ಜ್ಯೋತಿರ್ಲಿಂಗ 1-ಸೌರಾಷ್ಟ್ರದ ಸೋಮನಾಥ

Share Button


ಗುಜರಾತಿನ ಪ್ರವಾಸಕ್ಕೆಂದು ಹೋದವರು, ಸೋಮನಾಥನ ದರ್ಶನ ಪಡೆಯದೇ ಬರುವುದುಂಟೇ? ಸೋಮನಾಥನ ದೇಗುಲದ ಮುಂದೆ ನಿಂತವರನ್ನು ಆಯಸ್ಕಾಂತದಂತೆ ಆಕರ್ಷಿಸಿದ್ದು ಭವ್ಯವಾದ ಸೋಮನಾಥನ ಆಲಯ. ಅರಬ್ಬೀ ಸಮುದ್ರ ತೀರ, ಅಪೂರ್ವವಾದ ಶಿಲ್ಪಕಲೆ, ಅದ್ಭುತವಾದ ವಾಸ್ತುಶಿಲ್ಪ ಹಾಗೂ ಇತಿಹಾಸವನ್ನು ಹೊಂದಿರುವ ದೇವಾಲಯ, ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಮೊದಲನೆಯ ಸ್ಥಾನದಲ್ಲಿ ನಿಲ್ಲುತ್ತದೆ.

ಗುಜರಾತಿನ ಕಾಟಿಯಾವಾಡಿನ ಪ್ರಭಾಸ ಕ್ಷೇತ್ರದಲ್ಲಿ (ವಿರಾಲವಾವ್ – ಈಗಿನ ಹೆಸರು) ಈ ಸ್ವಯಂಭುವಾದ ಜ್ಯೋತಿರ್ಲಿಂಗ. ಹಲವು ಬಾರಿ ಪರಕೀಯರ ಆಕ್ರಮಣಕ್ಕೆ ತುತ್ತಾದರೂ, ಅಜೇಯನಾದ ಸೋಮನಾಥನ ದಿವ್ಯ ಪ್ರಭೆಯನ್ನು ಯಾರಿಂದ ಅಳಿಸಲು ಸಾಧ್ಯ? ಅಂದು ಸೋಮನು (ಚಂದ್ರ) ಶಾಪ ವಿಮೋಚನೆಗಾಗಿ ಪಠಿಸಿದ ಮೃತ್ಯುಂಜಯ ಸ್ತೋತ್ರ, ಈಗಲೂ ಈ ದೇಗುಲದ ಮೂಲೆಮೂಲೆಯಲ್ಲೂ ಕೇಳಿ ಬರುತ್ತಿದೆ:

ತ್ರಯಂಬಕಮ್ ಯಜಾಮಹೇ, ಸುಗಂಧಿಮ್ ಪುಷ್ಠಿವರ್ಧನಮ್
ಪೂರ್ವಾವಿಕ ಮಿವಬಂಧನಾತ್, ಮೃಕ್ಷೆಮೃಕ್ಷೀಯ ಮಾಮೃತಾತ್


ಈ ದೇಗುಲದ ಪೌರಾಣಿಕ ಹಿನ್ನೆಲೆಯನ್ನು ತಿಳಿಯೋಣ ಬನ್ನಿ.ಇದು 7,99,25,105 ವರ್ಷಗಳ ಹಿಂದಿನ ಐತಿಹ್ಯ. ಸ್ಕಂದ ಪುರಾಣದಲ್ಲಿ ಹೇಳುವಂತೆ, ಬ್ರಹ್ಮನ ಮಾನಸ ಪುತ್ರಿ ಸರಸ್ವತಿಯು ಈ ಸ್ಥಳದಲ್ಲಿ ಐದು ಧಾರೆಗಳಲ್ಲಿ ಪ್ರಕಟವಾಗಿ, ನಂತರ ಅಂತರ್ಧಾನಳಾದಳಂತೆ. ಅಂದಿನಿಂದ, ಈ ಕ್ಷೇತ್ರ ಸುರಮುನಿಗಳ ತಪೋಭೂಮಿಯಾಯಿತು. ಶಿವಪುರಾಣದಲ್ಲಿ ಚಂದ್ರ ಶಾಪಗ್ರಸ್ತನಾಗುವ ಪ್ರಸಂಗವೊಂದು ಬರುತ್ತದೆ. ದಕ್ಷ ಪ್ರಜಾಪತಿಯ ಇಪ್ಪತ್ತೇಳು ಮಕ್ಕಳನ್ನು ಮದುವೆಯಾದ ಚಂದ್ರನು, ರೋಹಿಣಿಯೊಬ್ಬಳನ್ನು ಮಾತ್ರ ಪ್ರೀತಿಯಿಂದ ಕಂಡು ಉಳಿದವರನ್ನು ನಿರ್ಲಕ್ಷಿಸುತ್ತಾನೆ.ಇದನ್ನು ಕಂಡ ದಕ್ಷನು, ಚಂದ್ರನಿಗೆ ಕ್ಷಯರೋಗ ಪೀಡಿತನಾಗೆಂದು ಶಪಿಸುತ್ತಾನೆ. ದಿನೇ ದಿನೇ ಕ್ಷಯಿಸತೊಡಗಿದ ಚಂದ್ರನು, ಬ್ರಹ್ಮನ ಮೊರೆ ಹೋಗುತ್ತಾನೆ. ಬ್ರಹ್ಮದೇವನು, ಚಂದ್ರನಿಗೆ, ಪುಣ್ಯಭೂಮಿಯಾದ ಪ್ರಭಾಸ ಕ್ಷೇತ್ರದಲ್ಲಿರುವ ಕಪಿಲ, ಹಿರಣ್, ಸರಸ್ವತಿ ನದಿಗಳ ತ್ರಿವೇಣಿ ಸಂಗಮದಲ್ಲಿ ಸ್ನಾನವನ್ನು ಮಾಡಿ, ಮಹಾ ಮೃತ್ಯುಂಜಯ ಮಂತ್ರವನ್ನು ಪಠಣ ಮಾಡು ಎಂದು ಹೇಳುತ್ತಾನೆ. ಅದೇ ರೀತಿ, ಚಂದ್ರನು ನಾಲ್ಕು ಸಾವಿರ ವರ್ಷಗಳ ಕಾಲ ಈ ಮಂತ್ರವನ್ನು ಪಠಿಸಿದಾಗ, ಶಿವನು ಪ್ರತ್ಯಕ್ಷನಾಗುತ್ತಾನೆ. ಆದರೆ ಮಹಾದೇವನು, ದಕ್ಷನ ಶಾಪದಿಂದ ಚಂದ್ರನನ್ನು ಸಂಪೂರ್ಣವಾಗಿ ವಿಮುಕ್ತಿಗೊಳಿಸದೆ, ಪ್ರತಿ ತಿಂಗಳೂ ಹುಣ್ಣಿಮೆಯಿಂದ ಅಮವಾಸ್ಯೆಯವರೆಗೆ ಚಂದ್ರನು ಕ್ಷೀಣಿಸುವಂತೆ ಹಾಗೂ ಅಮವಾಸ್ಯೆಯಿಂದ ಹುಣ್ಣಿಮೆಯವರೆಗೆ ವೃದ್ಧಿಸುವಂತೆ ಹರಸುತ್ತಾನೆ. ಹೀಗೆ ಶಿವನ ಅನುಗ್ರಹದಿಂದ ತನ್ನ ತೇಜಸ್ಸನ್ನು ಮರಳಿ ಪಡೆದ ಸೋಮನಿಂದ ಈ ಪ್ರದೇಶ ‘ಪ್ರಭಾಸ’- ಎಂದರೆ ಪ್ರಕಾಶಿಸು- ಎಂದೇ ಪ್ರಸಿದ್ಧಿ ಹೊಂದಿತು. ಅಲ್ಲಿ ನೆರದಿದ್ದ ಸುರ ಮುನಿಗಳ ಅಪೇಕ್ಷೆಯಂತೆ ಶಿವನು ಸೋಮನಾಥನೆಂಬ ನಾಮಧೇಯ ಹೊತ್ತು, ಜ್ಯೋತಿ ಸ್ವರೂಪದಲ್ಲಿ ಅಲ್ಲಿಯೇ ನೆಲೆಯಾದನಂತೆ. ಶಾಪ ವಿಮೋಚನೆ ಹೊಂದಿದ ಚಂದ್ರನು, ಪರಶಿವನಿಗೆ ತನ್ನ ಕೃತಜ್ಞತೆ ಅರ್ಪಿಸಲು, ಶ್ರದ್ಧಾ ಭಕ್ತಿಯಿಂದ ಆ ಸ್ಥಳದಲ್ಲಿ ಬಂಗಾರದ ದೇವಾಲಯವನ್ನು ನಿರ್ಮಿಸಿದನಂತೆ. ನಂತರದ ಯುಗಗಳಲ್ಲಿ ಸೂರ್ಯನು ಬೆಳ್ಳಿಯಿಂದ ಹಾಗೂ ಶ್ರೀಕೃಷ್ಣನು ಶ್ರೀಗಂಧದಿಂದ ಈ ದೇಗುಲವನ್ನು ನಿರ್ಮಿಸಿದರೆಂಬ ಪ್ರತೀತಿಯೂ ಇದೆ.


‘ಇತ್ತ ಬನ್ನಿ’- ಕಂಚಿನ ಕಂಠದಿಂದ ಹೊರ ಹೊಮ್ಮುತ್ತಿರುವ ಪಂಚಾಕ್ಷರಿ ಮಂತ್ರ ಪಠಣ ಕೇಳಿಸುತ್ತಿದೆಯಾ?- “ನಮಃ ಶಿವಾಯ”. ಪಂಚಾಕ್ಷರಿ ಮಂತ್ರವನ್ನು ಪಠಿಸುತ್ತಿರುವವರು ಯಾರಿರಬಹುದು? ತ್ರೇತಾಯುಗದಲ್ಲಿ ಪರಮ ಶಿವಭಕ್ತನಾದ ರಾವಣನ ಕಂಠದಿಂದ ಹೊಮ್ಮುತ್ತಿದೆ ಶಿವಸ್ತುತಿ. ಲಂಕಾಧಿಪತಿಯಾದ ರಾವಣನು, ತನ್ನ ಆರಾಧ್ಯ ದೈವವಾದ ಪರಶಿವನಿಗೆ ಚಿನ್ನ ಬೆಳ್ಳಿಯಿಂದಲೇ ನಿರ್ಮಿಸಿದ ದೇಗುಲವೆಂದೂ ಪ್ರತೀತಿಯಿದೆ.

ಸೌರಾಷ್ಟ್ರದ ಸೋಮನಾಥ

ಇನ್ನು ದ್ವಾಪರಯುಗಕ್ಕೆ ಹೋಗೋಣವೇ? ಮಧುರವಾದ ಕೊಳಲಿನ ನಾದ ಆಲಿಸುತ್ತಿದ್ದೀರ? ಇದು ಶ್ರೀಕೃಷ್ಣನ ವೇಣುನಾದವಲ್ಲವೇ? ಇಲ್ಲಿ ವಿರಮಿಸುತ್ತಿದ್ದ ಗೋಪಾಲನು- ‘ಜರಾ’ ಎಂಬ ಬೇಡನ ಬಾಣಕ್ಕೆ ಬಲಿಯಾಗಿ, ತನ್ನ ಮಾನವ ರೂಪವನ್ನು ತ್ಯಜಿಸಿ, ವೈಕುಂಠಕ್ಕೆ ಹಿಂದಿರುಗಿದನಂತೆ. ಕೃಷ್ಣನ ಬಳಿಯಿದ್ದ ಶ್ಯಮಂತಕ ಮಣಿಯು ಸೋಮನಾಥನ ಗರ್ಭದಲ್ಲಿರುವುದೆಂಬ ನಂಬಿಕೆಯೂ ಇದೆ. ಇದು ಹರಿ ಹರರ ಮಿಲನದ ಪವಿತ್ರ ಕ್ಷೇತ್ರವೂ ಹೌದು.

ಈಗ ಇಲ್ಲಿನ ಚಾರಿತ್ರಿಕ ಹಿನ್ನೆಲೆಯನ್ನೂ ತಿಳಿಯೋಣ ಬನ್ನಿ. ಋಗ್ವೇದ, ಭಗವದ್ಗೀತೆ, ಶಿವ ಪುರಾಣ ಮತ್ತು ಸ್ಕಂದ ಪುರಾಣದಲ್ಲಿ ಈ ದೇಗುಲದ ಉಲ್ಲೇಖವಿದೆ. ಇತಿಹಾಸದ ಪುಟಗಳನ್ನು ತೆರೆದು ನೋಡಿದರೆ – ಇದು ಅತ್ಯಂತ ಸುಭಿಕ್ಷವಾದ ರಾಜ್ಯವಾಗಿತ್ತು. ಪ್ರಭಾಸ್ ಪಟ್ಟಣವು ಸಮುದ್ರ ತೀರದಲ್ಲಿದ್ದುದರಿಂದ, ವ್ಯಾಪಾರಿಗಳು ಹೊರದೇಶಗಳೊಂದಿಗೆ ವ್ಯಾಪಾರ ವಹಿವಾಟುಗಳನ್ನು ನಡೆಸುತ್ತಾ ಹೇರಳವಾದ ಸಂಪತ್ತನ್ನು ಗಳಿಸಿದ್ದರು. ಇಲ್ಲಿನ ಅಪೂರ್ವವಾದ ಕಲಾಕೃತಿಗಳಿಗೆ ಹೊರದೇಶಗಳಲ್ಲಿ ಅಪಾರವಾದ ಬೇಡಿಕೆಯಿತ್ತು. ವ್ಯಾಪಾರದ ವಹಿವಾಟು – ಚಿನ್ನ ಬೆಳ್ಳಿ ನಾಣ್ಯಗಳ ಮೂಲಕವೇ ನಡೆಯುತ್ತಿದ್ದುದರಿಂದ, ಇದು ಸ್ವರ್ಣನಗರಿಯೆಂದೇ ಪ್ರಖ್ಯಾತಿ ಪಡೆಯಿತು. ಪಾಶುಪತ ಬ್ರಾಹ್ಮಣರು ಶಿವಭಕ್ತರನ್ನೆಲ್ಲಾ ಆಹ್ವಾನಿಸಿ, ಶ್ರದ್ಧಾ ಭಕ್ತಿಯಿಂದ ಸೋಮನಾಥನಿಗೆ ಪೂಜೆ ಸಲ್ಲಿಸುತ್ತಿದ್ದರು. ಇದು – ವೇದ ಪಠಣ, ಸಂಗೀತ, ನೃತ್ಯಗಳ ತವರೂರಾಗಿತ್ತು.

ಎಂಟನೇ ಶತಮಾನದಲ್ಲಿ ಚಾಲುಕ್ಯ ದೊರೆಗಳು ಈ ದೇಗುಲವನ್ನು ವಜ್ರ, ಮುತ್ತು, ರತ್ನಗಳಿಂದ ಸಿಂಗರಿಸಿದರು. ಹಲವು ರಾಜ ಮಹಾರಾಜರು, ಸಾಧು ಸಂತರು, ವರ್ತಕರು ಈ ದೇಗುಲಕ್ಕೆ ಭೇಟಿ ನೀಡಿ ಅಮೂಲ್ಯವಾದ ಕಾಣಿಕೆಗಳನ್ನು ಅರ್ಪಿಸುತ್ತಿದ್ದರು. ಇಲ್ಲಿದ್ದ, ಸರಾಸರಿ ಒಂದು ಟನ್ ತೂಗುತ್ತಿದ್ದ ಚಿನ್ನದ ಗಂಟೆಯ ನಿನಾದ ಎಲ್ಲೆಡೆಯೂ ಪಸರಿಸಿತ್ತು. ಜ್ಯೋತಿ ಸ್ವರೂಪನಾದ ಸೋಮನಾಥನು ಆಧಾರವಿಲ್ಲದೇ ಗರ್ಭಗುಡಿಯ ಮಧ್ಯದಲ್ಲಿ ವಿರಾಜಿಸುತ್ತಿದ್ದುದು, ಎಲ್ಲರಲ್ಲೂ ಅಚ್ಚರಿ ಮೂಡಿಸುತ್ತಿತ್ತು. ಈ ಸಂಗತಿಯನ್ನು ವೈಜ್ಞಾನಿಕವಾಗಿ ವಿಶ್ಲೇಶಿಸಿದ್ದಾರೆ. ಗರ್ಭಗುಡಿಯ ನಾಲ್ಕು ಗೋಡೆಗಳಲ್ಲಿ ಆಯಸ್ಕಾಂತವಿದ್ದು ಮಧ್ಯೆ ಇರುವ ಶಿವಲಿಂಗವು ಕಬ್ಬಿಣದ್ದಾಗಿರಬಹುದು.

ಸೋಮನಾಥದ ಶಿವಲಿಂಗ

ಮತ್ತೊಂದು ವೈಜ್ಞಾನಿಕ ಕೌತುಕ ಇಲ್ಲಿದೆ. ದೇವಸ್ಥಾನದ ಬಳಿಯಲ್ಲಿರುವ ಎತ್ತರವಾದ ಕಂಬದ ಮೇಲಿರುವ ಉಲ್ಲೇಖ ಹೀಗಿದೆ – “ಈ ಸ್ಥಳದಿಂದ ದಕ್ಷಿಣ ಧೃವದವರೆಗೂ ಯಾವುದೇ ಭೂ ಪ್ರದೇಶವಿರುವುದಿಲ್ಲ.” ಮೇಧಾವಿಗಳು, ಈ ಉಲ್ಲೇಖವನ್ನು ಪರೀಕ್ಷಿಸಲಾಗಿ, ಇದು ಸತ್ಯವೆಂದು ಖಚಿತವಾಯಿತು. ಇವರ ವೈಜ್ಞಾನಿಕ ಸಾಧನೆಗಳಿಗೆ ‘ಬಹುಪರಾಕ್’ ಎನ್ನಲೇ ಬೇಕು. ಸೋಮನಾಥನ ಆರಾಧನೆಗೆ – ನಿತ್ಯ ಒಂದು ಸಾವಿರ ಪಂಡಿತರ ಮಂತ್ರ ಪಠಣ, ಐನೂರಕ್ಕೂ ಹೆಚ್ಚು ನರ್ತಕಿಯರ ನೃತ್ಯ ಆಯೋಜಿಸಲಾಗುತ್ತಿತ್ತು.. ಪಟ್ಟಣದ ತುಂಬೆಲ್ಲಾ ಸೋಮನಾಥನ ಆಲಯದಲ್ಲಿ ಮೊಳಗುತ್ತಿದ್ದ ಗಂಟೆಗಳ ಸದ್ದು, ಪುರೋಹಿತರ ಮಂತ್ರಘೋಷ ಹಾಗೂ ಚಿನ್ನ ಬೆಳ್ಳಿ ನಾಣ್ಯಗಳ ಠೇಂಕಾರ ಪ್ರತಿಧ್ವನಿಸುತ್ತಿತ್ತು. ಈ ನಾಡು ಜ್ಞಾನ, ಸಂಸ್ಕೃತಿ ಮತ್ತು ಸಂಪತ್ತಿನ ಕೇಂದ್ರ ಬಿಂದುವಾಗಿತ್ತು. ಈ ನಗರದ ಕೀರ್ತಿ ಎಲ್ಲೆಡೆ ಹಬ್ಬಿತ್ತು.

1024 ರಲ್ಲಿ, ಈ ಪಟ್ಟಣದ ಸಂಪತ್ತನ್ನು ದೋಚಲು, ಮೊಹಮ್ಮದ್ ಗಜ್ನಿ ದೊಡ್ಡ ಸೈನ್ಯದೊಡನೆ ದಂಡೆತ್ತಿ ಬಂದ. ಶತ್ರುವನ್ನು ಎದುರಿಸಲು ಐವತ್ತು ಸಾವಿರ ಶಿವ ಭಕ್ತರು ತಮ್ಮ ಜೀವವನ್ನೇ ಪಣಕ್ಕಿಟ್ಟು ಹೋರಾಡಿದರು, ಆದರೆ, ಗಜ್ನಿಯು ಎಲ್ಲರನ್ನೂ ಕ್ರೂರವಾಗಿ ಹತ್ಯೆ ಮಾಡಿ, ಸೋಮನಾಥನ ದೇಗುಲವನ್ನು ಧ್ವಂಸ ಮಾಡಿ, ಅಲ್ಲಿದ್ದ ಸಂಪತ್ತನ್ನೆಲ್ಲಾ ದೋಚಿದನು. ಹಿಂದೂ ದೇಗುಲಗಳಲ್ಲಿದ್ದ ಸಂಪತ್ತನ್ನು ಲೂಟಿ ಮಾಡಲು, ಈ ದಂಡನಾಯಕನು, ಹದಿನೇಳು ಬಾರಿ ಭಾರತಕ್ಕೆ ದಂಡೆತ್ತಿ ಬಂದು, ಸಾವಿರಾರು ಕುದುರೆ ಹಾಗೂ ಒಂಟೆಗಳ ಮೇಲೆ, ದೋಚಿದ ಸಂಪತ್ತನ್ನು ಹೇರಿಕೊಂಡು ಹೋದನು. ಗಜ್ನಿಯ ಹಿಂದೆ ಸಾಲು ಸಾಲಾಗಿ ಆಕ್ರಮಣ ಮಾಡಿದವರು – 1296 ರಲ್ಲಿ ಖಿಲ್ಜಿ, 1375 ರಲ್ಲಿ ಮುಜಾಫರ್ ಶಾ, 1451 ರಲ್ಲಿ ಮೊಹಮ್ಮದ್ ಬೇಗ್ಡೆ, 1665 ರಲ್ಲಿ ಔರಂಗಜೇಬ್, ತುಘಲಕ್, ಪೋರ್ಚುಗೀಸರು ಮುಂತಾದವರು. ದೇಗುಲವನ್ನು ಕೆಡವಿ ಅಲ್ಲಿ ಮಸೀದಿಯ ನಿರ್ಮಾಣವೂ ಆಗಿತ್ತು. ಸಾಕಷ್ಟು ಜನರ ಮತಾಂತರವೂ ಭರದಿಂದ ಸಾಗಿತ್ತು. ಆದರೆ ಸೊಮನಾಥನ ಮಹಿಮೆ, ಚೈತನ್ಯ ಹಾಗೂ ದೈವೀಶಕ್ತಿಯನ್ನು ಯಾರಿಂದಲೂ ನಾಶಪಡಿಸಲು ಸಾಧ್ಯವಾಗಲಿಲ್ಲ. ಇದನ್ನು ಪುನರ್ ನಿರ್ಮಾಣ ಮಾಡಿದ ಕೀರ್ತಿ ಹಲವು ರಾಜರಿಗೆ ಸಲ್ಲುತ್ತದೆ. ಇವರಲ್ಲಿ ಪ್ರಮುಖರಾದವರು ಮಹಾರಾಣಿ ಅಹಲ್ಯಾ ಬಾಯಿ ಹೋಲ್ಕರ್ ಮತ್ತು ಶಿಂಧೆ ರಾಜವಂಶದವರು.

1947 ರಲ್ಲಿ, ಭಾರತಕ್ಕೆ ಸ್ವಾತಂತ್ರ್ಯ ಬಂದಮೇಲೆ, ಉಕ್ಕಿನ ಮನುಷ್ಯ ಎಂದೇ ಖ್ಯಾತಿ ಪಡೆದಿದ್ದ ಸರ್ದಾರ್ ವಲ್ಲಭಾಬಾಯಿ ಪಟೇಲರು ಪರಕೀಯರ ದಾಳಿಗೆ ತುತ್ತಾಗಿದ್ದ ಈ ದೇಗುಲದ ಪುನರ್ ನಿರ್ಮಾಣಕ್ಕೆ ಟೊಂಕ ಕಟ್ಟಿ ನಿಂತರು. ಭಾರತದ ಮೊದಲ ರಾಷ್ಟ್ರಪತಿಯಾದ ಡಾ. ಬಾಬು ರಾಜೇಂದ್ರ ಪ್ರಸಾದ್ ರವರು ಶಂಖು ಸ್ಥಾಪನೆ ನೆರವೇರಿಸಿದರು. 1951 ರಂದು ದೇಗುಲವು ಪೂರ್ಣಗೊಂಡಿತು. 2001 ರಲ್ಲಿ ಸುವರ್ಣ ಮಹೋತ್ಸವವನ್ನು ಆಚರಿಸಿದಾಗ ಅಂದಿನ ಪ್ರಧಾನಿಯಾಗಿದ್ದ ಶ್ರೀ ಅಟಲ್ ಬಿಹಾರಿ ವಾಜಪೇಯಿಯವರ ಅಮೃತವಾಣಿಗಳನ್ನು ಕೇಳೋಣ ಬನ್ನಿ -“ಸೋಮನಾಥ ದೇಗುಲವನ್ನು ಧ್ವಂಸ ಮಾಡಿದವರು ವಿನಾಶವಾಗಿ ಹೋದರು. ಈ ದೇಗುಲ ನಮ್ಮ ಪುರಾತನ ಸಂಸ್ಕೃತಿಯ ಪ್ರತೀಕ. ಶಂಕರರಿಂದ – ಸ್ವಾಮಿ ವಿವೇಕಾನಂದರವರೆಗೆ , ಅನೇಕ ಮಹನೀಯರು ಹಿಂದೂ ಧರ್ಮದ ಜೀರ್ಣೋದ್ಧಾರಕ್ಕೆ ಜೀವನವನ್ನೇ ಮುಡಿಪಾಗಿಟ್ಟರು. ಸೌರಾಷ್ಟ್ರದ ಸೋಮನಾಥ ಜ್ಯೋತಿರ್ಲಿಂಗವು -ಇವರೆಲ್ಲರ ಸಂಘರ್ಷ, ಶಪಥ ಹಾಗು ಸ್ವಾಭಿಮಾನದ ಸಂಕೇತವಾಗಿ ನಿಂತಿದೆ.” ಜೈ, ಸೋಮನಾಥ”.
ಕೃಪೆ -ಅಂತರ್ಜಾಲ

ಈ ಲೇಖನ ಸರಣಿಯ ಹಿಂದಿನ ಭಾಗ ಇಲ್ಲಿದೆ : http://surahonne.com/?p=34384

(ಮುಂದುವರೆಯುವುದು)
-ಡಾ.ಗಾಯತ್ರಿದೇವಿ ಸಜ್ಜನ್

12 Responses

  1. ನಯನ ಬಜಕೂಡ್ಲು says:

    ಚೆನ್ನಾಗಿದೆ

    • ಗಾಯತ್ರಿ ಸಜ್ಜನ್ says:

      ನಿಮ್ಮ ನುಡಿಗಳು ನನಗೆ ಬರೆಯಲು ಸ್ಪೂರ್ತಿದಾಯಕ

  2. Hema says:

    ಚೆಂದದ ಬರಹ, ನಾವು ಸೋಮನಾಥಕ್ಕೆ ಭೇಟಿ ಕೊಟ್ಟಿದ್ದ ನೆನಪು ಮರುಕಳಿಸಿತು. ನಮಗೂ ಅಲ್ಲಿ ಅದ್ಭುತವಾದ ದೈವಸಾನಿಧ್ಯದ ಅನುಭವವಾಗಿತ್ತು.

  3. ನಾಗರತ್ನ ಬಿ. ಅರ್. says:

    ನಾನು ಈ ಸೋಮನಾಥನ ದೇವಸ್ಥಾನವನ್ನು ನೋಡಿದ್ದೆ.. ತುಂಬಾ ಇಷ್ಟ ವಾಗಿತ್ತು ಈಗ ನಿಮ್ಮ ಪೌರಾಣಿಕ ಐತಿಹಾಸಿಕ ಮಾಹಿತಿ ಓದಿದಾಗ ಆ ಸ್ಥಳ ಕಣ್ಮುಂದೆ ಮತ್ತೆ ಬಂದಹಾಗಾಯಿತು ನಿರೂಪಣೆ ಸೂಗಸಾಗಿ ಮೂಡಿ ಬಂದಿದೆ ಧನ್ಯವಾದಗಳು ಮೇಡಂ

  4. Anonymous says:

    Tq mam for sharing I enjoy reading and vesulizing different places. Through you….

  5. . ಶಂಕರಿ ಶರ್ಮ says:

    ಹಲವಾರು ವರ್ಷಗಳ ಹಿಂದೆ ಕಂಡಿದ್ದ ಸೋಮನಾಥ ಮಂದಿರದ ನೆನಪಾಯಿತು. ಕೋಟಿಗಟ್ಟಲೆ ವರ್ಷಗಳ ಪೌರಾಣಿಕ ಇತಿಹಾಸವುಳ್ಳ ದೇಗುಲದ ಬಗ್ಗೆ ವಿವರವಾದ ಮಾಹಿತಿಗಳುಳ್ಳ ಲೇಖನ ಚೆನ್ನಾಗಿದೆ. ಧನ್ಯವಾದಗಳು ಮೇಡಂ.

  6. Manjunatha Sajjan says:

    Sthala puranada varnane bahala sogasagi moodibandide.
    Dhanyavadagalu

  7. ಗಾಯತ್ರಿ ಸಜ್ಜನ್ says:

    ನಿಮ್ಮ ಅಭಿಮಾನಪೂರ್ವಕ ನುಡಿಗಳಿಗೆ ವಂದನೆಗಳು

  8. Padma Anand says:

    ಪೌರಾಣಿಕ, ಐತಿಹಾಸಿಕ ವಿವರಣೆಗಳೊಂದಿಗೆ ಮಾಹಿತಿಪೂರ್ಣವಾದ ಸೋಮನಾಥದ ಸುಂದರ ವರ್ಣನೆಗಾಗಿ ವಂದನೆಗಳು, ಅಭಿನಂದನೆಗಳು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: