(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಮಲಗುವ ಮೊದಲು ವರು ದೇವರಿಗೆ ನಮಸ್ಕರಿಸಿ ಹೇಳಿದಳು. “ನಿನ್ನಿಂದ ನನ್ನ ಸಮಸ್ಯೆ ಪರಿಹಾರವಾಯಿತು. ಸದಾ ಕಾಲ ನಿನ್ನ ಆಶೀರ್ವಾದ ನನ್ನ ಮೇಲಿರಲಿ.”
ಅವಳು ಕಣ್ಣುಮುಚ್ಚಿ ಮಲಗಲು ಪ್ರಯತ್ನಿಸಿದಳು. ಶರು ಚಿತ್ರ ಅವಳ ಕಣ್ಣ ಮುಂದೆ ಬಂದಿತು. ತಂಗಿ ತುಂಬಾ ಬದಲಾಗಿದ್ದಾಳೆ ಎನ್ನಿಸಿತು. ಕೀರ್ತಿ ಅವಳನ್ನು ಮದುವೆಯಾಗುವ ನಿರ್ಧಾರ ತೆಗೆದುಕೊಂಡು ತಪ್ಪು ಮಾಡಿದರೇನೋ ಅನ್ನಿಸಿತು. ತಕ್ಷಣ ಚಂದ್ರಾವತಿ ಮುತ್ತಿನ ಹಾರ ಹಾಕಲು ಹೋಗಿದ್ದು, ಶರು ಬೇಡ ಅಂದಿದ್ದು. ಆರ್.ಜಿ. ಗದರಿದ್ದು ನೆನಪಾಯಿತು. ಜೊತೆಯಲ್ಲಿ ಅನಿಕೇತ್‌ನನ್ನು ತಾನು `ಅನಿ ಅಣ್ಣ’ ಎಂದು ಕರೆದಾಗ ಅವನ ಮುಖ ಅರಳಿದ್ದು ಕಣ್ಣೆದುರು ಹಾದುಹೋಯಿತು. ಯಾಕೋ ಅವನ ಮೇಲೆ ಕೋಪ ಬರಲಿಲ್ಲ. ಅವನು ತನ್ನ ಅತಿ ಕಾಳಜಿ ತೋರುತ್ತಾ ಹತ್ತಿರವಾಗುತ್ತಿದ್ದಾನೆ ಅನ್ನಿಸಿದಾಗ ಅವಳು ಮುಗುಳ್ನಕ್ಕಳು.
ಮರುದಿನದಿಂದ ಕಾಲೇಜು ಆರಂಭವಾಯಿತು. ಒಂದು ವಾರ ಕಳೆಯಿತು. ಪ್ರೊ ಆರಾಧ್ಯ ಒಂದು ದಿನ ತರಗತಿಯಲ್ಲಿ ಹೇಳಿದರು. “ಮುಂದಿನ ತಿಂಗಳ ಕಡೆಯ ವಾರದಲ್ಲಿ ಅಣ್ಣಾಮಲೈ ಯೂನಿವರ್ಸಿಟಿಯ ಇಂಗ್ಲೀಷ್ ಡಿಪಾರ್ಟ್ಮೆಂಟ್‌ನವರು ನಮ್ಮಲ್ಲಿಗೆ ಬರ‍್ತಿದ್ದಾರೆ. ಅವರ ಕಡೆಯವರೂ ಪೇಪರ್ ಪ್ರೆಸೆಂಟ್ ಮಾಡ್ತಾರೆ. ನೀವು ಪ್ರಶ್ನೆಗಳನ್ನು ಕೇಳಬೇಕಾಗುತ್ತದೆ. ನಮ್ಮಲ್ಲಿ ಒಬ್ಬರು ಒಳ್ಳೆಯ ಟಾಪಿಕ್ ತೆಗೆದುಕೊಂಡು ಪೇಪರ್ ಪ್ರೆಸೆಂಟ್ ಮಾಡಿ. ಅವರ ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರಿಸಿ.”
ಹಾಗೆಯೇ ಅಣ್ಣಾಮಲೈನವರು ಬಂದು ಒಂದು-ಒಂದೂವರೆ ತಿಂಗಳ ನಂತರ ನಾವು ತಿರುಪತಿಯ ವೆಂಕಟೇಶ್ವರ ಯೂನಿವರ್ಸಿಟಿ ವಿಸಿಟ್ ಮಾಡಬೇಕು. ಅಲ್ಲಿ ಇದೇ ತರಹ ಕಾರ್ಯಕ್ರಮ ಇರುತ್ತದೆ. ಯಾರು ಪೇಪರ್ ಪ್ರೆಸೆಂಟ್ ಮಾಡ್ತೀರ ನಿರ್ಧಾರ ಮಾಡಿ. ನಿಮಗೇನು ಸಹಾಯ ಬೇಕಿದ್ದರೂ ಕೇಳಿ.
“ಸರ್ ದಯವಿಟ್ಟು ನೀವೇ ಯಾರು ಪ್ರೆಸೆಂಟ್ ಮಾಡಬೇಕು ಹೇಳಿ” ಅಮೃತಾ ಕೇಳಿದಳು.
“ನೀನೇ ಮಾಡಮ್ಮ” ಎಂದರು ಆರಾಧ್ಯ.
ಅಮೃತಾಗೆ ಖುಷಿಯಾಯಿತು.
“ಸರ್, ನೀವೇ ಟಾಪಿಕ್ ಕೊಡಿ.”
“ನೀವೂ ಹುಡುಕಿ. ನಾನೂ ನೋಡಿ ಹೇಳ್ತೀನಿ.”
ವರು ನೆಮ್ಮದಿಯ ನಿಟ್ಟುಸಿರುಬಿಟ್ಟಳು. ಈ ಸಲ ಆರಾಧ್ಯ ಸರ್ ತನಗೆ ಜವಾಬ್ಧಾರಿ ವಹಿಸದಿದ್ದುದು ಖುಷಿತಂದಿತ್ತು. ಶರು, ಮದುವೆಗೆ ನಾಲ್ಕು ದಿನವಾದರೂ ಮೀಸಲಿಡಬೇಕೆಂದು ಕೊಂಡಳು.
“ನಿಮಗಾಗಲಿ, ನನಗಾಗಲಿ ಜವಾಬ್ಧಾರಿ ಕೊಡದಿದ್ದುದು ನನಗೆ ಖುಷಿಯಾಯಿತು.”
“ಯಾಕೆ?”
“ಅಪ್ಪ ಹೇಳಲಿಲ್ವಾ? ಮುಂದಿನ ತಿಂಗಳು ಕೊನೆಯವಾರದಲ್ಲೇ ಕೀರ್ತಿ ಮದುವೆ. ಮದುವೆಗೆ ಒಂದು ವಾರ ಮೊದಲೇ ಹೋಗಬೇಕಿಲ್ಲವಾ?”
“ಅಪ್ಪ ಹೇಳಿದ್ರು. ನನಗೂ ಖುಷಿಯಾಯಿತು. ಆದರೆ ನಿಮ್ಮ ಊರಿನಲ್ಲಿ ಮದುವೆ ನಡೆಯುತ್ತಿರುವಾಗ ಹೆಣ್ಣಿನವರಾದ ನಮಗೇನು ಕೆಲಸ ಅಂದುಕೊಂಡೆ?”
“ರೀ ಹಾಗೆಲ್ಲಾ ಅನ್ನಬೇಡಿ. ನಿಮ್ಮ ತಾಯಿ-ತಂದೆಗೆ ನೀವು ಬೇಗ ಹೋಗದಿದ್ರೆ ಬೇಜಾರಾಗತ್ತೆ.”
“ನಾನು ಹೋದರೆ ಶರೂಗೆ ಬೇಜಾರಾಗತ್ತೆ” ಎಂದುಕೊಂಡಳು.
ಮದುವೆ ನಿಶ್ಚಯವಾದ ಮೇಲೆ ಶರು ಫೋನ್ ಮಾಡುವುದನ್ನು ನಿಲ್ಲಿಸಿದ್ದಳು.
“ಶರು ಹೇಗಿದ್ದಾಳಮ್ಮ?” ಇವಳೇ ಕೇಳಿದ್ದಳು.
“ಆರಾಮವಾಗಿದ್ದಾಳೆ. ಕೀರ್ತಿ ಮೊಬೈಲ್ ಪ್ರೆಸೆಂಟ್ ಮಾಡಿದ್ದಾರೆ. ಮೂರು ಹೊತ್ತೂ ಅದರಲ್ಲಿ ಮುಳುಗರ‍್ತಾಳೆ.”
ಶೋಭಾ ಚಿಕ್ಕಮ್ಮ ಫೋನ್ ಮಾಡಿದ್ದಾಗ ಹೇಳಿದ್ದರು. “ಶರು ತುಂಬಾ ಬದಲಾಗಿದ್ದಾಳೆ ವರು. ಅಡಿಗೆ ಮನೆಕಡೆ ಸುಳಿಯಲ್ಲ. ಯಾರು ಯಾವ ಕೆಲಸ ಹೇಳಿದ್ರೂ ಮಾಡಲ್ಲ. “ನಮ್ಮನೆಯಲ್ಲಿ ಅಡಿಗೆಯವರು, ಆಳುಕಾಳು ಇದ್ದಾರೆ. ನಾನು ಕೆಲಸ ಮಾಡುವ ಅವಶ್ಯಕತೆ ಇಲ್ಲ” ಅಂತಾಳೆ.
“ಹೋಗಲಿ ಬಿಡಿ, ಯಾರಿರಲಿ, ಬಿಡಲಿ ನಿಮಗೆ, ಅಮ್ಮನಿಗೆ ಕೆಲಸ ತಪ್ಪಲ್ಲ.”
“ಅದೇನೋ ನಿಜ. ವರೂನ್ನ ಸಪೋರ್ಟ್ ಮಾಡಕ್ಕೆ ದೇವಕಿ ಇದ್ದಾಳೆ. ಈಗ ಅತ್ತಿಗೇನೂ ಬಂದಿದ್ದಾರೆ.”
“ಪಾರು ಅತ್ತೆ ಬಂದಿದ್ದಾರಾ?”
“ಹುಂ. ಮದುವೆ ಸಿದ್ಧತೆ ಮಾಡಕ್ಕೆ ಬಂದೆ ಅಂತಾರೆ. ಕೀರ್ತಿ ಮನೆಯಲ್ಲಿ ಮದುವೆ ನಡೆಯುತ್ತಿದೆ. ಇವರು ಹಪ್ಪಳ, ಸಂಡಿಗೆ ಮಾಡಬೇಕಾ ಹೇಳು. ನಾವೇ ಬೀಗರ ತರಹ ಹೋಗ್ತಿದ್ದೀವಿ. ಶರೂಗೆ ಏನಾದರೂ ಕೆಲಸ ಹೇಳಿದರೆ “ಮದುವೆ ಹುಡುಗಿ ಕೈಯ್ಯಲ್ಲಿ ಏನೂ ಮಾಡಿಸಬೇಡಿ” ಅಂತಾರೆ.
“ಸುಮಿ ಬಂದಿದ್ದಾಳಾ?”
“ಇಲ್ಲ. ಅವಳು ರೇಖಾಗೆ ಸಪೋರ್ಟ್ ಮಾಡ್ತಾಳೆ. ರೇಖಾ ಇವರ ಬಾಯಿ ಮುಚ್ಚಿಸಿದ್ದಾಳೇಂತ ಕಾಣತ್ತೆ.”
“ಮದುವೆ ಭಾನುವಾರ. ನಾವು ಶುಕ್ರವಾರ ಬೆಳಿಗ್ಗೆ ಹೊರಡೋಣ” ಎಂದ ಆರ್.ಜಿ.
“ಗುರುವಾರಾನೇ ಹೊರಡೋಣ. ಅಮ್ಮ ಹಾಗೇ ಹೇಳಿದ್ದಾರೆ.”
“ನೀವು ನಿಮ್ಮ ಅಮ್ಮನ ಜೊತೆ ಹೊರಡ್ತೀರಾ?”
“ಹುಂ. ಗುರುವಾರ ಶುಕ್ರವಾರ ಬೆಂಗಳೂರಿನಲ್ಲಿರ‍್ತೇನೆ. ಶನಿವಾರ ವರಪೂಜೆ ಹೊತ್ತಿಗೆ ನಿಮ್ಮ ಊರಿಗೆ ಬರ‍್ತೀವಿ.”
“ಆಂಟಿ ನೀವು ನನ್ನ ಜೊತೆ ಬನ್ನಿ.”
“ನಾನು ಮದುವೆಗೆ ಬರೋದೋ ಬೇಡವೋಂತ ಯೋಚನೆ ಮಾಡ್ತಿದ್ದೀನಿ.”
“ಯಾಕೆ ಆಂಟಿ?”
“ಇತ್ತೀಚೆಗೆ ತುಂಬಾ ಓಡಾಟ ಆಗಿಹೋಯ್ತು. ನಿಮಗೆ ರಜಾ ಇದ್ದಾಗ ಸಂಧ್ಯಾ ಬಂದಿದ್ದಳಲ್ಲಾ, ಅವಳ ಜೊತೆ ಸುತ್ತಾಡಿದ್ದಾಯ್ತು. ನಿಮ್ಮ ಊರಿಗೆ ಬಂದಿದ್ದಾಯ್ತು. ಎಂಗೇಜ್‌ಮೆಂಟ್‌ಗೆ ಬಂದಿದ್ದಾಯ್ತು……..”
“ಬರುವುದಕ್ಕೆ ಒಪ್ಪಿದ್ರಲ್ಲಾ ಆಂಟಿ?”
“ಶಾರದಾ ಬಗ್ಗೆ ಕೆಲವರು ಕೇಳುವ ಪ್ರಶ್ನೆಗಳಿಗೆ ಉತ್ತರ ಕೊಡುವುದು ಕಷ್ಟವಾಗ್ತಿದೆ ಆರ್.ಜಿ……”
ಅವನು ಒತ್ತಾಯಮಾಡಲಿಲ್ಲ. ಅವರೇ ವಾರುಣಿಗೆ ಉಡಲು ತಮ್ಮ ಸೀರೆಗಳನ್ನು ಐರನ್ ಮಾಡಿಸಿಟ್ಟರು. “ಅದಕ್ಕೆ ತಕ್ಕ ಬ್ಲೌಸ್‌ಗಳೂ ರೆಡಿಯಾದವು.”
“ಗುರುವಾರ ಬೆಳಿಗ್ಗೆ ನಾನು ನಿಮ್ಮನ್ನು ಬೆಂಗಳೂರಿಗೆ ಡ್ರಾಪ್ ಮಾಡಿ, ಅಪ್ಪನ್ನ ಕರೆದುಕೊಂಡು ಬೆಂಗಳೂರು ಬಿಡ್ತೀನಿ.”
“ಗುರುವಾರ ಆರಾಧ್ಯ ಸರ್ ರಜ ಕೊಡ್ತಾರಾ?”
“ನಾನು ಕೇಳಿದ್ದೀನಿ ಕೊಡಲು ಒಪ್ಪಿದ್ದಾರೆ. ಅಮೃತಾ ಪೇಪರ್ ಪ್ರೆಸೆಂಟ್ ಮಾಡ್ತಿರುವುದರಿಂದ ನಾವು ಇರಲೇಬೇಕು ಅನ್ನುವ ಒತ್ತಾಯವಿಲ್ಲ.”
ವರೂಗೆ ಖುಷಿಯಾಯಿತು. ಅವಳು ತಾಯಿಗೆ ಫೋನ್ ಮಾಡಿ ಗುರುವಾರ ಬೆಂಗಳೂರಿಗೆ ಬರುವುದಾಗಿ ತಿಳಿಸಿದಳು. ಬುಧವಾರ ರಾತ್ರಿ 10 ಗಂಟೆಗೆ ಅವಳ ಫೋನ್ ರಿಂಗಾಯಿತು.
“ಹಲೋ ಅಮೃತಾ………”
“ವರು ನಿನ್ನಿಂದ ಒಂದು ಸಹಾಯ ಆಗಬೇಕು………”
“ಏನು ಸಹಾಯ?”
“ನಮ್ಮ ತಂದೆಗೆ ಹಾರ್ಟ್ ಅಟ್ಯಾಕ್ ಆಗಿ ಆಸ್ಪತ್ರೆಗೆ ಸೇರಿಸಿದ್ದೇವೆ. ನನಗೆ ಕೈ ಕಾಲೇ ಆಡ್ತಿಲ್ಲ. ಶುಕ್ರವಾರ ನನಗೆ ಪೇಪರ್ ಪ್ರೆಸೆಂಟ್ ಮಾಡಕ್ಕೆ ಆಗ್ತಿಲ್ಲ………..”
“ಸರ್‌ಗೆ ಹೇಳಬೇಕಿತ್ತು.”
“ನನಗೆ ಹೇಳಕ್ಕೆ ಧೈರ್ಯವಾಗಲಿಲ್ಲ. ರಶ್ಮಿ ಮೇಡಂಗೆ ಹೇಳಿದೆ. ಅವರು ಸರ್ ಹತ್ರ ಮಾತಾಡಿದರಂತೆ. ಸರ್ “ಅವರು ಬೇರೆಯಾರಿಗಾದರೂ ಪೇಪರ್ ಪ್ರೆಸೆಂಟ್ ಮಾಡಲು ಒಪ್ಪಿಸಿ’ ಅಂದರAತೆ. ನಾನು ಈಗ ಯಾರನ್ನು ಒಪ್ಪಿಸಲಿ? ದಯವಿಟ್ಟು ನೀನು ಪೇಪರ್ ಪ್ರೆಸೆಂಟ್ ಮಾಡು.”
“ನಾನು ನನ್ನ ತಂಗಿ ಮದುವೆಗೆ ಹೊರಟಿದ್ದೇನೆ ಕಣೆ.”
“ಆ ವಿಚಾರ ನನಗೆ ಗೊತ್ತು. ಸಾವು-ಬದುಕಿನ ನಡುವೆ ಹೋರಾಡ್ತಿರುವ ನಮ್ಮ ತಂದೆ ಹತ್ತಿರ ಇರುವುದಕ್ಕೆ ಅವಕಾಶ ಮಾಡಿಕೊಡೆ. ಈ ಜನ್ಮದಲ್ಲಿ ನಾನು ನಿನ್ನ ಉಪಕಾರ ಮರೆಯಲ್ಲ.”
“ನಾಡಿದ್ದೇ ಪೇಪರ್ ಪ್ರೆಸೆಂಟೇಷನ್. ಒಂದು ದಿನದಲ್ಲಿ ನಾನು ಹೇಗೆ ಪ್ರಿಪೇರ್ ಆಗಲಿ?”
“ಪ್ಲೀಸ್ ನನ್ನ ಏನೂ ಕೇಳಬೇಡ. ದಯವಿಟ್ಟು ಸಹಾಯ ಮಾಡು” ಅವಳು ಅಳುತ್ತಾ ಕಾಲ್ ಕಟ್ ಮಾಡಿದಳು.
“ಯಾರದು ಫೋನ್ ವರು?”
“ಆಂಟಿ ಅಮೃತಾದು.”
“ಏನಾಯ್ತು? ಯಾಕೆ ಈ ಹೊತ್ತಿನಲ್ಲಿ ಫೋನ್ ಮಾಡಿದ್ದಾಳೆ?”
ವರು ವಿಷಯ ತಿಳಿಸಿದಳು.
“ಆರ್.ಜಿ.ಗೆ ಫೋನ್ ಮಾಡು.”
“ಅವರೇನು ಮಾಡ್ತಾರೆ. ಟೆನ್ಷನ್ ಮಾಡಿಕೊಳ್ತಾರೆ. ಬೇಡ ನಾನು ಪ್ರೆಸೆಂಟ್ ಮಾಡಲು ಪ್ರಿಪೇರ್ ಆಗ್ತೀನಿ.”
“ಯಾವುದಕ್ಕೆ ಪ್ರಿಪೇರ್ ಆಗ್ತೀಯಾ?”
“ಯಾವುದಾದರೂ Poemಗೆ ಪ್ರಿಪೇರ್ ಆಗ್ತೀನಿ.”
“ಅವರು ಒಪ್ಪದಿದ್ರೆ?”
“ಬೇರೆ ಯಾರ ಕೈಲಾದರೂ ಮಾಡಿಸಲಿ. ನನ್ನ ಸಮಸ್ಯೆಗಳು ನನಗೆ ಬೇರೆಯವರಿಗೆ ಏನು? ನಾನು ನಾಳೆ ಹೋಗದಿದ್ರೆ ನಮ್ತಂದೆ-ತಾಯಿಗೆ ಬೇಜಾರು. ಹೋದರೆ ಅಮೃತಾಗೆ ಕಷ್ಟ……….”
ವರು, ರಾಮ್‌ವರ್ಮ ಅವರ ರೂಮ್ ಪ್ರವೇಶಿಸಿ ಲ್ಯಾಪ್‌ಟ್ಯಾಪ್ ಮುಂದೆ ಕುಳಿತಳು. ಚಂದ್ರಾವತಿ ಆರ್.ಜಿ.ಗೆ ಫೋನ್ ಮಾಡಿ ವಿಷಯ ತಿಳಿಸಿದರು.
“ಅಮೃತಾ ನನಗೆ ಫೋನ್ ಮಾಡಿದ್ರು. ನಾನು ಏನೂ ಹೇಳುವ ಸ್ಥಿತಿಯಲ್ಲಿಲ್ಲ. ವಾರುಣಿ ಒಪ್ಪಿರುವಾಗ ‘ಬೇಡ’ ಅಂತ ಹೇಳಿದರೂ ಅವರು ಕೇಳಲ್ಲ……..”
“ಹೌದು, ನೀನು ನಾಳೆ ಬೆಳಿಗ್ಗೆ ಬರಬೇಡ.”
“ಅದು ಹೇಗಾಗತ್ತೆ? ನಾನು ಒಬ್ಬನೇ ಬೆಂಗಳೂರಿಗೆ ಹೋದರೆ ನೂರೆಂಟು ಪ್ರಶ್ನೆ ಕೇಳ್ತಾರೆ.”
“ನಾಳೆ ವರು ತಾಯಿಗೆ ಏನು ಹೇಳೋದು?”
“ನಾವು ಶುಕ್ರವಾರ ಒಟ್ಟಿಗೆ ಬರ‍್ತೀವಿ” ಅಂತ ಹೇಳಿಬಿಡಿ.
ಮರುದಿನ ಬೆಳಗಾಗುವ ವೇಳೆಗೆ ವಾರುಣಿ ಪ್ರೆಸೆಂಟೇಷನ್‌ಗೆ ವರ್ಡ್ಸ್ ವರ್ತ್ ನ ಡ್ಯಾಪೋಡಿಲ್ಸ್ ಆರಿಸಿದ್ದಳು. ಅವಳು ಆರಾಧ್ಯ ಸರ್ ಬಳಿ ಹೇಳಿದಾಗ “ನಿಮ್ಮ ಕಷ್ಟ ನನಗೆ ಅರ್ಥವಾದುತ್ತದೆ. ತುಂಬಾ ಒಳ್ಳೆಯ ಪದ್ಯ ಆರಿಸಿದ್ದೀರ. ಬನ್ನಿ ಅದರ ಬಗ್ಗೆ ಡಿಸ್ಕಸ್ ಮಾಡೋಣ” ಎಂದರು.
ಅವಳು ಅಂದು ಕಾಲೇಜು ಬಿಟ್ಟಾಗ ಆರುಗಂಟೆಯಾಗಿತ್ತು. ಬಕುಳಾ ಅವಳನ್ನು ಆಟೋದಲ್ಲಿ ಕರೆತಂದಳು.
“ವರು ಟೂ ವೀಲರ್ ಎಲ್ಲಿ?”
“ಯಾಕೋ ಸುಸ್ತಾದ ಹಾಗೆ ಕಾಣ್ತಿದ್ದಳು. ಅದಕ್ಕೆ ಆಟೋಲಿ ಕರೆತಂದೆ. ರವಿ ಟೂ ವೀಲರ್ ತೊಗೊಂಡು ಹೋಗಿದ್ದಾನೆ.”
ರಾತ್ರಿ 10-10.30ಯಿಂದ ನಿದ್ರೆ ಮಾಡಿಲ್ಲ. ಹೊಟ್ಟೆಗೆ ಸರಿಯಾಗಿ ತಿಂದಿಲ್ಲ.
“ವರು ಈಗ ಏನಾದರೂ ತಿಂದು ಮಲಗು. ಎಚ್ಚರವಾಗುವ ಹೊತ್ತಿಗೆ ಫ್ರೆಷ್ ಆಗ್ತೀಯ.”
“ನನಗೆ ತುಂಬಾ ಟೆನ್ಷನ್ ಆಗ್ತಿದೆ. ನಾಳೇನೇ ಪ್ರೆಸೆಂಟೇಷನ್. ಸರ್ ಹೇಳಿದ ಪಾಯಿಂಟ್ಸ್ ಸೇರಿಸಬೇಕು. ಪ್ರಿಪೇರ್ ಆಗಲೇಬೇಡು.”
“ಆರ್.ಜಿ. ಬಂದಿದ್ದ. ನಾಳೆ ಸಾಯಂಕಾಲ ನೇರ ಹಳ್ಳಿಗೆ ಹೋಗೋಣ ಅಂದ. ನಾನೂ ಬರ‍್ತೀನಿ.”
“ಥ್ಯಾಂಕ್ಸ್ ಆಂಟಿ” ಎಂದಳು.
ರಾತ್ರಿಯೆಲ್ಲಾ ಅವಳು ಪ್ರಿಪೇರ್ ಆದಳು. ಅವಳಿಗೆ ಆರಾಧ್ಯ ಸರ್ ಹೇಳಿದ್ದ ಪಾಯಿಂಟ್ಸ್ ತುಂಬಾ ಇಷ್ಟವಾಗಿತ್ತು. ಆದರೆ ಅವುಗಳನ್ನು ಅವಳು ಮೊದಲು ಅರ್ಥಮಾಡಿಕೊಳ್ಳಬೇಕಾಗಿತ್ತು.
ಮರುದಿನ ಬೆಳಿಗ್ಗೆ ಆರಾಧ್ಯ ಸರ್‌ಗೆ ಹೇಳುವವರೆಗೂ ಅವಳಿಗೆ ಸಮಾಧಾನವಿರಲಿಲ್ಲ.
ರಾತ್ರಿ 9.30ಗೆ ಆರಾಧ್ಯ ಸರ್ ಫೋನ್ ಮಾಡಿದರು.
“ವಾರುಣಿಯವರೇ ನೀವು ಪೇಪರ್ ಪ್ರಿಪೇರ್ ಮಾಡಿದ ಮೇಲೆ ನನಗೆ ಮೇಲ್ ಮಾಡಿ. ನಾನು ಕರೆಕ್ಷನ್ಸ್ ಇದ್ದರೆ ಹೇಳ್ತೀನಿ.”
“ಓ.ಕೆ. ಸರ್. ಥ್ಯಾಂಕ್ ಯು.”
“ಇದುವರೆಗೂ ನೀವು ಎಲ್ಲಾ ಪ್ರೆಸೆಂಟೇಷನ್ಸ್ ಚೆನ್ನಾಗಿ ಮಾಡಿದ್ದೀರ. ಧೈರ್ಯವಾಗಿರಿ.”
“ಓ.ಕೆ ಸರ್.”
ಅವಳು ಪದ್ಯವನ್ನು ಎರಡು ದೃಷ್ಟಿಕೋನದಿಂದ ವಿಶ್ಲೇಷಿಸಿ ಕಳಿಸಿದಳು. ನಿದ್ರೆ ಬಂದಂತಾಯಿತು. ಅವಳು ಕುಳಿತಲ್ಲೇ ಒರಗಿದಳು. ಎಚ್ಚರವಾದಾಗ 3 ಗಂಟೆ. ಆರಾಧ್ಯ ಸರ್ ಕರೆಕ್ಷನ್ಸ್ ಹೇಳಿದ್ದರು.
ಅವಳು ಪುನಃ ಟೈಪ್ ಮಾಡಿದಳು.
ಬೆಳಿಗ್ಗೆ ಎದ್ದು ಸಿದ್ಧವಾದಳು. ಬಕುಳಾ ಆಟೋದಲ್ಲಿ ಬಂದಳು. ಆರ್.ಜಿ. ಕಾಣಿಸಲಿಲ್ಲ. ಬಂದವರನ್ನು ಸ್ವಾಗತಿಸಿ, ಪರಿಚಯ ಮಾಡಿಕೊಡುವ ಕಾರ್ಯಕ್ರಮವಿತ್ತು. ನಂತರ ಅಣ್ಣಾಮಲೈ ಯೂನಿವರ್ಸಿಟಿಯ ಸ್ಟೂಡೆಂಟ್ ಶೇಕ್ಸ್ಪಿಯರ್‌ನ ಕಿಂಗ್‌ಲಿಯರ್‌ನ ಪಾತ್ರದ ಬಗ್ಗೆ ವಿಶ್ಲೇಷಣೆ ಮಾಡಿದ. ಮಧ್ಯಾಹ್ನ ಊಟದ ನಂತರ ವಾರುಣಿ ಪೇಪರ್ ಪ್ರೆಸೆಂಟ್ ಮಾಡಿದಳು. ತುಂಬಾ ಚೆನ್ನಾಗಿ ಬಂತು. ಅಣ್ಣಾಮಲೈ ಯೂನಿವರ್ಸಿಟಿಯ ಡಾ|| ಅಶೋಕನ್ ಬಹಳ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಕಾದಂಬರಿಯ ಹಿಂದಿನ ಪುಟ ಇಲ್ಲಿದೆ : https://surahonne.com/?p=44831
(ಮುಂದುವರಿಯುವುದು)

–ಸಿ.ಎನ್. ಮುಕ್ತಾ, ಮೈಸೂರು
