ಪ್ರವಾಸ

 ಚೆಲುವಿನ ತಾಣ ನ್ಯೂಝಿಲ್ಯಾಂಡ್ – ಪುಟ 6

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಆಕ್‌ಲ್ಯಾಂಡಿನ ಹೆಗ್ಗುರುತಾದ ವಾಸ್ತುಶಿಲ್ಪ – ಸ್ಕೈ ಟವರ್

ಆಕಾಶದಲ್ಲಿ ದೇವತೆಗಳಂತೆ ತೇಲಬೇಕೆ? ಹಕ್ಕಿಯಂತೆ ಹಾರಬೇಕೆ? ಕಪಿಯಂತೆ ಜಿಗಿಯಬೇಕೆ? ಹಾಗಿದ್ದಲ್ಲಿ ಬನ್ನಿ, ನ್ಯೂಜಿಲ್ಯಾಂಡಿನ ಪ್ರಮುಖ ನಗರ ಆಕ್‌ಲ್ಯಾಂಡಿಗೆ ಹೋಗೋಣ. ಪ್ರವಾಸಿಗರು ನಗರದ ಸಮೀಪ ಬರುತ್ತಿದ್ದಂತೆಯೇ, ಅವರನ್ನು ಸ್ವಾಗತಿಸಲು ಈ ಆಕಾಶ ಗೋಪುರ ಎದ್ದು ನಿಲ್ಲುವುದು. ಪ್ರವಾಸಿಗರ ಮನ ಸೆಳೆಯುವ ಕಡಲ ತೀರಗಳು, ನೌಕಾ ಬಂದರು, ಹಚ್ಚ ಹಸಿರಿನಿಂದ ಕಂಗೊಳಿಸುವ ಬೆಟ್ಟ ಗುಡ್ಡಗಳು ಈ ನಗರವನ್ನು ಸಿಂಗರಿಸಿವೆ. ಆಕ್‌ಲ್ಯಾಂಡಿನ ವಾಸ್ತುಶಿಲ್ಪದ ಹೆಗ್ಗುರುತಾಗಿ ನಿಲ್ಲುವ ಈ ಸ್ಕೈ ಟವರ್ ನಲ್ಲಿ ಏನುಂಟು ಏನಿಲ್ಲ. ಪ್ರವಾಸಿಗರ ಮನರಂಜನೆಗಾಗಿ, ಇದು ಒಂದು ಮಾಂತ್ರಿಕ ಲೋಕದಂತೆ ತೆರೆದುಕೊಳ್ಳುವುದು. ಸುಮಾರು 27 ವರ್ಷಗಳ ಹಿಂದೆ ಆರಂಭವಾದ ಈ ಸ್ಕೈ ಸಿಟಿಯಲ್ಲಿ ಒಂದು ಥಿಯೇಟರ್, ಕ್ಯಾಸಿನೋ, ಕ್ರೀಡಾ ಸಂಕೀರ್ಣ,ಸ್ಕೈ ಟವರ್‌ನಲ್ಲಿ 360 ಡಿಗ್ರಿ ತಿರುಗುವ ರೆಸ್ಟೊರಾಂಟ್, ಸ್ಕೈ ಬಾರ್, ಯೋಗ ತರಗತಿಗಳು, ಸಾಹಸ ಕ್ರೀಡೆಗಳು ಇತ್ಯಾದಿ.

328 ಮೀಟರ್ ಎತ್ತರವಿರುವ ಸ್ಕೈ ಟವರ್‌ನಲ್ಲಿ ಏನೇನಿದೆ ಎಂದು ಒಮ್ಮೆ ಕಣ್ಣು ಹಾಯಿಸೋಣ, ‘ನಮ್ಮ ಲೆಕ್ಕದಲ್ಲಿ ಸುಮಾರು 71 ಅಂತಸ್ತಗಳು ಇರುವ ಈ ಗೋಪುರದಲ್ಲಿ ಪ್ರವಾಸಿಗರಿಗೆ 50, 51, 53 ಹಾಗೂ 60 ಲೆವಲ್‌ನಲ್ಲಿ ಪ್ರವೇಶಿಸಲು ಅನುಮತಿಯಿದೆ. ಐವತ್ತನೇ ಲೆವೆಲ್‌ನಲ್ಲಿ ಸ್ಕೈ ಬಾರ್, ಐವತ್ತೊಂದನೇ ಲೆವೆಲ್‌ನಲ್ಲಿ ಪ್ರಮುಖ ‘ಅಬ್ಸ್ರ್‌ವೇಷನ್ ಡೆಕ್’ ಅಂದರೆ ಸುತ್ತಮುತ್ತ ಹರಡಿರುವ ನಗರವನ್ನು ವೀಕ್ಷಿಸುವ ತಾಣವಿದ್ದು, ಅಲ್ಲಿ ಒಂದು ಯೋಗ ಕಲಿಸುವ ಸ್ಟುಡಿಯೋ ಸಹ ಇದೆ. ಐವತ್ತೆರಡನೇ ಲೆವೆಲ್‌ನಲ್ಲಿ ಅಚ್ಚರಿ ಮೂಡಿಸುವಂತಹ 360 ಡಿಗ್ರಿ ತಿರುಗುವ ರೆಸ್ಟೊರಾಂಟ್ ಇದ್ದು, ಅಲ್ಲಿ ಊಟ ಮಾಡುವುದೇ ಒಂದು ವಿಶಿಷ್ಟವಾದ ಅನುಭವ. ಐವತ್ಮೂರನೆಯ ಲೆವೆಲ್ ಯುವ ಜನರ ಮನರಂಜನೆಗಾಗಿಯೇ ರೂಪಿಸಲ್ಪಟ್ಟಿದ್ದು, ಇಲ್ಲಿ ಐಸ್ ಕ್ರೀಮ್ ಪಾರ್ಲರ್‌ಗಳು,ಸ್ಕೈ ವಾಕ್, ಸ್ಕೈ ಜಂಪ್ ಇತ್ಯಾದಿ ಸಾಹಸಕ್ರೀಡೆಗಳು ಇವೆ. ಅರವತ್ತನೇ ಲೆವೆಲ್‌ನಲ್ಲಿ ಸ್ಕೈ ಡೆಕ್ ಇದ್ದು, ನೆಲದ ಮೇಲೆ ಗಾಜಿನ ಶೀಟ್‌ಗಳನ್ನು ಹೊದಿಸಲಾಗಿದ್ದು, ಅಲ್ಲಿಂದ ಬಾಗಿ ನೋಡಿದರೆ ಕೆಳಗಿರುವ ಪಟ್ಟಣವನ್ನು ವೀಕ್ಷಿಸಬಹುದು. ನಗರದ ಕಡಲತೀರಗಳನ್ನೂ, ವೈಟೆಮಾಟಾ ಹಾರ್‌ಬರ್ ಸೇತುವೆಯ ಮೇಲೆ ಎಂಟು ಲೇನ್ ರಸ್ತೆಗಳನ್ನೂ, ವಿಶಾಲವಾದ ಪಟ್ಟಣವನ್ನೂ ನೋಡಬಹುದು. ಇಲ್ಲಿನ ಮತ್ತೊಂದು ವಿಶೇಷವೆಂದರೆ ಎರಡು ಸಾಗರಗಳು ಇಲ್ಲಿ ಬಂದು ಸೇರುತ್ತವೆ, ‘ಪೆಸಿಫಿಕ್ ಮಹಾಸಾಗರ ಹಾಗೂ ಟಾಸ್ಮಾನ್ ಸಮುದ್ರ’. ಇಲ್ಲಿಂದ ಸೂರ್ಯಾಸ್ತವನ್ನು ನೋಡುವುದೇ ಒಂದು ಮರೆಯಲಾಗದ ಅನುಭವ. ಕತ್ತಲಾದಂತೆ ನಗರದ ಗಗನಚುಂಬಿ ಕಟ್ಟಡಗಳಲ್ಲಿ ಬಣ್ಣಬಣ್ಣದ ನಿಯಾನ್ ದೀಪಗಳು ಹೊಳೆಯುವಾಗ ನಾವು ಯಕ್ಷಲೋಕದಲ್ಲಿ ವಿಹರಿಸಿದಂತಹ ಅನುಭವ.

Auckland Sky Tower PC: Internet

ಈಗ ನಾವು 53 ನೇ ಅಂತಸ್ತಿಗೆ ವೇಗವಾಗಿ ಚಲಿಸುವ ಲಿಫ್ಟ್ನಲ್ಲಿ ಹೋಗೋಣ ಬನ್ನಿ, ಐಸ್ ಕ್ರೀಮ್ ಮೆಲ್ಲುತ್ತಾ ಕಿಟಿಕಿಯ ಗಾಜುಗಳಿಂದ ಹೊರಗಿಣುಕುತ್ತಾ ಸಾಹಸ ಕ್ರೀಡೆಗಳಿಗೆ ಸಾಕ್ಷಿಯಾಗೋಣ ಬನ್ನಿ. ಆ ಎತ್ತರವಾದ ಗೋಪುರದ ಸುತ್ತ ನಿರ್ಮಿಸಲಾಗಿರುವ ಮಾರ್ಗದಲ್ಲಿ ಆರು ಜನ ಯುವಕ ಯುವತಿಯರು ಒಬ್ಬ ಗೈಡ್‌ನೊಂದಿಗೆ ಆಕಾಶದಲ್ಲಿ ತೇಲಾಡಲು ಸಿದ್ದರಾಗಿ ನಿಂತಿದ್ದರು. ತಲೆಗೊಂದು ಹೆಲ್ಮೆಟ್ ಧರಿಸಿ, ಸೊಂಟ ಹಾಗೂ ಕೈಗಳಿಗೆ ಬಿಗಿದ ಹಗ್ಗದೊಂದಿಗೆ ಮುಗಿಲೆತ್ತರದಲ್ಲಿ ನಿರ್ಮಾಣವಾಗಿದ್ದ ಮಾರ್ಗದಲ್ಲಿ ಹೆಜ್ಜೆ ಹಾಕಲು. ಗೈಡ್ ಬಗೆ ಬಗೆಯ ವ್ಯಾಯಾಮ ಮಾಡಿಸುತ್ತಾ ಅವರಲ್ಲಿ ಧೈರ್ಯ, ವಿಶ್ವಾಸ ತುಂಬಿಸುತ್ತಿದ್ದ. ಗೋಪುರದ ಸುತ್ತ ಅವರನ್ನು ನಿಧಾನವಾಗಿ ಕರೆದೊಯ್ಯುತ್ತಾ, ಹಾಸ್ಯ ಚಟಾಕಿಗಳನ್ನು ಹಾರಿಸುತ್ತಾ ಕರೆದೊಯ್ಯುತ್ತಿದ್ದ. ಅವರನ್ನೆಲ್ಲಾ ಒಂದೆಡೆ ನಿಲ್ಲಿಸಿ, ಹಗ್ಗದ ಮೇಲೆ ಕೂರಿಸಿ ಮಾರ್ಗಮಧ್ಯೆ ಉಯ್ಯಾಲೆಯಾಡುವ ಭಂಗಿಯಲ್ಲಿ ಬಾಗಿಸಿ ಫೋಟೋ ತೆಗೆದ. ಅವರು ಸಂತಸದಿಂದ ಕೇಕೆ ಹಾಕಿದರು. ನಾವೂ ಮೂವತ್ತು ನಲವತ್ತು ವರ್ಷಗಳ ಹಿಂದೆ ಹೋಗುವ ಹಾಗಿದ್ದಿದ್ದರೆ, ಅವರ ಹಾಗೆ ಆಕಾಶ ಮಾರ್ಗದಲ್ಲಿ ತೇಲಾಡಬಹುದಿತ್ತೇನೋ? ದೇವತೆಗಳಿಗೇ ಸವಾಲು ಹಾಕಬಹುದಿತ್ತೇನೋ? ಆದರೆ ಕಾಲಚಕ್ರ ಉರುಳಿ ಹೋಗಿತ್ತು, ಈಗ ನಾವು ಅವರನ್ನು ನೋಡಿ ತಣ್ಣಗೆ ಕುಳಿತು ಸಂತಸ ಪಡುವ ಸರದಿ. ಮನದಲ್ಲಿ ಈ ಭಾವಗಳು ಮೂಡುತ್ತಿದ್ದಂತೆಯೇ ಮತ್ತೊಂದು ರೋಮಾಂಚಕಾರಿ ಘಟನೆ ನಮ್ಮ ಕಣ್ಣ ಮುಂದೆ ಜರುಗಿತ್ತು. ಈಗ ಸ್ಕೈ ಜಂಪ್ ಮಾಡುವವರ ಸರದಿ. ಅಲ್ಲಿ ಒಂದು ಪುಟ್ಟ ಗೇಟ್ ಇತ್ತು, ಅದನ್ನು ತೆರೆದು ಒಬ್ಬೊಬ್ಬರೇ ಸರದಿಯ ಮೇಲೆ ಕೆಳಗೆ ಜಿಗಿಯುತ್ತಿದ್ದರು. ಸುಮಾರು ಎಂಭತ್ತು ಅಡಿ ಜಿಗಿದ ಮೇಲೆ, ಸ್ವಲ್ಪ ಹೊತ್ತು ಅವರು ಅಲ್ಲಿಯೇ ತೇಲಾಡುತ್ತಿದ್ದರು, ನಂತರ ಮೆಲ್ಲನೆ ಅವರನ್ನು ಮೇಲೆಳೆದುಕೊಳ್ಳಲಾಗಿತ್ತಿತ್ತು. ಅವರನ್ನು ಕಂಡ ನಮ್ಮ ಎದೆ ನಡುಗಿತ್ತು, ಗಂಟಲು ಆರಿತ್ತು. ಅವರು ಮೇಲೆ ಬಂದ ಮೇಲೆಯೇ ನಾವು ಉಸಿರಾಡಿದ್ದು.

ಈ ಚಟುವಟಿಕೆಗಳನ್ನು ನೋಡುತ್ತಾ ಮೈಮರೆತವರು, ನಮ್ಮ ಪ್ರವಾಸಿ ತಂಡದ ಮ್ಯಾನೇಜರ್‌ನ ಕರೆಗೆ ಓಗೊಡಲೇ ಬೇಕಲ್ಲ, ಅವನು ಈ ಸ್ಕೈ ಟವರ್ ಬಗ್ಗೆ ಎಲ್ಲಾ ಮಾಹಿತಿಯನ್ನೂ ನೀಡಿದ – ವಿಶ್ವದಲ್ಲಿ ಅತ್ಯಂತ ಎತ್ತರವಾದ ಗೋಪುರವೆಂದರೆ ದುಬೈನಲ್ಲಿರುವ ಬುರ್ಜ್ ಖಲೀಫಾ, ಹಾಗೆಯೇ ಮಲೇಶಿಯಾ, ಚೈನಾ, ಅಮೆರಿಕ, ಫ್ರಾನ್ಸ್ ಇತ್ಯಾದಿ ದೇಶಗಳಲ್ಲಿಯೂ ಇಂತಹ ಗೋಪುರಗಳು ನಿರ್ಮಾಣವಾಗಿವೆ. ಆಕ್‌ಲ್ಯಾಂಡಿನ ಸ್ಕೈ ಟವರ್ 28 ನೇ ಸ್ಥಾನದಲ್ಲಿದ್ದು, ದಕ್ಷಿಣ ಗೋಳಾರ್ಧದಲ್ಲಿ ಎರಡನೆಯ ಸ್ಥಾನದಲ್ಲಿದೆ. ನಾನು ದುಬೈ, ಅಮೆರಿಕಾ, ಫ್ರಾನ್ಸ್ ದೇಶಗಳಲ್ಲಿದ್ದ ಸ್ಕೈ ಟವರ್ಸ್ ನೋಡಿದ್ದೇನೆ ಎಂದು ಹೆಮ್ಮೆಯಿಂದ ಹೇಳಿದೆ. 60ನೇ ಲೆವೆಲ್‌ನಲ್ಲಿ ನೆಲದ ಮೇಲೆ ಗಾಜಿನ ಶೀಟ್‌ಗಳನ್ನು ಹೊದಿಸಲಾಗಿತ್ತು, ಅಲ್ಲಿಂದ ಬಾಗಿ ನೋಡಿದರೆ ಕೆಳಗಿನ ಲೋಕವೆಲ್ಲಾ ಕಾಣುತ್ತಿತ್ತು, ನಾವೆಷ್ಟು ಎತ್ತರದಲ್ಲಿದ್ದೇವೆ ಎಂಬ ಭಾವ ನಮ್ಮಲ್ಲಿ ಆವರಿಸಿತ್ತು.

ಆಕಾಶದೆತ್ತರಕ್ಕೆ ಏರಿದವರು ಈಗ ಸಮುದ್ರದಾಳಕ್ಕೆ ಇಳಿದು ನೋಡುವ ಸರದಿ. ಇದೇ ಆಕ್‌ಲ್ಯಾಂಡಿನ ಸುಪ್ರಸಿದ್ದ ‘ಕೆಲ್ಲಿ ಟಾರ್ಲ್ ಟನ್ಸ್ ಅಕ್ವೇರಿಯಮ್’. ಇದೊಂದು ಸಾಗರದಾಳದಲ್ಲಿರುವ ಅದ್ಭುತವಾದ ಜಲಚರಗಳನ್ನು ಸಮುದ್ರದಡಿಯಿರುವ ದೊಡ್ಡದಾದ ಅಕ್ವೇರಿಯಮ್‌ನಲ್ಲಿ ಪ್ರದರ್ಶಿಸುವ ತಾಣ. ಸಮುದ್ರದ ಅಲೆಗಳ ಮೇಲೆ ತೇಲುತ್ತಾ ಚಲಿಸುವ ಸೇತುವೆಯ ಮೇಲೆ ನಿಂತರೆ ಸಾಕು, ಅದು ನಿಮ್ಮನ್ನು ಅಕ್ವೇರಿಯಮ್ ಒಳಗೆ ಕರೆದೊಯ್ಯುವುದು. ಈ ಅಕ್ವೇರಿಯಮ್‌ನ ಕತೃವಾದ ಕೆಲ್ಲಿ ಟಾರ್ಲ್ ಟನ್ ಸಾಮುದ್ರಿಕ ಪುರಾತತ್ವಶಾಸ್ತ್ರಜ್ಞನಾಗಿದ್ದ, ಜೊತೆಗೇ ಅಪಘಾತಕ್ಕೀಡಾದ ಹಡಗುಗಳಲ್ಲಿ ಅಡಗಿದ್ದ ಸಂಪತ್ತನ್ನು ಹೆಕ್ಕಿ ತರುವ ವೃತ್ತಿಯನ್ನೂ ಮಾಡುತ್ತಿದ್ದ. ಚಾಣಾಕ್ಷ ಡೈವರ್ ಆಗಿದ್ದ, ಕೆಲ್ಲಿ ಮೀನಿನಂತೆ ನೀರಿನಲ್ಲಿ ಈಜುತ್ತಿದ್ದ. ಸಾಗರಾದಾಳದಲ್ಲಿ ವಾಸಿಸುವ ಅದ್ಭುತವಾದ ಜಲಚರಗಳನ್ನು ನೋಡುತ್ತಾ ಕನಸೊಂದನ್ನು ಕಾಣುತ್ತಾನೆ. ಈ ಸುಂದರವಾದ ಜಲಚರಗಳನ್ನು ಎಲ್ಲರೂ ನೋಡಬೇಕು, ಅದಕ್ಕಾಗಿ ಒಂದು ಬೃಹತ್ ಅಕ್ವೇರಿಯಮ್ಮನ್ನು ನಿರ್ಮಿಸಬೇಕು ಎಂಬ ಮಹದಾಸೆ ಹೊತ್ತಿದ್ದ. ‘ವೇರ್ ದೇರ್ ಈಸ್ ಎ ವಿಲ್, ದೇರ್ ಈಸ್ ಎ ವೆ’ ಎಂಬ ಇಂಗ್ಲಿಷ್ ನಾಣ್ಣುಡಿಯಂತೆ ಕೆಲ್ಲಿಯ ಪರಿಶ್ರಮದಿಂದ ಈ ಅಕ್ವೇರಿಯಮ್ ನಿರ್ಮಾಣವಾಯಿತು. ಇಲ್ಲಿನ ವಿಶೇಷವಾದ ಆಕರ್ಷಣೆಗಳು- ಕೆಲ್ಲಿ ಬಳಸಿರುವ ಉಪಯೋಗಿಸದಿದ್ದ ಸೆಪ್ಟಿಕ್ ಟ್ಯಾಂಕುಗಳು, ಅಂಕು ಡೊಂಕಾದ ಸುರಂಗಗಳು ಹಾಗೂ ಚಲಿಸುವ ಮಾರ್ಗಗಳು. 25, ಜನವರಿ 1995 ರಂದು ‘ಕೆಲ್ಲಿ ಟಾರ್ಲ್ ಟನ್ಸ್ ಅಕ್ವೇರಿಯಮ್’ ಲೋಕಾರ್ಪಣೆಯಾಯಿತು. ತನ್ನ ಕನಸು ನನಸಾಗಿದ್ದು ಕಂಡ ಕೆಲ್ಲಿ ಸಂತೃಪ್ತಿಯಿಂದ ಮುಂದಿನ ಎರಡು ತಿಂಗಳಿನಲ್ಲಿಯೇ ಕಣ್ಣುಮುಚ್ಚಿದ. ಪ್ರತಿನಿತ್ಯ ಸಾವಿರಾರು ಜನರು ಇಲ್ಲಿಗೆ ಭೇಟಿ ನೀಡಿ, ಸಂತಸ ಪಡುವಾಗ ಕೆಲ್ಲಿಯ ಆತ್ಮ ಆನಂದದಿಂದ ವಿರಮಿಸುವುದಲ್ಲವೇ?

‘ಕೆಲ್ಲಿ ಟಾರ್ಲ್ ಟನ್ಸ್ ಅಕ್ವೇರಿಯಮ್‌ ‘ನ ಪ್ರವೇಶದ್ವಾರದಲ್ಲಿಯೇ ಇದೆ, ಅಂಟಾರ್ಟಿಕಾದ ಪ್ರತಿಕೃತಿಯಾದ ಸ್ಕಾಟ್ ಎಂಬ ವಿಜ್ಞಾನಿಯ ಕುಟೀರ. ಇದು ನಮ್ಮನ್ನು ವಿಶ್ವದಲ್ಲಿಯೇ ಅತ್ಯಂತ ಶೀತಲವಾದ ಹವಾಮಾನವುಳ್ಳ ಪ್ರದೇಶಕ್ಕೆ ಕರದೊಯ್ದು, ಒಂದು ಶತಮಾನದ ಹಿಂದೆ ಅಂಟಾರ್ಟಿಕಾದಲ್ಲಿ ತಂಗಿದ್ದ ವಿಜ್ಞಾನಿಯ ಪರಿಚಯ ಮಾಡಿಕೊಡುವುದು. ಅಲ್ಲಿದ್ದ ಕುರ್ಚಿ ಮೇಜು ಹಾಗು ಇನ್ನಿತರೆ ಸಲಕರಣೆಗಳು ಸ್ಕಾಟ್‌ನ ಕಥೆಯನ್ನು ಹೇಳುತ್ತಿವೆ. ‘ಪೆಂಗ್ವಿನ್ಸ್’ ಎಂದು ಹುಡುಗನೊಬ್ಬ ಸಂತಸದಿಂದ ಕೇಕೆ ಹಾಕುತ್ತಿದ್ದ, ಹಿಮದಂತೆ ತಣ್ಣಗಿದ್ದ ನೀರಿನಲ್ಲಿ ಮೀನಿನಂತೆ ಈಜುತ್ತಿದ್ದ ಈ ಪಕ್ಷಿಗಳು, ಹಿಮವನ್ನು ಹೊದ್ದ ನೆಲದ ಮೇಲೆ ಮನುಷ್ಯರಂತೆ ನಿಧಾನವಾಗಿ ಹೆಜ್ಜೆ ಹಾಕುವುದನ್ನು ಕಂಡಾಗ ನಗು ಚಿಮ್ಮಿ ಬರುವುದು. ಕಪ್ಪು ಕೋಟು ತೊಟ್ಟ ಲಾಯರ್‌ಗಳಂತೆ ಹಿಮಪಾತದ ನಡುವೆ ಪೆಂಗ್ವಿನ್‌ಗಳು ಗಜಗಮನೆಯಂತೆ ನಡೆದು ಬಂದವು. ಈ ಪೆಂಗ್ವಿನ್‌ಗಳ ಕುರಿತಾಗಿ ಮಾವೊರಿಗಳಲ್ಲಿ ಒಂದು ಸ್ವಾರಸ್ಯಕರವಾದ ಕಥೆಯಿದೆ – ಒಮ್ಮೆ ಕಡಲ ಹಕ್ಕಿ ಆಲ್ಬೆಟ್ರಾಸ್ ಮತ್ತು ಪೆಂಗ್ವಿನ್‌ಗಳ ಮಧ್ಯೆ ‘ನಾನು ಹೆಚ್ಚು, ನಾನು ಹೆಚ್ಚು ಎಂಬ ವಾಗ್ವಾದ ನಡೆದಿರುತ್ತದೆ. ಆಗ ಅಲ್ಲಿಗೆ ಬಂದ ಸಮುದ್ರದೇವತೆ ಆಲ್ಬೆಟ್ರಾಸ್‌ಗೆ ವಿಶಾಲವಾದ ರೆಕ್ಕೆಗಳನ್ನು ನೀಡಿ, ನೀನು ಆಗಸದಲ್ಲಿ ಎಲ್ಲರಿಗಿಂತ ಎತ್ತರದಲ್ಲಿ ಹಾರು ಎಂದು ಹರಸುತ್ತಾಳೆ. ಪೆಂಗ್ವಿನ್‌ಗೆ ಪುಟ್ಟದಾದ ರೆಕ್ಕೆಗಳನ್ನು ನೀಡಿ, ನೀನು ಈಗ ನೀರಿನಲ್ಲಿ ವೇಗವಾಗಿ ಈಜಬಲ್ಲೆ ಎಂದು ನುಡಿಯುತ್ತಾಳೆ. ಎಷ್ಟು ಸುಂದರವಾದ ಕಥೆಯನ್ನು ಮಾವೊರಿಗಳು ಹೆಣೆದಿದ್ದಾರೆ ಅಲ್ವಾ?

PC :Internet

ಮುಂದಿನ ಗೂಡಿನಲ್ಲಿ ಜಯಂಟ್ ಸ್ಕ್ವಿಡ್ ಎಂಬ ಅಪರೂಪದ ಜಲಚರ ಅಡಗಿ ಕುಳಿತಿತ್ತು. ಇದರ ಶರೀರದ ಬುಡದಲ್ಲಿ ಇಂಕಿನಂತಹ ದ್ರವವನ್ನು ಉಗುಳುವ ಒಂದು ಚೀಲ ಇರುತ್ತದೆಯಂತೆ. ಪಕ್ಕದಲ್ಲಿ ಅಡ್ಡಗಾಲು ಹಾಕುತ್ತಾ ನಡೆಯುವ ಏಡಿಗಳ ವಾಸ. ಮುಂದೆ ಹೋಳಿ ಹಬ್ಬದಂದು ಎರಚುವ ಎಲ್ಲಾ ಬಣ್ಣಗಳ ಮೀನುಗಳು – ನೀಲ, ತಿಳಿ ಗುಲಾಬಿ, ಕೇಸರಿ, ಬಿಳಿ ಇತ್ಯಾದಿ. ಪುಟ್ಟ ಮೀನುಗಳಂತೂ ಮಿಂಚಿನ ವೇಗದಲ್ಲಿ ಅತ್ತಿಂದಿತ್ತ ಇತ್ತಿಂದತ್ತ ಓಡುತ್ತಿದ್ದವು. ಮಧ್ಯಮ ಗಾತ್ರದ ಮೀನುಗಳು ನಮ್ಮನ್ನೆಲ್ಲಾ ಪಿಳಿ ಪಿಳಿ ನೋಡುತ್ತಾ ಸಾಗಿದರೆ, ದೊಡ್ಡ ಮೀನುಗಳು ‘ದಾರಿ ಯಾವುದಯ್ಯಾ, ಹೊರ ಹೋಗಲು ದಾರಿ ಯಾವುದಯ್ಯಾ’ ಎಂದು ದಾರಿ ಹುಡುಕುತ್ತಾ ತಿರುಗಾಡುತ್ತಿದ್ದವು. ‘ಅರೆ, ಪ್ಯಾರಾಚೂಟ್‌ಗಳಂತೆ ಹಾರುತ್ತಿರುವ ಈ ಪ್ರಾಣಿಗಳು ಯಾವುವು ಎಂದು ನೋಡಿದರೆ ಅಲ್ಲಿ, ‘ಜೆಲ್ಲಿ ಫಿಶ್’ ಎಂದು ಬರೆದಿತ್ತು. ಬಹುಶಃ ಇವುಗಳನ್ನು ನೋಡಿಯೇ ವಿಜ್ಞಾನಿಗಳು ಪ್ಯಾರಾಚೂಟನ್ನು ಮಾಡಿರಬಹುದು ಎಂದು ಮೊಮ್ಮಗ ಯಶೂ ಹೇಳುತ್ತಿದ್ದ್ತ. ಇಲ್ಲಿ ಎಂಭತ್ತು ಜಾತಿಯ ಜಲಚರಗಳೂ ಹಾಗೂ ಎರಡು ಸಾವಿರ ಮೀನುಗಳೂ ಇವೆಯಂತೆ. ನಾವು ಮುಂದೆ ಸಾಗಿದಾಗ ಕಂಡದ್ದು, ಮಕ್ಕಳಿಗಾಗಿ ಪುಟ್ಟದಾದ ಆಟದ ಬಯಲು, ಬಾಯಾಡಿಸಲು ಕುರುಕಲು ತಿಂಡಿ. ನಾವೂ ಕಾಫಿ ಕುಡಿದು ಮುಂದೆ ಸಾಗಿದೆವು. ಇಲ್ಲಿಯವರೆಗೆ ಅಂದ ಚೆಂದದ ಜಲಚರಗಳನ್ನು ನೋಡಿದ್ದ ನಮಗೆ ಗಾಬರಿ ಹುಟ್ಟಿಸುವಂತಹ ದೊಡ್ಡ ದೊಡ್ಡ ಶಾರ್ಕ್ ಗಳು ನಮ್ಮ ತಲೆಯ ಮೇಲೆ ಚಲಿಸುತ್ತಿದ್ದವು. ಅವುಗಳ ಹರಿತವಾದ ಹಲ್ಲುಗಳು ಎಂತಹವರ ಎದೆಯನ್ನೂ ನಡುಗಿಸುವಂತಿದ್ದವು. ಅಗ ಅಲ್ಲಿಗೆ ಬಂತು ಪಿರಾನ ಎಂಬ ಮೀನು, ಇದು ನರಭಕ್ಷಕ ಮೀನಂತೆ, ಅಬ್ಬಾ ಎಂತೆಂತಹ ಮೀನುಗಳು. ಮೈಮೇಲೆಲ್ಲಾ ಮುಳ್ಳು ಹೊತ್ತ ಮೀನೊಂದು ನಿಧಾನವಾಗಿ ತೇಲಿ ಬಂತು. ಗುಲಾಬಿಯ ಗಿಡದಲ್ಲಿರುವಂತಹ ಮುಳ್ಳುಗಳು. ಸಣ್ಣಪುಟ್ಟ ಮೀನುಗಳು ಈ ಮುಳ್ಳುಗಳೊಗೇ ಸಿಕ್ಕಿಬಿದ್ದರೂ ಅಚ್ಚರಿಪಡಬೇಕಾಗಿಲ್ಲ. ಆಗೊಂದು ಮೀನು ವಿಶಾಲವಾದ ರೆಕ್ಕೆಗಳನ್ನು ಬೀಸುತ್ತಾ ಅಲ್ಲಿಗೆ ಬಂತು. ಅರೆ, ಹಕ್ಕಿಗಳ ಹಾಗೆ ರೆಕ್ಕೆ ಬೀಸುತ್ತಾ ಬರುವ ಮೀನು ನೀರಿನಲ್ಲಿದೆಯಲ್ಲಾ ಎಂದು ಅಚ್ಚರಿ ಪಡುವ ಸರತಿ ಇಂದು ನಮ್ಮದಾಗಿತ್ತು. ಅದರ ಹೆಸರು ‘ರೇ ಫಿಶ್’. ಅದರಡಿಯಲ್ಲಿ ಹಾವಿನಂತೆ ತೆವಳುತ್ತಾ ಇರುವ ಮೀನಿಗೆ ಈಲ್ ಮೀನು ಎಂಬ ಹೆಸರು. ಇನ್ನು ಕುದುರೆ ಮುಖ ಹೊತ್ತ ಮೀನು ಇಲ್ಲಿತ್ತು, ಅದರ ಹೆಸರು ಕಡಲ್ಗುದುರೆ. ಹವಳದ ಗುಡ್ಡೆಗಳ ಸಂದುಗೊಂದುಗಳಲ್ಲೆೆಲ್ಲಾ ಹೊರಟಿತ್ತು ಸೀ ಏನ್‌ಮೋನ್ ಗಳ ಸವಾರಿ. ಕೃಷ್ಣನ ನವಿಲುಗರಿಯಲ್ಲಿರುವ ಬಣ್ಣದ ಮೀನುಗಳು ನಮಗೇ ಸವಾಲು ಹಾಕುತ್ತಿದ್ದವು, ‘ನೀವು ಚೆಂದವೋ, ನಾವು ಚೆಂದವೋ?’ಎಂದು. ಈಗ ಹೇಳಿ ಸಾಗರದಡಿಯಲ್ಲಿಯಿರುವ ಈ ಜಲಚರಗಳ ಅಂದಚೆಂದಕ್ಕೆ ಸಾಟಿಯಾರು?

ಈ ಪ್ರವಾಸಕಥನದ ಹಿಂದಿನಪುಟ ಇಲ್ಲಿದೆ:  http://surahonne.com/?p=43134
(ಮುಂದುವರಿಯುವುದು)

ಡಾ.ಗಾಯತ್ರಿದೇವಿ ಸಜ್ಜನ್ , ಶಿವಮೊಗ್ಗ.

6 Comments on “ ಚೆಲುವಿನ ತಾಣ ನ್ಯೂಝಿಲ್ಯಾಂಡ್ – ಪುಟ 6

  1. ಅಬ್ಬಾ ! ಮೈ ಜುಂ ಎಂದಿತು………
    ಓದುತಾ ನಿಮ್ಮ ಪ್ರ-ವಾಸದ ಹಬ್ಬ !!
    ಸೂಪರ್…

  2. ಅಮೆರಿಕ ಅಂಪೈರ್ ಸ್ಟೇಟ್ ಬಿಲ್ದಿಂಗ್ ಗೆ ಏರಿ ಆನಂದಿಸಿದ ಕ್ಷಣಗಳನ್ನು ನೆನಪಿದ ಪ್ರವಾಸ ಲೇಖನ ಎಂದಿನಂತೆ ಚೆನ್ನ! ಮೈ ಜುಂ ಎನ್ನಿಸುವ ಸಾಹಸ ಕ್ರೀಡೆಗಳು, ಅಕ್ವೇರಿಯಂನ ವೀಕ್ಷಣೆ ಅದ್ಭುತ!

  3. ಪ್ರಪಂಚದ ಅದ್ಭುತಗಳನ್ನೆಲ್ಲಾ ಒಂದೇ ಸ್ಥಳದಲ್ಲಿ ನೋಡಿದ ನಿಮ್ಮ ಅನುಭವ ನಮಗೆ ಲೇಖನದ ರೂಪದಲ್ಲಿ ದಕ್ಕಿತು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *