ಸ್ವಾತಂತ್ರ್ಯಪೂರ್ವದ ವೈಜ್ಞಾನಿಕ ಜಾಗೃತಿ-ಭಾಗ 11

Spread the love
Share Button

–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..

1857ರಲ್ಲಿ ಜನಿಸಿದ ಸುಂದರಿ ಮೋಹನ ದಾಸ್‌ ಕಲ್ಕತ್ತ ಮೆಡಿಕಲ್‌ ಕಾಲೇಜಿನಲ್ಲಿ ಎಂ.ಡಿ. ಪದವಿಯನ್ನು ಪಡೆದು ತಮ್ಮ ಹುಟ್ಟೂರಾದ ಸಿಲ್ಹೆಟ್‌ ನಲ್ಲಿ ವೈದ್ಯಕೀಯ ಸೇವೆಯನ್ನು ಸ್ವಂತವಾಗಿ ಆರಂಭಿಸಿದರು. ತಮ್ಮ ಸೇವೆಗೆ ಹೆಚ್ಚಿನ ವ್ಯಾಪ್ತಿಯನ್ನು ಕಂಡುಕೊಳ್ಳಲು ಕಲ್ಕತ್ತೆಗೆ ಬಂದ ದಾಸ್‌ ಕಲ್ಕತ್ತ ಮುನಿಸಿಪಲ್‌ ಕಾರ್ಪೊರೇಷನ್ನಿನಲ್ಲಿ ಹೆಲ್ತ್‌ ಇನ್ಸ್ಪೆಕ್ಟರ್‌ ಆದರು. 1898ರಲ್ಲಿ ಕಲ್ಕತ್ತೆಯಲ್ಲಿ ಪ್ಲೇಗು ಪಿಡುಗು ಆರಂಭವಾದಾಗ ಮುನ್ನಚ್ಚರಿಕೆಯ ಕ್ರಮವಾಗಿ ಬ್ರಿಟಿಷರ ಫರ್ಮ್‌ ಗಳಲ್ಲಿದ್ದ ಸಕ್ಕರೆ ಮತ್ತು ಉಪ್ಪನ್ನು ಇವರು ನಾಶ ಮಾಡಿದುದನ್ನು ಕಾರ್ಪೊರೇಷನ್‌ ಒಪ್ಪದ ಕಾರಣ ರಾಜೀನಾಮೆ ಕೊಟ್ಟು ಹೊರಬಂದರು. ಸಾರ್ವಜನಿಕರಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು “ಮುನಿಸಿಪಲ್‌ ದರ್ಪಣ್‌” ಎಂಬ ಕೃತಿಯನ್ನು ಬಂಗಾಳಿಯಲ್ಲಿ ಬರೆದು ಪ್ರಕಟಿಸಿದರು. 1905ರಲ್ಲಿ ಸ್ವದೇಶಿ ಚಳುವಳಿಯ ಅಂಗವಾಗಿ ಸರ್ಕಾರಿ ಮೆಡಿಕಲ್‌ ಕಾಲೇಜು ಮುಚ್ಚಿದಾಗ ಅಲ್ಲಿಯ ವಿದ್ಯಾರ್ಥಿಗಳ ವಿದ್ಯಾಭ್ಯಾಸ ಮುಂದುವರೆಯಲು ಸಹಮನಸ್ಕರೊಂದಿಗೆ “ಕಲ್ಕತ್ತ ನ್ಯಾಷನಲ್‌ ಮೆಡಿಕಲ್‌ ಕಾಲೇಜ”ನ್ನು ಆರಂಭಿಸಿ ಅದರ ಪ್ರಾಚಾರ್ಯರಾಗಿ ಕರ್ತವ್ಯವನ್ನು ನಿರ್ವಹಿಸಿದರು. “ನ್ಯಾಷನಲ್‌ ಎಜುಕೇಷನ್‌ ಕೌನ್ಸಿಲ್‌”ನ್ನು ರೂಪಿಸಿ “ಬೆಂಗಾಲ್‌ ಟೆಕ್ನಿಕಲ್‌ ಇನ್ಸ್ಟಿಟ್ಯೂಟ್‌” ಆರಂಭವಾಗಲು ಸಹಕರಿಸಿದರು. 

ಬ್ರಿಟಿಷ್‌ ವಸ್ತುಗಳ ಬದಲಿಗೆ ಸ್ವದೇಶಿ ವಸ್ತುಗಳನ್ನು ಬಳಸುವುದರ ಮೂಲಕ ಸ್ವದೇಶಿ ಚಳುವಳಿಯನ್ನು ಯಶಸ್ವಿಗೊಳಿಸಲು ಹೊಸೈರಿ ಇಂಡಸ್ಟ್ರಿಯನ್ನು ಮತ್ತು ಫಾರ್ಮಕ್ಯುಟಿಕಲ್‌ ಇಂಡಸ್ಟ್ರಿಯನ್ನು ಆರಂಭಿಸಿದರು, ಭಾರತೀಯರಿಗೆ ಈ ಉದ್ದಿಮೆಗಳ ತರಬೇತಿ ದೊರೆಯುವ ವ್ಯವಸ್ಥೆ ಮಾಡಿದರು.  ಅದಕ್ಕಾಗಿ ತಮ್ಮ ಮಗನನ್ನು ಫಾರ್ಮಕ್ಯುಟಿಕಲ್‌ ಕೆಮಿಸ್ಟ್ರಿಯಲ್ಲಿ ಉನ್ನತ ವಿದ್ಯಾಭ್ಯಾಸ ಮಾಡಲು ಅಮೆರಿಕೆಗೆ ಕಳುಹಿಸಿದರು. ಆ ವಿಭಾಗದಲ್ಲಿ ಮಿಚಿಗನ್‌ ವಿಶ್ವವಿದ್ಯಾನಿಲಯದಲ್ಲಿ ಎಂ.ಎಸ್.‌ ಪದವಿಯನ್ನು‌, ಹಾರ್ವರ್ಡ್‌ ವಿಶ್ವವಿದ್ಯಾನಿಲಯದಲ್ಲಿ ಬ್ಯಾಕ್ಟೀರಿಯಾಲಜಿ ಮತ್ತು ಬಿಸಿನೆಸ್‌ ಅಡ್ಮಿನಿಸ್ಟ್ರೇಷನ್‌ ನಲ್ಲಿ ಡಿಪ್ಲೊಮವನ್ನು, ಅಮೆರಿಕ ಮತ್ತು ಯೂರೋಪಿನಲ್ಲಿ ಫಾರ್ಮಕ್ಯುಟಿಕಲ್‌ ಕಾರ್ಯಗಳ ಪ್ರತ್ಯಕ್ಷಾನುಭವವನ್ನು ಪಡೆದ ಪ್ರಪ್ರಥಮ ಭಾರತೀಯರಾಗಿ ಭಾರತಕ್ಕೆ ಹಿಂದಿರುಗಿದ ಅವರ ಮಗ ಪ್ರೇಮಾನಂದ ದಾಸ್ ರವರೊಂದಿಗೆ ಆಧುನಿಕ ವೈಜ್ಞಾನಿಕ ಕ್ರಮದಿಂದ ಆಯುರ್ವೇದಿಕ್‌ ಔಷಧಿಗಳನ್ನು ಸಿದ್ಧಪಡಿಸಿ ಮಾರಾಟ ಮಾಡಿದರು. 

ಸ್ತ್ರೀಯರ ಆರೋಗ್ಯ ಮತ್ತು ಶಿಕ್ಷಣದ ದುಸ್ಥಿತಿಯನ್ನು ಸರಿಪಡಿಸುವುದಕ್ಕಾಗಿ ಸಹಮನಸ್ಕರೊಡನೆ ಹುಡುಗಿಯರಿಗಾಗಿ ಶಾಲೆಯೊಂದನ್ನು ಆರಂಭಿಸಿದರು. ಸ್ತ್ರೀಯರಿಗೆ ಸೂಕ್ತ ಆರೋಗ್ಯ ಮಾಹಿತಿಯನ್ನು ಕೊಡುವುದಕ್ಕಾಗಿ ಡೈರಿ ಆಫ್ಓಲ್ಡ್ಮಿಡ್ವೈಫ್‌” ಎಂಬ ಕೃತಿಯನ್ನು ಬಂಗಾಳಿಯಲ್ಲಿ ರಚಿಸಿದರು.  ಅವರ ಸರಲ್ಧಾತ್ರಿ ಶಿಕ್ಷಾ, ಶುಶ್ರ ವಿದ್ಯಾ ಕೃತಿಗಳು ಬಂಗಾಲ, ಅಸ್ಸಾಂ ಮತ್ತು ಒರಿಸ್ಸಾಗಳಲ್ಲಿ ಅಸಹಾಯಕ ಹೆಣ್ಣುಮಕ್ಕಳು ದಾದಿ ತರಬೇತಿಯನ್ನು ಪಡೆದು ಸ್ವಾವಲಂಬಿಯಾಗಿ ಬದುಕಲು ಬೇಕಾದ ಮಾಹಿತಿಯನ್ನು ಒದಗಿಸಿದವು. ಅನೇಕ ಆರೋಗ್ಯ ಸಂಬಂಧಿ ಬೋರ್ಡ್‌ ಗಳಲ್ಲಿ ಮತ್ತು “ಯೂನಿವರ್ಸಲ್‌ ಡ್ರಗ್‌ ಹೌಸ್‌ ಪ್ರೈವೇಟ್‌ ಲಿಮಿಟೆಡ್‌” ನಂಥ ಕಂಪೆನಿಗಳಲ್ಲಿ ಸಕ್ರಿಯರಾಗಿದ್ದ ದಾಸ್‌ ಆರೋಗ್ಯಭಾಗ್ಯ ಕಾರ್ಯದೀಕ್ಷೆಗೆ ಒಂದು ಅಜರಾಮರ ಹೆಸರಾಗಿದ್ದಾರೆ.

ನೀಲಮಣಿ ಮಿತ್ರ ರವರು ಕಲ್ಕತ್ತ ವಿಶ್ವವಿದ್ಯಾನಿಲಯದ ರೂರ್ಕಿ ಇಂಜನಿಯರಿಂಗ್‌ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿ ಪದವಿ ಪಡೆದ ಪ್ರಪ್ರಥಮ ಬೆಂಗಾಲಿ. ಗಂಗಾ ಕಾಲುವೆಯ ವಿಭಾಗದಲ್ಲಿ ವೃತ್ತಿಜೀವನವನ್ನು ಆರಂಭಮಾಡಿದ ಮಿತ್ರರವರು 1858ರಲ್ಲಿ ಪ್ರೆಸಿಡೆನ್ಸಿ ವಿಭಾಗದ ಸಹಾಯಕ ವಾಸ್ತುಶಿಲ್ಪಿಯಾಗಿ ಪದೋನ್ನತಿ ಪಡೆದರು. ಆದರೆ ಭಿನ್ನಾಭಿಪ್ರಾಯದ ಕಾರಣದಿಂದಾಗಿ ರಾಜೀನಾಮೆ ಕೊಟ್ಟು ಸ್ವಂತವಾಗಿ ಕೆಲಸಮಾಡಲು ಆರಂಭಿಸಿದರು. 19ನೇ ಶತಮಾನದ ಕಲ್ಕತ್ತದಲ್ಲಿ ಸಾಧಾರಣ ಬ್ರಹ್ಮಸಮಾಜದ ಕಟ್ಟಡ, ಜತೀಂದ್ರ ಮೋಹನ್‌ ಟಾಗೋರ್ ಮತ್ತು ಎಮರಾಲ್ಡ್‌ ಬೋಯರ್‌ ಅವರ ಅರಮನೆ, ನಂದಲಾಲ್‌ ಬೋಸ್‌ ಮತ್ತು ಪಶುಪತಿ ನಾಥ ಬಸು ಅವರ ಮನೆ, ಕೀರ್ತಿ ಚಂದ್ರ ಮಿತ್ರ ರವರ ಮೋಹನ್‌ ಬಾಗನ್‌ ವಿಲ್ಲಾ, ಮಹೇಂದ್ರ ಲಾಲ್‌ ಸರ್ಕಾರ್‌ ಅವರ “ಇಂಡಿಯನ್‌ ಅಸೋಸಿಯೇಷನ್‌ ಫಾರ್‌ ದಿ ಕಲ್ಟಿವೇಷನ್‌ ಆಫ್‌ ಸೈನ್ಸ್‌” ನ ಕಟ್ಟಡ, “ಮೆಟ್ರೊ ಪಾಲಿಟನ್‌ ಇನ್ಸ್ಟಿಟ್ಯೂಟ್‌” ನ ಕಟ್ಟಡವೇ ಮುಂತಾದ ಅತ್ಯಂತ ಭವ್ಯವಾದ ಕಟ್ಟಡಗಳನ್ನು ನಿರ್ಮಿಸಿದ ವಾಸ್ತುಶಿಲ್ಪಿ ಇವರು ಜಗನ್ನಾಥ ದೇವಾಲಯದ ರಥವನ್ನು ಪುನರ್‌ ವಿನ್ಯಾಸಗೊಳಿಸಿದರು. ಜಾರ್ಖಂಡದ ಮಧುಪುರದಲ್ಲಿ ಬೆಂಗಾಲಿಗಳು ನೆಲೆಯೂರಲು ಮೂಲಭೂತ ಕಾರಣ ಕರ್ತರಾದ ಇವರು. ಭಾರತೀಯ ಕಟ್ಟಡವಿನ್ಯಾಸ ಮತ್ತು ನಿರ್ಮಾಣಕ್ಕೆ ವೈಜ್ಞಾನಿಕ ತಾಂತ್ರಿಕತೆಯನ್ನು ಜೋಡಿಸಿದರು.

ವಿಜ್ಞಾನ ಮತ್ತು ಸಂಸ್ಕೃತಿ ಪೋಷಕರೂ, ಹೂಗ್ಲಿ ನದಿಯ ಮೇಲಿನ ಉಗಿ ಹಡಗು ಸಂಚಾರದಲ್ಲಿ ಯುಗಪ್ರವರ್ತಕರೂ ಆಗಿದ್ದ ಬೋಸ್‌ ಕುಟುಂಬಕ್ಕೆ ಸೇರಿದ ಕೈಲಾಶ ಚಂದ್ರ ಬೋಸ್ ಕಲ್ಕತ್ತ ಮೆಡಿಕಲ್‌ ಕಾಲೇಜಿನಲ್ಲಿ 1874ರಲ್ಲಿ ಪದವಿಯನ್ನು ಪಡೆದು ಸ್ವಂತವಾಗಿ ಪ್ರಾಕ್ಟೀಸನ್ನು ಆರಂಭಿಸಿದರು. ಕಲ್ಕತ್ತ ಮೆಡಿಕಲ್ಸ್ಕೂಲ್‌” ನ ಸ್ಥಾಪನೆಗೆ ಕಾರಣಕರ್ತರಾದರು; ವೆಟೆರ್ನರಿ ಕಾಲೇಜು ಮತ್ತು ಆಸ್ಪತ್ರೆಯ ಹಾಗೂ ಸ್ಕೂಲ್ಆಫ್ಟ್ರಾಪಿಕಲ್ಮೆಡಿಸಿನ್‌” ನ ಸ್ಥಾಪನೆಗೂ ಸಹ ಕಾರಕರಾದರು. ವೈದ್ಯಕೀಯ ಅಧ್ಯಯನದ ವ್ಯಾಪ್ತಿಯನ್ನು ಭಾರತದಲ್ಲಿ ವಿಸ್ತರಿಸಿದರು. 

ಸಮಾಜವಿಜ್ಞಾನಗಳ ತಾಯಿಬೇರಾದ ತತ್ತ್ವಶಾಸ್ತ್ರವನ್ನು ಕಲ್ಕತ್ತೆಯ ಜನೆರಲ್‌ ಅಸಂಬ್ಲಿಯ ಸಂಸ್ಥೆಯಲ್ಲಿ ಅಧ್ಯಯನ ಮಾಡಿ 1883ರಲ್ಲಿ ಪದವೀಧರರಾದ ಬ್ರಜೇಂದ್ರನಾಥ ಸಿಯಾಲ್ ಕಲ್ಕತ್ತ ವಿಶ್ವವಿದ್ಯಾನಿಲಯದ ತತ್ತ್ವಶಾಸ್ತ್ರವಿಭಾಗದ ಸ್ಥಾಪಕ ಪ್ರಾಧ್ಯಾಪಕರು. ವಿಜ್ಞಾನ ಮತ್ತು ಸಮಾಜಶಾಸ್ತ್ರಗಳೆರಡರ ಬಗೆಗೂ ಸಮಾನವಾಗಿ ತಿಳುವಳಿಕೆಯನ್ನು ಹೊಂದಿದವರಾಗಿದ್ದ ಇವರ ಪ್ರಮುಖ ಕೃತಿ ದಿ ಪಾಸಿಟಿವ್ಸೈನ್ಸ್ಆಫ್ಏನ್ಷಿಯಂಟ್ಹಿಂದೂಸ್ ಇದು ಭಾರತದ ತತ್ತ್ವಶಾಸ್ತ್ರೀಯ ಪರಿಕಲ್ಪನೆಗಳು ಮತ್ತು ವಿಜ್ಞಾನ ಸಿದ್ಧಾಂತಗಳ ನಡುವಿನ ಪಾರಸ್ಪರಿಕ ಸಂಬಂಧವನ್ನು ವಿವರಿಸುತ್ತದೆ. 1911ರಲ್ಲಿ ಯೂನಿವರ್ಸಲ್‌ ಜನಾಂಗ (Race) ಕಾಂಗ್ರೆಸ್ಸಿನ ಸರ್ವಾಧ್ಯಕ್ಷರಾಗಿ ಮಂಡನೆ ಮಾಡಿ ಪ್ರಕಟಿಸಿದ ಲೇಖನ – ರೇಸ್ ಆರಿಜಿನ್. ಇದು ಹೊಸ ವೈಜ್ಞಾನಿಕ ಮತ್ತು ಲೆಕ್ಕಶಾಸ್ರ್ದದ ವಿಧಾನಗಳನ್ನುಅಳವಡಿಸಿಕೊಂಡು ಜನಾಂಗೀಯ ಹಮ್ಮುಬಿಮ್ಮುಗಳನ್ನು ಆಧರಿಸಿ ಜನಾಂಗಗಳ ತುಲನಾತ್ಮಕ ಅಧ್ಯಯನ ಸಾಧ್ಯತೆಯನ್ನು ವ್ಯಾಪಕವಾದ ಸಂಗತಿಗಳ ಮೂಲಕ ತೆರೆದಿಟ್ಟಿತ್ತು. 

1893ರಲ್ಲಿ ಪ್ರಕಟವಾದ ನ್ಯೂ ಎಸ್ಸೇಸ್ಇನ್ಕ್ರಿಟಿಸಿಸಂ ಕೃತಿಯಲ್ಲಿ ಸಾಹಿತ್ಯಕಲೆಯ ಇತಿಹಾಸವನ್ನು ಜೀವಶಾಸ್ತ್ರ ಮತ್ತು ಗಣಿತಶಾಸ್ತ್ರದ ವಿಧಾನಗಳಿಂದ ಅರ್ಥಪೂರ್ಣವಾಗಿ ಗಮನಿಸಬಹುದು ಎಂದು ಸಿಯಾಲ್‌ ಪ್ರತಿಪಾದಿಸಿದ್ದರು. ಭಾರತದ ತತ್ತ್ವಶಾಸ್ತ್ರೀಯ ಬರವಣಿಗೆಗಳನ್ನು ಕುರಿತ ಯೂರೋಪಿಯನ್ನರ ನಿಲುವನ್ನು ಪ್ರಶ್ನಿಸಿದ ಸಿಯಾಲ್‌ ಭಾರತದ ತತ್ತ್ವಶಾಸ್ತ್ರೀಯ ಬರವಣಿಗೆಗಳು ಭದ್ರವಾದ ತಾರ್ಕಿಕತೆಯನ್ನು ಹೊಂದಿವೆ ಎಂದು ವಾದಿಸಿದ್ದರು.

ಬೆರಳು ಗುರುತುಗಳ ಮೂಲಕ ಸಾಧ್ಯವಾಗುವ ಅಪರಾಧ ಶೋಧವೂ ಒಂದು ವಿಜ್ಞಾನ. ಇದೂ ಸಹ ಬ್ರಿಟಿಷ್‌ ಆಡಳಿತದಲ್ಲಿ ಕಾಲೂರಿತ್ತು.  ಗಣಿತಶಾಸ್ತ್ರವನ್ನು ಅಭ್ಯಾಸಮಾಡಿ 1888ರಲ್ಲಿ ಕಲ್ಕತ್ತದ ಸಂಸ್ಕೃತ ಕಾಲೇಜಿನಲ್ಲಿ ಪದವೀಧರರಾದ ಹೇಮಚಂದ್ರ ಬೋಸ್‌ 1889ರಲ್ಲಿ ಸಬ್‌ ಇನ್ಸ್ಪೆಕ್ಟರ್‌ ಆಗಿ ಪೋಲೀಸ್‌ ಸೇವೆಗೆ ಸೇರಿಕೊಂಡರು. ಅಪರಾಧ ಶೋಧದಲ್ಲಿಯ ಅವರ ವಿಶೇಷ ಆಸಕ್ತಿಯನ್ನು ಗುರುತಿಸಿದ ಸರ್ಕಾರ ಇವರನ್ನು 1894ರಲ್ಲಿ ಕಲ್ಕತ್ತೆಯ ಕ್ರಿಮಿನಲ್‌ ಇನ್ವೆಸ್ಟಿಗೇಷನ್‌ ವಿಭಾಗಕ್ಕೆ ಸೇರಿಸಿಕೊಂಡಿತು. ಅವರು ಅಲ್ಲಿ ಬೆರಳಚ್ಚುಗಳ ವರ್ಗೀಕರಣ ವ್ಯವಸ್ತೆಯ ಸಾಧ್ಯತೆಯ ಬಗ್ಗೆ ಅಧ್ಯಯನ ಮಾಡಿದರು. 

ಈ ಲೇಖನ ಸರಣಿಯ ಹಿಂದಿನ ಭಾಗ ಇಲ್ಲಿದೆ: http://surahonne.com/?p=36053

(ಮುಂದುವರಿಯುವುದು)

-ಪದ್ಮಿನಿ ಹೆಗಡೆ

6 Responses

 1. ನಯನ ಬಜಕೂಡ್ಲು says:

  ಉತ್ತಮ ಮಾಹಿತಿಗಳನ್ನೊಳಗೊಂಡ ಒಂದು ಅಪರೂಪದ ಬರಹ

 2. ಉತ್ತಮ ಗುಣಮಟ್ಟದ ..ಮಾಹಿತಿಯನ್ನು..
  ಒದಗಿಸುತ್ತಿರುವ…ಲೇಖನ.

  ಧನ್ಯವಾದಗಳು ಮೇಡಂ.

 3. Padmini Hegade says:

  Thanks a lot to Smt. Nayana Bajakudlu and Smt Nagaratna. B.R. for favourable response!

 4. ಸ್ವತಂತ್ರ ಪೂರ್ವದಲ್ಲಿ ಭಾರತದಲ್ಲಿ ಇಷ್ಟೆಲ್ಲ ವೈಜ್ಞಾನಿಕ ಸಂಶೋಧನೆಗಳು ನಡೆಯುತ್ತಿತ್ತು ಎಂದು ಗೊತ್ತೇ ಇರಲಿಲ್ಲ
  ಮಾಹಿತಿ ಪೂರ್ಣ ಲೇಖನಗಳಿಗೆ ಧನ್ಯವಾದಗಳು

 5. . ಶಂಕರಿ ಶರ್ಮ says:

  ಸೊಗಸಾದ ವೈಚಾರಿಕ ಲೇಖನ.

 6. Padmini Hegde says:

  Thanks very much to Gayatri Sajjan madam, Shankari Sharma madam for your favorable response

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: