ವೇದ ಪುರುಷ ವೇದವ್ಯಾಸ

Share Button

 

ಬೆಳಗಾಗೆದ್ದು ನಾನು ಯಾರಾರ ನೆನೆಯಲಿ..?.” ಎಂದು ಜಾನಪದ ಹಾಡಿನ ಸಾಲು. ಹೌದು ನಮ್ಮ ಸರ್ವತೋಮುಖ ಅಭಿವೃದ್ದಿಗಾಗಿ ನಾವು ಪ್ರಾತಃಕಾಲ ಪ್ರಥಮತಃ ದೇವರು ಮತ್ತು ದೇವತಾ ಪುರುಷರನ್ನು ನೆನೆಯುತ್ತೇವೆ. ಪ್ರಾರ್ಥಿಸುತ್ತೇವೆ. ಬೇಡಿಕೊಳ್ಳುತ್ತೇವೆ. ಭಗವಾನ್ ಸ್ವರೂಪಿಗಳೆಂದರೆ ಜಗದ್ಗುರುಗಳು ಹಾಗೂ ಅವತಾರ ಪುರುಷರು. ಇಂತಹ ಪುರಾಣ ಪುರುಷರ ಇತಿಹಾಸ ಅಥವಾ ದೇವತಾ ಪುರುಷರ ಇತಿಹಾಸವನ್ನು ಧಾರ್ಮಿಕ ಗ್ರಂಥಗಳಿಂದ ಲೋಕಕ್ಕೆ ಪ್ರಚುರಪಡಿಸಿ ವೇದೋಪನಿಷತ್ತುಗಳ ಮೂಲಕ ಧರ್ಮ ಜಾಗೃತಿಯನ್ನುಂಟು ಮಾಡಿದ ಪರಮಾತ್ಮ ಸದೃಶರು ಪ್ರಾತಃಸ್ಮರಣೀಯರಲ್ಲದೆ ಇನ್ನೇನು… ? ವೇದಾರ್ಥಗಳನ್ನರಿಯಲು ಜಗತ್ತಿಗೆ ಹದಿನೆಂಟು  ಪುರಾಣಗಳನ್ನು ಒದಗಿಸಿಕೊಟ್ಟವರೆಂದರೆ ಭಗವಾನ್ ವೇದವ್ಯಾಸರೇ ಸರಿ.

ಜಗತ್ತಿನಲ್ಲಿ ಧರ್ಮವನ್ನು ನೆಲೆಗೊಳಿಸುವುದಕ್ಕಾಗಿ ಬೇಕಾದುದೆಲ್ಲವನ್ನೂ ಮಾಡಿದ ವೇದವ್ಯಾಸರನ್ನು ಹೊಗಳುವುದಕ್ಕೆ ಶಬ್ದಗಳು ನಮ್ಮ ಭಂಡಾರದಲ್ಲಿ ಸಾಲದು. ಹಾಗೆಂದು ಅವರು ಹೊಗಳಿಸಿಕೊಳ್ಳುವುದಕ್ಕಾಗಿಯೋ, ಪ್ರಶಸ್ತಿಗಾಗಿಯೋ ಬರೆದವರಲ್ಲ, ಅವರ ಗುರಿ, ನಿರೀಕ್ಷೆಗಳೆಲ್ಲ ಲೋಕಕಲ್ಯಾಣವೊಂದೇ ಆಗಿತ್ತು. ಆದುದರಿಂದಲೇ ಅವರ ಹೆಸರಿನಲ್ಲಿ ಭಗವಾನ್ ಎಂಬ ಶಬ್ದವು ಸೇರಿಬಿಟ್ಟಿದೆ. ಧರ್ಮಮೂರ್ತಿಗಳೂ, ಪೂರ್ಣಾತ್ಮರೂ, ಪುಣ್ಯಾತ್ಮರೂ ಆದ ವ್ಯಾಸರ ಶ್ರೇಷ್ಠತೆ ಲೋಕದಲ್ಲಿ ಎದ್ದು ಕಾಣುತ್ತದೆ.ವ್ಯಾಸರ ಸಾಹಿತ್ಯ ನೈಪುಣ್ಯತೆ ಎಣೆಯಿಲ್ಲದ್ದು, ಅವರಿಗಿರುವಷ್ಟು ವಿಶಾಲ ಬುದ್ಧಿ  ಹಾಗೂ ವಿಶಾಲ ದೃಷ್ಟಿ ನಾವು ಬೇರಾವ ಸಾಹಿತಿಯಲ್ಲೂ ಕಾಣುವುದಿಲ್ಲ . ಅವರು ವಿಶ್ವದ ಸರ್ವಕಾಲಕ್ಕೂ ಶ್ರೇಷ್ಠ ಸಾಹಿತಿಯಾಗಿ ಬೆಳಗಿದರು. ಬೆಳಗುತ್ತಲೇ ಇರುವವರು.

ವೇದವ್ಯಾಸರ ಕಾಲ ದ್ವಾಪರಯುಗವೆಂದು ಅವರು ಬರೆದ ಮಹಾಭಾರತದಿಂದ ತಿಳಿದುಬರುತ್ತದೆ. ಅವರ ತಂದೆ ಪರಾಶರಮುನಿ, ತಾಯಿ ಸತ್ಯವತಿ, ಅವರ ಜನನವೂ ಕುತೂಹಲಭರಿತ ಕಥೆ, ಪರಾಶರಮುನಿ ಹಾಗೂ ಸತ್ಯವತಿಯರ ಮಿಲನ ಹೇಗಾಯಿತು?  ದೈವಾಂಶ ಸಂಭೂತರಾದ ಅವರ ಹುಟ್ಟು ಎಲ್ಲಿ, ಹೇಗಾಯ್ತು ಎಂಬ ವಿಚಾರ ತಿಳಿಯೋಣ.

ಚೇದಿರಾಜನಾದ ಉಪರಿಚರನು ವಿಮಾನಯಾನದಲ್ಲಿದ್ದಾಗ ಅವನಿಗೆ ತನ್ನ ಪತ್ನಿ ಗಿರಿಕೆಯ ನೆನಪಾಯಿತು, ಆ ನೆನಪಿನಿಂದ ಅವನ ವೀರ್ಯಸ್ಟಲನವಾಗಿ ಅದು ಕೆಳಗೆ ಬಿದ್ದು ಸಮುದ್ರದಲ್ಲಿದ್ದ ಮೀನಿನ ಉದರವನ್ನು ಸೇರಿತು. ಆ ಮೀನು ಸಾಮಾನ್ಯ  ಮೀನಾಗಿರಲಿಲ್ಲ. ಅದ್ರಿಕೆಯೆಂಬ ಒಬ್ಬ ಅಪ್ಸರೆಯು ಶಾಪಗ್ರಸ್ತವಾಗಿ ಮೀನಿನ ರೂಪದಿಂದ  ಸಮುದ್ರ ಸೇರಿದುದಾಗಿತ್ತು.

ಮೀನಿನ ಉದರದಲ್ಲಿದ್ದ ಶಿಶು ಬೆಳೆಯುತ್ತಾ ನವಮಾಸಗಳು ತುಂಬಿದಾಗ  ಆ ಮೀನು ಒಬ್ಬ ಬೆಸ್ತನ ಬಲೆಯೊಳಗೆ ಬಿತ್ತು. ಬೆಸ್ತನು ಆ ವಿಚಿತ್ರ ಮೀನನ್ನು ಸೀಳದೆ ಹಾಗೆಯೇ ಜಾಗರೂಕತೆಯಿಂದ ಕಾದು ನೋಡಿದನು. ಸಕಾಲಕ್ಕೆ ಆ ಮೀನು ಒಂದು ಗಂಡು, ಮತ್ತೊಂದು ಹೆಣ್ಣು ಮಕ್ಕಳಿಗೆ ಜನ್ಮ ನೀಡಿತು. ಬೆಸ್ತನು ಶಿಶುಗಳನ್ನು ಆ ಊರಿನ ದೊರೆಗೆ ಕಾಣಿಕೆಯಾಗಿ ಕೊಡಹೋದನು. ರಾಜನಾದರೋ ಗಂಡು ಶಿಶುವನ್ನು. ಬಳಿಯಿಟ್ಟುಕೊಂಡು ಅದಕ್ಕೆ ಮತ್ಸ್ಯರಾಜ ಎಂದು ನಾಮಕರಣ ಮಾಡಿದನು. ಹೆಣ್ಣು ಶಿಶುವಿಗೆ ಮತ್ಸ್ಯಗಂಧಿ ಎಂದು ಹೆಸರಿಟ್ಟು ಅದನ್ನು ವಾಪಾಸು ಬೆಸ್ತನಿಗೇ ಪ್ರೀತಿಯಿಂದ ಹಿಂದುರುಗಿಸಿದನು. ಮತ್ಸ್ಯಗಂಧಿನಿ ಅತಿ ಚೆಲುವೆಯಾಗಿದ್ದಳು. ಬೆಳೆಯುತ್ತಿದ್ದಂತೆ ತಂದೆಯ ಜೊತೆಗೆ ಪ್ರಯಾಣಿಕರನ್ನು ದೋಣಿ ದಾಟಿಸುವ ಕೆಲಸಕ್ಕೆ ಸಹಾಯ ಮಾಡತೊಡಗಿದ್ದಳು.

ಹೀಗಿರಲು ಒಂದು ದಿನ ಮಹಾತ್ಮರಾದ ಪರಾಶರ ಮುನಿಗಳು ಆ ದಾರಿಯಲ್ಲೇ ಬಂದರು. ಮುನಿಗಳು ಮತ್ಸ್ಯಗಂಧಿನಿಯ ರೂಪರಾಶಿಯನ್ನು ಕಂಡು ಮೋಹಿತರಾದಾಗಿ ಆಕೆಗೆ ಕೋಮಲಾಂಗೀ, ನಿನ್ನ ಹೆಸರೇನೆಂದು ಕೇಳಿದರು. ಆಗ ಆಕೆ ನನ್ನನ್ನು ತಂದೆ-ತಾಯಿ ‘ಸತ್ಯವತೀ’ ಎಂದು ಕರೆಯುತ್ತಾರೆ ಎಂದು ನುಡಿದಳು, ಆಗ ಪರಾಶರರು  ಸತ್ಯವತೀ ನಾನು ನಿನ್ನಲ್ಲಿ ಸಮಾಗಮನವನ್ನು ಬಯಸುತ್ತೇನೆ. ಆದರೆ ನಿನ್ನನ್ನು ಕಾಮುಕ  ಕಣ್ಣಿಂದ ನೋಡುತ್ತಾ ಇಲ್ಲ. ಒಬ್ಬ ಮಹಾಮುನಿಯ ಮಹಾಮಾತೆಯಾಗುವ ಯೋಗ ನಿನಗಿದೆ. ನೀನು ಶಿಶುವನ್ನು ನವಮಾಸ ಗರ್ಭದಲ್ಲಿ ಧರಿಸುವ ಅಗತ್ಯವಿಲ್ಲ. ಅಲ್ಲದೆ ಶಿಶು ಪಡೆದ ಮೇಲೆ ನಿನ್ನ ಕನ್ಯತ್ವವೂ ನಾಶವಾಗದು. ಇದೋ ಈ ನಮ್ಮ ಮಿಲನದಿಂದ ಒಬ್ಬ ತೇಜೋವಂತ ಮಗನನ್ನು ಪಡೆಯುವೆ. ಇವನಿಂದ ಮುಂದೆ ಲೋಕ ಕಲ್ಯಾಣವಾಗುವುದು ಎಂದರು. ಇಲ್ಲಿ ಓದುಗರು ಗಮನಿಸಬೇಕಾದ ಅಂಶವೇನೆಂದರೆ ನಮ್ಮ ಪುರಾಣಗಳಲ್ಲಿ ಹಲವಾರು ಸಂದರ್ಭಗಳಲ್ಲಿ ಋಷಿಮುನಿಗಳೂ ಸತ್ಪುರುಷರೆನಿಸಿಕೊಂಡವರೋ ಅನ್ಯ ಸ್ತ್ರೀಯ ಸಂಪರ್ಕ ಬಯಸುವುದನ್ನು ಕಾಣುತ್ತೇವೆ.ಇದರ ಹಿಂದೆ ಕಾಮುಕ ದೃಷ್ಟಿ ಇರದೆ ಮುಂದೆ ಸತ್ಕಾರ್ಯಕ್ಕೋ ಲೋಕ ಕಲ್ಯಾಣಕ್ಕೋ ಅದು ಕಾರಣವಾಗಿರುತ್ತದೆ ಎಂಬುದು ಅದರೊಳಗಿನ ತಿರುಳು.

ಅಲ್ಲಿ ಯೋಗಿವರ್ಯರಾದ ಪರಾಶರರಿಂದ ಸತ್ಯವತಿ ಒಬ್ಬ ಮಹಾತೇಜಸ್ವಿಯಾದ ಮಗನನ್ನು ಪಡೆದಳು. ಆ ಮಗುವು ಹುಟ್ಟಿದ ಕೂಡಲೇ ಅಳುವುದಕ್ಕೆ ಬದಲಾಗಿ ಸತ್ಯವತಿ ಮುಂದೆ ಕೈ ಜೋಡಿಸಿ ಮಾತೃದೇವೋಭವ ಎಂದು ಕೈಮುಗಿದನು. ಮತ್ತೆ ಹೇಳಿದನು ‘ತಾಯೇ ನಿನಗೆ ಕಷ್ಟಕಾಲ ಒದಗಿದಲ್ಲಿ ನನ್ನನ್ನು ಸ್ಮರಿಸಿ ಕರೆಸಿಕೋ, ಆ ಸಮಯದಲ್ಲಿ ಪ್ರತ್ಯಕ್ಷನಾಗಿ ನಿನ್ನ ಇಷ್ಟಾರ್ಥ ಈಡೇರಿಸುವೆ’ ಎಂದು ಅಲ್ಲಿಂದ ಬದರಿಕಾಶ್ರಮಕ್ಕೆ ಹೊರಟು ಹೋಗುತ್ತಾನೆ. ಹೆತ್ತ ತಾಯಿಯನ್ನು ಮಕ್ಕಳು ಹೇಗೆ ಕಾಣಬೇಕು ಎಂಬ ಒಂದಂಶವನ್ನು ಇಲ್ಲಿ ಸೂಕ್ಷ್ಮವಾಗಿ ವೇದವ್ಯಾಸರು ನಮಗೆ ತಿಳಿಸುವಂತಿದೆ. ಪರಾಶರರಿಂದ ಸತ್ಯವತಿಯ ಮೀನಿನ ವಾಸನೆ ಹೋಗಿ ಯೋಜನ ಗಂಧಿಯಾದಳು.

ವ್ಯಾಸರು ವೇದವನ್ನು ನಾಲ್ಕು ವಿಭಾಗಗಳನ್ನಾಗಿ ಮಾಡಿದ್ದರಿಂದ ಅವರಿಗೆ ವೇದವ್ಯಾಸ ಎಂದೂ ಕಪ್ಪುವರ್ಣದವರಾಗಿ ಯಮುನಾ ನದಿ ದ್ವೀಪದಲ್ಲಿ ಹುಟ್ಟಿದುದರಿಂದ ಕೃಷ್ಣದೈಪಾಯನ ಎಂದೂ ಬದರಿಕಾಶ್ರಮದಲ್ಲಿ ನೆಲಸಿದುದರಿಂದ ಬಾದರಾಯಣ ಎಂದೂ  ಸತ್ಯವತಿಗೆ ವಾಸವಿ ಎಂಬ ಹೆಸರಿದ್ದು ವಾಸವಿಯ ಮಗನಾದ್ದರಿಂದ ವಾಸವೇಯ ಎಂಬ ಹೆಸರೂ ಇದೆ. ವ್ಯಾಸರ ತಾಯಿ ಸತ್ಯವತಿ ಮುಂದೆ ಶಂತನು ಮಹಾರಾಜನ ಮಡದಿಯಾಗಿ ಭೀಷ್ಮರ ಮಲತಾಯಿಯಾಗಿ ಮಹಾಭಾರತದ ಮಹಾ ತಾಯಿಯಾಗಿ  ಶೋಭಿಸುತ್ತಾಳೆ. ತನ್ನ ಮಕ್ಕಳಾದ ಚಿತ್ರಾಂಗದ ಮತ್ತು ವಿಚಿತ್ರವೀರ್ಯರು ಸಂತತಿ ಹೀನರಾಗಿ ನಿಧನರಾದಾಗ ಸತ್ಯವತಿ ತನ್ನ ಸೊಸೆಯಂದಿರಾದ ಅಂಬಿಕೆ ಮತ್ತು ಅಂಬಾಲಿಕೆಯರಿಗೆ ನಿಯೋಗ ಪದ್ಧತಿಯಲ್ಲಿ ವ್ಯಾಸರಿಂದ ಮಕ್ಕಳನ್ನು  ಪಡೆಯುವಂತೆ ಮಾಡುತ್ತಾಳೆ. ಅವರೇ ದೃತರಾಷ್ಟ್ರ ಹಾಗೂ ಪಾಂಡು ಚಕ್ರವರ್ತಿಗಳು.  ಅವರಿಂದ ದಾಸಿಯಲ್ಲಿ ಹುಟ್ಟಿದ ಮಗನೇ ವಿದುರ.

ವೇದವಾ.ಸರು ಹದಿನೆಂಟು ಪುರಾಣಗಳನ್ನು ಬರೆದಿದ್ದಾರೆ. ಅವುಗಳೆಂದರೆ :

  1. ಆದಿಪುರಾಣ (ಬ್ರಹ್ಮಪುರಾಣ)
  2. ವಿಷ್ಣುಪುರಾಣ
  3. ಪದ್ಮಪುರಾಣ
  4. ವಾಯುಪುರಾಣ
  5. ಭಾಗವತ ಪುರಾಣ
  6. ನಾರದೀಯ ಪುರಾಣ
  7. ಮಾರ್ಕಂಡೇಯ ಪುರಾಣ
  8. ಅಗ್ನಿಪುರಾಣ
  9. ಭವಿಷ್ಯ ಪುರಾಣ
  10. ಬ್ರಹ್ಮವೈವರ್ತ ಪುರಾಣ
  11. ಲಿಂಗ ಪುರಾಣ
  12. ವರಾಹ ಪುರಾಣ
  13. ಸ್ಕಂದ ಪುರಾಣ
  14. ವಾಮನ ಪುರಾಣ
  15. ಕೂರ್ಮಪುರಾಣ
  16. ಮತ್ಸ್ಯಪುರಾಣ
  17. ಗರುಡ ಪುರಾಣ
  18. ಬ್ರಹ್ಮಾಂಡ ಪುರಾಣ,

ವೇದವ್ಯಾಸರು ಮಹಾಭಾರತದ ರಚನಾಕಾರರು ಮಾತ್ರವಲ್ಲದೆ, ಅದರಲ್ಲಿಯ ಒಂದು ಪಾತ್ರವೂ ಆಗಿದ್ದಾರೆ. ಆದ್ದರಿಂದ ಮಹಾಭಾರತವನ್ನು ಪುರಾಣ ಎನ್ನುವುದಕ್ಕಿಂತ  ಇತಿಹಾಸ ಎನ್ನುವುದು ಇದೆ. ಅದು ಮೋಕ್ಷವನ್ನೂ ಅದಕ್ಕೆ ಸಾಧಕವಾದ  ಜ್ಞಾನ, ಭಕ್ತಿ, ಕರ್ಮ ಯೋಗಗಳನ್ನೂ ಪ್ರತಿಪಾದಿಸುವ ಐದು ಮುಖ್ಯ ರತ್ನಗಳನ್ನು  ಹೊಂದಿದೆ. ಅವು ಯಾವುದೆಂದರೆ ಭಗವದ್ಗೀತೆ, ವಿಷ್ಣು ಸಹಸ್ರನಾಮ, ಭೀಷ್ಮಸ್ವರಾಜ, ಅನುಸ್ಮೃತಿ ಮತ್ತು ಗಜೇಂದ್ರ ಮೋಕ್ಷ ಇವು ಐದು ಆ ರತ್ನಗಳು. ಮಹಾಭಾರತದ ಕೆಲವು ಸನ್ನಿವೇಶಗಳಲ್ಲಿ ಅವರೇ ಸ್ವತಃ ಪ್ರವೇಶಿಸಿ ಮಾರ್ಗದರ್ಶನ ನೀಡುವುದನ್ನು ಕಾಣಬಹುದು.

ಉದಾ:ಪಾಂಡುರಾಜ ಸತ್ತಾಗ ಎಲ್ಲರಿಗೂ ಸಾಂತ್ವನ ಹೇಳುತ್ತಾರೆ. ಸತ್ಯವತಿ ಮತ್ತು ಅವಳ ಸೊಸೆಯಂದಿರಾದ ಅಂಬಿಕೆ ಮತ್ತು ಅಂಬಾಲಿಕೆಯರನ್ನು ಕಾಡಿಗೊಯ್ದು ಆಶ್ರಮ ಕಟ್ಟಿಕೊಡುತ್ತಾರೆ. ಪಾಂಡವರನ್ನು ಕೌರವನು ಜೂಜಿನಲ್ಲಿ ಗೆದ್ದು ಅರಣ್ಯಕ್ಕೆ ಕಳುಹಿಸಿದಾಗ ಸುದ್ದಿ ತಿಳಿದ ವ್ಯಾಸರು ಹಸ್ತಿನಾವತಿಗೆ ಹೋಗಿ ದೃತರಾಷ್ಟ್ರನನ್ನು ಜೋರುಮಾಡುವುದರ ಜೊತೆಗೆ ಪಾಂಡವರಿರುವ ಕಾಡಿಗೆ ತೆರಳಿ ಅವರಿಗೆ ಸಮಾಧಾನ ಮಾಡುತ್ತಾರೆ. ಕುರುಕ್ಷೇತ್ರ ಯುದ್ಧ ಕಾಲದಲ್ಲೂ ಪಾಂಡವರಿಗೆ ವ್ಯಾಸರು ಮಾರ್ಗದರ್ಶನ ಮಾಡುತ್ತಾರೆ. ದುರ್ಯೊಧನ ಸತ್ತಾಗಲೂ ಅಲ್ಲಿಗೆ ಬಂದು ದೃತರಾಷ್ಟ್ರನಿಗೆ ಸಾಂತ್ವನ ಹೇಳುತ್ತಾರೆ. ಈ ಸಂದರ್ಭದಲ್ಲಿ ಗಾಂಧಾರಿಗೆ ಯುಧಿಷ್ಠಿರ ಮತ್ತು ತಮ್ಮಂದಿರು ನಮಿಸಿದಾಗ ಅವಳು ಸಿಟ್ಟಿನಿಂದ ಶಾಪಕೊಡುವುದಕ್ಕೆ ಮುಂದಾದಾಗ ಅವಳಿಗೆ ವಿವೇಕ ಹೇಳುತ್ತಾರೆ. ಯುದ್ಧವೆಲ್ಲ ಮುಗಿದ ಮೇಲೆ ಎಲ್ಲರನ್ನೂ, ಸಾಂತ್ವನಗೊಳಿಸಿ ಅರಮನೆಯಲ್ಲಿ ನಿಲ್ಲಿಸಿ ತಾವು ತಮ್ಮ  ಆಶ್ರಮಕ್ಕೆ ತೆರಳುತ್ತಾರೆ.

ಐದನೇಯ ವೇದವೆಂದು ಕರೆಯಲ್ಪಡುವ ಮಹಾಭಾರತವು ತತ್ವಗಳ ಖನಿ. ಅದು ಉಪದೇಶಾಮೃತದಂತಿದೆ. ಅದರೊಳಗೆ ಎಲ್ಲವೂ ಇದೆ. ಅದರಲ್ಲಿ ಇಲ್ಲದ್ದು ಹೊರಗೂ ಇಲ್ಲ. ವ್ಯಾಸರು ಘೃತಾಚಿ ಎಂಬ ಅಪ್ಸರೆಯಲ್ಲಿ ಶುಕನೆಂಬ ಪುತ್ರನನ್ನು ಪಡೆದರು. ಬ್ರಹ್ಮರ್ಷಿಗಳಲ್ಲಿ ಶ್ರೇಷ್ಠರಾದ ವಸಿಷ್ಠರ ಮಗ ಶಕ್ತಿ ಮಹರ್ಷಿ. ಈತನ ಮಗ ಪರಾಶರ. ಇವನ ಮಗ ವ್ಯಾಸ, ವ್ಯಾಸರು ಸತ್ತಿಲ್ಲ. ಈಗಲೂ ಅದೃಶ್ಯರಾಗಿ ಇದ್ದಾರೆ ಎಂದು ಲೋಕದ ನಂಬಿಕೆ. ಅವರೀಗ ಇದ್ದಾರೋ ಇಲ್ಲವೋ ಎಂಬುದನ್ನು ನಾವು  ವಿಮರ್ಶಿಸುವುದು ಮುಖ್ಯವಲ್ಲ. ಅವರ ಅತ್ಯದ್ಭುತವಾದ ಕೃತಿಗಳನ್ನು ಓದುವುದು, ಮಥನಮಾಡುವುದು ಮುಖ್ಯ.

ಅವರು ಅವತರಿಸಿದ್ದಂತೂ ನಿಜ. ಧರ್ಮ ಸೇತುವನ್ನು ಸಂರಕ್ಷಿಸಿದ ವೇದವ್ಯಾಸರಿಗೆ ಭಾರತೀಯ ಸಂಸ್ಕೃತಿಯ ಉಪಾಸಕರು ಎಷ್ಟು ಕೃತಜ್ಞರಾಗಿದ್ದರೂ ಸಾಲದು ಅಲ್ಲವೇ!

 – ವಿಜಯಾ ಸುಬ್ರಹ್ಮಣ್ಯ, ಕುಂಬಳೆ

5 Responses

  1. ನಯನ ಬಜಕೂಡ್ಲು says:

    ಅದ್ಭುತವಾಗಿದೆ ಮೇಡಂ. ಆಗಿನ ಕಾಲದಲ್ಲಿ ಯಾವ ಪ್ರಶಸ್ತಿ ,ಪುರಸ್ಕಾರಗಳಿದ್ದವು? ಹಾಗೊಂದು ವೇಳೆ ಇದ್ದಿದ್ದರೂ ವ್ಯಾಸರ ಜ್ಞಾನ ಭಂಡಾರದ ಮುಂದೆ ಅವು ಗೌಣ , ಅವರನ್ನು ಗೌರವಿಸಲು ಅಷ್ಟು ಖಂಡಿತಾ ಸಾಲದು. ಈಗಿನ ಬರಹಗಾರರು ಒಂದೆರಡು ಕೃತಿಗಳನ್ನು ರಚಿಸಿ ದೊಡ್ಡ ಕಿರೀಟ ಇಟ್ಟುಕೊಂಡವರ ರೀತಿ ತಲೆ ತುಂಬಾ ಅಹಂಕಾರದ ಭಾವ ತುಂಬಿಕೊಂಡು ಓಡಾಡುತ್ತೇವೆ, ನಾವು ಇಂತಹ ಮಹಾನ್ ಜ್ಞಾನಿಗಳ ಬಗ್ಗೆ ಅರಿಯಬೇಕಾಗಿದೆ ಆವಾಗ ಆ ಅಹಂಕಾರ ಸ್ವಲ್ಪ ಮಟ್ಟಿಗಾದ್ರೂ ಕಡಿಮೆ ಆಗಬಹುದೇನೋ . ಬಹಳ ಉಪಯುಕ್ತ , ಸುಂದರ ಹಾಗು ಓದಿದ ಪ್ರತಿಯೊಬ್ಬರನ್ನು ಸ್ವ ವಿಮರ್ಶೆಗೆ ತಳ್ಳುವಂತಹ ಬರಹ .

  2. ಒದಿ,ಮೆಚ್ಚುಗೆ ವ್ಯಕ್ತಪಡಿಸಿದ ನಯನಾ ಬಜಕೂಡ್ಲು ಹಾಗೂ ಸುರಹೊನ್ನೆ ಸಂಪಾದಕಿ ಹೇಮಮಾಲಾ ಅವರಿಗೆ ಮನಸಾ ಧನ್ಯವಾದಗಳು

  3. ASHA nooji says:

    ಚೆನ್ನಾಗಿದೆ ಬರಹ ..ಪೌರಾಣಿಕ ಕಥೆ ಈಗಿನ ಮಕ್ಕಳಿಗೆ .ಗೊತ್ತೇ ಇಲ್ಲ .ನೀವು ಬರೆದ ಲೇಖನ .ಸೊಗಸಾಗಿದೆ .ಅಕ್ಕಾ ,

  4. ಧನ್ಯವಾದಗಳು ಆಶಾ.ಅವರೇ.

  5. Shankari Sharma says:

    ತುಂಬು ಮಾಹಿತಿಗಳ ಸುಂದರ, ಅರ್ಥಗರ್ಭಿತ ಬರಹ ವಿಜಯಕ್ಕ. ಧನ್ಯವಾದಗಳು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: