ಹೆಣ್ಣು ಗುಲಾಮಳಲ್ಲ

Share Button

ಹೆಂಡತಿ ಜೀನ್ಸ್ ಪ್ಯಾಂಟ್, ಟೀ ಶರ್ಟು ಹಾಕಿದಳೆಂದು ಗಂಡ ಕುಪಿತಗೊಂಡು ಹೆಂಡತಿಯನ್ನೇ ಕೊಲೆ ಮಾಡಿದ ಘಟನೆ ಇತ್ತೀಚೆಗೆ ನಡೆದಿದ್ದು, ಅಸನ್ನು ಸುದ್ದಿ ಮಾಧ್ಯಮಗಳಲ್ಲಿ ನೋಡಿ ಮನಸ್ಸು ಕುದ್ದು ಹೋಯಿತು. ಗಂಡಿನ ಮನಸ್ಸು ಅದೆಷ್ಟು ಕ್ರೂರ. ತನ್ನ ಹೆಂಡತಿ ತನಗಿಷ್ಟವಿಲ್ಲದ ಬಟ್ಟೆ ತೊಟ್ಟಳೆಂದು ಕೊಂದು ಬಿಡುವಷ್ಟು ವಿಕೃತವೇ ಇಂದಿನ ಗಂಡನದ್ದು. ಅವನಿಗ್ಯಾವ ಹಕ್ಕಿದೆ, ಅಧಿಕಾರವಿದೆ ಅವಳನ್ನು ಕೊಲ್ಲಲು, ಅವನಿಗ್ಯಾವ ಅಧಿಕಾರವಿದೆ ಅವಳ ಡ್ರಸ್ಸಿನ ಬಗ್ಗೆ ಹೇಳಲು, ಅವನಿಗ್ಯಾವ ಅಧಿಕಾರವಿದೆ ಅಂತಹ ತೀರ್ಮಾನ ಕೈಗೊಳ್ಳಲು? ಈ ಗಂಡಸರ ಹಣೆಬರಹವೇ ಇಷ್ಟು. ಮದುವೆಯಾದ ಕೂಡಲೇ ಹೆಂಡತಿ ತಮ್ಮ ಇತರೆ ಸೊತ್ತಿನಂತೆ ಅವಳೂ ಕೂಡಾ ಒಂದು ಸೊತ್ತು. ತನ್ನ ಇತರೆ ಸೊತ್ತುಗಳ ಮೇಲೆ ಹೇಗೆ ತನಗೆ ಹಕ್ಕಿದೆಯೋ ಅದೇ ರೀತಿ ಹೆಂಡತಿಯಾ ಮೇಲೂ ಹಕ್ಕಿದೆ. ತನ್ನ ಆಸ್ತಿ ,ಪಾಸ್ತಿ, ಮನೆ, ಮಠಗಳನ್ನು ಹೇಗೆ ತನ್ನ ಮನಬಂದೆಂತೆ ವಿಲೇವಾರಿ ಮಾಡಬಹುದೊ ಹಾಗೇ ತನ್ನ ಹೆಂಡತಿಯನ್ನು ತನಗಿಷ್ಟ ಬಂದಂತೆ ನಡೆಸಿಕೊಳ್ಳ ಬಹುದು ಅಂತ ಇವತ್ತಿಗೂ ಗಂಡು ಸಂತತಿ ತಿಳಿದುಕೊಂಡಿದೆ. ಈ ಸ್ವತಂತ್ರ ಭಾರತದಲ್ಲೂ ಹೆಣ್ಣು ತನ್ನ ಗುಲಾಮಳು ಅಂತ ಪುರುಷ ತಿಳಿದು ಕೊಂಡಿದ್ದಾನೆ. ಇದಕ್ಕೆ ಕೆಲವರು ಅಪವಾದ ವಿರಬಹುದು. ಆದರೆ ಬಹು ಸಂಖ್ಯಾತರು ಇಂತವರೆ ಆಗಿದ್ದಾರೆ.

ಪ್ರತಿಯೊಬ್ಬ ಗಂಡು ತನ್ನನ್ನು ಮದುವೆಯಾದ ಮೇಲೆ ತನ್ನ ಹೆಂಡತಿಗೆ ತಾನೇ ಸರ್ವಸ್ವ, ತಾನೆ ಅವಳ ಜಗತ್ತು, ತನ್ನಾಸೆಗಳೇ ಅವಳ ಆಸೆಗಳಾಗಿರಬೇಕು,ತನ್ನ ಬಯಕೆಗಳೇ ಅವಳ ಬಯಕೆಗಳಾಗಿರಬೇಕು, ತನ್ನವರು ಮಾತ್ರ ಅವಳ ಬಂಧುಗಳಾಗಿರಬೇಕು. ತಾನು ಹೇಳಿದಂತೆ ಕೇಳಿಕೊಂಡು ಮೂಕ ಪಶುವಿನಂತೆ ಬಿದ್ದಿರ ಬೇಕು.ಕೂರು ಅಂದರೆ ಕೂರಬೇಕು, ನಿಲ್ಲು ಅಂದರೆ ನಿಲ್ಲಬೇಕು, ಮನೆಬಿಟ್ಟು ಹೋಗು ಅಂದರೆ ಹೋಗ ಬೇಕು. ಸಾಯಿ ಅಂದರೆ ಸಾಯಬೇಕು. ಒಟ್ಟಿನಲ್ಲಿ ಅವಳು ಒಂದು ಜೀವ ಇರುವ ಮನುಷ್ಯಳಲ್ಲ ತಾನು ಆಡಿಸುವ ತನ್ನ ಕೈ ಕೊಂಬೆ ತನ್ನ ಹೆಂಡತಿ ಅಂತ ತಿಳಿದು ಬಿಟ್ಟಿದ್ದಾನೆ.ಮದುವೆಯಾದ ಕೂಡಲೇ ತನ್ನ ಹೆಂಡತಿಯ ಇನ್ಶಿಯಲ್ ಕೂಡಾ ಬದಲಾಗ ಬೇಕು. ತನ್ನ ಇನ್ಶಿಯಲ್ಲೇ ತನ್ನ ಹೆಂಡತಿಯದ್ದಾಗಬೇಕು ಅಂತ  ಬದಲಾಯಿಸಿದ ಮೂರ್ಖ ಗಂಡನನ್ನು ನಾನೂ ಕಣ್ಣಾರೆ ಕಂಡಿದ್ದೇನೆ. ಆ ಮೂರ್ಖನಿಗೆ ತಮ್ಮ ಹೆಸರುಗಳ ಮುಂದೆ ಇರುವ ಇನ್ಶಿಯಲ್‌ಗಳು ತನ್ನ ಹುಟ್ಟೂರಿನ ಹಾಗೂ ತನ್ನ ಹೆತ್ತ ತಂದೆಯ ಹೆಸರಿನ ಮೊದಲ ಅಕ್ಷರ, ಅದೇ ಇನ್ಶಿಯಲ್ ತನ್ನ ಹೆಂಡತಿಗೆ ಬದಲಾಯಿಸಿದರೆ ತನ್ನ ಅಪ್ಪನೇ ಅವಳ ಅಪ್ಪನಂತೆ ಆಗುತ್ತದೆ ಅನ್ನೊ ಪ್ರಾಥಮಿಕ ಜ್ಞಾನವೂ ಇಲ್ಲದ, ಅವಳ ಅಪ್ಪ ಬೇರೆ, ತನ್ನ ಅಪ್ಪ ಬೇರೆ ,ಆದರೆ ಹೀಗೆ ಬದಲಾಯಿಸಿದೆ ಅಭಾಸ, ಅಸಹ್ಯ ಆಗುತ್ತದೆ ಅಂತನೂ ಗೊತ್ತಾಗದಷ್ಟು ಗಂಡನ ಆ ಗಂಡು ಅನ್ನೊ ಅಹಂ ಅದೆಷ್ಟು ಮೇರೆ ಮೀರಿರುತ್ತದೆ ಅನ್ನೊ ಸತ್ಯ ಇದರಿಂದ ಗೊತ್ತಾಗುತ್ತದೆ.

ತಾನು ಹೇಳಿದ್ದೆ ಅಡುಗೆ ಮಾಡಬೇಕು ಹಾಗೂ ಅದನ್ನೆ ತನ್ನ ಹೆಂಡತಿ ತನಗೆ ಇಷ್ಟವಿಲ್ಲದಿದ್ದರೂ ತಿನ್ನಬೇಕು. ತಾನು ಇಷ್ಟಪಟ್ಟು ನೋಡುವ ಸಿನಿಮಾಗಳನ್ನೆ ನೋಡಬೇಕು, ತಾನು ಅಭಿಮಾನಿಸುವ ನಟನನ್ನೆ ಅವಳು ಅಭಿಮಾನಿಸಬೇಕು. ತಾನು ಇಷ್ಟಪಡದ ನಟನ ಸಿನಿಮಾವನ್ನೂ ತನ್ನ ಹೆಂಡತಿಯೂ ನೋಡಬಾರದು ಅಂತ ಕಟ್ಟಳೆ ಹೇರಿರುವ ಗಂಡಸರು ನಮ್ಮ ನಿಮ್ಮ ನಡುವೆಯೇ ಇದ್ದಾರೆ. ತಾನು ಒಪ್ಪುವಂತಹ ಉಡುಗೆ, ತೊಡುಗೆಗಳನ್ನೇ ತೊಡಬೇಕು, ತಾನು ಮೆಚ್ಚುವ ವಸ್ತ್ರ, ಆಭರಣ ಧರಿಸಬೇಕು, ತಾನು ಇಷ್ಟ ಪಟ್ಟು ತಿನ್ನುವ ಅಡುಗೆಯನ್ನೇ ಮಾಡಬೇಕು, ತಾನು ತಿನ್ನುವ ತರಕಾರಿಗಳನ್ನೇ ಮನೆಗೆ ತರಬೇಕು,ತನಗೆ ಇಷ್ಟವಿಲ್ಲದ ತರಕಾರಿಯನ್ನು ಹೆಂಡತಿ ತುಂಬಾ ಇಷ್ಟಪಟ್ಟರೂ ಅದನ್ನು ತಿನ್ನಬಾರದು, ಮನೆಗೆ ತರಬಾರದು ಅನ್ನುವ ಭೂಪರೂ ಈ ಭೂಮಿ ಮೇಲೆ ಇದ್ದಾರೆ.ಗಂಡನಿಗೆ ಇಷ್ಟ ಇಲ್ಲ ಅಂತ ತಾವು ತುಂಬಾ ಇಷ್ಟ ಪಡುವ ತರಕಾರಿ, ಊಟ ತಿಂಡಿಯನ್ನೆ ಬಿಟ್ಟ ಹೆಂಡತಿಯರು ಅದೆಷ್ಟೊ ಜನ ಈ ಭೂಮಿ ಮೇಲೆ ಇನ್ನೂ ಇದ್ದಾರೆ. ಕೊನೆಗೆ ಅವಳು ತೊಡುವ ಬಳೆ ಕೂಡಾ ಗಂಡ ತಾನು ಇಷ್ಟಪಟ್ಟದ್ದೆ ಆಗಿರ ಬೇಕು ಅನ್ನುವ ಗಂಡಂದಿರ ಜೊತೆ ಬದುಕುವುದು ಎಂತಹ ವಿಪರ್ಯಾಸ, ಎಂತಹ ಗುಲಾಮಗಿರಿಯ ಬದುಕು ಅಲ್ಲವೇ. ಅದೆಂತಹ ಸ್ವಂತಿಕೆ ಇಲ್ಲದ ಜೀವನ ನಮ್ಮ ಹೆಣ್ಣು ಮಕ್ಕಳದ್ದು.

ಮನೆಯಲ್ಲಿ ಗಂಡನಿದ್ದು ಬಿಟ್ಟರೆ ಎಷ್ಟೊ ಗೃಹಿಣಿಯರ ಮೆಚ್ಚಿನ ಧಾರವಾಹಿಗಳ ವೀಕ್ಷಣೆಗೆ ಭಂಗ ಬಂದಿರುತ್ತದೆ. ಕಾರಣ ಮನೆಯ ಯಜಮಾನ ಯಾವ ಛಾನಲ್ ನೋಡುತ್ತಾನೊ ಮನೆಯ ಗೃಹಿಣಿ ಕೂಡಾ ಅದನ್ನೆ ನೋಡ ಬೇಕು. ಇದು ಎಷ್ಟೊ ಮನೆಗಳಲ್ಲಿ ದಿನನಿತ್ಯ ನಡೆಯುತ್ತಿರುವ ಮನೆ ಮನೆ ಕಥೆ. ಇಂಥ ಸಣ್ಣ ಸಣ್ಣ ವಿಷಯಗಳಲ್ಲೇ ಮನೆಯೊಡತಿಗೆ ಸ್ವತಂತ್ರ ಇಲ್ಲ ಅಂದ ಮೇಲೆ ಬೇರೆ ವಿಷಯಗಳಲ್ಲಿ ಸ್ವತಂತ್ರ ಇರುತ್ತದೆಯೇ. ನನ್ನ ಗೆಳತಿಯೊಬ್ಬಳ ಪತಿ ಮಹಾಶಯನೊಬ್ಬ ತನ್ನ ಹೆಂಡತಿಯ ಅಸ್ತಿತ್ವವನ್ನು ಅದೆಷ್ಟು ಅಲಕ್ಷಿಸಿದ್ದನೆಂದರೆ ಮನೆ ಕಟ್ಟುವಂತಹ ಮಹತ್ವದ ವಿಚಾರವನ್ನೂ ಹೆಂಡತಿಗೇಕೆ ಹೇಳಬೇಕೆಂದು ಹೇಳಿಯೇ ಇರಲಿಲ್ಲ. ಸೈಟ್ ಕೊಂಡು ಅಡಿಪಾಯ ಹಾಕಿ, ಮನೆ ಕಟ್ಟಿ ಮುಗಿಸಿ, ಗೃಹ ಪ್ರವೇಶದ ದಿನ ನಿಗದಿಮಾಡಿ, ಆಹ್ವಾನ ಪತ್ರಿಕೆ ಅಚ್ಚು ಹಾಕಿಸಿದ ಮೇಲೆ ಹೆಂಡತಿಗೆ ತಿಳಿಸಿದ್ದ. ಪುಣ್ಯಕ್ಕೆ ಆಹ್ವಾನ ಪತ್ರಿಕೆಯಲ್ಲಿ ತನ್ನ ಹೆಂಡತಿಯ ಹೆಸರನ್ನೂ ಹಾಕಿಸುವ ಕೃಪೆ ತೋರಿಸಿದ್ದ. ಪತಿ ಮನೆ ಕಟ್ಟಿದ್ದಾನಲ್ಲ ಅನ್ನೋ ಸಂತೋಷದಲ್ಲಿ ಖುಷಿ ಪಡಬೇಕೊ, ತನಗೊಂದೂ ಮಾತು ಹೇಳದೆ , ತನ್ನ ಯಾವ ಸಲಹೆ ಸೂಚನೆಗಳನ್ನೂ ಪಡೆಯದೆ , ಮನೆ ಕಟ್ಟುವಂತಹ ಮಹತ್ವದ ವಿಚಾರವನ್ನು ಮನೆ ಕಟ್ಟಿ ಮುಗಿಸುವ ತನಕವೂ ಅದರ ಸುಳಿವು ಕೂಡಾ ನೀಡದಂತೆ ಮುಚ್ಚಿಟ್ಟಿದ್ದ ಗಂಡನ ನಿರಂಕುಶ ಅಧಿಕಾರದ ಬಗ್ಗೆ,ತನ್ನ ಬಗೆಗಿನ ನಿರ್ಲಕ್ಷದ ಬಗ್ಗೆ ಸಂತಪ ಪಡಬೇಕೊ ಅಂತ ತಿಳಿಯದೆ ಆಕೆ ಗೊಂದಲಕ್ಕೊಳಗಾಗಿದ್ದಳು.

ಮನೆಯ ಹಣಕಾಸಿನ ವಿಚಾರದಲ್ಲಾಗಲಿ, ಮಕ್ಕಳ ವಿದ್ಯಾಭ್ಯಾಸ, ಮಕ್ಕಳ ಉದ್ಯೋಗ, ಮದುವೆಯಂತಹ ಮುಖ್ಯವಾದ ಹಾಗೂ ಅತಿ ಮಹತ್ವದ ವಿಚಾರದಲ್ಲೂ ಆಕೆಯ ಪಾತ್ರ ಅತಿ ಕಡಿಮೆ ಅಥವಾ ಇಲ್ಲವೇ ಇಲ್ಲ ಅಂತನೇ ಹೇಳಬೇಕು. ಇದು ಹೆಚ್ಚು ಕಡಿಮೆ ನಮ್ಮ ಎಲ್ಲಾ ಹೆಣ್ಣು ಮಕ್ಳಳ ಬದುಕು. ದುಡಿಯುತ್ತಿರುವ ಹೆಣ್ಣು ಮಕ್ಕಳ ಬದುಕೂ ಇದಕ್ಕಿಂತಲೂ ಭಿನ್ನವಾಗೇನೂ ಇಲ್ಲ. ದುಡಿಯುವ ಹೆಣ್ಣು ಮಕ್ಕಳೂ ದುಡಿದುದೆಲ್ಲನ್ನು ಗಂಡನ ಕೈಗಿರಿಸಿ ಬಸ್ ಚಾರ್ಜ್‌ಗೂ ಅವನ ಮುಂದೆ ಕೈ ಚಾಚುವ ಪರಿಸ್ಥಿತಿಯನ್ನ ತಾವೇ ತಮ್ಮ ಕೈಯಾರೆ ತಂದು ಕೊಂಡಿದ್ದಾರೆ. ಅದೆಷ್ಟೊ ನಮ್ಮ ಹೆಣ್ಣು ಮಕ್ಕಳು ತಮ್ಮ ಮನೆಯ ಒಳಗೂ ದುಡಿಯುತ್ತಾ, ಮನೆಯ ಹೊರಗೂ ದುಡಿದು ಹೈರಾಣಾಗುತ್ತಿದ್ದಾರೆ. ಹೆಣ್ಣಾಗಿ ಹುಟ್ಟಿದ್ದೆವೆಂದು ಎಲ್ಲವನ್ನು ತಮ್ಮ ತಲೆಯ ಮೇಲೆ ಹಾಕಿಕೊಂಡು ಮನೆಯ ಗೃಹಕೃತ್ಯದ ನಿರ್ವಹಣೆ, ಜೊತೆಗೆ ಮಕ್ಕಳ ಪಾಲನೆ, ಪೋಷಣೆ, ಅತ್ತೆ ಮಾವಂದಿರ ಸೇವೆ, ಮನೆಗೆ ಬರುವ ಬಂಧು ಬಳಗದವರನ್ನು ಸತ್ಕರಿಸುವ ಎಲ್ಲಾ ಸಮಸ್ತ ಜವಾಬ್ದಾರಿಯನ್ನು ತಾನೇ ನಿರ್ವಹಿಸುತ್ತಾ, ಕೆಲಸಕ್ಕೂ ಹೋಗುತ್ತಾ, ದುಡಿಮೆ ಮಾಡುತ್ತಾ ಪತಿಯ ಬೆನ್ನೆಲುಬಾಗಿ ನಿಂತರೂ ಅವನಿಂದ ಯಾವುದೇ ಸಹಕಾರ ಸಿಗದೆ ಹಣ್ಣಾಗುತ್ತಿದ್ದಾಳೆ. ಅವಳ ನೋವನ್ನು ಕೇಳುವವರಿಲ್ಲ. ಅವಳ ಕಷ್ಟಕ್ಕೆ ಮರುಗುವವರಿಲ್ಲ. ಅವಳ ದುಡಿಮೆಗೆ ಬೆಲೆಯಿಲ್ಲ. ಅವಳ ವ್ಯಕ್ತಿತ್ವಕ್ಕೆ ಬೆಲೆ ಇಲ್ಲ. ಅವಳ ಆಸೆ ಆಕಾಂಕ್ಷೆಗಳಿಗೆ ಮನ್ನಣೆ ಇಲ್ಲ. ಅವಳ ಸಂಕಷ್ಟಕೆ ಕೊನೆ ಇಲ್ಲ. ಅವಳ ಮೇಲಾಗುತ್ತಿರುವ ದೈಹಿಕ ಮಾನಸಿಕ ದೌರ್ಜನ್ಯಗಳಿಗೆ ತಡೆ ಇಲ್ಲ. ಅವಳ ಯಾವೊಂದು ಸ್ಪಂದನೆಗೂ ಪ್ರತಿಸ್ಪಂದನೆಯಿಲ್ಲ.ಒಟ್ಟಿನಲ್ಲಿ ಮೂಕ ಪಶುವಾಗಿ ಬದುಕುತ್ತಿದ್ದಾಳೆ. ಹೀಗೆ ಶತಮಾನ ಶತಮಾನಗಳಿಂದಲೂ ಬದುಕುತ್ತಿದ್ದಾಳೆ. ಮುಂದೆಯು ಕೂಡಾ ಅವಳು ಹೀಗೆಯೇ ಬದುಕಬೇಕೇ?

ಒಂದು ಆಶಾದಾಯಕ ವಿಚಾರವೆಂದರೆ ಕೆಲ ಮಹಿಳೆಯಾದರೂ ಎಚ್ಚೆತ್ತು ತಮ್ಮ ಅಸ್ವಿತ್ವವನ್ನು ಉಳಿಸಿಕೊಳ್ಳಲು ಬಯಸಿ ಹೋರಾಡುತ್ತಿದ್ದಾರೆ. ಅದರಂತೆ ಬದುಕುತ್ತಿದ್ದಾರೆ. ಕೆಲ ಉದಾತ್ತ ಪುರುಷರೂ ಕೂಡ ಅವರ ಜೊತೆ ಕೈ ಜೋಡಿಸುತ್ತಿದ್ದಾರೆ. ತಮ್ಮ ಮನೆಯ ಸ್ತ್ರೀಯರನ್ನು ತಮ್ಮಂತೆ ಅವರೂ ಕೂಡಾ ಒಬ್ಬ ಮನಸ್ಸು ,ಸ್ವಂತ ವ್ಯಕ್ತಿತ್ವ ಇರುವ ವ್ಯಕ್ತಿಗಳೆಂದು ಪರಿಗಣಿಸಿ ಅವರ ಸ್ವತಂತ್ರ ಬದುಕಿಗೆ ಧಕ್ಕೆಯಾಗದಂತೆ ನಡೆದುಕೊಳ್ಳುತ್ತಿದ್ದಾರೆ. ತಮ್ಮ ಸುತ್ತಮುತ್ತಲಿನ ಮಹಿಳೆಯರನ್ನು ಅದೇ ಭಾವನೆಯಿಂದ ನೋಡುತ್ತಾ, ಗೌರವಿಸುತ್ತಾ ಇದ್ದಾರೆ. ಅಂತವರು ನಿಜಕ್ಕೂ ಅಭಿನಂದನಾರ್ಹರು. ಇಂತಹ ಮನಸ್ಥಿತಿ ಎಲ್ಲ ಪುರುಷರದ್ದಾಗಲಿ, ಪ್ರತಿಯೊಬ್ಬ ಹೆಣ್ಣೂ ಸ್ವಂತಿಕೆಯಿಂದ ಬಾಳುವಂತಾಗಲಿ ಅನ್ನೊದೇ ಈ ಲೇಖನದ ಆಶಯ.

-ಎನ್. ಶೈಲಜಾ ಹಾಸನ

2 Responses

  1. Shankara Narayana Bhat says:

    ಹೆಣ್ಣು ಗುಲಾಮಳಲ್ಲ ಎಂಬುದು ಸತ್ಯ, ಆದರೆ ಸ್ವೇಚ್ಛಾಚಾರಿಯೂ ಆಗಿರಬಾರದು, ಸ್ತ್ರೀಯರು ಸೀರೆ ಉಡುವುದನ್ನು ಬಿಟ್ಟು ಜೀನ್ಸ್ ಪ್ಯಾಂಟ್ ಇತ್ಯಾದಿ ಧರಿಸುವುದು ಸರಿಯೋಹೇಳಿ?

  2. Hema says:

    ಸ್ವೇಚ್ಛಾಚಾರ ತಪ್ಪು, ಆದರೆ ಮಹಿಳೆ ಜೀನ್ಸ್-ಶರ್ಟ್ ತೊಡುವುದು ಸ್ವೇಚ್ಛಾಚಾರವಲ್ಲ. ಸಂದರ್ಭಕ್ಕೆ ತಕ್ಕಂತೆ ಮಹಿಳೆ ಜೀನ್ಸ್ -ಶರ್ಟ್ ಧರಿಸುವುದು ಖಂಡಿತಾ ತಪ್ಪಲ್ಲ. ಉಡುಪು ಯಾವುದೇ ಆಗಿರಲಿ ಸಂದರ್ಭಕ್ಕೆ ತಕ್ಕಂತೆ ಇದ್ದು, ಮಹಿಳೆಯ ಘನತೆಯನ್ನು ಹೆಚ್ಚಿಸಬೇಕು ಅಷ್ಟೆ. ಸಾಂಪ್ರದಾಯಿಕ ಕಾರ್ಯಕ್ರಮಗಳಲ್ಲಿ ಮಹಿಳೆಗೆ ಸೀರೆಯೇ ಭೂಷಣ. ಆದರೆ, ಈಗ ಉದ್ಯೋಗಸ್ಥ ಮಹಿಳೆಯರು ಬಹಳಷ್ಟು ಜನರಿದ್ದಾರೆ. ದಿನಾಲು ಬಸ್ಸಿನಲ್ಲಿ ಅಥವಾ ದ್ವಿಚಕ್ರವಾಹನದಲ್ಲಿ ಪ್ರಯಾಣಿಸುವಾಗ ಸೀರೆಗಿಂತ ಪ್ಯಾಂಟ್ಸ್, ಜೀನ್ಸ್, ಶರ್ಟ್, ಸಲ್ವಾರ್ , ಚೂಡಿದಾರ್ ಇಂತಹ ಬಟ್ಟೆಗಳೇ ಆರಾಮದಾಯಕ. ಧಾವಂತದಲ್ಲಿರುವಾಗ ಇವುಗಳು ಕಾಲಿಗೆ ತೊಡರದೆ, ಸುರಕ್ಷಿತವೂ ಹೌದು. ಕಾರ್ಖಾನೆಗಳಲ್ಲಿ ಕೆಲಸ ಮಾಡುವಾಗ ಯಂತ್ರಗಳಿಗೆ ಬಟ್ಟೆ ಸಿಲುಕಿ ಅಪಾಯವಾಗಬಾರದೆಂಬ ಉದ್ದೇಶದಿಂದ ಹಾಗೂ ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಏಕರೂಪತೆಯ ದೃಷ್ಟಿಯಿಂದ ಪ್ಯಾಂಟ್/ಶರ್ಟ್ ಅನ್ನು ಯೂನಿಫಾರಂ ಆಗಿ ಕಡ್ಡಾಯ ಮಾಡುತ್ತಿದ್ದಾರೆ.

    ಹಾಗೆ ನೋಡಿದರೆ, ಪುರುಷರ ಸಾಂಪ್ರದಾಯಿಕ ಉಡುಪು ಕಚ್ಚೆ/ಧೋತಿ…ಆದರೆ ಪ್ಯಾಂಟ್ -ಬರ್ಮುಡಾ ಧರಿಸುವವರೇ ಜಾಸ್ತಿ ಅಲ್ಲವೆ? ಅದು ಈಗಿನ ಕಾಲದ ಅನುಕೂಲ,ಆದ್ಯತೆ ಅಲ್ಲವೆ?

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: