ಹಾಗಲಕಾಯಿಯ ಬಾಳಕ
ಹಾಗಲಕಾಯಿಯು ನಾಲಿಗೆಗೆ ಕಹಿ, ಆದರೆ ಉದರಕ್ಕೆ ಸಿಹಿ. ಕಹಿರುಚಿ ಹೊಂದಿದ್ದರೂ ಬಹಳ ಔಷಧೀಯ ಗುಣಗಳನ್ನು ಹೊಂದಿರುವ ಹಾಗಲಕಾಯಿಯನ್ನು ಹಲವರು ಇಷ್ಟಪಟ್ಟು ತಿಂದರೆ, ಇನ್ನು ಕೆಲವರು ಕಷ್ಟಪಟ್ಟು ಸೇವಿಸುತ್ತಾರೆ. ಮಧುಮೇಹದಿಂದ ಬಳಲುವವರು ಹಾಗಲಕಾಯಿಯನ್ನು ಯಾವ ರೂಪದಲ್ಲಾದರೂ ಸೇವಿಸುವುದು ಉತ್ತಮ.
ಹಾಗಲಕಾಯಿಯನ್ನು ಬಳಸಿ ಪಲ್ಯ, ಗೊಜ್ಜು, ಸಾಸಿವೆ, ಮೆಣಸ್ಕಾಯಿ… ಮುಂತಾದ ವಿವಿಧ ಅಡುಗೆಗಳನ್ನು ತಯಾರಿಸುವಾಗ, ರುಚಿ ಹೆಚ್ಚಿಸಲೆಂದು ಮತ್ತು ಕಹಿಯನ್ನು ಮಾಸಲೆಂದು ಹೆಚ್ಚುವರಿ ಉಪ್ಪು, ಹುಣಸೆಹಣ್ಣಿನ ರಸ, ಬೆಲ್ಲ ಮತ್ತು ಮಸಾಲೆ ಹಾಕಬೇಕಾಗುತ್ತದೆ. ಅತಿಯಾದ ಮಸಾಲೆ,ಖಾರ ಯಾರಿಗೂ ಒಳ್ಳೆಯದಲ್ಲ. ಇನ್ನು ಕೆಲವರು ಕಹಿ ಕಡಿಮೆಯಾಗಲೆಂದು ಹೋಳುಗಳನ್ನು ಕುದಿಸಿದ ನೀರನ್ನು ಬಸಿದು ಚೆಲ್ಲುವುದೂ ಇದೆ. ಈ ವಿಧಾನದಲ್ಲಿ ಸ್ವಲ್ಪ ಸತ್ವಾಂಶ ನಷ್ಟವಾಗುವುದು.
ಈಗ ಬಿಳಿ ಮತ್ತು ಹಸಿರು ಬಣ್ಣದ ಹಾಗಲಕಾಯಿಗಳು ಧಾರಾಳವಾಗಿ ಲಭಿಸುತ್ತವೆ. ಬಿಸಿಲೂ ಜೋರಾಗಿದೆ. ಹಾಗಾಗಿ, ಅತಿ ಸುಲಭವಾಗಿ, ಅತಿ ಕಡಿಮೆ ಮಸಾಲೆ ಬೆರೆಸಿ ‘ಬಾಳಕ’ ತಯಾರಿಸಲು ಸದವಕಾಶವಿದು. ತಯಾರಿಸುವ ವಿಧಾನ:
1. ಎರಡು ಕಿಲೋ ಹಾಗಲಕಾಯಿಗಳನ್ನು ತೊಳೆದು ಬಿಲ್ಲೆಗಳಾಗಿ ಕತ್ತರಿಸಿ.
2. ಹೆಚ್ಚಿದ ಬಿಲ್ಲೆಗಳನ್ನು ದೊಡ್ಡ ಪಾತ್ರೆಯಲ್ಲಿ ಹಾಕಿ, 2 ಚಮಚ ಉಪ್ಪು, ಬೇಕಿದ್ದರೆ ಅರ್ಧ ಚಮಚ ಖಾರಪುಡಿ ಹಾಕಿ ಚೆನ್ನಾಗಿ ಬೆರೆಸಿ.
3. ಅರ್ಧ ಗಂಟೆಯ ನಂತರ ಇನ್ನೊಮ್ಮೆ ಬಿಲ್ಲೆಗಳನ್ನು ಕುಲುಕಿಸಿ, ಉಪ್ಪು-ಖಾರ ಹಿಡಿದಿದೆಯೇ ಎಂದು ಗಮನಿಸಿ.
4. ಅಂಗಳದಲ್ಲೋ, ತಾರಸಿಯಲ್ಲೋ ಬಿಸಿಲು ಬೀಳುವ ಜಾಗದಲ್ಲಿ ಶುಭ್ರವಾದ ಬಟ್ಟೆ/ಪ್ಲಾಸ್ಟಿಕ್/ಚಾಪೆ ಹಾಸಿ ಅದರ ಮೇಲೆ ಬಿಲ್ಲೆಗಳನ್ನು ಹರವಿ.
5. ಈ ರೀತಿ ಮೂರು ದಿನ ಬಿಸಿಲಿನಲ್ಲಿ ಒಣಗಿಸಿದರೆ ‘ಹಾಗಲಕಾಯಿ ಬಾಳಕ’ ಸಿದ್ಧ.
ಬಾಳಕಗಳನ್ನು ಡಬ್ಬಿಯಲ್ಲಿ ಹಾಕಿಟ್ಟರೆ ಬೇಕೆನಿಸಿದಾಗ ಎಣ್ಣೆಯಲ್ಲಿ ಕರಿಯಬಹುದು. ಹೆಚ್ಚು ಎಣ್ಣೆ ಬೇಡ ಎನಿಸಿದರೆ, ತವಾ/ಒಗ್ಗರಣೆ ಸೌಟಿನಲ್ಲಿ ಒಂದು ಚಮಚ ಎಣ್ಣೆ ಹಾಕಿ ಬಾಳಕಗಳನ್ನು ಹುರಿದರೂ (Shallow fry) ಗರಿಗರಿಯಾಗಿ ಅರಳುತ್ತದೆ.
ಮೊಸರನ್ನದೊಂದಿಗೆ ಗರಿಗರಿಯಾದ ಹಾಗಲಕಾಯಿಯ ಬಾಳಕವನ್ನು ನೆಂಚಿಕೊಳ್ಳಲು ರುಚಿಯಾಗುತ್ತದೆ. ಇಷ್ಟ ಇದ್ದವರು, ಚಿಪ್ಸ್ ನಂತೆ ಹಾಗೆಯೇ ತಿನ್ನಬಹುದು. ಈ ರೀತಿ ತಯಾರಿಸಿದ ಬಾಳಕದ ಕಹಿ ತೀರಾ ಕಡಿಮೆ ಇರುವುದರಿಂದ ಮಕ್ಕಳೂ ತಿನ್ನುತ್ತಾರೆ. ಬೆಲ್ಲ ಹಾಕದೇ ಇರುವುದರಿಂದ ಮಧುಮೇಹ ಖಾಯಿಲೆ ಇರುವವರೂ ಆರಾಮವಾಗಿ ತಿನ್ನಬಹುದು.
ಬಾಳಕಗಳನ್ನು 4 ದಿನಗಳ ಕಾಲ ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿಟ್ಟುಕೊಂಡು ಗಾಳಿಯಾಡದ ಪ್ಲಾಸ್ಟಿಕ್ ಜಾಡಿಯಲ್ಲಿ ಹಾಕಿಟ್ಟರೆ 6 ತಿಂಗಳಿಗೂ ಕೆಡಲಾರದು .(ಒಣಗಿಸುವ ದಿನಗಳಲ್ಲಿ ಸಂಜೆಯಾಗುತ್ತಿದ್ದಂತೆ ಬಾಳಕಗಳನ್ನು ಮನೆಯ ಒಳಗಿಡಬೇಕು. ಇಬ್ಬನಿ ಬೀಳುವ ಸಂಭವವಿದೆ) .
– ಹೇಮಮಾಲಾ.ಬಿ
ನಾನು ವರ್ಷವಿಡೀ ಹೀಗೆ ಉಪಯೋಗಿಸುತ್ತೇನೆ.. ಎಲ್ಲರಿಗೂ ಇಷ್ಟ !!!
I like bitterguard. Nice recipe. Eegale thinna beku annisthide.
ನಾನು ನಾಳೆಯೇ ಮಾಡುವೆ
Very good information.. Tq
“ಹಾಗಲಕಾಯಿ ಬಡತನ ಅರಿಯದು, ಕೆಸುವು ಸಿರಿತನ ಅರಿಯದು” ಅಂತ ಗಾದೆನೇ ಇದೆ.ಹಾಗಲಕಾಯಿಗೆ ಮಸಾಲೆ ಜಾಸ್ತಿ ಬೇಕು.ಕೆಸುವಿಗೆ ತುಸುವೇ ಸಾಕು.