ಮೂರು ಮತ್ತೊಂದು..
ತಪ್ತ
ಕೆಂಗಣ್ಣು ಬೀರಿದರೆ ಕಾಲು ಕುಸಿಯುವುದು
ಕಿಡಿಗಣ್ಣು ಬೀರಿದರೆ ಒಡಲು ಹಸಿಯುವುದು
ಉರಿಗಣ್ಣು ಬೀರಿದರೆ ಅಳಲು ಬಸಿಯುವುದು
ಬಿರುಗಣ್ಣು ಬೀರಿದರೆ ಬರವು ಮಸೆಯುವುದು.
ನಿರಾಳ
ಕಳೆಯಬೇಕು ಕಣ್ಣ ಕಿಸುರು
ತೊಳೆಯಬೇಕು ಕಾಲ ಕೆಸರು
ತಣಿಯಬೇಕು ಕುದಿವ ಎಸರು
ಹಣಿಯಬೇಕು ಶುಭದಿ ಕೊಸರು.
ಅಸಹಾಯ
ಜೀವವದು ಸ್ನಿಗ್ಧ
ಜೀವಿತವು ಶುದ್ಧ
ಭಾವಗಳು ಮುಗ್ಧ
ಭಾವಿತಕೆ ಬದ್ಧ.
ವಿಧಿಯಾಗೆ ಕ್ರುದ್ಧ
ಎಲ್ಲವೂ ದಗ್ಧ
ನೆನಹುಗಳು ರುದ್ಧ
ಈಗ ಬರೀ ಶ್ರಾದ್ಧ.
ಪಿಚಕಾರಿ
ಆಸೆಗಳ ಸಿಗಿದು
ಆಗಸಕೆ ಜಿಗಿದು
ಭಾಸಗಳ ಒಗೆದು
ಹಾಸಗಳ ಮೊಗೆದು
ವೇಷಗಳ ಹುಗಿದು
ಘೋಷಗಳ ಬಿಗಿದು….
ಕಚಕಚನೆ ಜಗಿದು
ಪಿಚಪಿಚನೆ ಉಗಿದು
ಕೆಂಗವಳ ಮುಗಿದು
ಅಂಗಳದಿ ನಿಗಿದು.
– ಮೋಹಿನಿ ದಾಮ್ಲೆ (ಭಾವನಾ)