ಕಳ್ಳ ಬಂದ ಕಳ್ಳ…
ಕೊರೋನಾ ಎಂಬ ಪಿಡುಗು ಇಡೀ ವಿಶ್ವವನ್ನೇ ಕಟ್ಟಿಹಾಕಿದೆ. ಹೊರಗೆ ಅನಗತ್ಯವಾಗಿ ತಲೆ ಹಾಕಿದಿರೋ ನಿಮ್ಮ ಪ್ರಾಣಕ್ಕೇ ಕುತ್ತು ಬರಬಹುದು. ಇದರಿಂದ ಸತ್ತವರು ಅವರ ಅಂತಿಮ ದರ್ಶನಕ್ಕೂ ಯಾರೂ ಬಾರದೆ ಪರದೇಶಿಗಳಂತೆ ಸಮಾಧಿಗೆ ಸೇರುತ್ತಾರೆ. ಇನ್ನಷ್ಟು ದಿನ ಬದುಕಿರಬೇಕೆಂದಿದ್ದರೆ ಮನೆಯೊಳಗೇ ಬಾಗಿಲು ಬಂದ್ ಮಾಡಿಕೊಂಡು ಒಳಗಿರಿ. ಆಗ ‘ನೀವು ಒಳಗೆ ಕೊರೊನಾ ಹೊರಗೆ’ ಎಂಬ ಘೋಷವಾಕ್ಯ ಎಲ್ಲೆಡೆ ಮೊಳಗಿಸುತ್ತಿದ್ದಾರೆ. ಇದನ್ನೆಲ್ಲ ಅರಿತು ತಮ್ಮನ್ನು ಆಪತ್ತಿನಿಂದ ಕಾಪಾಡಿಕೊಳ್ಳಬೇಕೆಂಬವರು ತಾವಾಗಿಯೇ ಆಪತ್ತಿಗೆ ಒಡ್ಡಿಕೊಳ್ಳುವುದು ಕನಸಿನ ಮಾತು.
ತಮ್ಮ ಜೀವನಾವಶ್ಯಕತೆಗಳಿಗೆ ಜನರು ಹಲವಾರು ಬದಲಿ ವ್ಯವಸ್ಥೆಗಳಿಗೆ ಮೊರೆಹೋಗಿದ್ದಾರೆ. ಆನ್‌ಲೈನಿನಲ್ಲೇ ವ್ಯಾಪಾರ, ವಹಿವಾಟು, ನಡೆಸಿದ್ದಾರೆ. ಆವಶ್ಯಕವಾಗಿ ಹೋಗಲೇಬೇಕಾದ ಕಡೆಗೆ ಅತಿ ಎಚ್ಚರಿಕೆಯಿಂದ ಹೆಜ್ಜೆಗಳಿಡುತ್ತಾ ಸಾಗುತ್ತಿದ್ದಾರೆ. ಇನ್ನು ಮೊಬೈಲ್‌ನಲ್ಲೇ ಕಾಲ್, ಚಾಟ್, ವೀಡಿಯೋ ಕಾಲ್ ಮಾಡುತ್ತಾ ಸಂಪರ್ಕದಲ್ಲಿದ್ದವರೊಡನೆ ಸಂತಸ, ಸಂಕಟ, ಅನಿಸಿಕೆ, ಪರದಾಟಗಳನ್ನು ಹಂಚಿಕೊಳ್ಳುತ್ತಾ ಹಗುರಾಗುತ್ತಾ ದಿನಗಳೆದಿದ್ದಾರೆ.
ಇಂತಹ ಪರಿಸ್ಥಿತಿಯಲ್ಲಿ ಒಂದುದಿನ ಬೆಳಗಿನ ಕೆಲಸಗಳನ್ನೆಲ್ಲಾ ಮುಗಿಸಿ ಪತ್ರಿಕೆ ಓದುತ್ತಿದ್ದಾಗ ನನಗೆ ಗೆಳತಿ ವಾಸಂತಿಯಿಂದ ಫೋನ್ ಬಂತು. ಯಥಾರೀತಿ ಉಭಯಕುಶಲೋಪರಿಯಾದ ಮೇಲೆ ಹೋದ ತಿಂಗಳು ನಮ್ಮ ಮನೆಗೆ ಕಳ್ಳ ಬಂದಿದ್ದ ಎಂದು ಹೇಳಿದಳು.
ನಾನು ಗಾಭರಿಯಿಂದ ‘ಹೌದೇ ! ಏನೇನು ಹೋಯ್ತು? ಹೇಗೆ?’ಎಂದು ಕೇಳಿದೆ.
‘ಹ್ಹಾ ಹ್ಹಾ ! ಅಂಥ ಗಾಭರಿಯಾಗುವುದೇನೂ ಇಲ್ಲ. ಆದರೆ ಕಳ್ಳತನವಂತೂ ಆಗಿದೆ’ಯೆಂದಳು
‘ಅಮ್ಮಾ ತಾಯಿ, ಗಾಭರಿಯಿಲ್ಲ ಅನ್ನುತ್ತೀಯ. ಕಳ್ಳತನವಾಗಿದೆ ಎನ್ನುತ್ತೀಯ. ಅದ್ಹೇಗೆ ಸಾಧ್ಯ? ಒಗಟಾಗಿ ಮಾತನಾಡಬೇಡ ನೇರವಾಗಿ ವಿಷಯ ತಿಳಿಸು’ ಎಂದೆ.
”ಹೂಂ..ನಮ್ಮ ಮಗ, ಸೊಸೆ ಏನೋ ತುರ್ತು ಕೆಲಸವಿದೆ ಅಂತ ತಮ್ಮ ಗಾಡಿಯಲ್ಲಿ ಬೆಂಗಳೂರಿಗೆ ಹೋಗಿದ್ದರು. ನಮ್ಮ ಪುಟ್ಟಿ, ಅದೇನಮ್ಮ ಮೊಮ್ಮಗಳು ಶಿವಾನಿಯನ್ನು ಇಲ್ಲಿಯೇ ನಮ್ಮೊಡನೆ ಬಿಟ್ಟಿದ್ದರು. ಅವಳ ತುಂಟತನಗಳ ಬಗ್ಗೆ ನಿನಗೆ ಬೇಕಾದಷ್ಟು ಸಾರಿ ಹೇಳಿದ್ದೇನಲ್ಲಾ, ತುಂಬಾ ತರಲೆ ಮಾಡುತ್ತಾಳೆ. ಆದಿನ ಬೆಳಗ್ಗೆ ಎದ್ದು ಹಲ್ಲುಜ್ಜುತ್ತಾ ಕೂಗುತ್ತಿದ್ದರೂ ಕೇಳದಂತೆ ಮಹಡಿಯಿಂದ ಕೆಳಗಿಳಿದು ಹೊರಕ್ಕೆ ಹೋದಳು. ನಾನು ನನ್ನವರನ್ನು ಕೂಗಿ ಅವಳ ಕಡೆ ಕೊಂಚ ಗಮನ ಕೊಡಲು ಹೇಳಿದೆ. ಈಗಿನ ಮೊಮ್ಮಕ್ಕಳು ಬಾಲವಿಲ್ಲದ ಮಂಗಗಳಂತೇ, ನಮ್ಮವರು ‘ಗೇಟಿನ ಬೀಗದಕೈ ಕೊಡು, ಹಾಗೇ ತೆರೆದು ಬರುತ್ತೇನೆ. ಇಲ್ಲದಿದ್ದರೆ ನಿನ್ನ ಅವಸರದ ಮನೆಗೆಲಸದ ಅಸಿಸ್ಟೆಂಟು ಬೀಗ ತೆರೆದಿಲ್ಲವೆಂದು ನಾಲ್ಕು ಮನೆಗೆ ಕೇಳುವಂತೆ ಕಿರುಚಿಕೊಳ್ಳುತ್ತಾಳೆ ‘ಎಂದು ನಾನು ಕೊಟ್ಟ ಕೀ ಹಿಡಿದು ಮೊಮ್ಮಗಳ ಹಿಂದೆಯೇ ಹೋದರು.
ಎರಡು ನಿಮಿಷವೂ ಆಗಿರಲಿಲ್ಲ. ಕೆಳಗಡೆ ತಾತ, ಮೊಮ್ಮಗಳ ನಡುವೆ ನಡೆಯುತ್ತಿದ್ದ ಮಾತುಕತೆ ಕೇಳಿಬಂತು. ಹಾಗೇ ಶಿವಾನಿಯು ‘ಅಜ್ಜೀ ನೀವು ಬೇಗ ಬನ್ನೀ ಇಲ್ಲಿ’ ಎಂಬ ಕರೆ ಬಂತು. ನಾನು ಏನೋ ಇರಬೇಕೆಂದು ಮಾಡುತ್ತಿದ್ದ ಕೆಲಸ ಬಿಟ್ಟು ಆತಂಕದಿಂದಲೇ ಕೆಳಗಿಳಿದು ಬಂದೆ.
‘ಏನು ಪುಟ್ಟೀ ನಿನ್ನ ಗಲಾಟೆ?’ ಎಂದು ಪ್ರಶ್ನಿಸಿದೆ.
ಅದಕ್ಕವಳು ‘ತಾತನ ಕಾರಿನ ಚಕ್ರಗಳನ್ನು ದೇವರು ರಾತ್ರಿ ಮಾಯಮಾಡಿಬಿಟ್ಟಿದ್ದಾನೆ. ಅದನ್ನು ತಾತನಿಗೆ ಹೇಳಿದರೆ ನಂಬುತ್ತಲೇ ಇಲ್ಲ. ಅದಕ್ಕೇ ನಾನು ನಿಮ್ಮನ್ನು ಕೂಗಿದ್ದು, ನೀವೇ ನೋಡಿ ಬೇಕಾದರೆ?’ ಎಂದಳು.
‘ಏ ತಮಾಷೆ ಸಾಕು, ಆ ಚಕ್ರಗಳು’ ಎನ್ನುತ್ತಲೇ ಬಗ್ಗಿ ಇಣುಕಿ ನೋಡಿದೆ. ಹೌದು ಚಕ್ರಗಳಿದ್ದ ಜಾಗದಲ್ಲಿ ಸೈಜ್‌ಗಲ್ಲುಗಳನ್ನಿಡಲಾಗಿದೆ. ನಾನು ನಮ್ಮವರನ್ನು ಕರೆದು ತೋರಿಸಿದೆ. ಅವರೂ ನೋಡಿ ‘ಹೌದಲ್ಲವೇ? ನಾನು ಇವಳು ಚೇಷ್ಟೆ ಮಾಡುತ್ತಿದ್ದಾಳೆ ಎಂದುಕೊಂಡು ಕೆಳಗೆ ನೋಡಲಿಲ್ಲ. ಹಾಗಾದರೆ ರಾತ್ರಿ ಯಾರೋ ಕಳ್ಳರು ಮನೆಗೆ ನುಗ್ಗಿದ್ದಾರೆ. ಗೇಟಿಗೆ ಹಾಕಿದ ಬೀಗ ಹಾಗೇ ಇದೆ. ಅಷ್ಟು ಕೆಲಸ ಮಾಡುವಾಗ ಸದ್ದೇ ಕೇಳಿಸಲಿಲ್ಲ. ಇದು ಒಬ್ಬರ ಕೆಲಸವಲ್ಲ’. ಎಂದರು.
‘ಅಲ್ಲವೇ ಗೆಳತಿ, ಪಕ್ಕದ ಮನೆಯವರಿಗಾದರೂ ಶಬ್ಧ ಕೇಳಿಸಲಿಲ್ಲವೇ? ಅದೂ ನಾಲ್ಕೂ ಚಕ್ರಗಳನ್ನು ತೆಗೆಯುವಾಗಲೂ’ ಎಂದೆ.
”ಪಕ್ಕದ ಮನೆಯವರು ಕೊರೋನಾ ಲಾಕ್‌ಡೌನ್ ಬರುವುದಕ್ಕಿಂತ ಮೊದಲೇ ಹಬ್ಬಕ್ಕೆಂದು ಊರಿಗೆ ಹೋದವರು ಇನ್ನೂ ಪತ್ತೇನೇ ಇಲ್ಲ. ಫೋನ್ ಮಾಡಿದಾಗಲೆಲ್ಲ ‘ಆಂಟಿ ನಮ್ಮವರಿಗೆ ವರ್ಕ್‌ಫ್ರಂ ಹೋಮ್ ಪರ್ಮಿಷನ್ ಇದೆ. ಮಕ್ಕಳಿಬ್ಬರೂ ತುಂಬ ಚಿಕ್ಕವರು. ಹೊರಗಡೆ ಹೋಗದಂತೆ ಅವರನ್ನು ಹಿಡಿದಿಡುವುದು ತುಂಬ ಕಷ್ಟ. ನಮ್ಮ ಊರು ಮತ್ತು ಸುತ್ತಮುತ್ತಲು ನಮ್ಮ ಬಂಧುಬಳಗದವರು ಸಮೀಪವೇ ಇದ್ದಾರೆ. ಅಲ್ಲದೆ ನಮ್ಮ ಅತ್ತೆಯ ಮನೆಯೂ ಇಲ್ಲಿಗೆ ಹತ್ತಿರವಾಗುತ್ತೆ. ಆದ್ದರಿಂದ ಇಲ್ಲಿ ಸಮಸ್ಯೆಯಿಲ್ಲ. ಸದ್ಯಕ್ಕೆ ಅಲ್ಲಿಗೆ ಬರುವುದಿಲ್ಲ. ಅಲ್ಲಿ ನಮ್ಮ ಮನೆ ಸಾಲಿನಲ್ಲಿ ಕೊನೇ ಮನೆಯಾದ್ದರಿಂದ ನಮ್ಮ ಮನೆಯ ಕಡೆಯೂ ಸ್ವಲ್ಪ ನಿಗಾ ಇರಲಿ ಆಂಟಿ’ ಎಂದು ನನಗೇ ಜವಾಬ್ದಾರಿ ವಹಿಸುತ್ತಿದ್ದಳು. ನಮ್ಮ ಮನೆ ಹೇಗಿದೆಯೆಂದು ನಿನಗೇ ಗೊತ್ತಲ್ಲ. ಕೆಳಗಡೆ ವಾಹನ ನಿಲುಗಡೆ ಮಾತ್ರ. ಮೇಲ್ಗಡೆ ಮನೆ. ನಮಗೆ ಸದ್ದೇ ಸರಿಯಾಗಿ ಕೇಳಿಸುತ್ತಿಲ್ಲ. ನಮ್ಮ ಕಾರು ಹಳೇ ಮಾಡೆಲ್. ಮೊನ್ನೆ ಮೊನ್ನೆ ತಾನೇ ಸರ್ವೀಸ್ ಮಾಡಿಸಿ, ಅದೇ ಸಮಯದಲ್ಲಿ ನಮ್ಮವರು ಹೊಸಾ ನಾಲಕ್ಕೂ ಟೈರ್‍ಗಳನ್ನು ಹಾಕಿಸಿದ್ದರು. ಪರಿಚಯದವನೇ ಹುಡುಗ, ತಾನೇ ವರ್ಕ್‌ಷಾಪಿಗೆ ತೆಗೆದುಕೊಂಡು ಹೋಗಿ ಹಾಕಿಸಿ ತಂದಿದ್ದ. ಪಾಪ ನಮ್ಮವರ ಪೇಚಾಟ ನೋಡೋಕಾಗಲಿಲ್ಲ”. ಎಂದಳು.
‘ಪೋಲೀಸ್ ಕಂಪ್ಲೇಂಟ್ ಕೊಡಬೇಕಾಗಿತ್ತು’ ಎಂದೆ.
‘ಕೊಡದೇ ಬಿಡಕ್ಕಾಗ್ತದಾ ಕೊಟ್ಟದ್ದರಿಂದ ಮತ್ತೊಂದು ಸಂಗತಿ ತಿಳಿದುಬಂತು’ ಎಂದಳು.
‘ವೆರಿ ಇಂಟರೆಸ್ಟಿಂಗ್, ಕುತೂಹಲ ಹುಟ್ಟುತ್ತಿದೆ. ಊರಿನ ಕೊನೆಯಲ್ಲಿ ಮನೆ ಮಾಡಿದ್ದರೆ ಏನಾಗುತ್ತೇಂತ ಈಗಲಾದರೂ ಗೊತ್ತಾಯಿತೇ?’ ಎಂದೆ.
ನಾವು ಇಲ್ಲಿಗೆ ಬಂದ ಹೊಸತರಲ್ಲಿ ಇಲ್ಲೊಂದು, ಅಲ್ಲೊಂದು ಮನೆಗಳಿದ್ದವು ಅಷ್ಟೆ. ಆಗ ಯಾವುದೇ ಭಯವಿರಲಿಲ್ಲ. ಈಗ ಬೇಕಾದಷ್ಟು ಮನೆಗಳಾಗಿವೆ. ಈ ಹಾಳಾದ್ದು ಕೊರೋನಾ ಭಯದಿಂದ ಜನರು ಹೊರಗೆ ತಲೆಯೇ ಹಾಕುವುದಿಲ್ಲ. ಅದಿರಲಿ ಇಲ್ಲಿ ಕೇಳು’ ಎಂದಳು.
‘ಮಧ್ಯೆ ಮಾತನಾಡಿದ್ದಕ್ಕೆ ಸಾರಿ, ಮುಂದೆ ಹೇಳು’ ಎಂದೆ.
”ನಮ್ಮ ಮನೆಗೆ ಬಂದ ಪೋಲೀಸರು ಅಕ್ಕಪಕ್ಕ, ಆ ಕಡೆ ಈಕಡೆ ಕಣ್ಣಾಡಿಸುತ್ತಿದ್ದಾಗ ನಮ್ಮ ಪಕ್ಕದ ಮನೆಯ ಬಾಗಿಲು ಮುಂದಕ್ಕೆ ವಾಲಿದಂತೆ ಕಾಣಿಸಿತು. ಅನುಮಾನದಿಂದ ಹತ್ತಿರ ಹೋಗಿ ನೋಡಿದರು. ಮನೆಯ ಮುಂಭಾಗಿಲ ಡೋರ್‌ಲಾಕನ್ನು ಕಲ್ಲಿನಿಂದ ಜಜ್ಜಲಾಗಿತ್ತು. ತಕ್ಷಣ ನಮ್ಮ ಹತ್ತಿರ ‘ಅವರ ಫೋನ್ ನಂಬರ್ ಇದೆಯಾ?’ ಎಂದು ವಿಚಾರಿಸಿದರು. ಅವರಿಗೆ ನಮ್ಮ ಕಡೆಯಿಂದಲೇ ಕಾಲ್ ಮಾಡಿಸಿದರು. ಅದೃಷ್ಟವಶಾತ್ ಆ ಮನೆಯ ಯಜಮಾನರು ಇಲ್ಲಿಗೇ ಹೊರಟಿದ್ದಾರೆಂದು ತಿಳಿಯಿತು. ಅವರಿಗೆ ಗಾಭರಿಯಾಗಬಹುದೆಂದು ವಿಷಯ ಹೇಳದೇ ಬೇಗ ಬನ್ನಿ ಎಂದಷ್ಟೇ ಹೇಳಿದೆವು.
ಅವರು ಮೊದಲೇ ಹೊರಟು ಬಿಟ್ಟಿದ್ದರಿಂದ ಅರ್ಧ ಗಂಟೆಯೊಳಗೇ ತಮ್ಮ ಕಾರಿನಲ್ಲಿ ಬಂದು ತಲುಪಿದರು. ಪೋಲೀಸರನ್ನು ಕಂಡು ಕಕ್ಕಾಬಿಕ್ಕಿಯಾದರು. ಚುಟುಕಾಗಿ ಅವರಿಗೆ ವಿಷಯ ತಿಳಿಸಿ ಪೋಲೀಸರೇ ಅವರನ್ನು ಮನೆಯೊಳಕ್ಕೆ ಕರೆದುಕೊಂಡು ಹೋದರು.”
ಕುತೂಹಲದಿಂದ ‘ನೀನೂ ಹೋದೆಯಾ?’ ಎಂದು ಕೇಳಿದೆ.
‘ಏ ಪೆಕರು ಯಾರಾದರೂ ಹಾಗೆ ಹೋಗುತ್ತಾರಾ, ಮುಂದೆ ಕೇಳು’ ಎಂದಳು.
‘ವಿಷಯ ಹೇಗೆ ಹರಡಿತೋ ದೇವರೇ ಬಲ್ಲ. ಮುಖಕ್ಕೆ ಗೌಸುಗಳನ್ನು ಕಟ್ಟಿಕೊಂಡೇ ಕೆಲವರು ಬಂದಿದ್ದರು. ಹೊರಗಡೆ ಅಲ್ಲೊಬ್ಬರು ಇಲ್ಲೊಬ್ಬರಂತೆ ದೂರದೂರ ನಿಂತರು. ನಮ್ಮವರ ಹತ್ತಿರ ಪ್ರಶ್ನೆ ಕೇಳುತ್ತಿದ್ದರು. ನಾನಂತೂ ಅಲ್ಲಿಗೆ ಬಂದವರು ನಮ್ಮ ಮನೆಗೆ ಬಂದು ಅಟಕಾಯಿಸಿಕೊಂಡಿದ್ದರೆ? ನಮ್ಮಗತಿ, ಮೊಮ್ಮಗಳ ಗತಿಯೇನು? ಎಂದುಕೊಂಡು ಹಾಗಾಗದಿದ್ದುದಕ್ಕೆ ದೇವರಿಗೆ ಮನಸ್ಸಿನಲ್ಲೇ ಮಣಿದೆ. ಅಷ್ಟರಲ್ಲಿ ಪೋಲೀಸರು ಪಕ್ಕದ ಮನೆಯಿಂದ ಹೊರಬಂದರು. ಅವರ ಮುಖದಮೇಲೆ ಯಾವೊಂದು ಆತಂಕ, ವಿಷಾದದ ಭಾವನೆಗಳೂ ಇರಲಿಲ್ಲ. ಹುಸಿನಗುವಿತ್ತು. ಒಬ್ಬರಿಗೊಬ್ಬರು ಛೇಡಿಸುತ್ತಾ ನಕ್ಕರು. ನಾನು, ನನ್ನವರು ‘ಇದೇನ್ರೀ? ಮನೆಯೊಳಗೆ ಹೋದವರು ಹೀಗೆ?’ ಎಂದೆ.
ಅದಕ್ಕವರು ” ಬನ್ನಿ ಸಾರ್, ಇಲ್ಲೇ ಕುಳಿತು ಮಾತನಾಡೋಣ ಎಂದು ಗಾಡಿ ನಿಲ್ಲಿಸಿದ್ದ ಕಡೆ ಜಾಗವಿತ್ತಲ್ಲಾ ಅಲ್ಲೇ ಪಕ್ಕದ ಮನೆಯಿಂದ ಒಂದೆರಡು ಕುರ್ಚಿಗಳನ್ನು ಹೊರಗಡೆ ಹಾಕಿಕೊಂಡು ಕುಳಿತರು. ನನಗೋ ಘಳಿಗೆ ಘಳಿಗೆಗೂ ಕುತೂಹಲ. ಸ್ವಲ್ಪ ದೂರದಲ್ಲಿ ನಿಂತು ಮಾತುಗಳನ್ನು ಕೇಳಿಸಿಕೊಂಡೆ. ಪಕ್ಕದ ಮನೆಯೊಳಗಡೆ ಬೆಲೆಬಾಳುವ ಯಾವುದೇ ಸಾಮಾನುಗಳೂ ಕಳುವಾಗಿಲ್ಲವಂತೆ. ರೂಮುಗಳನ್ನೆಲ್ಲ ಪರಿಶೀಲಿಸಿದಾಗ ಆಲ್ಮೆರಾಗಳು ತೆಗೆದಿದ್ದರೂ ಬಟ್ಟೆ ಬರೆ, ಕ್ಯಾಶ್‌ಬಾಕ್ಸ್, ಅಲ್ಲಿದ್ದ ಕಾಗದ ಪತ್ರಗಳು ಯಾವುದನ್ನೂ ತೆಗೆದುಕೊಂಡಿಲ್ಲ. ಚೆಲ್ಲಾಪಿಲ್ಲಿಯಾಗಿವೆ ಆದರೆ ಕಳುವಾಗಿಲ್ಲ. ದೇವರ ಮನೆ, ಅಡುಗೆ ಮನೆಗಳನ್ನು ಶೋಧಿಸಿದಾಗ ಅಲ್ಲಿ ದಿನಸಿ ಸಾಮಾನುಗಳಿದ್ದ ದೊಡ್ಡ ದೊಡ್ಡ ಡಬ್ಬಗಳು ಒಂದೂ ಇಲ್ಲವಾಗಿವೆ.
ಇದೆಲ್ಲವನ್ನು ನೋಡಿದ ಮನೆಯ ಯಜಮಾನರು ‘ಇವುಗಳಲ್ಲಿ ನಾವು ಊರಿನಿಂದ ಬಂದಿದ್ದ ಅಕ್ಕಿ, ಬೇಳೆ, ಕಾಳುಗಳು, ಹುಣಿಸೆಹಣ್ಣು, ಮೆಣಸಿನಕಾಯಿ, ರಾಗಿ, ಗೋಧಿ ಎಲ್ಲವನ್ನೂ ಹುಳು ಹುಪ್ಪಟೆ ಬರದಂತೆ ಬೇವಿನ ಎಲೆಗಳನ್ನು ಅವುಗಳೊಳಗೆ ಹಾಕಿಟ್ಟಿದ್ದೆವು. ಏನಿಲ್ಲವೆಂದರೂ ಎಲ್ಲವೂ ಸೇರಿ ಮೂವತ್ತು, ಮೂವತ್ತೈದು ಕೆ .ಜಿ.ಗಳಷ್ಟಾಗಬಹುದೆಂದರು. ಈಗ ನಾನು ಇಲ್ಲಿಗೆ ಬರುತ್ತಿದ್ದ ಉದ್ದೇಶ ಅವು ಬಹಳ ಕಾಲವಿದ್ದರೆ ಹಾಳಾಗಬಹುದು .ಅದ್ದರಿಂದ ಅವುಗಳನ್ನು ಇಲ್ಲಿರುವ ನಮ್ಮ ನೆಂಟರ ಮನೆಗಳಿಗೆ ಹಂಚಿಕೊಟ್ಟು ಹೋಗಲು ಬಂದೆ. ಆದರೆ ಇಲ್ಲಿ ಬಂದು ನೋಡಿದರೆ ಈ ಆಗಂತುಕ ನೆಂಟರೇ ಅವುಗಳನ್ನು ಒಯ್ದುಬಿಟ್ಟಿದ್ದಾರೆ’. ಎಂದು ಜೋರಾಗಿ ನಕ್ಕರು. ಅಲ್ಲದೆ ಮನೆಯಲ್ಲಿ ಬೆಳ್ಳಿ, ಬಂಗಾರ, ಒಡವೆಗಳಿರಲಿಲ್ಲ. ಕ್ಯಾಶ್ ಕೂಡ ಇಟ್ಟಿರಲಿಲ್ಲ. ಬಟ್ಟೆ ಬರೆ, ಬೇರೆ ಸಾಮಾನುಗಳು ಅವರಿಗೆ ಬೇಕಾಗಿರಲಿಲ್ಲ. ಅದಕ್ಕೇ ಅವುಗಳನ್ನೊಯ್ದಿಲ್ಲ. ಹೇಗಾದರಾಗಲೀ ಒಂದು ಕಂಪ್ಲೆಂಟ್ ಬರೆದುಕೊಳ್ಳಿ. ನಾನೀಗಲೇ ಮನೆ ಬಾಗಿಲ ರಿಪೇರಿಗಾಗಿ ಫೋನ್ ಮಾಡಿ ಕಾರ್ಪೆಂಟರನನ್ನು ಕರೆಸುತ್ತೇನೆ. ಫೋನ್ ಮಾಡಬಹುದೇ?” ಎಂದು ಪೋಲೀಸಿನವರನ್ನು ಕೇಳಿದರು.
‘ಅವರು ಎಲ್ಲ ವಿವರಗಳನ್ನು ದಾಖಲು ಮಾಡಿಕೊಂಡರು. ಪೋಲೀಸಿನವರು ಹೋದಮೇಲೆ ಸೇರಿದ್ದ ಜನರು ಇದು ಒಬ್ಬರ ಕೆಲಸವಲ್ಲ. ಆದರೆ ಅಂಥದ್ದೇನೂ ಭಾರೀ ಕಳುವಲ್ಲ’ ಎಂದು ತಮಗೆ ತೋಚಿದಂತೆ ಮಾತನಾಡುತ್ತಾ ತೆರಳಿದರು.
ನಂತರ ಪಕ್ಕದ ಮನೆಯವರು ” ಆಂಟಿ, ಸದ್ಯಕ್ಕೆ ನನ್ನವಳು, ಮಕ್ಕಳು ಇಲ್ಲಿಗೆ ಬರುವುದಿಲ್ಲ. ಸುಮ್ಮನೆ ಮನೆಗೆ ಬಾಡಿಗೆ ಏಕೆ ಕಟ್ಟಲಿ. ಬಾಗಿಲು ರಿಪೇರಿ ಮಾಡಿಸಿ ಓನರ್‌ಗೆ ಹೇಳಿ ಮನೆ ಖಾಲಿ ಮಾಡುತ್ತೇನೆಂದು ಹೇಳಿದರು. ಅದರಂತೆ ಸಾಮಾನುಗಳನ್ನು ಪ್ಯಾಕ್ ಮಾಡಿ ಊರಿಗೆ ರವಾನೆ ಮಾಡಿ ಮನೆಯನ್ನೇ ಖಾಲಿಮಾಡಿ ಹೊರಟುಹೋದರು. ನನ್ನ ಮಗ ಈಗ ಆ ಮನೆಗೆ ಮತ್ಯಾರು ಯಾವಾಗ ಬರುತ್ತಾರೋ? ಯಾವುದಕ್ಕೂ ಸೇಫರ್‌ಸೈಡ್ ಇರಲೆಂದು ಕೆಳಗೆ ಅಟ್ಯಾಚ್ಡ್ ಬಾತ್ ಇದ್ದ ರೂಮನ್ನು ಸ್ವಲ್ಪ ರಿಪೇರಿ ಮಾಡಿಸಿ ಅಲ್ಲಿ ಒಬ್ಬ ನೈಟ್ ವಾಚ್‌ಮನ್ ಇರಿಸಿದ್ದಾನೆ. ನಮ್ಮ ಕಾರಿನ ಚಕ್ರಗಳನ್ನು ಕಳವು ಮಾಡಿದ ಕಳ್ಳರ ಬಗ್ಗೆ ಅಭ ಇಲ್ಲ ಶುಭ ಇಲ್ಲ” ಎಂದಳು.
”ಒಳ್ಳೆಯ ಸ್ವಾರಸ್ಯವಾದ ಕಳ್ಳತನದ ವರದಿಯಾಯಿತು. ನಮ್ಮಲ್ಲಂತೂ ಚಕ್ರ ಕಳಚಿಕೊಂಡು ಹೋಗಲು ವಾಹನವೂ ಇಲ್ಲ. ಅಕ್ಕಪಕ್ಕದಲ್ಲಿ ಬೀಗಹಾಕಿ ಊರಿಗೆದ್ದಿರುವ ಕುಟುಂಬಗಳೂ ಇಲ್ಲ. ಸದ್ಯಕ್ಕಂತು ಸೇಫು. ಯಾವುದಕ್ಕೂ ನೀನು ಜಾಗ್ರತೆಯಾಗಿರು ತಾಯಿ” ಎಂದು ಹೇಳಿ ಫೋನ್ ಇಟ್ಟೆ.
ಈ ಕೊರೋನಾ ಹಾವಳಿ ಇನ್ನೂ ಯಾವ ಹಂತಕ್ಕೆ ಮುಟ್ಟುತ್ತದೋ ದೇವರೇ ಬಲ್ಲ. ಆದಷ್ಟು ಬೇಗ ಅದು ತನ್ನ ತವರಿಗೆ ಹಿಂದಿರುಗಿದರೆ ಸಾಕಪ್ಪಾ ಎನ್ನುತ್ತಾ ಅರ್ಧ ಓದಿಬಿಟ್ಟಿದ್ದ ಪತ್ರಿಕೆಯನ್ನು ಕೈಗೆತ್ತಿಕೊಂಡೆ.
-ಬಿ.ಆರ್. ನಾಗರತ್ನ, ಮೈಸೂರು
Nice article. ಈ ಮುಗಿಯದ ಕೊರೋನಾ ಇನ್ನೂ ಎಂತೆಂತಹ ಪರಿಸ್ಥಿತಿಯನ್ನು ತರುತ್ತದೋ
ಕಳ್ಳತನದ ಕತೆ ರಸವತ್ತಾಗಿದೆ.
ಕಳ್ಳತನದ ಕಥೆ ಬಹಳ ರಸವತ್ತಾಗಿದೆ. ಸೊಗಸಾದ ನಿರೂಪಣೆ ಇಷ್ಟವಾಯ್ತು….ಧನ್ಯವಾದಗಳು ಮೇಡಂ.
ನನ್ನ ಲೇಖನ ಓದಿ ಪ್ರತಿಕ್ರಿಯಿಸಿದ ಹೇಮಾ,ಶಂಕರಿಶರ್ಮ, ನಯನಾ ಬಜಕೂಡ್ಲು ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು.
ಕತೂಹಲ ಹುಟ್ಟಿಸಿ, ಬೆಳೆಸಿ ಕೊನೆಯಲ್ಲಿ ತುಟಿಯಂಚಿನಲ್ಲಿ ಕಿರುನಗೆ ಬೀರಿಸಿದ ಕರೋನಾ ಕಳ್ಳರ ಕಥೆಗಾಗಿ ಅಭಿನಂದನೆಗಳು.
ಧನ್ಯವಾದಗಳು ಗೆಳತಿ ಪದ್ಮಾ
ವಿಭಿನ್ನ ರೀತಿಯ ಕಥೆಯ ಅನುಭವ ಚೆನ್ನಾಗಿದೆ.
ಧನ್ಯವಾದಗಳು ಸುಧಾ ಮೇಡಂ