ಬೊಗಸೆಬಿಂಬ

ಪ್ರಾಣಿಗಳು ಬಯಲೊಳಗೋ… ಮನೆಯೇ ಬಯಲು ಮೃಗಾಲಯದೊಳಗೋ..

Share Button

kebuta

ಕಳೆದ ಡಿಸೆಂಬರ್ ನಲ್ಲಿ, ಕೇರಳದ ಗಡಿನಾಡಿನಲ್ಲಿರುವ ನಮ್ಮ ಮೂಲಮನೆಗೆ ಹೋಗಿ 4 ದಿನ ಅಲ್ಲಿ ತಂಗಿದ್ದೆವು. ಮುಖ್ಯ ರಸ್ತೆಯಿಂದ ಸುಮಾರು 3 ಕಿ.ಮೀ ಒಳಗೆ ಕಾಡಿನ ಮಧ್ಯೆ ಸಾಗಿದಾಗ ಅಡಿಕೆ ತೋಟದ ನೆರಳಿನಲ್ಲಿ ಕಾಣಿಸುವ ಮಂಗಳೂರು ಹೆಂಚಿನ ವಿಶಾಲವಾದ ಒಂಟಿಮನೆ ಅದು. ಸುಮಾರು 60 ವರ್ಷಗಳ ಹಿಂದೆ ಅಂದಿನ ಕೂಡುಕುಟುಂಬದ ಅಗತ್ಯಕ್ಕೆ ತಕ್ಕಂತೆ ಕಟ್ಟಲಾಗಿದೆ.

ರಾತ್ರಿ ಮಲಗಿದ್ದಾಗ ಇದ್ದಕಿದ್ದಂತೆ ನಾಯಿಗಳು ಜೋರಾಗಿ ಬೊಗಳಿತೊಡಗಿ ನನಗೆ ಎಚ್ಚರವಾಯಿತು. ಅಂಗಳದ ಪಕ್ಕದ ಮರಗಳಲ್ಲಿ ಗಲಗಲ ಸದ್ದು ಕೇಳಿಸಿತು. ಇದರ ಬಗ್ಗೆ ಮರುದಿನ ವಾರಗಿತ್ತಿಯವರಲ್ಲಿ ವಿಚಾರಿಸಿದಾಗ ಅವರು ಸೂಪರ್ ಕೂಲ್ ಆಗಿ ” ಮೊಲವೋ .. ಮುಳ್ಳುಹಂದಿಯೋ. ಮುಂಗುಸಿಯೋ ಅಂಗಳಕ್ಕೆ ಬಂದಿರಬೇಕು, ಅದಕ್ಕೆ ನಾಯಿಗಳ ಗಲಾಟೆ.ಸಪೋಟ ಮರದಲ್ಲಿ ರಾತ್ರಿ ಬಾವಲಿಗಳದ್ದೇ ಸಾಮ್ರಾಜ್ಯ.ಅವುಗಳ ಗದ್ದಲ ದಿನಾ ಇದ್ದದ್ದೇ.ಅವು ತಿಂದು ಉಳಿದದ್ದು ನಮಗೆ ಲಭ್ಯ.” ಅಂದರು.

ಮೊಬೈಲ್ ಫೋನ್ ಅನ್ನು ಚಾರ್ಜ್ ಮಾಡಲು ಪ್ಲಗ್ ಗೆ ಸಿಕ್ಕಿಸಿ, ಅಲ್ಲಿದ್ದ ಒಂದು ಬುಟ್ಟಿಯೊಳಗೆ ಇರಿಸಿ ಎಲ್ಲೋ ಹೋಗಿದ್ದೆ. ಅರ್ಧ ಗಂಟೆ ಕಳೆದು ಬಂದಾಗ, ನಮ್ಮ ಮೊಬೈಲ್ ಫೋನ್ ನ ಚಾರ್ಜರ್ ನ ತಂತಿ ತುಂಡಾಗಿ, ಮೊಬೈಲ್ ಅನಾಥವಾಗಿ ನೆಲದ ಮೇಲೆ ಬಿದ್ದಿತ್ತು. ಬುಟ್ಟಿಯೂ ತಲೆಕೆಳಗಾಗಿತ್ತು. ಮನೆಯ ಬೆಕ್ಕಿನಮರಿಗಳು , ಚಾರ್ಜರ್ ನ ತಂತಿಯನ್ನು ತುಂಡರಿಸಿ, ಫೋನ್ ಅನ್ನು ತಳ್ಳುವುದು, ತಂತಿಯನ್ನು ಕಡಿಯುವುದು ಮಾಡುತ್ತಿದ್ದುವು. ಸ್ವಲ್ಪ ಬೇಸರದಿಂದಲೇ ಬೆಕ್ಕಿನ ಕಿತಾಪತಿಯನ್ನು ನನ್ನ ವಾರಗಿತ್ತಿಗೆ ತಿಳಿಸಿದೆ.

ಅವರು ಅದು ತೀರಾ ಸಹಜ ಎಂಬಂತೆ “ ಬೆಕ್ಕು ವಯರ್ ಅನ್ನು ಇಲಿ ಅಥವಾ ಹಲ್ಲಿಯ ಬಾಲ ಅಂದುಕೊಂಡಿರಬೇಕು…ಮತ್ತೆ, ಆ ಬುಟ್ಟಿ ಅದು ದಿನಾ ಮಲಗುವ ಜಾಗ….” ಅಂದರು. ಹೌದಲ್ಲವೇ, ತಪ್ಪು ನನ್ನದೆ, ತನ್ನ ಬುಟ್ಟಿ ( ಅರ್ಥಾತ್ ಕುರ್ಚಿಯನ್ನು) ಯಾರು ಸುಲಭದಲ್ಲಿ ಬಿಟ್ಟು ಕೊಡುತ್ತಾರೆ? ಮತ್ತೂ ಮುಂದುವರಿದು ಅವರೆಂದರು “ಇಲ್ಲಿ ಈಗ ಕಾಡು ಹೆಚ್ಚಾಗಿದೆ, ಇಲಿ, ಬಾವಲಿ, ಗೂಬೆ, ನವಿಲು ಬರುತ್ತವೆ. ಅಪರೂಪಕ್ಕೆ ಕಾಡುಕೋಣ ಊರಿನವರಿಗೆ ಯಾರಿಗೋ ಕಾಣಸಿಕ್ಕಿದೆ. ತೋಟದಲ್ಲಿ ಮಂಗಗಳ ಹಾವಳಿ. ಈ ಬೆಕ್ಕುಗಳು ಇಲ್ಲವಾದರೆ ಮನೆ ತುಂಬಾ ಇಲಿ ತುಂಬಿರುತಿತ್ತು” ಅಂದರು.

ಬೆಳಗ್ಗೆ ನೋಡಿದಾಗ ಅಂಗಳದಲ್ಲಿ ಕೆಂಬೂತ ವಾಕಿಂಗ್ ಮಾಡುತಿತ್ತು. .ಪೇರಲಹಣ್ಣಿನ ಗಿಡದಲ್ಲಿ ಅಳಿಲು ಫಲಾಹಾರ ಮಾಡುತಿತ್ತು.ತೋಟದಲ್ಲಿ ಕೇರೆಹಾವು ಬಹಳ ಗಡಿಬಿಡಿಯಲ್ಲಿರುವವರಂತೆ ಸರಭರನೇ ಓಡುತಿತ್ತು.ತೋಟದ ಕೆರೆಯ ನೀರಿನಲ್ಲಿ ನೀರುಹಾವು ಸಾವಧಾನವಾಗಿ ಈಜಾಡುತ್ತಿತ್ತು. ಕೆರೆಯಲ್ಲಿ ಆಗಾಗ್ಗೆ ಇಣುಕುವ ಮೀನುಗಳನ್ನು ಹಿಡಿಯಲು ಮಿಂಚುಳ್ಳಿ ಪಕ್ಷಿ ಕಾಯುತಿತ್ತು. ದೂರದಲ್ಲೆಲ್ಲೂ ಮರಕುಟಿಗ ಪಕ್ಷಿ ‘ಟಕ್ ಟಕ್’ ಎಂದು ಮರವನ್ನು ಕುಕ್ಕುವ ಕಾರ್ಯದಲ್ಲಿ ನಿರತವಾಗಿದೆಯೆಂದು ಗೊತ್ತಾಯಿತು. ಇವಿಷ್ಟಲ್ಲದೆ ಮನೆ ಮೇಲೆ ಬಂದು ಕೂರುವ ಪಾರಿವಾಳಗಳು, ಮರದಲ್ಲಿ ಗಿಳಿಗಳು, ಕಾಗೆಗಳು, ಇನ್ನಿತರ ಪುಟ್ಟ ಹಕ್ಕಿಗಳು ಹಲವಾರು. ಒಟ್ಟಾರೆಯಾಗಿ ಪ್ರಾಣಿ-ಪಕ್ಷಿಗಳು ಅವರವರ ಕೆಲಸದಲ್ಲಿ ಮಗ್ನವಾಗಿದ್ದವು.

squirrel    wild cat

ನಮ್ಮ ಮುಂದಿನ ಭೇಟಿ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ಸಮೀಪದ ಹಳ್ಳಿಯೊಂದರಲ್ಲಿರುವ ಚಿಕ್ಕಮ್ಮನ ಮನೆಗೆ. ಅಲ್ಲಿ ತಿಳಿದ ವಿಷಯ ಗಂಭೀರವಾಗಿತ್ತು. ಕೆಲವು ದಿನಗಳ ಹಿಂದೆ ಅವರ ಮನೆಯಂಗಳಕ್ಕೆ ಹೆಬ್ಬಾವು ಬಂದಿತ್ತಂತೆ,ಮುಳ್ಳುಹಂದಿಯೂ ಆಗಾಗ ಕಾಣಸಿಗುತ್ತದಂತೆ . ಒಮ್ಮೊಮ್ಮೆ ನೀರವ ರಾತ್ರಿಯಲ್ಲಿ ಕಾಡುಬೆಕ್ಕು ವಿಕಾರವಾಗಿ ಕಿರುಚತೊಡಗುವುದು ಕೇಳಿ ಬರುತ್ತದೆಯಂತೆ, ಕಾಡುಬೆಕ್ಕಿನ ಕಿರುಚುವಿಕೆ ಬಗ್ಗೆ ಗೊತ್ತಿಲ್ಲದೆ ಇರುವವರಿಗೆ ಆ ದನಿ ಇದ್ದಕ್ಕಿದ್ದಂತೆ ಕೇಳಿದರೆ ವಿಪರೀತ ಭಯವಾಗಬಹುದು ಎಂದರು.

ಇವೆರಡೂ ನನಗೆ ಚಿರಪರಿಚಿತ ಜಾಗಗಳು. ಆದರೆ ಈ ಸಾರಿ ‘ಕಾಡಿನ ಅನುಭವೆ’ ಹೆಚ್ಚು ಅನಿಸಿತು. ಅಲ್ಲಿ ತಿಳಿದ ವಿಚಾರಗಳು ಆಸಕ್ತಿಕರವಾಗಿದ್ದುವು . ಇತ್ತೀಚೆಗೆ, ಕಾಸರಗೋಡು/ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಹಳ್ಳಿಗಳಲ್ಲಿ ಕಾಡಿನ ಸಾಂದ್ರತೆ ಸ್ವಲ್ಪ ಹೆಚ್ಚಾಗಲು ಕೆಲವು ಕಾರಣಗಳಿವೆ. ಅವು ಯಾವುವೆಂದರೆ:

  • ಹೆಚ್ಚಿನ ಮನೆಗಳಲ್ಲಿ ಅಡುಗೆ ಅನಿಲ/ಗೋಬರ್ ಗ್ಯಾಸ್ ಬಳಕೆಗೆ ಬಂದು, ಉರುವಲಿಗಾಗಿ ಸೌದೆ ಕಡಿಯುವುದು ಕಡಿಮೆಯಾಗಿದೆ. ಚಿಕ್ಕಪುಟ್ಟ ದರ್ಖಾಸ್ತ್ ಜಾಗ ಹೊಂದಿರುವವರ ಸಂಖ್ಯೆ ಹೆಚ್ಚಾಗಿ, ಅವರು ತಮ್ಮ ಮನೆಯ ಸುತ್ತುಮುತ್ತಲೂ ಕೆಲವಾದರೂ ಮರಗಳನ್ನು ಕಡ್ಡಾಯವಾಗಿ ಬೆಳೆಸುತ್ತಾರೆ.
  • ಹೈನುಗಾರಿಕೆಗಾಗಿ ಹಸುಗಳನ್ನು ಮೇಯಲೆಂದು ಹುಲ್ಲುಗಾವಲಿಗೆ ಬಿಡುವ ಅಭ್ಯಾಸ ತೀರಾ ಕಡಿಮೆಯಾಗಿದೆ. ಹಸುಗಳ ಕೊಟ್ಟಿಗೆಯನ್ನು ತೊಳೆದು ನೀರನ್ನು ಗೋಬರ್ ಗ್ಯಾಸ್ ಘಟಕಕ್ಕೆ ಹರಿಯಿಸುವುದರಿಂದ ಗೊಬ್ಬರಕ್ಕಾಗಿ ಕಾಡಿನ ಸೊಪ್ಪನ್ನು ತರಿದು ಹಾಕುವ ಪದ್ಧತಿಯೂ ಬಹುತೇಕ ಮರೆಯಾಗಿದೆ.
  • ಕೃಷಿಕಾರ್ಮಿಕರ ಕೊರತೆ ಮತ್ತು ಉಪಯುಕ್ತತೆಯ ಆಧಾರದ ಮೇಲೆ ಒಣಗಿದ ಎಲೆಗಳ ‘ದರಗು ಗುಡಿಸುವ’ ಪದ್ದತಿಯೂ ಮರೆಯಾಗಿವೆ. ಇವೆಲ್ಲಾ ಕಾರಣಗಳ ಒಟ್ಟಾರೆ ಪರಿಣಾಮವಾಗಿ ಕುರುಚಲು ಕಾಡು ಹುಲುಸಾಗಿ ಬೆಳೆದು ಕೆಲವು ವನ್ಯಜೀವಿಗಳ ವಾಸಕ್ಕೆ ಪೂರಕ ವಾತಾವರಣ ನಿರ್ಮಾಣವಾಗಿದೆ.

ಪಟ್ಟಣದಲ್ಲಿರುವವರು ದುಡ್ಡು ಕೊಟ್ಟು ಮೃಗಾಲಯಕ್ಕೆ ಹೋಗಿ ಪ್ರಾಣಿಗಳನ್ನು ನೋಡಬೇಕು. ಆದರೆ ಇಲ್ಲಿ ಮನೆಯೇ ‘ಬಯಲು ಮೃಗಾಲಯ’ ದಲ್ಲಿದೆ.

( ಚಿತ್ರಕೃಪೆ: ಸಾಂದರ್ಭಿಕ, ಅಂತರ್ಜಾಲ)

 

  – ಹೇಮಮಾಲಾ.ಬಿ

 

3 Comments on “ಪ್ರಾಣಿಗಳು ಬಯಲೊಳಗೋ… ಮನೆಯೇ ಬಯಲು ಮೃಗಾಲಯದೊಳಗೋ..

  1. ಪುಣ್ಯ ಮಾಡಿರಬೇಕು.. ಸುಂದರವಾಗಿ ವಿವರಣೆ ಮಾಡಿದ್ದೀರಿ

  2. ತುಂಬಾ ಸೊಗಸಾಗಿ ಹೇಳಿದ್ದೀರಿ ಮೇಡಂ.ತುಂಬಾ ಖುಷಿಯಾಯಿತು.

Leave a Reply to Kanni Manju Cancel reply

 Click this button or press Ctrl+G to toggle between Kannada and English

Your email address will not be published. Required fields are marked *