ಒಂದೂರಿನಲ್ಲಿ ಒಬ್ಬ ಅನಾಥನಾದ ಯುವಕನೊಬ್ಬನಿದ್ದ. ಅವನು ಜೀವನ ನಿರ್ವಹಣೆಗಾಗಿ ಒಬ್ಬ ಧನವಂತ ವ್ಯಾಪಾರಿಯ ಬಳಿ ಸಹಾಯಕನಾಗಿ ಕೆಲಸ ಮಾಡಿಕೊಂಡಿದ್ದ. ಆತನು ಬಹಳ ಬುದ್ಧಿವಂತ. ಆದರೆ ದಟ್ಟದರಿದ್ರ. ಆದುದರಿಂದ ಬೇರೇನೂ ಮಾಡುವುದು ಸಾಧ್ಯವಿರಲಿಲ್ಲ. ವ್ಯಾಪಾರಿಯ ಗೋಡೌನಿನಲ್ಲೇ ಅವನು ವಾಸಮಾಡಿಕೊಂಡಿದ್ದ. ಹೇಗೋ ಕಾಲ ಕಳೆಯುತ್ತಿತ್ತು. ಒಮ್ಮೆ ವ್ಯಾಪಾರಕ್ಕಾಗಿ ದೂರದೇಶಕ್ಕೆ ಹೋಗಬೇಕಾಯಿತು. ಸಾಮಾನು ಸರಂಜಾಮುಗಳನ್ನೆಲ್ಲ ಹಡಗಿನಲ್ಲಿ ಹೇರಿಕೊಂಡು ಸಹಾಯಕ್ಕೆಂದು ವ್ಯಾಪಾರಿಯು ಯುವಕನನ್ನೂ ಕರೆದುಕೊಂಡು ಹೊರಟ. ಸಮುದ್ರ ಪ್ರಯಾಣದಲ್ಲಿ ಬಿರುಗಾಳಿ ಬೀಸತೊಡಗಿತು. ಅಲೆಗಳು ಎತ್ತರೆತ್ತರಕ್ಕೆ ಏಳತೊಡಗಿ ಹಡಗು ಅಲ್ಲೋಲಕಲ್ಲೋಲವಾಯಿತು. ಬಿರುಮಳೆ ಕೂಡ ಪ್ರಾರಂಭವಾಗಿ ಹಡಗೇ ಮುಳುಗಿತು. ವಸ್ತುಗಳು ದಿಕ್ಕಾಪಾಲಾದವು. ಯಾರೇನಾದರೋ ತಿಳಿಯಲಿಲ್ಲ.
ಮಾರನೆಯ ದಿನ ಸಮುದ್ರ ತೀರವೊಂದರಲ್ಲಿ ಆ ಯುವಕ ಕಣ್ಣುತೆರೆದ. ಅಲ್ಲಿಯವರೆಗೆ ಅವನಿಗೆ ಪ್ರಜ್ಞೆಯೇ ಇರಲಿಲ್ಲ. ತಾನು ಬದುಕಿದ್ದೇನೆ ಎಂದು ಖಚಿತವಾದಾಗ ಎಲ್ಲಿ ಹೋಗುವುದೆಂದು ತಿಳಿಯದೆ ತೀರದಲ್ಲಿ ಅಡ್ಡಾಡತೊಡಗಿದ್ದ. ಅಷ್ಟರಲ್ಲಿ ಅವನಿದ್ದಲ್ಲಿಗೆ ಕೆಲವು ಜನರು ಬಂದರು. ಅವನನ್ನು ಗೌರವವಾಗಿ ತಮ್ಮ ಜೊತೆಯಲ್ಲಿ ಬರಬೇಕೆಂದು ಕರೆದುಕೊಂಡು ಹೋದರು. ಅವನಿಗೇನೂ ಅರ್ಥವಾಗದೇ ಅವರೊಡನೆ ಹೋದ. ಅವರು ಅವನನ್ನು ಒಂದು ಭವ್ಯವಾದ ಅರಮನೆಗೆ ಕರೆತಂದರು. ಅಲ್ಲಿ ವೃದ್ಧನಾದ ರಾಜನಿದ್ದನು. ಅವನು ಈತನನ್ನು ಸ್ವಾಗತಿಸಿ ಅವನಿಗೆ ಎಲ್ಲ ಅನುಕೂಲಗಳನ್ನು ಮಾಡಿಕೊಟ್ಟ. ಊಟ, ವಸತಿ ಎಲ್ಲವೂ ಭವ್ಯವಾಗಿದ್ದು ಯುವಕನಿಗೆ ಇದೇನು ಆಶ್ಚರ್ಯವೆಂದು ಅರ್ಥವಾಗಲಿಲ್ಲ. “ನಾನು ಎಲ್ಲಿದ್ದೇನೆ? ಇದು ಯಾವ ದೇಶ? ನನ್ನನ್ನೇಕೆ ಈ ಜನ ಇಷ್ಟೊಂದು ಗೌರವದಿಂದ ಕರೆತಂದರು?” ಎಂದು ಪ್ರಶ್ನಿಸಿದ.
ಅದಕ್ಕೆ ವೃದ್ಧ ರಾಜನು “ನೀನೇನು ಭಯಪಡಬೇಕಿಲ್ಲ. ಏಕೆಂದರೆ ಇದೊಂದು ವಿಚಿತ್ರ ದ್ವೀಪ. ಇಲ್ಲಿಗೆ ನಾನು ರಾಜನಾಗಿದ್ದೇನೆ. ಇಲ್ಲಿ ಜನರು ತಮ್ಮ ಮುಂದಿನ ರಾಜನನ್ನು ಆಯ್ಕೆ ಮಾಡಲು ಒಂದು ವಿಶೇಷ ಕ್ರಮವನ್ನು ಆಚರಿಸುತ್ತಾರೆ. ಇಲ್ಲಿಯ ಜನರಲ್ಲೇ ಯಾರನ್ನಾದರೂ ಉತ್ತರಾಧಿಕಾರಿಯನ್ನಾಗಿ ಆರಿಸಿದರೆ ಅವನು ನಿಷ್ಪಕ್ಷಪಾತವಾಗಿ ನಡೆದುಕೊಳ್ಳುವುದಿಲ್ಲವೆಂದು ಪ್ರತಿ ಬಾರಿಯೂ ಹೊರಗಿನವರನ್ನೇ ಆರಿಸುತ್ತಾರೆ. ಸಮುದ್ರ ತೀರದಲ್ಲಿ ಹೀಗೆ ಅದೃಷ್ಟವಶಾತ್ ಬದುಕಿ ಉಳಿದವನನ್ನು ಜನರು ಇವನು ದೇವರ ವರಪ್ರಸಾದವೆಂದು ಭಾವಿಸುತ್ತಾರೆ. ವೃದ್ಧನಾದ ರಾಜನ ಉತ್ತರಾಧಿಕಾರಿಯೆಂದು ಅವನನ್ನೇ ಆಯ್ಕೆ ಮಾಡುತ್ತಾರೆ. ಹೊಸ ರಾಜನನ್ನು ಪಟ್ಟಕ್ಕೆ ಕುಳ್ಳಿರಿಸಿದ ಮೇಲೆ ಹಳೆಯ ರಾಜನನ್ನು ಇಲ್ಲಿಂದ ದೂರದಲ್ಲಿರುವ ಒಂದು ದ್ವೀಪದ ದಟ್ಟವಾದ ಅರಣ್ಯ ಪ್ರದೇಶಕ್ಕೆ ಕೊಂಡೊಯ್ದು ಅಲ್ಲಿಯೇ ಬಿಟ್ಟು ಬಂದು ಬಿಡುತ್ತಾರೆ. ಅಲ್ಲಿ ಅವನು ಯಾವುದೋ ಕಾಡುಪ್ರಾಣಿಗೆ ಆಹಾರವಾಗಿಯೋ, ಅಥವಾ ಬೇರೆ ರೀತಿಯಲ್ಲಿಯೋ ಮೃತನಾಗುತ್ತಾನೆ. ಪ್ರಜೆಗಳು ಮಾತ್ರ ಅದರ ಬಗ್ಗೆ ಚಿಂತಿಸುವುದಿಲ್ಲ. ಈ ಪದ್ಧತಿ ಅನೂಚಾನವಾಗಿ ತಲೆತಲಾಂತರದಿಂದ ಇಲ್ಲಿ ಆಚರಣೆಯಲ್ಲಿದೆ. ಈಗ ನೀನು ಸಿಕ್ಕಿದ್ದೀಯೆ. ಮುಂದಿನ ರಾಜನು ನೀನೇ. ನನ್ನ ಅವಧಿ ಮುಗಿದಿದೆ. ನಾನು ಅರಣ್ಯಕ್ಕೆ ಹೋಗುತ್ತೇನೆ” ಎಂದನು. ವಿಚಿತ್ರವಾದ ಆಚರಣೆ ಕ್ರೂರವೆನ್ನಿಸಿದರೂ ವಿಧಿಯಿಲ್ಲದೆ ಒಪ್ಪಿಕೊಂಡು ಯುವಕನು ಹೊಸ ರಾಜನಾದ. ಹಳೆಯ ರಾಜನನ್ನು ಬಿಟ್ಟುಬರಲು ತಾನೂ ಜನಗಳ ಜೊತೆಯಲ್ಲಿ ಅರಣ್ಯ ಪ್ರದೇಶವಿದ್ದ ದ್ವೀಪಕ್ಕೆ ಹೋದ. ಅಲ್ಲಿ ಜನವಸತಿಯೇ ಇರಲಿಲ್ಲ. ಗೊಂಡಾರಣ್ಯ. ಅಲ್ಲಿಂದ ರಾಜಧಾನಿಗೆ ಹಿಂದಿರುಗುವಾಗಲೇ ಹೊಸ ರಾಜನು ಒಂದು ಭವಿಷ್ಯದ ಯೋಜನೆಯನ್ನು ಹಾಕಿಕೊಂಡನು.
ತನ್ನ ಆಡಳಿತದ ಕಾಲದಲ್ಲಿ ಬುದ್ಧಿವಂತನಾದ ಯುವಕರಾಜನು ಪ್ರಜಾಜನರಿಗೆ ಅನುಕೂಲವಾಗುವಂತಹ ಅನೇಕ ಕೆಲಸಗಳನ್ನು ಕೈಗೊಂಡು ಜನಪ್ರಿಯನಾದ. ಜೊತೆಗೆ ಪ್ರತಿವರ್ಷವೂ ದಟ್ಟ ಅರಣ್ಯವಿದ್ದ ದ್ವೀಪವನ್ನೂ ಹಂತಹಂತವಾಗಿ ಅಭಿವೃದ್ಧಿಪಡಿಸತೊಡಗಿದ. ಅಲ್ಲಿ ಪಟ್ಟಣವೊಂದು ತಲೆಯೆತ್ತಿತು. ಜನವಸತಿಯೂ ಪ್ರಾರಂಭವಾಯಿತು. ಹೆದರಿಕೊಳ್ಳುವಂತಹ ಪರಿಸ್ಥಿತಿ ಬದಲಾಗಿ ಅದೂ ಕೂಡ ನಾಗರಿಕರ ನಾಡಾಯಿತು. ಹಲವಾರು ವರ್ಷಗಳ ಕಾಲ ಅವನು ಎರಡೂ ದ್ವೀಪಗಳ ರಾಜ್ಯದಲ್ಲಿ ಆಡಳಿತ ನಡೆಸಿದ. ಅವನೂ ವೃದ್ಧನಾದ ನಂತರ ಅವನನ್ನು ಬದಲಾಯಿಸುವ ಸರದಿ. ಆದರೆ ಜನರು ಪ್ರಜಾಹಿತವನ್ನು ಬಯಸುವ ಆ ರಾಜನನ್ನು ಬದಲಾಯಿಸುವ ಆಲೋಚನೆಯನ್ನೇ ಮರೆತಂತೆ ಇದ್ದರು. ಕೊನೆಗೆ ಮುಂದಿನ ಉತ್ತರಾಧಿಕಾರಿಯನ್ನು ಆಯ್ಕೆ ಮಾಡಿ ನೇಮಿಸುವ ಕೆಲಸವನ್ನು ರಾಜನಿಗೇ ವಹಿಸಿದರು. ಅದರಂತೆ ಹೊಸರಾಜನು ಅಧಿಕಾರ ವಹಿಸಿಕೊಂಡ ನಂತರ ವೃದ್ಧರಾಜನನ್ನು ಬಿಟ್ಟುಬರಲು ಮತ್ತೊಂದು ದ್ವೀಪಕ್ಕೆ ಕರೆದೊಯ್ದರು. ಆದರೆ ಅಲ್ಲಿಯ ಚಿತ್ರ ಈಗ ಬದಲಾಗಿ ಹೋಗಿತ್ತು. ಅದೊಂದು ಅರಣ್ಯದಿಂದ ಸುತ್ತುವರಿದಿದ್ದ ಸುಂದರ ನಗರವಾಗಿತ್ತು. ಅಲ್ಲಿ ವೃದ್ಧರಾಜನಿಗೆ ಬೇಕಾದ ಎಲ್ಲ ಸೌಲಭ್ಯಗಳೂ ಲಭ್ಯವಿರುವ ಪುಟ್ಟ ಅರಮನೆಯೂ ಇತ್ತು. ಇವೆಲ್ಲವನ್ನೂ ವೃದ್ಧನು ಮುಂದಾಲೋಚನೆಯಿಂದ ಮೊದಲೇ ಸಿದ್ಧಮಾಡಿಕೊಂಡಿದ್ದರಿಂದ ಅಂತ್ಯಕಾಲವನ್ನು ಸುಖವಾಗಿ ಅಲ್ಲಿ ಕಳೆಯುವಂತಾಯಿತು. ಆತನ ಭವಿಷ್ಯದ ವಿವೇಚನೆಯಿಂದ ಇದು ಸಾಧ್ಯವಾಯಿತು.

ಸಂಗ್ರಹಣೆ ಮತ್ತು ರೇಖಾಚಿತ್ರ ರಚನೆ : ಬಿ.ಆರ್.ನಾಗರತ್ನ, ಮೈಸೂರು

