ಅಪಾತ್ರ ದಾನ
ನನ್ನ ನಾಡಿನ ನೆಲದುದ್ದಕ್ಕೂ
ನದಿಗಳ ಹರಿಸಿದೆ
ಅವುಗಳ ಅಕ್ಕಪಕ್ಕದಲಿ
ಹಸಿರಿನ ವನಸಿರಿಯನಿರಿಸಿದೆ
ಹೆಸರೇ ತಿಳಿಯದ ಲಕ್ಷೆಪಲಕ್ಷ ಹೂಗಳ ಅರಳಿಸಿದೆ
ಅವುಗಳ ಸುತ್ತಲೆಂದು
ಬಣ್ಣಗಳ ಬಳಿದ ಚಿಟ್ಟೆಗಳ ಹುಟ್ಟಿಸಿ ಓಡಬಿಟ್ಟೆ
ಅಷ್ಟಗಲದ ಭೂಮಿಯ ಚಾವಣಿಗೆ ನೀಲಿಯ ಬಳಿದು
ಅಲ್ಲಿ ಹಾರಲೆಂದು ಹಕ್ಕಿಗಳ ಕಳಿಸಿಕೊಟ್ಟೆ!
ವ್ಯವಧಾನವೆಲ್ಲಿತ್ತು?
ಸವಿಯುವ ಸಮಾದಾನವೆಲ್ಲಿತ್ತು?
ನಿನ್ನೊಲುಮೆಯ ಕೃಪೆಯನಿಟ್ಟುಕೊಳ್ಳಲು
ನನ್ನೊಳಗಿನ ಮೃಗಕ್ಕೆ!
ನಿನ್ನ ನದಿಗಳಿಗೆ ಕಾರ್ಖಾನೆಗಳ
ವಿಷ ಬೆರೆಸಿದೆ
ಅವುಗಳಕ್ಕಪಕ್ಕದ ಹಸಿರಿಗೆ ಕೊಡಲಿಯನಿಟ್ಟೆ
ಹೂತೋಟಕೆ ಬೆಂಕಿಯ ಹಚ್ಚಿದೆ
ಹಕ್ಕಿಗಳ ಹಾದಿಗೆ ಕ್ಷಿಪಣಿಗಳ ಹಾರಿ ಬಿಟ್ಟೆ
ನೀನಿತ್ತ ಎಲ್ಲದಕೂ ನನ್ನದೆಂಬ
ಅಂಕಿತವನಿಟ್ಟು
ನಾಶಕೆ ಹೊರಟೆ
ಕೇಳದೆಯೇ ಎಲ್ಲವನೂ ಕೊಟ್ಟ
ನಿನ್ನ ಕರುಣೆ
ನನಗರ್ಥವಾಗಲಿಲ್ಲ
ಅಪಾತ್ರರಿಗೇನನ್ನೂ ನೀಡಬಾರದೆಂಬ ನೀತಿ ನಿನಗೇಕೆ
ನೆನಪಾಗಲಿಲ್ಲ!
.
– ಕು.ಸ.ಮಧುಸೂದನ್ , ರಂಗೇನಹಳ್ಳಿ
ಕವಿತೆ ತುಂಬಾ ಭಾವಪೂರ್ಣವಾಗಿದೆ…ಎಲ್ಲಾ ನಿಜ…ಮನಸ್ಸಿಗೆ ಖೇದವೆನಿಸುತ್ತದೆ…