(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಜೆಟ್ ಬೋಟ್ ರೈಡ್
ಪಾಶ್ಚಿಮಾತ್ಯರು ನಮ್ಮ ಹಾಗೆ ವಯಸ್ಸಾಯಿತೆಂದು ಮುಸುಕು ಹಾಕಿ ಮೂಲೆಯಲ್ಲಿ ಕೂರುವವರಲ್ಲ. ಎಲ್ಲರೂ ಒಂದಲ್ಲ ಒಂದು ಬಗೆಯ ಸಾಹಸ ಕ್ರೀಡೆಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ನಾವೂ ಒಂದೆರೆಡು ಸವಾರಿಗಳಲ್ಲಿ ಕುಳಿತು ಸಂಭ್ರಮಿಸಿದೆವು. ಎಂಟು ಜನ ಕುಳಿತುಕೊಳ್ಳುವ ಜೆಟ್ ಬೋಟ್ ನಲ್ಲಿ ಕುಳಿತು ಕವಾರುವಾ ನದಿಯ ಮೇಲೆ ಹೊರಟಿತು ನಮ್ಮ ಸವಾರಿ. ಇದು ತೊಂಭತ್ತು ಕಿ.ಮೀ. ವೇಗದಲ್ಲಿ ಓಡುವುದು ಎಂದು ನಮ್ಮ ಗೈಡ್ ಹೇಳಿದಾಗ ಎದೆ ಝಲ್ ಎಂದಿತ್ತು. ಸುರಕ್ಷತಾ ಕ್ರಮವಾಗಿ ಅವರು ನೀಡಿದ ಜಾಕೆಟ್ ತೊಟ್ಟು, ಸೀಟ್ ಬೆಲ್ಟ್ ಹಾಕಿ ತುಸು ಅಳುಕುತ್ತಲೇ ಹೊರಟಿತ್ತು ನಮ್ಮ ಜೆಟ್ ಬೋಟ್ ಸವಾರಿ. ಮೊದ ಮೊದಲು ನಿಧಾನವಾಗಿ ಹೊರಟ ಬೋಟ್, ಇದ್ದಕ್ಕಿದ್ದಂತೆ ವೇಗವಾಗಿ ಓಡತೊಡಗಿತ್ತು. ಸುತ್ತಲೂ ಇದ್ದ ಬೆಟ್ಟ ಗುಡ್ಡಗಳು, ಆ ಬೆಟ್ಟ ಗುಡ್ಡಗಳ ಮಧ್ಯೆ ಹಾವಿನಂತೆ ಅಂಕುಡೊಂಕಾಗಿ ಸಾಗುತ್ತಿದ್ದ ನದಿಯ ಮಧ್ಯೆ ನಡೆದಿತ್ತು ನಮ್ಮ ಜೆಟ್ ಬೋಟ್ ಸರ್ಕಸ್. ಬೋಟ್ ಚಾಲಕನು ತನ್ನ ಬೋಟಿನ ಎಲ್ಲಾ ಚಲನೆಗಳನ್ನೂ ತನ್ನ ಕೈಸನ್ನೆಗಳ ಮೂಲಕ ತೋರಿಸುತ್ತಿದ್ದ. ತನ್ನ ವೇಗ ಹೆಚ್ಚಿಸಿಕೊಂಡ ಬೋಟ್ ಘರ್ಜಿಸುತ್ತಾ ಭೋರ್ಗರೆಯುತ್ತಾ ಮುಂದೆ ಸಾಗಿತು. ಸರೋವರದ ನೀರನ್ನು ರಭಸವಾಗಿ ಸೀಳಿಕೊಂಡು ಮುನ್ನುಗ್ಗುತ್ತಿದ್ದ ಹಾಗೆಯೇ, ಚಾಲಕನು ಕೃಷ್ಣ ಪರಮಾತ್ಮನು ಸುದರ್ಶನ ಚಕ್ರವನ್ನು ತಿರುಗಿಸುವ ಹಾಗೆ, ತನ್ನ ಬೆರಳುಗಳನ್ನು ವೃತ್ತಾಕಾರವಾಗಿ ತಿರುಗಿಸಿದನು. ಜೆಟ್ ಬೋಟ್ ಸುಳಿಗೆ ಸಿಕ್ಕ ತರಗೆಲೆಯ ಹಾಗೆ ರೊಯ್ಯನೆ ತಿರುಗಿತು. ನೀರೆಲ್ಲಾ ನಮ್ಮ ಮೇಲೆ ಹಾರಿ, ನಾವು ತೊಯ್ದು ತೊಪ್ಪೆಯಾದೆವು. ನಾವು ಚೀರಿದೆವು, ಭಯದಿಂದ ನಡುಗಿದೆವು, ಮಕ್ಕಳಂತೆ ಕೇಕೆ ಹಾಕಿದೆವು. ಗಹಗಹಿಸಿ ನಕ್ಕೆವು.
ನನ್ನ ಕನ್ನಡಕದ ತುಂಬೆಲ್ಲಾ ನೀರ ಹನಿಗಳ ಲಾಸ್ಯ, ಕಣ್ಣು ಮಬ್ಬಾಯಿತು, ಕನ್ನಡಕ ತೆಗೆದು ಬ್ಯಾಗಿನಲ್ಲಿಟ್ಟೆ. ಮತ್ತೆ ಮುನ್ನುಗಿತ್ತು ನಮ್ಮ ಬೋಟ್. ಒಮ್ಮೆ ನೀಲಮಣಿಯಂತೆ ಹೊಳೆಯುತ್ತಿದ್ದ ಸರೋವರ, ಇನ್ನೊಮ್ಮೆ ಪಚ್ಚೆಯಂತೆ ಮಿನುಗುತ್ತಿದ್ದ ಸರೊವರ, ಕೆಲವೆಡೆ ಹಸಿರನ್ನು ಹೊದ್ದ ಗಿರಿಗಳು, ಮತ್ತೆ ಕೆಲವೆಡೆ ಬೋಳು ಬೋಳಾದ ಬೆಟ್ಟಗಳು. ಈ ನಿಸರ್ಗದ ಸಿರಿಯನ್ನು ಕಣ್ತುಂಬಿಕೊಳ್ಳುತ್ತಾ ಸಾಗಿದವರಿಗೆ ಸಮಯದ ಪರಿವೆಯೇ ಇರಲಿಲ್ಲ. ನಲವತ್ತು ನಿಮಿಷಗಳ ನಮ್ಮ ಜೆಟ್ ಬೋಟ್ ಪಯಣ ಮುಗಿದಿತ್ತು, ನಮ್ಮ ಬೋಟ್ ದಡ ಸೇರಿತ್ತು, ಸವಿ ನೆನಪುಗಳನ್ನು ಮೆಲುಕು ಹಾಕುತ್ತಾ ಬೋಟ್ ಇಳಿದೆವು. ಬೋಟ್‌ನಲ್ಲಿ ಸಾಗುವಾಗ ಕಂಡ ಅದ್ಭುತ ದೃಶ್ಯಗಳು ಕಣ್ಣ ಮುಂದೆ ಮಿಂಚಿ ಮರೆಯಾಗುತ್ತಿದ್ದವು-ಪರ್ವತಗಳ ನೆತ್ತಿಯ ಮೇಲಿನಿಂದ ತೂಗುಬಿದ್ದ ಗ್ಲೇಸಿಯರ್ ಗಳು, ಹಚ್ಚ ಹಸಿರು ಹೊದ್ದ ಬೆಟ್ಟಗುಡ್ಡಗಳು, ಗ್ಲೇಸಿಯರ್ ಕರಗಿ ನೀರಾಗಿ ಹರಿವ ಹಳ್ಳಕೊಳ್ಳಗಳು, ಕೋಡುಗಲ್ಲುಗಳಿಂದ ಧುಮ್ಮಿಕ್ಕುತ್ತಿದ್ದ ಜಲಪಾತಗಳು ಇತ್ಯಾದಿ. ಜಾಕೆಟ್ ಬಿಚ್ಚಿಟ್ಟು ನಮ್ಮ ಸಹಪ್ರಯಾಣಿಕರು ಕಿಕ್ಕಿಸಿದ ಪೋಟೋಗಳನ್ನು ನೋಡುತ್ತಾ ಸಾಗಿದೆವು.
ಇದೇ ಅಲ್ಲವೆ ಜೀವನ ಜಾತ್ರೆ. ಬೋಟ್ ಸಾರಥಿ ನಮಗೆ ಕಾಣುತ್ತಿದ್ದ, ಆದರೆ ನಮ್ಮ ಬದುಕಿನ ಸಾರಥಿ ಎಲ್ಲಿ ಅಡಗಿ ಕುಳಿತಿರುವನೋ? ಇಲ್ಲಿನ ಗಿರಿ ಕಂದರಗಳಲ್ಲಿ ಅಡಗಿ ಕುಳಿತು ನಮ್ಮನ್ನಾಡಿಸುತ್ತಿರುವನೇ ಅಥವಾ ಅಗಾಧವಾದ ಜಲರಾಶಿಯಲ್ಲಿ ಮುಸುಕಿ ಹಾಕಿ ಮಲಗಿರುವನೇ ಅಥವಾ ಮೇರು ಪರ್ವತಗಳಲ್ಲಿ ಧ್ಯಾನಮಗ್ನನಾಗಿ ಕುಳಿತಿರುವನೇ? ಅವನಾಡಿಸಿದಂತೆ ನಾವಾಡಬೇಕಲ್ಲ. ಸಿನೆಮಾದ ಗೀತೆಯೊಂದನ್ನು ಗುನುಗುತ್ತಾ ಸಾಗಿದೆ, ‘ಆಡಿಸಿ ನೋಡು, ಬೀಳಿಸಿ ನೋಡು ಮುರಿದು ಹೋಗದು’.
‘ಬನ್ನಿ, ಈಗ ಬಂಗಿ ಜಂಪ್ ಮಾಡುವ ಸ್ಥಳಕ್ಕೆ ಹೋಗೋಣ’ ಎಂದು ನಮ್ಮ ಗೈಡ್ ಹೇಳಿದಾಗ ನನ್ನ ಕುತೂಹಲ ಗರಿಗೆದರಿತ್ತು. ನಮ್ಮನ್ನು ಕೋಚ್ ನಲ್ಲಿ ಬೆಟ್ಟದ ನೆತ್ತಿಯ ಮೇಲೆ ಕರೆದೊಯ್ಯಲಾಯಿತು. ಅಲ್ಲಿ ಸಾಹಸಿಗಳ ದಂಡೇ ನೆರೆದಿತ್ತು. ಕ್ವೀನ್ಸೌ ಟೌನಿನ ಬಂಗಿ ಜಂಪಿಂಗ್ ಪಾಯಿಂಟ್ ಜಗತ್ತಿನಲ್ಲಿಯೇ ಮೊಟ್ಟ ಮೊದಲ ಕೇಂದ್ರ ಎಂಬ ಹೆಗ್ಗಳಿಕೆ ಇದೆ. ಎತ್ತರವಾದ ಶಿಖರದ ನೆತ್ತಿಯ ಮೇಲೆ ಸಾಹಸಿ ತರುಣರನ್ನು ಸಾಲಾಗಿ ನಿಲ್ಲಿಸಿ, ಅವರಿಗೆ ಸಲಹೆ ಸೂಚನೆಗಳನ್ನು ನೀಡಿ, ಅವರ ಕೈ ಕಾಲುಗಳನ್ನು ಹಗ್ಗದಿಂದ ಬಿಗಿಯುವರು. ನಾವು ನೋಡ ನೋಡುತ್ತಿದಂತೆಯೇ ಶಿಖರದ ಮೇಲಿನಿಂದ ಒಬ್ಬ ಜಿಗಿದ, ಕೆಳಗೆ ಆಳವಾದ ಪ್ರಪಾತ, ನಾವು ಉಸಿರು ಬಿಗಿ ಹಿಡಿದು ಅವನನ್ನೇ ನೋಡುತ್ತಿದ್ದೆವು. ಎರಡೇ ಕ್ಷಣ, ಅವನಿಗೆ ಬಿಗಿದಿದ್ದ ಹಗ್ಗ, ಅವನನ್ನು ತಡೆದಿತ್ತು, ಅವನು ಅಲ್ಲಿಯೇ ಹಕ್ಕಿಯಂತೆ ತೇಲಾಡಿದ. ನಂತರ ನಿಧಾನವಾಗಿ ಅವನನ್ನು ಮೇಲೆಳೆದು ಕೊಳ್ಳಲಾಯಿತು. ಅವನು ಗರುಡನ ಹಾಗೆ ಆಗಸದಲ್ಲಿ ತೇಲಾಡಿದ್ದ, ಹಕ್ಕಿಗಳ ಹಾಗೆ ರೆಕ್ಕೆ ಬಿಚ್ಚಿ ಹಾರಾಡಿದ್ದ. ಆದಿ ಅಂತ್ಯವಿಲ್ಲದ ವಾಯುಮಂಡಲದಲ್ಲಿ ಈಜುತ್ತಿದ್ದ. ಅವನ ಹಿಂದೆ ಒಬ್ಬೊಬ್ಬರಾಗಿ ಬೆಟ್ಟದ ನೆತ್ತಿಯಿಂದ ಜಿಗಿದರು, ಅವರನ್ನು ನೊಡುತ್ತಿದ್ದ ನಮ್ಮಿಂದ ಪ್ರತೀಬಾರಿಯೂ ಚೀತ್ಕಾರ ಹೊರಡುತ್ತಿತ್ತು, ಆದರೆ ಅವರು ಉತ್ಸಾಹದಿಂದ ಈ ಕ್ರೀಡೆಯಲ್ಲಿ ಪಾಲ್ಗೊಂಡಿದ್ದರು.
ಮುಂದಿನ ಕ್ರೀಡೆ, ಸ್ಕೈ ಡೈವಿಂಗ್. ಎರಡು ಬೆಟ್ಟಗಳ ಶಿಖರಗಳ ನಡುವೆ ಒಂದು ಸೇತುವೆಯನ್ನು ನಿರ್ಮಿಸಿದ್ದರು. ಕೆಳಗೆ ಒಂದು ನದಿ ಹರಿಯುತ್ತಿತ್ತು. ಸೇತುವೆಯ ಮಧ್ಯಭಾಗದಲ್ಲಿ ಸ್ಕೈ ಡೈವಿಂಗ್‌ಗೆ ಅಗತ್ಯವಾದ ಸಲಕರಣೆಗಳನ್ನು ಇಟ್ಟ ಒಂದು ಶೆಡ್. ಉತ್ಸಾಹಿಗಳ ದಂಡೇ ಅಲ್ಲಿ ನೆರೆದಿತ್ತು. ಅವರಿಗೆ ಸೂಕ್ತವಾದ ಸೂಚನೆಗಳನ್ನು ನೀಡಿ, ಅವರ ಸುರಕ್ಷತೆಗಾಗಿ ತಲೆಗೊಂದು ಹೆಲ್ಮೆಟ್, ಕೈ ಕಾಲುಗಳಿಗೆ ಹಗ್ಗ ಬಿಗಿದು ಅವರಿಗೆ ಅಲ್ಲಿಂದ ಕೆಳಗೆ ಜಂಪ್ ಮಾಡಲು ಆದೇಶ ನೀಡುತ್ತಿದ್ದರು. ಅವರು ಒನ್, ಟೂ, ತ್ರಿ ಎಂದು ಹತ್ತು ಎಣಿಸುವ ಹೊತ್ತಿಗೆ, ಅವನು ಅಲ್ಲಿಂದ ಕೆಳಗೆ ಜಿಗಿಯುತ್ತಿದ್ದ. ನಾವು ಎವೆಯಿಕ್ಕದೆ ಅವನನ್ನೇ ನೋಡುತ್ತಾ, ಅಕಸ್ಮಾತ್ ಅಕ್ಕಪಕ್ಕದಲ್ಲಿದ್ದ ಬಂಡೆಗಳಿಗೆ ಅವನ ತಲೆ ತಾಕಿದರೆ, ನೀರೊಳಗೆ ಮುಳುಗಿದರೆ ಎಂದೆಲ್ಲಾ ಆತಂಕ ಪಡುತ್ತಿರುವಾಗ, ಅವನು ಇನ್ನೇನು ನೀರಿನಲ್ಲಿ ಬಿದ್ದ ಎನ್ನುವ ಹೊತ್ತಿಗೆ ಅವನನ್ನು ನಿಲ್ಲಿಸಿ ಮೇಲೆಳೆದುಕೊಳ್ಳಲಾಗುತ್ತಿತ್ತು. ಈ ಸಾಹಸಕ್ರೀಡೆಗಳನ್ನು ನೋಡುತ್ತಾ ಮೈಮರೆತವಳಿಗೆ ಹಕ್ಕಿಗಳ ಕೂಗು ಕೇಳಿಸಿತ್ತು. ಆ ಬಂಡೆಗಳ ಪೊಟರೆಗಳಲ್ಲಿ ಗೂಡು ಕಟ್ಟಿ ಮೊಟ್ಟೆಯಿಟ್ಟು, ಮರಿಮಾಡುತ್ತಿದ್ದ ಹಕ್ಕಿಗಳ ಕಲರವ. ಹಕ್ಕಿಗಳ ಮಾತುಗಳನ್ನು ಆಲಿಸೋಣ ಬನ್ನಿ-‘ನಮ್ಮಂತೆ ನೀನು ಹಾರಬಲ್ಲೆಯಾ? ನೋಡು ನಮ್ಮನ್ನು ಆಗಸದೆತ್ತರಕ್ಕೆ ಹಾರಬಲ್ಲೆವು, ನಮಗಿರುವಂತಹ ರೆಕ್ಕೆಪುಕ್ಕಗಳು ನಿನಗೆಲ್ಲಿದೆ? ಅಷ್ಟೆಲ್ಲಾ ಆವಿಷ್ಕಾರ ನಡೆಸಿ ಎರಡು ಘಳಿಗೆ ಹಾರಬಲ್ಲೆ ಅಷ್ಟೆ. ಬಿಡು ಬಿಡು ನಿನ್ನ ಹುಚ್ಚಾಟವನ್ನು. ಮೀನಿನಂತೆ ಈಜಲು ಹೊರಟೆ, ಹಕ್ಕಿಯಂತೆ ಹಾರಲು ರೆಡಿಯಾದೆ ಆದರೆ ಮಾನವನಂತೆ ಈ ಭೂಮಿಯ ಮೇಲೆ ನಡೆಯುವುದನ್ನು ನೀನು ಕಲಿಯಲೇ ಇಲ್ಲ. ನೋಡು ನಿಸರ್ಗವನ್ನು, ಪಾಲಿಸು ಅದರ ತತ್ವಗಳನ್ನು, ಬದುಕಲು ಕಲಿ ನಿಸರ್ಗದೊಂದಿಗೆ, ಸಹಬಾಳ್ವೆ ನಡೆಸು ಇತರ ಪ್ರಾಣಿ ಪಕ್ಷಿಗಳೊಂದಿಗೆ. ಬೆಳೆಸು ಗಿಡ ಮರಗಳನ್ನು, ಉಳಿಸು ಪರಿಸರವನ್ನು.’ ಅಬ್ಬಾ, ಈ ಪಕ್ಷಿಗಳು ಹೇಳುವ ಮಾತುಗಳನ್ನು ಕೇಳಲು ನಾವು ಸಿದ್ಧರಾಗಿದ್ದೇವೆಯೇ?
ಈ ಎಲ್ಲಾ ಚಿಂತನೆಗಳು ಮನದಲ್ಲಿ ಮೂಡುತ್ತಿರುವಾಗ, ಗೈಡ್‌ನ ಕೂಗು ಎಚ್ಚರಿಸಿತ್ತು. ನಾವು ಅಲ್ಲಿಂದ ನೇರವಾಗಿ ‘ಬಾಬ್ ಪೀಕ್’ಗೆ ಗೊಂಡೋಲಾ ಸವಾರಿಯ ಮೂಲಕ ಹೊರಟಿದ್ದೆವು. ಗಾಜಿನ ಪೆಟ್ಟಿಗೆಯಂತಿದ್ದ ಹಲವು ಗೊಂಡೋಲಾಗಳು ಮೇಲೆ ಕೆಳಗೆ ಸರಾಗವಾಗಿ ಚಲಿಸುತ್ತಿದ್ದವು. ನಾವು ನಾಲ್ಕು ನಾಲ್ಕು ಜನರಂತೆ ಈ ಗೊಂಡೋಲಾಗಳಲ್ಲಿ ಕುಳಿತು, ಸುತ್ತಮುತ್ತ ಇದ್ದ ನಿಸರ್ಗ ಸಿರಿಯನ್ನು ಕಣ್ತುಂಬಿಕೊಳ್ಳುತ್ತಾ ಬಾಬ್‌ಪೀಕ್ ತಲುಪಿದೆವು. ಅಬ್ಬಾ, ಇದೆಂತಹ ವಿಹಂಗಮ ದೃಶ್ಯ, ಪದಗಳಲ್ಲಿ ಬಣ್ಣಿಸಲು ಅಸಾಧ್ಯ. ಇಡೀ ಕ್ವೀನ್ಸೌಟೌನ್‌ನ ಸುಂದರವಾದ ನೋಟ ನಮ್ಮ ಕಣ್ಣ ಮುಂದಿತ್ತು. ಕೆಲವರು ಪುಟ್ಟದಾದ ಎರಡು ಚಕ್ರದ ವಾಹನ ‘ಲ್ಯೂಜ್’ಗಳಲ್ಲಿ ಕುಳಿತು ಖುಷಿಯಿಂದ ಕೆಳಗೆ ಜಾರುತ್ತಿದ್ದರು. ಈ ದ್ವ್ವಿಚಕ್ರ ವಾಹನಗಳು ನೆಲಕ್ಕೆ ತಾಗುವಂತಹ ಕುಬ್ಜ ಸ್ಕೂಟಿಗಳಂತಿದ್ದವು. ಮಕ್ಕಳನ್ನೂ ಕೂರಿಸಿಕೊಂಡು ಹೋಗಬಹುದಿತ್ತು. ಹಾದಿಯಲ್ಲಿ ಸಾಕಷ್ಟು ತಿರುವುಗಳಿದ್ದು ಅಲ್ಲಲ್ಲಿ ಸುರಂಗಗಳೂ ಇದ್ದವು. ಎಲ್ಲವನ್ನೂ ದಾಟುತ್ತಾ ಕೇಕೆ ಹಾಕುತ್ತಾ ವೇಗವಾಗಿ ಸಾಗಿದ್ದವರನ್ನು ಕಂಡೆವು. ಅಲ್ಲಿದ್ದ ರೆಸ್ಟೊರಾಂಟಿನಲ್ಲಿ ಟೀ ಕುಡಿಯುತ್ತಾ ಸುತ್ತಲಿನ ಪ್ರಕೃತಿ ಸೌಂದರ್ಯವನ್ನು ಸವಿಯುತ್ತಾ, ಜನರ ಮೋಜು ಮಸ್ತಿಯನ್ನು ಕಾಣುತ್ತಾ ಕಾಲ ಕಳೆದೆವು. ಇನ್ನೂ ಈ ನಗರದ ಸೌಂದರ್ಯದ ಖನಿಯನ್ನು ನಾವು ನೋಡಿರಲಿಲ್ಲ. ಇಂಗ್ಲೆಂಡಿನ ರಾಣಿಯ ಕಿರೀಟದಲ್ಲಿರುವ ಕೊಹಿನೂರ್ ವಜ್ರದಂತಿರುವ ‘ಮಿಲ್‌ಫೋರ್ಡ್’ನ ರಮಣೀಯತೆಯನ್ನು ಕಂಡು ಪುನೀತರಾಗಬೇಕಿತ್ತು. ಇಂದಿನ ತಿರುಗಾಟ ಮುಗಿದಿತ್ತು. ನಾಳೆಯ ಪ್ರವಾಸಕ್ಕೆ ಸಿದ್ದರಾಗಬೇಕು.
ಈ ಪ್ರವಾಸಕಥನದ ಹಿಂದಿನಪುಟ ಇಲ್ಲಿದೆ: http://surahonne.com/?p=43214
(ಮುಂದುವರಿಯುವುದು)
–ಡಾ.ಗಾಯತ್ರಿದೇವಿ ಸಜ್ಜನ್ , ಶಿವಮೊಗ್ಗ.
ಸ್ಕೈ ಡೈವಿಂಗ್ ನೋಡುವವರ ಕಣ್ಣಿಗೆ ಭಯ ಹುಟ್ಟಿಸಬಹುದು ಅದನ್ನು ಚೆನ್ನಾಗಿ ಹೇಳಿದ್ದೀರಿ ಸ್ವತಃ ಡೈವ್ ಮಾಡುತ್ತಿರುವವನಿಗೆ ಏನೂ ಯೋಚಿಸುವ ಅವಕಾಶ ಸಿಗದು ಎನ್ನುವುದು ನನ್ನ ಅಂದಾಜು! ಆ ಬಗ್ಗೆ ಡೈವಿಂಗ್ ಮಾಡಿದ ಒಂದಿಬ್ಬರ ಅಭಿಪ್ರಾಯಗಳನ್ನು ಸಂಗ್ರಹಿಸಿ ಹೇಳಬಹುದೆ!!?
ಚಂದದ ನಿರೂಪಣೆಯ ಸುಂದರ ಪ್ರವಾಸ ಕಥನದ ಮತ್ತೊಂದು ಕಂತನ್ನು ಓದಿದ ಸಂತಸ ನನ್ನದಾಯಿತು.
Beautiful
ಪ್ರವಾಸ ಕಥನದ ನಿರೂಪಣೆ..ಮಾಡುವ ಗಾಯತ್ರಿ ಮೇಡಂ.. ಅದಕ್ಕೆ ಪೂರಕ ಚಿತ್ರ ಹಾಕುವ ಹೇಮಾ ಮೇಡಂ..ಇಬ್ಬರಿಗೂ ಧನ್ಯವಾದಗಳು..
ನಿಮ್ಮ ಸಲಹೆ ಸೂಕ್ತವಾಗಿದೆ ವಿಶ್ವನಾಥ್
ಮುಂದಿನ ದಿನಗಳಲ್ಲಿ ಖಂಡಿತ ಅವರ ಅಭಿಪ್ರಾಯವನ್ನು ಕೇಳುವೆ
ವಂದನೆಗಳು
ನಯನ ,ಪದ್ಮಾ ಮೇಡಂ ಹಾಗೂ ನಾಗರತ್ನ ಮೇಡಂ ರವರಿಗೆ ತುಂಬು ಹೃದಯದ ವಂದನೆಗಳು
ಓದಿ ರೋಮಾಂಚಿತನಾದೆ. ನಿತ್ಯ ಬದುಕಿರುವುದೇ ನಮ್ಮಯ ಸಾಹಸವಾಗಿರುವಾಗ
ಇನ್ನೆಲ್ಲಿ ಸಾಹಸಕ್ರೀಡೆ!
ಓದಿ ಖುಷಿಗೊಳ್ಳುತ್ತೇವೆ. ಇದ್ದಲ್ಲೇ ಬ್ರಹ್ಮಾಂಡ ನಿರ್ಮಿಸಿಕೊಳ್ಳುತ್ತೇವೆ. ಹಾಗಂತ ಪ್ರವಾಸ
ಕಥನ ಬೇಡ ಎನ್ನಲಾರೆ; ನಿಮ್ಮ ಚೆಂದದ ಅನುಭವ ಮತ್ತು ನಿರೂಪಣೆ ಎರಡೂ ನಮ್ಮವೇ
ಆಗಿವೆಯೆಂಬ ಅನುಭವ ತರಿಸಿತು. ಧನ್ಯವಾದಗಳು.
ಇವೆಲ್ಲವನ್ನು ಈಗ ತಂತ್ರಜ್ಞಾನದ ಫಲಿತವಾಗಿ, ಕಾರಣವಾಗಿ ನಾವು ನೋಡಿದ್ದರೂ
ನಿಮ್ಮ ಬರೆಹವನ್ನು ಓದುವಾಗ ಮೈ ಜುಂ ಎಂದಿತು. ಇದು ಸತ್ಯವಾಗಿ ಬರೆಹವು ನೀಡುವ ಸುಖ
ಅದಕೆ ನಿಮ್ಮ ಶೈಲಿಕಾರಣ. ಇನ್ನೊಂದು ಧನ್ಯವಾದ ಮೇಡಂ, ಮುಂದಿನ ಕಂತಿಗೆ ಕಾಯುವಂತಾಗಿದೆ.
ಕವಾರುವಾ ನದಿಯಲ್ಲಿ ಜೆಟ್ ಬೋಟಿನಲ್ಲಿ ಕುಳಿತು ಪಡೆದ ರೋಮಾಂಚಕಾರಿ ಅನುಭವ, ಸ್ಕೈ ಡೈವಿಂಗ್ ಮತ್ತು ಬಂಗಿ ಜಂಪ್ ವೀಕ್ಷಣೆ, ಗೊಂಡೋಲಾದಲ್ಲಿ ನಿಸರ್ಗದ ನಡುವೆ ಪಯಣಿಸಿ ಮುಂದಕ್ಕೆ ಮಿಲ್ ಫೋರ್ಡ್ ನತ್ತ ಚಿತ್ತವಿಟ್ಟ ಅನುಭವ ಕಥನ ಸೂಪರ್… ಗಾಯತ್ರಿ ಮೇಡಂ!
ನಿಮ್ಮ ಸುದೀರ್ಘವಾದ ಪ್ರತಿಕ್ರಿಯೆಗೆ ಧನ್ಯವಾದಗಳು ಮಂಜುನಾಥ್ ಸರ್
ತಪ್ಪದೇ ನನ್ನ ಎಲ್ಲ ಲೇಖನಗಳನ್ನು ಓದುತ್ತಾ ಪ್ರತಿಕ್ರಿಯಿಸುವ ಶಂಕರಿ ಶರ್ಮ ರವರಿಗೆ ತುಂಬು ಹೃದಯದ ವಂದನೆಗಳು