ಇದೇನು ಹೊಸ ಬಗೆಯ ಉಪಾಖ್ಯಾನ ಎಂದುಕೊಂಡಿರಾ?
ಪುತ್ತೂರಿನ ಜನತೆಯ ಯಕ್ಷಗಾನ ಪ್ರಿಯತೆ ಎಷ್ಟೆಂದರೆ; ತಾಳಮದ್ದಳೆಗಾಗಿಯೇ ಸಾದಾ ಹಲಸಿನ ಮೇಲೆಯೇ ಪೌರಾಣಿಕ ಹಿನ್ನೆಲೆಯ ಕಥೆ ಮತ್ತು ಛಂದೋಬದ್ಧ ಹಾಡು ರಚಿಸಿ, ವೇದಿಕೆ ಮೇಲೆ ಪ್ರದರ್ಶನವೂ ನಡೆಯಿತು ಎಂದರೆ ನಂಬುವಿರಾ? ಕಥೆಯ ಬಗ್ಗೆ ಕುತೂಹಲದಿಂದ ನಾವು ಕೂಡಾ ಈ ತಾಳಮದ್ದಳೆಯ ಕಾರ್ಯಕ್ರಮವನ್ನು ವೀಕ್ಷಿಸಿ ಆನಂದಿಸಿದೆವು. ಈಗ ಹಲಸಿನ ಕಥೆಯನ್ನು ಕೇಳೋಣ ಬನ್ನಿ.
ಒಮ್ಮೆ ತ್ರಿಲೋಕ ಸಂಚಾರಿ ನಾರದರು ಸೃಷ್ಟಿಕರ್ತ ಬ್ರಹ್ಮನ ಬಳಿ ಹೋದರು. ಬ್ರಹ್ಮ ದೇವರು ಮಾತನಾಡುತ್ತಾ; ಭೂಲೋಕದಲ್ಲಿರುವ ಮಾನವರೆಲ್ಲರ ಕ್ಷೇಮದ ಬಗ್ಗೆ ವಿಚಾರಿಸುತ್ತಾ, “ಅಲ್ಲಿ ಎಲ್ಲರೂ ಸಂತಸದಲ್ಲಿ ಇರುವರೇ?” ಎಂದು ಪ್ರಶ್ನಿಸಿದರು. ಅದಕ್ಕೆ ನಾರದರು; “ಪೃಥ್ವಿಯಲ್ಲಿ ಎಲ್ಲರೂ ಸಂತಸದಿಂದ ಇಲ್ಲ ದೇವಾ. ಶ್ರೀಮಂತರು ಅತಿ ಶ್ರೀಮಂತರಾಗುತ್ತಾ ಹೋಗುತ್ತಿದ್ದಾರೆ. ಬಡವರು ಬಡವರಾಗಿಯೇ ಉಳಿದಿರುವರು. ಹಸಿದ ಬಡಜನರ ಹೊಟ್ಟೆ ತುಂಬಿಸುವ ದಾರಿ ಇಲ್ಲವಾಗಿದೆ. ಅದಕ್ಕೆ ನೀವೇ ಪರಿಹಾರ ನೀಡಬೇಕು” ಎಂದು ವಿನಂತಿಸಿಕೊಂಡರು. ಆಗ ಸೃಷ್ಟಿಕರ್ತ ಬ್ರಹ್ಮನು ಒಂದು ಅಮೂಲ್ಯವಾದ ಬೀಜವನ್ನು ಸೃಷ್ಟಿಸಿ ನಾರದನ ಕೈಗಿತ್ತು ಅದರ ಗುಣ ವಿಶೇಷಗಳನ್ನು ಹೇಳತೊಡಗಿದರು.
“ನಾರದರೇ, ಈ ಬೀಜವು ಅಂತಿಂತಹ ಬೀಜವಲ್ಲ….ಬಹಳ ವಿಶೇಷ ಗುಣವುಳ್ಳದ್ದಾಗಿದೆ. ಇದನ್ನು ಯೋಗ್ಯ ಕೃಷಿಕನಿಗೆ ನೀವು ನೀಡಬೇಕು. ಅದು ಮೊಳಕೆಯೊಡೆದು ವೃಕ್ಷವಾಗಲಿ. ಅದರಲ್ಲಿ ಬಿಡುವ ಫಲದ ಹೆಸರು ಪನಸ ಫಲ. ಮಾನವರು ಬಳಕೆಯಲ್ಲಿ ಹಲಸು ಎಂದೂ ಹೇಳಬಹುದು. ಈ ವೃಕ್ಷವು ವರ್ಷಕ್ಕೊಂದು ಬಾರಿ ತುಂಬಾ ಫಲಗಳನ್ನು ನೀಡುತ್ತದೆ. ಈ ವೃಕ್ಷದ ಪ್ರತಿ ಭಾಗವೂ ಬಳಕೆಗೆ ಯೋಗ್ಯವಾಗಿರುವಂತೆ; ಇದರಲ್ಲಿ ಬಿಡುವ ಫಲವು ಕೂಡಾ ಎಳೆಯ ಕಾಯಿಯಿಂದ ಪ್ರಾರಂಭಿಸಿ ಹಣ್ಣಿನ ವರೆಗೂ ಮಾನವರು ಆಹಾರವಾಗಿ ಬಳಸುವ ವಿವಿಧ ವ್ಯಂಜನಗಳಿಗೆ ಉಪಯೋಗವಾಗುತ್ತದೆ.
ಇದರಲ್ಲಿ ಹಲವು ಪ್ರಭೇದಗಳಿವೆ. ಹಾಗೆಯೇ, ಗಾತ್ರದಲ್ಲಿಯೂ ಅತೀ ಸಣ್ಣಗಿನ ಹಲಸಿನಿಂದ ಹಿಡಿದು ಅತ್ಯಂತ ದೊಡ್ಡ ಗಾತ್ರದವುಗಳನ್ನು ಕಾಣಬಹುದು. ಇದರ ಹೊರಮೈ ಚೂಪಾದ ಮುಳ್ಳುಗಳಿಂದ ಕೂಡಿದ್ದು, ಸುಲಭದಲ್ಲಿ ತುಂಡರಿಸಲು ಸಾಧ್ಯವಿಲ್ಲ. ಮಾತ್ರವಲ್ಲ, ಒಳಗಡೆಗೆ ವಿಪರೀತ ಅಂಟು ಅಂಟಾದ ಮಯಣ ಎನ್ನುವ ಪದಾರ್ಥವು, ಅದನ್ನು ತುಂಡರಿಸುವವರ ಕರಗಳಿಗೆ ಆಂಟುವುದರಿಂದ ಆಗುವ ಹಿಂಸೆಯನ್ನು ತಡೆಯಲು ಕರಗಳಿಗೆ ಮೊದಲು ನಾರೀಕೇಳದ ತೈಲವನ್ನು ಸವರಬೇಕು. ಇದರಿಂದ ಸುಸೂತ್ರವಾಗಿ ತುಂಡರಿಸಬಹುದು. ಜೊತೆಗೆ, ಇದರಿಂದಾಗಿ, ಬೇರ್ಪಡಿಸುವ ತೊಳೆಯೂ ವಿಶೇಷವಾದ ಪರಿಮಳವನ್ನು ಪಡೆಯುತ್ತದೆ.
ಎಳೆಯ ಹಲಸನ್ನು ಮಾನವರು ಗುಜ್ಜೆ ಎನ್ನುವರು. ಪ್ರಥಮ ಹಂತದಲ್ಲಿ, ಇದರ ಹೊರಮೈಯ ಮುಳ್ಳನ್ನು ಸವರಿ, ಒಳಗಿನ ಭಾಗವನ್ನು ಪೂರ್ತಿ ಉಪಯೋಗಿಸಬಹುದು. ಅದನ್ನು ಸಣ್ಣ ಚೂರುಗಳನ್ನಾಗಿ ಮಾಡಿ ಲವಣವನ್ನು ಸೇರಿಸಿ ಬೇಯಿಸಿ ತಿಂದರೆ ಹಸಿವು ನೀಗುವುದು. ಮುಂದೆ, ಫಲ ಬಲಿತಾಗ ಅದರೊಳಗೆ ಮಾನವನಿಗೆ ಉಪಯೋಗಿಸಲು ರುಚಿಕರವಾದ ನೂರಾರು ತೊಳೆ ಅಥವಾ ಸೊಳೆ ಎನ್ನುವ ಭಾಗದ ಒಳಗಡೆ ಇಂತಹ ಬೀಜಗಳು ಲಭಿಸುತ್ತವೆ. ಈ ಹಂತದಲ್ಲಿ ಹಲಸಿನ ಸೊಳೆಗಳನ್ನು ನಾಜೂಕಾಗಿ ಬೇರ್ಪಡಿಸಿ, ಅದರ ಹೊರಭಾಗವನ್ನು ಲವಣದೊಂದಿಗೆ ಬೇಯಿಸಿ, ರುಚಿಗಾಗಿ ಸೂಕ್ತ ಪದಾರ್ಥಗಳನ್ನು ಸೇರಿಸಿ ಮಾಡಿದ ಪಲ್ಯ, ಸಾಂಬಾರು, ಮಜ್ಜಿಗೆಹುಳಿ, ಇತ್ಯಾದಿ ವಿವಿಧ ಬಗೆಯ ರುಚಿಕರವಾದ ವ್ಯಂಜನಗಳನ್ನು ತಯಾರಿಸಿ ಭುಜಿಸಿ, ಹಸಿವನ್ನು ನೀಗಿಸಬಹುದು. ಇವುಗಳು ಅತ್ಯಂತ ರುಚಿಕರವಾಗಿದ್ದು, ಆರೋಗ್ಯದಾಯಕವಾಗಿವೆ. ಜೊತೆಗೆ, ಇದರ ಬೀಜವನ್ನು ಕೂಡಾ ಸೇವಿಸಬಹುದಾದರೂ ಇದರ ಹೆಚ್ಚಿನ ಪ್ರಮಾಣದ ಸೇವನೆಯು ಮಾನವನ ಶರೀರದಲ್ಲಿ ವಾಯು ಪ್ರಕೋಪದಂತಹ ಅನಾರೋಗ್ಯಗಳಿಗೆ ದಾರಿ ಮಾಡಿಕೊಡುತ್ತದೆ. ಹಾಗೇನಾದರೂ ತೊಂದರೆಯಾದರೆ ಎಂದೇ ನಾನು ವೈದ್ಯರನ್ನೂ ಸೃಷ್ಟಿಸಿ ಕಳಿಸಿರುವೆ ನೋಡಿ. ಬೀಜವನ್ನು ಮಾತ್ರವಲ್ಲ; ಯಾವುದೇ ಆಹಾರವನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸುವುದು ಅಗತ್ಯ ಅಲ್ಲವೇ ನಾರದರೇ? ಈ ಬೀಜವು ಹಲವು ಜೀವಸತ್ವಗಳನ್ನು ಒಳಗೊಂಡಿರುವುದರಿಂದ, ಬೀಜದ ಗಟ್ಟಿಯಾದ ಹೊರಮೈಯನ್ನು ಬೇರ್ಪಡಿಸಿ, ಅದನ್ನು ಬೇಯಿಸಿ, ಅನೇಕ ಬಗೆಯ ಖಾದ್ಯ ಹಾಗೂ ವ್ಯಂಜನಗಳನ್ನು ತಯಾರಿಸಿ ಸೇವಿಸಬಹುದು. ಹೇರಳವಾಗಿ ಲಭಿಸುವ ಬೀಜವನ್ನು ಕೆಂಪು ಮಣ್ಣಿನೊಂದಿಗೆ ಮಿಶ್ರ ಮಾಡಿ ಕೆಡದಂತೆ ಇರಿಸಿದರೆ ವರ್ಷ ಪೂರ್ತಿ ಬೇಕಾದಂತೆ ಉಪಯೋಗಿಸಿ, ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ಫಲವು ಕಳಿತಾಗ ಅದರಿಂದ ಹೊರಸೂಸುವ ಸುವಾಸನೆಯು ಅತ್ಯಂತ ಮಧುರವಾಗಿರುತ್ತದೆ. ಈ ಹಣ್ಣನ್ನು ತೃಪ್ತಿಯಾಗುವಷ್ಟು ತಿಂದು ಹಸಿವನ್ನು ನೀಗಿಸಿಕೊಳ್ಳಬಹುದು. ಮಾನವನ ಆರೋಗ್ಯಕರ ನೇತ್ರಕ್ಕಾಗಿ ಜೀವಸತ್ವ, ಬಲವಾದ ಮೂಳೆಗಾಗಿ ಬೇಕಾಗುವ ಖನಿಜ, ಶರೀರದ ಬೊಜ್ಜು ಕರಗಿಸಲು, ಮಲಬದ್ಧತೆ ನಿವಾರಿಸಲು ಬೇಕಾಗುವ ನಾರಿನಂಶ ಇತ್ಯಾದಿ ಮನುಷ್ಯನ ಆರೋಗ್ಯಕ್ಕೆ ಬೇಕಾದ ಔಷಧೀಯ ಗುಣಗಳು ಈ ಫಲದಲ್ಲಿ ಹೇರಳವಾಗಿರುವುದರಿಂದ ಇದು ದಿವ್ಯೌಷಧಿಯೂ ಆಗಿದೆ ಮಹರ್ಷಿಗಳೆ!
ಈ ರೀತಿಯಲ್ಲಿ ಹಲಸಿನ ಫಲವು ಬೆಳೆಯುವ ಎಲ್ಲಾ ಹಂತಗಳಲ್ಲೂ ಜನರ ಹಸಿವನ್ನು ನೀಗಿಸಲು ಸಮರ್ಥವಾಗಿದೆ. ಮಾತ್ರವಲ್ಲದೆ, ತೊಳೆಯಿಂದ ಬೀಜವನ್ನು ಬೇರ್ಪಡಿಸಿ, ಸರಿಯಾದ ರೀತಿಯಲ್ಲಿ ಶುಚಿಗೊಳಿಸಿ, ಆ ತೊಳೆಯನ್ನು ಸಾಕಷ್ಟು ಪ್ರಮಾಣದ ಲವಣದೊಂದಿಗೆ ಮಿಶ್ರ ಮಾಡಿ ಗಾಳಿಯಾಡದಂತೆ ಇರಿಸಿದರೆ, ವರ್ಷವಿಡೀ ಹಾಳಾಗುವುದಿಲ್ಲ. ಹಲಸು ಇಲ್ಲದ ಸಮಯದಲ್ಲಿ, ಅದರಿಂದ ಬೇಕಾದ ರೀತಿಯಲ್ಲಿ ರುಚಿಕಟ್ಟಾದ ಖಾದ್ಯಗಳನ್ನು ತಯಾರಿಸಿ ಬಳಸಬಹುದು. ಬಲಿತ ಸೊಳೆಯನ್ನು ತೈಲದಲ್ಲಿ ಹುರಿದು ಮಾಡಿದ ಸೋಂಟೆ ಆಬಾಲವೃದ್ಧರಿಗೆ ಬಲು ಪ್ರಿಯವಾಗುವಂತಹ ಖಾದ್ಯವಾಗಿದೆ. ಹಲಸಿನ ಹಣ್ಣಿನ ತೊಳೆಗಳನ್ನು ಶುಚಿಗೊಳಿಸಿ, ಬೇಯಿಸಿ, ಅದರಲ್ಲಿರುವ ಜಲದ ಅಂಶವನ್ನು ನಿವಾರಿಸಿ ಸಂಸ್ಕರಿಸಿ, ಗಾಳಿಯಾಡದಂತೆ ಇರಿಸಿದರೆ ವರ್ಷವಿಡೀ ಪಾಯಸ ಅಥವಾ ಕಡುಬಿನಂತಹ ಹಲವಾರು ರುಚಿಕರವಾದ ತಿಂಡಿಗಳನ್ನು ತಯಾರಿಸಲು ಉಪಯೋಗಿಸಬಹುದು.
ಇದು ಮಾತ್ರವಲ್ಲ ನಾರದರೇ, ಇದರ ಮರದ ಎಲ್ಲಾ ಭಾಗಗಳು ಕೂಡಾ ಜನರಿಗೆ ಉಪಯುಕ್ತವಾಗಿವೆ. ಹಲಸಿನ ಮರದ ಚೂರುಗಳು ಹೋಮ ಹವನಗಳಂತಹ ಪುಣ್ಯ ಕಾರ್ಯಗಳಲ್ಲಿ ಉಪಯೋಗಿಸಲ್ಪಟ್ಟರೆ, ಬೆಳೆದ ಮರದ ಒಳತಿರುಳು ಬಹಳ ಗಟ್ಟಿ ಮತ್ತು ಹಳದಿ ಬಣ್ಣವನ್ನು ಹೊಂದಿ ಸುಂದರವಾಗಿದ್ದು, ಮರದ ಕರಕುಶಲ ವಸ್ತುಗಳ ತಯಾರಿಯಲ್ಲಿ ಉಪಯೋಗಿಸಬಹುದು. ಹಾಗೆಯೇ, ಇದರಿಂದ ಕಟ್ಟಿದ ಮನೆಯು ಅತ್ಯಂತ ಬಲಿಷ್ಠವಾಗಿದ್ದು, ನೂರಾರು ವರುಷಗಳ ಕಾಲ ಬಾಳಿಕೆ ಬರುತ್ತದೆ. ಇಂತಹ ಅತ್ಯುತ್ಕೃಷ್ಟ ಮರವನ್ನು ಕದಿಯಲು ಕಾಡುಗಳ್ಳರು ಸದಾ ಸಿದ್ಧರಾಗಿರುವುದರಿಂದ ಅದರ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಹಲಸಿನ ಎಲೆಯು ದೇವತಾಕಾರ್ಯಗಳಲ್ಲಿ, ಕಲಶಪೂಜೆಗಳಲ್ಲಿ ,ಹೋಮ ಹವನಗಳಲ್ಲಿ ಉಪಯೋಗಿಸಲ್ಪಡುತ್ತದೆ. ಮಾನವರು ಇಡ್ಲಿ ಎನ್ನುವ ವ್ಯಂಜನವನ್ನು ತಯಾರಿಸುವಾಗ ಹಲಸಿನ ಎಲೆಯಲ್ಲಿ ಬೇಯಿಸಿದಲ್ಲಿಇಡ್ಲಿಯ ರುಚಿಯು ಹೆಚ್ಚುವುದು. ಈ ರೀತಿಯಲ್ಲಿ ಹಲಸು, ಮಾನವನ ಹಸಿದ ಹೊಟ್ಟೆಯನ್ನು ವರ್ಷವಿಡೀ ತುಂಬಿಸಲು ಅತ್ಯಂತ ಉಪಯುಕ್ತವಾಗಿದೆ. ದೇವಲೋಕದಲ್ಲಿರುವ ಕಲ್ಪವೃಕ್ಷದಂತೆಯೇ ಇದನ್ನೂ ಕಲ್ಪವೃಕ್ಷವೆಂದು ಕರೆದರೆ ತಪ್ಪಲ್ಲ ಮಹರ್ಷಿಗಳೇ. ತಾವು ಈಗಲೇ ಭೂಲೋಕಕ್ಕೆ ತೆರಳಿ, ಸೂಕ್ತ ಮಾನವನನ್ನು ಹುಡುಕಿ, ಅವನಿಗೆ ಈ ಅಮೂಲ್ಯ ಬೀಜವನ್ನು ನೀಡಿ ವೃಕ್ಷ ಬೆಳೆಸಲು ಸಲಹೆಯನ್ನು ನೀಡಬೇಕು. ಭೂಲೋಕದ ಕಡೆಗೆ ಈಗಲೇ ಹೊರಡಿ ನಾರದರೇ” ಎಂದು ಬ್ರಹ್ಮ ದೇವರು ಆದೇಶಿಸಿದರು.
ಇತ್ತ ಭೂಲೋಕದಲ್ಲಿ ಆನಂದವರ್ಮನೆಂಬ ರಾಜನು ಗಂಧವತೀ ನಗರವನ್ನು ಆಳುತ್ತಿದ್ದನು. ರಾಜನು ಪ್ರಜಾ ಪರಿಪಾಲಕನಾಗಿದ್ದ ಕಾರಣ ಅವನ ರಾಜ್ಯವು ಅತ್ಯಂತ ಸುಭಿಕ್ಷವಾಗಿತ್ತು. ಬ್ರಹ್ಮ ದೇವರು ನೀಡಿದ ಅಮೂಲ್ಯ ಬೀಜವನ್ನು ನೀಡಿ, ಅದನ್ನು ಅಭಿವೃದ್ಧಿ ಪಡಿಸಲು ಈ ರಾಜನೇ ಸೂಕ್ತ ವ್ಯಕ್ತಿ ಎಂದರಿತ ನಾರದರು ಸನ್ಯಾಸಿ ವೇಷ ಧರಿಸಿ, ರಾಜನ ಸಂಪದ್ಭರಿತವಾದ ತೋಟವನ್ನು ಕಾಯುತ್ತಿದ್ದ ಮಾಲಿ ಎದುರು ಕಾಣಿಸಿಕೊಂಡರು. ಇದ್ದಕ್ಕಿದ್ದಂತೆ ತನ್ನೆದುರು ಅಪರಿಚಿತನನ್ನು ಕಂಡು ಮಾಲಿ ಅಚ್ಚರಿಗೊಂಡು, ಓಡಿ ಹೋಗಿ ರಾಜನಿಗೆ ವಿಷಯವನ್ನು ಅರುಹಿದನು.
ಮಾಲಿಯಿಂದ ವಿಷಯ ತಿಳಿದ ರಾಜನು ಅವರನ್ನು ಆಸ್ಥಾನಕ್ಕೆ ಬರಮಾಡಿಕೊಂಡನು. ನಾರದರು ಆ ಬೀಜದ ಗುಣ ವಿಶೇಷಗಳನ್ನು ರಾಜನಿಗೆ ಮನವರಿಕೆ ಮಾಡಿಸಿ; ಆ ಬೀಜದಿಂದ ಹುಟ್ಟುವ ಗಿಡ ಮರವಾದಾಗ, ಅದರಲ್ಲಿ ದೊರೆಯುವ ಫಲದ ಉಪಯೋಗಗಳನ್ನು ತಿಳಿಸುತ್ತಾ,. ಅದರ ಕಾಂಡದಿಂದ ಹಿಡಿದು ಮರ, ಎಲೆ ಸಹಿತ ಮಾತ್ರವಲ್ಲದೆ ಫಲದ ಬೆಳವಣಿಗೆಯ ವಿವಿಧ ಹಂತಗಳಲ್ಲಿ ಮಾನವರು ಯಾವ ರೀತಿ ಉಪಯೋಗಿಸಬಹುದು ಹಾಗೂ ಫಲದಿಂದ ತಯಾರಿಸಿ ಭುಜಿಸಬಹುದಾದ ಖಾದ್ಯ ಹಾಗೂ ವ್ಯಂಜನಗಳ ಬಗೆಗೆ ಸ್ವಾರಸ್ಯಕರವಾಗಿ ಬಣ್ಣಿಸಿದರು. ಈ ರೀತಿಯಲ್ಲಿ, ಸನ್ಯಾಸಿಯಿಂದ ರಾಜನು ಹಲಸಿನ ಉಪಯೋಗಗಳ ಕುರಿತು ಕೇಳಿ ಅತ್ಯಂತ ಹರ್ಷಿತನಾದನು. ತನ್ನ ತೋಟದ ಮಾಲಿಯನ್ನು ಕರೆದು ಸನ್ಯಾಸಿಯು ನೀಡಿದ ಬೀಜವನ್ನು ಬಹಳ ಜಾಗರೂಕತೆಯಿಂದ ಬಿತ್ತಿ, ಪೋಷಿಸಲು ಆಜ್ಞಾಪಿಸಿದನು. ಮುಂದೆ ಹಲವಾರು ವರ್ಷಗಳಲ್ಲಿ ಗಂಧವತೀ ನಗರದಲ್ಲಿ ಅನೇಕ ಹಲಸಿನ ಮರಗಳು ಬೆಳೆದು ರುಚಿಕರವಾದ ಯಥೇಚ್ಛ ಹಣ್ಣುಗಳನ್ನು ನೀಡತೊಡಗಿದವು.
ಒಮ್ಮೆ ಗಂಧವತೀ ನಗರಕ್ಕೆ ಭೀಕರ ಕ್ಷಾಮ ಬಂದೆರಗಿತು.ಮಳೆ ಇಲ್ಲದೆ ಬೆಳೆಯೂ ಇಲ್ಲ… ಬಡವರಿಗಂತೂ ಹಸಿವು ನೀಗಿಸಲು ಏನೂ ಆಹಾರ ಸಿಗದಾಯಿತು. ಅದೇ ನಗರದಲ್ಲಿದ್ದ ಸೋಮಣ್ಣ, ನೀಲಾ ದಂಪತಿಗೆ ನಾಲ್ಕು ಮಕ್ಕಳು. ಮನೆಯಲ್ಲಿ ಉಣ್ಣಲು ಏನೂ ಇಲ್ಲದಾಗ ನೀಲಾ ತನ್ನ ಪತಿಗೆ ಹೊರಗಡೆ ಹೋಗಿ ಉಳ್ಳವರ ಮನೆಗಳಿಂದ ಬೇಡಿ ಏನಾದರೂ ಆಹಾರ ತರಲು ಪತಿಯನ್ನು ಕಳುಹಿಸಿದಳು. ಅಂತೆಯೇ ಸೋಮಣ್ಣನು ಹೊರಗೆ ಹೋಗಿ ಒಂದು ಚೀಲದಷ್ಟು ಧಾನ್ಯವನ್ನು ಸಂಗ್ರಹಿಸಿದನು. ಮಧ್ಯಾಹ್ನದ ಹೊತ್ತು…ಬಿಸಿಲ ಝಳಕ್ಕೆ ಆಯಾಸಗೊಂಡು ಒಂದು ಮರದ ಕೆಳಗೆ ನೆರಳಿನಲ್ಲಿ ದಣಿವಾರಿಸಿಕೊಳ್ಳಲು ಕುಳಿತ. ಆಗಲೇ ಆ ಮರದ ಮೇಲಿನಿಂದ ದೊಪ್ಪನೆ ಬಿತ್ತೊಂದು ದೊಡ್ಡದಾದ ಹಣ್ಣು! ಬಿದ್ದ ರಭಸಕ್ಕೆ ಹಣ್ಣು ಬಿರಿದು, ಅದರೊಳಗಿದ್ದ ಬೀಜಗಳು ಹೊರಕ್ಕೆ ಚೆಲ್ಲಿ ಹರಡಿದವು. ಆ ಹಣ್ಣನ್ನು ಸೋಮಣ್ಣನು ಈ ವರೆಗೂ ನೋಡಿರಲಿಲ್ಲ. ಆದ್ದರಿಂದ, ಹೊಟ್ಟೆ ಹಸಿಯುತ್ತಿದ್ದರೂ ಅದನ್ನು ತಿನ್ನುವ ಧೈರ್ಯ ಮಾಡಲಿಲ್ಲ. ಆದರೆ, ಅಲ್ಲೆಲ್ಲ ಹರಡಿದ್ದ ಬೀಜಗಳನ್ನು ಆರಿಸಿ ಚೀಲದೊಳಕ್ಕೆ ತುಂಬಿಕೊಂಡ.
ಎಲ್ಲವನ್ನೂ ಬಲ್ಲ ನಾರದ ಮುನಿಗಳು ಇದನ್ನು ಗಮನಿಸುತ್ತಿದ್ದರು. ಸೋಮಣ್ಣನಿಗೆ ಹಣ್ಣಿನ ಬಗ್ಗೆ ತಿಳಿಸಲು ಇದೇ ಸಕಾಲವೆಂದುಕೊಂಡು ಆತನ ಬಳಿಗೆ ವೇಷ ಮರೆಸಿಕೊಂಡು ಬಂದರು. ಅಲ್ಲಿ ಬಿದ್ದಿದ್ದ ಹಣ್ಣಿನ ಬಗ್ಗೆ ಎಲ್ಲಾ ತಿಳುವಳಿಕೆಯನ್ನು ನೀಡಿದರು. ಹಲಸಲ್ಲಿ ಎರಡು ವಿಧಗಳಿವೆ. ಒಂದನೆಯದು ಬಲಿಕ/ಬಲಿಕ್ಕೆ…ಇದರ ತೊಳೆ ಹಣ್ಣಾದಾಗ ಗಟ್ಟಿಯಾಗಿರುತ್ತದೆ. ಇನ್ನೊಂದು ತುಳುವ…ಇದರ ಹಣ್ಣಿನ ತೊಳೆ ಮೆತ್ತಗಿದ್ದು, ಹಣ್ಣಿನ ಮಧ್ಯಭಾಗದಲ್ಲಿರುವ ಗೂಂಜು ಎನ್ನುವ ಗಟ್ಟಿಯಾದ ಭಾಗದಿಂದ ಕಳಚಿಕೊಳ್ಳುತ್ತದೆ. ತಿನ್ನಲು ಮತ್ತು ಯಾವುದೇ ಖಾದ್ಯವನ್ನು ತಯಾರಿಸಲು ಬಲಿಕ ಹಣ್ಣು ಅತ್ಯಂತ ಸೂಕ್ತ. ಈ ವಿಷಯವನ್ನು ನಾರದರು ಸೋಮಣ್ಣನಿಗೆ ತಿಳಿಸಿ, ಪಕ್ಕದ ಮರದಲ್ಲಿರುವ ಒಳ್ಳೆಯ ಹಣ್ಣುಗಳನ್ನು ಆರಿಸಿ ಕೊಯ್ದು ಮನೆಗೆ ಒಯ್ದು ಕತ್ತರಿಸಿ ತಿಂದು ಎಲ್ಲರೂ ಹೊಟ್ಟೆ ತುಂಬಿಸಿಕೊಳ್ಳಲು ಸಲಹೆ ನೀಡಿದರು. ಎರಡೂ ರೀತಿಯ ಹಣ್ಣುಗಳ ಬೀಜಗಳು ಒಳ್ಳೆಯ ಪೌಷ್ಠಿಕಾಂಶಗಳಿಂದ ಕೂಡಿದ್ದು ಬೇಯಿಸಿ, ಲವಣವನ್ನು ಸೇರಿಸಿ ವಿವಿಧ ವ್ಯಂಜನಗಳನ್ನು ತಯಾರಿಸಿ ಸೇವಿಸುವ ಬಗ್ಗೆಯೂ ಮಾಹಿತಿ ನೀಡಿದರು. ಸೋಮಣ್ಣನು ಅತ್ಯಾನಂದದಿಂದ ನಾರದರಿಗೆ ನಮಸ್ಕರಿಸಿ, ಒಳ್ಳೆಯ ಹಣ್ಣುಗಳನ್ನು ಮನೆಗೆ ಒಯ್ದು ಹೆಂಡತಿ ಮಕ್ಕಳಿಗೆ ನೀಡಿದನು. ಈ ರೀತಿಯಲ್ಲಿ, ಬಡವರ ಹಸಿವನ್ನು ನೀಗಿಸುವಲ್ಲಿ ಹಲಸು ಬಹುಮುಖ್ಯ ಪಾತ್ರವನ್ನು ವಹಿಸತೊಡಗಿತು ಎಂಬಲ್ಲಿಗೆ, ಪನಸೋಪಾಖ್ಯಾನ ಕಥಾ ಪ್ರಸಂಗವು ಸಮಾಪ್ತಿಯಾಯಿತು.
ಶಂಕರಿ ಶರ್ಮ, ಪುತ್ತೂರು.
ಪನಸೋಪ್ಯಾಖ್ಯಾನ ಲೇಖನ.. ಕಥೆಯ ಹಿನ್ನಲೆಯಲ್ಲಿ… ಬಹಳ ಚೆನ್ನಾಗಿ ಮೂಡಿ ಬಂದುದೆ ಶಂಕರಿ ಮೇಡಂ
ಧನ್ಯವಾದಗಳು ನಾಗರತ್ನ ಮೇಡಂ
ಸೊಗಸಾದ, ಮಾಹಿತಿಪೂರ್ಣ ಬರಹ
ಚೆನ್ನಾಗಿ ವಿವರಣೆ ನೀಡಿದಿರಿ ಅಕ್ಕೋ
ಧನ್ಯವಾದಗಳು ಆಶಾ..
ಧನ್ಯವಾದಗಳು ನಯನಾ ಮೇಡಂ
ಅಹಾ…ಪೌರಾಣಿಕ ಶೈಲಿಯಲ್ಲಿ ಆಧುನಿಕ ಕಥಾ ನಿರೂಪಣೆ..ಸೂಪರ್..
ಧನ್ಯವಾದಗಳು ಮಾಲಾ ಮೇಡಂ
ಕಥೆ ಹೇಳುತ್ತಾ ಹೇಳುತ್ತಲೇ ರುಚಿಕರ ಹಲಸಿನ ಹಣ್ಷಿನ, ಹಲಸಿನ ಮರದ ಬಹುಪಯೋಗಿ ಗುಣಗಳನ್ನು ವರ್ಣಿಸಿರುವ ಪರಿ ಸೂಪರ್.
ಧನ್ಯವಾದಗಳು ಪದ್ಮಾ ಮೇಡಂ