ಮತ್ತೆ ಬಂತು ರಾಜ್ಯೋತ್ಸವ
ಮತ್ತೆ ಬಂತು ರಾಜ್ಯೋತ್ಸವ
ಬಡಿದೆಬ್ಬಿಸಿ ಕನ್ನಡ ಅಭಿಮಾನವ
ಉದಯವಾದ ಕರುನಾಡ
ಅಭ್ಯುದಯಕಾಗಿ ಪಣತೊಡುವ
ಪ್ರತಿ ಕನ್ನಡಿಗನ ಎದೆಯಲ್ಲಿ
ಜಾಗೃತಗೊಳಿಸೋ ಉತ್ಸವ
ನಾಡು ನುಡಿ ನೆಲ ಜಲಗಳ
ರಕ್ಷಣೆಗೆ ಅಣಿಗೊಳಿಸುವ
ಮಲಗಿದ ಸ್ವಾಭಿಮಾನವ
ಎಚ್ಚರಿಸುವ ಮಹೋತ್ಸವ
ತಾನಿರುವ ಜಾಗದಲ್ಲೇ
ತನ್ನ ತಾಯ್ನಾಡಿಗೆ ನಮಿಸುವ
ಕನ್ನಡ ಕುಲವನ್ನೆಲ್ಲಾ ಸೇರಿಸಿ
ಸಂಭ್ರಮಿಸೋ ಈ ಉತ್ಸವ
ಇತಿಹಾಸದ ಪುಟ ತಿರುವಿ
ನಾಡ ಕಟ್ಟಿದವರನೆಲ್ಲಾ ನೆನೆದು
ಎಲ್ಲಿದ್ದರೂ ಹೇಗಿದ್ದರೂ ಕನ್ನಡಿಗ
ತಾನೆಂಬುದ ನೆನಪಿಸುವ ಮಹೋತ್ಸವ
ವರ್ತಮಾನದ ಸ್ಥಿತಿಗತಿಯನು
ಅವಲೋಕಿಸಿ ಅಭಿಯೋಜಿಸಿ
ನಾಡು ನುಡಿಗೆ ರಕ್ಷಣೆಯ ಕೋಟೆ
ಕಟ್ಟುವ ಅಭಿಮಾನಿಗಳ ಉತ್ಸವ
ಸಾಧಕರನು ಸನ್ಮಾನಿಸಿ
ಕನ್ನಡ ತನವ ತೋರ್ಪಡಿಸಿ
ತಾಯಿ ಭುವನೇಶ್ವರಿಗೆ ನಮಿಸಿ
ಕನ್ನಡ ಕಂಕಣ ತೊಡುವ ಮಹೋತ್ಸವ
– ಅಮುಭಾವಜೀವಿ