ಕಡೆದಿಟ್ಟ ದಿಟ್ಟರು
ಶಾಂತರು ಅವಿಶ್ರಾಂತರು
ವಿನೀತರು ವಂದ್ಯರು
ಹಮ್ಮುಬಿಮ್ಮುಗಳ ತೊರೆದವರು
ಸಹಮತದಿ ನಡೆವವರು
ಕರ್ನಾಟಕದ ದಿಟ್ಟರು
ಎಂದು ಬೆನ್ನುತಟ್ಟಿಕೊಳ್ಳೆವು
ಕೈ ಚಾಚಿದರೆ ಮೈದಡವಿ
ದುಡಿಸದೆಲೆ ಉಪಚರಿಸಿ
ಅಶನ ಅರಿವೆ ಅಂದಣವ
ನೀಡಿ ಅಂದಗಾಣುವವರು
ಕುಶಲಿಗರಲ್ಲಿಕಲಶಪ್ರಾಯ
ಕನ್ನಡಿಗರು ಎಂದು ಬೀಗೆವು
ಜಗದ ಕಷ್ಟಗಳೆಲ್ಲ
ನನ್ನದೆನ್ನುವ ಹೃದ್ಯರು
ಸಹನೆಗಾನದ ಹಸನು ಮನಸಿನ
ಸಾಮರಸ್ಯದ ಹರಿಕಾರರು
ಕಂನಾಡ ಚೆನ್ನುಡಿಗರು
ಎಂದು ಡಂಗುರಿಸೆವು
ಕೊಡುಗೈಯ ಕರ್ಣರು
ರಾಷ್ಟ್ರ ಸಮ್ಮಾನಕ್ಕಾದ್ಯರು
ಆಢ್ಯ ಅಪ್ರತಿಮ ಅಜಾತರು
ನಿಸ್ವಾರ್ಥಿ ನಿರಪೇಕ್ಷರು
ಕರುನಾಡ ಕಂಪಿನವರು
ಎಂದು ಸ್ವಘೋಷಕರಾಗೆವು
ರಸಾಸ್ವಾದಿ ಸಂಪನ್ನರು
ಕಲಾರಾಧಕ ಕುಲರು
ಕೆಚ್ಚಿಗೆ ಅನ್ವರ್ಥ ಅನುರೂಪರು
ಅಸೀಮ ವೀರರ ಬೀಡು
ಕುಶಾಗ್ರಮತಿಗಳ ಕಣಜ ಕರ್ಣಾಟ
ಎಂದು ಅಹಮಿಸೆವು
ಚಾರಿತ್ರರು ಛಲದಂಕರು
ಸಾಪೇಕ್ಷ ಸಾಕ್ಷರರು
ಸುಮನಸ ಸೂಕ್ಷ್ಮರು
ನಾಡು ನುಡಿ ಕಡೆದಿಟ್ಟ
ಕರ್ಮಿಷ್ಠರು ಕನ್ನಡಿಗರು
ಎಂದೆಂದೂ ಪೂರ್ವಜರ ನೆನೆದೇವು
.
– ಅನಂತ ರಮೇಶ್
ತುಂಬ ಅರ್ಥಗರ್ಭಿತ ಕವನ .ಕನ್ನಡಿಗರು ಅಜಾತ ಶತ್ರುಗಳು ಎನ್ನುವದು ಪೂರ್ಣ ಸತ್ಯ ಆದರೆ ನಮ್ಮ ಭಾಷೆಯ ಬಗ್ಗೆ ದುರಭಿಮಾನ ಅಲ್ಲದಿದ್ದರೂ
ಸದಭಿಮಾನದ ಕೊರತೆ ಇದೆ ಎನ್ನಿಸುತ್ತಿದೆ. ಜೈ ಕರ್ನಾಟಕ ! ಜೈ ಕನ್ನಡ !!
ನಿಮ್ಮ ಅಭಿಪ್ರಾಯಕ್ಕೆ ಪೂರ್ಣ ಸಮ್ಮತವಿದೆ. ಧನ್ಯವಾದಗಳು.