ಅನ್ನದ ಬಟ್ಟಲಿಗೆ ಸಾವಯವ ತರಕಾರಿಗಳು
ಅನಿರೀಕ್ಷಿತವಾಗಿ ಧಾರವಾಡ, ಹಾಸನ ಮತ್ತು ಮೈಸೂರಿಗೆ ಭೇಟಿ ಕೊಡುವ ಅವಕಾಶ ಕೂಡಿ ಬಂದಿತ್ತು. ಧಾರವಾಡದ ಮನೆಯ ಅಂಗಳಕ್ಕೆ ಕಾಲಿಟ್ಟೊಡನೆ ಗಮನ ಸೆಳೆದಿದ್ದು ಮರದ ಗಾತ್ರಕ್ಕೆ ಬೆಳೆದಿದ್ದ ದಾಳಿಂಬೆ ಗಿಡ. ಜೊತೆಗೇ ಮನೆಯ ಸುತ್ತಲಿನ ಸ್ವಲ್ಪ ಮಣ್ಣನ್ನೂ ಖಾಲಿ ಬಿಡದೆ ನೆಟ್ಟು ಬೆಳೆಸಿದ ಬಾಳೆ, ಬಸಳೆ, ಬೇವು , ಬ್ರಾಹ್ಮಿ , ತುಳಸಿ ಇತ್ಯಾದಿ ಸಸಿಗಳ ಜೊತೆಗೆ ಹೂವಿನ ಸಾಲು. ಪರವಾಗಿಲ್ಲ, ಒಂದು ವಾರ ಹೊರಗಿನ ತರಕಾರಿ ತಾರದೆ ಇದ್ದರೂ ಯಜಮಾಂತಿಗೆ ಆ ಮಟ್ಟಿಗೆ ಸಮಸ್ಯೆ ಬಾರದು ಅಂದುಕೊಂಡೆ. ನಂತರದ ಭೇಟಿಯ ಮನೆ ಹಾಸನದ್ದು. ಬೆಳಗಿನ ಆರು ಘಂಟೆಗೆ ಎದ್ದು ಮನೆಯ ಸುತ್ತ ಗಮನಿಸಿದರೆ ಅದ್ಭುತವೆಂಬ ಪರಿಯಲ್ಲಿ ಸಾವಯವ ತರಕಾರಿಗಳು ಉಯ್ಯಾಲೆ ಆಡುತ್ತಿದ್ದವು. ಹಾಗಲಕಾಯಿ ಕಂಡವರ ಕಣ್ಸೆಳೆಯುತ್ತ ಇದ್ದರೆ, ಪಡುವಲದ ತೂಗಾಟ ಕಣ್ಣರಳಿಸುತ್ತಿತ್ತು.
.
ಹಿಂದೆಯೇ ಉದ್ದಾನುದ್ದದ ಅಲಸಂಡೆಗಳ ಜೋಕಾಲಿ! ದಿಗ್ಭ್ರಮೆಗೊಂಡು ಅಲ್ಲೇ ನಿಂತೆ. ” ಆ ಬದಿಗೆ ಏನಿದೆ ನೋಡು” ಮನೆಯೊಡತಿಯ ಸಂಭ್ರಮದ ದನಿ! ಅತ್ತ ಹೋದರೆ ಅಲ್ಲಿ ಏನುಂಟು; ಏನಿಲ್ಲ! ಸಿಕ್ಕಿದ ಅಲ್ಪ ಸ್ವಲ್ಪ ಕೋಲು ಕಡ್ಡಿಗಳನ್ನು ಬಳಸಿ ಹಾಕಿದ ನಾಜೂಕಾದ ಚಪ್ಪರದಲ್ಲಿ ಹಚ್ಚ ಹಸಿರಿನ ಬಸಳೆ, ಬದಿಗೆ ಒಳ್ಳೆಯ ಜಾತಿ ಕೆಸು, ಪಪ್ಪಾಯಿ, ಅಲ್ಲೂ ಗಾಳಿಗೆ ತೊನೆಯುವ ಹಾಗಲದ ಸೊಬಗು. ಬೀನ್ಸ್, ಬಾಳೆ, ಬದನೆ, ಹರಿವೆ, ಹಸಿಮೆಣಸು, ಜೊತೆಗೆ ಕಣ್ಣುಮನ ತಣಿಸುವ ಪರಿಯಲ್ಲಿ ನಾನಾ ವರ್ಣದ ಸೇವಂತಿಗೆ, ದಾಸವಾಳ ಇತ್ಯಾದಿ ಹೂಗಿಡ ತುಂಬಿತುಳುಕುತ್ತಿತ್ತು. ತರಕಾರಿ ಹೆಚ್ಚಲು ಚಾಕು ತೆಗೆದಿಟ್ಟ ಮೇಲೆ ಹೋಗಿ ಬೇಕಾದ ತರಕಾರಿ ಆಯ್ದು ಕೊಯ್ಯುವ ಸೊಬಗು! ಅಬ್ಬಾ! ತರಕಾರಿ ತೋಟಕ್ಕೆ ಮಾದರಿ ಇಲ್ಲಿದೆ ಎನ್ನಿಸಿ ಬೆರಗಾಗುವ ಸರದಿ ನನ್ನದು. ಒಂದೇ ಒಂದು ದಿನಕ್ಕೂ ಮಾರುಕಟ್ಟೆಯ ತರಕಾರಿ ಮನೆಗೆ ತರುವ ಅವಶ್ಯಕತೆ ಇಲ್ಲಿಲ್ಲ.
.
.
ಅಲ್ಲಿಂದ ಕೈತುಂಬಾ ತರಕಾರಿ ಹೊತ್ತು ಬಂದಿದ್ದು ಮೈಸೂರಿಗೆ. ಪ್ರವೇಶದ ದ್ವಾರದಲ್ಲೇ ಹಸಿರ ತೋರಣ. ಹಾಗೇ ಅತ್ತಿತ್ತ ಕುತೂಹಲದ ಕಣ್ಣು ಹಾಯಿಸಿದಾಗ ಕಂಡಿದ್ದು ಪುನ: ಬಾಳೆ, ಬಸಳೆ, ಪಪ್ಪಾಯಿ , ತಂಬುಳಿಗೆ ಬಳಸುವ ಸಸ್ಯ ಇತ್ಯಾದಿ ತರಕಾರಿ ಗಿಡಗಳನ್ನು. ಎಳೆಯ ಬಸಳೆ ಚಿಗುರು ಕಾಣುವಾಗ ಕಳ್ಳನೂ ಕಿತ್ತಾನು. ಹಾಗಿತ್ತು. ಮನೆಯ ಸುತ್ತ ಜಾಜಿಯ ಘಮ ಘಮದ ಜೊತೆಗೆ ನಾವು ಊರಿನ ಮನೆಯಲ್ಲೇ ಇದ್ದೇವೆ ಅನ್ನುವ ಆತ್ಮೀಯ ವಾತಾವರಣ. ಎತ್ತ ತಿರುಗಿದರತ್ತ ಹಸಿರಿನ ಉದ್ಯಾನ. ಪಕ್ಕದಲ್ಲಿ ಹಣ್ಣಿನ ಗಿಡಗಳು ತಲೆಯೆತ್ತಿ ಜೋಕಾಲಿ ಆಡುವ ತೆರದಿ ಗಾಳಿಗೆ ತೊನೆವ ಚೆಂದ. ಸುತ್ತಲಿನ ಹಸಿರಿನ ವಿಶಿಷ್ಟ ಸುವಾಸನೆ ಮನೆಯೊಳಗೂ. ಸುಸ್ತಾದ ಮೈ ಮನಕ್ಕೆ ಅಲ್ಲಿನ ವಾತಾವರಣ ಚೇತೋಹಾರಿ ಆಗಿತ್ತು. ಚೇತೋಹಾರಿ ಪರಿಸರ, ಹಿತವೆನ್ನಿಸುವ ಆತಿಥ್ಯ. ನೆಲದಲ್ಲಿ ಒಂದಿಂಚು ಜಾಗವನ್ನೂ ಅಲ್ಲಿ ಖಾಲಿ ಬಿಡದೆ ಮನೆಯೊಡತಿ ಒಂದಲ್ಲವೊಂದು ಸಸ್ಯ, ತರಕಾರಿ ಗಿಡ ಬೆಳೆಸಿದ್ದರು. ಅದನ್ನು ನೋಡುವುದೇ ಒಂದು ವಿಶಿಷ್ಟತೆ.
.
ಮೇಲೆ ಉಲ್ಲೇಖಿಸಿದ ಮೂರೂ ಮನೆಗಳಲ್ಲಿ ನಾನು ಗಮನಿಸಿದ್ದು ಸಾಧ್ಯವಿದ್ದ ಮಟ್ಟಿಗೂ ತಾವು ಉಣ್ಣುವ ತರಕಾರಿ ತಾವೇ ಬೆಳೆದುಕೊಳ್ಳುವ ಸಾಧನೆ. ಹೌದು. ಸಾಧನೆಯೇ ಸೈ. ಏಕೆಂದರೆ ಊರಿನ ಮನೆಗಳಲ್ಲಿ ತರಕಾರಿ ಬೆಳೆಸಲು ಬಳಸುವ ಅದ್ಯಾವ ಸೌಕರ್ಯಗಳೂ ಅಲ್ಲಿ ಲಭ್ಯವಿಲ್ಲ. ಬೇಕಾದ ಅವಶ್ಯಕ ಸಾಧನಗಳು ಕಡಿಮೆ. ಸಮಯದ ಅನುಕೂಲ ಅಷ್ಟಷ್ಟೆ. ತಮ್ಮ ಅನ್ನದ ಬಟ್ಟಲಿಗೆ ವಿಷಯುಕ್ತ ತರಕಾರಿಗಳು ಬೇಡವೆಂಬೋ ಇಚ್ಚಾಶಕ್ತಿ, ಊರ ಮನೆಯ ವಾತಾವರಣ ತಾವಿದ್ದ ಕಡೆ ನಿರ್ಮಿಸಿಕೊಳ್ಳುವ ಇಛ್ಛೆ. ಹಸಿರಿನ ಪ್ರಕೃತಿಯ ಸೊಬಗು ಮನಸ್ಸಿಗೆ ಮುದ ನೀಡುವ ಜೊತೆಗೆ ಕೈ ಚಾಚಿದರೆ ಒಂದಲ್ಲ, ಒಂದು ಸಾವಯವ ತರಕಾರಿ ಲಭ್ಯ. ಮನೆಯವರೆಲ್ಲರ ಆರೋಗ್ಯದ ಹಿತ ಕಾಯ್ದುಕೊಳ್ಳುವ ಮುಂಜಾಗ್ರತೆ. ಇಂಥಹ ಅಭಿರುಚಿ, ಹವ್ಯಾಸ, ಆಸಕ್ತಿ ಒಟ್ಟಾಗಿ ವಿಷಮುಕ್ತ ತರಕಾರಿ ಬೆಳೆಸಿ , ಆ ಮೂಲಕ ಮೂಲ ರುಚಿ, ಪರಿಮಳ ಸ್ವಾದ ಎಲ್ಲವನ್ನು ಒಟ್ಟಾಗಿ ಸವಿಯುವ ಮನೆಗಳು ನಮ್ಮ ಸುತ್ತ ಮುತ್ತಲೇ ಇರಬಹುದು. ಅದೇ ರೀತಿ ” ದುಡ್ದು ಕೊಟ್ಟರೆ ಎಲ್ಲಾ ಸಿಗುತ್ತೆ. ಯಾಕೆ ಸುಮ್ನೆ ಕಷ್ಟ ಪಡಬೇಕು?” ಎನ್ನುವವರೂ ಇರುತ್ತಾರೆ. ಅದೆಲ್ಲ ಅವರವರ ಭಾವಕ್ಕೆ ಬಿಟ್ಟದ್ದು.
.
ಈಗ ಹೇಳಿ. ನಾವಿದ್ದಲ್ಲಿ ಸಾಧ್ಯವಿದ್ದ ಮಟ್ಟಿಗೆ ನಮ್ಮದೇ ( ರಾಸಾಯನಿಕ ಮುಕ್ತ, ವಿಷಮುಕ್ತ) ತರಕಾರಿ ಬೆಳೆದುಕೊಂಡಲ್ಲಿ ಅದರ ಸಂಪೂರ್ಣ ಪ್ರಯೋಜನ ಪಡೆಯುವವರೂ ನಾವೇ ಅಲ್ಲವೇ? ಫ್ಲಾಟ್ ಗಳಲ್ಲಿ ಕೂಡಾ ಕುಂಡಗಳಲ್ಲಿ ಸಣ್ಣಪುಟ್ಟ ತರಕಾರಿಗಿಡ ಬೆಳೆಸಿ ಹಿಗ್ಗುವವರನ್ನು ಕಂಡಿದ್ದುಂಟು. ಜೊತೆಗೆ ಮಾನಸಿಕ ತೃಪ್ತಿ ಕೂಡಾ. ಆದಷ್ಟೂ ಮಾರುಕಟ್ಟೆಯ ತರಕಾರಿಗಳನ್ನು ದೂರವಿಟ್ಟು ಸಾಧ್ಯವಿದ್ದ ಮಟ್ಟಿಗೆ ನಾವೇ ಸಾವಯವ ತರಕಾರಿ ಬೆಳೆಸಿದ್ದೇ ಆದರೆ ಅದಕ್ಕೆ ಸಾಟಿ ಬೇರೆ ಏನಿದೆ?
,
– ಕೃಷ್ಣವೇಣಿ
,