ತಿಳಿ ಹೇಳಿದರು.
ಕಸ್ತೂರಿ ನೋವಿನಿಂದ – ಸ್ವಂತ ಮಗಳಾಗಿದ್ದರೆ ಹೀಗೇಕೆ ವರ್ತಿಸುತ್ತಿದ್ದಳು ಭಾವಾ – ಎಂದು ಅಲವತ್ತುಕೊಂಡಳು.
ಇದು ಸ್ವಂತ, ದತ್ತು ಎಂಬವುಗಳಿಂದ ಉದ್ಭವವಾದ ಸಮಸ್ಯೆಯಲ್ಲಾ ಕಸ್ತೂರಿ, ಇದು ವಯಸ್ಸಿನ, ಸಹವಾಸದಿಂದ ಬಂದಿರುವ ಸಮಸ್ಯೆ ಅಷ್ಟೆ, ಸ್ವಲ್ಪ ದಿನಗಳಲ್ಲಿ, ಸರಿಹೋಗುತ್ತದೆ, ತಾಳ್ಮಿಯಿರಲಿ.
ಪ್ರತಾಪ್ – ಇಲ್ಲ ಕಾರ್ತೀಕ್, ಅವಳು ಸರಿಹೋಗುತ್ತಾಳೆಂದು ನನಗನ್ನಿಸುವುದಿಲ್ಲ, ದಿನದಿನದ ರಗಳೆಯಿಂದ ರೋಸಿಹೋಗಿದ್ದೀನಿ.
ಇಷ್ಟು ದಿನ ಸಹಿಸಿದ ನೀವುಗಳು ಇನ್ನೆರಡು ವರ್ಷಗಳು ಸಹಿಸಿರಿ. ಇಷ್ಟೆಲ್ಲಾ ಅವಳಿಗಾಗಿ ಮಾಡಿರುವ ನೀವುಗಳು, ಒಂದು ಮಗುವಿಗೆ ವಿದ್ಯಾದಾನ ಎಂದಾದರೂ ಭಾವಿಸಿ ಅವಳನ್ನು ಓದಿಸಿಬಿಡಿ. ನಂತರ ನೋಡಿಕೊಳ್ಳೋಣ.
ಆಯ್ತು ಭಾವ ಇದೂ ಒಂದು ಆಗಿಹೋಗಲಿ. ನಮಗೇನು ಮಾಡಲು ಇಷ್ಟವಿಲ್ಲ, ಕಷ್ಟ ಅಂತ ಅಲ್ಲ. ಅವಳ ಪ್ರತಿಕ್ರಿಯೆಗಳು ನೋವು ನೀಡುತ್ತವೆ ಅಷ್ಟೆ – ಎನ್ನುತ್ತಾ ಮಾತಿಗೆ ಮುಕ್ತಾಯ ಹಾಡಿದರು.
ಮುಂದಿನದೆಲ್ಲಾ ಸರಾಗವಾಗಿ ನಡೆಯಿತು. ಎರಡು ವರ್ಷಗಳ ಎಂ.ಬಿ.ಎ., ಮುಕ್ತಾಯದ ಹಂತಕ್ಕೆ ಬಂತು. ಪವಿತ್ರಾ ಒಳ್ಳೆಯ ಅಂಕಗಳನ್ನು ಗಳಿಸಿದ್ದಳು. ಕ್ಯಾಂಪಸ್ ಸೆಲೆಕ್ಷನ್ ಸಹಾ ಆಯಿತು.
ಒಂದು ದಿನ ಮತ್ತೊಂದು ಬಾಂಬ್ ಸಿಡಿಸಿದಳು.
ನಾನೊಂದು ಹುಡುಗನನ್ನು ಇಷ್ಟಪಟ್ಟಿದ್ದೇನೆ. ಅವನನ್ನೇ ನಾನು ಮದುವೆಯಾಗುವುದು. ನಮ್ಮ ಫೈನಲ್ ಪರೀಕ್ಷೆ ಮುಗಿದ ಎರಡು ತಿಂಗಳುಗಳಿಗೇ ಮದುವೆಯಾಗಬೇಕು. ನೀವುಗಳೇ ಮುಂದೆ ನಿಂತು ಮದುವೆ ಮಾಡಬೇಕು. ನಂತರದ ದಿನಗಳಲ್ಲಿ ನಮ್ಮ ಕೆರಿಯರ್ ರೂಪಿಸಿಕೊಳ್ಳಲು ಅದು ಸಹಾಯವಾಗುತ್ತದೆ. ಅವರುಗಳ ಮನೆಯವರನ್ನು ಒಪ್ಪಿಸುವ ಜವಾಬ್ದಾರಿ, ನನ್ನ ಹುಡುಗ ಶ್ರೇಯಸ್, ಅವನೇ ವಹಿಸಿಕೊಂಡಿದ್ದಾನೆ. ನನಗೆ ನನ್ನ ಮದುವೆ ಹೀಗೆ, ಹೀಗೇ ನಡೆಯಬೇಕೆಂಬ ಕನಸಿದೆ. ಮದುವೆ ಹಾಗೆಯೇ ನಡೆಯಬೇಕು, ಇದೇ ಇವೆಂಟ್ ಮ್ಯಾನೇಜ್ಮೆಂಟಿಗೆ ಕಾಂಟ್ರ್ಯಾಕ್ಟ್ ಕೊಡಬೇಕು, ಅದೇ ಕಲ್ಯಾಣ ಮಂಟಪದಲ್ಲಿ ನಡೆಯಬೇಕು, ಎರಡು ದಿನಗಳ ಮದುವೆಯಾಗಬೇಕು, . . . . ಎಂದಳು.
ಕಸ್ತೂರಿಗೆ ಕೋಪದಿಂದ ನಖಶಿಖಾಂತ ಉರಿದುಹೋಯಿತು – ಏನು ನೀನು ನಮಗೆ ಆರ್ಡರ್ ಮಾಡುತ್ತೀಯಾ?, ನಾವು ಒಪ್ಪದಿದ್ದರೆ, ನಾವು ಮುಂದೆ ನಿಂತು ಮಾಡದಿದ್ದರೆ . . .?
ಆರ್ಡರ್ ಅಂತನಾದರೂ ತಿಳಿದುಕೊಳ್ಳಿ, ಮಾಹಿತಿ ಅಂತನಾದ್ರೂ ತಿಳ್ಕೊಳ್ಳಿ, ಕೋರಿಕೆ ಅಂತನಾದ್ರೂ ಅಂದುಕೊಳ್ಳಿ, ಆಗಬೇಕು ಅಂದ್ರೆ ಆಗಬೇಕು ಅಷ್ಟೆ.
ಗಂಡನೆಡೆಗೆ ತಿರುಗಿ ಕಸ್ತೂರಿ ಹೇಳಿದಳು – ನೋಡ್ರೀ ಅವಳ ಕೊಬ್ಬನ್ನು, ಹೇಗೆ ಮಾತಾಡ್ತಾಳೆ, ಎಲ್ಲೋ ಬಿದ್ದಿರಬೇಕಿದ್ದವಳು . .
ಪ್ರತಾಪ್ – ದಯವಿಟ್ಟು ಸುಮ್ಮನಿರುತ್ತೀಯಾ ಕಸ್ತೂರಿ, ಕೆಟ್ಟಕೆಟ್ಟದಾಗಿ ಮಾತನಾಡಬೇಡ
ಪವಿತ್ರಾ – ಮಾತನಾಡಲಿ ಬಿಡಿ ಪಪ್ಪಾ, ಅಮ್ಮಾ ಹೇಳ್ತೀನಿ ಕೇಳು, ಇದನ್ನೆಲ್ಲಾ, ಎಲ್ಲೋ ಬಿದಿದ್ದ ನನ್ನನ್ನು ಕರೆತಂದಿದ್ದೀಯಲ್ಲಾ ಅದಕ್ಕೇ ಮಾಡಬೇಕು, ತರದೇ ಇದಿದ್ದರೆ ನಾನು ಕೇಳುತ್ತಲೂ ಇರಲಿಲ್ಲ, ನೀನು ಮಾಡುತ್ತಲೂ ಇರಲಿಲ್ಲ.
ಮಾತುಕತೆಗಳು ಮುಕ್ತಾಯವಾದವು.
ಏಕಾಂತದಲ್ಲಿ ಪ್ರತಾಪನೇ ಹೆಂಡತಿಗೆ ಸಮಾಧಾನಿಸಿದ – ಇರಲಿ ಬಿಡು ಕಸ್ತೂರಿ, ಇಬ್ಬರೂ ಸಾಕಷ್ಟು ದುಡಿದಿದ್ದೇವೆ, ಇಷ್ಟೇ ಮಾಡಿದ್ದೇವೆ, ಇದನ್ನೂ ಮಾಡಿಬಿಡೋಣ, ಸುಖವಾಗಿರಲಿ.
ಅದೂ ನಿಜಾರೀ, ಸಧ್ಯ ಅವಳೇ ಹುಡುಕಿಕೊಂಡಿರುವುದು ಒಂದು ರೀತಿಯಲ್ಲಿ ಒಳ್ಳೆಯದೇ ಆಯಿತು. ಇಲ್ಲದಿದ್ದರೆ ನಾಳೆ ಸಣ್ಣಪುಟ್ಟದ್ದಕ್ಕೆಲ್ಲಾ ನಮ್ಮ ಮೇಲೆ ಗೂಬೆ ಕೂರಿಸುತ್ತಿದ್ದಳು.
ಪವಿತ್ರಳ ಇಚ್ಚೆಯಂತೆಯೇ, ಕಸ್ತೂರಿ ಪ್ರತಾಪರ ಅಂತಸ್ತಿಗೆ ತಕ್ಕಂತೆ ಅದ್ಧೂರಿಯಾಗಿ ವಿಜೃಂಭಣೆಯಿಂದ ಮದುವೆ ನೆರವೇರಿತು. ಹೆಣ್ಣು ಒಪ್ಪಿಸಿಕೊಡುವಾಗ ಕಸ್ತೂರಿ – ಪವಿತ್ರಾ ಇಬ್ಬರ ಮನಸ್ಸಿನ ಅಹಂ, ಲೆಕ್ಕಾಚಾರ, ಉದ್ಧಟತನದ ಕಟ್ಟೆಗಳು ಒಡೆದು ಅಲ್ಲಿ ಪ್ರೀತಿಯ ಪ್ರವಾಹವೇ ಹರಿಯಿತು. ಪ್ರತಾಪನೂ ಬಿಕ್ಕಿ ಬಿಕ್ಕಿ ಅತ್ತ. ಮೂರೂ ಜನ ಮನದೊಳಗೇ ಅಂದುಕೊಂಡರು – ನಾನಿವರನ್ನು ಇಷ್ಟೊಂದು ಹಚ್ಚಿಕೊಂಡಿದ್ದೇನೆಯೇ?
ಮೊದಲ ರಾತ್ರಿ ಪವಿತ್ರಾ ಶ್ರೇಯಸ್ಸ್‌ಗೆ ಹೇಳಿದಳು – ನಾ ಮೆಚ್ಚಿದ ನಿನ್ನ ಕೈ ಹಿಡಿದದ್ದು ನನಗೆ ತುಂಬಾ ಸಂತಸ ತಂದಿದೆ. ಜೀವನದುದ್ದಕ್ಕೂ ಪ್ರೀತಿ, ವಿಶ್ವಾಸ, ಸಂತಸದಿಂದಿರಲು ಇಂದು ಕೆಲವೊಂದು ವಾಗ್ದಾನಗಳನ್ನು ಒಬ್ಬರಿಗೊಬ್ಬರು ಮಾಡೋಣ, ಹೇಳು, ನೀನು ನನ್ನಿಂದ ಏನು ಬಯಸುತ್ತೀಯಾ?
ನಿನ್ನ ಈ ಗುಣವೇ ನನಗಿಷ್ಟವಾಗುವುದು. ನೀನೇ ವಿಚಾರವೆತ್ತಿದ್ದರಿಂದ ನೀನೇ ಮೊದಲು ಹೇಳು, ಪೆಹಲೇ ಆಪ್. .
ಓಕೆ, ಅನಾಥವಾಗಬೇಕಿದ್ದ ನನಗೆ ಒಂದು ಒಳ್ಳೆಯ ಜೀವನ ದಕ್ಕಿದೆ. ಕುಟುಂಬದ ಮಹತ್ವ, ಅಗತ್ಯದ ಅರಿವು ನನಗಿರುವಷ್ಟು ಬೇರೆಯವರಿಗಿರುವುದು ಕಷ್ಟ. ನಿನ್ನ ಕುಟುಂಬಕ್ಕೆ ನಾನು ಮನಸಾರೆ ಸೇರ್ಪಡೆಗೊಂಡು ನಿನ್ನವರೆಲ್ಲರನ್ನೂ ಸುಖ-ಸಂತೋಷದಿಂದಿರುವಂತೆ ನೋಡಿಕೊಳ್ಳುವ ಜವಾಬ್ದಾರಿ ನನಗಿರಲಿ, ಅದನ್ನು ನಾನು ನಡೆಸಿಯೇ ತೀರುತ್ತೇನೆ. ನನ್ನ ಅಪ್ಪ, ಅಮ್ಮನ ಜವಾಬ್ದಾರಿಯನ್ನು ಹೊರಲು ಎಂದೆಂದಿಗೂ ನೀನು ಅಡ್ಡ ಬರಬಾರದು, ಇದೇ ನಿನ್ನಿಂದ ನಾನು ಬಯಸುವ ವಾಗ್ದಾನ.
ಪವಿತ್ರಳ ಅಂಗೈಯನ್ನು ತನ್ನ ಕೈಗಳಲ್ಲಿ ಭದ್ರವಾಗಿ ಹಿಡಿದು – ನನ್ನ ಮನದ ಬಯಕೆಯನ್ನು ನಾನು ಹೇಳುವ ಮೊದಲೇ ಗ್ರಹಿಸಿ, ಅದನ್ನು ನಿನ್ನ ಜವಾಬ್ದಾರಿ ಎಂದು ಸ್ವೀಕರಿಸಿರುವ ನಿನ್ನ ತಂದೆ ತಾಯಿಯರು ಇಂದಿನಿಂದ ನನ್ನ ತಂದೆತಾಯಿಯರೂ ಹೌದು. ನೀನು ಕೇಳಿದ್ದಕ್ಕಿಂತ, ಬಯಸಿದ್ದಕ್ಕಿಂತ ಹೆಚ್ಚಿನದನ್ನು ನೀಡುವುದೇ ನಾನು ನಿನಗೆ ನೀಡುವ ವಾಗ್ದಾನ. ಅರೆಕ್ಷಣ ಭಾವುಕರಾಗಿ ಕುಳಿತ ಇಬ್ಬರೂ ಸಹಜಸ್ಥಿತಿಗೆ ಮರಳಿದರು.
ಮುಂದಿನದೆಲ್ಲಾ ಕಸ್ತೂರಿ-ಪ್ರತಾಪರಿಗೆ ಮ್ಯಾಜಿಕ್ಕಿನಂತೆ ತೋರುತಿತ್ತು.
ಇದೇ ಪವಿತ್ರಳನ್ನೇ ನಾವು ಬೆಳೆಸಿದ್ದು! ಎಂದು ಮೂಗಿನಮೇಲೆ ಬೆರಳಿಡುವಂತೆ ಆಯಿತು. ಎಷ್ಟು ಅಕ್ಕರೆಯಿಂದ, ಅಂತಃಕರಣದಿಂದ ನೋಡಿಕೊಳ್ಳುತ್ತಿದ್ದಳೆಂದರೆ ನಂಬಲೇನು, ಊಹಿಸಲೂ ಅಸಾಧ್ಯವಾಗುತಿತ್ತು. ಎರಡೂ ಮನೆಗಳ ಎಲ್ಲ ಜವಾಬ್ದಾರಿಯನ್ನು ಇಬ್ಬರೂ ಅತ್ಯಂತ ಪ್ರೀತಿಯಿಂದ ನಿಭಾಯಿಸುತ್ತಿದ್ದರು. ಸಂತಸ, ಸಮಾಧಾನದ ಜ್ಯೋತಿ ಎರಡೂ ಮನೆಗಳಲ್ಲಿ ಬೆಳಗಹತ್ತಿತು.
ಪ್ರತಾಪ್ ಕಾರ್ತೀಕ್ ಅವರಲ್ಲಿ ತಪ್ಪೊಪ್ಪಿಕೊಂಡುಬಿಟ್ಟನು – ಹೌದು ಕಾರ್ತೀಕ್, ನೀವು ಹೇಳಿದ್ದು ನಿಜ, ಹದಿಹರಯದಲ್ಲಿ ಗೊಂದಲಗಳ ಗೂಡಾದ ಯುವಮನಸ್ಸುಗಳನ್ನು ಸಮಾಧಾನ, ಸಹನೆ, ಶಾಂತಿಯಿಂದ ತಿಳಿಗೊಳಿಸಿದರೆ ಮುಂದೆ ಅವರುಗಳು ಸಜ್ಜನರು, ಸತ್ಪ್ರಜೆಗಳಾಗುವುದರಲ್ಲಿ ಸಂದೇಹವೇ ಇಲ್ಲ.
ಕಸ್ತೂರಿಯಂತೂ, ನಾನು ಹೆತ್ತ ಮಗುವೇ ಆಗಿದ್ದರೂ ಇಷ್ಟರ ಮಟ್ಟಿಗೆ ನೋಡಿಕೊಳ್ಳುತ್ತಿದ್ದಳೋ ಇಲ್ಲವೋ ಗೊತ್ತಿಲ್ಲ. ಅದಕ್ಕೇ ಅಲ್ಲವೇ ಕೃಷ್ಣಕಥೆಯಲ್ಲಿ ದೇವಕಿಗೆ ಇರುವಷ್ಟೇ ಸ್ಥಾನಮಾನ, ಸಮಾಧಾನಗಳು ಯಶೋಧೆಗೂ ಇರುವುದು. ಇಷ್ಟು ತಿಳಿಯದೆ ಎಷ್ಟೊಂದು ನೊಂದೆನಲ್ಲಾ, ನನ್ನ ಪವಿತ್ರಳನ್ನು, ಅವಳ ಕುಟುಂಬವನ್ನು ಸುಖದಿಂದಿರಿಸು ದೇವರೇ ಎಂದು ಪ್ರಾರ್ಥಿಸಿ ನೆಮ್ಮದಿಗೊಂಡಳು.

ಪದ್ಮಾ ಆನಂದ್, ಮೈಸೂರು

